ನಮ್ಮ ಅರಮನೆಗೆ ಯಾರೋ ಬೃಹನ್ನಳಾ ಎನ್ನುವವರು ಬಂದಿದ್ದಾರಂತೆ. ಅವರು ನೃತ್ಯದಲ್ಲಿ ಬಹಳ ಪರಿಣತರಂತೆ. ಅತ್ತ ಹೆಣ್ಣೂ ಅಲ್ಲದ, ಇತ್ತ ಗಂಡೂ ಅಲ್ಲದ ಹಾಗೆ ಇದ್ದಾರಂತೆ – ಎಂದೆಲ್ಲ ಸಖಿಯರು ಮಾತನಾಡಿಕೊಳ್ಳುವುದನ್ನು ಕೇಳಿದ ನನಗೆ ಅವರ ಬಗೆಗೆ ಕುತೂಹಲ ಉಂಟಾಗಿತ್ತು. ಅದೇ ಸಮಯಕ್ಕೆ ನನ್ನ ತಂದೆ ವಿರಾಟ ಮಹಾರಾಜರು ನನ್ನನ್ನು ಕರೆದು, “ಕುಮಾರಿ, ಇದೋ ಈ ಬೃಹನ್ನಳಾ ಎನ್ನುವ ನೃತ್ಯ ವಿಶಾರದರು ನಾಳೆಯಿಂದ ನಿನಗೆ ನೃತ್ಯಾಭ್ಯಾಸ ಮಾಡಿಸುತ್ತಾರೆ. ಅವರನ್ನು ಗುರುಗಳಾಗಿ ಗೌರವದಿಂದ ಪರಿಚರಿಸಿ ಅಭ್ಯಾಸ ಮಾಡು”
ಉತ್ತರಾ ಎನ್ನುವ ಹೆಸರು ನನಗೆ. ಪ್ರಶ್ನೆಗಳಿಗೆಲ್ಲ ಉತ್ತರ ಕೊಡುವ ಸಾಮರ್ಥ್ಯವಿರಲಿ ಎಂದೋ ಅಥವಾ ಭವಿತವ್ಯದಲ್ಲಿ ಶ್ರೇಯಸ್ಸಾಗಲಿ ಎಂದೋ ನನಗೆ ಆ ಹೆಸರನ್ನಿಟ್ಟಿರಬೇಕು. ನನ್ನ ಅಣ್ಣನಿಗೂ ಅದೇ ಹೆಸರು. ಅವನಿಗಾದರೋ ಭೂಮಿಂಜಯ ಎಂಬ ಇನ್ನೊಂದು ಹೆಸರೂ ಇತ್ತು. ಶಂಖ, ಶ್ವೇತ ಮತ್ತು ಬಭ್ರು – ನನ್ನ ಉಳಿದ ಮೂವರು ಅಣ್ಣಂದಿರು. ಉತ್ತರಾ ಎಂಬ ಹೆಸರು ನನಗಿದ್ದರೂ, ಜೀವನದ ಯಾವ ಪ್ರಶ್ನೆಗಳಿಗೂ ನನ್ನಲ್ಲಿ ಉತ್ತರವೇ ಇಲ್ಲ. ಬದುಕಿನಲ್ಲಿ ಉತ್ಕರ್ಷವೂ ಕಾಣಲಿಲ್ಲ. ನಿಜವಾಗಿ ನನಗೆ ನಿರುತ್ತರಾ ಎಂದು ಹೆಸರಿಡಬೇಕಿತ್ತೆಂದು ಎಷ್ಟೋ ಸಲ ಅನಿಸಿದೆ.
ಉಳಿದವರ ದೃಷ್ಟಿಯಲ್ಲಿ ನಾನು ಭಾಗ್ಯವಂತೆ. ಹುಟ್ಟಿದ್ದು ಅರಮನೆಯಲ್ಲಿ ಅರಸನ ಮಗಳಾಗಿ. ಸಂಪತ್ತು, ವಿದ್ಯೆ, ರೂಪ – ಎಲ್ಲವೂ ಇತ್ತು. ನಾನೂ ನನ್ನನ್ನು ಭಾಗ್ಯಶಾಲಿನಿ ಎಂದೆ ತಿಳಿದಿದ್ದೆ. ಬಡವರ ಗುಡಿಸಲಿನಲ್ಲಿ ಹುಟ್ಟಿ, ಕಾರ್ಪಣ್ಯದಲ್ಲಿ ಬೆಳೆದು, ಜೀವನದ ಉತ್ತರಾರ್ಧದಲ್ಲಿ ಸಂಪನ್ನತೆಯನ್ನು ಕಾಣುವವರು ನಿಜವಾದ ಭಾಗ್ಯಶಾಲಿಗಳು ಎಂದು ಅರಿವಾದುದೆ ‘ಇದೆಲ್ಲ ಏನೂ ಬೇಡ’ ಎಂಬ ಹತಾಶ ಸ್ಥಿತಿಯಲ್ಲಿ. ಶ್ರೀಮಂತರ ಮನೆಯಲ್ಲಿ ಹುಟ್ಟಿ, ಸುಖವಾಗಿ ಬೆಳೆದು, ಮನವೊಪ್ಪಿದ ಗಂಡಿನ ಕೈಹಿಡಿದು, ಆಮೇಲೆ ತಳವಿಲ್ಲದ ದುಃಖದ ಕೂಪದಲ್ಲಿ ಬೀಳುವುದಾದರೆ ಅದೆಂತಹ ಭಾಗ್ಯ? ಈ ಉತ್ತರೆಯ ಬದುಕೂ ಹಾಗೆಯೇ ಆಗಿ ಹೋಯಿತಲ್ಲ ಎಂದು ತೋರುವುದು.
