ಅವನು ಹೀಗೆ ಸಟಕ್ಕನೆ ಬರುತ್ತಾನೆಂದು ತಿಳಿದುಕೊಂಡಿರಲಿಲ್ಲ.
‘ಥರ್ಡ್ ಮೇನ್… ಸಿಕ್ಸ್ ಕ್ರಾಸ್…. ನಾಗರಬಾವಿ ಏರಿಯಾ ಅಲ್ಲವೇನೋ….’ ಮೊನ್ನೆ ನಾನು ಆಫೀಸಿನಲ್ಲಿದ್ದಾಗ ಅವನಿಂದ ಫೋನ್ ಬಂದಿತ್ತು. ‘ಅಡ್ರೆಸ್ ಸರಿಯಾಗಿದೆ…’ ಎಂದು ಫೋನ್ ಇಟ್ಟವನಿಗೆ ಆಫೀಸಿನ ಕೆಲಸದ ಮಧ್ಯೆ ಮರೆತುಹೋಗಿತ್ತು. ‘ಈ ಬೆಂಗಳೂರಿನಲ್ಲಿ ಇವನು ಅಡ್ರೆಸ್ ಹುಡುಕಿ ಬರುವುದಾದರೂ ಹೌದಾ?’ ಎಂಬ ಉಡಾಫೆ… ಶೀಲಾಳ ಬಳಿಯೂ ಹೇಳಿರಲಿಲ್ಲ.
ಆದರೆ ಆ ದಿನ ಸಂಜೆ ಮನೆಯೊಳಗೆ ಬರುತ್ತಿದ್ದಂತೆ ಹಲಸಿನಹಣ್ಣಿನ ಘಮಘಮ ಮೂಗಿಗೆ…
ಹಲಸೆಂದರೆ ತುಂಬ ಪ್ರೀತಿ ನನಗೆ…. ಪರಿಮಳ ಬಂದಿದ್ದು ನನ್ನ ಭ್ರಮೆಯಿರಬೇಕು ಎಂದುಕೊಳ್ಳುತ್ತ ಶೂ ಬಿಚ್ಚುವಷ್ಟರಲ್ಲಿ “ಯಾರು ಬಂದಿದ್ದಾರೆ ಹೇಳಿ ನೋಡೋಣ” ಎನ್ನುತ್ತ ಎದಿರು ಬಂದಳು ಗುಳಿಬೀಳುವ ಕೆನ್ನೆಯಲ್ಲಿ ನಗುತ್ತ ಶೀಲಾ…
ಯಾರಿರಬಹುದು? ಎಂದು ಊಹಿಸುವಷ್ಟರಲ್ಲಿ
“ಹ್ವಾ… ಕಡಿಗೊ…” ಎನ್ನುತ್ತ ವಾಸು… ಕೈಯಲ್ಲಿ ಹಲಸಿನ ಸೊಳೆ! ಇವನಿರಬಹುದು ಎಂದು ಒಂಚೂರು ಊಹಿಸದ ನನಗೆ ತುಂಬಾ ಆಶ್ಚರ್ಯ!
“ನಿನ್ನ ಗೆಳೆಯನಂತೆ… ದೊಡ್ಡ ಹಣ್ಣು ತಂದಿದ್ದಾನೆ” ಎಂದ ವೀಕ್ಷಾಳ ಬಾಯಿತುಂಬ ಹಣ್ಣಿನತೊಳೆ! ನುಂಗುವುದೋ… ಜಗಿಯುವುದೋ ತಿಳಿಯದೆ ಕೆನ್ನೆ ಉಬ್ಬಿಸಿಕೊಂಡಿದ್ದಳು!
“ಓ… ವಾಸು… ನಿಂಗೆ ಮನೆ ಹುಡುಕಲು ಕಷ್ಟ ಆಗಲಿಲ್ಲ, ಅಲ್ವಾ… ನೀನು ನಮ್ಮನೆಗೆ ಬಂದಿರಲೇ ಇಲ್ಲ” ಎಂದೆ ಖುಷಿಯ ದನಿಯಲ್ಲಿ. ಈ ಖುಷಿ ವಾಸು ಬಂದಿದ್ದಕ್ಕಲ್ಲ, ಹಲಸಿನಹಣ್ಣು ತಂದಿದ್ದಕ್ಕೆ ಎಂದಿತು ಮನಸ್ಸು. ‘ಸುಮ್ಮನಿರು’ ಎಂದು ಗದರಿದೆ!
“ಅಡ್ರೆಸ್ ಹುಡುಕುವುದು ಏನೂ ಕಷ್ಟ ಆಗಲಿಲ್ಲ. ಹತ್ತಾರು ಪಟ್ಟಣ ಓಡಾಡಿದವ ನಾನು…” ಎಂದಾಗ ಇದೊಂದು ಕೊಚ್ಗಿಅಕ್ಕಿ ಎಂದುಕೊAಡೆ.
“ಏನೊ, ನಲವತ್ತಕ್ಕೆ ಹೊಟ್ಟೆ ಇಷ್ಟುಮುಂದೆ ಬಂದುಹೋಯ್ತಲ್ಲೋ ತಲೆಯಮೇಲೆ ಕೂದಲೇ ಇಲ್ಲ” ಎನ್ನುತ್ತ ಹೊಟ್ಟೆಗೆ ಗುದ್ದಿದ ಮೇಣದ ಕೈಯಲ್ಲಿ. ಮತ್ತೊಂದು ಕೈ ಅವನ ದಟ್ಟವಾದ ಕ್ರಾಪಿನಲ್ಲಿ ಬೆರಳಾಡಿಸುತ್ತಿತ್ತು.
ಕಂಪ್ಯೂಟರ್ ಮುಂದೆ ಕುಳಿತು. ವ್ಯಾಯಾಮ ಇಲ್ಲದ ದೇಹಕ್ಕೆ ಬೊಜ್ಜು ಬಂದಿರುವುದು. ಆದರೆ ೨೦-೨೫ ವರ್ಷದ ನಂತರ ಸಿಕ್ಕಿದ್ದೇವೆ. ಕಂಡಕೂಡಲೇ ಹೀಗೆನ್ನಬಹುದೆ?. ಏನು ಹೇಳಬೇಕೊ, ಏನು ಬಿಡಬೇಕೊ ತಿಳಿಯದವ!
“ಅಲ್ಲ… ಮಾರಾಯ… ಎಲ್ಲಿಂದ ಒಡಮೂಡ್ದೆ ನೀನು, ನಿನ್ನ ಸಂಸಾರ ಎಲ್ಲಿ, ಮಕ್ಕಳೆಷ್ಟು? ಆಂ…” ಉಪ್ಪು, ಹುಣಸೇಹಣ್ಣು, ಸಣ್ಣಮೆಣಸಿನ ಮಿಶ್ರಣದಲ್ಲಿ ಸೊಳೆಯನ್ನು ಅದ್ದಿ ಬಾಯಿಗಿಡುತ್ತ, ಅವನಿಗೆ ಮದುವೆ, ಮಕ್ಕಳು, ಎಲ್ಲವೂ ಇಲ್ಲ ಎಂದು ಗೊತ್ತಿದ್ದರೂ ಸಹ!
“ಸಂಸಾರ… ಮನೆ ಏನೂ ಇಲ್ಲ ನನಗೆ. ಇಲ್ಲೆ ಹತ್ರ ಬಂದಿದ್ದೆ. ನಿನ್ನ ಮನೆ ಇಲ್ಲೆ ಇದೆ ಅನ್ನೋದು ನೆನಪಾಗಿ ಬಂದ್ಬಿಟ್ಟೆ” ಎಂದು ಬಾಯ್ತುಂಬ ನಕ್ಕಾಗ ದಶಕಗಳ ಹಿಂದಿನ ಮಂಜು ಮುಸುಕಿದ ಲೋಕದಲ್ಲಿ ಮನ ವಿಹರಿಸತೊಡಗಿತು.
