ಧರ್ಮಪಾಲರು ವ್ಯಕ್ತಪಡಿಸಿರುವ ಅಭಿಪ್ರಾಯಗಳು, ಬರಹಗಳೆಲ್ಲವೂ ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಬೇಕೆಂಬ ನ್ಯಾಯಾಲಯ ತೀರ್ಪು ನೀಡುವ ಮುಂಚಿನದು ಎಂಬುದನ್ನು ಗಮನಿಸಬೇಕು. ಧರ್ಮಪಾಲರು ೨೦೦೬ರಲ್ಲಿಯೇ ದೈವಾಧೀನರಾದರು. ಆದರೂ ಈ ಸಮಯ ಮಿತಿಯೇನೂ ಅವರ ವೈಚಾರಿಕಧಾರೆಯ ಮಹತ್ತ್ವವನ್ನು ಕಡಮೆಗೊಳಿಸುವುದಿಲ್ಲ. ಬದಲಾಗಿ ಅದಕ್ಕೆ ಇನ್ನಷ್ಟು ಖಚಿತತೆಯನ್ನು ನೀಡಿದೆ. ಅವರು ಆ ಕಾಲದ ಮೇಲ್ಮೇಲಿನ ವಿಷಯಗಳನ್ನಷ್ಟೇ ನೋಡದೆ ಯಾವುದೇ ವಿಷಯದ ಆಳಕ್ಕೆ, ಭಾರತೀಯ ಸಮಾಜದ ಸಂರಚನೆಯ ತತ್ತ್ವದ ಬೆಳಕಿನಲ್ಲಿ ನೋಡಿ ಅಭಿಪ್ರಾಯ ಮಂಡಿಸುತ್ತಿದ್ದದ್ದು ಇದಕ್ಕೆ ಕಾರಣ. ರಾಮಜನ್ಮಭೂಮಿ ಅಯೋಧ್ಯೆ ಕುರಿತ ಅವರ ವಿಚಾರ ಪ್ರತಿಪಾದನೆಗಳಲ್ಲೂ ಈ ಸಾರ್ವಕಾಲಿಕತೆಯನ್ನು ಕಾಣಬಹುದು.
ಸತ್ಯದ ಪ್ರತಿಪಾದನೆಗೆ ಬೇಕಿರುವುದು ಸಾಕ್ಷಿಯಲ್ಲ, ಅರಾಜಕತೆ! – ಎಂಬುದು ಅಯೋಧ್ಯೆ ಶ್ರೀರಾಮ ಮಂದಿರದ ಹೋರಾಟದ ಸಮಯದಲ್ಲಿ ಗೆಳೆಯನೊಂದಿಗೆ ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದಾಗ ಒಂದು ಮಾತು. ಸಾಲು ಸಾಲು ಮೊಕದ್ದಮೆಗಳು, ಆಯೋಗಗಳು, ಸಂಧಾನಗಳು, ದಾವೆಗಳು, ವಾದ-ಪ್ರತಿವಾದಗಳು, ಪುರಾವೆಗಳು, ಉತ್ಖನನದ ಸಾಕ್ಷಿಗಳು ಇವೆಲ್ಲವೂ ಹಿನ್ನೆಲೆಯಲ್ಲಿದ್ದರೂ ರಾಮಲಲ್ಲಾ ದಶಕಗಳ ಕಾಲ ತಾತ್ಕಾಲಿಕ ಟೆಂಟಿನಲ್ಲಿಯೇ ಕುಳಿತಿದ್ದ ವಿದ್ಯಮಾನವು ಹೊರತಂದ ಆಕ್ರೋಶದ ನುಡಿಗಳಿವು.
ಬಹುಶಃ ಇದು ನನ್ನೊಬ್ಬನ ವಿಚಾರವಲ್ಲ, ಮೂರು ದಶಕಗಳ ಹಿಂದೆ ಹೊಸ ಪರಿವರ್ತನೆ ಯುಗದ ಆರಂಭದ ಕಾಲ ಎಂದುಕೊಳ್ಳುವ ಸಮಯದ ಸಹಸ್ರಾರು ತರುಣರ ಭಾವನೆಯೂ ಆಗಿದ್ದಿತು. ಅನುಶಾಸನಬದ್ಧ ಸಂಘಟಿತ ಸ್ವರೂಪದ ಶಕ್ತಿಯೂ ಮಸೀದಿಯನ್ನು ಹೋಲುವ ಕಟ್ಟಡದ ಕೊಠಡಿಯಿಂದ ರಾಮನನ್ನು ಮುಕ್ತಗೊಳಿಸುವುದಕ್ಕೆ ‘ಅರಾಜಕತೆ’ಯ ಮೊರೆಹೊಗಬೇಕಾಯಿತು ಎಂಬ ಮಾತು ಒಂದೆಡೆ ಕೇಳಿಬರುತ್ತಿತ್ತು. ಆದರೆ ಆ ದಿನ ಅಲ್ಲಿದ್ದದ್ದು ಯಾವುದೇ ಸಂಘಟನೆಯ ಅಥವಾ ಯಾರದೇ ಒಂದು ಆಜ್ಞೆಗೆ ಒಳಪಡಬಹುದಾಗಿದ್ದಂತಹ ಜನಸಮೂಹವಲ್ಲ. ವಿಹಿಂಪದಂತಹ ಹಿಂದೂ ಪರಿವಾರ ಸಂಘಟನೆಗಳು ಕರಸೇವೆಗೆ ಕರೆಕೊಟ್ಟಿದ್ದರೂ ಸಹ ಅಂದು ಅಯೋಧ್ಯೆಯಲ್ಲಿ ಲಕ್ಷಾಂತರ ಜನ ಸೇರಿದ್ದು ಶ್ರೀರಾಮನಿಗಾಗಿ ಮಾತ್ರ. ಯಾವುದೇ ಸಂಘಟನೆಗಳ ಸದಸ್ಯರು ಆಗಿರಲೇಬೇಕಾದ ಅನಿವಾರ್ಯತೆ ಅವರಿಗಿರಲಿಲ್ಲ, ಅವರನ್ನು ಹೊರಡಿಸಿದ್ದು ರಾಮಭಕ್ತಿ, ಅವರು ಮನೆಯಿಂದ ಬಂದದ್ದೇ ದೇಗುಲ ನಿರ್ಮಿಸುತ್ತೇವೆಂದು. ಹೀಗಾಗಿ ಯಾವುದೇ ಧ್ವಂಸ ಕಾರ್ಯದಲ್ಲಿ ತೊಡಗದಂತೆ ಸಂಘಟನೆಗಳ ಪ್ರಮುಖರು ನೀಡುತ್ತಿದ್ದ ಸೂಚನೆ ಪಾಲಿಸಬೇಕಾದ ಮನಃಸ್ಥಿತಿಯಲ್ಲಿ ಕರಸೇವಕರು ಇರಲಿಲ್ಲ.
ಕಟ್ಟಡದ ಅವಶೇಷದಿಂದಲೇ ಬಂದ ತೀರ್ಪು
ಶ್ರೀರಾಮ ಜನ್ಮಭೂಮಿಯ ಕುರಿತಂತೆ ಬ್ರಿಟಿಷರು ಬಿಟ್ಟು ಹೋದ ನ್ಯಾಯಾಲಯ ವ್ಯವಸ್ಥೆಯು ನ್ಯಾಯ ತೀರ್ಮಾನಕ್ಕೆ ತೆಗೆದುಕೊಳ್ಳುವ ದೀರ್ಘ ಅವಧಿ ಕಾಯುವ ತಾಳ್ಮೆ ಯಾರಿಗಿದೆ? ಮತ್ತು ನ್ಯಾಯ ತೀರ್ಮಾನವಾಗದೆಯೆ ಇರುವ ಪರಿಸ್ಥಿತಿಯೂ ಬರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಅಯೋಧ್ಯೆಯ ಪ್ರಕರಣದಲ್ಲಿ ಅಲ್ಲಿದ್ದ ವಿವಾದಿತ ಗುಮ್ಮಟಗಳು ತೆರವುಗೊಂಡ ಮೇಲೆಯೇ ಇದು ದೇವಾಲಯವೆಂಬ ತೀರ್ಪುಕೊಡಲು ನ್ಯಾಯಾಲಯಕ್ಕೂ ಧೈರ್ಯ ಬಂದದ್ದು. ಒಂದು ವೇಳೆ ೧೯೯೨ರ ಡಿಸೆಂಬರ್ ಆರರಂದು ಅಲ್ಲಿ ವಿವಾದಿತ ಕಟ್ಟಡ ಉರುಳದೇ ಇದ್ದಿದ್ದರೆ ಹಿಂದುಗಳ ಪರ ತೀರ್ಪು ಹೊರಬರುತ್ತಿತ್ತೆ? ಬಂದರೂ ಸಹ ಆಗ ಇನ್ನೂ ಅಲ್ಲಿ ಅಸ್ತಿತ್ವದಲ್ಲೇ ಇದ್ದಿರಬಹುದಾಗಿದ್ದ ಬಾಬರ್ ನಿರ್ಮಿಸಿದ ವಿವಾದಿತ ಕಟ್ಟಡಗಳನ್ನು ತೆರವುಗೊಳಿಸಿ ದೇವಾಲಯಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತೆ? – ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ರಾಮಲಲ್ಲಾ ಪ್ರಕರಣ ಹೊಸ ಚಿಂತನೆಗೆ ನಾಂದಿ
ಅಯೋಧ್ಯೆಯ ಪ್ರಕರಣವು ಪ್ರಜಾಪ್ರಭುತ್ವ ಮತ್ತು ಸಂವಿಧಾನ-ಆಧಾರಿತ ಪದ್ಧತಿಯನ್ನು ಅನುಸರಿಸುತ್ತಿರುವ ಆಧುನಿಕ ಭಾರತದಲ್ಲಿ ಹೊಸ ಚಿಂತನೆಗಳನ್ನೂ, ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಇದೊಂದು ಕುತೂಹಲಕರ ಅಧ್ಯಯನ. ಕಾನೂನು ಪಂಡಿತರ, ಸಂವಿಧಾನತಜ್ಞರ ಪರಿಧಿಯ ಹೊರಗೂ ಈ ನೆಲದಲ್ಲಿ ಹರಿದು ಬಂದಿರುವ ಶತಶತಮಾನಗಳ ನಂಬಿಕೆಗಳ ಆಳವನ್ನು ಗಮನಿಸದೇ ಇದನ್ನು ಅರಿಯಲು ಸಾಧ್ಯವಿಲ್ಲ. ಭಾರತೀಯ ಸಮಾಜದ ಬಗ್ಗೆ ಉದ್ಗ್ರಂಥಗಳನ್ನು ಬರೆದವರಿಗೂ ಗೊಂದಲ ಮೂಡಿಸುವ ಪ್ರಕರಣವಿದು. ಸಮಗ್ರ ಭಾರತೀಯ ಚಿಂತನೆಯನ್ನು ಆಮೂಲಾಗ್ರ ಪರಂಪರೆಯನ್ನು ಆಳವಾಗಿ ಅರಿತವರು ತಮ್ಮ ಅಧ್ಯಯನದಿಂದ ಇದಕ್ಕೊಂದು ಸೂತ್ರರೂಪವನ್ನು ಕೊಡಲು ಸಾಧ್ಯ. ಬಿ.ಬಿ. ಲಾಲ್, ಸೀತಾರಾಮ ಗೋಯಲ್, ರಾಮಸ್ವರೂಪ್ರಿಂದ ಹಿಡಿದು ಅರುಣ್ಶೌರಿಯವರೆಗೆ ಇಂತಹ ಪ್ರಯತ್ನಗಳು ನಡೆದು ಬಂದಿವೆ.