ನನಗೆ ಎಲ್ಲವೂ ಇತ್ತು. ಎಷ್ಟು ಅಂದರೆ ಉಳಿದವರು ನೋಡಿ ಕರುಬುವಷ್ಟು. ತಂದೆ, ತಾಯಿ, ಅಣ್ಣಂದಿರು, ಪರಿಜನ, ಪುರಜನ ಎಲ್ಲರೂ ನನ್ನನ್ನು ಅತ್ಯಂತ ಪ್ರೀತಿಯಿಂದಲೇ ಕಾಣುತ್ತಿದ್ದರು. ವಾತ್ಸಲ್ಯದ ಧಾರೆಯನ್ನೇ ನನ್ನ ಮೇಲೆ ಸುರಿಸುತ್ತಿದ್ದರು. ಹಾಗಾಗಿ ಕಷ್ಟ, ನೋವು ಎಂದರೇನೆAದು ತಿಳಿಯದೆ ಬೆಳೆದೆ. ಅರಮನೆಯ ಹೊರಗಿನ ಜಗತ್ತು ನನ್ನ ಕಣ್ಣಳತೆಗೆ ಸಿಗುತ್ತಿರಲಿಲ್ಲ. ಹೊರಪ್ರಪಂಚದ ಅರಿವಿಲ್ಲದ ಮುಗ್ಧಳಾಗಿದ್ದೆ ನಾನು.
ನನ್ನ ಕಲ್ಪನೆಯ ಆಚೆಗೆ ಇನ್ನೇನೋ ಇದೆ ಅನಿಸಿದ್ದು ನನಗೆ ನೃತ್ಯಾಭ್ಯಾಸ ಮಾಡುವ ಅವಕಾಶ ಬಂದಾಗ. ನಮ್ಮ ಅರಮನೆಗೆ ಯಾರೋ ಬೃಹನ್ನಳಾ ಎನ್ನುವವರು ಬಂದಿದ್ದಾರAತೆ. ಅವರು ನೃತ್ಯದಲ್ಲಿ ಬಹಳ ಪರಿಣತರಂತೆ. ಅತ್ತ ಹೆಣ್ಣೂ ಅಲ್ಲದ, ಇತ್ತ ಗಂಡೂ ಅಲ್ಲದ ಹಾಗೆ ಇದ್ದಾರಂತೆ – ಎಂದೆಲ್ಲ ಸಖಿಯರು ಮಾತನಾಡಿಕೊಳ್ಳುವುದನ್ನು ಕೇಳಿದ ನನಗೆ ಅವರ ಬಗೆಗೆ ಕುತೂಹಲ ಉಂಟಾಗಿತ್ತು. ಅದೇ ಸಮಯಕ್ಕೆ ನನ್ನ ತಂದೆ ವಿರಾಟ ಮಹಾರಾಜರು ನನ್ನನ್ನು ಕರೆದು,
“ಕುಮಾರಿ, ಇದೋ ಈ ಬೃಹನ್ನಳಾ ಎನ್ನುವ ನೃತ್ಯ ವಿಶಾರದರು ನಾಳೆಯಿಂದ ನಿನಗೆ ನೃತ್ಯಾಭ್ಯಾಸ ಮಾಡಿಸುತ್ತಾರೆ. ಅವರನ್ನು ಗುರುಗಳಾಗಿ ಗೌರವದಿಂದ ಪರಿಚರಿಸಿ ಅಭ್ಯಾಸ ಮಾಡು” ಎಂದರು.
ನಾನು ಆಗ ಅವರನ್ನು ನೋಡಿದೆ. ಮಧ್ಯ ವಯಸ್ಸಿನ ಆಕರ್ಷಕ ರೂಪ. ಮುಖದಲ್ಲಿ ಏನೋ ತೇಜಸ್ಸು. ಗಂಡಿನ ಮುಖ. ಅದರೆ ಹೆಣ್ಣಿನ ಕೋಮಲತೆ. ಅವರ ಗಂಭೀರ ವ್ಯಕ್ತಿತ್ವಕ್ಕೆ ಅರಿವಿಲ್ಲದೆ ಪೊಡಮಟ್ಟೆ. ಕಾಲಿಗೆರಗಿದ ನನ್ನನ್ನು ಎತ್ತಿ, “ಶ್ರೇಯಸ್ಸಾಗಲಿ ಕುಮಾರಿ” ಎಂದು ಹರಸಿದರು. ಮಾರನೆಯ ದಿನದಿಂದ ಅಭ್ಯಾಸ ಪ್ರಾರಂಭವಾಯಿತು.
