ಬ್ರಿಟಿಷರ ಆಳ್ವಿಕೆಯಲ್ಲಿ ಭಾರತವನ್ನು ಹೇಗೆ ಲೂಟಿ ಮಾಡಲಾಯಿತು ಎಂದು ಭಾರತದ ಸಂಸದರೊಬ್ಬರು ಆಕ್ಸ್ಫರ್ಡ್ನ ಚರ್ಚೆಯಲ್ಲಿ ಮಾತನಾಡಿದ್ದು ದೊಡ್ಡ ಸುದ್ದಿಯಾಯಿತು. ಆದರೆ ಬ್ರಿಟಿಷರು ಹೀಗೆ ನಾಶಮಾಡುವ ಮೊದಲು ಭಾರತದ ಸ್ವರೂಪವೇನಿತ್ತು? ಅದರ ಸಾಂಸ್ಥಿಕ ಸಂರಚನೆಗಳು ಹೇಗಿದ್ದವು? ಅವುಗಳ ಹಿಂದಿನ ಸಾಂಸ್ಕöÈತಿಕ ಮೌಲ್ಯಗಳೇನಿದ್ದವು? – ಎಂಬುದರ ಬಗ್ಗೆ ಜನಸಾಮಾನ್ಯರಿಗೂ ಅಷ್ಟಾಗಿ ಗೊತ್ತಿಲ್ಲ; ವಿದ್ವದ್ವಲಯದಲ್ಲಿಯೂ ಇದರ ಬಗ್ಗೆ ಅಷ್ಟಾಗಿ ಸಂಶೋಧನೆಗಳು ಆಗಿಲ್ಲ. ಧರ್ಮಪಾಲರು ಈ ವಿವರಗಳನ್ನು ಬ್ರಿಟಿಷ್ ಸರ್ಕಾರದ ದಾಖಲೆಗಳ ಮೂಲಕವೇ ಎತ್ತಿತೋರಿಸುವ ಸಾಹಸ ಮಾಡಿದರು.
“India for the Indians! True; but why? Is it that we may have, or that we may be and give?” [1]
ಇದು ಭಾರತವು ತನ್ನನ್ನು ಪರಕೀಯ ದಾಸ್ಯದಿಂದ ಮುಕ್ತಗೊಳಿಸಲು ಹೋರಾಡುತ್ತಿದ್ದ ಕಾಲದಲ್ಲಿ ಆನಂದ ಕುಮಾರಸ್ವಾಮಿಯವರು ಕೇಳಿಕೊಂಡ ಪ್ರಶ್ನೆ. ಭಾರತೀಯ ಸಂಪನ್ಮೂಲಗಳೆಲ್ಲವೂ ಭಾರತೀಯರ ವಶದಲ್ಲಿರಬೇಕು ಎಂಬ ಕಾರಣಕ್ಕಾಗಿ ನಮಗೆ ಸ್ವಾತಂತ್ರ್ಯ ಬೇಕಿದೆಯೊ? ಅಥವಾ ಈ ಸ್ವಾತಂತ್ರ್ಯದ ಮೂಲಕ ನಾವು ಉದಾತ್ತವಾದ ಆದರ್ಶಗಳನ್ನು ಸಾಧಿಸಿಕೊಂಡು, ತನ್ಮೂಲಕ ಇತರರಿಗೂ ಬೆಳಕಾಗುವ ‘ಸ್ವರಾಜ್ಯ’ಕ್ಕಾಗಿ ಈ ಹೋರಾಟವೊ? – ಎಂಬುದು ಅವರ ಕಾಳಜಿಯಾಗಿತ್ತು. ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷವನ್ನು ಆಚರಿಸುತ್ತಿರುವ ಇಂದು ಈ ಪ್ರಶ್ನೆಗೆ ಇನ್ನೂ ಹೆಚ್ಚಿನ ಮಹತ್ತ್ವವಿದೆಯೆನಿಸುತ್ತದೆ. ಏಕೆಂದರೆ ಆ ಸ್ವರಾಜ್ಯ ನಮಗೆ ಇನ್ನೂ ದಕ್ಕಿಲ್ಲ; ಸ್ವಾತಂತ್ರ್ಯಾನಂತರ ನಾವು ಆ ಕಡೆಗೆ ಮುಖವನ್ನೂ ಮಾಡಿಲ್ಲ. ಎಷ್ಟರಮಟ್ಟಿಗೆಂದರೆ ಈಹೊತ್ತು ಯಾರಾದರೂ ‘ನಮ್ಮ ರಾಷ್ಟ್ರೀಯ ಆದರ್ಶಗಳು’ ಎಂದು ಮಾತನಾಡಿದರೆ ನಮಗದರ ತಳಬುಡವೇ ತಿಳಿಯುವುದಿಲ್ಲ! ಅದರಲ್ಲೂ ಜಾಗತೀಕರಣವೆಂಬ ವ್ಯಾಪಾರಿ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಹೋಗುತ್ತಿರುವ ನಮಗೆ ರಾಷ್ಟ್ರವೊಂದಕ್ಕೆ ತನ್ನದೇ ಆದ ಆದರ್ಶವಿರುತ್ತದೆ ಎಂಬುದನ್ನೇ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಇಂದಿನ ಸಮಸ್ಯೆಯೇನಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿಯೇ ನಮ್ಮ ರಾಜಕೀಯ ನಾಯಕರು, ಅಧಿಕಾರಶಾಹಿ, ಶೈಕ್ಷಣಿಕ ವ್ಯವಸ್ಥೆಗಳೆಲ್ಲ ನಡೆದುಕೊಂಡ ರೀತಿಯನ್ನು ಕಂಡು ಅಂದಿಗೇ ಹಲವು ಪ್ರಾಮಾಣಿಕ ಚಿಂತಕರಿಗೆ ದಿಗ್ಭ್ರಮೆಯಾಗಿತ್ತು. ಹಲವರಲ್ಲಿ ಗೊಂದಲದಲ್ಲಿಯೇ ಮುಗಿದುಹೋದ ಈ ದಿಗ್ಭ್ರಮೆಗೆ ಉತ್ತರವನ್ನು ಹುಡುಕ-ಹೊರಟವರು ಮಾತ್ರ ಕೆಲವರೇ. ಅಂತಹ ಸಂಶೋಧಕರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು ಧರ್ಮಪಾಲ್.
