ಧರ್ಮಪಾಲ್ ಓರ್ವ ಗಾಂಧಿ ಅನುಯಾಯಿ. ಸರಳವಾಗಿ ಹೇಳುವ ಗಾಂಧಿವಾದಿ ಎನ್ನುವ ಕಲ್ಪನೆಗಿಂತ ಎತ್ತರದವರು. ಅವರೇ ಹೇಳಿಕೊಳ್ಳುವಂತೆ “ಗಾಂಧಿಯುಗದ ಓರ್ವ ಶಿಶು.” ಇದಕ್ಕೆ ಅವರು ನೀಡಿದ ಕಾರಣ ತನ್ನ ಜೀವಿತದ ಮೊದಲ ಇಪ್ಪತ್ತೈದು ವರ್ಷಗಳನ್ನು ಗಾಂಧಿಯವರ ಗಾಢ ಪ್ರಭಾವವಿದ್ದ ಕಾಲಘಟ್ಟದಲ್ಲಿ ಕಳೆದಿದ್ದೇನೆ ಎನ್ನುತ್ತಾರೆ. ಈ ಅರ್ಥದಲ್ಲಿ ಧರ್ಮಪಾಲ್ ಮಹಾತ್ಮ ಗಾಂಧಿಯವರಿಂದ ತೀವ್ರ ಪ್ರಭಾವಕ್ಕೆ ಒಳಗಾದವರು. ಅವರ ನಂಬಿಕೆ, ಆಲೋಚನೆ, ಭಾವನೆಗಳಲ್ಲಿ ಗಾಂಧಿಯವರ ನಡೆ-ನುಡಿಗಳ ಪ್ರಭಾವವಿದೆ. ಇಂತಹ ಧರ್ಮಪಾಲ್ ಗಾಂಧಿ ವಿಚಾರಗಳ ಕುರಿತು ಬಹಳ ಆಳವಾದ ವಿಚಾರ ವಿಮರ್ಶೆಯನ್ನು ಮಾಡುತ್ತಾರೆ, ಅಷ್ಟೇ ಅಲ್ಲ, ಇಂದಿಗೂ ಕೂಡ ನಿಜವಾದ ಗಾಂಧಿವಾದಿ ಎಂದು ಪಟ್ಟಿ ಮಾಡಬಹುದಾದ ಚಿಂತಕರಲ್ಲಿ ಧರ್ಮಪಾಲ್ರವರು ಅಗ್ರಮಾನ್ಯ ಸಾಧನೆ ಮಾಡಿದ್ದಾರೆ.
ಭಾರತವನ್ನು ಅರಿತುಕೊಳ್ಳಲು ಇರುವ ದಾರಿ ಯಾವುದು? – ಎನ್ನುವುದು ಒಂದು ಮುಖ್ಯ ಪ್ರಶ್ನೆಯೇ ಆಗಿದೆ. ಯಾವುದನ್ನು ತಿಳಿದರೆ, ಯಾರನ್ನು ತಿಳಿದರೆ ಭಾರತವನ್ನು ತಿಳಿದಂತೆ ಆಗಬಹುದು? – ಎಂದು ಕೇಳಿದರೆ ನಮ್ಮ ಮನಸಿನಲ್ಲಿ ಹಲವು ವಿಷಯಸರಣಿಗಳು ಹಾದುಹೋಗಬಹುದು. ಅನೇಕ ವಿದ್ವಾಂಸರು ಸಾಂದರ್ಭಿಕವಾಗಿ ಭಾರತವನ್ನು ಅರಿಯುವ ದಾರಿಯನ್ನು ಕುರಿತಾಗಿ ತಮ್ಮ ಚಿಂತನೆಯನ್ನು ಮಂಡಿಸಿದ್ದಾರೆ. ಭಾರತದ ಕುರಿತಾದ ನಮ್ಮ ಗ್ರಹಿಕೆಯಲ್ಲಿ ಕೆಲವೊಂದು ದೋಷಗಳಿವೆ ಎನ್ನುವುದನ್ನೂ ಹಲವು ವಿದ್ವಾಂಸರು ಎತ್ತಿತೋರಿದ್ದಾರೆ. ಮುಖ್ಯವಾಗಿ ಇಂತಹ ದೋಷಗಳಿಗೆ ಕಾರಣ ಎಂದರೆ ನಾವು ಭಾರತವನ್ನು ನಮ್ಮದಲ್ಲದ ಅಂದರೆ ಪರಕೀಯ ಕಣ್ಣುಗಳಿಂದ ನೋಡುವ ಪ್ರಯತ್ನದಲ್ಲಿದ್ದೆವು. ನಾವು ನಮ್ಮದೆಂದು ಭಾವಿಸಿದ ಚಿತ್ರಗಳು ನಮ್ಮವಾಗಿರಲಿಲ್ಲ; ಅವು ನಮ್ಮನ್ನು ಗುಲಾಮರನ್ನಾಗಿ ಆಳಲು ಬಂದವರು ಕಟ್ಟಿದ ಕಥನಗಳಾಗಿತ್ತು. ಆ ಕಥನಗಳು ನಮ್ಮನ್ನು ಕಪ್ಪು-ಬಿಳುಪಾಗಿ, ಅನೇಕ ಸಲ ನಕಾರಾತ್ಮಕವಾಗಿ ಚಿತ್ರಿಸಿರುವುದು ಕೂಡ ಸತ್ಯ. ಈ ಚಿತ್ರಣಗಳನ್ನೆ ನಾವು ನಮ್ಮ ನೈಜ ಚಿತ್ರವೆಂದು ಭಾವಿಸಿ ನಮ್ಮ ಬಗ್ಗೆ ನಾವೇ ಕೀಳರಿಮೆಯನ್ನೂ ಅನುಭವಿಸಿದ್ದೇವೆ. ಇತ್ತೀಚಿನ ಕೆಲವು ದಶಕಗಳಲ್ಲಿ ನಮ್ಮನ್ನು ಆವರಿಸಿರುವ ಈ ಪರಕೀಯ ಪ್ರಜ್ಞೆಯನ್ನು ಹೋಗಲಾಡಿಸಿ ನಮ್ಮತನದ ಮರುಶೋಧಕ್ಕಾಗಿ ಅನೇಕ ವಿದ್ವಾಂಸರು ಪರಿಶ್ರಮಿಸಿದ್ದಾರೆ. ಅಂತಹ ವಿದ್ವಾಂಸರಲ್ಲಿ ಧರ್ಮಪಾಲ್ ಓರ್ವ ಮಹತ್ತ್ವದ ವ್ಯಕ್ತಿಯಾಗಿದ್ದಾರೆ.