ನನ್ನ ಗುರುಗಳಲ್ಲಿ ಅದಾವುದೋ ಒಂದು ದಿವ್ಯತೆ ನೆಲೆಸಿದೆ ಎಂದೆನಿಸುತ್ತಿತ್ತು ನನಗೆ. ನಾಟ್ಯದಲ್ಲೂ ಅಷ್ಟೆ. ಸಾಮಾನ್ಯ ನರ್ತಕರಂತೆ ಅಲ್ಲ, ಅವರಿಡುವ ಒಂದೊAದು ಹೆಜ್ಜೆಯಲ್ಲೂ ಅಲೌಕಿಕವಾದ ಸ್ಫುರಣ ಇದ್ದಂತೆ ಭಾಸವಾಗುತ್ತಿತ್ತು. ಹೇಳಿಕೊಡುವುದರಲ್ಲೂ ಅಷ್ಟೆ ಕೌಶಲದ ಸಿದ್ಧಿ ಅವರಿಗಿತ್ತು. ಇಲ್ಲವಾದರೆ ನನ್ನಂತಹ, ಲಲಿತಕಲೆಗಳಲ್ಲಿ ಬಹಳ ಪ್ರತಿಭಾಶಾಲಿನಿಯಲ್ಲದ ಕುಮಾರಿಗೆ ನಾಟ್ಯದಲ್ಲಿ ಬಹುಬೇಗನೇ ಪರಿಣತಿ ಸಾಧಿಸುವುದು ಶಕ್ಯವಿರಲಿಲ್ಲ. ನೃತ್ಯದ ಜತೆಗೆ ಹಾಡುವ ಅಭ್ಯಾಸವನ್ನೂ ಮಾಡಿಸುತ್ತಿದ್ದರು.
“ಕುಮಾರಿ, ಬರೀ ನಾಟ್ಯ ಕಲಿತು ಪ್ರಯೋಜನವಿಲ್ಲ. ಗಾಯನವೂ ಒಂದಿಷ್ಟು ತಿಳಿದಿರಬೇಕು. ಯೋಧನಾದವನಿಗೆ ಅಸ್ತçವಿದ್ಯೆಯ ಜೊತೆ ರಥ ನಡೆಸುವುದೂ ತಿಳಿದಿರುವಂತೆ. ಅದು ಅಗತ್ಯ” – ಹೀಗೆ ಅವರೆನ್ನುವಾಗ ಕಣ್ಣುಗಳು ಪ್ರಖರವಾಗಿ ಬೆಳಗುತ್ತಿದ್ದವು. ಏನಿದ್ದರೂ ನಾನು ನೃತ್ಯದಲ್ಲಿ ಪಳಗುವಂತೆ ನನ್ನ ಗುರುಗಳು ಅನುಗ್ರಹಿಸಿದರು.
ಅವರು ಯಾರು ಎಂಬ ವಿವರವೇನೂ ನನಗೆ ತಿಳಿದಿರಲಿಲ್ಲ. ಒಂದು ವರ್ಷದ ಕಾಲ ನಾಟ್ಯಾಭ್ಯಾಸ ಮಾಡಿದ ಬಳಿಕ ಅನಿರೀಕ್ಷಿತವಾಗಿ ಅವರ ಬಗೆಗೆ ತಿಳಿದದ್ದು. ಅದು ನಡೆದುದು ಹೀಗೆ: ಕೌರವರು ನಮ್ಮ ಗೋವುಗಳನ್ನು ಹಿಡಿದು ಒಯ್ಯುವುದಕ್ಕೆ ಬಂದರು. ಒಂದು ದಿನ ನಮ್ಮ ತಂದೆಯವರೇ ಸೈನ್ಯ ಸಹಿತ ಹೋದರು. ಅವರು ಹಿಂದಿರುಗುವ ಮೊದಲೇ ಉತ್ತರದಿಕ್ಕಿನಲ್ಲಿ ಗೋಗ್ರಹಣವಾಯಿತು. ಯುದ್ಧಕ್ಕೆ ಹೋಗುವುದಕ್ಕೆ ಅರಮನೆಯಲ್ಲಿ ಯಾರೂ ಇರಲಿಲ್ಲ. ನನ್ನ ಅಣ್ಣ ಭೂಮಿಂಜಯ ಸಿದ್ಧನಾದ. ಆಗ ನನ್ನ ಗುರುಗಳು ಸಾರಥ್ಯಕ್ಕೆ ಮುಂದಾದರು. ನನಗೇನೂ ಅಚ್ಚರಿಯಾಗಲಿಲ್ಲ. ಯಾಕೆಂದರೆ ಒಂದು, ಅಂತಹ ಸಾಮರ್ಥ್ಯವಂತರೆAದು ಅವರನ್ನು ನೋಡಿದಾಗ ಅನಿಸುತ್ತಿದ್ದುದು. ಇನ್ನೊಂದು, ನನ್ನ ಗುರುಗಳು ಎಂಬ ಅಭಿಮಾನ. ನಮ್ಮ ಗುರುಗಳು ಏನನ್ನೂ ಮಾಡಬಲ್ಲರು ಎಂದು ನಾನು ನಂಬಿದ್ದೆ. ನನ್ನ ವಯಸ್ಸಿನವರಿಗೆ ಇದು ಸಹಜವಷ್ಟೆ? ತಮ್ಮ ಗುರುವನ್ನಾಗಲಿ, ತಂದೆಯನ್ನಾಗಲಿ ಹೆಣ್ಣು ಸರ್ವಶಕ್ತನೆಂದೇ ತಿಳಿಯುತ್ತಾಳೆ.