ಸ್ವತಂತ್ರ ಭಾರತದಲ್ಲಿ ಬದಲಾದದ್ದು ಏನು? ಧರ್ಮಪಾಲ್ ಈ ಪ್ರಶ್ನೆಯನ್ನು ಗಂಭೀರವಾಗಿ ಕೇಳಿಕೊಂಡರು. ಅವರೇ ಒಂದು ಕಡೆ ಹೇಳುವಂತೆ, ಸ್ವಾತಂತ್ರ್ಯ ಬಂದಮೇಲೂ ಭಾರತದಲ್ಲಿ ಬ್ರಿಟಿಷರದ್ದೇ ಸಂಸತ್ತು, ಕಾನೂನುಗಳು, ಮಂತ್ರಿಗಳು, ಮಂತ್ರಾಲಯಗಳು; ಅವೇ ಸಾಂಸ್ಥಿಕ ರಚನೆಗಳು, ಅವುಗಳ ಹಿಂದೆ ಇದ್ದ ವ್ಯಕ್ತಿಗತ ಹಿತಾಸಕ್ತಿ ಮತ್ತು ಭ್ರಷ್ಟ ಅಧಿಕಾರಶಾಹಿ ಎಲ್ಲವೂ ಮುಂದುವರಿಯಿತು. ನಮ್ಮ ರಾಜಕೀಯ-ಸಾಂಸ್ಥಿಕ ವ್ಯವಸ್ಥೆಗಳೇಕೆ ನಮ್ಮ ಜನರ ಸುಖ-ದುಃಖ ನೋವು-ನಲಿವುಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ? ನಮ್ಮ ನಾಯಕರು, ವಿದ್ಯಾವಂತರು ದೇಶದ ಬಹುಸಂಖ್ಯಾತ ಶ್ರೀಸಾಮಾನ್ಯರನ್ನು ತಮ್ಮ ಚರ್ಚೆಗಳಲ್ಲಿ ಏಕೆ ಒಳಗೊಳ್ಳಲಾರರು? ಶ್ರೀಸಾಮಾನ್ಯನಿಗೆ ನಾವು ನಂಬಿಕೊಂಡ ಪ್ರಗತಿಯ ಆಧುನಿಕ ಪರಿಕಲ್ಪನೆಯು ಏಕೆ ಅರ್ಥವಾಗುವುದಿಲ್ಲ? ಈ ಅರ್ಥವಾಗದಿರುವಿಕೆ ಒಂದಷ್ಟು ಹಿಂದುಳಿದಿರುವ ನಿರಕ್ಷರಕುಕ್ಷಿ ಭಾರತೀಯರ ಲಕ್ಷಣವೇ? ಭಾರತೀಯರು ತಲತಲಾಂತರದಿಂದ ಹೀಗೆಯೇ ಇದ್ದಂತಹವರೆ? ಅವರ ಗತಕಥನಗಳೇನು? ಬ್ರಿಟಿಷರಿಗಿಂತ ಮೊದಲು ಭಾರತ ಹೇಗಿತ್ತು? ಬ್ರಿಟಿಷರ ಕಾಲದಲ್ಲಿ ಘಟಿಸಿದ ಯಾವ ಘಟನೆಗಳೂ ತನ್ಮೂಲಕ ಬಂದ ಬದಲಾವಣೆಗಳೂ ನಮ್ಮನ್ನು ಎಷ್ಟು ದಿಕ್ಕು ತಪ್ಪಿಸಿತು? – ಈ ಪ್ರಶ್ನೆಯನ್ನು ಧರ್ಮಪಾಲ್ ತಮ್ಮ ಜೀವನದುದ್ದಕ್ಕೂ ಹಲವು ಸ್ತರಗಳಲ್ಲಿ ಶೋಧಿಸಿದ್ದಾರೆ. ಸ್ವಾರಸ್ಯವೆಂದರ ಈ ಶೋಧನೆಗೆ ಅವರು ಆರಿಸಿಕೊಂಡದ್ದು ಬ್ರಿಟಿಷರ ದಾಖಲೆಗಳನ್ನೇ! ಎಡ್ವರ್ಡ್ ಸೈದ್ರಂತಹವರ ನಂತರ ಇದೊಂದು ಮಹತ್ತ್ವ್ವದ ಆಯ್ಕೆ ಎಂಬುದು ನಮಗೆ ಈಗೀಗ ಅರ್ಥವಾಗುತ್ತಿದೆಯಷ್ಟೆ. ಸೈದರಂತೆ ಧರ್ಮಪಾಲ್ ಈ ದಾಖಲೆಗಳ ಶೋಧನೆಯ ಮೂಲಕ ದೊಡ್ದ ಸಿದ್ಧಾಂತವೊಂದನ್ನು ಪ್ರತಿಪಾದಿಸದೇ ಇದ್ದರೂ, ಅಂತಹ ಸಿದ್ಧಾಂತವೊಂದಕ್ಕೆ ಸಾಕಾಗುವಷ್ಟು ಮಾಹಿತಿಯನ್ನಂತೂ ಮುಂದಿಡುತ್ತಾರೆ. ಅಲ್ಲಲ್ಲಿ ಇದಕ್ಕೆ ಪೂರಕವಾದ ಒಳನೋಟಗಳನ್ನೂ ಕಾಣಿಸಿದ್ದಾರೆ.
ಬ್ರಿಟಿಷರ ದಾಖಲೆಗಳಲ್ಲಿ ಭಾರತ
ಬ್ರಿಟಿಷರ ಆಳ್ವಿಕೆಯಲ್ಲಿ ಭಾರತವನ್ನು ಹೇಗೆ ಲೂಟಿ ಮಾಡಲಾಯಿತು ಎಂದು ಭಾರತದ ಸಂಸದರೊಬ್ಬರು ಆಕ್ಸ್ ಫರ್ಡ್ನ ಚರ್ಚೆಯಲ್ಲಿ ಮಾತನಾಡಿದ್ದು ದೊಡ್ಡ ಸುದ್ದಿಯಾಯಿತು. ಆದರೆ ಬ್ರಿಟಿಷರು ಹೀಗೆ ನಾಶಮಾಡುವ ಮೊದಲು ಭಾರತದ ಸ್ವರೂಪವೇನಿತ್ತು? ಅದರ ಸಾಂಸ್ಥಿಕ ಸಂರಚನೆಗಳು ಹೇಗಿದ್ದವು? ಅವುಗಳ ಹಿಂದಿನ ಸಾಂಸ್ಕೃತಿಕ ಮೌಲ್ಯಗಳೇನಿದ್ದವು? – ಎಂಬುದರ ಬಗ್ಗೆ ಜನಸಾಮಾನ್ಯರಿಗೂ ಅಷ್ಟಾಗಿ ಗೊತ್ತಿಲ್ಲ; ವಿದ್ವದ್ವಲಯದಲ್ಲಿಯೂ ಇದರ ಬಗ್ಗೆ ಅಷ್ಟಾಗಿ ಸಂಶೋಧನೆಗಳು ಆಗಿಲ್ಲ. ಧರ್ಮಪಾಲರು ಈ ವಿವರಗಳನ್ನು ಬ್ರಿಟಿಷ್ ಸರ್ಕಾರದ ದಾಖಲೆಗಳ ಮೂಲಕವೇ ಎತ್ತಿತೋರಿಸುವ ಸಾಹಸ ಮಾಡಿದರು. ೧೯೬೬ರಿಂದ ೧೯೮೨ರವರೆಗೆ ಕೌಟುಂಬಿಕ ಕಾರಣಗಳಿಗಾಗಿ ಇಂಗ್ಲೆಂಡಿನಲ್ಲಿ ನೆಲಸಿದ್ದ ಅವರು, ಆ ಸಮಯವನ್ನು ಸದುಪಯೋಗಪಡಿಸಿಕೊಂಡದ್ದು ಬ್ರಿಟಿಷ್ ಸರ್ಕಾರದ ದಾಖಲೆಗಳ ಶೋಧನೆಗೆ. ಅದಾಗಲೇ ತಮಿಳುನಾಡಿನ ಲೇಖ್ಯಾಗಾರ-ಆರ್ಕೈವ್ಗಳಲ್ಲಿ ಇಂತಹ ಹಲವು ದಾಖಲೆಗಳನ್ನು ಅಧ್ಯಯನ ಮಾಡಿದ ತಮ್ಮ ಅನುಭವವನ್ನು ಬಳಸಿಕೊಂಡು ಹಾಗೂ ಹೊಸದಾಗಿ ಲಾಂಗ್ ಹ್ಯಾಂಡ್ ಕಲಿತು ಇಂಡಿಯಾ ಆಫೀಸ್ ಮುಂತಾದ ಸುಮಾರು ೩೫ ಆರ್ಕೈವ್ಗಳಲ್ಲಿ ಸಾವಿರಾರು ದಾಖಲೆಗಳನ್ನು ಶೋಧಿಸಿ ಪ್ರಕಟಿಸಿದರು. ಇವುಗಳಲ್ಲಿ ಕಂಡುಬರುವ ಭಾರತದ ವಿವರಗಳು ಭಾರತೀಯರಿಗೇ ಆಶ್ಚರ್ಯವನ್ನುಂಟು ಮಾಡುವಂತಿವೆ [೨].