ಧರ್ಮಪಾಲ್ ಓರ್ವ ಗಾಂಧಿ ಅನುಯಾಯಿ. ಸರಳವಾಗಿ ಹೇಳುವ ಗಾಂಧಿವಾದಿ ಎನ್ನುವ ಕಲ್ಪನೆಗಿಂತ ಎತ್ತರದವರು. ಅವರೇ ಹೇಳಿಕೊಳ್ಳುವಂತೆ “ಗಾಂಧಿಯುಗದ ಓರ್ವ ಶಿಶು.” ಇದಕ್ಕೆ ಅವರು ನೀಡಿದ ಕಾರಣ ತನ್ನ ಜೀವಿತದ ಮೊದಲ ಇಪ್ಪತ್ತೈದು ವರ್ಷಗಳನ್ನು ಗಾಂಧಿಯವರ ಗಾಢ ಪ್ರಭಾವವಿದ್ದ ಕಾಲಘಟ್ಟದಲ್ಲಿ ಕಳೆದಿದ್ದೇನೆ ಎನ್ನುತ್ತಾರೆ. ಈ ಅರ್ಥದಲ್ಲಿ ಧರ್ಮಪಾಲ್ ಮಹಾತ್ಮ ಗಾಂಧಿಯವರಿಂದ ತೀವ್ರ ಪ್ರಭಾವಕ್ಕೆ ಒಳಗಾದವರು. ಅವರ ನಂಬಿಕೆ, ಆಲೋಚನೆ, ಭಾವನೆಗಳಲ್ಲಿ ಗಾಂಧಿಯವರ ನಡೆ-ನುಡಿಗಳ ಪ್ರಭಾವವಿದೆ. ಇಂತಹ ಧರ್ಮಪಾಲ್ ಗಾಂಧಿ ವಿಚಾರಗಳ ಕುರಿತು ಬಹಳ ಆಳವಾದ ವಿಚಾರ ವಿಮರ್ಶೆಯನ್ನು ಮಾಡುತ್ತಾರೆ. ಅಷ್ಟೇ ಅಲ್ಲ, ಇಂದಿಗೂ ಕೂಡ ನಿಜವಾದ ಗಾಂಧಿವಾದಿ ಎಂದು ಪಟ್ಟಿ ಮಾಡಬಹುದಾದ ಚಿಂತಕರಲ್ಲಿ ಧರ್ಮಪಾಲ್ರವರು ಅಗ್ರಮಾನ್ಯ ಸಾಧನೆ ಮಾಡಿದ್ದಾರೆ. ಗಾಂಧಿಯ ಪ್ರಸ್ತುತತೆ ಏನು, ಗಾಂಧಿಯನ್ನು ಗಾಂಧಿಯುಗ ಮತ್ತು ಗಾಂಧಿ ಕಾಲಾನಂತರದ ವ್ಯವಸ್ಥೆ ಹೇಗೆ ನಡೆಸಿಕೊಂಡಿದೆ – ಎನ್ನುವುದರ ಕುರಿತ ನಡೆಸಿದ ಚಿಂತನಪೂರ್ಣ ವಿಶ್ಲೇಷಣೆಯೇ “Understanding Gandhi” ಕೃತಿ. ಗಾಂಧಿಯನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಇದು ಇಂದಿಗೂ ಬಹು ಕಠಿಣವಾದ ಸವಾಲು ಕೂಡ ಹೌದು. ಬಹುತೇಕ ಭಾರತೀಯರು (ಅದರಲ್ಲಿ ತಮ್ಮನ್ನು ತಾವು ಗಾಂಧಿವಾದಿಗಳೆಂದು ಕರೆದುಕೊಳ್ಳುವವರೂ ಕೂಡ) ಗಾಂಧಿಯನ್ನು ನೈಜವಾಗಿ ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದಾರೆ. ಗಾಂಧಿ ಕುರಿತ ಅಧ್ಯಯನಕಾರರೆಂದು ಗುರುತಿಸಲ್ಪಟ್ಟವರು ಅಥವಾ ಗಾಂಧಿ ಅನುಯಾಯಿಗಳೆಂದು ಕರೆದುಕೊಂಡವರ ಬಹುದೊಡ್ಡ ಮಿತಿ ಎಂದರೆ ಗಾಂಧಿಯನ್ನು ಸ್ವಾತಂತ್ರ್ಯ ಹೋರಾಟಗಾರರ ಮಟ್ಟಿಗೆ ಸೀಮಿತಗೊಳಿಸಿಬಿಡುವುದು. ಅವರನ್ನು ಭಾರತದ ಅಹಿಂಸಾ ಸತ್ಯಾಗ್ರಹದ ನೇತಾರ ಎಂದಷ್ಟೆ ನೋಡುತ್ತಿದ್ದೇವೆ.
ವಾಸ್ತವದಲ್ಲಿ ಗಾಂಧಿಯ ವ್ಯಕ್ತಿತ್ವದ ಆಯಾಮ ಬಹು ವಿಶಾಲವಾದುದು. ಗಾಂಧಿಯ ಚಿಂತನೆಗಳಿಗೆ ಆಳವಾದ ಅರ್ಥವಿದೆ, ಸಾರ್ವತ್ರಿಕತೆಯ ಗುಣವನ್ನು ಹೊಂದಿದೆ ಎನ್ನುವುದನ್ನು ಧರ್ಮಪಾಲ್ ಕಂಡುಕೊಂಡಿದ್ದರು. ಧರ್ಮಪಾಲ್ ಪಾಲಿಗೆ ಗಾಂಧಿ ಕೇವಲ ಸತ್ಯಾಗ್ರಹಿಯಲ್ಲ, ಭಾರತದ ಬಹು ಪ್ರಸಿದ್ಧ ಸಾರ್ವಜನಿಕ ನೇತಾರನಷ್ಟೇ ಅಲ್ಲ. ಕೇವಲ ರಾಷ್ಟ್ರಪಿತನೋ, ಅನುಕರಣೀಯವಾದ ಓರ್ವ ಪ್ರಸಿದ್ಧ ವ್ಯಕ್ತಿಯೋ ಅಷ್ಟೇ ಅಲ್ಲ. ಇವೆಲ್ಲವೂ ಆಗಿರಬಹುದಾದರೂ ಅದಕ್ಕಿಂತಲೂ ಹೆಚ್ಚಾಗಿ ಗಾಂಧಿಯು ಪ್ಲೇಟೊ, ಬುದ್ಧ, ಜೀಸಸ್, ಮಾರ್ಟಿನ್ ಲೂಥರ್ ಮೊದಲಾದ ಜಗತ್ತಿನ ಅನೇಕ ಜ್ಯೇಷ್ಠ ಚಿಂತಕರ ಸಾಲಿಗೆ ಸೇರುವ ವ್ಯಕ್ತಿ ಎನ್ನುತ್ತಾರೆ. ಧರ್ಮಪಾಲರ ಪ್ರಕಾರ ಇಡೀ ಭಾರತೀಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಒಳಗೊಂಡ ವ್ಯಕ್ತಿ ಗಾಂಧಿಯವರು. ಗಾಂಧಿಯ ವಿಚಾರಗಳಿಗೂ ಅಷ್ಟೇ ಮಹತ್ತ್ವವಿದೆ. ಆದರೆ ಸ್ವತಂತ್ರ ಭಾರತದಲ್ಲಿ ಗಾಂಧಿಯ ವಿಚಾರಗಳಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ. ಯಾರು ಗಾಂಧಿಯ ವಿಚಾರಗಳ ಬಗ್ಗೆ ವಿಶ್ಲೇಷಣಾತ್ಮಕವಾಗಿ ಮಾತನಾಡಬೇಕಾಗಿತ್ತೋ ಅಂತಹವರು ಮಾತನಾಡದೆ ಮೌನವಾಗಿ ಉಳಿದ ಪರಿಣಾಮವಾಗಿ ಗಾಂಧಿ ವಿಚಾರಗಳಿಗೆ ಸಿಗಬೇಕಾದ ಪ್ರಾಶಸ್ತö್ಯ ಸಿಗಲಿಲ್ಲ ಎನ್ನುವುದು ಧರ್ಮಪಾಲ್ ಅವರ ನಿಲವಾಗಿದೆ.