ಯುದ್ಧಕ್ಕೆ ಹೋದವರು ಮರಳಿದ ಮೇಲೆ ಮೂರು ದಿನಗಳು ಕಳೆದು ಗೊತ್ತಾದುದು, ಅವರು ಪಾಂಡವರಲ್ಲಿ ಮಧ್ಯಮನಾದ ಅರ್ಜುನ ಎಂಬ ಸತ್ಯ. ನನಗೆ ದಿಗ್ಭ್ರಮೆಯಾಗಿತ್ತು. ಲೋಕವಿಶ್ರುತವಾದ ಕೀರ್ತಿ ಗಳಿಸಿದ ಆ ಮಹಾವೀರ ನನ್ನ ನೃತ್ಯ ಗುರುಗಳೆ? ಮತ್ತೆಲ್ಲ ವಿವರ ತಿಳಿಯಿತು. ಅವರು ದೇವಲೋಕಕ್ಕೆ ಹೋಗಿದ್ದಾಗ ಚಿತ್ರಸೇನ ಗಂಧರ್ವನಿAದ ಅಭ್ಯಾಸ ಮಾಡಿದ್ದರಂತೆ. ನನ್ನ ತಂದೆಯವರು ಪಾಂಡುಪುತ್ರರ ಕುರಿತು ಅಪಾರ ಅಭಿಮಾನವುಳ್ಳವರಾಗಿದ್ದರು. ಈಗಂತೂ ಮತ್ಸ್ಯ ರಾಜ್ಯವನ್ನೇ ಪಾಂಡವರಿಗೆ ಬಿಟ್ಟು ಕೊಡಲು ಹೊರಟಿದ್ದರು. ಅದನ್ನು ಯುಧಿಷ್ಠಿರ ಸ್ವೀಕರಿಸಲಿಲ್ಲ. ಆದರೆ ಪಾಂಡವರ ಜತೆ ಸಂಬAಧ ಬೆಳೆಸುವ ಹಂಬಲ ತಂದೆಯವರಿಗೆ. ನನ್ನ ಗುರುಗಳ ಎದುರು, “ನನ್ನ ಪುತ್ರಿ ಉತ್ತರೆಯನ್ನು ಅರ್ಜುನ ಮದುವೆಯಾಗಬೇಕು” ಎಂಬ ಪ್ರಸ್ತಾವವನ್ನು ಮಂಡಿಸಿದರು. ನನಗೋ ಅಯೋಮಯ ಪರಿಸ್ಥಿತಿ. ಇಷ್ಟು ಕಾಲ ಗುರುಗಳನ್ನು ಗೌರವಭಾವದಿಂದ ಕಂಡ ನಾನು ಅವರನ್ನು ಗಂಡನೆಂದು ಹೇಗೆ ಭಾವಿಸಲಿ?
ಆದರೆ ಗುರುಗಳು ಉದಾತ್ತವಾಗಿ ನಡೆದುಕೊಂಡರು.