ಭಾರತದ ನೈಜತೆ ಮತ್ತು ಬ್ರಿಟಿಷರು ಕಟ್ಟಿದ ಚಿತ್ರಣದ ವಿಸಂಗತತೆ
ಧರ್ಮಪಾಲ್ ಬ್ರಿಟಿಷ್ ದಾಖಲೆಗಳಿಂದ ಕಟ್ಟುವ ಭಾರತದ ಚಿತ್ರಣಕ್ಕೂ ಸ್ವತಃ ಬ್ರಿಟಿಷರೇ ಚಿತ್ರಿಸಲು ಪ್ರಯತ್ನಿಸಿದ ಭಾರತದ ಚಿತ್ರಣಕ್ಕೂ ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ. ಧರ್ಮಪಾಲರೇ ಇದಕ್ಕೆ ಮೂರು ದೊಡ್ಡ ನಿದರ್ಶನಗಳನ್ನು ಒದಗಿಸುತ್ತಾರೆ[೩]: ಮೊದಲನೆಯದು, ೧೮೧೩ರಲ್ಲಿ ಬ್ರಿಟಿಷ್ ಸಂಸತ್ತಿನಲ್ಲಿ ಸರ್ ವಿಲಿಯಂ ವಿಲ್ಬರ್ ಫೋರ್ಸ್ ನಡೆಸಿದ ಭಾರತದ ಕ್ರೈಸ್ತೀಕರಣ ಚರ್ಚೆ; ಎರಡನೆಯದು ಜೇಮ್ಸ್ ಮಿಲ್ ತನ್ನ ‘ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ’ದಲ್ಲಿ ಭಾರತವನ್ನು ಚಿತ್ರಿಸಿದ ರೀತಿ; ಮತ್ತು ಮೂರನೆಯದು ಸರ್ ಥಾಮಸ್ ಬಿ. ಮೆಕಾಲೆ ಭಾರತಕ್ಕೆ ಇಂಗ್ಲಿಷ್ ಶಿಕ್ಷಣವನ್ನು ತರುವುದಕ್ಕಾಗಿ ಮಾಡಿದ ಭಾಷಣಗಳು. ಇವಲ್ಲದೆ ಇಪ್ಪತ್ತನೆಯ ಶತಮಾನದ ಎರಡು, ಮೂರನೇ ದಶಕಗಳಲ್ಲಿ ಭಾರತವನ್ನು ಕುರಿತಂತೆ ಕ್ಯಾಥರೀನ್ ಮೇಯೋ ಬರೆದ ‘ಮದರ್ ಇಂಡಿಯಾ’ ರೀತಿಯ ಹಲವಾರು ಪುಸ್ತಕಗಳು ಭಾರತದ ಚಿತ್ರಣವನ್ನು ತಿರುಚುವ ನೀಚ ಉದ್ದೇಶದಿಂದಲೇ ಪ್ರಕಟವಾದವು. ಗಾಂಧಿಯವರ ಭಾಷೆಯಲ್ಲಿ ಇವು ‘ಕೊಳಚೆ ಪರಿವೀಕ್ಷಕರ ವರದಿ’ಗಳೇ ಆದರೂ ಇವುಗಳು ಒಟ್ಟಾಗಿ ಮಾಡಹೊರಟಿದ್ದ ಕಾರ್ಯವೊಂದಿತ್ತು. ಅದೇನೆಂದರೆ ಯೂರೋಪ್ ಮತ್ತು ಅಮೆರಿಕಗಳಲ್ಲಿ ಭಾರತದ ನೀಚಚಿತ್ರಣವೊಂದನ್ನು ಪ್ರಸಾರಮಾಡುವುದು ಮತ್ತು ತನ್ಮೂಲಕ ಭಾರತದಲ್ಲಿ ಬ್ರಿಟಿಷ್ ಆಧಿಪತ್ಯದ ಅಗತ್ಯವೇನು ಎಂದು ಲೋಕಕ್ಕೆ ಸಾರುವುದು.
ಬ್ರಿಟಿಷ್ ಇಂಡಿಯಾದ ಇತಿಹಾಸವನ್ನು ಬರೆದ ಜೇಮ್ಸ್ ಮಿಲ್, ಭಾರತದಲ್ಲಿ ಆ ಕಾಲಕ್ಕೆ ಇದ್ದ ವೈಜ್ಞಾನಿಕತೆಯನ್ನು ಕಾಗಕ್ಕ-ಗುಬ್ಬಕ್ಕಗಳ ಕಥೆಯೆಂದು ಅಪಹಾಸ್ಯ ಮಾಡುತ್ತಾನೆ. ಇಂದಿಗೂ ನಮ್ಮಲ್ಲಿ ಅಸಂಖ್ಯ ವಿದ್ಯಾವಂತರು ದೇಶೀಯ ವೈದ್ಯಪದ್ಧತಿಗಳನ್ನು ‘ಹೋಕ್ಸ್’ ಎಂದೂ, ಅವನ್ನು ಅನುಸರಿಸುವ ಸುಶಿಕ್ಷಿತ ವೈದ್ಯರನ್ನು ‘ಕ್ವ್ಯಾಕ್ಸ್’ ಎಂದೂ, ಯಾವುದೇ ಅಧ್ಯಯನ ಮತ್ತು ಸಂಶೋಧನೆಗಳಿಲ್ಲದೆ ಪಾಪ್ಯುಲರ್ ಅಭಿಪ್ರಾಯಗಳಿಂದ ಮಾತ್ರವೇ ಕರೆಯುತ್ತಾರೆ ಎಂದರೆ, ಈ ಚಿತ್ರಣಗಳು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿವೆ ಎಂಬುದು ಅರಿವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ೧೭೯೦ರಲ್ಲಿ ಬಂಗಾಲದಲ್ಲಿ ದೇಶೀ ವೈದ್ಯರೊಬ್ಬರು ಕಣ್ಣಿನ ಪೊರೆಯ ಚಿಕಿತ್ಸೆ ಮಾಡಿದ್ದನ್ನು, ಅದರ ಬಗ್ಗೆ ಬ್ರಿಟಿಷ್ ಅಧಿಕಾರಿಗಳು ಸಂಗ್ರಹಿಸಿದ ವರದಿಯನ್ನು ಧರ್ಮಪಾಲ್ ಉಲ್ಲೇಖಿಸುತ್ತಾರೆ. ಇದರೊಂದಿಗೆ ಅದೇ ಕಾಲದಲ್ಲಿ ಮೂಗಿನ ಮತ್ತು ಕೈಕಾಲುಗಳ ಶಸ್ತ್ರಚಿಕಿತ್ಸೆಯೂ ಚಾಲ್ತಿಯಲ್ಲಿದ್ದಿತು. ಈ ಸುದ್ದಿಯು ಬ್ರಿಟನ್ನಿನಲ್ಲಿ ದೊಡ್ಡ ಸಂಚಲನವನ್ನೇ ಉಂಟುಮಾಡಿದ್ದಿತು. ಕಡೆಗೆ ಪೂನಾದ ಒಬ್ಬ ಶಸ್ತ್ರಚಿಕಿತ್ಸಕನ ವಿಸ್ತೃತ ವರದಿಯ ಆಧಾರದ ಮೇಲೆ ೧೮೧೦ರಲ್ಲಿ ಲಂಡನ್ನಿನ ಡಾ. ಕಾರ್ಪ್ ಎಂಬಾತ ಯಶಸ್ವಿಯಾಗಿ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿದುದಾಗಿ ವರದಿಯಿದೆ. ೧೮೧೭ರಲ್ಲಿ ಭಾರತದ ಇತಿಹಾಸ ಬರೆದ ಜೇಮ್ಸ್ ಮಿಲ್ ಇಂತಹ ಸಂಗತಿಗಳನ್ನು ಉಲ್ಲೇಖಿಸದೇ ಸಾರಾಸಗಟಾಗಿ ಒಂದು ದೇಶದ ಬಗ್ಗೆ ತೀರ್ಮಾನಗಳನ್ನು ಹೇಳುವುದನ್ನು ನಾವು ಬರಿಯ ಮಾಹಿತಿಯ ಕೊರತೆಯೆಂದು ಹೇಳಿದರೆ ನಮಗಿಂತ ಮೂರ್ಖರಿಲ್ಲ ಎನ್ನಬೇಕಾಗುತ್ತದೆ.