ಇದೇ ಸಾಲಿನವರು ಎಂದು ಹೇಳಲಾಗದಿದ್ದರೂ ಗಾಂಧಿವಾದಿಯಾದರೂ, ಅದನ್ನೇ ಒಂದು ಹೊರೆಯನ್ನಾಗಿಸಿಕೊಳ್ಳದೆ ಭಾರತೀಯ ಸಮಾಜದ ಸತ್ವ ಮತ್ತು ‘ಸ್ವ’ತ್ವ ಎರಡರ ಆಳ ಮೂಲಗಳನ್ನು ತಮ್ಮ ಬರಹಗಳ ಮೂಲಕ ಬಿಡಿಸಿಟ್ಟಿರುವ ಧರ್ಮಪಾಲರ ವೈಚಾರಿಕತೆ ಇದನ್ನು ನೋಡಿದ, ಅಭ್ಯಸಿಸಿದ, ತುಲನೆ ಮಾಡಿದ ಪರಿ ವಿಶಿಷ್ಟವೇ ಆಗಿದೆ. ಅತ್ಯುತ್ಸಾಹ, ಗಾಬರಿ, ಸಂತಸದ ಭಾವಗಳ ಹೊರಗೆ ನಿಂತು ಕಾಲಕಾಲದಲ್ಲಿ ಅಯೋಧ್ಯೆಯ ಘಟನೆಗಳ ಕುರಿತು ಇಂತಹವರು ನೋಡುವ ರೀತಿ ಭಾರತೀಯ ಸಮಾಜದ ಮುಂದಿನ ದಾರಿಯನ್ನು ನಿಶ್ಚಯಿಸುವುದರಲ್ಲಿ ತನ್ನದೇ ಕೊಡುಗೆ ನೀಡಲಿದೆ.
ಗಾಂಧಿವಾದಿಯ ಕಣ್ಣುಗಳಲ್ಲಿ
ಧರ್ಮಪಾಲರು ವ್ಯಕ್ತಪಡಿಸಿರುವ ಅಭಿಪ್ರಾಯಗಳು, ಬರಹಗಳೆಲ್ಲವೂ ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಬೇಕೆಂಬ ನ್ಯಾಯಾಲಯ ತೀರ್ಪು ನೀಡುವ ಮುಂಚಿನದು ಎಂಬುದನ್ನು ಗಮನಿಸಬೇಕು. ಧರ್ಮಪಾಲರು ೨೦೦೬ರಲ್ಲಿಯೇ ದೈವಾಧೀನರಾದರು. ಆದರೂ ಈ ಸಮಯ ಮಿತಿಯೇನೂ ಅವರ ವೈಚಾರಿಕಧಾರೆಯ ಮಹತ್ತ್ವವನ್ನು ಕಡಮೆಗೊಳಿಸುವುದಿಲ್ಲ. ಬದಲಾಗಿ ಅದಕ್ಕೆ ಇನ್ನಷ್ಟು ಖಚಿತತೆಯನ್ನು ನೀಡಿದೆ. ಅವರು ಆ ಕಾಲದ ಮೇಲ್ಮೇಲಿನ ವಿಷಯಗಳನ್ನಷ್ಟೇ ನೋಡದೆ ಯಾವುದೇ ವಿಷಯದ ಆಳಕ್ಕೆ, ಭಾರತೀಯ ಸಮಾಜದ ಸಂರಚನೆಯ ತತ್ತ್ವದ ಬೆಳಕಿನಲ್ಲಿ ನೋಡಿ ಅಭಿಪ್ರಾಯ ಮಂಡಿಸುತ್ತಿದ್ದದ್ದು ಇದಕ್ಕೆ ಕಾರಣ. ರಾಮಜನ್ಮಭೂಮಿ ಅಯೋಧ್ಯೆ ಕುರಿತ ಅವರ ವಿಚಾರ ಪ್ರತಿಪಾದನೆಗಳಲ್ಲೂ ಈ ಸಾರ್ವಕಾಲಿಕತೆಯನ್ನು ಕಾಣಬಹುದು.
೧೯೨೪ರಲ್ಲಿ ಮಹಾತ್ಮ ಗಾಂಧಿಯವರು ಕರ್ನಾಟಕದ ಗುಲಬರ್ಗಾ ಜಿಲ್ಲೆಗೆ ಬಂದಿದ್ದಾಗ ಮುಸಲ್ಮಾನರ ದಾಳಿಯಿಂದ ನಾಶಗೊಂಡ ದೇವಾಲಯವನ್ನು ಕಂಡು ನುಡಿದುದನ್ನು ಧರ್ಮಪಾಲರು ದಾಖಲಿಸಿದ್ದಾರೆ. ‘ನಾನು ಆ ದೇವಾಲಯಕ್ಕೆ ಹೋದಾಗ ದೇವರ ಮೂರ್ತಿಯಿಲ್ಲದಿರುವುದನ್ನು, ಮುಂಭಾಗದ ನಂದಿ ಭಗ್ನಗೊಂಡಿರುವುದನ್ನೂ ಕಂಡೆ. ನೀವು ನನ್ನನ್ನು ವಿಗ್ರಹಾರಾಧಕ ಎಂದು ಕರೆದರೂ ಚಿಂತೆಯಿಲ್ಲ, ಆ ದೃಶ್ಯ ನನಗೆ ತೀವ್ರ ನೋವನ್ನುಂಟು ಮಾಡಿತು’ ಎಂದು ಗಾಂಧಿ ಹೇಳಿದ್ದನ್ನು ಧರ್ಮಪಾಲರು ನೆನಪಿಸುತ್ತಾರೆ.
ನೆಮ್ಮದಿ ನೀಡಿದ ‘ಧ್ವಂಸ’
ಕರಸೇವೆಯ ದಿನದಂದು ವಿವಾದಿತ ಕಟ್ಟಡವು ಅಲ್ಲಿ ಸೇರಿದ್ದ ಜನರ ತಾಳ್ಮೆಯ ಕಟ್ಟೆಯೊಡೆದು ಧ್ವಂಸಗೊಂಡಿತೋ ಅಥವಾ ವ್ಯವಸ್ಥಿತ ಯೋಜನೆಯೋ ಎಂಬ ವಾದ ಈಗಲೂ ಇದ್ದದ್ದೇ. ಇದರ ಕುರಿತು ಸಭೆಯೊಂದರಲ್ಲಿ ಮಾತನಾಡಿದ ಧರ್ಮಪಾಲರು, ತಾವು ವಿಭಿನ್ನ ರೀತಿಯ ಗಾಂಧಿವಿಚಾರದ ವಾರಸುದಾರರು ಎಂಬುದನ್ನು ಸೂಚ್ಯವಾಗಿ ಈ ಮಾತುಗಳಲ್ಲಿ ತಿಳಿಸುತ್ತಾರೆ. “ಬಾಬರಿ ಕಟ್ಟಡವು ಪಿತೂರಿಯಿಂದಾಗಿಯೋ ಅಥವಾ ಜನರ ಮುನ್ನುಗ್ಗುವಿಕೆಯಿಂದಲೋ ಕುಸಿದು ಬಿತ್ತು. ಅಲ್ಲಿ ಸೇರಿದ್ದವರು ವಿವಾದಿತ ಕಟ್ಟಡವನ್ನು ನೆಲಸಮ ಮಾಡಿದರು. ಮತ್ತು ಜನರು ಅದನ್ನು ಕೆಡವಿದಾಗ ಮತ್ತು ಮರುದಿನ ಬೆಳಗ್ಗೆ ನಾನು ಅದರ ಬಗ್ಗೆ ಓದಿದಾಗ ಅಥವಾ ಬಹುಶಃ ಬೇರೊಬ್ಬರಿಂದ ಅದರ ಬಗ್ಗೆ ಕೇಳಿದಾಗ, ನನಗೆ ನಿಜವಾಗಿಯೂ ಸಮಾಧಾನವಾಯಿತು. ಇಲ್ಲಿ ಕುಳಿತಿರುವ ಹೆಚ್ಚಿನವರಿಗೂ ಸಮಾಧಾನವಾಗಿತ್ತು ಎಂಬುದು ನನ್ನ ಭಾವನೆ. ಇಲ್ಲಿ ಸಹಜವಾಗಿಯೇ ಜಾತ್ಯತೀತರು, ಬಿಜೆಪಿ ಅಥವಾ ಆರೆಸ್ಸೆಸ್ನಿಂದ ಪ್ರಭಾವಿತರಾಗದ ಜನರಿದ್ದಾರೆ. ಆದರೆ ಅವರಿಗೂ ಆಗ ಒಂದು ರೀತಿಯಲ್ಲಿ ಸಮಾಧಾನವಾಗಿತ್ತು ಎಂದು ನಾನು ನಂಬುತ್ತೇನೆ. ಇದಾದ ನಂತರ, ಅನಿವಾರ್ಯವಾಗಿ ವಿವಿಧ ನಾಯಕರುಗಳು ವಿಭಿನ್ನ ನಿಲವುಗಳನ್ನು ತೋರ್ಪಡಿಸಿಕೊಳ್ಳಬೇಕಾಗಿತ್ತು, ಅವರು ಸಾರ್ವಜನಿಕವಾಗಿ ಬೇರೆಬೇರೆ ಮುಖವಾಡಗಳನ್ನು ಅಳವಡಿಸಿಕೊಳ್ಳಬೇಕಾಯಿತು. … ಆದರೆ ಒಂದು ವೇಳೆ ಅಂದು ಆ ಕಟ್ಟಡವನ್ನು ಕೆಡವದೇ ಇದ್ದಿದ್ದರೆ, ಏನಾಗಬಹುದಿತ್ತು? ಇದು ದೇಶದಾದ್ಯಂತ ಉಂಟುಮಾಡಬಹುದಾಗಿದ್ದ ಹತಾಶೆ, ಆಕ್ರೋಶಗಳನ್ನು ತಡೆಯುವುದು ಅಸಾಧ್ಯವಾಗಿಬಿಡುತ್ತಿತ್ತು.” ಇದು ಸಮಾಜದ ಒಟ್ಟು ಮಾನಸಿಕತೆಯನ್ನು ಅರಿತ ಒಬ್ಬ ನಿಜವಾದ ಪ್ರಾಜ್ಞನ ಮಾತುಗಳೇ ಸರಿ.
ಇತಿಹಾಸದ ತಿರುವನ್ನು ನಿರ್ಣಯಿಸಿದ ಕ್ಷಣ
ಧರ್ಮಪಾಲರು ತಿಳಿಸುವಂತೆ ಕರಸೇವಕರು ಮಾಡಿದ ಆ ‘ಧ್ವಂಸ’ ಒಂದು ಸಮಾಜ ತೋರುವ ಸಹಜ ಪ್ರಕ್ರಿಯೆ. ಅವರ ಮಾತುಗಳಲ್ಲಿ ಇದು ಸ್ಪಷ್ಟವಿದೆ: ೧೯೯೨ರ ಡಿಸೆಂಬರ್ ೬ರಂದು ಅಯೋಧ್ಯೆಯಲ್ಲಿ ಜಮಾಯಿಸಿದ ಜನರು ಏನನ್ನೋ ಸೂಚಿಸುತ್ತಿದ್ದಾರೆ ಎಂಬುದು ನನ್ನ ಭಾವನೆ. ಅವರು ಏನು ಮಾಡುತ್ತಿದ್ದಾರೆ ಮತ್ತು ಅವರು ಏನು ಮಾಡಿ ಮುಗಿಸಿದ್ದಾರೆ ಎಂಬುದು ಅವರ ಆಳವಾದ ಆಂತರಿಕ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ – ಅವರದು ತರ್ಕಬದ್ಧ ಅಥವಾ ತರ್ಕಬದ್ಧವಲ್ಲದ, ಸಮಂಜಸವಾದ ಅಥವಾ ಅಕಾರಣವಾದ ಕಾರ್ಯವಿರಬಹುದು – ಆದರೂ ಆ ಕ್ರಿಯೆ (ವಿವಾದಿತ ಕಟ್ಟಡ ಧ್ವಂಸ) ಘಟಿಸಿದ್ದರಿಂದಲೇ ನಾವು ಪುನಶ್ಚೇತನದ ಹಾದಿಯಲ್ಲಿ ಹೋಗಲು ಮತ್ತು ವಿಭಿನ್ನ ರಾಜಕೀಯಕ್ಕೆ ಪರಿಸ್ಥಿತಿಗೆ ಹೊರಳಲು ಅವಕಾಶವಾಯಿತು. ಇಲ್ಲದಿದ್ದರೆ ನಾವು ಪದೇ ಪದೇ ಎಡವಿ ಬೀಳುವುದೇ ಮುಂದುವರಿಯುತ್ತಿತ್ತು.