ಧರ್ಮಪಾಲ್ ಅವರು ಗಾಂಧಿಯವರಿಂದ ಪ್ರೇರಣೆ ಪಡೆದ ಮಹಾನ್ ಗಾಂಧಿವಾದಿಯಾಗಿದ್ದರು. ಗಾಂಧಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿದ ಕೆಲವರಲ್ಲಿ ಧರ್ಮಪಾಲ್ ಅವರೂ ಒಬ್ಬರು. ಗಾಂಧಿಯವರನ್ನು ಬಹಳ ಸಮೀಪದಿಂದಲೇ ನೋಡಿದ. ಅವರ ಮಾತುಗಳನ್ನು ಹೃದಯಪೂರ್ವಕವಾಗಿ ಆಲಿಸಿದ ಮತ್ತು ಅದನ್ನು ಕ್ರಿಯೆಯ ರೂಪದಲ್ಲಿ ಪ್ರಕಟಿಸಿದವರಲ್ಲಿ ಧರ್ಮಪಾಲ್ ಅಗ್ರಗಣ್ಯರು. ತನ್ನ ಎಂಟನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ ಗಾಂಧಿಯನ್ನು ಕಂಡಾಗ ಉಂಟಾದ ಮುಗ್ಧ ಆಕರ್ಷಣೆಯಲ್ಲಿ, ಮುಂದೆ ಅವರ ಮಾತುಗಳನ್ನು ಪ್ರತ್ಯಕ್ಷವಾಗಿ ಆಲಿಸಿದಾಗ, ಅವರ ಕುರಿತ ಸಂಪುಟಗಳನ್ನು ಓದಿದಾಗ, ಗಾಂಧಿಯನ್ನು ಅತಿ ಸಮೀಪದಿಂದ ಕಂಡು ಕಣ್ತುಂಬಿಸಿಕೊಂಡ, ಹೃದಯ ತುಂಬಿಸಿಕೊಂಡ ಧರ್ಮಪಾಲ್ ಗಾಂಧಿಯ ನೈಜ ಅನುಯಾಯಿಯಾಗುತ್ತಾರೆ. ಅವರ ಕರೆಯಿಂದ ಪ್ರೇರಿತರಾಗಿ ಕ್ವಿಟ್-ಇಂಡಿಯಾ ಚಳವಳಿಯಲ್ಲಿ ಭಾಗವಹಿಸುತ್ತಾರೆ. ಗಾಂಧಿ ತೋರಿದ ಹಾದಿಯಲ್ಲಿ ಭಾರತದ ಪುನರುತ್ಥಾನಕ್ಕಾಗಿ ದುಡಿಯುವ ಸಂಕಲ್ಪವನ್ನು ತಳೆಯುತ್ತಾರೆ.
ಗಾಂಧಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಅವರ ಸಮಕಾಲೀನ ಅನುಯಾಯಿಗಳಿಂದ ಹಿಡಿದು ಒಟ್ಟು ಭಾರತೀಯ ಸಮಾಜ ಹೇಗೆ ಸೋತಿದೆ ಎನ್ನುವುದನ್ನೂ ಹೇಳುತ್ತಾರೆ. ಗಾಂಧಿಯವರ ಬದುಕಿನ ನಡವಳಿಕೆಗಳನ್ನೂ, ಅವರ ಮಾತುಗಳನ್ನೂ ಬೇರೆ ಬೇರೆಯಾಗಿ ಭಾವಿಸಿಕೊಂಡು ಗಾಂಧಿ ಅನುಯಾಯಿಗಳೆಂದು ಕರೆದುಕೊಳ್ಳುತ್ತಿದ್ದವರಲ್ಲಿ ಗಾಂಧಿಯವರ ನಡವಳಿಕೆ ಕಾಣುತ್ತಿರಲಿಲ್ಲ. ಗಾಂಧಿ ತಮ್ಮ ಮಾತುಗಳಲ್ಲಿ, ತಮ್ಮ ಬರಹಗಳಲ್ಲಿ, ಅದರಲ್ಲೂ ಅವರ ಹಿಂದ್ ಸ್ವರಾಜ್ನಲ್ಲಿ ಭಾರತದ ನಾಗರಿಕತೆಯ ವೈಶಿಷ್ಟö್ಯಕ್ಕೆ ಕಾರಣವಾಗಿರುವ, ಭಾರತೀಯ ಸಮಾಜದ ಸ್ವರೂಪವನ್ನು ಚಿತ್ರಿಸುತ್ತಾರೆ. ಈ ಸ್ವರೂಪದ ಕಾರಣದಿಂದಲೇ ಭಾರತೀಯ ಸಮಾಜ ಪಾಶ್ಚಿಮಾತ್ಯ ಸಭ್ಯತೆಗಿಂತ ಹೆಚ್ಚು ಯೋಗ್ಯವಾದುದು ಎನ್ನುವುದನ್ನು ವಿವರಿಸುತ್ತಾರೆ. ಬ್ರಿಟಿಷ್ ಆಳ್ವಿಕೆಯಷ್ಟೇ ಅಲ್ಲ, ಅವರ ಮನಃಸ್ಥಿತಿ, ಧೋರಣೆಯಿಂದಲೇ ಭಾರತೀಯ ಸಮಾಜ ವಿರೂಪಗೊಳ್ಳಬಹುದೆಂದು ಅರಿವಿಗೆ ಬಂದಿತ್ತು. ಭಾರತೀಯ ಸಮಾಜದ ವೈಶಿಷ್ಟ್ಯವೆಂಬಂತಿರುವ ಇಲ್ಲಿನ ಸಂಪ್ರದಾಯ, ನಡವಳಿಕೆಗಳ ಕಾರಣದಿಂದ ತಮ್ಮ ಆಧ್ಯಾತ್ಮಿಕ ಅಥವಾ ಲೌಕಿಕವಾದ ಬದುಕಿಗೆ ಉಂಟಾದ ಹಾನಿ ಹೆಚ್ಚಲ್ಲ. ಹೀಗಾಗಿ ಭಾರತವನ್ನು ಮತ್ತೆ ಕಟ್ಟುವುದಕ್ಕೆ ಸಾಧ್ಯವಿದೆ ಎಂಬ ವಿಶ್ವಾಸ ಗಾಂಧಿಯವರದ್ದಾಗಿತ್ತು ಎನ್ನುತ್ತಾರೆ ಧರ್ಮಪಾಲ್.
ಹಿಂದ್ ಸ್ವರಾಜ್ನಲ್ಲಿ ಗಾಂಧಿ ಭಾರತ ಪ್ರೀತಿಯ ಅಧಿದೇವತೆಯ ತವರಾಗಿ, ಬ್ರಿಟನ್ ಯುದ್ಧದ ತವರಾಗಿ ಕಾಣುತ್ತದೆ. ಭಾರತೀಯರು ತಮ್ಮದೇ ಆದ ನಾಗರಿಕತೆಗೆ ಮರಳುವುದೇ ಸೂಕ್ತವಾದ ಪರಿಹಾರ ಎನ್ನುತ್ತಾರೆ. ಇದರಿಂದ ಬ್ರಿಟಿಷರು ಒಂದೋ ಭಾರತೀಕರಣಗೊಳ್ಳುತ್ತಾರೆ, ಇಲ್ಲವೇ ದೇಶ ಬಿಟ್ಟು ಹೋಗುತ್ತಾರೆ ಎಂದಿದ್ದರು. ಧರ್ಮಪಾಲ್ ಅವರು ಗಾಂಧಿಯವರ ವಿಚಾರವನ್ನು ಅರ್ಥಮಾಡಿಕೊಂಡದ್ದು ಮಾತ್ರವಲ್ಲ, ಅವರ ಆಶಯದಂತೆ ಬದುಕಲು ಪ್ರಯತ್ನಿಸಿದ್ದರು.