ಬ್ರಿಟಿಷ್ ಸಂಸತ್ತಿನಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸಿದ ವಿಚಿತ್ರ ಸಂಗತಿಗಳೆಂದರೆ: ಒಂದು ಪ್ರತಿವರ್ಷ ಭಾರತದಲ್ಲಿ ಸಾವಿರಾರು ಸ್ತ್ರೀಯರನ್ನು ‘ಸತಿ’ಯ ಹೆಸರಿನಲ್ಲಿ ಸುಡಲಾಗುತ್ತಿದೆ ಎಂಬುದು; ಇನ್ನೊಂದು ಪ್ರತಿವರ್ಷವೂ ಪುರಿ ಜಗನ್ನಾಥ ರಥೋತ್ಸವದಲ್ಲಿ ನೂರಾರು ಮಂದಿ ರಥದ ಕೆಳಗೆ ಇಚ್ಛಾಪೂರ್ವಕವಾಗಿ ಸಿಕ್ಕಿ ಸಾಯುತ್ತಾರೆ ಎಂಬುದು. ಸತಿಯ ಬಗ್ಗೆ ನಾವು ತೀರಾ ಇತ್ತೀಚಿನ ಅಕಾಡೆಮಿಕ್ ವಿದ್ವಾಂಸರನ್ನು ಕೇಳಿದರೂ ಹೀಗೆಯೆ ಹೇಳಿಯಾರು. ವಿಲ್ಬರ್ ಫೋರ್ಸ್ ತನ್ನ ಸಂಸತ್ತಿನ ಭಾಷಣದಲ್ಲಿ ಇವಕ್ಕೆ ಅಂಕಿಅಂಶಗಳನ್ನೂ ಆರೋಪಿಸಿದ್ದ. ಅವರ ಪ್ರಕಾರ ಪ್ರತಿವರ್ಷ ಸತಿಯಿಂದ ಸಾಯುವ ಹೆಂಗಸರ ಸಂಖ್ಯೆ ಬರಿಯ ಬಂಗಾಲದಲ್ಲಿಯೇ ೧೦,೦೦೦; ಮತ್ತು ಪುರಿಯ ರಥೋತ್ಸವದಲ್ಲಿ ವರ್ಷಕ್ಕೆ ಒಂದು ಲಕ್ಷ ಮಂದಿ ಸಾಯುತ್ತಾರೆ[೪]. ವಿಚಿತ್ರವೆಂದರೆ ಈ ಭಾಷಣದ ನಂತರ ಬ್ರಿಟಿಷ್ ಸರ್ಕಾರವು ಭಾರತದಿಂದ ತರಿಸಿಕೊಂಡ ವರದಿಗಳು ಇವೆರಡನ್ನೂ ಅಲ್ಲಗಳೆಯುತ್ತವೆ. ಸಂಪೂರ್ಣ ಭಾರತದಲ್ಲಿ ನಡೆಯುತ್ತಿದ್ದ ಸತಿಗಳ ಸಂಖ್ಯೆಯು ೫೦೦ರಿಂದ ೮೦೦ ಎಂಬ ಲೆಕ್ಕ ಸಿಕ್ಕರೆ, ಪುರಿಯ ಪ್ರಾಂತದಲ್ಲಿ ಹತ್ತು ವರ್ಷಗಳಿಂದ ಕೆಲಸಮಾಡುತ್ತಿದ್ದ ಅಧಿಕಾರಿಗಳು ತಾವು ಜಾತ್ರೆಯಲ್ಲಿ ಹಾಗೆ ಯಾರೂ ಸತ್ತಿದ್ದನ್ನು ಹತ್ತು ವರ್ಷಗಳಲ್ಲಿ ಕೇಳಿಯೂ ಇಲ್ಲ ಎಂದು ವರದಿ ನೀಡಿದರು. [೫]
ಇಲ್ಲಿನ ಅಭಿಪ್ರಾಯವು ೫೦೦ ಸತಿಗಳಾದರೆ ನಮಗೆ ಒಪ್ಪಿಗೆ ಎಂದಲ್ಲ, ಅಸ್ತಿತ್ವದಲ್ಲಿಯೇ ಇಲ್ಲದ ಹಲವು ಸಂಗತಿಗಳು ಹೇಗೆ ಬ್ರಿಟನ್ನಿಗೆ ‘ಸತ್ಯಗಳಾಗಿ’ ರವಾನೆಯಾಗುತ್ತಿದ್ದವು! ಅವನ್ನು ಹೇಗೆ ಅದೇ ವಲಯದಲ್ಲಿ ಪುನರುತ್ಪಾದನೆ ಮಾಡಲಾಗುತ್ತಿತ್ತು! ಕ್ರಮೇಣ ಈ ಸಂಗತಿಗಳು ಹೇಗೆ ಪ್ರಶ್ನಾತೀತವಾಗಿ ನಿಲ್ಲುತ್ತಿದ್ದವು – ಎಂಬುದನ್ನು. “ತಮ್ಮ ಕ್ರೌರ್ಯ, ಹಿಂಸೆ ಮತ್ತು ತಂತ್ರಗಾರಿಕೆಗಳನ್ನು ಸ್ಥಾಪಿಸಲು ಬ್ರಿಟಿಷರು ಭಾರತದಲ್ಲಿ ನೆನಪಿನ ಹಿಂದೆ ಸರಿದುಹೋಗಿದ್ದ ಯಾವಯಾವುದೋ ಕೃತಿಗಳನ್ನು (ತ್ಯಾಮರ್ಲೇನ್, ಅಲ್ಲಾವುದ್ದಿನ್ ಖಿಲ್ಜಿ ಮತ್ತು ಗ್ರೀಕರು ಭಾರತದ ಬಗ್ಗೆ ಬರೆದಂಥವು) ಮತ್ತೆ ವ್ಯಾಸಂಗ ಮಾಡತೊಡಗಿದರು. ತನ್ಮೂಲಕ ಭಾರತವು ಅಜ್ಞಾನ, ಮೋಸ, ಅನಾಗರಿಕತೆಗಳ ಕಗ್ಗತ್ತಲಿನಲ್ಲಿ ಮುಳುಗಿರುವ ದೇಶ ಎಂಬ ಚಿತ್ರಣವನ್ನು ಮತ್ತೆ ಮತ್ತೆ ಉತ್ಪಾದಿಸತೊಡಗಿದರು. ಈ ಶಾಸ್ತ್ರವೇ ಮುಂದೆ ‘ಇಂಡಾಲಜಿ’ಯಾಗಿ ಬೆಳೆದದ್ದು.” [೬]
ಒಟ್ಟಾರೆ ಭಾರತದ ಕುರಿತು ೧೯ನೇ ಶತಮಾನದ ನಂತರ ಬ್ರಿಟಿಷ್ ಆಧಿಪತ್ಯದಲ್ಲಿ ಯೂರೋಪಿಯನ್ನರು ಕೆಲವು ನಿರ್ದಿಷ್ಟ ನಿರೂಪಣೆಗಳನ್ನು ಕಟ್ಟತೊಡಗಿದರು. ಈ ನಿರ್ದಿಷ್ಟ ನಿರೂಪಣೆಗಳು ಪಿತೂರಿ ಇರಬಹುದು ಅಥವಾ ಇಲ್ಲದಿರಬಹುದು ಎನ್ನುವುದು ಬೇರೆಯೇ ಚರ್ಚೆಯಾದರೂ, ಈ ನಿರೂಪಣೆಗಳು ಭಾರತದ ಕುರಿತು ಅತ್ಯಂತ ಕೆಟ್ಟ ಅಭಿಪ್ರಾಯವನ್ನು ನಿರೂಪಿಸುವುದಲ್ಲದೆ, ಭಾರತೀಯರು ಹೇಗೆ ಅತ್ಯಂತ ಅನೈತಿಕವಾದ ದರಿದ್ರ ಸಮಾಜ ಎನ್ನುವ ಕಥೆಯೊಂದನ್ನು ಸ್ಪಷ್ಟವಾಗಿ ಕಡೆದು ನಿಲ್ಲಿಸುತ್ತವೆ. ಈ ನಿರೂಪಣೆಯಲ್ಲಿ ಯೂರೋಪಿಯನ್ನರ ಶತಮಾನಗಳ ಪ್ರಯತ್ನಗಳಿವೆ ಮತ್ತು ಭಾರತದ ಕುರಿತು ಈ ವಿಕೃತ ನಿರೂಪಣೆಗಳನ್ನು ಕಟ್ಟುವಲ್ಲಿ ಸಾವಿರಾರು ಜನರು ಅಹೋರಾತ್ರಿ ಕೆಲಸ ಮಾಡಿದ್ದಾರೆ.