ಧರ್ಮಪಾಲರಿಗೆ ರಾಮಜನ್ಮಭೂಮಿಯ ವಿವಾದ ಕೇವಲ ರಾಮನಿಗೋಸ್ಕರ ಭಾರತೀಯರು ಪ್ರತಿಭಟಿಸುತ್ತಿರುವ ಕಥೆಯೋ ಅಥವಾ ಒಡೆದುಹಾಕಿದ ದೇವಸ್ಥಾನವೊಂದನ್ನು ಪುನಃ ಕಟ್ಟಿಬಿಡುವ ಹಪಾಹಪಿಯೋ ಆಗಿರಲಿಲ್ಲ. ಬದಲಿಗೆ ಸಾವಿರಾರು ವರ್ಷಗಳ ಕಾಲ ತುಳಿತಕ್ಕೊಳಗಾದ ಸಂಸ್ಕೃತಿಯೊಂದು ಮೈಕೊಡವಿ ಪುಟಿದೆದ್ದು ತನ್ನತನವನ್ನು ಅಭಿವ್ಯಕ್ತಿಸಿಕೊಳ್ಳುತ್ತಿರುವ ನವನವೀನ ಕಥೆ ಇದಾಗಿತ್ತು.
ದೇವಸ್ಥಾನವೋ ರಾಮನೋ ಇಲ್ಲದಿದ್ದರೂ ಕೂಡಾ ಭಾರತ ಪುನಃ ತನ್ನನ್ನು ತಾನು ಹುಡುಕಿಕೊಳ್ಳುತ್ತಿತ್ತು. ಆದರೆ ರಾಮಜನ್ಮಭೂಮಿಯು ಭಾರತೀಯರ ಶ್ರದ್ಧೆ ಮತ್ತು ಸಂಸ್ಕೃತಿಗಳ ಪ್ರತೀಕವಾಗಿ ಭಾರತೀಯರು ತಮ್ಮನ್ನು ತಾವು ಹುಡುಕಿಕೊಳ್ಳುವ ಹೊಸ ಪಯಣದ ಶೋಧಕ್ಕೆ ನಿಮಿತ್ತವಾಗಿ ನಮ್ಮ ಕಾಲದಲ್ಲಿ ಪ್ರಕಟಗೊಂಡಿತು. ಈ ಸಂಗತಿಯನ್ನು ಸರಿಯಾಗಿ ಗ್ರಹಿಸಿದವರು ಪ್ರಖರ ಗಾಂಧಿವಾದಿ ಧರ್ಮಪಾಲ್.
ದೇಶವೊಂದು ಹೊಸ ಇತಿಹಾಸವೊಂದರ ಸೃಷ್ಟಿಯ ಸಂಧಿಕಾಲಕ್ಕೆ ಇಂತಹ ಮಹತ್ತರ, ಅನೂಹ್ಯ ಘಟನೆಗಳೇ ತಿರುಗುದಾಣಗಳು ಎಂಬುದನ್ನು ಸೂಚ್ಯವಾಗಿ ಧರ್ಮಪಾಲರು ಹೇಳುತ್ತಾರೆ. ಅಯೋಧ್ಯೆ ಆಧುನಿಕರ ಹಿಡಿತಕ್ಕೆ ಸಿಗುವಂತಹದ್ದಲ್ಲ. ಅದು ಪ್ರಾಚೀನತೆಯ ಹಲವು ಆಯಾಮಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ನೆಲದ ಮೇಲೆ ಕಣ್ಣಿಗೆ ಕಾಣುವ ಕಟ್ಟಡವೇ ಆದರೂ ಅದರ ಆಳ ಅಗಲಗಳು ಬೇರೆಯೇ. ಅಯೋಧ್ಯೆಯಂತಹ ಸಹಸ್ರ ಆತ್ಮಗಳು ರಾಷ್ಟ್ರಪುರುಷನನ್ನು ಆವರಿಸಿಕೊಂಡು ಭಾರತ ದೇಶವನ್ನು ಜೀವಂತವಾಗುಳಿಸಿವೆ. ಸೋಮನಾಥದ ಪುನರ್ನಿರ್ಮಾಣವನ್ನು ವಿರೋಧಿಸಿದ ಗಾಂಧಿಯ ಅಚ್ಚುಮೆಚ್ಚಿನ ಶಿಷ್ಯ ನೆಹರೂರವರಿಗೆ ಇದನ್ನು ಗ್ರಹಿಸಲಾಗಲಿಲ್ಲ. ಆದರೆ ಗಾಂಧಿಯ ಬೌದ್ಧಿಕ ವಾರಸುದಾರರೆಂದು ಹಲವರು ಗುರುತಿಸುವ ಧರ್ಮಪಾಲರು ಅಚ್ಚುಕಟ್ಟಾಗಿ ಇದನ್ನು ತಿಳಿಯಪಡಿಸಿದ್ದಾರೆ.
ಹಿಂದೂ ಸಮಾಜದ ನಿರ್ಣಯ; ಸಂಘಟನೆಯದ್ದಲ್ಲ.
ಮಹತ್ತರ ಉದ್ದೇಶವೊಂದಕ್ಕೆ ಯಾವ ಆದೇಶವೂ ಇಲ್ಲದೇ ಭಾರತದ ಸರ್ವೇಸಾಮಾನ್ಯ ಜನರೂ ಒಂದುಗೂಡುತ್ತಾರೆ ಎಂಬುದು ಧರ್ಮಪಾಲರು ಪ್ರತ್ಯಕ್ಷ ಕಂಡುಕೊಂಡ ಸತ್ಯ. ಅವರ ಅನುಭವವೇ ಇದಕ್ಕೆ ಪ್ರಮಾಣ. ಮಡಿಮೈಲಿಗೆಯ ಆಚರಣೆ ಹೆಚ್ಚಾಗಿದ್ದ ಆ ಕಾಲದಲ್ಲಿ ರೈಲಿನ ಬೋಗಿಯಲ್ಲಿ ಇವರೊಂದಿಗೆ ಪ್ರಯಾಣಿಸುತ್ತಿದ್ದ ವಿವಿಧ ಜಾತಿಗಳ ಜನರು ಯಾವುದೇ ಭೇದಭಾವವಿಲ್ಲದೆ ತಿಂಡಿಪದಾರ್ಥಗಳನ್ನು ಹಂಚಿಕೊಳ್ಳುತ್ತಿದ್ದುದನ್ನು ನೋಡಿ ಚಕಿತಗೊಂಡ ಧರ್ಮಪಾಲರಿಗೆ ಆ ಮುಗ್ಧ ಜನರು ಹೇಳಿದ್ದು ‘ತೀರ್ಥಯಾತ್ರೆಯಲ್ಲಿ, ಭಗವಂತನ ದರ್ಶನಕ್ಕೆಂದು ಹೊರಟಾಗ ಭೇದವಿಲ್ಲ’ ಎಂಬುದು. ಅಯೋಧ್ಯೆಯ ಪ್ರಕರಣವೂ ಅದೇ ಹಾದಿಯದ್ದು. ಅದೆಷ್ಟೋ ಕಾಂಗ್ರೆಸ್, ಜನತಾ ಪರಿವಾರ, ಕಮ್ಯುನಿಸ್ಟ್ ಇತ್ಯಾದಿ ಹಿಂದೂವಿರೋಧಿ ವೈಚಾರಿಕ ಸಿದ್ಧಾಂತಗಳನ್ನುಳ್ಳ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಅವರ ಮನೆಗಳವರು ಕರಸೇವಕರಾಗಿ ಹೊರಟಿದ್ದರು. ಆರೆಸ್ಸೆಸ್, ಬಿಜೆಪಿ ಇತ್ಯಾದಿ ಸಂಘಟನೆಗಳವರು ಇವರನ್ನು ಕರಸೇವಕರಾಗಿ ಹೊರಡಿಸಿದರು ಎಂಬುದು ಮೇಲ್ನೋಟದ ತಿಳಿವಳಿಕೆ ಮಾತ್ರ. ಬದಲಾಗಿ ಭಾರತೀಯರ ಆಂತರ್ಯದ ಜಾಗೃತ ಶಕ್ತಿಯೇ ಆರೆಸ್ಸೆಸ್, ಭಾಪಗಳನ್ನು ಉಪಕರಣವನ್ನಾಗಿಸಿಕೊಂಡಿತು ಎಂಬುದು ಈ ನೆಲದ ಸತ್ವದ ಅರಿವುಳ್ಳವರ ವಿಶ್ಲೇಷಣೆ. ‘ನೀನು ಶಸ್ತ್ರ ಪ್ರಯೋಗಿಸುವುದು ನೆಪ ಮಾತ್ರ ನಾನಾಗಲೇ ದುರ್ಯೋಧನಾದಿ ಕೌರವರನ್ನು ಕೊಂದು ಮುಗಿಸಿದ್ದೇನೆ’ ಎಂದ ಶ್ರೀಕೃಷ್ಣನ ಸ್ಥಾನದಲ್ಲಿ ಇಡೀ ಭಾರತೀಯ ಸಮಾಜವೇ ಎದ್ದು ನಿಂತು ಅರ್ಜುನರೂಪದ ಹಿಂದೂ ಸಂಘಟನೆಗಳನ್ನು ಅಂದೋಲನದಲ್ಲಿ ಧುಮುಕಿಸಿತು – ಎನ್ನುವುದು ನಿಧಾನವಾಗಿ ಯೋಚಿಸಿದರೆ ಅರಿವಾದೀತು.