ಧರ್ಮಪಾಲ್ ಗಾಂಧಿಯವರನ್ನು ಅವರ ಕೃತಿ ಮತ್ತು ಚಿಂತನೆಗಳ ಮೂಲಕವೇ ಪರಿಚಯಿಸಿಕೊಡುವ ಪ್ರಯತ್ನವನ್ನು ಮಾಡುತ್ತಾರೆ. ಗಾಂಧಿಯವರ ಚಿಂತನೆಯು ಪಾಶ್ಚಿಮಾತ್ಯ ಆಧುನಿಕ ನಾಗರಿಕತೆಯ ಕುರಿತಾದ ಭ್ರಮೆಯನ್ನು ಹೋಗಲಾಡಿಸುವಲ್ಲಿ ಬಹು ಮಹತ್ತ್ವದ ಪಾತ್ರವನ್ನು ವಹಿಸಿತು. ಗಾಂಧಿ ಭಾರತದ ಸ್ವರಾಜ್ಯಕ್ಕಾಗಿ ಹೋರಾಡುತ್ತಾರೆ, ಆದರೆ ಗಾಂಧಿಗೆ ಸ್ವರಾಜ್ಯವೆಂಬುದು ಸಂಕುಚಿತವಾದ ಒಂದು ಪರಿಭಾಷೆಯಾಗಿರಲಿಲ್ಲ. ಸ್ವರಾಜ್ಯಕ್ಕಿರುವ ಬಹು ವಿಸ್ತಾರವಾದ ಆಯಾಮವನ್ನು ಗಾಂಧಿ ಕಂಡುಕೊಂಡಿದ್ದರು. ಹೀಗಾಗಿ ಅಸ್ಪೃಶ್ಯತೆಯ ನಿರ್ಮೂಲನವೂ ‘ಸ್ವರಾಜ್ಯ’ದ ಭಾಗವೇ ಎಂದು ಸ್ಪಷ್ಟವಾಗಿ ನಂಬಿದ್ದರು. ಧರ್ಮಪಾಲ್ ಅವರಿಗೆ ಗಾಂಧಿ ಕೇವಲ ಆದರ್ಶದ ವ್ಯಕ್ತಿತ್ವವಲ್ಲ. ಗಾಂಧಿಯನ್ನು ಅನೇಕರು ಅಪ್ರಾಯೋಗಿಕ ಮನುಷ್ಯ ಎಂದರೆ, ಇನ್ನು ಕೆಲವರು ತಲಪಲು ಸಾಧ್ಯವಿಲ್ಲದ ಆದರ್ಶ ಎನ್ನುತ್ತಿದ್ದರು. ಆದರೆ ಧರ್ಮಪಾಲ್ ಅವರು ಗಾಂಧಿಯನ್ನು ವಾಸ್ತವದ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ಮಾಡುತ್ತಾರೆ. ಗಾಂಧಿಯ ರಾಜಕೀಯ-ಆರ್ಥಿಕ ಚಿಂತನೆಗಳನ್ನೇ ರೂಢಿಗೆ ತರಲಾಗದ ಅಪ್ರಾಯೋಗಿಕ ಚಿಂತನೆಗಳೆಂದು ಗಾಂಧಿಯ ಜೊತೆಗಿದ್ದ ಅನೇಕರೇ ಭಾವಿಸಿದ್ದರು. ಹೀಗಾಗಿ ಆ ಚಿಂತನೆಗಳ ಕುರಿತು ಮೌನವನ್ನು, ನಿರ್ಲಕ್ಷವನ್ನು ತಾಳಿದ್ದರು. ಇನ್ನು ಕೆಲವರು ಅದನ್ನು ಆದರ್ಶದ ಸ್ಥಿತಿ ಎಂದು ತಿಳಿದು ನಿರ್ಲಕ್ಷ್ಯ ಮಾಡಿದ್ದರು. ಆದರೆ ಧರ್ಮಪಾಲ್ ಅವರ ಪ್ರಕಾರ ಗಾಂಧಿಯ ಚಿಂತನೆಗಳು ವಾಸ್ತವ ಮತ್ತು ಪ್ರಾಯೋಗಿಕವಾದುದು. ಆದರೆ ಈ ಕುರಿತು ಅಂದಿನ ಕಾಲದ ಮುಂಚೂಣಿಯ ನಾಯಕರೂ ಸೇರಿದಂತೆ ಯಾರೊಬ್ಬರೂ ಚಿಂತನೆ ನಡೆಸಲಿಲ್ಲ ಎನ್ನುತ್ತಾರೆ. ಗಾಂಧಿಯ ಕನಸು ಇದ್ದುದು ಹಳ್ಳಿಗಳ ಏಳಿಗೆಯ ಕುರಿತು. ಗ್ರಾಮಭಾರತದ ಉದ್ಧಾರದ ಕುರಿತು ಅವರಿಗಿದ್ದ ಕಾಳಜಿ ಸ್ವಾತಂತ್ರೊö್ಯÃತ್ತರ ಭಾರತದಲ್ಲಿ ಯಾರೊಬ್ಬರ ಕಾಳಜಿಯೂ ಆಗಿ ಉಳಿಯಲಿಲ್ಲ. ಭಾರತ ಮತ್ತು ಭಾರತದ ಮೂಲಕ ಜಗತ್ತು ನಿಜವಾದ ಸ್ವಾತಂತ್ರö್ಯವನ್ನು ಅನುಭವಿಸಬೇಕಾದರೆ ಹಳ್ಳಿಗಳಿಗೆ ತೆರಳಿ ಅಲ್ಲಿನ ಗುಡಿಸಲುಗಳಲ್ಲಿ ವಾಸಿಸಬೇಕು ಎನ್ನುತ್ತಿದ್ದರು. ತಾನು ಕಲ್ಪಿಸಿದ ಆದರ್ಶ ಗ್ರಾಮಗಳು ಎಂದರೆ ಅಲ್ಲಿನ ಪ್ರತಿಯೊಬ್ಬರೂ ಅತ್ಯುನ್ನತ ಗುಣಮಟ್ಟದ ಜೀವನವನ್ನು ನಿರ್ವಹಿಸುತ್ತಾರೆ, ಅಲ್ಲಿ ಯಾವ ಕೊರತೆಗಳೂ ಇರುವುದಿಲ್ಲ, ಪ್ರತಿಯೊಬ್ಬರೂ ಸ್ವತಂತ್ರವಾಗಿ, ಶ್ರಮಪೂರ್ವಕವಾಗಿ ಬದುಕುತ್ತಾರೆ, ಅಲ್ಲಿ ಎಲ್ಲ ಬಗೆಯ ಸೌಲಭ್ಯಗಳೂ ಇರುತ್ತವೆ ಎಂಬ ಆಶಾವಾದವನ್ನು ಗಾಂಧಿ ವ್ಯಕ್ತಪಡಿಸಿದ್ದರು.