“ಭೂಪತಿ, ನಿನ್ನ ಕೋರಿಕೆ ಸಾಧುವೇ. ಆದರೆ ಇಷ್ಟು ದಿನ ಮಗಳಂತೆ ನೋಡಿದ ಉತ್ತರೆಯನ್ನು ನಾನು ಮದುವೆಯಾಗಲಾರೆ. ಅಲ್ಲದೆ ಅದು ಲೋಕದ ಜನರ ಕಣ್ಣಿನಲ್ಲಿ ನಮ್ಮ ಚಾರಿತ್ರ್ಯದ ಕುರಿತು ಸಂಶಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಇದು ಸ್ವೀಕಾರ್ಯವಲ್ಲ. ಆದರೆ ಅದರಿಂದ ನೀನು ನಿರಾಶನಾಗುವ ಪ್ರಮೇಯವಿಲ್ಲ. ನನ್ನ ಸುಪುತ್ರನಾದ ಅಭಿಮನ್ಯು ಯೋಗ್ಯನಿದ್ದಾನೆ. ಪರಾಕ್ರಮಿಯೂ, ಗುಣವಂತನೂ ಆದ ಅವನಿಗೆ ನಿನ್ನ ಮಗಳನ್ನು ತಂದುಕೊಳ್ಳುತ್ತೇವೆ. ಅವಳು ನನ್ನ ಸೊಸೆಯಾಗಲಿ” ಎಂದು ನುಡಿದರಂತೆ. ಇದನ್ನು ಕೇಳಿದಾಗ ಅವರ ಮೇಲಿದ್ದ ಗೌರವಭಾವ ಇಮ್ಮಡಿಯಾಯಿತು. ಚೆಲವೆಯಾದ ಹೆಣ್ಣು ಅಯಾಚಿತವಾಗಿ ಲಭಿಸುವಾಗ ಯಾವ ಪುರುಷ ತಾನೇ ನಿರಾಕರಿಸಿಯಾನು? ಕಾಮಕ್ಕೆ ವಿವೇಚನೆಯುಂಟೆ? ಅದರೆ ನನ್ನ ಗುರುಗಳು ಉದಾರ ಚರಿತರಾದುದರಿಂದ ಹೀಗೆ ನಡೆದುಕೊಂಡರು. ನಾನು ಅಭಿಮನ್ಯು ಕುಮಾರನ ಮಡದಿಯಾದೆ. ನನ್ನ ಜೀವನದ ಅತ್ಯಂತ ಸಂತೋಷದ ದಿನಗಳವು. ನಮ್ಮದು ಎಂಬ ರಾಜ್ಯವಿಲ್ಲದಿದ್ದರೂ, ಮನಶ್ಶಾಂತಿಗೆ ಕೊರತೆಯಿರಲಿಲ್ಲ. ನನ್ನ ಕೈಹಿಡಿದ ಅಭಿಮನ್ಯು ಮನಸ್ಸಿಗೆ ಪ್ರಿಯವಾಗುವಂತೆ ನಡೆದುಕೊಳ್ಳುತ್ತಿದ್ದ. ಎಳೆಯ ವಯಸ್ಸಿನ ಹಗುರ ಮನಸ್ಸಿಗೆ, ತೆರೆದ ಬಾನಿನಲ್ಲಿ ಹಾರಾಡುವ ಹಕ್ಕಿಯಾದ ಅನುಭವ. ಸುಖಜೀವನದ ಆ ಗಳಿಗೆಗಳು ಅನಂತವಾಗುವವೆAದು ಭಾವಿಸಿದ್ದೆ. ಆಗಲೆಂದು ಬಯಸಿದ್ದೆ. ಆದರೇನು ಮಾಡಲಿ? ಸುಖದ ದಿನಗಳು ಬೇಗನೇ ಮುಗಿದು ಹೋದವು. ಎಲ್ಲರ ಬದುಕಿನಲ್ಲೂ ವಿಷಾದದ ಕಾರ್ಮೋಡ ಮುಸುಕುವಂತೆ ಮಹಾಯುದ್ಧವೊಂದು ಒದಗಿ ಬಂತು.
ಪಾAಡವರ ಪಾಲಿನ ರಾಜ್ಯವನ್ನು ಕೊಡಲಾರೆ ಎಂಬ ದುರ್ಯೋಧನನ ಹಟವೇ ಯುದ್ಧಕ್ಕೆ ಕಾರಣವಾಯಿತು.
ಸನ್ನಾಹಗಳು ಮುಗಿದು ಯುದ್ಧ ಪ್ರಾರಂಭವೂ ಆಯಿತು. ನಾವು ಧರ್ಮ ಮಾರ್ಗದಲ್ಲಿ ನಡೆದವರೆಂಬ ವಿಶ್ವಾಸ, ಭಗವಂತನೆನಿಸಿದ ಶ್ರೀಕೃಷ್ಣನ ಕೃಪೆ ಇದೆ ಎಂಬ ಭರವಸೆ ನನಗಿತ್ತು.