ಮಸೀದಿಯೆಂಬ ಹುಸಿ ನಂಬಿಕೆ
ಭಾರತಕ್ಕೆ ಅಡಿಯಿಟ್ಟ ಮುಸಲ್ಮಾನರು ಆಕ್ರಮಣಕಾರಿ ಪ್ರವೃತ್ತಿ ಮತ್ತು ಇಸ್ಲಾಂನ ಹೇರಿಕೆಯ ಭಾಗವಾಗಿ ಹಿಂದುಗಳನ್ನು ಅವಮಾನಿಸಲೆಂದೇ ನಿರ್ಮಿಸಿದ ಆ ಕಟ್ಟಡವನ್ನು ಆ ಕಾಲದ ಮುಸಲ್ಮಾನರು ಮಸೀದಿಯೆಂದು ಭಾವಿಸದೇ ಇದ್ದರೂ ತಮ್ಮ ಅಹಂಕಾರ, ಶಕ್ತಿ, ಮದಗಳನ್ನು ಮೆರೆಸಲು ಇರುವ ಸಾಧನವೆಂದು ಭಾವಿಸಿದ್ದರು. ಆದರೆ ಸ್ವಾತಂತ್ರ್ಯಾನಂತರ ಸೆಕ್ಯುಲರ್ ಬುದ್ಧಿಜೀವಿಗಳು, ಕಮ್ಯುನಿಸ್ಟ್ ಇತಿಹಾಸಕಾರರು ಮತ್ತು ಕಾಂಗ್ರೆಸ್ ಕೃಪಾಪೋಷಿತ ಮಾಧ್ಯಮಗಳು ಇದನ್ನು ‘ಬಾಬರ್ ಮಸೀದಿ’ಯೆಂದೇ ಬಿಂಬಿಸಿಬಿಟ್ಟಿದ್ದವು. ಇದು ದೇವಾಲಯವೆಂಬುದಕ್ಕೆ ಹಿಂದೂಗಳು ಮೊಗೆಮೊಗೆದು ಸಾಕ್ಷಿಗಳನ್ನು ಮುಂದಿರಿಸುತ್ತಿದ್ದರೂ ಆಗ ನಿರ್ಣಯಿಸಬೇಕಾದ ವ್ಯವಸ್ಥೆ ತನ್ನ ಮೇಲಾಗುತ್ತಿದ್ದ ಹುಸಿ ಜಾತ್ಯತೀತ ಪ್ರಭಾವಗಳಿಂದ ಮತ್ತು ರಾಜಕೀಯ ಸ್ವಾರ್ಥಿಗಳ ಆಟದಿಂದ ಮಂದಿರ ಅಸ್ತಿತ್ವವಿದ್ದುದನ್ನು ಒಪ್ಪಲು ತಕರಾರು ಮಾಡುತ್ತಲೇ ಇತ್ತು. ಹಿಂದೂ ತನ್ನ ಸ್ವಾಭಿಮಾನವನ್ನು ಎಷ್ಟುಕಾಲ ಅದುಮಿಡಲು ಸಾಧ್ಯ? ಅದು ಯಾವುದೇ ರಾಜಕೀಯ ಪಕ್ಷದ ಹಿಡಿತದಲ್ಲೂ ಸಿಗದೇ ಆಸ್ಫೋಟಕ್ಕೆ ಸಿದ್ಧವಾಗುತ್ತಿತ್ತು.
ಈ ವಿಷಯವನ್ನು ಧರ್ಮಪಾಲರು ಬಹು ವಿವೇಚನೆಯಿಂದಲೇ ಗುರುತಿಸಿದ್ದಾರೆ. ಚೆನ್ನೈನಲ್ಲಿ ನಡೆದ ರಾಮಜನ್ಮಭೂಮಿ ಕುರಿತ ಸಭೆಯಲ್ಲಿ ಅವರು ಇದನ್ನು ಸ್ಪಷ್ಟವಾಗಿ ಹೇಳುತ್ತಾರೆ. “ನಾನು ಈ ರೀತಿಯ ಸಭೆಗಳಲ್ಲಿ ಭಾಗವಹಿಸುತ್ತಲೇ ಇದ್ದೇನೆ. ನನಗೆ ಕೇಳಿಬಂದಂತೆ ಇಂತಹದೇ ಒಂದು ಸಭೆಯಲ್ಲಿ ಹಿಂದುವೊಬ್ಬ ‘ಬಾಬರಿ ಕಟ್ಟಡವನ್ನು ನೆಲಸಮಗೊಳಿಸಿದ್ದು ನಿಮಗೆ ನೋವಾಯಿತೆ?’ ಎಂದು ಮುಸಲ್ಮಾನ ಸಭಿಕನಿಗೆ ಹೇಳಿದಾಗ ಆತ ‘ಹೌದು, ಆದರೆ ಅಲ್ಲಾನ ಇಚ್ಛೆಯಿಲ್ಲದೆ ಯಾವುದೂ ನಡೆಯುವುದಿಲ್ಲ. ಆದರೂ ಈ ಪ್ರಸಂಗವು ನಮ್ಮಲ್ಲಿ ಪರಸ್ಪರ ಮಾತನಾಡಲು ಅವಕಾಶ ಮಾಡಿಕೊಟ್ಟಿದೆ, ಹಿಂದೆ ಇಂತಹದಕ್ಕೆ ಅವಕಾಶವೇ ಇರಲಿಲ್ಲ’ ಎಂದು ಹೇಳಿದ.” ಈ ಮಾತುಕತೆ ಅಯೋಧ್ಯೆಯ ಪ್ರಕರಣ ಮುಸಲ್ಮಾನರಲ್ಲಿ ಹುಟ್ಟುಹಾಕಿದ ಹೊಸ ಚಿಂತನೆಯನ್ನು ಸ್ವಲ್ಪಮಟ್ಟಿಗೆ ಹೊರಹಾಕಿದೆ. ಇದರ ಪ್ರಭಾವ ಅಥವಾ ಈ ರೀತಿ ಚಿಂತಿಸುವ ವ್ಯಕ್ತಿಗಳು ಮುಸಲ್ಮಾನ ಸಮಾಜದಲ್ಲಿ ಕಡಮೆ ಇರಬಹುದು ಆದರೆ ಆ ದಿಕ್ಕಿನಲ್ಲಿ ಚಿಂತನೆ ಶುರುವಾಗಿರುವುದಂತೂ ಹೌದು. ತುಷ್ಟೀಕರಣವೆಂಬ ಬಲೂನನ್ನು ಏಕಪ್ರಕಾರವಾಗಿ ಊದುತ್ತಾ ಹೋಗಿದ್ದರ ಪರಿಣಾಮ ಹಿಂದು ಮುಸಲ್ಮಾನರ ನಡುವೆ ಉಂಟಾಗಿದ್ದ ಅಗಾಧ ಅಂತರವನ್ನು ತೊಡೆಯಲು ವಿವಾದಿತ ಕಟ್ಟಡ ಧ್ವಂಸವಾಗಬೇಕಾಯಿತು.
ಆಡಳಿತ ಕೇಂದ್ರವೆಂಬ ಬ್ರಿಟಿಷರ ತಂತ್ರ
ಧರ್ಮಪಾಲರು ಗುರುತಿಸುವಂತೆ ಇಸ್ಲಾಂ ಶ್ರೇಷ್ಠವೆಂಬ ಭಾವನೆ ಮುಸಲ್ಮಾನರಲ್ಲಿ ಇರುವಂತೆಯೇ, ಇಸ್ಲಾಂ ಎಂದರೆ ಅತಿ ಬಲಿಷ್ಠ ಅಥವಾ ಉನ್ನತವೆಂಬ ಭಾವನೆಯನ್ನು ಹಿಂದೂಗಳಲ್ಲೂ ಮೂಡಿಸಲಾಗಿತ್ತು. ಅದಕ್ಕೆಂದೇ ಹಿಂದುಗಳಾಗಿದ್ದರೂ ಸಹ ನಾವು ಇಸ್ಲಾಂ ಸುಲ್ತಾನರು, ಲೋಧಿಗಳು, ಮೊಘಲರು ಅವರ ವಂಶಾವಳಿಗಳ ಕುರಿತೇ ಓದುವುದು, ಮಾತನಾಡುವುದು ಮಾಡುತ್ತಿದ್ದೆವು. ಆದರೆ ಅವರು ಯಾವ ಸೀಮೆಯ ನಾಯಕರು? ಅವರೋ ಮಹಾ ದುರ್ಬಲರು ಮಾತ್ರವಲ್ಲ ಒಬ್ಬ ಸುಲ್ತಾನನಾದರೂ ಅಖಂಡ ಭಾರತವನ್ನು ಒಮ್ಮೆಯಾದರೂ ಆಳಿದ್ದಿಲ್ಲ. ಮುಸಲ್ಮಾನರು ಕೆಲಕಾಲ ದೆಹಲಿ ಆಳಿದವರು. ದೆಹಲಿ ಆಳುವುದೆಂದರೆ ಭಾರತವನ್ನು ಆಳುವುದಲ್ಲ. ಏಕಕಾಲದಲ್ಲಿ ಅರ್ಧದಷ್ಟು ಭಾರತವನ್ನೂ ಸಹ ಮುಸಲ್ಮಾನರು ಗೆದ್ದು ಶಾಸನ ನಡೆಸಿಲ್ಲ. ಬ್ರಿಟಿಷರಿಗೆ ಭಾರತವನ್ನು ಹಿಡಿತದಲ್ಲಿರಿಸಿಕೊಳ್ಳಲು ಕೇಂದ್ರವೊಂದು ಬೇಕಿತ್ತು. ಹೀಗಾಗಿ ಅವರು ಕೊಲ್ಕೊತಾ ನವಾಬ, ಆರ್ಕಾಟ್ ನವಾಬರುಗಳನ್ನು ಮೇಲಿಟ್ಟು ಅವರನ್ನು ನಿಯಂತ್ರಿಸಿದರೆ ಭಾರತವನ್ನು ಹಿಡಿದಂತೆ ಎಂಬ ಭಾವನೆ ಬೆಳೆಸಿದರು, ಅನಂತರ ಕೊನೆಯಲ್ಲಿ ದೆಹಲಿಯನ್ನೂ ಹಾಗೆಯೇ ಬಿಂಬಿಸಿ ಅದನ್ನು ಗೆದ್ದು ‘ಭಾರತವನ್ನು ಆಕ್ರಮಿಸಿಕೊಂಡುಬಿಟ್ಟೆವು’ ಎಂದರು.
ವಾಸ್ತವದಲ್ಲಿ ಮೊಘಲರಿಂದ ಬ್ರಿಟಿಷರು ಭಾರತವನ್ನು ಬಿಡಿಸಿಕೊಂಡವರಲ್ಲ. ಆಗಲೂ ಬಹುಪಾಲು ಹಿಂದು ಆಡಳಿತದ ಪ್ರದೇಶಗಳೇ ಹೆಚ್ಚಿದ್ದವು. ಆದರೂ ಬ್ರಿಟಿಷರ ಆಡಳಿತ ಅಥವಾ ಶಕ್ತಿಕೇಂದ್ರಗಳೆಂಬ ತಂತ್ರಗಾರಿಕೆಯಿಂದ ಮತ್ತು ಅನಂತರ ನಮ್ಮ ಆಧುನಿಕ ಇತಿಹಾಸಕಾರರು ಮಾಡಿದ ದೋಷದಿಂದ ಮುಸಲ್ಮಾನರು ಮಹಾನ್ ಆದರು. ಅವರ ಸಂಪ್ರದಾಯ, ಶೈಲಿಗಳು ನಮ್ಮ ಮೇಲೂ ಹೇರಲ್ಪಟ್ಟವು. ದೆಹಲಿಯ ಜಾಮಾ ಮಸೀದಿಯ ಇಮಾಂ ಅನ್ನು ಶಾಹಿ ಇಮಾಂ ಎಂದೇಕೆ ಹೇಳುತ್ತೇವೆ? ಬರೀ ಇಮಾಂ ಎಂದೇಕೆ ಹೇಳುವುದಿಲ್ಲ? – ಎಂಬ ಪ್ರಶ್ನೆಯನ್ನೂ ಧರ್ಮಪಾಲರು ಎತ್ತುತ್ತಾರೆ.