ಭಾರತ ಒಂದು ನಾಗರಿಕತೆಯಾಗಿ ತನ್ನನ್ನು ತಾನು ಕಾಪಾಡಿಕೊಂಡು ಬಂದಿದೆ. ಜಗತ್ತಿನಲ್ಲಿ ಹಲವು ನಾಗರಿಕತೆಗಳು ಪತನವಾದರೂ, ಭಾರತ ಉಳಿದದ್ದು ಅದರ ಗುಣದಿಂದಾಗಿಯೇ. ಇದಕ್ಕೆ ಕಾರಣ ಹೊರಗಿನಿಂದ ಹೇರಿದ ಸಂಗತಿಗಳಿಗೆ ಭಾರತ ಅಷ್ಟು ಸುಲಭವಾಗಿ ಬದಲಾಗುವುದಿಲ್ಲ; ಈ ದೇಶ ಸ್ಥಿರವಾಗಿದೆ, ಇಲ್ಲಿನ ಸಂಸ್ಕೃತಿ ಉಳಿದಿದೆ. ಇದುವೇ ನಿಜವಾದ ಭಾರತದ ಸೌಂದರ್ಯ – ಎನ್ನುವುದನ್ನು ಗಾಂಧಿ ಗುರುತಿಸುತ್ತಾರೆ. ಧರ್ಮಪಾಲ್ ಅವರು ಗುರುತಿಸುವಂತೆ ಗಾಂಧಿಯವರು ಭಾರತದ ಮೇಲೆ ಹೇರಲ್ಪಟ್ಟ ಪಶ್ಚಿಮದ ಸೈದ್ಧಾಂತಿಕ ಮತ್ತು ಸಾಂಸ್ಥಿಕವಾದ ಹಿಡಿತದಿಂದ ಪಾರು ಮಾಡುವ, ಭಾರತೀಯ ಸಮಾಜ ತನ್ನದೇ ಆದ ಧರ್ಮಕ್ಕೆ, ನೈತಿಕ ನೆಲೆಗೆ ಮರಳುವಂತೆ ಮಾಡುವುದೇ ತಮ್ಮ ಜೀವಿತೋದ್ದೇಶ ಎಂದು ಭಾವಿಸಿದ್ದರು. ಭಾರತದಲ್ಲಿ ಸಮಸ್ಯೆಯಾಗಿ ಗುರುತಿಸಲಾಗಿದ್ದ ಜಾತಿ ವ್ಯವಸ್ಥೆಯನ್ನು ಕಿತ್ತುಹಾಕುವ ಬದಲು ಅದನ್ನು ಸುಧಾರಿಸಲು ಪ್ರಯತ್ನಿಸುವುದೇ ಸೂಕ್ತ ಎನ್ನುವುದು ಗಾಂಧಿಯ ನಿಲವಾಗಿತ್ತು. ಗಾಂಧಿಯವರ ವ್ಯಕ್ತಿತ್ವದ ಚಿತ್ರಣದ ಮೂಲಕ ಇಡಿಯ ಭಾರತೀಯ ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನೇ ಮುಂದಿಡುತ್ತಾರೆ. ಸ್ವಾತಂತ್ರ್ಯ ಹೋರಾಟ ಹಾದುಹೋದ ವಿವಿಧ ಕಾಲಘಟ್ಟಗಳನ್ನು, ಜನರ ಪ್ರತಿಕ್ರಿಯೆಗಳನ್ನು ಚಿತ್ರಿಸುತ್ತಲೇ ಗಾಂಧಿಯ ವ್ಯಕ್ತಿತ್ವ, ಸೇವಾಗ್ರಾಮದ ಚಿಂತನೆ, ಸ್ವರೂಪಗಳನ್ನು ಮುಂದಿಡುತ್ತಾರೆ. ಧರ್ಮಪಾಲ್ ಗುರುತಿಸುವಂತೆ, ಮಹಾತ್ಮ ಗಾಂಧಿಯವರನ್ನು ಹೊರತುಪಡಿಸಿ ಭಾರತದ ಸ್ವಾತಂತ್ರ್ಯ ಹೋರಾಟದ ಬಹುತೇಕ ನಾಯಕರು ಚಿಂತನೆಯ ಮಟ್ಟದಲ್ಲಿ ಪಾಶ್ಚಾತ್ಯೀಕರಣಗೊಂಡಿದ್ದರು. ಗಾಂಧಿಯ ಚಿಂತನೆಗಳು, ಕ್ರಿಯೆ ಎಲ್ಲವೂ ಭಾರತೀಯ ಪರಂಪರೆಯಿಂದಲೇ ಪಡೆದುಕೊಂಡದ್ದು. ಅವರು ಮುನ್ನಡೆಸಿದ ಅಸಹಕಾರ ಚಳವಳಿಯ ಬೇರುಗಳೂ ಕೂಡ ಭಾರತೀಯ ಪರಂಪರೆಯಲ್ಲಿ ಸಹಜವಾಗಿಯೇ ಇದ್ದವು. ಭಾರತವನ್ನು ದರ್ಶಿಸಿದ ಗಾಂಧಿಗೆ ಭಾರತ ಅರ್ಥವಾಗುತ್ತದೆ. ಅದು ನೇರವಾದ ಅನುಭವ. ದೇಶದಾದ್ಯಂತ ಸಂಚಾರ ಮಾಡಿದಾಗ ಭಾರತದ ನೈಜತೆಯನ್ನು ಕಾಣುತ್ತಾರೆ.
ಗಾಂಧಿಯನ್ನು ನಾವು ಹೇಗೆ ಗ್ರಹಿಸಿದ್ದೇವೆ ಮತ್ತು ಹೇಗೆ ಗ್ರಹಿಸುವುದು ಸೂಕ್ತ ಎನ್ನುವುದನ್ನು ಧರ್ಮಪಾಲ್ ವಿವರವಾಗಿ ಚರ್ಚಿಸುತ್ತಾರೆ. ಗಾಂಧಿಯ ಅನುಯಾಯಿಗಳಾಗಿದ್ದ ಬಹುತೇಕರು ಗಾಂಧಿಯ ಚಿಂತನೆಯನ್ನು, ಗಾಂಧಿಯು ಆಯ್ದುಕೊಂಡ ಕಾರ್ಯವಿಧಾನವನ್ನು, ಅವುಗಳೊಳಗಿನ ಕಾರ್ಯ-ಕಾರಣ ಸಂಬಂಧವನ್ನು ಅರ್ಥಮಾಡಿಕೊಳ್ಳದೆ, ಅವುಗಳು ಪರಸ್ಪರ ಒಂದಕ್ಕೊಂದು ಹೇಗೆ ಹೊಂದಿಕೊಂಡಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳದೆ ಕೇವಲ ಯಾಂತ್ರಿಕ ಸ್ವರೂಪದಲ್ಲಿ ತೆಗೆದುಕೊಂಡಿದ್ದರು. ಗಾಂಧಿ ಅನುಯಾಯಿಗಳೆಂದು ಕರೆದುಕೊಂಡಿದ್ದ ಅನೇಕರು ಕೇವಲ ಬಾಹ್ಯ ವಿವರಗಳ ಮೂಲಕ ಅವರನ್ನು ಅನುಕರಿಸುವ ಪ್ರಯತ್ನದಲ್ಲಿದ್ದರು ಎನ್ನುತ್ತಾರೆ. ಗಾಂಧಿ ಹೆಸರನ್ನು ಬಳಸುವುದರಿಂದ ಸಿಗಬಹುದಾದ ಲಾಭಕ್ಕೆ, ಸಾಂದರ್ಭಿಕವಾಗಿ ಖಾದಿ ಧರಿಸುವ, ರಸ್ತೆ ಸ್ವಚ್ಛಗೊಳಿಸುವಂಥ ಕ್ರಿಯೆಗಳಲ್ಲಿ ತೊಡಗಿಕೊಂಡು ತಮ್ಮನ್ನು ತಾವು ಗಾಂಧಿ ಅನುಯಾಯಿಗಳೆಂದು ಕರೆದುಕೊಳ್ಳುತ್ತಿದ್ದಾರೆ. ಈ ಕ್ರಿಯೆಗಳ ಹಿಂದಿನ ಆಶಯ ನಮಗೆ ಮುಖ್ಯವಾಗಲಿಲ್ಲ.