ಈ ಒಟ್ಟು ನಿರೂಪಣೆಗಳ ಸ್ವರೂಪವನ್ನು ಗ್ರಹಿಸಲು ಧರ್ಮಪಾಲರು ಈ ಹಿಂದೆ ಪ್ರಸ್ಥಾವಿಸಿದ ಮೂರು ಬ್ರಿಟಿಷ್ ಚಿಂತಕರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಮೂವರ ಹಿನ್ನೆಲೆಗಳು ಮತ್ತು ಉದ್ದಿಷ್ಟಗಳು ಏನೇ ಇದ್ದರೂ ಅವರ ಚಿಂತನೆಯ ಸ್ವರೂಪವನ್ನು ಗಮನಿಸಿದರೆ ಒಟ್ಟು ಬ್ರಿಟಿಷ್ ಮತ್ತು ಪಶ್ಚಿಮದ ಜಗತ್ತು ಭಾರತದ ವಿರುದ್ಧವಾಗಿ ನೈತಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಹೇಗೆ ವ್ಯವಸ್ಥಿತವಾಗಿ ಒಂದು campaign of defamation (ಅವಹೇಳನ ಪ್ರಚಾರ) ನಡೆಸಿತು ಎಂಬುದನ್ನು ತೋರಿಸಿಕೊಡುತ್ತದೆ.
ಮತ್ತೊಮ್ಮೆ ಈಗಾಗಲೇ ಪ್ರಸ್ತಾವಿಸಿರುವ ಜೇಮ್ಸ್ ಮಿಲ್ನ ವಿಚಾರಗಳಿಗೆ ಹಿಂದಿರುಗೋಣ. ಜೇಮ್ಸ್ ಮಿಲ್ ತನ್ನ General reflection of Hindus ಎಂಬ ಪಠ್ಯದಲ್ಲಿ ಹೇಳಿಕೊಳ್ಳುವಂತೆ ಮಧ್ಯಕಾಲೀನ ಫ್ಯೂಡಲ್ ಜಗತ್ತಿನ ಯೂರೋಪಿಯನ್ನರು ಮತ್ತು ಭಾರತವನ್ನು ತುಲನೆ ಮಾಡಲು ಸಾಧ್ಯವೆ? – ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತ ಘೋತಿಕ್ ಪೂರ್ವಜರಿಂದ ಬಂದಿರುವ ನಾವು ಯೂರೋಪಿಯನ್ನರು ಅತ್ಯಂತ ಗುಲಾಮೀ ಸ್ವಭಾವದವರೂ ಅನೈತಿಕರೂ ಆದ ಹಿಂದುಗಳಿಗಿಂತ ಬಹಳ ಉತ್ಕೃಷ್ಟವಾದ ಜನಾಂಗವೊಂದರ ಭಾಗ ಎಂದು ವ್ಯಾಖ್ಯೆಮಾಡುತ್ತಾನೆ. ಮಿಲ್ನ ಪ್ರಕಾರ ಯೂರೋಪಿಯನ್ನರು ಉತ್ಕೃಷ್ಟರು ಮತ್ತು ಹಿಂದುಗಳು ಭ್ರಷ್ಟರು ಹಾಗೂ ನಿಕೃಷ್ಟರು ಎನ್ನುವ ಮಾತನ್ನು ಯಾವುದೇ ಹಿಂಜರಿಕೆಯಿಲ್ಲದೇ ಆತ ಹೇಳುತ್ತಾನೆ. ಹೀಗೆ ಮುಂದುವರಿದು ವಿಲ್ಬರ್ಫೋರ್ಸ್ ಭಾರತೀಯರ ಕುರಿತು ಏನ್ನನ್ನು ಹೇಳುತ್ತಾನೆ ಎಂಬುದನ್ನು ಗಮನಿಸಿದರೆ ಈ ಇಬ್ಬರ ಚಿಂತನೆಯ ಸಾಮ್ಯತೆ ನಮಗೆ ಅರ್ಥವಾಗುತ್ತದೆ.
ಕ್ರಿಶ್ಚಿಯಾನಿಟಿಯ ಬೆಳಕನ್ನು ಜಗತ್ತಿನಲ್ಲಿ ನೈತಿಕವಾಗಿಯೂ ಅತ್ಯಂತ ಕತ್ತಲೆಯಲ್ಲಿರುವ ಹಾಗೂ ಬರ್ಬರ ಕ್ರೌರ್ಯಗಳನ್ನು ಒಳಗೊಂಡಿರುವ ಮತ್ತು ಸಾಂಪ್ರದಾಯಿಕವಾಗಿ ಆಕ್ರಮಕವಾಗಿರುವ, ಚಾರಿತ್ರಿಕವಾಗಿ ಅತ್ಯಂತ ವಿಕೃತ ರಾಜಕೀಯ ಚರಿತ್ರೆಯನ್ನು ಹೊಂದಿರುವ ಯಾವುದಾದರೂ ರಾಷ್ಟ್ರದ ಕಡೆ ನೋಡಬೇಕೆಂದರೆ ಅದು ಭಾರತ – ಎಂದು ವಿಲ್ಬರ್ಫೋರ್ಸ್ ಬೊಟ್ಟುಮಾಡಿ ಹೇಳುತ್ತಾನೆ.