ಅದೂ ಹುಸಿಯೆ ಎಂಬ ಶಂಕೆಗೆ ಕಾರಣವಾಗುವ ಸನ್ನಿವೇಶ ಬಂದೊದಗಿತು. ಅಣ್ಣಂದಿರಲ್ಲಿ ಒಬ್ಬನಾದ ಶ್ವೇತ ಕುರು ಸೇನಾಪತಿಯಾದ ಭೀಷ್ಮರ ಬಾಣಕ್ಕೆ ಮೊದಲ ದಿನವೇ ಬಲಿಯಾದ. ಉಳಿದವರೂ ಉಳಿಯುವ ಭರವಸೆ ಇರಲಿಲ್ಲ. ನನ್ನ ತಂದೆಯೂ ಸೇರಿದAತೆ ಎಲ್ಲರೂ ಜೀವದಾಶೆಯನ್ನು ಮರೆತ ಯುದ್ಧೋನ್ಮಾದಿಗಳಾಗಿದ್ದರು. ಯುದ್ಧವೆಂದರೆ ಹಾಗೆಯೋ ಏನೋ. ತೊಡಗುವ ಮೊದಲು ಅಂಜಿಕೆ. ತೊಡಗಿದ ಬಳಿಕ ಸಮೂಹ ಸ್ಫೂರ್ತಿಯೋ ಇನ್ನೇನೋ ಮನುಷ್ಯರನ್ನು ಬದಲಿಸಿಬಿಡುತ್ತದೆ. ಯುದ್ಧಕ್ಕೆ ತೊಡಗಿದವನಿಗೆ ಎದುರು ಬಂದವರ ಪರಿಚಯವೇ ಇಲ್ಲವಾಗುತ್ತದೆ. ಒಂದೋ ಕೊಲ್ಲು, ಅಥವಾ ಸಾಯಿ ಇಷ್ಟೇ. ಯುದ್ಧದಲ್ಲಿ ಗೆದ್ದು ಬಂದವನಿಗಾದರೂ ಸುಖವಿದೆಯೆ ಎಂದರೆ ಅದೂ ಇಲ್ಲ. ಗೆಲವನ್ನು ಸಂಭ್ರಮಿಸಬೇಕಾದ ತನ್ನವರೆಲ್ಲ ಸತ್ತು ಅವನೊಬ್ಬ ಉಳಿದರೆ ಅದೆಂತಹ ಸಂಭ್ರಮ?
ಯುದ್ಧದ ಹದಿಮೂರನೆಯ ದಿನ. ನಾವು ಉಪಪ್ಲಾವ್ಯದ ಬಿಡದಿಯಲ್ಲಿ ಇದ್ದು ಯುದ್ಧದ ವಾರ್ತೆಯನ್ನು ನಿತ್ಯ ಕೇಳುತ್ತಿದ್ದೆವು. ವಾರ್ತೆ ಎಂದರೆ ಯಾರೆಲ್ಲ ಸತ್ತರು ಎಂದಷ್ಟೆ. ಅಲ್ಲಿಯವರೆಗೆ ನನಗೂ ಯುದ್ಧದ ಭೀಕರತೆಯ ಪೂರ್ಣ ಅರಿವು ಉಂಟಾಗಿರಲಿಲ್ಲ. ನನ್ನ ಮನಸ್ಸು ಹೊಟ್ಟೆಯಲ್ಲಿದ್ದ ನನ್ನ ಕಂದನ ಕುರಿತೇ ಧ್ಯಾನಿಸುತ್ತಿತ್ತು.. ನನ್ನ ಬಸಿರು ಹೊರಗಿನ ಆಘಾತಗಳಿಂದ ನನ್ನನ್ನು ಕಾಯುತ್ತಿತ್ತು. ನಾನು ಅದನ್ನು ಕಾಯುತ್ತಿದ್ದೆ. ಬರಲಿರುವ ಮುದ್ದು ಕಂದನ ನಿರೀಕ್ಷೆ ನನ್ನಲ್ಲಿ ಮಾತ್ರ ಅಲ್ಲ, ನನ್ನ ಅತ್ತೆಯಂದಿರಲ್ಲೂ ಏನೋ ಸಾಂತ್ವನ ಉಂಟು ಮಾಡುತ್ತಿತ್ತು. ಆದರೆ ಇವೆಲ್ಲವನ್ನೂ ಮೀರಿ ನನ್ನನ್ನು ಜೀವಚ್ಛವವಾಗಿಸಿದ ವರ್ತಮಾನ ಆ ಸಂಜೆ ನನ್ನ ಕಿವಿಗೆ ಬಿತ್ತು. ಯಾರು ನನ್ನ ಬದುಕಿನ ಉಸಿರಾಗಿದ್ದನೋ ಆ ಅಭಿಮನ್ಯು ಇನ್ನೆಂದೂ ಮರಳಿ ಬಾರದ ಲೋಕಕ್ಕೆ ಹೊರಟು ಹೋದ!