ಈ ವಾಸು… ವಾಸುದೇವ ನನ್ನ ದೊಡ್ಡಮ್ಮನ ಅಣ್ಣನ ಮಗ. ಆಗೆಲ್ಲ ಅವಿಭಕ್ತ ಕುಟುಂಬ. ಮನೆ ತುಂಬ ಮಕ್ಕಳು. ನಿಜವಾಗಿಯೂ ಶಾಲೆ ಹತ್ತಿರವಿರಲಿಲ್ಲವೋ ಅಥವಾ ಒಂದು ಹೊಟ್ಟೆ ಖರ್ಚು ಕಳೆದರೆ ಅಷ್ಟೇ ಆಯಿತು ಎಂಬ ಬುದ್ಧಿಯೋ; ಅವನಪ್ಪ ವಾಸುವನ್ನು ನಮ್ಮ ಮನೆಗೆ ತಂದುಬಿಟ್ಟಿದ್ದ. ಹೈಸ್ಕೂಲು ಕಲಿಯಬೇಕಾಗಿದ್ದವ ನಪಾಸಾಗಿ ಆರನೇ ಕ್ಲಾಸಲ್ಲೆ ಇದ್ದ. ವಯಸ್ಸಿಗೆ ತಕ್ಕಂತೆ ದಷ್ಟಪುಷ್ಟವಾಗಿದ್ದ. ಮೀಸೆ ಮೆಲ್ಲಗೆ ಕುಡಿಯೊಡೆಯುತ್ತಿತ್ತು.
ಮೊದಮೊದಲು ‘ಮಾಣಿ ಹೊಸಬ’ ಎಂದು ಸುಮ್ಮನಿದ್ದ ಜನ ಕ್ರಮೇಣ ಕೊಟ್ಟಿಗೆ ಕೆಲಸ, ಬಾಳೆ ತರುವುದು, ಡೇರಿಗೆ ಹೋಗುವುದು ಮುಂತಾದವುಗಳನ್ನು ಮಾಡಿಸತೊಡಗಿದರು. ಕ್ರಮೇಣ ಒಂದು ಘಳಿಗೆ ಸಹ ಅವನು ಕೂತಿದ್ದನ್ನು ಕಾಣಲಾಗದೆ… ‘ಕಾಯಿ ಸೊಲಿ ಎಂದು ನಿನ್ನೆನೇ ಹೇಳಿದ್ದೆ… ಇನ್ನು ಮಾಡಿಲ್ಲ ನೀನು’ ‘ಕರುವಿಗೆ ಅಕ್ಕಚ್ಚು ಕುಡಿಸಲು ಯಾಕಿಷ್ಟು ತಡ?’ ‘ರವಿವಾರವಾದರೂ ದನ ಕಾಯಬಹುದಾಗಿತ್ತು…’ ಇಂಥವೇ ಮಾತುಗಳು. ನಾನು ಅಣ್ಣ ಇಬ್ಬರೂ ಓದುತ್ತ ಬರೆಯುತ್ತಲಿರುವ ಹೊತ್ತಿಗೆ ವಾಸು ಕೆಲಸದಲ್ಲಿ ಮುಳುಗಿರುತ್ತಿದ್ದ.
ನಾವುಗಳು ಊಟ ಅಥವಾ ತಿಂಡಿ ಬೇಡವೆಂದಾಗ ಗದರಿಸಿ, ಬೆದರಿಸಿ ಊಟ ಮಾಡಿಸುತ್ತಿದ್ದ ಆಯಿ ವಾಸು ಬೇಡವೆಂದರೆ ಒತ್ತಾಯಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಅದು ಗೊತ್ತಿದ್ದೋ ಏನೋ ಅವನು ಯಾವುದನ್ನೂ ‘ಬೇಡ’ ಎಂದು ಹಠ ಮಾಡುತ್ತಲೇ ಇರಲಿಲ್ಲ!
ಇಂತಹ ಅನೇಕ ನೆನಪುಗಳು ನನ್ನ ಮನದಲ್ಲಿ ಅಚ್ಚೊತ್ತಿ ನಿಂತುಬಿಟ್ಟಿವೆ. ನಮಗಿಂತಲೂ ದೊಡ್ಡವನಾದರೂ ಅವನಿಗೆ ನಾವು ಕೆಲಸ ಹೇಳುತ್ತಿದ್ದೆವು… ನಮ್ಮ ಮನೆಯ ಕೂಳು ತಿನ್ನುತ್ತಾನೆ ಎಂಬ ಸದರ. ಅಷ್ಟು ಸಣ್ಣ ತಲೆಯಲ್ಲಿ ಅಷ್ಟು ಕೆಟ್ಟ ವಿಚಾರಗಳು!
ಉಲ್ಟಾ ಮಗ್ಗಿಯನ್ನು ನಿದ್ದೆಗಣ್ಣಿನಲ್ಲಿ ಎಬ್ಬಿಸಿ ಕೇಳಿದರೂ ಹೇಳುವ ನಮ್ಮೆದುರು ಹನ್ನೊಂದರ ಮಗ್ಗಿ ಹೇಳಲು ತಡವರಿಸುತ್ತಿದ್ದ. ಇಂಗ್ಲಿಷ್ ಅಂತೂ ಗೋವಿಂದ! ಸ್ಪೆಲ್ಲಿಂಗ್ ಮಿಸ್ಟೇಕ್… ಸದಾ ಕಮಲಕ್ಕನ ಬಳಿ ಕೆನ್ನೆಗೆ ಹೊಡೆಸಿಕೊಳ್ಳುವುದೇ ಕೆಲಸ.
ನಾವೆಲ್ಲ ಸ್ವರಬದ್ಧವಾಗಿ ಗಣಪತಿ ಉಪನಿಷತ್ ಹೇಳಿದರೆ ಆತನಿಗೆ ಗಾಯಿತ್ರಿಮಂತ್ರ ಸಹ ಸ್ಪಷ್ಟವಾಗಿ ಹೇಳಲು ಬರುತ್ತಿರಲಿಲ್ಲ.
ಆದರೆ ಕೆಲವೊಂದು ವಿಷಯದಲ್ಲಿ ಆತನನ್ನು ಮೀರಿಸುವವರೇ ಇಲ್ಲವಾಗಿತ್ತು. ಪಟಪಟನೆ ಮರಹತ್ತಿ ಸಂಪಿಗೆ ಹಣ್ಣು ಕೊಯ್ಯುವುದಿರಲಿ, ಅಡಿಕೆ ಶಿಂಗಾರ ಇಳಿಸುವುದಿರಲಿ… ಮಂಗ ಸಹ ನಾಚುವಂತೆ ಮರವೇರುತ್ತಿದ್ದ. ಕೆಳಗೆ ನಿಂತ ನಮಗೆ ಕಾಣದಷ್ಟು ಎತ್ತರ ಏರಿ ನಮಗೆಲ್ಲ ಹೊಟ್ಟೆ ತುಂಬುವಷ್ಟು ಹಣ್ಣು-ಹಂಪಲುಗಳನ್ನು ಎಸೆಯುತ್ತಿದ್ದ. ಅವನಿಗೆಂದು ಚೂರೂ ಇಡದೆ ಅಷ್ಟನ್ನೂ ನಾವು ಸ್ವಾಹಾ ಮಾಡಿದಾಗ ಅವನಿಗೆ ಸಿಟ್ಟು ಬರುತ್ತಿದ್ದರೂ, ಅದು ಕ್ಷಣಮಾತ್ರ. ಮರುಘಳಿಗೆಯಲ್ಲಿ ಕೌಳಿ ಮಟ್ಟಿಯ ಎಜ್ಜೆಯಲ್ಲೋ ಕೌಲುಮರದ ಕಾಯಿ ಆರಿಸಿಕೊಂಡು ತಿನ್ನುತ್ತಲೊ ತನ್ನ ಹಸಿವು ಇಂಗಿಸಿಕೊಳ್ಳುತ್ತಿದ್ದ. ಒಮ್ಮೊಮ್ಮೆ ಒಳ್ಳೊಳ್ಳೆ ಹಣ್ಣುಗಳನ್ನು ಮರದ ರೆಂಬೆಯ ಮೇಲೆಯೇ ಕುಳಿತು ತಿನ್ನುವಾಗ ‘ಮರಹತ್ತಿ ನಾನು ಕೊಯ್ಯಲೆ?’ ಎನ್ನುವಂತಾದರೂ ಧೈರ್ಯ ಸಾಕಾಗುತ್ತಿರಲಿಲ್ಲ.
ಅದೆಲ್ಲ ಹೋಗಲಿ; ಅಡ್ಕಳ್ಳಿ ಶಾಲೆಯ ಸುರಸುಂದರಿ… ಶ್ಯಾನಭೋಗರ ಮೊಮ್ಮಗಳು ನಾಗಶ್ರೀ ಸಹ ಕೇದಿಗೆ ಗರಿಗಾಗಿ ವಾಸುವಿನ ಬೆನ್ನಹಿಂದೆ ಅಲೆಯುವಾಗ ಮನದ ತುಂಬ ಅಸೂಯೆ. ಕೇಳಿದ ಮರುದಿನವೇ ಪೌಡರಿನಂತೆ ಘಮಘಮಿಸುವ ಕುಚ್ಚುಹೊಂದಿದ ರೇಶಿಮೆ ನುಣುಪಿನ ಕೇದಿಗೆ ಗರಿಯನ್ನು ವಾಸು ಹಲ್ಕಿರಿಯುತ್ತ ನಾಗಶ್ರೀಗೆ ಕೊಡುವಾಗ ನಮ್ಮ ಮೇಲೆಯೇ ನಮಗೆ ಸಿಟ್ಟು ಉಕ್ಕಿಬರುತ್ತಿತ್ತು!
ಆದರೆ ಸದಾ ಕತ್ತಲು ಕವಿದಿರುವ ದಟ್ಟ ಕಾನನದ ನಾಗರಬನ. ಎತ್ತರೆತ್ತರದ ನಾನಾ ಆಕಾರದ ಕೆಮ್ಮಣ್ಣಿನ ಹುತ್ತಗಳು. ನಾಗರಹಾವುಗಳು ಮಾತ್ರವಲ್ಲ ಕಾಳಿಂಗಸರ್ಪಗಳು ಸಹ ಇದೆ ಎಂಬ ವದಂತಿ. ನೆನೆದುಕೊಂಡರೆ ಮೈಯೆಲ್ಲ ನಡುಕ. ಇನ್ನು ಹೋಗುವುದಾದರೂ ಹೇಗೆ? ಈ ಕೇದಿಗೆ ಗರಿಯೂ ಸಾಕು. ನಾಗಶ್ರೀಯ ನಗೆಯೂ ಸಾಕು. ಈ ವಾಸುವಿಗೆ ಧೈರ್ಯ ಎಲ್ಲಿಂದ ಬರುತ್ತದೆ ಎಂಬುದೇ ಸಮಸ್ಯೆಯಾಗಿತ್ತು. ಏನೇ ಆದರೂ ಹುಷಾರಿದ್ದ ಹುಡುಗರನ್ನೇ ಚೆಂದದ ಹುಡುಗಿಯರು ಆಯ್ಕೆ ಮಾಡಿಕೊಳ್ಳುವುದು ಎಂಬ ತೀರ್ಮಾನಕ್ಕೆ ಬಂದು ಸಮಾಧಾನ ಮಾಡಿಕೊಳ್ಳುತ್ತಿದ್ದೆವು.
ಮತ್ತೆಮತ್ತೆ ಫೇಲಾಗುವ ವಾಸುವನ್ನು ದಾರಿಯಿಡೀ ‘ವಾಸು ನಪಾಸು…’, ‘ವಾಸು ನಪಾಸು…’ ಎಂದು ಚಾಳಿಸುತ್ತಿದ್ದೆವು. ಆಗೆಲ್ಲ ಆತನಿಗೆ ಸಿಟ್ಟು ಬಂದು ಚಪ್ಪಲಿ ಇಲ್ಲದ ಕಾಲಿನಲ್ಲಿ ದನ ಗೊರಸಿನಲ್ಲಿ ಮಣ್ಣು ಕೆದರಿದಂತೆ ಕೆದರಿ ಮಣ್ಣು ಮಾಡಿಕೊಂಡು ಧೂಳೆಬ್ಬಿಸುತ್ತಿದ್ದ. ಹಲ್ಲುಮಟ್ಟೆ ಕಚ್ಚಿ ದುರುದುರು ನೋಡುತ್ತಿದ್ದ, ನುಂಗುವAತೆ. ಪಾಪ ಮತ್ತೇನೂ ಮಾಡಲಾಗುತ್ತಿರಲಿಲ್ಲ. ತಣ್ಣಗೆ ಸ್ತಬ್ಧವಾಗುತ್ತಿದ್ದ. ಈಗ ಇದನ್ನು ನೆನೆದರೆ ‘ನಮ್ಮ ಮನೆಯಲ್ಲಿ ಉಳಿದಿದ್ದಾನೆ’ ಎಂಬ ಮಾತ್ರಕ್ಕೆ ಅಷ್ಟೆಲ್ಲ ಗೋಳು ಹೊಯ್ದುಕೊಳ್ಳಬಾರದಿತ್ತು ಎಂದೆನಿಸುತ್ತದೆ.
ಪ್ರತಿ ಆದಿತ್ಯವಾರ, ದೋಸೆ ತೆಳ್ಳೇವುಗಳನ್ನು ಎರೆಯುವ ಸಂಭ್ರಮ. ಅಣ್ಣ ತುಂಬ ತೆಳ್ಳಗೆ ಎರೆಯುತ್ತಿದ್ದ ಹೆಂಗಸರAತೆ. ನಾನು ಅವನಷ್ಟು ನುರಿತವನಾಗಿರದಿದ್ದರೂ ಒಂದು ಹಂತದವರೆಗೆ ದೋಸೆ ಹುಯ್ಯುತ್ತಿದ್ದೆ. ಆದರೆ ವಾಸುವಿಗೆ ಮಾತ್ರ ಎಷ್ಟು ಹೇಳಿಕೊಟ್ಟರೂ; ಕೈಹಿಡಿದು ಕಲಿಸಿದರೂ ಬಿಳಿಹಿಟ್ಟಾದ, ದಪ್ಪ ದಪ್ಪ ತಲೆದಿಂಬಿನAತಹ ದೋಸೆಯನ್ನೇ ಎರೆಯುತ್ತಿದ್ದ. ಎಮ್ಮೆ ತಿನ್ನಬೇಕೇ ಹೊರತು ಮತ್ಯಾರಿಗೂ ಅದನ್ನು ತಿನ್ನಲು ಬಾರದು!
ಒಮ್ಮೊಮ್ಮೆ ಚುರುಕುತನದಲ್ಲಿ ಕೆಲಸ ಮಾಡುತ್ತಿದ್ದ. ಮತ್ತೊಮ್ಮೆ ಜಬ್ಬತನದಲ್ಲಿ. ಹೇಗಿದ್ದರೂ ಬಯ್ಯುತ್ತಾರೆ ಎಂದು ನಿಧಾನಿಸುತ್ತಿದ್ದನೋ ಗೊತ್ತಿಲ್ಲ!
