“ಅವೆಲ್ಲವನ್ನೂ ನಾವು ಇವಳಿಗೆ ಹೇಳಿಕೊಟ್ಟಿರುವೆವು. ಆದುದರಿಂದ ಇವಳು ನಮ್ಮ ಮಗಳು” ಎಂದ ಆಚಾರ್ಯರ ಮಾತುಗಳು ಅಲ್ಲಿ ನೆರೆದಿದ್ದ ಎಲ್ಲರಿಗೂ ಸೋಜಿಗವನ್ನು ಉಂಟುಮಾಡಿದವು.
ಮಾರನೆಯ ದಿವಸ ಅನ್ವಿತಿಯ ಗೆಳತಿಯರ ಗುಂಪು ಹಾಜರಾಯಿತು. ಕಥೆ ಮುಂದುವರಿಯುತ್ತಲೇ ಇದೆ. ಪಂಚಾಣುವ್ರತಗಳಿಗೆ ಅದೆಷ್ಟು ಚೆನ್ನಾಗಿ ಕವಿ ಕಥೆ ನೇಯ್ದಿದ್ದಾನೆ. ನಾಗಶ್ರೀ ನಾಗಶರ್ಮ ಬಹುದೂರ ಬಂದಿದ್ದರು. ಅಷ್ಟರಲ್ಲಿ ಒಬ್ಬ ಹೆಣ್ಣು ಮಗಳ ಕೊರಳಿಗೆ ಒಂದು ಗಂಡಸಿನ ತಲೆಯನ್ನು ಕಟ್ಟಿದ್ದಾರೆ. ಅವಳನ್ನು ತಳವಾರ ಕರೆದೊಯ್ಯುತ್ತಿದ್ದಾನೆ. ನಾಗಶ್ರೀ ಅದನ್ನು ನೋಡಿದಳು. ಭಯ ಮತ್ತು ಜುಗುಪ್ಸೆಯಿಂದ ತನ್ನ ತಂದೆಯ ಕಡೆ ಮುಖಮಾಡಿದಳು. ಮಗಳ ಇಂಗಿತ ತಿಳಿದ ನಾಗಶರ್ಮ ತಳವಾರನನ್ನು ಕಂಡು ವಿಷಯವನ್ನು ಸಂಗ್ರಹಿಸಿ ಮಗಳ ಬಳಿಗೆ ಬಂದು ಹೇಳಿದನು. ಅದು ಸಹ ಒಂದು ಕಥೆಯಂತೆಯೇ ಸಾಗಿತು.
ಸೂರಸೇನ ಎನ್ನುವ ಒಬ್ಬ ವರ್ತಕನಿದ್ದನು. ಅವನಿಗೆ ಸುಮಿತ್ರೆ ಎಂಬ ಹೆಂಡತಿ ಇದ್ದಳು. ಆ ದಂಪತಿಗಳಿಗೆ ಮದಾಳಿ ಎನ್ನುವ ಒಬ್ಬ ಮಗಳಿದ್ದಳು. ಸೂರಸೇನನಿಗೆ ಇಬ್ಬರು ಸೋದರಳಿಯಂದಿರಿದ್ದರು. ಒಬ್ಬನ ಹೆಸರು ನಂದ, ಇನ್ನೊಬ್ಬನ ಹೆಸರು ಭದ್ರ. ಒಮ್ಮೆ ಅಣ್ಣ ನಂದನು ಸುವರ್ಣ ದ್ವೀಪಕ್ಕೆ ವ್ಯಾಪಾರಕ್ಕಾಗಿ ಹೊರಟನು. ಸೂರಸೇನನು ಕಿರಿವಯಸ್ಸಿನ ಬಾಲೆ ಮದಾಳಿಯನ್ನು ನಂದನಿಗೆ ಕೊಟ್ಟು ಮುಂದಿನ ವರುಷಗಳಲ್ಲಿ ಮದುವೆ ಮಾಡುವ ಸಂಕಲ್ಪ ಹೊಂದಿದ್ದನು. ಅವನು ನಂದನಿಗೆ ತಿಳಿಸಲು ತಾನು ಬರಲು ಇನ್ನು ಹನ್ನೆರಡು ವರುಷವಾಗುತ್ತದೆ. ಆಗ ಆ ವೇಳೆಗೆ ಮದಾಳಿಯೂ ಬೆಳೆದು ಯುವತಿಯಾಗಿರುತ್ತಾಳೆ. ಬಂದ ನಂತರ ಮದುವೆಯಾಗುವೆ. ಹನ್ನೆರಡು ವರುಷಗಳು ಕಳೆದು ನಾನು ಬರದೆ ಇದ್ದರೆ, ನನ್ನ ತಮ್ಮ ಭದ್ರನಿಗೆ ಕೊಟ್ಟು ಮದುವೆ ಮಾಡಿ, ಅದಕ್ಕೆ ನನ್ನ ಆಕ್ಷೇಪಣೆಯೇನೂ ಇಲ್ಲ ಎಂದು ತಿಳಿಸಿ ಹೋದನು.
ಹನ್ನೆರಡು ವರುಷಗಳು ಕಳೆದವು. ಸೂರಸೇನನು ನಂದನಿಗಾಗಿ ಇನ್ನೂ ಒಂದು ವರುಷ ಕಾದನು. ಆದರೆ ನಂದ ಬರಲಿಲ್ಲ. ಆಗ ಮದಾಳಿಯನ್ನು ಭದ್ರನಿಗೆ ಕೊಟ್ಟು ಧಾರೆ ಎರೆಯುವ ವೇಳೆಗೆ ನಂದ ಬಂದನು. ಆಗ ಅಣ್ಣ ಬಂದ, ಅವನಿಗಾಗಿ ಬೆಳೆದ ಹೆಣ್ಣು ಮದಾಳಿ, ಅವನಿಗೆ ಧಾರೆ ಎರೆಯಿರಿ ಎಂದು ಭದ್ರ ಹಸೆಮಣೆಯಿಂದ ಮೇಲೆ ಎದ್ದು ಹೊರಟುಹೋದನು. ತಮ್ಮನಿಗೆ ಧಾರೆ ಎರೆಯಲು ನಿಂತಿದ್ದ ಹೆಣ್ಣು ತನಗೆ ಬೇಡ ಎಂದು ನಂದನೂ ಮದಾಳಿಯನ್ನು ನಿರಾಕರಿಸಿದನು.
ಮದುವೆ ನಿಂತುಹೋಯಿತು. ಸೂರಸೇನ, ಸುಮಿತ್ರೆ ಹಾಗೂ ಮದಾಳಿ ದುಃಖದಲ್ಲಿ ಮುಳುಗಿಹೋದರು. ಮದಾಳಿಗೆ ಮರುಮದುವೆ ಸಾಧ್ಯವಾಗದೆ ತಂದೆ-ತಾಯಿಯರ ಮನೆಯಲ್ಲೆ ಉಳಿದಳು. ಕೆಲವು ತಿಂಗಳುಗಳು ಉರುಳಿದವು. ಮದಾಳಿ ನಾಗಸೂರನೆಂಬವನಲ್ಲಿ ಮೋಹಗೊಂಡಳು. ನಾಗಸೂರ ಮದಾಳಿ ಮರೆಯಲ್ಲಿ ಬಾಳತೊಡಗಿದರು. ಇದು ತಳವಾರನಿಗೆ ತಿಳಿಯಿತು. ದೊರೆಯವರೆಗೂ ದೂರು ಹೋಯಿತು. ದೊರೆಯ ಅಪ್ಪಣೆಯಂತೆ ನಾಗಸೂರನ ಕೊರಳನ್ನು ಕತ್ತರಿಸಿ ಮದಾಳಿ ಕೊರಳಿಗೆ ಕಟ್ಟಿದ್ದಾರೆ. ಈಗ ಮದಾಳಿಯ ಕೊರಳನ್ನು ಕತ್ತರಿಸಲು ವಧಾಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ – ಎಂದು ನಾಗಶರ್ಮನು ಹೇಳಿದನು. ಆಗ ನಾಗಶ್ರೀ ನಾನು ಪರದಾರ ನಿವೃತ್ತಿ ವ್ರತವ ಬಿಡಲಾರೆ ಎನ್ನುವಳು. ಹಾಗೆ ಆಗಲಿ, ಮಗಳೆ, ನಡಿ ಉಳಿದಿರುವ ಒಂದು ವ್ರತವನ್ನು ಬಿಟ್ಟು ಬರುವೆಯಂತೆ ಎಂದು ಹೇಳಿ ಮುಂದೆ ಹೋಗುವರು.