ಭೀಷ್ಮರ ಬಳಿಕ ಸೇನಾಧಿಪತ್ಯವನ್ನು ವಹಿಸಿಕೊಂಡ ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸಿ ನಮ್ಮವರನ್ನು ಯುದ್ಧಕ್ಕೆ ಕರೆದರಂತೆ. ಆ ವ್ಯೂಹವನ್ನು ಭೇದಿಸಬಲ್ಲವರಾರೂ ಶಿಬಿರದಲ್ಲಿ ಇರಲಿಲ್ಲ. ಪರಾಕ್ರಮ ಸ್ಪುರಿಸುತ್ತಿದ್ದ ನನ್ನ ಅಭಿಮನ್ಯು ಆ ಆಹ್ವಾನವನ್ನು ಸ್ವೀಕರಿಸಿ ಸನ್ನದ್ಧನಾದನಂತೆ. ಚಕ್ರವ್ಯೂಹದ ಭೇದನ ಕ್ರಮವನ್ನು ಪೂರ್ಣ ತಿಳಿದಿರದ ಆ ಸಾಹಸಿಯನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲವಂತೆ. ಏಕಾಂಗಿಯಾಗಿ ನುಗ್ಗಿಹೋಗಿ, ವ್ಯೂಹವನ್ನು ಭೇದಿಸಿ, ಕಾಳ್ಗಿಚ್ಚಿನಂತೆ ಪ್ರಜ್ವಲಿಸಿ ಸಹಸ್ರಾರು ಯೋಧರನ್ನು ಸಂಹರಿಸಿ ಮೆರೆದನಂತೆ. ಅವನನ್ನು ಎದುರಿಸಲಾರದೆ ಕುತಂತ್ರವೆಸಗಿ, ಹಿಂದಿನಿAದ ಹೋಗಿ ಕೊಂದು ಕಳೆದರಂತೆ ಕೌರವರು… ಅಬ್ಬಾ! ಶಿವನೇ.. ಆ ವಾರ್ತೆಯನ್ನು ಕೇಳಿಯೂ ಬದುಕುಳಿದ ಪಾಪಿ ನಾನು. ಕೆಲವು ದಿನ ನನಗೆ ಇಹದ ಪ್ರಜ್ಞೆಯೇ ಶೂನ್ಯವಾಗಿತ್ತು.
ಕಣ್ಣೀರಿನಲ್ಲಿ ತೋಯುತ್ತಿದ್ದ ನನಗೆ ಸಾಂತ್ವನ ಹೇಳುವವರು ಯಾರು? ಎಲ್ಲ ಹೆಂಗಳೆಯರೂ ಗಂಡನನ್ನೋ, ಮಗನನ್ನೋ, ಸೋದರನನ್ನೋ, ತಂದೆಯನ್ನೋ ಕಳೆದುಕೊಂಡವರೇ. ಅವರವರ ದುಃಖ ಅವರವರಿಗೆ ದೊಡ್ಡದು. ಯಾರಿಗೆ ಯಾರು ಸಮಾಧಾನ ಹೇಳಬೇಕು? ಎಲ್ಲರೂ ದುಃಖದ ಕಡಲಿನಲ್ಲಿ ಮುಳುಗಿರುವಾಗ, ‘ನಾನೊಬ್ಬಳೇ ಅಲ್ಲ’ ಎಂಬುದಷ್ಟೇ ಸಮಾಧಾನ. ಕುರುಕ್ಷೇತ್ರದ ಹೆಣಗಳ ರಾಶಿಯ ನಡುವೆ ಅವನ ಛಿದ್ರ ವಿಚ್ಛಿದ್ರವಾದ ಕಳೆಬರವನ್ನು ಕಂಡಾಗ, ನನಗೆ ಮೈಮೇಲಿನ ಪ್ರಜ್ಞೆಯೇ ಇರಲಿಲ್ಲ. ಎಷ್ಟು ಕಟ್ಟಿದರೂ ಒಳಗಿನಿಂದ ಒತ್ತರಿಸಿ ಬರುವ ದುಃಖ. ಅವನು ಕಣ್ಣು ತೆರೆದ, ಅವನ ತುಟಿ ಮಿಸುಕಾಡಿತು ಎಂಬ ಭಾವ. ಅರೆಹುಚ್ಚಿಯಂತೆ ರೋದಿಸುತ್ತ ಇದ್ದ ನನ್ನನ್ನು ಒಂದಿಷ್ಟು ಸಮಾಧಾನಿಸಿದ್ದು ನೀಲ ಗಗನದಂತೆ ಇದ್ದ ಕೃಷ್ಣನ ಕಣ್ಣ ಕಡಲಿನ ಶಾಂತ ನೋಟ. ಅವನು ಏನೂ ಹೇಳಲಿಲ್ಲ. ತುಟಿದೆರೆಯದೆ ಎಷ್ಟೋ ಹೇಳಿದ. ನಾನು ಸ್ವಲ್ಪ ಶಾಂತಳಾದೆ.
