ಎಂದಿನಂತೆಯೇ ಒಂದು ಒತ್ತಡದ ದಿನ. ಬೆಳಗ್ಗೆ ಐದೂವರೆಯಿಂದ ಶುರುವಾದ ನನ್ನ ಕೆಲಸದ ಓಟ ಮಧ್ಯಾಹ್ನ ಎರಡು ಗಂಟೆಗೆ ಊಟವಾಗುವಲ್ಲಿಯವರೆಗೂ ಮುಂದುವರಿದೇ ಇತ್ತು. ಸರಿ, ಬಳಿಯಲ್ಲಿದ್ದ ಮಕ್ಕಳಲ್ಲಿ ಅವಲತ್ತುಕೊಂಡೆ, ‘ತುಂಬಾ ಸುಸ್ತಾಗಿದೆ ನನಗೆ. ನೀವಿನ್ನು ಟಿವಿ ಮೊಬೈಲು ಅಂತ ನೋಡಬೇಕಾದರೆ ಮೊದಲು ತೊಳೆದಿಟ್ಟ ಪಾತ್ರೆಗಳನ್ನೆಲ್ಲಾ ಅಚ್ಚುಕಟ್ಟಾಗಿ ಒರೆಸಿ ಅವುಗಳ ಸ್ಥಾನದಲ್ಲಿ ಚೆನ್ನಾಗಿ ಜೋಡಿಸಬೇಕು. ಬೆಳಗ್ಗಿನಿಂದ ಕುಳಿತೇ ಇಲ್ಲ ನಾನು.’ ಏನೋ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡಂತೆ ಮಕ್ಕಳು ‘ನಾವು ಪಾತ್ರೆಗಳನ್ನು ಜೋಡಿಸಿಯೇ ಸಿದ್ಧ’ಎಂದು ಸಾಕ್ಷಾತ್ ಸಾಗರೋಲ್ಲಂಘನೆಗೆ ಸನ್ನದ್ಧನಾದ ಆಂಜನೇಯನAತೆ ಪೋಸು ಕೊಟ್ಟರು. ಅಷ್ಟರಲ್ಲಿ ಮಗ ‘ಅಮ್ಮಾ, ನಾವು ಪಾತ್ರೆಗಳನ್ನು ಜೋಡಿಸುವ ಹೊತ್ತಿಗೆ ನೀನೇನು ಮಾಡುತ್ತೀಯಾ?’ ಎಂದು ಬೆರಗಾಗಿ ಕೇಳಿದ. ‘ನಾನೊಂದು ಹತ್ತು ನಿಮಿಷ ಮಲಗ್ತೇನೆ. ಮತ್ತೆ ಬರೆಯುವುದಿದೆ ನನಗೆ’ ಎಂದು ಸತ್ಯವನ್ನೇ ನುಡಿದೆ. ಮರುಕ್ಷಣದಲ್ಲಿ ಬಹುದೊಡ್ಡ ಪ್ರಮಾದವಾದಂತೆ ಮಕ್ಕಳು, ‘ನೋಡು, ಅಮ್ಮ ಎಷ್ಟು ಸೆಲ್ಫಿಷ್! ನಾವು ಮಕ್ಕಳು ಕೆಲಸ ಮಾಡಬೇಕಂತೆ, ಅಮ್ಮ ಮಲಗುತ್ತಾಳಂತೆ!’ ಎಂದು ಉದ್ಗರಿಸಿದರು. ಆ ಕ್ಷಣಕ್ಕೆ ಅವರಿಗೆ ನಾನು ಬೆಳಗಿನಿಂದ ಮಾಡಿಕೊಂಡಿದ್ದ ಯಾವ ಕೆಲಸವೂ ನೆನಪಿನಲ್ಲಿರಲಿಲ್ಲ. ಅವರ ಮುಂದೆ ಅದನ್ನು ತಮಾಷೆಯಾಗಿ ತೆಗೆದುಕೊಂಡು ‘ಹೌದಪ್ಪಾ, ಬೆಳಗ್ಗಿನಿಂದ ನಿಮಗೆ ಬೇಕಾದ ತಿಂಡಿ, ಮೂರು ಸಲ ಕಾಫಿ, ಮನೆ ಸ್ವಚ್ಛ ಪಡಿಸುವುದು, ಬಟ್ಟೆ ಒಗೆಯುವುದು ಪಾತ್ರೆ ತೊಳೆಯುವುದನ್ನೆಲ್ಲ ಮಾಡಿದ್ದು ನಾನಲ್ಲವೇ ಅಲ್ಲ. ಯಾರೋ ಮ್ಯಾಜಿಕ್ ಅಜ್ಜಿ ಬಂದು ಮಾಡಿದರಲ್ಲ?’ ಎಂದು ತಲೆಯಮೇಲೆ ಸಣ್ಣಗೆ ಮೊಟಕಿ ನೆಲದ ಮೇಲೆ ಅಡ್ಡಲಾದೆ. ಹತ್ತು ನಿಮಿಷಗಳ ವಿಶ್ರಾಂತಿ ಬಯಸಿದ್ದ ನನ್ನ ಕಣ್ಣಿವೆಗಳು ನಿದ್ದೆಯನ್ನು ಮರೆತವು. ಒಂದು ಬಗೆಯ ನೋವು, ಇನ್ನೊಂದು ಬಗೆಯ ವಿಷಾದ ನನ್ನನ್ನು ಬಹಳವಾಗಿ ಆವರಿಸಿಕೊಂಡಿತು. ಮನೆಯ ಕೆಲಸವೆಂದರೆ ಬರಿಯ ಅಮ್ಮನದೆಂದೋ ಅಪ್ಪನದೆಂದೋ ಈ ಮಕ್ಕಳು ಗ್ರಹಿಸಿಕೊಂಡರೇ? ಆ ರೀತಿಯ ಚಿತ್ರಣವನ್ನು ನಾವಿದುವರೆಗೆ ಕಟ್ಟಿಕೊಟ್ಟೆವೇ ಒಂದೂ ಅರ್ಥವಾಗಲಿಲ್ಲ.
ಇನ್ನೊಮ್ಮೆ ಇದೇ ರೀತಿ ಮನೆಯ ಯಾವುದೋ ಕೆಲಸದಲ್ಲಿ ಸಹಾಯ ಕೇಳಿದಾಗ ‘ಅದೆಲ್ಲ ಹೌಸ್ವೈಫ್ ಮಾಡುವ ಕೆಲಸ, ನಮ್ಮದಲ್ಲ’ಎಂಬ ಉತ್ತರ ಬಂದಿತ್ತು. ಮಕ್ಕಳಿಗೆ ಪೂರಕವಾಗುವಂತೆ ಎಷ್ಟೆಲ್ಲಾ ವ್ಯವಸ್ಥೆ ಮಾಡಿಕೊಡಬಹುದೆಂದು ನಾವಂದುಕೊಳ್ಳುತ್ತೇವೆಯೋ ಅದರಿಂದ ಮಕ್ಕಳು ಬದುಕನ್ನು ನೋಡುವ ರೀತಿಯೇ ಬದಲಾಗುತ್ತದೆ ಎಂಬುದAತೂ ಸುಸ್ಪಷ್ಟ. ಎರಡೋ ಮೂರೋ ವರ್ಷದವರಿದ್ದಾಗ ಇದೇ ಮಕ್ಕಳು ನಾನು ಕಸಗುಡಿಸಲು ಹೊರಟರೆ ಪೊರಕೆ ಕಿತ್ತುಕೊಂಡು ಗುಡಿಸಹೊರಡುವುದೋ, ನೆಲ ಒರೆಸುವುದಾದರೆ ಬಟ್ಟೆಯನ್ನೆಳೆದುಕೊಂಡು ಒರೆಸುವುದೋ, ಇಲ್ಲ ಬಟ್ಟೆ ಒಗೆಯಬೇಕಾದರೆ ಅಲ್ಲಿ ನೆರವಿಗೆ ಬರುವುದೋ ಎಲ್ಲ ಮಾಡುತ್ತಿದ್ದರಲ್ಲ, ನಮಗೆ ಗೊತ್ತೇ ಆಗದಂತೆ ಅವರ ಯೋಚನೆ ಬದಲಾದದ್ದು ಯಾವಾಗ? – ನನಗೆ ಅರ್ಥವೇ ಆಗಲಿಲ್ಲ. ‘ಮಕ್ಕಳ ಶಾಲಾ ಸಮಯವೇ ಇದಕ್ಕೆ ಕಾರಣ’ ಎನ್ನುತ್ತಾಳೆ ಅಕ್ಕ. ನಮಗಾದರೋ ಒಂಭತ್ತು ಗಂಟೆಗೆ ಶಾಲೆಗೆ ಹೊರಟರೆ ಸಾಕಿತ್ತು. ಅಷ್ಟು ಹೊತ್ತು ಅಮ್ಮನ ಹಿಂದೆ ಮುಂದೆ ಸುತ್ತುತ್ತಾ, ಮನೆಗೆಲಸಗಳಲ್ಲಿ ಸಹಾಯ ಮಾಡುತ್ತಾ, ಬಾವಿಯಿಂದ ನೀರು ಸೇದುತ್ತಾ ನಮ್ಮಿಂದಾಗಬಹುದಾದ ಕೆಲಸಗಳನ್ನು ಮಾಡುತ್ತಿದ್ದೆವು. ಆದರೆ ಈಗ ಹಾಗಿಲ್ಲ. ಮಕ್ಕಳಿಗೆ ಏಳೂವರೆಗೇ ಶಾಲೆಯ ಬಸ್ಸು ಬರುತ್ತದೆ. ಅವರು ತಿಂಡಿ ತಿನ್ನದೇ ಹೋದಾರೆಂಬ ಭಯಕ್ಕೆ ದಡಬಡಿಸಿ ಅವರ ಬಹುತೇಕ ಕೆಲಸಗಳನ್ನೂ ನಾವೇ ಮಾಡಿಕೊಡುವಂತಾಗುತ್ತದೆ. ಊಟದ ಬುತ್ತಿ ಕಟ್ಟಿಕೊಡುವುದೂ, ನೀರಿನ ಬಾಟಲ್ ತುಂಬಿಕೊಡುವುದೂ ನಾವೇ ಮಾಡುತ್ತೇವೆ. ಅದರದ್ದೇ ಪರಿಣಾಮ ಇದು. ನಮಗಿಂತ ಹೆಚ್ಚಿನ ಹೋಮ್ ವರ್ಕ್ ಇವರಿಗೆ. ಹಾಗಾಗಿ ಸಂಜೆ ಮನೆಗೆ ಹಿಂದಿರುಗಿದ ಮೇಲಾದರೂ ಒಂದಿಷ್ಟು ನೆರವಾಗುತ್ತಾರೆಯೇ ಎಂದರೆ ಅದೂ ಇಲ್ಲ. ಒಣಗಿದ ಬಟ್ಟೆ ಮಡಚಿಟ್ಟದ್ದನ್ನು ಬೇಕಾದಂತೆ ಜೋಡಿಸಿಕೊಂಡರೂ ನಮಗೆ ಒಂದಿಷ್ಟು ಸಮಯ ಉಳಿಯುತ್ತದೆ. ಅವರವರು ಊಟ ಮಾಡಿದ ತಟ್ಟೆ ತೊಳೆದಿಟ್ಟರೂ ನಾವು ಸಿಂಕ್ ತುಂಬಾ ಪಾತ್ರೆಗಳ ರಾಶಿ ನೋಡಿ ತಲೆತಿರುಗದಂತೆ ಅನುಕೂಲವಾಗುತ್ತದೆ. ಆದರೆ ಅರ್ಥ ಮಾಡಿಕೊಳ್ಳುವವರು ಯಾರು? ಅರ್ಥ ಮಾಡಿಸಬೇಕಾದವರು ಯಾರು?