ಮುಸ್ಸಂಜೆ ಹನಿಹನಿಯಾಗಿ ಹನಿಸುವ ಹೊತ್ತಿಗೆ ಕೊಟ್ಟಿಗೆಯಲ್ಲಿ ಕುಳಿತು ದನಗಳ ಗಂಗೆದೊಗಲು ನೇವರಿಸುತ್ತ ಕುಳಿತುಬಿಡುತ್ತಿದ್ದ ಆಂ, ಉಂ… ಎನ್ನದೆ. ಬಹುಶಃ ಮನೆಯ ನೆನಪಾಗುತ್ತಿತ್ತೇನೋ! ದೊಡ್ಡಮ್ಮ ದಪ್ಪದನಿಯಲ್ಲಿ ಗದರಿದಾಗ ಒಳಬಂದು ಹರಕು ಕಂಬಳಿಯ ಎಣ್ಣೆಜಿಡ್ಡಿನ ಹಾಸಿಗೆಯ ಮೇಲೆ… ಹಳೇ ದುಪ್ಪಟೆಯನ್ನು ಹೊದ್ದು ಕವುಚಿ ಮಲಗುತ್ತಿದ್ದ. ಅಳುತ್ತಿದ್ದನೇನೋ ಸೊರ ಸೊರ ಎಂಬ ಶಬ್ದ ಕೇಳುತ್ತಿತ್ತು!
ಹುಟ್ಟೂರಿನಿಂದ ವರ್ಷಗಟ್ಟಲೆ ದೂರವಿದ್ದ. ನಮಗಿಂತ ಎರಡುಪಟ್ಟು ಹೆಚ್ಚಿಗೆ ಕೆಲಸ ಮಾಡುವ. ‘ಬಿಸಿ ತೆಳ್ಳೇವು ಬೇಕು’, ‘ಗಂಜಿಗೆ ಬೆಣ್ಣೆ ಬೇಕು’ ಎಂದು ಹಠಮಾಡುವ ಪೈಕಿ ಅಲ್ಲ. ನಮಗೆ ಯಾವ ವಿಧದಲ್ಲೂ ಪೈಪೋಟಿ ಕೊಡದ ಪಾಪದವ ಎಂದು ಅವನನ್ನೂ ನಮ್ಮೊಳಗೆ ಒಬ್ಬ ಎಂದು ಸೇರಿಸಿಕೊಳ್ಳಬಹುದಿತ್ತು. ಪ್ರೀತಿಯಿಂದ ನಡೆದುಕೊಳ್ಳಬಹುದಿತ್ತು. ಬದಲಿಗೆ ಆತನ ದೌರ್ಬಲ್ಯವನ್ನು ಪದೇಪದೇ ಎತ್ತಿ ತೋರಿಸುತ್ತ, ಹೀಯಾಳಿಸುತ್ತ ವಿಕೃತ ಖುಷಿ ಅನುಭವಿಸುತ್ತಿದ್ದೆವಲ್ಲ ಎಂಬುದನ್ನು ನೆನೆದರೆ ಸಣ್ಣ ವಯಸ್ಸಿಗೆ ನಾವೆಷ್ಟು ಕೆಟ್ಟವರಾಗಿದ್ದೆವು? ನಮಗಂತೂ ತಿಳಿವಳಿಕೆ ಇರಲಿಲ್ಲ, ಮನೆಯವರಾದರೂ ಬುದ್ಧಿ ಹೇಳಬಹುದಾಗಿತ್ತು. ಅದನ್ನು ಮಾಡದೆ ನಮ್ಮ ಜೊತೆ ಅವರು ಕೂಡ ನಕ್ಕಿದ್ದರು ಎಂಬುದು ನೆನಪಾಗಿ ಖೇದವಾಯ್ತು.
ಆಯಿ ಗುಟ್ಟಾಗಿ ಕೊಟ್ಟ ಪೇಡೆಯನ್ನು ಗುಬ್ಬಿಯೆಂಜಲು ಮಾಡಿ ಒಂಚೂರು ಕೊಡುವುದು, ಆಗಸ್ಟ್ ಹದಿನೈದರಂದು ಹಳೆ ಚಡ್ಡಿಯನ್ನು ಇಸ್ತಿçà ಹೊಡೆದು ಕೊಡುವುದು, ಮಗ್ಗಿ ಬರೆದುಕೊಡುವುದು ಮುಂತಾದ ಸಣ್ಣಸಣ್ಣ ಉಪಕಾರವನ್ನಾದರೂ ಮಾಡಿದ್ದೆವಲ್ಲ ಎಂಬ ನಿಟ್ಟುಸಿರು, ಹೊರಬಂದಿತ್ತು ನನ್ನಿಂದ.
“ಹ್ವಾ… ಸ್ವಾರೆನಾದ್ರೂ ಉಳ್ಸೊ” ವಾಸು ನನ್ನನ್ನೇ ನೋಡುತ್ತ ಮುಕ್ತವಾಗಿ ನಕ್ಕಾಗ, ನಾನು ಗೋಡೆಗೆ ಸಾಚಿ ನಿಂತಿದ್ದ, ಅರ್ಧ ತುಂಬಿದ ಅವನ ಚೀಲವನ್ನು ನೋಡುತ್ತಿದ್ದೆ.
‘ಎಷ್ಟು ದಿನ ಉಳಿಯಬಹುದು? ಯಾಕಾಗಿ ಬಂದಿರಬಹುದು? ದುಡ್ಡು-ಕಾಸು ಏನಾದರೂ ಕೇಳಬಹುದಾ? ಕೇಳಿದರೆ ಹೇಗೆ ತಪ್ಪಿಸಿಕೊಳ್ಳಬೇಕು?’ – ಎಂಬಿತ್ಯಾದಿ ಹುಳುಕು-ಪಳಕುಗಳು ನನ್ನೊಳಗೆ ಹಳವಂಡವಾಗಿ ಹರಿದಾಡತೊಡಗಿದವು.
ಊರಲ್ಲಿ ಇವನ ಬಗ್ಗೆ ನಾನಾರೀತಿಯ ಸುದ್ದಿಗಳು ಹರಿದಾಡುತ್ತಿದ್ದವು. ಬೆಂಕಿಯಿಲ್ಲದೆ ಹೊಗೆ ಏಳುತ್ತದೆಯೆ?
ಶ್ಯೀ, ಯಾಕಾಗಿ ಬಂದನೊ ಇವ? ಬಾಲ್ಯದ ಸಣ್ಣಮನಸ್ಸು ಅಗೋಚರವಾಗಿ ಹೆಡೆಎತ್ತಿ ನನ್ನೊಳಗೆ ನಾ ಅಲವರಿಕೆಯಾದೆ.
ಊಟದ ಹೊತ್ತಿಗೆ ಮಗಳು ವೀಕ್ಷಾ ಸಂಕೋಚ ಸರಿಸಿ ಅವನ ಬೆನ್ನಹಿಂದೆ ಅಲೆದಾಡತೊಡಗಿದಳು, ‘ಮಾಮ ಮಾಮ…’ ಎನ್ನುತ್ತ! ಎಷ್ಟೋ ದಿನದ ಪರಿಚಿತರಂತೆ ಇಬ್ಬರೂ ಹರಟುವಾಗ ‘ನಾನೇ ಇಲ್ಲಿ ಹೊಸಬನೇನೊ’ ಎಂಬAತಾಯಿತು.
ರಾತ್ರಿ ವೀಕ್ಷಾಳ ಜೊತೆ ಪಗಡೆಯಾಟವಾಡತೊಡಗಿದ ವಾಸು. ಹೊಸತಾಗಿ ಆಟ ಕಲಿತ ವೀಕ್ಷಾಳಿಗೆ ಸಂಭ್ರಮವೋ ಸಂಭ್ರಮ! ಒಂದು ಕಾಯಿ ಮನೆ ಸೇರಿದ ಖುಷಿಯನ್ನು ಮಕ್ಕಳಂತೆ ಅನುಭವಿಸುತ್ತಿರುವ ವಾಸುವನ್ನು ಕಂಡು ಹೊಟ್ಟೆಯುರಿಯಿತು. ಇವನು ಯಾವಾಗ ಪ್ರತಿಕ್ಷಣವನ್ನು ಆನಂದಿಸುವುದನ್ನು ಕಲಿತ ಎಂಬುದನ್ನು ಯೋಚಿಸುತ್ತ ನನ್ನನ್ನು ನಾನೇ ಮರೆತೆ. ಕಳೆದುಹೋದ ನನ್ನೊಳಗೆ ನಾನು ಇಳಿದು ನನ್ನನ್ನೇ ನಾನು ಹುಡುಕಾಡತೊಡಗಿದೆ.