ಧರ್ಮಪಾಲರಿಗೆ ಪ್ರಶ್ನೆ ಇದ್ದಿದ್ದು ಮುಸಲ್ಮಾನರು-ಹಿಂದುಗಳ ನಡುವೆ ಯಾರು ಶ್ರೇಷ್ಠರು ಎಂಬ ಕುರಿತದ್ದಲ್ಲ. ಮತ್ತು ಅವರ ಸ್ವಾನುಭವ ಮತ್ತು ಅಧ್ಯಯನಗಳು ತಿಳಿಸಿದಂತೆ ಭಾರತದಲ್ಲಿ ಇತಿಹಾಸಕಾರರು-ಚಿಂತಕರು ಕಂಡಂತೆ ಹಿಂದು-ಮುಸ್ಲಿಮ್ ಸಮಸ್ಯೆಯಂತೂ ಇರಲಿಲ್ಲ. ಸಹಜವಾಗಿ ಅವರವರ ಶ್ರದ್ಧೆ-ನಂಬಿಕೆಗಳ ನಡುವೆ ಒಟ್ಟಿಗೆ ಬದುಕಬಹುದಾದ ಸಮುದಾಯಗಳೆರಡನ್ನು ವಿಭಜಿಸುವ ಈ ಮಿಥ್ಯಾರೋಪಗಳ ಕುರಿತು ಧರ್ಮಪಾಲರಿಗೆ ಅಸಮಾಧಾನವಿತ್ತು. ಒಂದು ಕಡೆ ಮುಸ್ಲಿಮರನ್ನು ಶೌರ್ಯವಂತರೆಂದೂ ಆಡಳಿತವನ್ನು ಮಾಡಲು ಭಾರತೀಯರಿಗೆ ಹೇಳಿಕೊಡುವವರೆಂದೂ ಬಿಂಬಿಸುತ್ತಲೇ ಮತ್ತೊಂದೆಡೆ ಹಿಂದುಗಳನ್ನು ಹೇಡಿಗಳು, ತಮ್ಮನ್ನು ತಾವು ಆಳಿಕೊಳ್ಳಲು ಶಕ್ತಿ ಇಲ್ಲದವರು, ಪರಕೀಯರ ಕೆಳಗೆ ಮಾತ್ರ ವ್ಯವಸ್ಥಿತವಾಗಿ ಬದುಕಬಲ್ಲವರು ಇತ್ಯಾದಿಯಾಗಿ ಚಿತ್ರಿಸುವುದನ್ನು ಧರ್ಮಪಾಲರು ಪ್ರಬಲವಾಗಿ ತಿರಸ್ಕರಿಸುತ್ತಿದ್ದರು. ಅಲ್ಲದೆ ಈ ನಿರೂಪಣೆಗಳನ್ನು ಒಡೆದು ಹಾಕಲು ಅವರು ಸತತವಾಗಿ ಪ್ರಯತ್ನಿಸುತ್ತಿದ್ದರು.
ಅವರು ಗ್ರಹಿಸಿದಂತೆ ಕೇಂದ್ರೀಕೃತ ವ್ಯವಸ್ಥೆ, ಅಧಿಕೃತತೆ (legitimacy) ಎಂಬ ಕೃತಕ ವ್ಯವಸ್ಥೆಯನ್ನು ಹುಟ್ಟುಹಾಕಿದ ಬ್ರಿಟಿಷರ ತಂತ್ರಕ್ಕೆ ಹಿಂದೂ ಸಮಾಜ ಬಲಿಯಾಯಿತು. ಈಗಲೂ ಅಯೋಧ್ಯೆಯ ವಿಷಯಕ್ಕೂ ನಾವು ಮೊರೆ ಹೋದದ್ದು ಅವರ ದಾಖಲೆಗಳ ಹಿಂದೆಯೇ ಹೊರತು ನಮ್ಮ ಶಾಸನ, ವೇದ, ಪೌರಾಣಿಕ ಕಥೆ, ನಂಬಿಕೆಗಳ, ಪುರಾವೆಗಳ ಮೇಲೆ ನಿರ್ಣಯಿಸಲಿಲ್ಲ. ನಾವು ಶ್ರೀರಾಮನ ವಂಶಜರು, ಶ್ರೀ ಕೃಷ್ಣನ ವಂಶಜರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ರಾಜರು ಆಳುತ್ತಿದ್ದ ದೇಶದಲ್ಲಿ ಹಾಗೆ ಹೇಳುವುದೇ ಮರೆತು ಹೋಗಿದೆ. ಏಕೆಂದರೆ ನಾವು ‘ದಾಖಲೆ’ಗಳ ಹಿಂದೆ ಬಿದ್ದಿದ್ದೇವೆ. ನಮ್ಮದೆನ್ನುವ ಪ್ರಥೆಯೊಂದನ್ನು ಕೀಳರಿಮೆಯಿಂದಲೇ ಪ್ರತಿಪಾದಿಸಬೇಕಾಗಿದೆ. ಇದಕ್ಕೆ ಪ್ರತಿಯಾಗಿ ಪ್ರತಿಯೊಬ್ಬ ಮುಸಲ್ಮಾನನೂ ಸುಲ್ತಾನ ವಂಶಜ ಎಂಬಂತೆ ಅವರೊಂದಿಗೆ ವ್ಯವಹರಿಸಲಾಗುತ್ತದೆ. ಒಂದುವೇಳೆ ನಾವೆಲ್ಲ ಶ್ರೇಷ್ಠ ಸಂತಾನರು ಎಂಬ ಮನೋಭಾವ ಬೆಳೆದಲ್ಲಿ ಅದು ಎಲ್ಲ ಭೇದಗಳನ್ನು ಅಳಿಸಿಹಾಕುತ್ತದೆ. ಈ ಪ್ರಕ್ರಿಯೆ ಹಿಂದೂ ಸಮಾಜದಲ್ಲಿ ಉಂಟುಮಾಡಬಹುದಾದ ಏಕತೆ ಅದ್ಭುತವಾದದ್ದು. ಆದರೆ ನೆಹರೂ ಮತ್ತು ಅವರ ನಂತರ ಅಧಿಕಾರ ಹಿಡಿದವರ ಅಜ್ಞಾನದಿಂದಲೋ ಅಥವಾ ಉದ್ದೇಶಪೂರ್ವಕವಾಗಿ ಕೈಗೊಂಡ ಆಡಳಿತ ನೀತಿ ನಿಯಮಗಳಿಂದಲೋ ಸ್ವಾತಂತ್ರ÷್ಯ ಬಂದು ಇಷ್ಟು ವರ್ಷಗಳಾದರೂ ನಮ್ಮಲ್ಲಿ ಸ್ವಾಭಿಮಾನವನ್ನು ಮೂಡಿಸದೇ ವ್ಯರ್ಥಗೊಳಿಸಿಬಿಟ್ಟಿವೆ.
ಅಯೋಧ್ಯೆ ನಂಬಿಕೆಯ ಪ್ರಶ್ನೆ
ರಾಮಜನ್ಮಭೂಮಿ ಮತ್ತು ಬಾಬರಿ ಎರಡೂ ಪ್ರತ್ಯೇಕ ಸ್ಥಳಗಳು, ಒಂದೇ ಆಗಿದ್ದರೆ ತುಲಸೀದಾಸರು ಬರೆದ ಅತ್ಯಂತ ಪ್ರಸಿದ್ಧ ರಾಮಚರಿತಮಾನಸದಲ್ಲಿ ಅದರ ಉಲ್ಲೇಖವೇಕಿಲ್ಲ? – ಎಂಬುದಕ್ಕೂ ಧರ್ಮಪಾಲರು ಅವರದೇ ದಾಖಲೆಯ ಭಾಷೆಯಲ್ಲಿ ಉತ್ತರಿಸುತ್ತಾರೆ. ರಾಮಚರಿತಮಾನಸ ಆ ಕಾಲದ ಚಾರಿತ್ರಿಕತೆಯನ್ನು ದಾಖಲಿಸಲು ಬರೆದದ್ದಲ್ಲ. ಹದಿನಾರನೇ ಶತಮಾನದಲ್ಲಿ ಪ್ರತಿವರ್ಷ ಏನಾಯಿತೆಂದು ಅವರು ಬರೆಯುತ್ತ ಕೂಡಲಿಲ್ಲ. ಅವರ ಉದ್ದೇಶ ಇನ್ನೂ ಮಹತ್ತ್ವದ್ದು ಮತ್ತು ವಿಸ್ತಾರವಾದದ್ದು. ಅವರು ರಾಮಚರಿತಮಾನಸ ಬರೆದ ಉದ್ದೇಶದ ಮುಂದೆ ಆ ಸಮಕಾಲೀನ ವಿಷಯಗಳನ್ನು ಸೇರಿಸುವ ಅಗತ್ಯ ಅವರಿಗೆ ಕಾಣಲಿಲ್ಲ. ಅದು ಭಾರತೀಯರಿಗೆ ಸಹಜವಾದ ಗುಣ. ಈಗಲೂ ಕಾಶಿಗೆ ಹೋಗುವ ಲಕ್ಷಾಂತರ ಭಕ್ತರು ವಿಶ್ವನಾಥನ ದರ್ಶನ ಮಾಡಿದರೂ ಅದರ ಮೂಲಸ್ಥಾನದಲ್ಲಿರುವ ಮಸೀದಿಯ ಕುರಿತು ಹೆಚ್ಚು ಗಮನಹರಿಸುವುದಿಲ್ಲ, ಅದರ ಬಗ್ಗೆ ತಿಳಿದುಕೊಂಡಿರುವುದೂ ಇಲ್ಲ. ಹಿಂದೆ ಅಯೋಧ್ಯೆಗೆ ಭೇಟಿ ನೀಡುತ್ತಿದ್ದ ಜನರಲ್ಲೂ ಅದೇ ವರ್ತನೆಯಿತ್ತು. ಯಾವ ದೇಗುಲಗಳಿಗೆ ಪ್ರವೇಶವಿದೆಯೋ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಎಲ್ಲಿ ಸರ್ಕಾರ ಪ್ರವೇಶ ನಿರ್ಬಂಧಿಸಿತ್ತೋ ಅಲ್ಲಿ ತೆರಳದೆ, ಪ್ರಶ್ನಿಸದೆ ಸುಮ್ಮನಾಗುತ್ತಿದ್ದರು. ಆದರೆ ಆರೆಸ್ಸೆಸ್, ವಿಶ್ವಹಿಂದೂ ಪರಿಷತ್ ಇತ್ಯಾದಿ ಸಂಘಟನೆಗಳ ಕಾರ್ಯಕರ್ತರು ಇಂತಹದನ್ನು ಗಮನಿಸುತ್ತಾರೆ, ದೇಶದ ಮೂಲೆಮೂಲೆ ಸುತ್ತಿ ಜಾಗೃತಿ ಮೂಡಿಸುತ್ತಾರೆ. ಆಗಲೂ ಜನತೆ ಉಪೇಕ್ಷಿಸುತ್ತಾರೆ ಅಥವಾ ಸುಮ್ಮನಿರುತ್ತಾರೆ. ಆದರೆ ಒಂದು ಹಂತದಲ್ಲಿ ಇನ್ನು ನಿರ್ಲಕ್ಷಿಸಲು ಸಾಧ್ಯವಾಗುವುದೇ ಇಲ್ಲ ಎಂಬಂತಾಗುತ್ತದೆ. ಆಗ ಇಡೀ ಸಮಾಜವೇ ಅದನ್ನು ಸ್ವಾಭಿಮಾನದ ಪ್ರಶ್ನೆಯಾಗಿ ತೆಗೆದುಕೊಳ್ಳುತ್ತದೆ.
ಆತ್ಮಗೌರವದ ಸಂಕೇತ
ಮೊದಲಿನಿಂದಲೂ ಅಯೋಧ್ಯೆಯು ರಾಮಜನ್ಮಸ್ಥಾನ ದೇಗುಲವೆಂಬುದು ಅತ್ಯಂತ ಪ್ರಮುಖ ಸಂಗತಿಯಾಗಿತ್ತು. ಅದಕ್ಕೆಂದೇ ಲೆಕ್ಕವಿಲ್ಲದಷ್ಟು ಯುದ್ಧಗಳು, ಲಕ್ಷಾಂತರ ಬಲಿದಾನಗಳು ಆಗಿಹೋಗಿವೆ. ಆದರೆ ಸುಮಾರು ನೂರೈವತ್ತು ವರ್ಷಗಳಿಂದ ಅದರ ವಿಚಾರ ಹಿಂದೂ ಜನಮಾಸನದಿಂದ ಮರೆಯಾಗಿತ್ತು – ಎಂಬುದನ್ನು ಧರ್ಮಪಾಲರು ಚರ್ಚಿಸುತ್ತಾರೆ.