ಸರಿ, ನನ್ನ ಶಾಲಾದಿನಗಳು ಅಕ್ಕನವಕ್ಕಿಂತ ಭಿನ್ನ. ಮನೆಯಿಂದ ಶಾಲೆಗೆ ಏಳು ಕಿಲೋಮೀಟರ್ ನಡೆಯಬೇಕಿದ್ದುದರಿಂದ ಎಂಟು ಗಂಟೆಗೇ ಮನೆಯಿಂದ ಹೊರಡಬೇಕಾದ ಅನಿವಾರ್ಯತೆಯಿತ್ತು. ಬೆಳಗ್ಗಿನ ಕೆಲಸಗಳಲ್ಲಿ ಅಮ್ಮನಿಗೆ ಒದಗದೇ ಹೋದರೂ ಸಂಜೆ ಹಿಂದಿರುಗಿದ ಮೇಲೆ ಅಮ್ಮನಿಗೆ ನನ್ನಿಂದಾದ ಸಹಾಯಗಳನ್ನು ಮಾಡುತ್ತಿದ್ದೆ. ಅಮ್ಮ ನನ್ನೊಂದಿಗೆ ಕುಳಿತು ಮಾತನಾಡಿದ್ದೋ ಆಟವಾಡಿದ್ದೋ ಇರಲಿಕ್ಕಿಲ್ಲ, ಆದರೆ ಅಮ್ಮನ ಕೆಲಸಗಳೆಲ್ಲದರಲ್ಲಿ ಜತೆಗೂಡುತ್ತಾ ಶಾಲೆಯ ಎಲ್ಲ ಘಟನಾವಳಿಗಳನ್ನೂ ಒಂದೂ ಬಿಡದಂತೆ ವರದಿ ಮಾಡುತ್ತಿದ್ದೆ. ದಿನಕ್ಕೆ ಇಪ್ಪತ್ತು ಕಿಲೋಮೀಟರು ದೂರದ ಶಾಲೆಗೆ ಹೋಗುತ್ತಿದ್ದ ಅಪ್ಪನೂ ಬಾವಿಯಿಂದ ನೀರು ಸೇದಿ ಕೊಡುವಂತಹ ಕೆಲಸಗಳನ್ನು ಮಾಡುತ್ತಿದ್ದರು. ನಮಗೆಂದಿಗೂ ಮನೆಗೆಲಸ ಹೊರೆ ಎಂದಾಗಲೀ, ಅದನ್ನು ಅಮ್ಮನೇ ಮಾಡಲಿ ಎಂದಾಗಲೀ ಅನ್ನಿಸಿದ್ದೇ ಇಲ್ಲ. ಅಮ್ಮ ದಿನವಿಡೀ ನಮಗಾಗಿಯೇ ಕೆಲಸ ಮಾಡುತ್ತಾರೆ ಎಂಬುದು ಅರ್ಥವಾಗಿತ್ತು. ಶಾಲೆಗೆ ರಜೆಯಿದ್ದಾಗ ಹಟ್ಟಿಗೆ ಬೇಕಾದ ಸೊಪ್ಪು ತರುವುದಕ್ಕೋ ಹಸುಕರುಗಳ ಕೆಲಸದಲ್ಲೋ, ಗೋಬರ್ಗ್ಯಾಸಿಗೆ ಹಟ್ಟಿಯಿಂದ ತೆಗೆದ ಸೆಗಣಿ ಕದಡಿಸಿ ಹಾಕುವುದೋ ಎಲ್ಲದರಲ್ಲೂ ಅಮ್ಮನ ಬಲಗೈ ನಾನಾಗಿದ್ದೆ. ಅಮ್ಮ ಹೊಲಿಯುವುದಕ್ಕೆ ಕುಳಿತರೆಂದರೆ ಎದುರು ಕುಳಿತುಕೊಂಡು ಬೇಕಾದಷ್ಟು ಮಾತಾಡುತ್ತಿದ್ದೆ. ಹೆಚ್ಚುಗಾರಿಕೆಯೆಂದಲ್ಲ, ಬಹುತೇಕ ನನ್ನ ತಲೆಮಾರಿನವರ ದಿನನಿತ್ಯದ ಕೆಲಸಗಳು ಒಂದಲ್ಲ ಒಂದು ರೀತಿಯಲ್ಲಿ ಹೀಗೆಯೇ ಇದ್ದಿರಬಹುದು.