ಗಾಂಧಿಯ ಚಿಂತನೆಯ ಆಳದಲ್ಲಿ ಬ್ರಿಟಿಷರ ಆಳ್ವಿಕೆ ಭಾರತದಲ್ಲಿ ಮುಂದುವರಿಯುವುದರಿಂದ ಭಾರತೀಯ ಸಂಪ್ರದಾಯ, ಇಲ್ಲಿನ ಜೀವನವಿಧಾನಗಳು ನಾಶವಾಗಬಹುದೆನ್ನುವ ಎಚ್ಚರವಿತ್ತು. ಜತೆಗೆ ಭಾರತೀಯರು ಎಚ್ಚೆತ್ತುಕೊಂಡರೆ ಪಶ್ಚಿಮದ ಆಳ್ವಿಕೆಯನ್ನು ಸಂಪೂರ್ಣವಾಗಿ ಕಿತ್ತೊಗೆಯಲೂಬಹುದೆನ್ನುವ ವಿಶ್ವಾಸವೂ ಅವರಲ್ಲಿತ್ತು. ಭಾರತೀಯ ಸಮಾಜವನ್ನು ಬ್ರಿಟಿಷರಿಂದ ಕಾಪಾಡುವುದು ಮತ್ತು ಆ ಮೂಲಕ ಭಾರತದ ಸ್ವಾತಂತ್ರö್ಯವನ್ನು ಮರು ಸ್ಥಾಪಿಸುವುದೇ ಅವರ ಪ್ರಧಾನ ಕಾಳಜಿಯಾಗಿತ್ತು ಎನ್ನುತ್ತಾರೆ ಧರ್ಮಪಾಲ್. ಗಾಂಧಿಯ ಚಿಂತನೆಗಳನ್ನು ಅವರ ಸಮಕಾಲೀನರು ಎರಡು ವಿರುದ್ಧ ದಿಕ್ಕುಗಳಲ್ಲಿ ನಿಲ್ಲಿಸಿರುವುದನ್ನು ಗುರುತಿಸುತ್ತಾರೆ. ಒಂದು ಗುಂಪಿನವರು ಗಾಂಧಿಯ ಚಿಂತನೆಗಳು ಅಪ್ರಾಯೋಗಿಕ ಎನ್ನುತ್ತಿದ್ದರೆ, ಇನ್ನೊಂದು ಗುಂಪಿನವರು ಗಾಂಧಿಯ ಚಿಂತನೆಗಳನ್ನು ಆದರ್ಶ ಎನ್ನುತ್ತಿದ್ದರು ಎಂದು ಮೇಲೆ ನೋಡಿದೆವು. ಆದರೆ ಧರ್ಮಪಾಲ್ ಇವೆರಡು ನಿಲವುಗಳಿಗಿಂತ ಭಿನ್ನವಾಗಿ ಗಾಂಧಿ ಚಿಂತನೆಗಳನ್ನು ಪ್ರಯೋಗದ ಮೂಲಕ ಪರಿಶೀಲಿಸಬೇಕು ಎಂಬ ನಿಲವಿಗೆ ಬದ್ಧರಾಗಿದ್ದರು. ಸಾಮಾನ್ಯವಾಗಿ ಗಾಂಧಿ ವಿಜ್ಞಾನ-ತಂತ್ರಜ್ಞಾನದ ವಿರುದ್ಧವಿದ್ದರೆನ್ನುವ ಮಾತುಗಳು ಬಹು ಪ್ರಚಲಿತ. ಆದರೆ ಧರ್ಮಪಾಲ್ ಗ್ರಹಿಸುವಂತೆ ಗಾಂಧಿ ವಿಜ್ಞಾನ ಅಥವಾ ತಂತ್ರಜ್ಞಾನವನ್ನು ನಿರಾಕರಿಸಲಿಲ್ಲ. ಬದಲಿಗೆ ವ್ಯಕ್ತಿ, ಸಮಾಜ ಮತ್ತು ತಂತ್ರಜ್ಞಾನಗಳು ಸಮಗ್ರವಾಗಿ ಬೆಳೆಯಬೇಕೇ ವಿನಾ ಪ್ರತ್ಯೇಕಗೊಂಡು ತಂತ್ರಜ್ಞಾನ ಮಾತ್ರ ಬೆಳೆಯುವ ಸಂಗತಿಯನ್ನು ನಿರಾಕರಿಸುತ್ತಾರೆ. ಯಾಕೆಂದರೆ ಇಂತಹ ಬೆಳವಣಿಗೆಗಳು ಸಮಾಜವನ್ನು ಆಧುನಿಕ ಪಾಶ್ಚಾತ್ಯ ನಾಗರಿಕತೆಯ ಕಡೆಗೆ ತೆಗೆದುಕೊಂಡು ಹೋಗುತ್ತವೆ ಎನ್ನುವ ಕಾರಣಕ್ಕಾಗಿ ನಿರಾಕರಿಸುತ್ತಾರೆ.