ಆ ವೇಳೆಗೆ ಒಬ್ಬನನ್ನು ಶೂಲಕ್ಕೆ ಏರಿಸಿ, ಹಿಂಸಿಸುತ್ತಿದ್ದ ದೃಶ್ಯವನ್ನು ನಾಗಶ್ರೀ ನೋಡಿದಳು. ಶೂಲದಲ್ಲಿ ಅವಳ ಕಣ್ಣುಗಳು ನೆಟ್ಟು ಕಣ್ಣುಗಳಲ್ಲಿ ನೀರು ತುಂಬಿದವು. ತಂದೆಯನ್ನು ನೋಡಿದಳು. ಅವಳು ಪ್ರಶ್ನಿಸುವುದಕ್ಕೆ ಮೊದಲೇ ನಾಗಶರ್ಮ ತಳವಾರನ ಬಳಿ ಹೋಗಿ ಏಕೆ ಇವನಿಗೆ ಈ ಶಿಕ್ಷೆ? ಇವನು ಮಾಡಿದ ತಪ್ಪಾದರೂ ಏನು? ಎಂದು ಕೇಳಿದನು. ತಳವಾರ ಹೇಳಿದ ಕಥೆಯನ್ನು ಕೇಳಿಸಿಕೊಂಡು ಬಂದು ನಾಗಶರ್ಮ ತನ್ನ ಮಗಳಿಗೆ ಹೇಳಲಾರಂಭಿಸಿದನು.
ದೊರೆ ಚಂದ್ರವಾಹನನ ಪಶುಪಾಲಕನಾಗಿ ವೀರಪೂರ್ಣ ಎನ್ನುವ ಹೆಸರಿನ ಗೋವಳಿಗ ನೊಬ್ಬನಿದ್ದನು. ಒಮ್ಮೆ ರಾಜನ ದನಗಳ ಹಟ್ಟಿಗೆ ಬೇರೆ ಹಸುಗಳು ನುಗ್ಗಿದರೆ ಅವುಗಳನ್ನು ಹಿಡಿದು ವೀರಪೂರ್ಣನು ದೊರೆಗೆ ಒಪ್ಪಿಸಿದನು. ಅವನ ಭಕ್ತಿಗೆ ಮೆಚ್ಚಿದ ದೊರೆ ಆ ಹಸುಗಳನ್ನು ಅವನಿಗೆ ಕೊಟ್ಟುಬಿಟ್ಟನು. ವೀರಪೂರ್ಣನಿಗೆ ಆಸೆ ಹೆಚ್ಚಾಯಿತು. ಊರಿನ ಇತರರ ಗೋವುಗಳನ್ನು ಹಿಡಿದು ತನ್ನ ಹಟ್ಟಿಗೆ ಸೇರಿಸಿಕೊಳ್ಳಲಾರಂಭಿಸಿದನು. ದುರಾಸೆಯಿಂದ ಕೂಡಿದ ವೀರಪೂರ್ಣ ಅಷ್ಟರಲ್ಲಿ ತೃಪ್ತನಾಗಲಿಲ್ಲ. ಒಮ್ಮೆ ಮಹಾರಾಣಿಯ ಗೋವುಗಳನ್ನು ಹಿಡಿದು ತನ್ನ ಗೋವುಗಳ ಹಟ್ಟಿಗೆ ತುಂಬಿಕೊಂಡನು. ಮಹಾರಾಣಿ ಮಾತ್ರವಲ್ಲದೆ ಗೋವುಗಳನ್ನು ಕಳೆದುಕೊಂಡಿದ್ದ ಊರಿನ ಅನೇಕರು ರಾಜನ ಬಳಿ ದೂರುಕೊಟ್ಟರು. ಈತನೇ ಆ ವೀರಪೂರ್ಣ. ಇವನ ಅತಿ ಆಸೆಯನ್ನು ಕಂಡು, ರಾಜನು ಈತನಿಗೆ ಇಂಥ ಶಿಕ್ಷೆ ವಿಧಿಸಿದ್ದಾನೆ ಎಂದು ನಾಗಶರ್ಮ ತನ್ನ ಮಗಳಿಗೆ ಹೇಳಿದನು. ಶಿಕ್ಷೆಗೊಳಗಾಗಿ ನೋವನ್ನು ಅನುಭವಿಸುತ್ತಿರುವ ವೀರಪೂರ್ಣ ಮಾಡಿದ ತಪ್ಪನ್ನು ವಿವರಿಸಿದನು. ಆಗ ನಾಗಶ್ರೀ ಅತಿ ಆಸೆ ಪಡದಿರುವ ಅಪರಿಗ್ರಹ ವ್ರತವನ್ನು ನಾನು ಸ್ವೀಕರಿಸಿದ್ದೇನೆ. ಆ ವ್ರತ ಬಿಟ್ಟರೆ ನಾನೂ ಅತಿಯಾಸೆಗೆ ಗುರಿಯಾಗಿ ಇಂಥ ಶಿಕ್ಷೆಯನ್ನು ಅನುಭವಿಸಬೇಕಾದೀತು ಎಂದಳು. ಹಾಗಾದರೆ ಈ ವ್ರತವೂ ಇರಲಿ ಎಂದನು. ಆದರೂ ಆ ಜೈನ ಯತಿಗಳನ್ನು ಶಿಕ್ಷಿಸಲೇಬೇಕೆಂದು ಮಗಳನ್ನು ಸೂರ್ಯಮಿತ್ರಾಚಾರ್ಯರಲ್ಲಿಗೆ ಕರೆತರುವನು.
ಆ ಯತಿಗಳನ್ನು ಕುರಿತು ನಾಗಶರ್ಮನು ಉಪಾಯದಿಂದ ಮೋಸಮಾಡಿ ನನ್ನ ಮಗಳಿಗೆ ವ್ರತಗಳನ್ನು ಉಪದೇಶಿಸುವುದು ನ್ಯಾಯವೇ? ಎಂದು ಕೋಪಿಷ್ಠನಾಗಿ ಕೇಳಿದನು. ಯತಿಗಳು ಸಮಾಧಾನದ ಮಂದಹಾಸದ ಮುಗುಳ್ನಗೆಯಿಂದ ಈ ಮಗಳು ನಿಮ್ಮ ಮಗಳಲ್ಲ, ಅವಳು ನಮ್ಮ ಮಗಳು ಎಂದು ಉತ್ತರ ಕೊಟ್ಟರು. ಇದನ್ನು ಕೇಳಿ ನಾಗಶರ್ಮ ಅತ್ಯಂತ ಕೋಪಗೊಂಡು ದೊರೆಯ ಬಳಿ ಬಂದು ದೂರುಹೇಳಿದನು.