ಇಂದು ಪರಿಸ್ಥಿತಿ ಹಾಗಿಲ್ಲ. ಮಕ್ಕಳಿಗೆ ಜಾಹೀರಾತಿನಲ್ಲೋ ಸಿನೆಮಾದಲ್ಲೋ ಕಾಣುವ ಅಮ್ಮ ಆದರ್ಶವೆನಿಸುತ್ತಾಳೆ. ಅವರಂತೆ ನಮ್ಮ ಅಮ್ಮನಿಲ್ಲ ಎನಿಸುತ್ತದೆ. ಮನೆಯ ಪಡಸಾಲೆಯಲ್ಲಿ ಮಕ್ಕಳೊಂದಿಗೆ ಕುಳಿತುಕೊಂಡು ಆಟವಾಡಿದರೋ ಹೊರಗಿನ ಅಂಗಳದಲ್ಲಿ ಬ್ಯಾಡ್ಮಿಂಟನ್ ಇತ್ಯಾದಿ ಆಡಿದರೋ ಮಾತ್ರ ಅವರಿಗೆ ಅಮ್ಮ ನಮ್ಮೊಂದಿಗೆ ಸಮಯ ಕಳೆಯುತ್ತಿದ್ದಾಳೆ ಎಂದನ್ನಿಸುತ್ತದೆ ಹೊರತು, ಅಮ್ಮನ ಕೆಲಸಗಳನ್ನು ನಾವೂ ಹಂಚಿಕೊAಡರೆ ಅಮ್ಮನಿಗೂ ಬಿಡುವು ದೊರೆಯುತ್ತದೆ ಎಂದಾಗಲೀ ಆ ಸಮಯದಲ್ಲೇ ಹತ್ತಾರು ಮಾತುಗಳನ್ನು ಆಡಬಹುದು ಎಂದಾಗಲೀ ಹೊಳೆಯುವುದೇ ಇಲ್ಲ. ಅದನ್ನು ನಯವಾಗಿ ತಿಳಿಸಿದರೂ ‘ಕೆಲಸ ಹಂಚಿಕೊAಡರೆ ಜೊತೆಗೆ ಸಮಯ ಕಳೆದಂತಾಗುತ್ತದಾ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ ಹೊರತು ಅದಕ್ಕೆ ಮಿಗಿಲಾಗಿ ಅರ್ಥ ಮಾಡಿಕೊಳ್ಳುವ ವಯಸ್ಸೂ ಅವರದಲ್ಲ. ಹೆಚ್ಚುಕಡಮೆ ಬಹುತೇಕ ಮನೆಗಳ ಪರಿಸ್ಥಿತಿ ಇದೇ ಇರಬಹುದೇನೋ!