ಆದರೆ ಒಮ್ಮೆ ಈ ವಿಷಯದ ಕುರಿತಾಗಿ ಅದರಲ್ಲೂ ನಮ್ಮ ಹೆಮ್ಮೆಯ, ಗೌರವದ ಸಂಕೇತಗಳು ಅನ್ಯರಿಂದ ಭಗ್ನಗೊಂಡಿರುವಂತಹ ಸಂಗತಿಗಳು ಮೇಲೇಳಲು ಶುರುವಾದರೆ ಅದನ್ನು ತಡೆಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ – ಎಂದು ಅಯೋಧ್ಯೆಯ ವಿಷಯದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಎದ್ದ ಜನಾಂದೋಲನದ ಕುರಿತು ಧರ್ಮಪಾಲರು ಅಭಿಪ್ರಾಯ ಹಂಚಿಕೊಳ್ಳುತ್ತಾರೆ.
ಅಯೋಧ್ಯೆ ದೇವಾಲಯ ನಿರ್ಮಾಣದಂತಹ ವಿಷಯಗಳು ನಮ್ಮ ಸಹಜ ಆದ್ಯತೆಗಳಾಗಬೇಕಿತ್ತೆಂಬ ಸ್ಪಷ್ಟ ನಿಲವು ಧರ್ಮಪಾಲರದು. “ನಾವು ೧೯೪೭ರಲ್ಲಿ ಸ್ವಾತಂತ್ರ್ಯವನ್ನು ಪಡೆದೆವೆಂಬುದಕ್ಕೆ ಅರ್ಥವೇನು? ದೇಶದ ಯಾವುದೋ ಮೂಲೆಯಲ್ಲಿರುವ ಹಳ್ಳಿಗನೋ, ಚಮ್ಮಾರನೋ, ಕುಶಲಕರ್ಮಿಯೋ ಯಾರೇ ಆಗಿರಲಿ ಅವನಿಗೆ ಸ್ವಾತಂತ್ರ್ಯದ ಅರಿವಾಗುವುದು ಹೇಗೆ? ಅದರ ಪರೀಕ್ಷೆ ಹೇಗೆ? ಜಿಲ್ಲೆಯ ಕಲೆಕ್ಟರನೊಬ್ಬ ಅವನೊಂದಿಗೆ ಕೈಕುಲುಕುವುದರಿಂದ ಮನವರಿಕೆ ಮಾಡಿಕೊಡಲು ಸಾಧ್ಯವೆ? ಅಥವಾ ಅವನ ಧ್ವನಿಯನ್ನು ಎಲ್ಲಿ ಆಲಿಸಲಾಗುತ್ತದೆ? ಅವನಿಗೆ ತನ್ನದೇ ಆದ ಮಾನದಂಡಗಳಿವೆ, ನಂಬಿಕೆಗಳಿವೆ. ಇಂತಹ ಜನರಿಂದಲೇ ಭಾರತವು ರೂಪಗೊಂಡಿದೆಯೇ ಹೊರತು ಯೋಜನಾ ಆಯೋಗದ ಸದಸ್ಯರುಗಳಿಂದ ಅಲ್ಲವೇ ಅಲ್ಲ.” ಇಂತಹ ಜನಸಾಮಾನ್ಯರಿಗೆ ಸ್ವಾತಂತ್ರ್ಯದ ಅನುಭವ ನೀಡುವುದು ಸೋಮನಾಥ, ಅಯೋಧ್ಯೆಯಂತಹ ದೇವಾಲಯಗಳ ಪುನರ್ನಿರ್ಮಾಣವೇ ಆಗಿದೆ.
ಸಮಸ್ಯೆ ಮುಂದೂಡುವುದು ಪರಿಹಾರವಲ್ಲ
ನಮ್ಮ ದೇಶ ಸ್ವಾತಂತ್ರ್ಯಗೊಂಡರೂ ಮಂದಿರ ಸಮಸ್ಯೆ ಪರಿಹಾರಗೊಳ್ಳಲು ಎಪ್ಪತ್ತು ವರ್ಷಗಳಾದರೂ ಏಕೆ ಸಾಧ್ಯವಾಗಲಿಲ್ಲ ಎಂಬುದರ ಕಾರಣಗಳನ್ನು ಧರ್ಮಪಾಲರ ಮಾತುಗಳಲ್ಲಿ ಕಾಣಬಹುದು.
ಭಾರತದ ಸಮಸ್ಯೆಯೆಂದರೆ ಅದು ಸಂಕೀರ್ಣವಾಗಿರುವುದು. ಇದನ್ನು ನಿರ್ವಹಿಸಲು ಕಷ್ಟ. ಈ ಸ್ಥಿತಿಗೆ ಒಬ್ಬ ವ್ಯಕ್ತಿ ಅಥವಾ ಸಂಘಟನೆಯನ್ನು ದೂಷಿಸಲು ಸಾಧ್ಯವಿಲ್ಲ. ಇಲ್ಲಿನ ಪ್ರತಿಯೊಂದಕ್ಕೂ ಅದರೊಟ್ಟಿಗೆ ಜೋಡಿಸಿಕೊಂಡ ಭೂತಕಾಲದ ಸಂಗತಿಗಳನ್ನು ಅರಿಯಲು ಸಾಧ್ಯವಿಲ್ಲದ್ದಾಗಿದೆ. ಅದನ್ನು ಇದಮಿತ್ಥಂ ಎಂದು ಅರ್ಥೈಸಲು, ಅದಕ್ಕೆ ಹೊಂದಿಕೊಂಡಂತಿರುವ ಎಲ್ಲ ಸಂಬಂಧಗಳನ್ನು ಕಂಡುಹಿಡಿಯಲು ಕಷ್ಟ. ಹೀಗಾಗಿ ಯಾವುದನ್ನೂ ಎದುರಿಸುವ ಧೈರ್ಯ ತೋರದೆ ಕೆಸರಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಅದಕ್ಕೆಂದೇ ನಾವು ಎದುರಿಸುತ್ತಿರುವ ಸಮಸ್ಯೆಯಿಂದ ಓಡಿ ಹೋಗುವ ಅಥವಾ ವಿಶ್ವಸಂಸ್ಥೆ ಇತ್ಯಾದಿ ಅಂತರರಾಷ್ಟ್ರೀಯ ಸಂಸ್ಥೆಗಳ ತೆಕ್ಕೆಗೆ ಹಾಕಿ ಸುಮ್ಮನಾಗುವುದೇ ಉಚಿತ ಎಂದು ಕೊಂಡುಬಿಟ್ಟಿದ್ದೇವೆ. ಅಯೋಧ್ಯೆ ಮಂದಿರದ ಕುರಿತು ಖಚಿತ ತೀರ್ಮಾನಕ್ಕೆ ಈ ಹಿಂದೆ ಬರಲಾಗದೇ ಇರುವುದಕ್ಕೆ ಇದೇ ಕಾರಣ.
ಮಂದಿರ ಸಮಾಜದ ಪುರುಷಾರ್ಥ
ಅಯೋಧ್ಯೆಯಲ್ಲಿ ಮಂದಿರ ಬೇಕೆ? ಬೇಡವೆ? ಅದಕ್ಕೆ ಹಿಂದು ಸಮಾಜ ಪ್ರಯತ್ನಿಸಬೇಕೆ ಅಥವಾ ಬೇಡವೆ? – ಎಂಬ ಬಗ್ಗೆ ಧರ್ಮಪಾಲರಲ್ಲಿ ಯಾವುದೇ ಗೊಂದಲವಿಲ್ಲ. ಅವರು ಇಸ್ಲಾಮಿನ ಆಕ್ರಮಣಕಾರಿ ಗುಣವನ್ನು ಉಲ್ಲೇಖಿಸುತ್ತಾ ಇದನ್ನು ಸ್ಪಷ್ಟಪಡಿಸುತ್ತಾರೆ. ಏಳನೇ ಶತಮಾನದಲ್ಲಿ ಪ್ರವಾದಿ ಮೊಹಮದ್ ತೀರಿಕೊಂಡ ೫೦ ವರ್ಷಗಳೊಳಗೆ ಇಸ್ಲಾಂ ಸ್ಪೇನ್ ಅನ್ನು ಆಕ್ರಮಿಸಿಕೊಂಡಿತು. ಸಿಂಧ್ ಅನ್ನು ತಲಪಿತು. ಇವನ್ನು ಮಾಡಲು ಅವರು ಅತ್ಯಾಧುನಿಕ ತಂತ್ರಜ್ಙಾನವನ್ನು ಹೊಂದಿದ್ದರೆಂಬುದು ಕಾರಣವಲ್ಲ. ಬದಲಾಗಿ ತಮ್ಮ ಮತವನ್ನು ಹರಡುವ ಅತ್ಯುತ್ಸಾಹವೇ ಅವರನ್ನು ಈ ರೀತಿ ಮಾಡಿಸಿತು.
ಹಾಗೆಯೇ ನಾವು ಉತ್ತಮ ಜೀವನಸ್ತರದಲ್ಲಿ ಬದುಕುತ್ತಿರಬಹುದು, ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿರಬಹುದು, ಆರ್ಥಿಕ ಸಬಲತೆಯೂ ಇರಬಹುದು. ಅದರೆ ಅವೆಲ್ಲಾ ಪರಿಗಣನೆಗೆ ಬರುವುದಿಲ್ಲ. ನಾವು ನಮ್ಮದೇ ಆದ ಸ್ವಂತಿಕೆಯನ್ನು ಹೊಂದಿದ್ದೇವೆಯೆ? ನಮ್ಮ ಚೈತನ್ಯ ಯಾವುದು? ನಮಗೆ ಏನು ಬೇಕು? ನಮಗೆ ನಮ್ಮದೇ ಜ್ಞಾನ ಪರಂಪರೆ ಇದೆಯೆ? ನಾವು ಭಾರತೀಯರಾಗಿ ಜಗತ್ತಿನ ಮುಂದೆ ನಮ್ಮನ್ನು ಪ್ರಸ್ತುತಪಡಿಸಿಕೊಳ್ಳಲು ಸಾಧ್ಯವೆ? ಇದನ್ನು ನಾವು ಸಾಧಿಸದಿದ್ದರೆ ನಾವು ಸೋಲನ್ನು ಒಪ್ಪಿಕೊಳ್ಳಬೇಕು. ನಮ್ಮದೆಲ್ಲವನ್ನೂ ನಾವು ಬಿಟ್ಟುಕೊಡಬೇಕು. ಏಕೆಂದರೆ ಜಗತ್ತು ಏನೂ ಸಾಧಿಸದೇ ಸುಮ್ಮನಿರುವವರದಲ್ಲ, ಯಾವುದನ್ನೂ ಬಯಸದೇ ಇರುವವರದೂ ಅಲ್ಲ, ಅಥವಾ ಸತ್ತ್ವರಹಿತರಾಗಿ ಬೇರೆಯವರನ್ನು ಅನುಕರಿಸಿಕೊಂಡು ಹೋಗುವವರದೂ ಅಲ್ಲ.