ಪಬ್ಲಿಕ್ ಟಿವಿಯ ರಂಗನಾಥ ದೊಡ್ಡದಾಗಿ ವದರುತ್ತಿದ್ದ. ಯಾವುದೋ ಪಕ್ಷದ ರಾಜಕೀಯ ನಾಯಕರನ್ನು ಹಿಡಿದು ಬಯ್ಯುತ್ತಿದ್ದ. ಸಿಟ್ಟು ಬಂದು ಟಿವಿ ಬಂದ್ ಮಾಡಿದೆ.
ರಾತ್ರಿ ಮಲಗಿದರೆ ನಿದ್ದೆ ಹತ್ತಿರವೂ ಸುಳಿಯದು. ನಾಳೆ ನಾನು ಆಫೀಸಿಗೆ… ವೀಕ್ಷಾ ಶಾಲೆಗೆ ಹೋದರೆ ಮನೆಯಲ್ಲಿ ಶೀಲಾ ಒಬ್ಬಂಟಿ. ಈ ವಾಸು ಇಲ್ಲೇ ಠಿಕಾಣಿ ಹೂಡುವ ರೀತಿಯಲ್ಲಿದ್ದಾನೆ. ಏನು ಮಾಡಬೇಕಾಯ್ತು ಎಂಬ ಚಿಂತೆ. ಮೊದಲೇ ಸಣ್ಣಪುಟ್ಟದ್ದಕ್ಕೂ ಸಿಕ್ಕಾಪಟ್ಟೆ ವಿಚಾರಮಾಡುವ ಪೈಕಿಯವನು ನಾನು! ತಲೆಮೇಲೆ ಹೆಬ್ಬಂಡೆ ಬಿದ್ದಂತಾಗಿತ್ತು. ಪಕ್ಕದಲ್ಲಿ ಚೆಂದುಳ್ಳಿ ಚೆಲುವೆ ಶೀಲಾ ನಿಶ್ಚಿಂತೆಯಿAದ ನಿದ್ರೆ ಹೋಗಿದ್ದಳು.
ಆದರೆ ನಾನು ಬೆಳಗ್ಗೆ ಏಳುವುದರೊಳಗಾಗಿ ವಾಸು ನಾಪತ್ತೆ… “ಇಲ್ಲೆ ಎಲ್ಲೋ ಅತ್ತೆ ಮನೆಯಿದೆಯಂತೆ. ಹೋಗಿ ಸಂಜೆ ಬರುತ್ತಾನಂತೆ” ಶೀಲಾ ಚಹಾ ಕೊಡುತ್ತ ಹೇಳಿದಾಗ ‘ಇಲ್ಯಾವ ಅತ್ತೆ ಮನೆ ಇದೆ?’ ಎಂಬ ವಿಚಾರಕ್ಕೆ ಬಿದ್ದೆ.
ಆದರೆ ಸಂಜೆ ಬಂದಾಗ ತಿಳಿಯಿತು. ಆತನಿಗೆ ಹತ್ತಿರದಲ್ಲಿ ನೆಂಟರ್ಯಾರು ಇಲ್ಲ… ಪಾರ್ಕು, ದೇವಸ್ಥಾನ ಎಂದು ಅಲೆದು, ದರ್ಶಿನಿಯಲ್ಲಿ ಊಟ-ತಿಂಡಿ ಮುಗಿಸಿ ಸಂಜೆ ನಾನು ಬರುವ ಹೊತ್ತಿಗೆ ತಿರುಗಿ ಬಂದಿದ್ದ ಎಂದು. ಇಷ್ಟೊಂದು ಸೂಕ್ಷ್ಮತೆ ತಿಳಿವಳಿಕೆ ಎಲ್ಲಿಂದ ಬಂತು ಇವನೊಳಗೆ! ನನಗೆ ಆಶ್ಚರ್ಯ.
ಆ ದಿನ ಪಗಡೆಯಾಡುವಾಗ ನಾನು ಶೀಲಾ ಸಹ ಸೇರಿದೆವು. ಅಲ್ಲಲ್ಲ, ಆತನೇ ಸೇರಿಸಿಕೊಂಡ. ಶೀಲಾ ಜೋಕ್ ಮಾಡುತ್ತ ಎಂಜಾಯ್ ಮಾಡುವಾಗ ಇವಳೊಳಗೆ ಅವಳು ಇರುವಳಲ್ಲ ಎಂಬ ಸಂತಸ.
ಇವನು ಇಷ್ಟು ದಿನ ಎಲ್ಲಿದ್ದಿರಬಹುದು? ಎಂಬ ಯೋಚನೆ ಕಾಡುತ್ತಿತ್ತು. ಅವನ ಕೆಲವೊಂದು ಮಾತುಗಳಿಂದ ಅವನ ಬಗೆಗಿನ ಒಂದಿಷ್ಟು ಮಾಹಿತಿಗಳು ಸಿಕ್ಕಿದರೂ ಚಿತ್ರ ಮಾತ್ರ ಅಪೂರ್ಣವಾಗಿತ್ತು.
‘ಜೀವನದಲ್ಲಿ ಅನುಭವಗಳು ಯಾವ ರೂಪದಲ್ಲಿ ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಅದು ಕಲಿಸುತ್ತ ಹೋಗುತ್ತದೆ. ನಾವು ಕಲಿಯುತ್ತ ಹೋಗಬೇಕು’ ಎಂದು ಮೀಸೆಯಡಿ ಆತ ನಗುವಾಗ ಆ ನಗುವಿನಲ್ಲಿ ಮುಗ್ಧತೆ ಇತ್ತೋ ನಿಗೂಢತೆಯಿತ್ತೋ ನಾನು ಅರಿಯದಾದೆ.
ಮರುದಿನದಿಂದ ನನಗೆ ವರ್ಕ್ ಫ್ರಮ್ ಹೋಮ. ಹಾಗಾಗಿ ವಾಸುವಿನ ಬಳಿ ‘ಎಲ್ಲಿಗೂ ಹೋಗುವುದು ಬೇಡ’ ಎಂದೆ.
‘ದುಡ್ಡು ಕೇಳಬಹುದು’ ಎಂಬ ವಿಚಾರ ಮುಂಚಿನಷ್ಟು ತೀವ್ರವಾಗಿರಲಿಲ್ಲ. ‘ನಾನು ಮನೆಯಲ್ಲೇ ಇರುತ್ತೇನೆ’ ಎಂದು ತಿಳಿದವ ‘ಈ ದಿನ ಅಡಿಗೆ ನಾನು ಮಾಡುತ್ತೇನೆ… ಮೇಡಂ ನಿಮಗಿವತ್ತು ರೆಸ್ಟ್’ ಎಂದಾಗ ಶೀಲಾ ಕುಣಿದು ಕುಪ್ಪಳಿಸುವುದೊಂದೇ ಬಾಕಿ! ಇಷ್ಟು ವರ್ಷಗಳಲ್ಲಿ ಒಂದು ಕಪ್ ಕಾಫಿ ಸಹ ಮಾಡಿಕೊಡದ ನಾನು ಮನದಲ್ಲೆ ನಾಚಿದೆ.