ಅಂತೂ ಮನೆಗೆಲಸಗಳಲ್ಲಿ ತೊಡಗುವುದು ಅವರ ಜವಾಬ್ದಾರಿಯೂ ಹೌದು ಎಂಬುದನ್ನು ಅರ್ಥ ಮಾಡಿಸಲು ಇನ್ನೊಂದು ಉಪಾಯ ಹೂಡಿದೆ. ಇನ್ನೊಂದು ನಾಲ್ಕು ತಿಂಗಳಲ್ಲಿ ನಾನು ಮುಗಿಸಬೇಕಿರುವ ಕೆಲಸಗಳನ್ನು ಅವರಿಗೆ ಒಂದೊAದಾಗಿ ತಿಳಿಯಹೇಳಿ, ಅವರು ಚಿಕ್ಕಪುಟ್ಟ ಸಹಾಯ ಮಾಡಿದರೂ ನನಗದು ತುಂಬಾ ಸಮಯ ಒದಗಿಸಿಕೊಡುತ್ತದೆ ಎಂದೆಲ್ಲಾ ವಿವರಿಸಿದೆ. ‘ಕೆಲಸ ಮಾಡುತ್ತೇವೆ, ನಮಗೆ ಪಾಕೆಟ್ ಮನಿ ಕೊಡ್ತೀಯಾ?’ ಎಂಬ ಉತ್ತರ ಬಂತು. ಅಂತೂ ಸುಮಾರು ಹೊತ್ತಿನ ಚರ್ಚೆಯ ಬಳಿಕ ಒಂದು ಒಪ್ಪಂದವೇನೋ ಆಯಿತು. ಆದರೆ ಎರಡೇ ದಿನ. ಅಕ್ಕ-ತಮ್ಮನ ನಡುವೆ ಭಯಂಕರ ವಾಗ್ಯುದ್ಧವಾಗಿ, ಮನೆಕೆಲಸಕ್ಕೆ ರಾಜೀನಾಮೆ ಕೊಟ್ಟಿರುವುದಾಗಿ ತಿಳಿಸಿ ಇಬ್ಬರೂ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ ಪೂರ್ವ ಪಶ್ಚಿಮ ದಿಕ್ಕುಗಳಿಗೆ ಮುಖ ಮಾಡಿದರು. ಅವರ ಜಗಳ ಬಿಡಿಸುವುದಕ್ಕಿಂತ ಕೆಲಸ ಮಾಡಿಕೊಳ್ಳುವುದೇ ನೆಮ್ಮದಿಯ ಸಂಗತಿ ಎಂದುಕೊAಡು ಸುಮ್ಮನಾದೆ.
ಮಕ್ಕಳಿಗೆ ಕಷ್ಟವಾಗದಿರಲಿ ಎಂದುಕೊAಡು ಬಹುತೇಕ ಕೆಲಸಗಳನ್ನು ನಾವೇ ಮೈಮೇಲೆ ಎಳೆದುಕೊಳ್ಳುವುದಿದೆಯಲ್ಲ, ಅದರಿಂದಾಗಿ ಮಕ್ಕಳಿಗೆ ‘ತಾವು ಆರಾಮವಾಗಿರಬೇಕಾದವರು’ ಎಂಬ ಭಾವನೆ ಬರುತ್ತದೋ ಗೊತ್ತಿಲ್ಲ. ಮನೆಯ ಸದಸ್ಯರಾಗಿ ಒಂದಿಷ್ಟು ಕೆಲಸಗಳನ್ನು ಮಾಡುವುದು ತಮ್ಮ ಹೊಣೆ ಎಂಬ ಅರಿವು ಅವರಲ್ಲಿ ಮೂಡಿಸದೇ ಹೋದರೆ ಅವರ ಮುಂದಿನ ಬದುಕಿನಲ್ಲಿ ಅದೇ ಒಂದು ತೊಡಕಾಗದೆ? ವಿದ್ಯಾರ್ಥಿ ದೆಸೆಯವರೆಗೂ ಒಂದು ರೀತಿ ಆದರೆ ಅದರ ಮುಂದಿನ ಬದುಕಿನಲ್ಲಿ ಮನೆಗೆಲಸಗಳನ್ನು ಹೊಸದಾಗಿ ಕಲಿಯಬೇಕಾದರೆ ಬಹುಶಃ ಫಸ್ಟ್ ರ್ಯಾಂಕ್ ರಾಜುವಿನ ಕಥೆಯಾದೀತು. ಈಗ ಕೊರೋನಾ ಹಲವು ಪಾಠಗಳ ನಡುವೆ ಇದೊಂದು ಮುಖ್ಯ ಪಾಠವನ್ನೂ ಕಲಿಸಿದೆ. ಮಕ್ಕಳು ನಮ್ಮೊಂದಿಗಿದ್ದಾರೆ ಅಥವಾ ನಾವು ಮಕ್ಕಳೊಂದಿಗೇ ಇದ್ದೇವೆ. ಮನೆಯೆಂಬುದು ನಮ್ಮದಾಗಿದೆ ಅಂದಮೇಲೆ ಮನೆಗೆಲಸಗಳೂ ನಮ್ಮದೇ ಆಗಲಿ.