ಅಯೋಧ್ಯೆಯೊಂದೇ ಅಲ್ಲ
ಧರ್ಮಪಾಲರು ಪ್ರಾಚೀನ ಹಿಂದು ದೇವಾಲಯಗಳ ಮರುನಿರ್ಮಾಣದ ಕುರಿತು ಆಗಿನ ಹಿಂದು ರಾಜಕೀಯ ನಾಯಕರ ನಿಲವುಗಳನ್ನು ಪ್ರಶ್ನಿಸುತ್ತಾರೆ. ದೆಹಲಿಯ ಸಭೆಯೊಂದರಲ್ಲಿ ಬಾಬರಿ ಕಟ್ಟಡವನ್ನು ಸ್ಥಳಾಂತರಿಸಲು ಮುಸಲ್ಮಾನರು ಒಪ್ಪಿಕೊಂಡರೆ ಸಾಕು. ಮಸೀದಿಗಳಾಗಿರುವ ಮತ್ಯಾವ ದೇವಾಲಯವನ್ನು ತೆರವುಗೊಳಿಸುವಂತೆ ನಾವು ಬೇಡಿಕೆ ಇಡುವುದಿಲ್ಲ ಎಂದು ಲಾಲ್ ಕೃಷ್ಣ ಅಡ್ವಾಣಿಯವರು ಹೇಳಿಕೆ ನೀಡಿದುದನ್ನು ಧರ್ಮಪಾಲರು ಸರಿಯಿಲ್ಲವೆಂದು ಉಲ್ಲೇಖಿಸುತ್ತಾರೆ. ಈ ರೀತಿಯ ಹೇಳಿಕೆ ನೀಡಲು ನೀವು ಯಾರು? ಈಗಿನ ರಾಜಕೀಯ ನಾಯಕರ ಅಭಿಪ್ರಾಯ ಏನೇ ಇರಲಿ, ಯಾವ ಪತ್ರಿಕೆಗಳ ಸಂಪಾದಕರುಗಳು ಏನೇ ಬರೆಯಲಿ, ಅವೆಲ್ಲ ಮುಖ್ಯವಲ್ಲ. ನಿಜವೆಂದರೆ ಸ್ವಾತಂತ್ರ್ಯಪೂರ್ವ ಜನಿಸಿದವರ ಭಾವನೆಗಳಿಗಿಂತ ಮುಂದಿನ ಕೆಲವರ್ಷಗಳಲ್ಲಿ ಸ್ವಾತಂತ್ರ್ಯಾನಂತರ ಜನಿಸಿದವರ ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯ ಸಿಗಬೇಕಾಗುತ್ತದೆ – ಎಂಬುದು ಧರ್ಮಪಾಲರ ಅಭಿಮತ.
ಬಹುಶಃ ದೇಶವಿಭಜನೆಗೆ ಒಪ್ಪಿ ಸ್ವಾತಂತ್ರ್ಯ ಪಡೆದ ಅಂದಿನ ನಾಯಕರ ಪರಿಸ್ಥಿತಿಯೂ, ಅಯೋಧ್ಯೆಯ ದೇವಾಲಯ ಒಂದನ್ನು ಕೊಡಿ ಮಿಕ್ಕ ಆಕ್ರಮಣಕ್ಕೊಳಗಾಗಿರುವ ಇತರ ದೇವಾಲಯಗಳ ತಂಟೆಗೆ ಬರುವುದಿಲ್ಲ ಎಂಬ ಎರಡೂ ವಿಭಿನ್ನ ಕಾಲಘಟ್ಟಗಳ ಮನೋಭಾವದಲ್ಲಿ ಸ್ವಲ್ಪಮಟ್ಟಿನ ಸಾಮ್ಯ ಅವರ ತೀಕ್ಷಣ ಗ್ರಹಿಕೆಗೆ ಕಂಡುಬಂದಿರಬೇಕು.
ಧರ್ಮ ಮತ್ತು ರಾಜಕಾರಣ
ಯೂರೋಪಿನ ಮತ ಮತ್ತು ಅಧಿಕಾರದ ಕಲ್ಪನೆಗಳನ್ನು ಭಾರತದ ಧರ್ಮ ಮತ್ತು ರಾಜಕೀಯಕ್ಕೆ ಹೋಲಿಸಿ ಅವೆರಡನ್ನೂ ಬೇರೆ ಬೇರೆ ಎಂದು ನೋಡಬೇಕು ಎಂಬ ಭಾವನೆಯೂ ಅಯೋಧ್ಯೆಯ ಜನ್ಮಸ್ಥಾನದ ಸಮಸ್ಯೆಯನ್ನು ಕಠಿಣಗೊಳಿಸಿತು. ಇದನ್ನು ಧರ್ಮಪಾಲರು ದೇಶೀಯ ಪರಂಪರೆಯ ನೆಲೆಯಲ್ಲಿ ಸ್ಪಷ್ಟಪಡಿಸುತ್ತಾರೆ. “ಧರ್ಮ ಮತ್ತು ರಾಜಕೀಯ ಅಥವಾ ಆಡಳಿತ ಬೇರೆಬೇರೆಯೇ? ಇದನ್ನು ನಿರ್ಧರಿಸಲು ನಾವು ಯಾರು? ಸಾವಿರಾರು ವರ್ಷಗಳಿಂದ ಇಲ್ಲಿ ರಾಜಕೀಯ ಮತ್ತು ಧರ್ಮಗಳು ಬೆರೆತಿದ್ದರೆ, ಅಥವಾ ಇತರ ವಿಷಯಗಳೊಂದಿಗೆ ಹಾಸುಹೊಕ್ಕಾಗಿದ್ದರೆ, ಅದನ್ನು ಬದಲಿಸಲು ಏಕೆ ಯೋಚಿಸಬೇಕು? ನಾವು ಮಹಾನ್ ಪ್ರವಾದಿಗಳು, ಸಂತರು, ಋಷಿಗಳನ್ನು ಹೊಂದಿದ್ದೇವೆ, ಬರೇ ಭಾರತದಲ್ಲಿ ಮಾತ್ರವಲ್ಲ, ಇತರೆಡೆಗಳಲ್ಲೂ ಇಂತಹ ವ್ಯಕ್ತಿಗಳನ್ನು ಕಾಣಬಹುದು. ಆದರೆ ಇಂತಹವರು ಸಹ ಧರ್ಮದ ಜೊತೆಗೆ ಇರುವ ಮಾನವಸಹಜ ಗುಣವನ್ನು ಬದಲಾಯಿಸಲು ಹೋಗಲಿಲ್ಲ. ಏಕೆಂದರೆ ಅದು ಸಾಧ್ಯವಿಲ್ಲ ಮತ್ತು ಸಮರ್ಥನೀಯವೂ ಅಲ್ಲ.”
ಯೂರೋಪಿಯನ್ನರ ಆಲೋಚನೆಯ ಜಗತ್ತಿನಲ್ಲಿ ರಿಲಿಜಿಯನ್ ಮತ್ತು ರಾಜಕೀಯದ ನಡುವೆ ಸಮಸ್ಯೆಗಳೇನೇ ಇದ್ದಿರಬಹುದು, ಅದು ಅವರಿಗೆ ಉಪಯುಕ್ತವಾಗಿ ಕಂಡಿದ್ದೂ ಇರಬಹುದು. ಹಾಗಿದ್ದ ಮಾತ್ರಕ್ಕೆ ರಾಜಕೀಯ ವ್ಯವಸ್ಥೆಯನ್ನು ಯೂರೋಪಿಯನ್ನರ ಪಡಿಯಚ್ಚಿನಂತೆ ನಿರ್ಮಿಸಿಕೊಳ್ಳುವುದು ಅನುಕರಣೀಯವೂ ಅಲ್ಲ, ಅರ್ಥಪೂರ್ಣವೂ ಅಲ್ಲ – ಎನ್ನುವುದು ಧರ್ಮಪಾಲರ ಸ್ಪಷ್ಟ ನಿಲವಾಗಿತ್ತು.
ಹಾಗಾಗಿ ಗಾಂಧಿಯವರಂತೆಯೇ ಶುದ್ಧ ರಾಜಕಾರಣವೊಂದರಲ್ಲಿ ಪರಂಪರೆ, ಶ್ರದ್ಧೆ, ಆಚಾರ, ಸಂಪ್ರದಾಯ – ಇವುಗಳ ಮಹತ್ತ್ವವನ್ನು ಧರ್ಮಪಾಲ್ ಗಂಭೀರವಾಗಿ ಪರಿಗಣಿಸಿದ್ದರು. ತತ್ಪರಿಣಾಮವಾಗಿ ಭಾರತದ ರಾಜಕಾರಣಕ್ಕೂ ಮತ್ತು ಜನರ ಜೀವನಕ್ಕೂ ಇರಬಹುದಾದ ಸಂಬಂಧಗಳ ಕುರಿತು ಅವರ ನಿಲವುಗಳು ಭಿನ್ನವೂ ಸ್ಪಷ್ಟವೂ ಮತ್ತು ನಿಖರವೂ ಆಗಿದ್ದವು. ಈ ಕಾರಣಕ್ಕಾಗಿಯೇ ಧರ್ಮಪಾಲರ ಸೆಕ್ಯುಲರ್ ಶಿಷ್ಯರಿಗೆ ಅನೇಕ ಬಾರಿ ಧರ್ಮಪಾಲರನ್ನು ಕಂಡು ಕಸಿವಿಸಿಯಾಗುತ್ತಿದ್ದುದು ಕೂಡಾ ಇದ್ದೇ ಇದೆ.
ಕೊರತೆ ಇದ್ದದ್ದು ಇಚ್ಛಾಶಕ್ತಿಯಲ್ಲಿ
ಸ್ವಾತಂತ್ರ್ಯಾನಂತರದಲ್ಲಿ ಅಧಿಕಾರ ಹಿಡಿದ ಆರಂಭದ ಪಕ್ಷಗಳಿಂದ ಹಿಡಿದು ಬಹುತೇಕ ರಾಜಕೀಯ ನೇತೃತ್ವಗಳು ದೇಶ ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟದ್ದು ಕಡಮೆ. ಅದರಲ್ಲೂ ದೇಶದ ಆಂತರಿಕ ವಿಷಯಗಳ ಕುರಿತು ಒಂದೋ ಆಮೂಲಾಗ್ರ ಪರಿಹಾರ ತರುವ ಯೋಚನೆಯನ್ನೇ ನಾಯಕರು ಬಿಟ್ಟುಬಿಟ್ಟಿದ್ದರು. ಅಥವಾ ಜಾತ್ಯತೀತ, ತುಷ್ಟೀಕರಣ, ಅರೆಬರೆ ಸಮಾಜವಾದ, ಅರೆಬರೆ ಗಾಂಧಿವಾದ ಇತ್ಯಾದಿಗಳ ಗುಂಗಿನಲ್ಲಿ ಬಿದ್ದು ಸಮಸ್ಯೆಗಳಿಗೆ ಯಾವುದೇ ಸೂಕ್ತ ಸಮಾಧಾನಗಳನ್ನು ಕಂಡುಕೊಳ್ಳಲು ಆಡಳಿತಗಾರರಿಗೆ ಸಾಧ್ಯವೇ ಆಗಲಿಲ್ಲ. ರಾಜಕೀಯ ಪಕ್ಷಗಳು ಕೇವಲ ಅಸ್ತಿತ್ವ ಉಳಿಸಿಕೊಳ್ಳುವುದರ ಕುರಿತು ಮತ್ತು ನಾಯಕರುಗಳು ಅಧಿಕಾರ ಉಳಿಸಿಕೊಳ್ಳುವುದರ ಕುರಿತು ಮಾತ್ರ ಯೋಚಿಸುತ್ತಿದ್ದುದರಿಂದ ‘ಎತ್ತು ಹೋದ ದಿಕ್ಕಿಗೆ ಗಾಡಿ’ ಎಂಬಂತೆ ದೇಶದ ಸ್ಥಿತಿ ಆಗಿತ್ತು. ಅದರಲ್ಲೂ ಭಾರತೀಯ ಧ್ವನಿಯನ್ನು ಗುರುತಿಸುತ್ತಿದ್ದುದಕ್ಕಿಂತ ದಮನಿಸುತ್ತಿದ್ದುದೇ ಹೆಚ್ಚು.