ಚಕಚಕನೆ ಉಳ್ಳಾಗಡ್ಡೆ, ಗಜ್ಜರಿ ಎಲ್ಲ ಕೊಚ್ಚುತ್ತ, ಹುರಿಯುತ್ತ, ರುಬ್ಬುತ್ತ ಮತ್ತೊಮ್ಮೆ ತೊಳೆಯುತ್ತ ವಾಸು ಚಟಪಟನೆ ಒಗ್ಗರಣೆ ಸಿಡಿಸುವಾಗ ಇವನು ಅಡಿಗೆ ಮಾಡುತ್ತಿದ್ದಾನೋ ಇಲ್ಲ, ಮ್ಯಾಜಿಕ್ಕೋ ಎನ್ನುವಂತಾಯಿತು ನನಗೆ. ಲ್ಯಾಪ್ಟಾಪ್ ಬಿಟ್ಟು ಅವನನ್ನೇ ನೋಡತೊಡಗಿದೆ. ಸರಿಯಾಗಿ ಒಂದು ಘಂಟೆಗೆ ಊಟ ತಯಾರಾಗಿತ್ತು. ಪಾಸ್ತಾ ವಿತ್ ಅರೇಬಿಯನ್ ಸಾಸ್, ಗೋಬಿಮಂಚೂರಿ ಜೊತೆಗೆ ‘ಸೂಳಗಡುಬು’. ಹಳೆಯ ಕಾಲದ ಸಾಂಪ್ರದಾಯಿಕ ಕಜ್ಜಾಯ! ಮೆಲೋಗರಗಳಂತೂ ಒಂದಕ್ಕಿAತ ಒಂದು ರುಚಿಯಾಗಿದ್ದವು. ಯಾವುದನ್ನು ತಿನ್ನಬೇಕೋ, ಯಾವುದನ್ನು ಬಿಡಬೇಕೋ ತಿಳಿಯದಾಗಿತ್ತು. ಕೇಳಿದರೆ ‘ದಾವಣಗೆರೆ ಹೊಟೇಲಿನಲ್ಲಿ ನಾಲ್ಕು ವರ್ಷ ಅಡಿಗೆ ಮಾಡಿದ್ದೆ, ಅದೇ ಅನುಭವ’ ಎಂದು ಗಹಗಹಿಸಿದ.
ಆಮೇಲಿನಿಂದ ಶೀಲಾಳಿಗೆ ತರತರದ ಅಡಿಗೆ ಕಲಿಯುವುದೇ ಕೆಲಸ. ದಿನಾಲೂ ತರತರಹದ ತಿನಿಸು ತಿನ್ನುವಾಗ ಕಟ್ಟಿಗೆ ಒಲೆಯ ದೋಸೆಬಂಡಿಯಲ್ಲಿ ದಪ್ಪದಪ್ಪ ಬಿಳಿಹಿಟ್ಟಾದ ದೋಸೆ ಎರೆಯುತ್ತಿದ್ದ ವಾಸುವೇ ಕಣ್ಮುಂದೆ ಬರುತ್ತಿದ್ದ! ಬೇಡವೆಂದರೂ.
ವಾಸು ಇಲ್ಲಿಗೆ ಬಂದಿದ್ದಾನೆ ಎಂದು ಹೇಗೆ ಗೊತ್ತಾಯಿತೋ ಏನೋ ಅಕ್ಕ-ಅಣ್ಣಂದಿರಿAದ ಫೋನ್ ಮೇಲೆ ಫೋನ್. “ಹುಷಾರು ದುಡ್ಡು ಬಂಗಾರ ಎಲ್ಲ ಸರಿಯಾಗಿ ಇಟ್ಕೊ. ಮದುವೆ ಇಲ್ಲ, ಮಕ್ಕಳಿಲ್ಲ. ದುಡ್ಡು ಕೇಳಿದ್ರೆ ಇಲ್ಲ ಎಂದುಬಿಡು….” ಎಂದು ಹುಳುಕು ಮಾತನಾಡುವಾಗ ಮೌನ ತಾಳಿದೆ. ವಾಸು ಏನು ಎಂದು ನನಗೆ ತೀರ್ಮಾನವಾಗಿರಲಿಲ್ಲ.
ಬಂದ ಒಂದೆರಡು ದಿನ ಹಳವಂಡದ ಹಳೆಯ ನೆನಪುಗಳಿಂದ ಯಾವುದನ್ನು ಮಾತನಾಡಬೇಕೋ, ಯಾವುದನ್ನು ಬಿಡಬೇಕೋ ತಿಳಿಯುತ್ತಿರಲಿಲ್ಲ. ನಂತರದ ದಿನಗಳಲ್ಲಿ ಬಾಯಿಮುಚ್ಚಿದ್ದೇ ಇಲ್ಲ. ಚಿಕ್ಕವರಿದ್ದಾಗಿನ ಸುದ್ದಿಯಿಂದ ಹಿಡಿದು ಊರಿನ ನರಸಿಂಹಣ್ಣ, ಭಾಗತ್ತಿಗೆಯ ತನಕ ನಾಲಿಗೆ ಹರಿದಾಡಿತು. ಇದೇ ಹೊತ್ತು ಎಂದು ನಾನು ಅಣ್ಣಂದಿರೆಲ್ಲ ಸೇರಿ ಅವನಿಗೆ ತ್ರಾಸ ಕೊಟ್ಟಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡುಬಿಟ್ಟೆ. ‘ಹಾಗೆಲ್ಲ ಮಾಡಬಾರದಿತ್ತು’ಎಂದು ತಣ್ಣಗಿನ ದನಿಯಲ್ಲಿ ಕೇಳಿಕೊಂಡೆ; ಕ್ಷಮಿಸುತ್ತೀಯಾ ಎಂಬAತೆ!
“ಛೆ… ಛೆ… ಅದೆಲ್ಲ ದೊಡ್ಡದಲ್ಲ. ಚಿಕ್ಕವರಿರುವಾಗ ಅದನ್ನೆಲ್ಲ ಮಾಡಬೇಕಾದ್ದೆ. ನಿಮ್ಮ ಮನೆಯಲ್ಲಿ ಉಳಿದಿದ್ದಕ್ಕೆ ನಾನು ಮನುಷ್ಯ ಎಂದು ಆಗಿದ್ದು. ಅನ್ನ ಉಂಡ ಜೊತೆಗೆ ಕೆಲಸ ಕಲಿತ ಋಣವೂ ನನ್ನ ಮೇಲಿದೆ. ದಿನಾ ಬೆಳಗ್ಗೆ ದೇವರಿಗೆ ನಮಸ್ಕಾರ ಮಾಡುವ ಹೊತ್ತಿಗೆ ನಿನ್ನ ಅಪ್ಪ-ಅಮ್ಮ, ದೊಡ್ಡಪ್ಪ-ದೊಡ್ಡಮ್ಮ ಅವರನ್ನೂ ಸಹ ನೆನೆಪಿಸಿಕೊಳ್ಳುತ್ತೇನೆ” ಎಂದು ಭಾವುಕನಾಗಿ ಕೈಮುಗಿದಾಗ ಅವನ ಕಣ್ಣಲ್ಲಿ ಕಂಡು ಕಾಣದಂತೆ ನೀರಿನ ಪಸೆ ಜಾರಿತ್ತು.
ಅಷ್ಟೆಲ್ಲ ಗೋಳುಹೊಯ್ದುಕೊಂಡರೂ; ಕೆಲಸ ಮಾಡಿಸಿದರೂ ಇವನು ಹೀಗೆ ಇಷ್ಟೆಲ್ಲ ಪ್ರೀತಿ ಇಟ್ಟುಕೊಂಡಿದ್ದಾನಲ್ಲ ಎಂದು ಅವನ ವ್ಯಕ್ತಿತ್ವದ ಬಗ್ಗೆ ಹೆಮ್ಮೆಯೆನಿಸಿತು.
ಕೇಳಲೋ ಬೇಡವೋ ಎಂದುಕೊಳ್ಳುತ್ತ ಕುತೂಹಲ ಅದುಮಿಟ್ಟುಕೊಳ್ಳಲಾಗದೆ ಕೇಳಿಯೇ ಬಿಟ್ಟೆ. ಊರಲ್ಲಿ ಅವನ ಬಗ್ಗೆ ನಾನಾ ರೀತಿಯ ಸುದ್ದಿಗಳು, ಊಹಾಪೋಹಗಳು ಹರಿದಾಡುತ್ತಿದ್ದ ಬಗ್ಗೆ.
