ಜೀವನದ ನಡೆ ಅನಂತತೆಯ ಕಡೆ ಇರಬೇಕು. ಅನಂತತೆ ಎಂದರೆ ಪರಮಾತ್ಮಭಾವ, ಸಾಯುಜ್ಯ, ಮೋಕ್ಷ. ಇದು ಒಂದೇ ಜನ್ಮದಲ್ಲಿ ಪಡೆಯಲು ಸಾಧ್ಯವೆನ್ನಲಾಗದು. ಅನೇಕ ಜನ್ಮ ಬೇಕಾದೀತು. ತಡವಾಗಿ ಸಿಕ್ಕಿದರೂ ಸರಿ. ಅದೇ ನಮ್ಮ ಪರಮಲಕ್ಷ್ಯ. ಅದರಲ್ಲಿ ನಮ್ಮ ಸತತ ಪ್ರಯತ್ನ ಸಾಗಬೇಕು. ಆ ಪರಮಾತ್ಮಭಾವವನ್ನು ಹೊಂದಲು ವ್ರತ ನಿಯಮಗಳು ಸಹಕಾರಿ. ಅದು ನಮ್ಮ ಮನಸ್ಸಿಗೆ ನಿಯತ್ತನ್ನು ಕಲಿಸುತ್ತದೆ, ಅನಂತತೆಯೆಡೆಗೆ ಒಯ್ಯುತ್ತದೆ. ಇದಲ್ಲದೆ ನಿಯತವಾದ ಮನಸ್ಸು ದುಃಖ, ದುಗುಡ, ಸಂಕಷ್ಟ ಸಮಸ್ಯೆಗಳು ಏನೇ ಬಂದರೂ ಸಹಿಸಿಕೊಳ್ಳಬಲ್ಲದು, ಎದುರಿಸಬಲ್ಲದು.
ಜೀವನದಲ್ಲಿ ಹಲವು ಚಿಕ್ಕ ನಿಯಮಗಳನ್ನು ಹಾಕಿಕೊಳ್ಳುವುದು ಪ್ರಯೋಜನಕರ. ರಾತ್ರಿ ಊಟವಾದ ಮೇಲೆ ಟಿ.ವಿ. ನೋಡಬಾರದು. ತುಸು ಹೊತ್ತು ಉತ್ತಮ ಅಧ್ಯಾತ್ಮಗ್ರಂಥಗಳ ಓದು, ಅಧ್ಯಯನ ಮತ್ತು ದೇವರ ಉಪಾಸನೆ ಮಾಡಿ ಮಲಗಿ. ಬೆಳಗ್ಗೆ ಎದ್ದಾಗಲೂ ಈ ನಿಯಮ ಆವರ್ತಿಸಬೇಕು. ಇದರಿಂದ ಮನಸ್ಸು ನಿರ್ಮಲವಾಗುತ್ತದೆ, ಹಗುರವಾಗುತ್ತದೆ. ಶರೀರದ ಆರೋಗ್ಯ ಕೂಡ ಹೆಚ್ಚುತ್ತದೆ. ನಿರ್ಮಲ ಮನಸ್ಸು ನಮ್ಮನ್ನು ಅನಂತತೆಯತ್ತ ಒಯ್ಯುವಲ್ಲಿ ಸಮರ್ಥವಾಗುತ್ತದೆ. ಆದ್ದರಿಂದ ಇಂಥ ನಿಯಮಗಳನ್ನು ಅಳವಡಿಸಿಕೊಂಡು ಜೀವನವನ್ನು ಉಜ್ಜೀವನವಾಗಿಸಿ ಸಾರ್ಥಕಪಡಿಸಿಕೊಳ್ಳಬೇಕು.
ಕೃಷ್ಣದ್ವೈಪಾಯನರು, ವ್ಯಾಸ ಎಂದರೆ ವಿಸ್ತಾರ ವೇದಗಳ ಸಂದೇಶವನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಪುರಾಣ, ಇತಿಹಾಸಗಳ (ಮಹಾಭಾರತ) ಮೂಲಕ ವಿಸ್ತರಿಸಿ ವಿವರಿಸಿದ್ದರಿಂದ ವ್ಯಾಸ ಎಂದು ಖ್ಯಾತರಾದರು. ಅವರ ಗ್ರಂಥಗಳ ಮೂಲ ಉದ್ದೇಶ ಅನಂತತೆಯತ್ತ ಸಾಗುವುದೇ ಆಗಿದೆ. ಆದ್ದರಿಂದ ಅವರ ಗ್ರಂಥಗಳನ್ನು ಅಧ್ಯಯನ ಮಾಡಬೇಕು.
(ಸೌಜನ್ಯ: ‘ಸ್ವರ್ಣವಲ್ಲೀಪ್ರಭಾ’ ಮಾಸಪತ್ರಿಕೆ, ಶಿರಸಿ)