ದೊರೆ ಚಂದ್ರವಾಹನ, ಮಹಾರಾಣಿ, ಮಂತ್ರಿ, ಸೇನಾನಿ ಹಾಗೂ ರಾಜ ಪರಿವಾರ ಮುನಿಗಳ ಪೂಜೆಗೆ ಸಿದ್ಧರಾಗಿ ಬಂದರು. ಬಂದು ಮುನಿಗಳಿಗೆ ಎರಗಿ ಆಶೀರ್ವಾದ ಪಡೆದರು. ಅನಂತರ ಸ್ವಲ್ಪ ಅಂತರದಲ್ಲಿ ಕುಳಿತರು. ನಾಗಶರ್ಮ ತನ್ನ ಅಹವಾಲನ್ನು ತಿಳಿಸಿದನು. ಆಗ ಸೂರ್ಯಮಿತ್ರಾಚಾರ್ಯರು ಇವಳು ನಮ್ಮ ಮಗಳು, ಇವಳು ಇಚ್ಛಿಸಿದ ವ್ರತ ಕೊಟ್ಟೆವು ಎಂದು ಪುನಃ ಹಾಗೆ ಹೇಳುವರು. ಅವಳು ಹೇಗೆ ನಿಮ್ಮ ಮಗಳು? ದೊರೆ ಹಾಗೂ ನಾಗಶರ್ಮನ ಪ್ರಶ್ನೆ ತಕ್ಷಣವೇ ಎದುರಾಯಿತು. ಇವಳು ನಿಮ್ಮ ಮಗಳಾದರೆ ವೇದಶಾಸ್ತ್ರ, ಆಗಮ, ಮೀಮಾಂಸೆ, ತರ್ಕ – ಈ ವಿದ್ಯೆಗಳನ್ನು ಕಲಿಸಿರುವಿರೇನು? ಎಂದು ಕೇಳಿದ ಮುನಿಗಳಿಗೆ ನಾಗಶರ್ಮ ಇಲ್ಲ ಕಲಿಸಿಲ್ಲ, ಯಾವ ವಿದ್ಯಾಭ್ಯಾಸವೂ ಅವಳಿಗೆ ಇಲ್ಲ ಎಂದು ನುಡಿಯುವನು. ಅವೆಲ್ಲವನ್ನೂ ನಾವು ಇವಳಿಗೆ ಹೇಳಿಕೊಟ್ಟಿರುವೆವು. ಆದುದರಿಂದ ಇವಳು ನಮ್ಮ ಮಗಳು ಎಂದ ಆಚಾರ್ಯರ ಮಾತುಗಳು ಅಲ್ಲಿ ನೆರೆದಿದ್ದ ಎಲ್ಲರಿಗೂ ಸೋಜಿಗವನ್ನು ಉಂಟುಮಾಡಿದವು. ಪೂಜ್ಯರೇ ತಾವು ದಯಮಾಡಿ ನಿಮ್ಮ ಮಗಳ ವಿದ್ಯೆಯನ್ನು ಪ್ರದರ್ಶಿಸಿರಿ. ನಮ್ಮ ಸಂಶಯವನ್ನು ಹೋಗಲಾಡಿಸಿ ಎಂದು ಚಂದ್ರವಾಹನ ದೊರೆಯು ಸೂರ್ಯಮಿತ್ರಾಚಾರ್ಯರನ್ನು ಪ್ರಾರ್ಥಿಸಿದರು. ಆಗ ಆಚಾರ್ಯರು ನಾಗಶ್ರೀಯ ತಲೆಯ ಮೇಲೆ ಕೈಯನ್ನು ಇಟ್ಟು ಮಗಳೆ, ವಾಯುಭೂತಿ ಜನ್ಮದಲ್ಲಿ ನಿನಗೆ ಉಪದೇಶಿಸಿದ ವಿದ್ಯೆಯನ್ನು ಇವರೆಲ್ಲರಿಗೂ ತೋರಿಸು ಎಂದರು. ಆಗ ಎಲ್ಲರೂ ಆಶ್ಚರ್ಯ ಹೊಂದುವಂತೆ ನಾಗಶ್ರೀ ವೇದ, ಆಗಮ, ಶ್ರುತಿ, ಸ್ಮೃತಿಗಳ ಪಠಣ ಮಾಡಿದಳು.