“ಅಣ್ಣನ ಮರ್ಯಾದೆ ಹೋಗುತ್ತದೆ ಎಂದು ಇದನ್ನೆಲ್ಲ ನಾನು ಯಾರ ಹತ್ರಾನೂ ಹೇಳಿರಲಿಲ್ಲ. ಆದರೆ ಈಗ ನೀನು ಇಷ್ಟು ಕೇಳ್ತಾ ಇದ್ದಿಯಲ್ಲ ಎಂದು ಹೇಳ್ತಾ ಇದ್ದೀನಿ. ನನ್ನ ಮದ್ವೆ ಮಾಡಿದ್ರೆ ದುಡ್ಡು ಖರ್ಚಾಗುತ್ತದೆ ಎಂದು ಅಣ್ಣ ನಂಗೆ ಹುಚ್ಚು… ತಲೆ ಸರಿ ಇಲ್ಲ ಎಂದು ಸುದ್ದಿ ಹಬ್ಬಿಸಿದ. ಹೀಗಾಗಿ ನಂಗೆ ಯಾರೂ ಹೆಣ್ಣು ಕೊಡಲು ಮುಂದೆ ಬರಲಿಲ್ಲ. ಹುಚ್ಚನಿಗೆ ಆಸ್ತಿ ಯಾಕೆ ಎಂದು ಅದರಲ್ಲೂ ಪಾಲು ಕೊಡಲಿಲ್ಲ. ನಾನೆಷ್ಟೇ ಗೋಗರೆದರೂ ಸಹ ‘ಕದಿಯುತ್ತಾನೆ’ ಎಂಬ ಅಪವಾದವನ್ನೂ ಹಾಕಿದರು! ಊರ ಜನ, ನೆಂಟರಿಷ್ಟರೆಲ್ಲ ಅದನ್ನೇ ನಂಬಿ ನನ್ನನ್ನು ಕೆಟ್ಟವನನ್ನಾಗಿ ಮಾಡಿದರು.
ತುತ್ತು ಅನ್ನಕ್ಕಾಗಿ ಅವನ ಬಳಿ ಜೀತದಾಳಿನಂತೆ ಬದುಕುವುದು ನನಗಿಷ್ಟವಾಗದೆ ಮನೆಯಿಂದ ಹೊರಗೆ ಬಂದುಬಿಟ್ಟೆ. ಅವರೆಲ್ಲ ಏನು ಬೇಕಾದರೂ ಹೇಳಿಕೊಂಡು ತಿರುಗಲಿ. ಆದರೆ ನಾನು ಮಾತ್ರ ಅವರ ಬಗ್ಗೆ ಏನನ್ನೂ ಹೇಳಲಾರೆ. ಯಾಕೆಂದರೆ ಬೆಳೆದುನಿಂತ ಅವನ ಮಕ್ಕಳಿಗೆ ‘ಅಪ್ಪ ಹೀಗೆ’ ಎಂದು ಗೊತ್ತಾದರೆ ಅಣ್ಣನ ಮರ್ಯಾದೆ ಏನಾಗಬಹುದು? ಊರಲ್ಲಿ ಗೌರವ ಉಳಿಯುತ್ತದೆಯೆ? ನನ್ನಂತೆ ಅವನಿಗಾಗಬಾರದು ಎಂದು ಎಲ್ಲ ಅಪವಾದಗಳನ್ನು ತಲೆಗೆ ಕಟ್ಟಿಕೊಂಡು ತಿರುಗುತ್ತಿದ್ದೇನೆ.
ಜಗತ್ತು ವಿಶಾಲವಾಗಿದೆ. ಎಷ್ಟೊಂದು ಕಲಿಯೋದಿದೆ. ನಾವು ಮಾತ್ರ ಕೂಪಮುಂಡೂಕಗಳಂತೆ ಸಣ್ಣಸಣ್ಣ ವಿಚಾರಗಳನ್ನು ಮಾಡುತ್ತ ಇದ್ದಲ್ಲೇ ಇದ್ದುಬಿಡುತ್ತೇವೆ. ಬೆಳೆಯುವುದೇ ಇಲ್ಲ. ಈ ಕ್ಷಣದಲ್ಲಿ ನಾವು ಹೇಗೆ ಬದುಕುತ್ತಿದ್ದೇವೆ. ಎಷ್ಟು ಸಂತೋಷದಿಂದ ಇದ್ದೇವೆ ಎಂಬುದೇ ಮುಖ್ಯ ಹೊರತು ಆಸ್ತಿ, ದುಡ್ಡು, ಅಂತಸ್ತಲ್ಲ…” ಎಂದು ನಿಡಿದಾಗಿ ನಿಟ್ಟುಸಿರಿಟ್ಟ ವಾಸು.
‘ಇವನ ಬದುಕಲ್ಲಿ ಇಷ್ಟೆಲ್ಲ ತ್ಯಾಗವೆ?’ ಎಂದುಕೊಳ್ಳುತ್ತ ಲ್ಯಾಪ್ಟಾಪ್ ತೆರೆಯುವ ಹೊತ್ತಿಗೆ ವಾಸು ರೀಪಾಟ್ ಮಾಡಲು ಅಂಗಳ ಇಳಿದಾಗಿತ್ತು. ಸಂಜೆಯ ಹೊತ್ತಿಗೆ ಹೂಗಿಡಗಳು ಹೊಸ ಮಣ್ಣು-ಗೊಬ್ಬರದೊಂದಿಗೆ ನಗುತ್ತಿದ್ದವು. ಬೇಜಾರು ಮಾಡಿಕೊಳ್ಳುತ್ತ ಕುಳಿತರೆ ಬದುಕಲು ದಿನವಿಲ್ಲ ಎಂದವನ ಕೈಯಲ್ಲಿ!
ಒಂದು ಘಳಿಗೆ ಕೂಡ ಖಾಲಿ ಕೂರುವ ಜಾಯಮಾನದವನಲ್ಲ. ಕಪಾಟಿನಲ್ಲಿ ಅಸ್ತವ್ಯಸ್ತವಾದ ನನ್ನ ಬಟ್ಟೆಗಳಿಗೆ ಇಸ್ತಿç ಹೊಡೆದು ನೀಟಾಗಿ ಜೋಡಿಸಿಟ್ಟ. ವೀಕ್ಷಾಳಿಗೆ ಹೊಸ ಹೊಸ ಆಟ ಕಲಿಸಿದ!
ಹಳೆಯ ಟೇಪರೆಕಾರ್ಡರ್, ರೇಡಿಯೋ, ಇಸ್ತಿçಪೆಟ್ಟಿಗೆಗಳನ್ನೆಲ್ಲ ರಿಪೇರಿ ಮಾಡಿದ. ಯಾವ ಕೆಲಸವೂ ಬರುವುದಿಲ್ಲ ಎಂದು ಇಲ್ಲ. ‘ಇದನ್ನೆಲ್ಲ ಎಲ್ಲಿ ಕಲಿತೆ?’ ಎಂಬ ಪ್ರಶ್ನೆಗೆ ಹಾರಿಕೆಯ ಉತ್ತರ! ಎಂತಹ ಹೇಯವಾದ ಸಂದರ್ಭದಲ್ಲಿಯೂ ಕೂಡ ಕನಸನ್ನು ಕಣ್ಣಲ್ಲೇ ಹೆಪ್ಪುಗಟ್ಟಿಸಿ ಬದುಕಿನಲ್ಲಿ ಬಂದದ್ದನ್ನೆಲ್ಲ ನುಂಗುತ್ತ ಅದು ಬಾಳಿಸಿದಂತೆ ಬಾಳುವುದು ಎಷ್ಟು ಕಠಿಣ. ಅನುಭವಿಸಿದವರಿಗೆ ಗೊತ್ತು. ನಿಟ್ಟುಸಿರಾದೆ.