ಹಾಗೆಯೇ ವಿಲ್ಬರ್ಫೋರ್ಸ್ ಮತ್ತು ಜೇಮ್ಸ್ ಮಿಲ್ರನ್ನು ಬಿಟ್ಟು ಅದೇ ಕಾಲಘಟ್ಟದಲ್ಲಿದ್ದ ಇನ್ನೊಬ್ಬ ಪ್ರಮುಖ ಚಿಂತಕನಾದ ಮೆಕಾಲೆ ಭಾರತದ ಕುರಿತು ಏನನ್ನು ಮಾತನಾಡಿದ್ದಾನೆ ಎಂಬುದನ್ನು ಗಮನಿಸೋಣ. ಮೆಕಾಲೆಯ ಪ್ರಕಾರ ಬ್ರಿಟಿಷರಿಗೆ ಅವರಲ್ಲಿರುವ ಸಂಪನ್ಮೂಲಗಳ ಇತಿಮಿತಿಯಲ್ಲಿ ಸಂಪೂರ್ಣ ಭಾರತೀಯರನ್ನು ಶಿಕ್ಷಿತರನ್ನಾಗಿ ಮಾಡುವುದು ಕಷ್ಟಸಾಧ್ಯವಾಗಿತ್ತು. ಇಲ್ಲಿ ಅವನ ದೃಷ್ಟಿಯಲ್ಲಿ ಶಿಕ್ಷಣವೆಂದರೆ ಭಾರತೀಯರಲ್ಲಿದ್ದ Moral and Spiritual Spirit (ನೈತಿಕತೆ ಮತ್ತು ಆಧ್ಯಾತ್ಮಿಕತೆ) – ಇವನ್ನು ತೊಡೆದುಹಾಕುವುದಾಗಿತ್ತು. ಆ ಕಾರಣಕ್ಕಾಗಿಯೇ ತಾವು ಭಾರತೀಯರ ಉನ್ನತೀಕರಣಕ್ಕಾಗಿ ಏನನ್ನು ಮಾಡಬಹುದು ಎಂಬುದು ಅವನ ಪ್ರಶ್ನೆಯಾಗಿತ್ತು. ಅದಕ್ಕಾಗಿ ಬ್ರಿಟಿಷರು ಭಾರತದಲ್ಲಿ ಒಂದು ಶಿಕ್ಷಿತವರ್ಗವನ್ನು ರಚಿಸಬೇಕು ಮತ್ತು ಆ ಶಿಕ್ಷಿತ ವರ್ಗವು ಯೂರೋಪಿಯನ್ ದೊರೆಗಳು ಮತ್ತು ಆಳುವವರು ಹಾಗೂ ಭಾರತೀಯ ಪ್ರಜೆಗಳ ನಡುವೆ ಸಂವಹನಕಾರರಾಗಬೇಕು. ಈ ಸಂವಹನಕಾರ ವರ್ಗವು ರಕ್ತ ಮತ್ತು ಬಣ್ಣದಿಂದ ಭಾರತೀಯರಾಗಿದ್ದರೂ ನೈತಿಕತೆ, ಬೌದ್ಧಿಕತೆ ಹಾಗೂ ಅಭಿರುಚಿಯಿಂದ ಅವರು ಆಂಗ್ಲರಾಗಿರಬೇಕು. ಅಂದರೆ ನೈತಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಅತ್ಯಂತ ನಿಕೃಷ್ಟ ಪರಿಸ್ಥಿತಿಯಲ್ಲಿರುವ ಸಮಾಜವೊಂದನ್ನು ಮೇಲೆತ್ತುವುದು ಬ್ರಿಟಿಷರಿಗೆ ಕಷ್ಟಸಾಧ್ಯವಾದರೂ ಆ ರೀತಿಯ ಉನ್ನತ ನೈತಿಕ ಅಭಿರುಚಿಯುಳ್ಳ ವರ್ಗವೊಂದನ್ನು ಭಾರತದಲ್ಲಿ ಹುಟ್ಟುಹಾಕುವುದು ಮೆಕಾಲೆಯ ಉದ್ದೇಶವಾಗಿತ್ತು.
ಈ ಮೂವರು ಚಿಂತಕರ ಹಿನ್ನೆಲೆಗಳೇನೇ ಇರಲಿ ಅಥವಾ ಅವರು ಮಾಡುತ್ತಿದ್ದ ಕೆಲಸದ ಗುರಿ ಉದ್ದೇಶಗಳೇನೇ ಇರಲಿ, ಇವರೆಲ್ಲರೂ ಭಾರತದ ಕುರಿತು ಕೆಲವು ಸಾಮಾನ್ಯ ಅಭಿಪ್ರಾಯಗಳನ್ನು ನಿರೂಪಿಸುತ್ತಿದ್ದರು. ಇವರ ಪ್ರಕಾರ ಭಾರತವೆಂಬುದು ಅತ್ಯಂತ ಬರ್ಬರವಾದ ಕ್ರೌರ್ಯ, ಹಿಂಸೆಗಳನ್ನೊಳಗೊಂಡು ಬೌದ್ಧಿಕವಾಗಿ ನಿಕೃಷ್ಟವಾದ ಮತ್ತು ನೈತಿಕವಾಗಿ ಅಧಃಪತನಗೊಂಡ ಸಮಾಜವಾಗಿತ್ತು. ಹಾಗೂ ಇದನ್ನು ಮೇಲೆತ್ತಲು ಕ್ರಿಶ್ಚಿಯನ್ ಅಥವಾ ಪಶ್ಚಿಮದ ಆಧುನಿಕತೆಯಿಂದ ಮಾತ್ರ ಸಾಧ್ಯ ಎನ್ನುವುದಾಗಿತ್ತು.
ಧರ್ಮಪಾಲರು ಬಹಳ ಸ್ಪಷ್ಟವಾಗಿ ಗುರುತಿಸುವಂತೆ ಈ ಮೂವರು ಚಿಂತಕರು ಭಾರತದ ಬಗೆಗೆ ಮಾಡಿದ ನಿರೂಪಣೆಗಳು ಕೇವಲ ಕೆಲವು ನಿರೂಪಣೆಗಳಾಗಷ್ಟೆ ಉಳಿಯಲಿಲ್ಲ. ಇಂದಿನ ಶಿಕ್ಷಿತ ಭಾರತೀಯ ಸಮಾಜ ಈ ನಿರೂಪಣೆಗಳನ್ನು ವೈಜ್ಞಾನಿಕ ಸತ್ಯವೆಂದು ನಂಬಿದೆ. ಭಾರತೀಯ ರಾಜಕೀಯ ಮತ್ತು ಕಾನೂನು ವ್ಯವಸ್ಥೆಗಳ ತಳಹದಿಯಲ್ಲಿ ಭಾರತೀಯರ ಕುರಿತಾದ ಈ ಚಿತ್ರಣಗಳು ಗಟ್ಟಿಯಾಗಿ ನೆಲೆಗೊಂಡಿವೆ. ಭಾರತದ ಇತ್ತೀಚಿನ ಸಮಾಜ ಸುಧಾರಣೆಯ ಪರಿಭಾಷೆಗಳು, ರಾಜಕೀಯ ಚಿಂತನೆಗಳು ಮತ್ತು ಕಾನೂನುಗಳು ಭಾರತೀಯರ ಕ್ರೌರ್ಯ, ಹಿಂಸೆ, ಅನೈತಿಕ ಜೀವನವನ್ನು ಸರಿಪಡಿಸುವಲ್ಲಿ ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿವೆ. ಆದರೆ ಯಾವುದು ಬ್ರಿಟಿಷರು ಭಾರತದ ಕುರಿತು ಕಟ್ಟಿದ ಕಥಾನಕವಾಗಿತ್ತೋ ಅದನ್ನು ಎರಡು ಶತಮಾನಗಳ ಕಾಲಘಟ್ಟದಲ್ಲಿ ಭಾರತದ ಕುರಿತಾದ ‘ವೈಜ್ಞಾನಿಕ ಸತ್ಯ’ವನ್ನಾಗಿಸಿ, ನಮ್ಮ ಜನರ ಮೇಲೆ ನಾವೇ ಬೌದ್ಧಿಕ ಹಿಂಸೆಯನ್ನು ಹೇರತೊಡಗಿದ್ದೇವೆ.