ಗಾಂಧಿ ‘ನನ್ನ ಬದುಕು’ ಎಂದು ಕರೆದುಕೊಂಡಿದ್ದು ಯಾವುದನ್ನು? ಧರ್ಮಪಾಲ್ ಗುರುತಿಸುವಂತೆ ಅದು ಗಾಂಧಿಯ ಧೈರ್ಯ, ನಿರ್ಭೀತಿ, ಸ್ನೇಹಪರತೆ ಮತ್ತು ಬಹುಮುಖ್ಯವಾಗಿ ಅವರು ಸತ್ಯದ ಕುರಿತಾಗಿ ಹೊಂದಿದ್ದ ಶ್ರದ್ಧೆಯೇ ಅವರ ಬದುಕು ಆಗಿತ್ತು. ಇದು ಗಾಂಧಿಗೆ ಸ್ವಾತಂತ್ರ್ಯ ಹೋರಾಟದ ದೊಡ್ಡ ಅಸ್ತ್ರವೂ ಆಯಿತು. ಅವರ ಪಾಲಿಗೆ ಸ್ವಾತಂತ್ರ್ಯ ಹೋರಾಟ ಎನ್ನುವುದು ಬ್ರಿಟಿಷರನ್ನು ಭೌತಿಕವಾಗಿ ಭಾರತದಿಂದ ಹೊರಗಟ್ಟುವುದಕ್ಕೆ ಸೀಮಿತವಾಗಿರಲಿಲ್ಲ. ಭಾರತ ಬ್ರಿಟನ್ನಿನ ಪರಾಧೀನತೆಗೆ ಒಳಪಟ್ಟಿದೆ ಎನ್ನುವುದು ಕೇವಲ ಆಡಳಿತಾತ್ಮಕವಾದ ಪರಾಧೀನತೆ ಮಾತ್ರ ಅಲ್ಲ. ಅದು ಯೂರೋಪಿನ ನಾಗರಿಕತೆ, ಆ ನಾಗರಿಕತೆಯ ಮೂಲಕ ಕಟ್ಟಲ್ಪಟ್ಟ ಸಂಸ್ಥೆಗಳು, ಅವುಗಳ ಮೂಲಕ ಉತ್ಪನ್ನಗೊಂಡ ಮೌಲ್ಯಗಳ ಅಧೀನತೆಗೂ ಒಳಪಟ್ಟಿದೆ. ಹೀಗಾಗಿ ಬ್ರಿಟನ್ನಿನಿಂದ ಮುಕ್ತಿಯನ್ನು ಪಡೆಯುವುದು ಎಂದರೆ ಭಾರತವನ್ನು ಸೈದ್ಧಾಂತಿಕವಾಗಿ, ಬೌದ್ಧಿಕವಾಗಿ ಈ ಪರಾಧೀನತೆಯಿಂದ ಬಿಡುಗಡೆಗೊಳಿಸುವುದೇ ಆಗಿತ್ತು. ಅಸಹಕಾರ ಸತ್ಯಾಗ್ರಹ ಅದನ್ನು ಸಾಧಿಸುವ ದಾರಿಯಾಗಿತ್ತು. ಅದಕ್ಕಾಗಿ ಭಾರತೀಯ ಸಮಾಜವನ್ನು ಅದರ ಸನಾತನಧರ್ಮ ಮತ್ತು ನೈತಿಕತೆಯ ನೆಲೆಯಲ್ಲಿ ಮರುಸ್ಥಾಪನೆಗೊಳ್ಳುವಂತೆ ಮಾಡಬೇಕಾಗಿದೆ ಎನ್ನುವುದೇ ಗಾಂಧಿಯ ಕನಸಾಗಿತ್ತು. ಈ ಕಾರಣದಿಂದ ಗಾಂಧಿಗೆ ಸ್ವರಾಜ್ಯವೇ ಏಕೈಕ ಉದ್ದೇಶವಾಗಿರಲಿಲ್ಲ. ಅದು ನಿಜಾರ್ಥದಲ್ಲಿ ‘ಭಾರತದ ವಿಮೋಚನೆ’ ಆಗಬೇಕಾಗಿತ್ತು. ಭಾರತ ಮರಳಿ ತನ್ನ ಸ್ವಂತಿಕೆಯನ್ನು ಕಂಡುಕೊಳ್ಳಬೇಕು ಎನ್ನುವುದೇ ಅವರ ಕಾಳಜಿಯಾಗಿತ್ತು. ಇದಕ್ಕಾಗಿ ಸ್ವರಾಜ್ಯ ಮೊದಲ ಮೆಟ್ಟಿಲಾಗಿದ್ದು, ಅಂತಿಮವಾಗಿ ಸಾಧಿಸಬೇಕಾದುದು ಅದಕ್ಕಿಂತ ಉನ್ನತವಾದುದಾಗಿತ್ತು ಎನ್ನುವುದು ಧರ್ಮಪಾಲ್ ಅವರ ಗ್ರಹಿಕೆಯಾಗಿದೆ. ಅವರು ಆಯ್ದುಕೊಂಡ ಸತ್ಯಾಗ್ರಹದ ಮಾದರಿ ಪ್ರಾಚೀನ ಭಾರತದಲ್ಲಿ ಸಹಜವಾಗಿಯೇ ರೂಢಿಯಲ್ಲಿದ್ದ ಪ್ರತಿಭಟನೆಯ ಒಂದು ಮಾರ್ಗವಾಗಿತ್ತು. ಕಾಲಾನಂತರದಲ್ಲಿ ಭಾರತೀಯ ಸಮಾಜ ಈ ರೂಢಿಯನ್ನು ಕಳೆದುಕೊಂಡಿತ್ತು. ಗಾಂಧಿ ಮೊದಲು ಆಫ್ರಿಕಾದಲ್ಲಿ, ಆ ಬಳಿಕ ಭಾರತದಲ್ಲಿ ತನ್ನ ಹೋರಾಟದ ಮಾರ್ಗವಾಗಿ ‘ಸತ್ಯಾಗ್ರಹ’ವನ್ನು ಸ್ವೀಕರಿಸಿದ್ದರು.
ಭಾರತದಲ್ಲಿರುವ ಜಾತಿ ಪದ್ಧತಿಯ ಬಗ್ಗೆ, ವರ್ಣ ವ್ಯವಸ್ಥೆಯ ಕುರಿತಾಗಿ ಗಾಂಧಿಯ ನಿಲವುಗಳು ಬೇರೆ ಬೇರೆ ಹಂತಗಳಲ್ಲಿ ವಿಸ್ತಾರಗೊಳ್ಳುತ್ತಾ ಹೋಗುವುದನ್ನು ಗುರುತಿಸಬಹುದು. ಜಾತಿಯನ್ನು ಉಳಿಸಿಕೊಳ್ಳುವುದರಿಂದ ಆಗಬಹುದಾದ ಪ್ರಯೋಜನದ ಬಗೆಗೆ ಗಾಂಧಿಗೆ ಸಕಾರಾತ್ಮಕವಾದ ಅಭಿಪ್ರಾಯವಿತ್ತು. ಆದರೆ ಅಸ್ಪೃಶ್ಯತೆ ನಿವಾರಣೆಯಾಗಬೇಕು ಎನ್ನುವುದು ಅವರ ಕಾಳಜಿಯಾಗಿತ್ತು. ಗಾಂಧಿಯನ್ನು ಧರ್ಮಪಾಲ್ ಅವರು ಅರ್ಥಮಾಡಿಕೊಳ್ಳುವುದು ಗಾಂಧಿಯ ಕೆಲಸದ ಹಿಂದಿನ ವಿಧಾನಗಳಿಂದ. ಅವರು ಹೇಳುವಂತೆ ಗಾಂಧಿಯ ಸರಿಗಳನ್ನು ಅಥವಾ ತಪ್ಪುಗಳನ್ನು ಪಟ್ಟಿಮಾಡುವುದರಿಂದ ಅವರ ವ್ಯಕ್ತಿತ್ವದ ಬೆಳವಣಿಗೆಯನ್ನು ಅಳೆಯುವುದು ಸಾಧ್ಯವಿಲ್ಲ, ಬದಲಾಗಿ ಅವರ ಕೆಲಸದ ಹಿಂದಿನ ವಿಚಾರವನ್ನು ಕಾರ್ಯಗತಗೊಳಿಸಲು ಹೇಗೆ ಪ್ರಯತ್ನಿಸಿದರು