ಸಣ್ಣ ಕೊರತೆಯನ್ನೇ ದೊಡ್ಡದಾಗಿ ಮಾಡಿಕೊಂಡು ಅದನ್ನೇ ತಲೆಯಲ್ಲಿಟ್ಟುಕೊಂಡು ಕೊರಗುವ ನನಗೆ; ಬದುಕಿನ ಕನಿಷ್ಟ ಸುಖವೂ ಸಿಗದ ವಾಸು, ಪ್ರತಿಕ್ಷಣವನ್ನು ಖುಷಿಖುಷಿಯಾಗಿ ಆನಂದಿಸುತ್ತ ಇರುತ್ತಾನಲ್ಲ ಎಂಬ ವಿಷಯ ನನ್ನಲ್ಲಿ ಜೀವನೋತ್ಸಾಹ ತುಂಬಿಬಿಟ್ಟಿತು ಸರಕ್ಕನೆ.
ಆ ದಿನ ರಾಮನವಮಿ; ಶೀಲಾ ‘ಇವತ್ತಾದರೂ ಪೂಜೆ ಮಾಡಿ’ ಎಂದು ಹತ್ತು ಸಾರಿ ಹೇಳಿದರೂ ನಾನು ಅದೆನನ್ನೋ ಯೋಚಿಸುತ್ತ ಧ್ಯಾನಿಸುತ್ತ ಕುಳಿತಿದ್ದೆ. ಆಫೀಸಿನ ಪ್ರಾಜೆಕ್ಟ್ ತಲೆಯಲ್ಲಿ ಕುಣಿಯುತ್ತಿತ್ತು.
ಕೆಲವೇ ಕ್ಷಣದಲ್ಲಿ ಘಂಟಾನಾದ! ನಮ್ಮ ಮನೆಯ ಘಂಟೆ ಇಷ್ಟು ಚೆನ್ನಾಗಿ ಓಂಕಾರಗೈಯುತ್ತದೆ ಎಂದು ಇವತ್ತೇ ನಂಗೆ ಗೊತ್ತಾಗಿದ್ದು!
ಗಣಪತಿ ಉಪಷನಿತ್, ರುದ್ರ, ಚಮೆ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿ ದೇವರನ್ನು ಚೆನ್ನಾಗಿ ಅಲಂಕರಿಸಿದ ವಾಸು. ದೇವರ ಮುಂದೆ ಭಕ್ತಿಯಿಂದ ಕೈಮುಗಿದು ನಿಂತವನ ಮುಖದಲ್ಲಿನ ತೇಜಸ್ಸು ಕಂಡಾಗ ಸಟಕ್ಕನೆ ಸ್ವರ್ಣವಲ್ಲಿ ಗುರುಗಳೇ ಎದಿರು ಬಂದAತಾಯಿತು!
‘ಮರದ ಬಾಯಾಗಿದ್ರೆ ಒಡೆದೆ ಹೋಗುತ್ತಿತ್ತು…’ ಶೀಲಾಳಿಗೆ ಇಡೀದಿನ ನಾವು ಮಾತನಾಡುವುದನ್ನು ನೋಡಿ ಅನಿಸುತ್ತಿತ್ತು. ಮಾತನಾಡುತ್ತಾ… ಆಡುತ್ತಾ ನಮ್ಮ ಹಿಂದಿನ ಬದುಕಿಗೆ ತೆರಳುತ್ತ… ಅಲ್ಲಿಂದ ಎಲ್ಲೆಲ್ಲೋ ಸಾಗುತ್ತಿದ್ದೆವು. ನನ್ನೊಳಗಿಂದ ನನಗೆ ಗೊತ್ತಿಲ್ಲದ ಸಂಗತಿಗಳು ಸಲೀಸಾಗಿ ಹೊರಬೀಳುತ್ತಿದ್ದವು ಯಾವ ಮುಜುಗರವಿಲ್ಲದೆ.
ವಾಸುವಿನ ವ್ಯಕ್ತಿತ್ವದೊಳಗೆ ನಾನು ಕಳೆದು ಹೋಗಿ ಮತ್ತೆ ನನ್ನನ್ನು ನಾನು ಹುಡುಕಾಡುತ್ತಿದ್ದೆ.
ವಾಸು ಬಂದು ಆಗಲೇ ಎಂಟತ್ತು ದಿನವಾಗಿಬಿಟ್ಟಿತ್ತು. ವರ್ಷಗಟ್ಟಲೆ ಆಯಿತೇನೋ ಎಂಬAತ ಆಪ್ತಭಾವ. ಆರಾಮವಾಗಿದ್ದೆ… ಭೂತ, ಭವಿಷ್ಯದ ಹಂಗೇಕೆ ಎಂಬAತೆ.
ಮರುದಿನ ನಾನು ಏಳುವ ಹೊತ್ತಿಗೆ ವಾಸುವಿನ ಚೀಲ ಜಗುಲಿಯ ಮೇಲಿತ್ತು. ಇದೇ ಚೀಲವೆ ಅಲ್ಲವೆ ನನ್ನ ನಿದ್ದೆಕೆಡಿಸಿದ್ದು… ನನ್ನ ಅಪ್ರಬುದ್ಧತನಕ್ಕೆ ನಾಚಿಕೆಯಾಯಿತು.
ಊರಾಚೆಯ ಕಡಲಿನಂತೆ ಕೆಲವೊಮ್ಮೆ ಆಪ್ತವೆನಿಸಿ… ಕೆಲವೊಮ್ಮೆ ನಿಗೂಢವೆನಿಸಿ… ಒಮ್ಮೊಮ್ಮೆ ಎಲ್ಲವನ್ನು ಒಳಗೊಂಡು… ಮತ್ತೊಮ್ಮೆ ಎಲ್ಲವನ್ನು ಹೊರಗಿಟ್ಟು… ಆತನ ನಡವಳಿಕೆಯೆ ಸೋಜಿಗ ಎಂದೆನಿಸಿಬಿಟ್ಟಿತು.
“ಮುAದಿನ ಪಯಣ ಎಲ್ಲಿಗೆ?” ಎಂದಾಗ ಮುಖವನ್ನು ಮೇಲೆತ್ತಿ ಬಾನನ್ನು ದಿಟ್ಟಿಸಿದ. ‘ಮಾವ ಹೋಗಬೇಡ ಇಲ್ಲೆ ಇರು’ ಅಂದ ವೀಕ್ಷಾಳ ಕಣ್ಣಲ್ಲಿ ನೀರು. ಶೀಲಾ ಕೂಡ ತುಂಬಾ ಮಬ್ಬಾಗಿಬಿಟ್ಟಿದ್ದಳು. ಭಾವನೆಗಳೇ ಇಲ್ಲದ ನನಗೂ ಕೂಡ ನನಗರಿವಿಲ್ಲದಂತೆ ಗಂಟಲುಬ್ಬಿ ಮಾತನಾಡಲಾಗಲಿಲ್ಲ.
ನನ್ನಿಂದ ಏನನ್ನೂ ಬಯಸದೆ… ಬದುಕಿನ ಸರಳ ಪಾಠಗಳನ್ನು ಸಲೀಸಾಗಿ ಕಲಿಸಿದ. ಏನೂ ಇಲ್ಲದೆ ನಿಶ್ಚಿಂತವಾಗಿ ಹೇಗೆ ಇರಬಹುದು ಎಂದು ತೋರಿಸಿಕೊಟ್ಟಿದ್ದ. ದಣಪೆ ದಾಟಿ ತಿರುಗಿ ನೋಡಿದವನ ಮುಖದಲ್ಲಿ ನಸುನಗು.
“ಮತ್ತೆ ಬಾ… ವಾಸು” ಎಂದೆ ಮನತುಂಬಿ.