ಎಡ್ವರ್ಡ್ ಸೈದ್ ಗುರುತಿಸುವ ‘ಓರಿಯಂಟಲಿಸಂ’[೭] ಪ್ರಕ್ರಿಯೆಯು ಇಲ್ಲಿ ತನ್ನ ವಿಶ್ವರೂಪವನ್ನು ತೋರಿಸಿದೆ. ‘ಈ ಬಗೆಯ’ ಅಧ್ಯಯನಗಳು ಏನು ಮಾಡುತ್ತಿರುತ್ತವೆ ಎಂಬುದನ್ನು ಸೈದ್ ಸಾಧಾರವಾಗಿ ತೋರಿಸುತ್ತಾರೋ ಆ ಪ್ರಕ್ರಿಯೆಗಳು ಧರ್ಮಪಾಲರ ದಾಖಲೆಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಮೂಡಿಬರುತ್ತವೆ. ಇವುಗಳು ಸಾಂಸ್ಕೃತಿಕ ಭಿನ್ನತೆಗಳನ್ನು ತಪ್ಪಾಗಿಯಷ್ಟೇ ಅಲ್ಲದೆ ಪೂರ್ವಾಗ್ರಹಗಳಿಂದ ಗ್ರಹಿಸುತ್ತವೆ. ಬಹುತೇಕ ಈ ಪೂರ್ವಾಗ್ರಹಗಳು ಯೂರೋಪಿಯನ್ ಅಹಂಕಾರದ ಮಾರ್ದನಿಗಳಾಗಿರುತ್ತವೆ. ಇವನ್ನು ಅಧ್ಯಯನ ಮಾಡುವವರೂ ಯೂರೋಪಿಯನ್ನರೇ ಮತ್ತು ಅಧ್ಯಯನ ಮಾಡುವ ಶಾಸ್ತ್ರವನ್ನು ರೂಪಿಸಿದ್ದೂ ಅವರೇ! ಹೀಗಾಗಿ ಅವರದೇ ಕ್ರಮಗಳ ಮೂಲಕ ಇವನ್ನು ‘ವಾಸ್ತವ’ಗಳೆಂದು ಸ್ಥಾಪಿಸಲಾಗುತ್ತದೆ. ಮುಂದೆ ಅದೇ ಶಾಸ್ತ್ರಗಳಲ್ಲಿ ವ್ಯಾಸಂಗ ಮಾಡುವವರು ಇವನ್ನು ಆ ಶಾಸ್ತ್ರದ ಪರಿಕಲ್ಪನಾತ್ಮಕ ಅಂಶಗಳಂತೆ ಪುನರುತ್ಪಾದಿಸುತ್ತಾ ಸಾಗುತ್ತಾರೆ. ಕ್ರಮೇಣ ಇವು ಒಬ್ಬರಿಗೊಬ್ಬರು ಪ್ರತಿಧ್ವನಿಸುತ್ತಾ ಪ್ರಶ್ನಾತೀತವಾಗಿಬಿಡುತ್ತವೆ. ಯಾಕೆ ಅಷ್ಟೊಂದು ಜನ ಭಾರತೀಯ ವಿದ್ವಾಂಸರೂ ಕೂಡ ಈ ಬಗೆಯ ವಿಚಾರಗಳನ್ನು ಕೇಳಿದ ಕೂಡಲೇ ಇದು ‘ಬ್ಲಾಸ್ಫೆಮಿ’ ಎಂಬಂತೆ ಹೌಹಾರುತ್ತಾರೆ ಎಂದರೆ, ಇದೇ ಕಾರಣದಿಂದ.
ಎಸ್.ಎನ್. ಬಾಲಗಂಗಾಧರ ಅವರು ಇನ್ನೂ ವಿಶಾಲವಾದ ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ‘ಸಾಂಸ್ಕೃತಿಕ ಭಿನ್ನತೆ’ಗಳ ಸಮಸ್ಯೆಯಾಗಿ ಪರಿಶೀಲಿಸಿದ್ದಾರೆ. ಅಲ್ಲದೆ ಈ ರೀತಿ ವಸಾಹತುಪ್ರಭುಗಳ ನಿರೂಪಣೆಗಳನ್ನು ನಮ್ಮ ವಾಸ್ತವವನ್ನಾಗಿ ಮಾಡಿಕೊಂಡುಬಿಡುವ ಕ್ರಿಯೆಯನ್ನು ಅವರು ವಸಾಹತುಪ್ರಜ್ಞೆ ಎಂದು ಕರೆಯುತ್ತಾರೆ. ಅಂದರೆ ಭಿನ್ನ ಸಂಸ್ಕೃತಿಯ ಜನರು ತಮ್ಮದಲ್ಲದ ಸಂಸ್ಕೃತಿಯನ್ನು ನೀಡುತ್ತಿರುವುದರಿಂದ, ಈ ಸಂಸ್ಕೃತಿ ಮತ್ತು ಸಮಾಜದ ಅಧ್ಯಯನಗಳು ವೈಜ್ಷಾನಿಕವಾಗಿಲ್ಲದಿರುವುದರಿಂದ ಈ ಸಮಸ್ಯೆಗಳು ಉಂಟಾಗುತ್ತಿವೆ. ಅಷ್ಟೇ ಅಲ್ಲ, ಭಾರತೀಯರ ಅಧ್ಯಯನಗಳಲ್ಲಿಯೂ ಈ ಸಮಸ್ಯೆಯು ಇರುವುದಕ್ಕೆ ವಸಾಹತುಪ್ರಜ್ಞೆಯೇ ಕಾರಣ – ಎಂದು ಅವರು ವಿವರಿಸುತ್ತಾರೆ. ಅಷ್ಟೇ ಅಲ್ಲ ಈ ಸಮಸ್ಯೆಯ ಮೂಲವಿರುವುದು ಐರೋಪ್ಯ ಸಂಸ್ಕöÈತಿಯು ರೂಪಿಸಿದ ಸಮಾಜವಿಜ್ಞಾನ ಮತ್ತಿತರ ಶಾಸ್ತ್ರಗಳ ಚೌಕಟ್ಟಿನಲ್ಲಿ, ಮತ್ತು ಆ ಶಾಸ್ತ್ರಗಳ ಚೌಕಟ್ಟುಗಳೇ ಇಂತಹ ಪೂರ್ವಾಗ್ರಹಗಳನ್ನು ಪುನರುತ್ಪಾದಿಸುತ್ತವೆ. [೮]
ಮುಂದೇನು?