ನಾಗಶ್ರೀಯ ಹಿಂದಿನ ಜನ್ಮಗಳ ಕಥೆಗಳನ್ನು ಸೂರ್ಯಮಿತ್ರಾಚಾರ್ಯರು ಅಲ್ಲಿ ನೆರೆದಿದ್ದವರಿಗೆಲ್ಲ ವಿವರಿಸಿದರು. ಅವುಗಳನ್ನು ಕೇಳಿ ಚಂದ್ರವಾಹನ ರಾಜ, ನಾಗಶರ್ಮ, ತ್ರಿವೇದಿ, ನಾಗಶ್ರೀ ಎಲ್ಲರೂ ದೀಕ್ಷೆ ಪಡೆದರು. ಕೆಲವು ದಿವಸಗಳಲ್ಲಿ ಸೂರ್ಯಮಿತ್ರಾಚಾರ್ಯರು ಇಹಲೋಕ ತ್ಯಜಿಸಿ ಮೋಕ್ಷ ಹೊಂದಿದರು. ಅಗ್ನಿಭೂತಿಯೂ ಕರ್ಮಗಳನ್ನು ನೀಗಿಕೊಂಡು ಮುಕ್ತಿ ಪಡೆದನು. ಕಮಲಜ್ಜಿ ಕಥೆ ಮುಗಿಸಿದ್ದರು. ಆದರೆ ಅನ್ವಿತಿಯ ಪ್ರಶ್ನೆ ಹಾಗೇ ಉಳಿದಿತ್ತು. ಅಜ್ಜಿ, ನಾಗಶ್ರೀಯ ಹಿಂದಿನ ಜನ್ಮಗಳು ಎಷ್ಟು? ಆ ಕಥೆಗಳನ್ನೆಲ್ಲಾ ಹೇಳಿ ಅಜ್ಜಿ ಎಂದು ಗೋಗರೆಯಲಾರಂಭಿಸಿದಳು.
ಕಮಲಜ್ಜಿ ನಾಳೆಯಿಂದ ನಾಗಶ್ರೀಯ ಹಿಂದಿನ ಜನ್ಮಗಳ ಕಥೆ, ಸೂರ್ಯಮಿತ್ರಾಚಾರ್ಯರ ಕಥೆ, ಜೊತೆಗೆ ನಾಗಶ್ರೀಯ ಮುಂದಿನ ಜನ್ಮದ ಸುಕುಮಾರನ ಕಥೆ, ವೃಷಭಾಂಕನ ಕಥೆ ಎಲ್ಲವನ್ನೂ ಹೇಳುವೆನು. ಸುಕುಮಾರನಿಗೆ ಸಂಬಂಧಿಸಿದಂತೆ ಇನ್ನೂ ಅನೇಕ ಕಥೆಗಳಿವೆ. ಒಂದೊಂದು ದಿವಸ ಒಂದೊಂದು ಕಥೆ ಹೇಳುವೆ. ಇಂದಿನ ಕಥೆ ಮುಗಿಯಿತು ಎಂದು ಮೇಲಕ್ಕೆ ಎದ್ದರು. ಅನ್ವಿತಿ ಹಾಗೂ ಗೆಳತಿಯರು ಮುಂದಿನ ಕಥೆಗಾಗಿ ನಾಳೆಯವರೆಗೂ ಕಾಯಬೇಕಾಯಿತು.?
( ….ಮುಂದುವರಿಯುವುದು)