ಶಾAತಳಾದೆ ಎಂದೆನೆ? ಇಲ್ಲ, ಒಳಗಿನ ಅಳಲಿನ ಬೆಂಕಿ ಯಾವಾಗ ಪ್ರಜ್ಜಲಿಸುವುದೋ ಯಾರಿಗೆ ಗೊತ್ತು? ನನ್ನ ಬಾಳಿನಲ್ಲಿ ತಂದೆಯನ್ನು, ಅಣ್ಣಂದಿರನ್ನು, ಕೈ ಹಿಡಿದ ಇನಿಯನನ್ನೂ ಕಳೆದುಕೊಂಡು ಅಕ್ಷರಶಃ ಅನಾಥಳಾಗಿದ್ದ ನನ್ನ ಆಸರೆ ಒಂದೇ. ಅದು ನನ್ನ ಬಸುರಿನಲ್ಲಿದ್ದ ಕಂದ. ನನ್ನ ಮತ್ತು ಅಭಿಮನ್ಯುವಿನ ಪ್ರೇಮದ ಮೂರ್ತಿಯಾಗಿ ಮೈದಾಳಲಿದ್ದ ಆ ಹೂವಿಗಾಗಿ ನನ್ನ ದುಃಖವನ್ನು
ತಡೆದುಕೊಂಡೆ. ಗಂಗೆಯ ಒಡಲಿಗೆ ನನ್ನನ್ನು ಅರ್ಪಿಸಿಕೊಳ್ಳುವ ಕಠೋರ ನಿರ್ಧಾರವನ್ನು ಕೈಬಿಟ್ಟೆ.
ಆದರೆ ಯುದ್ಧ ಮುಗಿದ ಮರುದಿನ ಅದಕ್ಕೂ ಆಪತ್ತು ಬಂತು. ಆಚಾರ್ಯಪುತ್ರ ಅಶ್ವತ್ಥಾಮ ಬ್ರಹ್ಮಾಸ್ತçವನ್ನು ನನ್ನ ಗರ್ಭದ ಮೇಲೆ ಪ್ರಯೋಗಿಸಿಬಿಟ್ಟ. ಆದರೆ ಕೃಷ್ಣ ಕೃಪೆ ಕಾಪಾಡಿತು. ತಿಂಗಳು ಕಳೆದು ಹುಟ್ಟಿದ ನನ್ನ ಮಗುವಿನ ಮುಖ ನೋಡಲು ಕಾತರದಿಂದಿದ್ದರೆ, ಸೂಲಗಿತ್ತಿಯರು ‘ಮಗು ಬದುಕಿಲ್ಲ’ ಎಂದರು. ಆಗ ಮಾತ್ರ ಎದೆ ಒಡೆದೇ ಹೋಯಿತು. ಆದರೆ ಅಲ್ಲಿಯೂ ಕೃಷ್ಣನೇ ರಕ್ಷಕನಾಗಿ ಬಂದ. ಮಗುವಿಗೆ ಬದುಕನ್ನು ಕೊಟ್ಟ. ಮಗುವಿಗಲ್ಲ, ಈ ಉತ್ತರೆಗೆ ಬದುಕು ಕೊಟ್ಟ ಎನ್ನಬೇಕು. ಪರೀಕ್ಷಿತ ಜೀವಂತನಾದ. ನಾನೂ ಬದುಕಿದೆ.
ಬದುಕಿದೆ, ಅಷ್ಟೇ. ಕಾಲಗರ್ಭದಲ್ಲಿ ಮರೆಯಾಗುವ ಮುನ್ನ ನನ್ನ ಅಭಿಮನ್ಯುವಿನ ಪ್ರತಿರೂಪ ಕೀರ್ತಿಶಾಲಿಯಾಗಿ ಮೆರೆಯುವುದನ್ನು ಕಾಣುವ ಹಂಬಲದಲ್ಲಿ ಜೀವವಿಟ್ಟುಕೊಂಡೆ. ನನ್ನ ಬಾಳಿನಲ್ಲಿ ಒಂದಿನಿತು ಆನಂದವನ್ನೋ ಸಮಾಧಾನವನ್ನೋ ಕೊಟ್ಟವರಿದ್ದರೆ, ಅದು ನನ್ನ ಗುರು ಬೃಹನ್ನಳೆ, ನನ್ನನ್ನು ವರಿಸಿ, ಅತ್ಯಂತ ಬೇಗನೇ ಜೀವನ ಯಾತ್ರೆ ಮುಗಿಸಿ ನನ್ನನ್ನು ಅಗಲಿದ ಅಭಿಮನ್ಯು, ಮಗನನ್ನು ಉಳಿಸಿಕೊಟ್ಟ ಕೃಷ್ಣ ಮಾತ್ರ. ಯಾವಾಗ ನನ್ನ ಅಂತ್ಯವೋ ತಿಳಿಯೆ. ಅಷ್ಟು ಕಾಲ ಒಳಗೆ ಹುಟ್ಟುವ ನೂರು ಪ್ರಶ್ನೆಗಳಿಗೆ ಉತ್ತರಿಸಲಾರದೆ ತರಹರಿಸುತ್ತಾ ನಿರುತ್ತರಳಾಗಿ ಬದುಕಿರಬೇಕು, ಈ ಉತ್ತರೆ.