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಮತ್ತು ಬಹುತೇಕ ಇಂಗ್ಲಿಷ್ ಶಿಕ್ಷಣ ಪದ್ಧತಿಯ ಉತ್ಪಾದನೆಗಳಾದ ನಮಗೆ ಈ ಇಡೀ ಸಂಶೋಧನೆಯ ಮೌಲ್ಯವೇನು ಎನ್ನುವ ಪ್ರಶ್ನೆ ಏಳಬಹುದು. ಬ್ರಿಟಿಷರು ನಮ್ಮನ್ನು ಆಳುವುದಕ್ಕೋಸ್ಕರ ಮೇಲೆ ಹೇಳಿದ ಎಲ್ಲ ಹುನ್ನಾರಗಳನ್ನೂ ಮಾಡಿದ್ದಾರೆ ಎಂದು ಒಪ್ಪೋಣ; ಆದರೆ ಅವರು ಭಾರತ ಬಿಟ್ಟು ಹೋಗಿ ೭೫ ವರ್ಷಗಳಾಗಿವೆ ಮತ್ತು ಆಗಿನಿಂದ ಭಾರತವು ಸ್ವತಂತ್ರವಾಗಿದೆ. ಇನ್ನೂ ‘ಅವರು ನಮ್ಮ ಕಲೆಗಳನ್ನು ನಾಶಮಾಡಿದರು, ತಂತ್ರಜ್ಞಾನ ನಾಶಮಾಡಿದರು’ ಎಂದೆಲ್ಲಾ ಗೋಳಿಡುವುದು ನಮ್ಮ ದೌರ್ಬಲ್ಯವಲ್ಲವೇ ಎನಿಸಲೂಬಹುದು. ನಮ್ಮಲ್ಲಿ ಹಲವು ವಿದ್ಯಾವಂತರು ಎನಿಸಿಕೊಂಡವರು ಹೀಗೆ ಪ್ರಶ್ನೆ ಮಾಡಿದ್ದಾರೆ ಕೂಡ. ಆಶ್ಚರ್ಯವೆಂದರೆ ಇದೇ ವಿದ್ಯಾವಂತರು ಇಂದಿಗೂ ತಾವು ವಿವರಿಸಲಾಗದಿರುವ ಜಾತಿಪದ್ಧತಿಯ ಮಾತು ಬಂದಕೂಡಲೇ ‘ಸಾವಿರಾರು ವರ್ಷಗಳ ಶೋಷಣೆ…’ ಎಂಬ ಅದೇ ಮಾತನ್ನು ಉದ್ಘೋಷಿಸುತ್ತಿರುತ್ತಾರೆ! ಇರಲಿ, ತಮಾಷೆಯನ್ನು ಪಕ್ಕಕ್ಕಿಟ್ಟು ಈ ಪ್ರಶ್ನೆಯನ್ನು ಸ್ವಲ್ಪ ಗಂಭೀರವಾಗಿ ನೋಡುವ ಪ್ರಯತ್ನ ಮಾಡೋಣ.
ಒಂದು ವ್ಯವಸ್ಥೆಯ ಜೀವವಿರುವುದು ಅದರಲ್ಲಿನ ಹಲವು ಘಟಕಗಳ ಹೊಂದಾಣಿಕೆಯಲ್ಲಿ ಮಾತ್ರವಲ್ಲ, ಆ ವ್ಯವಸ್ಥೆಯೇ ಒಂದು ‘ಪ್ರಕ್ರಿಯೆ’ಯಾಗಿ, ‘ಸಂಸ್ಕೃತಿ’ಯಾಗಿ ಕೆಲಸಮಾಡುವ ಘಟಕಗಳ ಹಿಂದಿನ ಮೌಲ್ಯಗಳಲ್ಲಿ. ಈ ಮೌಲ್ಯವು ಜೀವಂತವಿದ್ದಾಗ ಮಾತ್ರವೇ ಒಂದು ಕ್ರಿಯೆಯು ಒಂದು ಸಂಸ್ಕೃತಿಯಾಗಿ, ಕಲೆಯಾಗಿ ಅರಳುವುದು. ‘ಈ ದೃಷ್ಟಿಯಲ್ಲಿ ‘ಕಲೆ’ ಎಂಬುದರಲ್ಲಿ (ಒಂದು ಸಮುದಾಯದ) ಚಿಂತನಶೀಲತೆಯಲ್ಲಿ ಅರಳಿದ ಸಂಪೂರ್ಣ ಕ್ರಿಯಾಶೀಲ ಬದುಕೇ ಒಳಗೊಳ್ಳುತ್ತದೆ. ಜನರ ಕಲೆಯನ್ನು ನಾಶಮಾಡುವುದೆಂದರೆ ಅವರ ಜೀವನವನ್ನೇ ನಾಶಮಾಡಿದಂತೆ; ತನ್ಮೂಲಕ ಅವರು ಲಾಭಕೋರರ ಕೈಯಲ್ಲಿನ ಕಾರ್ಮಿಕರಾಗಿ ಮಾತ್ರ ಉಳಿಯುತ್ತಾರೆ’[೯] ಎಂಬುದು ಆನಂದ ಕುಮಾರಸ್ವಾಮಿಯವರ ಎಚ್ಚರಿಕೆ. ನಾವು ಸ್ವತಂತ್ರರೇನೋ ಆದೆವು, ಆದರೆ ನಮ್ಮ ವಿಚಾರಗಳು, ಪ್ರಜ್ಞೆ ಯಾವುದೂ ಈ ವಸಾಹತುಶಾಹಿಯ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಇದಕ್ಕೆ ಇನ್ನೂ ದೊಡ್ಡ ಪೆಟ್ಟು ಕೊಟ್ಟದ್ದು ನಾವು ಸ್ವತಂತ್ರ ಭಾರತದಲ್ಲಿ ಅಪ್ಪಿಕೊಂಡ ಆಧುನಿಕವಾದಿ ಸಾಮಾಜಿಕ ನಿಲವುಗಳು ಮತ್ತು ರಾಜಕೀಯಪ್ರೇರಿತ ಹಿತಾಸಕ್ತಿಗಳು. ಇವುಗಳಿಂದ ಬಿಡಿಸಿಕೊಂಡು ಭಾರತವನ್ನು ಪ್ರಾಮಾಣಿಕವಾಗಿ ಅಧ್ಯಯನಮಾಡುವ ವಿಧಾನವೂ, ವಿದ್ವಾಂಸರೂ ಇನ್ನೂ ಬರಬೇಕಿದೆಯಷ್ಟೆ. ಈ ನಿಟ್ಟಿನಲ್ಲಿ ಧರ್ಮಪಾಲರ ಸಂಶೋಧನೆಗಳು ಇಂದಿಗೂ ಮೈಲಿಗಲ್ಲಾಗಿ ನಿಂತಿವೆ.
ಉಲ್ಲೇಖಗಳು
(೧) Essays in National Idealism, Ananda Coomaraswamy. 2013. (Munshi Ram Manohar Lal, Delhi)
(೨) Despoliation and Defaming of India, Dharampal. 1999. (Bharat Peetham, Wardha).
(೩) Despoliation and Defaming of India, Dharampal. 1999. (Bharat Peetham, Wardha).
(೪) Despoliation and Defaming of India, Dharampal. 1999. (Bharat Peetham, Wardha). Pg. 51.
(೫) Despoliation and Defaming of India, Dharampal. 1999. (Bharat Peetham, Wardha). Pg. 51.
(೬) Despoliation and Defaming of India, Dharampal. 1999. (Bharat Peetham, Wardha). Pg. 51.Pg.17.
(೭) Orientalism, Edward Said. 2001. (Penguin Books).
(೮) ಪೂರ್ವಾವಲೋಕನ, ಎಸ್.ಎನ್.ಬಾಲಗಂಗಾಧರ. ೨೦೧೦. (ಅಭಿನವ ಪ್ರಕಾಶನ, ಬೆಂಗಳೂರು)
(೯) Am I My Brother’s Keeper? Ananda K Coomaraswamy. 1943. (For further reading: The Bugbear of Literacy by AKC and Industrial Arts of India by George Birdwood).