ಎನ್ನುವುದರಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ಗಾಂಧಿ ಭಾರತದ ನಾಗರಿಕತೆಯನ್ನು ಪ್ರಪಂಚದ ಶ್ರೇಷ್ಠ ನಾಗರಿಕತೆ ಎಂದು ಗುರುತಿಸುತ್ತಾರೆ. ಹೀಗೆ ಗುರುತಿಸುವಾಗ ಅವರು ಮಂಡಿಸಿದ ತರ್ಕವನ್ನು ಗಮನಿಸಬೇಕು. ಪಶ್ಚಿಮದ ನಾಗರಿಕತೆ ಭೋಗದ ಆಧಾರದಲ್ಲಿ ಬೆಳೆದಿದ್ದರೆ, ಭಾರತೀಯ ನಾಗರಿಕತೆಗೆ ಸ್ವಯಂ ನಿಯಂತ್ರಣವೇ ಆಧಾರ ಎನ್ನುತ್ತಾರೆ. ಭಾರತೀಯ ಸಂಪ್ರದಾಯ ಮತ್ತು ಭಾರತೀಯ ಸಂಸ್ಕೃತಿಯ ಚೌಕಟ್ಟಿನೊಳಗೆ ಮಾತ್ರ ಸಮಾನ ಸಮಾಜದ ವ್ಯವಸ್ಥೆಯನ್ನು ರೂಪಿಸಲು ಸಾಧ್ಯ ಎನ್ನುವುದು ಅವರ ಬಲವಾದ ನಂಬಿಕೆಯಾಗಿತ್ತು. ಧರ್ಮಪಾಲ್ ಗಾಂಧಿಯನ್ನು ವರ್ತಮಾನದ ಸಮಾಜಕ್ಕೆ ಅನ್ವಯ ಮಾಡಬಹುದಾದ ವಿಧಾನದ ಬಗ್ಗೆ ಚಿಂತನೆಯನ್ನು ಮಾಡುತ್ತಾ ಅದಕ್ಕಾಗಿ ತೋರಿಸಿದ ದಾರಿ ಎಂದರೆ ಪ್ರಾಯೋಗಿಕವಾಗಿ ಗಾಂಧಿ ಚಿಂತನೆಯನ್ನು ಪರೀಕ್ಷಿಸಬೇಕು. ಅದಕ್ಕಾಗಿ ಒಂದು ರಾಜ್ಯವನ್ನು ಸಂಪೂರ್ಣವಾಗಿ ಗಾಂಧಿ ತತ್ತ್ವದ ಆಧಾರದ ಮೇಲೆ ಮುನ್ನಡೆಸಬೇಕು. ಆಗ ಸಫಲತೆಯನ್ನು ಅಥವಾ ವಿಫಲತೆಯನ್ನು ಅರ್ಥಮಾಡಿಕೊಳ್ಳಬಹುದು ಎಂದಿದ್ದರು. ಗಾಂಧಿಯ ಚಿಂತನೆಯ ಆನ್ವಯಿಕ ವ್ಯಾಪ್ತಿ ಹಿರಿದಾದುದು. ಅದು ಸಂಕುಚಿತವಲ್ಲ. ಗಾಂಧಿ ಚಿಂತನೆಯ ಆಧಾರದಲ್ಲಿ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಎಂದರೆ ಅದು ಹೊರ ಪ್ರಪಂಚದಿಂದ ಸಂಪೂರ್ಣವಾಗಿ ದೂರವಾಗುವ ಕ್ರಿಯೆಯಲ್ಲ. ನಮ್ಮದೇ ಪುಟ್ಟ ದ್ವೀಪದಲ್ಲಿ ಬದುಕುವುದೂ ಅಲ್ಲ. ಯಾಕೆಂದರೆ ಗಾಂಧಿ ಚಿಂತನೆ ಎನ್ನುವುದು ಸೀಮಾತೀತವಾದುದು. ಪಶ್ಚಿಮದ ಹಿಂಸೆಯಿಂದ ಭಾರತವನ್ನು ಪಾರುಮಾಡಿದಂತೆ, ಪಶ್ಚಿಮದ ನಾಗರಿಕತೆಯ ಹಿಂಸೆಯಿಂದಲೇ ತಮ್ಮ ಸಭ್ಯತೆಯನ್ನು ರೂಪಿಸಿಕೊಂಡಿರುವ ಪಶ್ಚಿಮದ ಜನರನ್ನೂ ಆ ಹಿಂಸೆಯಿಂದ ಪಾರುಮಾಡಬೇಕು ಎಂದು ಚಿಂತಿಸಿದವರು ಗಾಂಧಿ – ಎನ್ನುತ್ತಾರೆ ಧರ್ಮಪಾಲ್. ಈ ಕಾರಣದಿಂದಲೇ ಗಾಂಧಿ ನವ ಭಾರತದ ಯುಗಪುರುಷ. ಗಾಂಧಿ ಚಿಂತನೆಗಳ ಮೂಲಕ ಭಾರತದ ಪುನರುತ್ಥಾನ ಸಾಧ್ಯ ಎನ್ನುವುದು ಧರ್ಮಪಾಲ್ ನಿಲವಾಗಿತ್ತು. ಗಾಂಧಿಯ ಚಿಂತನೆಯ ಅನನ್ಯತೆಯನ್ನು ಒಪ್ಪಿಕೊಳ್ಳದೆ ಕೇವಲ ಅವರನ್ನು ಸ್ಮರಿಸುವ ಕ್ರಿಯೆ ವ್ಯರ್ಥವಾದುದು. ಒಂದು ವೇಳೆ ನಾವು ಅವರ ಚಿಂತನೆಯ ಅನನ್ಯತೆಯನ್ನು ಒಪ್ಪಲು ಸಿದ್ಧರಿಲ್ಲ ಎಂದಾದರೆ ಕೇವಲ ಸ್ಮರಣೆಯ ವ್ಯಕ್ತಿಯಾಗಿಸುವ ಪ್ರಯತ್ನವನ್ನು ಸಂಪೂರ್ಣವಾಗಿ ತ್ಯಜಿಸುವುದೇ ಸೂಕ್ತ ಎನ್ನುವುದು ಧರ್ಮಪಾಲ್ ಅವರ ನಿಲವಾಗಿತ್ತು. ಈ ಕಾರಣಕ್ಕಾಗಿಯೇ ಧರ್ಮಪಾಲ್ ಗಾಂಧಿ ಚಿಂತನೆಯ ವಿಸ್ತಾರವನ್ನು ತೋರಿಸಿಕೊಡುತ್ತಾರೆ. ಅವರು ಅದೇ ಬೆಳಕಿನಲ್ಲಿ ಭಾರತದ ಮರುಶೋಧಕ್ಕೆ ಇಳಿದವರು. ಬ್ರಿಟಿಷ್ಪೂರ್ವದ ಭಾರತದ ಚಿತ್ರಣವನ್ನು ಬ್ರಿಟಿಷರು ನಿರೂಪಿಸಿದುದಕ್ಕಿಂತ ಭಿನ್ನವಾಗಿ ಕಾಣಲು ಅವರಿಗೆ ಪ್ರೇರಣೆಯಾದುದು ಗಾಂಧಿಯೇ. ಹೀಗಾಗಿ ಧರ್ಮಪಾಲ್ ಮೂಲಕ ಗಾಂಧಿಯನ್ನೂ, ಗಾಂಧಿಯ ಮೂಲಕ ಭಾರತವನ್ನೂ ಕಾಣುವುದು ವರ್ತಮಾನದ ಅಗತ್ಯವೂ ಹೌದು. ಇದರಿಂದ ಭಾರತದ ಚಿತ್ರಣಕ್ಕೆ ಕವಿದ ಪೊರೆ ಕಳಚುವುದರ ಜತೆಗೆ ಗಾಂಧಿಯ ಅನನ್ಯ ವ್ಯಕ್ತಿತ್ವಕ್ಕೆ ಅಂಟಿದ ಪೊರೆಯೂ ಕಳಚುತ್ತದೆ. ಧರ್ಮಪಾಲ್ ನಮಗೆ ಅಂತಹ ದಾರಿದೀಪವಾಗಬಲ್ಲರು.