ಇದರ ಕುರಿತು ಧರ್ಮಪಾಲರು ಹೇಳುತ್ತಾರೆ: “ದೇಶದ ಆಡಳಿತ ನಡೆಸುವ ಮಹತ್ತರ ಸ್ಥಾನಗಳಲ್ಲಿರುವವರು ಜನರಿಂದ ದೂರವಾಗಿಬಿಟ್ಟಿದ್ದಾರೆ. ಇಲ್ಲಿ ಎರಡು ದೇಶಗಳು ಗೊತ್ತಿಲ್ಲದೇ ಸೃಷ್ಟಿಯಾಗಿವೆ. ಜಗತ್ತಿನ ಬೇರೆ ದೇಶಗಳಿಗೆ ಬೇಕಾಗುವ ಮಾನವಸಂಪನ್ಮೂಲ ಒದಗಿಸುವ ನಿಟ್ಟಿನಲ್ಲಿ ಯೋಚಿಸುತ್ತಾ ವಿಶ್ವಮಾನವರಾಗುವ ಹುಚ್ಚು ಬೆಳೆಸಿಕೊಂಡಿದ್ದೇವೆ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳದೇ, ನಾವು ಜಗತ್ತಿನ ಇತರ ದೇಶಗಳ ಕೃಪೆಯಿಂದ ಹಾಗೋ ಹೀಗೋ ಉಳಿದುಕೊಳ್ಳಲು ಯತ್ನಿಸುತ್ತಿದ್ದೇವೆಯೇ ಹೊರತು ಬೆಳೆಯಲು ಅಲ್ಲ. ಇಂತಹ ಸ್ಥಿತಿಯಲ್ಲಿ ಜನರೇ ಕೆಲವೊಮ್ಮೆ ಪರಿಸ್ಥಿತಿಯನ್ನು ಕೈಗೆತ್ತಿಕೊಂಡು ದೇಶಕ್ಕೆ ದಾರಿ ತೋರುತ್ತಾರೆ.” ಬಹುಶಃ ಅಯೋಧ್ಯೆಯ ವಿಷಯದಲ್ಲಿಯೂ ಇದೇ ಆಗಿದ್ದು.
ಆಮೂಲಾಗ್ರ ಚಿಂತನೆ
ಧರ್ಮಪಾಲರು ದಾಖಲಿಸುವಂತೆ ಬ್ರಿಟಿಷರು ಬರಿ ಸಂಪತ್ತನ್ನು ಕೊಳ್ಳೆಹೊಡೆದದ್ದಲ್ಲ. ಅವರ ದೇಶ ನಡೆಸುವ ಶೈಲಿಯೇ ಅಹಿತಕರವಾಗಿತ್ತು. ಪ್ರಜೆಗಳು ತಮ್ಮ ವಿರೋಧಿ ಅಭಿಪ್ರಾಯ, ಅತೃಪ್ತಿ, ಅಸಮಾಧಾನಗಳನ್ನು ನುಂಗಿಕೊಳ್ಳಬೇಕಾದ ಅಥವಾ ಹೊರಹಾಕಲು ಅಸಾಧ್ಯವಾದ ಪರಿಸ್ಥಿತಿಯನ್ನು ಅವರು ಸೃಷ್ಟಿ ಮಾಡಿಟ್ಟರು. ಒಂದುವೇಳೆ ಹಾಗೆ ಹೊರಬಂದಂಥವುಗಳನ್ನು ದಮನಿಸುವುದೇ ಪರಿಸ್ಥಿತಿಯನ್ನು ಹತೋಟಿಗೆ ತರುವ ಸುಲಭ ವಿಧಾನ ಎಂದು ಅವರು ಭಾವಿಸಿದ್ದರು. ಭಾರತೀಯರನ್ನು ನಿಯಂತ್ರಿಸಲು ಅವರು ಕ್ರೆöÊಸ್ತೀಕರಣ, ಪಾಶ್ಚಾತ್ಯೀಕರಣ ಮತ್ತು ಇಂಡೋ-ಯೂರೋಪಿಯನ್ ಭ್ರಾತೃತ್ವ ಇತ್ಯಾದಿ ವಿಧವಿಧವಾಗಿ ಪ್ರಯತ್ನಿಸಿದರು. ಅದಾವುದೂ ಭಾರತೀಯರ ಮೇಲೆ ಪರಿಣಾಮಮ ಬೀರದೇಹೋಯಿತು. ಆದರೂ ಸುವ್ಯವಸ್ಥೆಯ ನೆಪದಲ್ಲಿ ಬ್ರಿಟಿಷರು ಏನೊಂದು ಸಂಗತಿಯೂ ಸುಲಭದಲ್ಲಿ ಕಾರ್ಯಗತವಾಗದಂತಹ ವ್ಯವಸ್ಥೆಯನ್ನು ಭಾರತದಲ್ಲಿ ಸೃಷ್ಟಿಸಿ ಹೋದರು. ೧೯೪೭ರ ನಂತರವೂ ನಮ್ಮದೇ ಆಡಳಿತಗಾರರು ಅದನ್ನು ಮುಂದುವರಿಸಿದರು. ಹೀಗಾಗಿ ರಾಮಜನ್ಮಭೂಮಿಯ ಬಗ್ಗೆ ಮಾತನಾಡುವವರ ಧ್ವನಿಯನ್ನು ಉಡುಗಿಸುವ ಪ್ರಯತ್ನಗಳಾಯಿತೇ ಹೊರತು ಗಮನಿಸುವ ಯೋಚನೆಯನ್ನೇ ಮಾಡಲಿಲ್ಲ.
ನೇತೃತ್ವ ಚಿಂತನೆಯಲ್ಲಿ ಬದಲಾವಣೆ
ಧರ್ಮಪಾಲರ ವಿಚಾರಚಿಂತನೆಗಳು ಬರೀ ಅಯೋಧ್ಯೆಯ ವಿಷಯವಲ್ಲ; ಬದಲಾಗಿ ದೇಶದ ಎಲ್ಲ ಸಂಗತಿ, ಸಮಸ್ಯೆಗಳನ್ನು ನೋಡುವ ದೃಷ್ಟಿಕೋನವನ್ನೂ ಅದನ್ನು ಪರಿಹರಿಸಲು ಹೊಂದಿರಬೇಕಾದ ಮಾನಸಿಕತೆಯನ್ನೂ ತಿಳಿಸಿಕೊಡುತ್ತವೆ. ನಮ್ಮನ್ನು ಆಳಿದ ವಸಾಹತುಶಾಹಿ ಶಕ್ತಿಗಳಿಂದ ನಮ್ಮ ಆಲೋಚನೆಗಳನ್ನು ಬಿಡಿಸಿಕೊಂಡು ನಮ್ಮದೇ ಚಿಂತನೆಗಳ ಆಧಾರದ ಮೇಲೆ ಆಡಳಿತ ನಡೆಸಬೇಕಿದೆ.
ಈ ಹಿನ್ನೆಲೆಯಲ್ಲಿ ಧರ್ಮಪಾಲರಿಗೆ ಅಯೋಧ್ಯೆ ಆಂದೋಲನವು ಒಂದು ದೇವಸ್ಥಾನವನ್ನು ಕಟ್ಟುವ, ಮಸೀದಿಯನ್ನು ಒಡೆಯುವ ವಿಷಯವಾಗಿರಲಿಲ್ಲ. ಬದಲಿಗೆ ಶತಮಾನಗಳಿಂದ ತನ್ನ ಸ್ವಂತಿಕೆಯನ್ನು ವ್ಯಕ್ತಪಡಿಸಲಾಗದೆ ಹತಾಶಗೊಂಡ ಸಂಸ್ಕೃತಿಯೊಂದು ಹೊಸ ಚೈತನ್ಯದಿಂದ ತನ್ನದೇ ಆದ ರೀತಿ-ನೀತಿಗಳನ್ನು ರೂಪಿಸಿಕೊಂಡು ಯಾವುದೇ ಪರಕೀಯ ಚಿಂತನೆಗೆ ಮಣಿಯದೆ ಮುನ್ನುಗ್ಗಲು ಹೊರಟಿರುವ ಕಾರ್ಯಸೂಚಿಯ ಮುನ್ನಡಿಯಾಗಿತ್ತು.
ಧರ್ಮಪಾಲರು ಇದನ್ನು ೧೯೯೨ರಲ್ಲಿಯೇ ಗುರುತಿಸಿರುವ ರೀತಿ ಅವರನ್ನೊಬ್ಬ ಕೇವಲ ಗಾಂಧಿವಾದಿಯನ್ನಾಗಿಸುವುದಿಲ್ಲ. ಬದಲಿಗೆ ಭಾರತದ ಅಂತಃಸತ್ತ್ವವನ್ನು ಗ್ರಹಿಸಿ ಅದರ ಮೇಲೆ ಈ ಅಂತಃಸತ್ತ್ವದ ಪ್ರತಿಕ್ರಿಯೆಯ ಭವಿಷ್ಯವನ್ನು ಗುರುತಿಸಿ, ಅದರ ಕುರಿತು ವ್ಯಾಖ್ಯಾನಿಸಬಲ್ಲ ದ್ರಷ್ಟಾರರಾಗಿದ್ದರು ಅವರು ಎನ್ನುವುದನ್ನು ತಿಳಿಸುತ್ತದೆ.
ಧರ್ಮಪಾಲರಿಗೆ ರಾಮಜನ್ಮಭೂಮಿಯ ವಿವಾದ ಕೇವಲ ರಾಮನಿಗೋಸ್ಕರ ಭಾರತೀಯರು ಪ್ರತಿಭಟಿಸುತ್ತಿರುವ ಕಥೆಯೋ ಅಥವಾ ಒಡೆದುಹಾಕಿದ ದೇವಸ್ಥಾನವೊಂದನ್ನು ಪುನಃ ಕಟ್ಟಿಬಿಡುವ ಹಪಾಹಪಿಯೋ ಆಗಿರಲಿಲ್ಲ. ಬದಲಿಗೆ ಸಾವಿರಾರು ವರ್ಷಗಳ ಕಾಲ ತುಳಿತಕ್ಕೊಳಗಾದ ಸಂಸ್ಕೃತಿಯೊಂದು ಮೈಕೊಡವಿ ಪುಟಿದೆದ್ದು ತನ್ನತನವನ್ನು ಅಭಿವ್ಯಕ್ತಿಸಿಕೊಳ್ಳುತ್ತಿರುವ ನವನವೀನ ಕಥೆ ಇದಾಗಿತ್ತು.
***
ಒಂದು ಕಡೆ ಮುಸ್ಲಿಮರನ್ನು ಶೌರ್ಯವಂತರೆಂದೂ ಆಡಳಿತವನ್ನು ಮಾಡಲು ಭಾರತೀಯರಿಗೆ ಹೇಳಿಕೊಡುವವರೆಂದೂ ಬಿಂಬಿಸುತ್ತಲೇ ಮತ್ತೊಂದೆಡೆ ಹಿಂದುಗಳನ್ನು ಹೇಡಿಗಳು, ತಮ್ಮನ್ನು ತಾವು ಆಳಿಕೊಳ್ಳಲು ಶಕ್ತಿ ಇಲ್ಲದವರು, ಪರಕೀಯರ ಕೆಳಗೆ ಮಾತ್ರ ವ್ಯವಸ್ಥಿತವಾಗಿ ಬದುಕಬಲ್ಲವರು ಇತ್ಯಾದಿಯಾಗಿ ಚಿತ್ರಿಸುವುದನ್ನು ಧರ್ಮಪಾಲರು ಪ್ರಬಲವಾಗಿ ತಿರಸ್ಕರಿಸುತ್ತಿದ್ದರು.