ಧರ್ಮಪಾಲರು ಬ್ರಿಟಿಷರ ಆಳ್ವಿಕೆಯ ದಮನಕಾರಿ ನೀತಿಗಳಿಗೆ ಭಾರತೀಯರ ಆರಂಭಿಕ ಪ್ರತಿರೋಧವು ಬಹುತೀಕ್ಷ್ಣವಾಗಿತ್ತು ಎನ್ನುತ್ತಾರೆ. ಜನರಲ್ಲಿ ಒಗ್ಗಟ್ಟಿತ್ತು. ವೃತ್ತಿಗಳನ್ನು ಬಿಟ್ಟರು. ಸರಕುಸೇವೆಗಳನ್ನು ನಿಲ್ಲಿಸಿದರು. ಅಂತಿಮಸಂಸ್ಕಾರಗಳನ್ನೇ ಸ್ಥಗಿತಗೊಳಿಸಿದರು. ಅಂದಾಜು ೨ ಲಕ್ಷಕ್ಕೂ ಹೆಚ್ಚಿನ ಜನರು ನಿರಂತರ ಧರಣಿ ಕೂತರು. ಕೊನೆಯವರೆಗೂ ನಿರ್ಗಮಿಸದ ಪಣತೊಟ್ಟರು.
ರಾಷ್ಟ್ರೋತ್ಥಾನ ಸಾಹಿತ್ಯವು ಪುನಃಪ್ರಕಟಿಸಿರುವ ‘ಧರ್ಮಪಾಲ್ ಕ್ಲಾಸಿಕ್ಸ್ ಸೀರೀಸ್’ ಸರಣಿಯಲ್ಲಿನ ಮೂರನೇ ಸಂಪುಟ ‘ನಾಗರಿಕ ಅಸಹಕಾರ ಚಳವಳಿ ಮತ್ತು ಭಾರತೀಯ ಸಂಪ್ರದಾಯ.’ ಧರ್ಮಪಾಲರು ಈ ಕೃತಿಯ ಪೀಠಿಕೆಯಲ್ಲಿಯೆ ಕೆಲವು ಪ್ರಮುಖವಾದ ಅಂಶಗಳನ್ನು ಗುರುತಿಸಿದ್ದಾರೆ. ಹಿಂದಿನಿಂದಲೂ ಭಾರತೀಯರು ರಾಜ್ಯಾಧಿಕಾರಕ್ಕೆ ಅಧೀನರಾಗಿ, ಚಿಕ್ಕಮಕ್ಕಳು ತಮ್ಮ ಪೋಷಕರನ್ನು ನೋಡುವಂತೆ, ವಿಧೇಯವಾಗಿರುವುದನ್ನು ರೂಢಿಮಾಡಿಕೊಂಡಿದ್ದಾರೆ ಎನ್ನುವ ಧೋರಣೆಯು ಈಗಿರುವ ಪಠ್ಯಗಳಲ್ಲಿರುವ ಸಾಮಾನ್ಯ ನಿರೂಪಣೆಯಾಗಿದೆ. ಕಳೆದ ಶತಮಾನದಿಂದೀಚೆಗೆ ಯೂರೋಪಿನ ಅವಿಧೇಯತೆ ಹೋರಾಟದ ವಿಚಾರಧಾರೆಗಳ ಪರಿಚಯದಿಂದಾಗಿ ಮತ್ತು ಗಾಂಧಿಯವರ ಪಾತ್ರದಿಂದಾಗಿ ಭಾರತೀಯರ ಈ ಧೋರಣೆಯಲ್ಲಿ ಬದಲಾವಣೆಗಳಾಗಿವೆ. ೨೦ನೇ ಶತಮಾನದ ಭಾರತೀಯರು ಬ್ರಿಟಿಷ್ ಸರ್ಕಾರದ ಅನ್ಯಾಯಗಳ ವಿರುದ್ಧ ಶಸ್ತ್ರಸಹಿತ ಮತ್ತು ನಿಃಶಸ್ತ್ರವಾಗಿ, ಎರಡು ರೀತಿಯಲ್ಲಿ ಪ್ರತಿಭಟನೆ ತೋರುತ್ತಿದ್ದರು. ಶಸ್ತ್ರಸಹಿತ ಪ್ರತಿಭಟನೆ ಕೆಲವೇ ವ್ಯಕ್ತಿಗಳಿಗೆ ಮತ್ತು ಸಣ್ಣಗುಂಪುಗಳಿಗೆ ಸೀಮಿತವಾಗಿದ್ದರೆ, ಶಸ್ತ್ರರಹಿತ ಅಸಂಖ್ಯಾತ ಪ್ರತಿಭಟನೆಗಳು ಅಸಹಕಾರ, ನಾಗರಿಕ ಅವಿಧೇಯತೆ ಮತ್ತು ಸತ್ಯಾಗ್ರಹ ಮುಂತಾಗಿ ಕರೆಯಲ್ಪಟ್ಟು ಅವು ಗಾಂಧಿಯವರೊಂದಿಗೆ ಹುಟ್ಟಿದವು ಎನ್ನುವ ನಂಬಿಕೆ ಅನೇಕರಲ್ಲಿ ಇದೆ. ಗಾಂಧಿಯವರು ಇದನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗಿಸಿ ನಂತರ ಭಾರತಕ್ಕೆ ತಂದರು ಎನ್ನುವ ಪ್ರತೀತಿಯೂ ಇದೆ. ಒಂದು ಗುಂಪಿನ ಚಿಂತಕರು ಗಾಂಧಿಯವರು ಇದನ್ನು ಥೋರೋ ಮತ್ತು ರಸ್ಕಿನ್ನಿಂದ ಕಲಿತರೆಂದರೆ, ಮತ್ತೊಂದು ಗುಂಪು ಈ ತಂತ್ರಗಳು ಗಾಂಧಿಯವರದ್ದೇ ಆವಿಷ್ಕಾರವೆಂದು ಹೇಳುತ್ತದೆ.
ಗಾಂಧಿಯವರದ್ದೇ ಆವಿಷ್ಕಾರವೆಂಬುದಕ್ಕೆ ಧರ್ಮಪಾಲರ ವಿವರಣೆ, ಭಾರತೀಯರು ಸಾಂಪ್ರದಾಯಿಕವಾಗಿ ಕುರುಡು ವಿಧೇಯರಾಗಿದ್ದರು ಎನ್ನುವುದಕ್ಕೆ ಸ್ವಲ್ಪ ತಕರಾರುಗಳೂ ಇತ್ತೀಚಿನ ಅಧ್ಯಯನಗಳಲ್ಲಿವೆ. ‘ರಾಜ’ ಎಂದರೆ ಒಲಿಸುವವ ಎಂಬರ್ಥವಿರುವುದರಿಂದ ತನ್ನ ಕರ್ತವ್ಯವನ್ನು ನೆರವೇರಿಸಿಯೇ ರಾಜನು ತನ್ನ ಹಕ್ಕಿನ ಅಧಿಕಾರವನ್ನು ಚಲಾಯಿಸಬೇಕಿತ್ತು. ಜನರಿಂದ ತೆರಿಗೆ ವಸೂಲು ಮಾಡಿ ಅವರ ಸಂಪತ್ತನ್ನು ಕಿತ್ತುಕೊಂಡು ಜನರಿಗೆ ಯಾವ ರಕ್ಷಣೆಯನ್ನೂ ನೀಡದ ರಾಜನನ್ನು ಜನರು ಕೊಲ್ಲಬೇಕು, ಹಾಗೂ ನಾನು ನಿಮ್ಮನ್ನು ರಕ್ಷಿಸುತ್ತೇನೆ ಎಂದು ಪ್ರಮಾಣಮಾಡಿ ರಕ್ಷಿಸದವನನ್ನು ಜನರು ಹುಚ್ಚುನಾಯಿಯನ್ನು ಕೊಲ್ಲುವಂತೆ ಕೊಲ್ಲಬೇಕು ಎನ್ನುವ ಮಹಾಭಾರತದ ಉಲ್ಲೇಖಗಳನ್ನು ಧರ್ಮಪಾಲರು ನೀಡಿದ್ದಾರೆ.
ಜೇಮ್ಸ್ ಮಿಲ್ ಹೇಳುವಂತೆ “ಪ್ರಾಚೀನ ಕಾಲದಲ್ಲಿ ರಾಜ-ಪ್ರಜೆ ಸಂಬಂಧಗಳು ಹೇಗೇ ಇದ್ದಿದ್ದರೂ ಟರ್ಕರು ಮತ್ತು ಮೊಘಲರ ಕಠಿಣ ಆಳ್ವಿಕೆಯ ನಂತರ ಜನರು ರಾಜನಿಗೆ ನಮ್ರವಿಧೇಯರಾಗಿದ್ದರು.” ಗಾಂಧಿಯವರೇ ಹೇಳುವಂತೆ “ಕಾನೂನು ಒಳಿತೋ-ಕೆಡುಕೋ ಅದನ್ನು ಕಣ್ಮುಚ್ಚಿಕೊಂಡು ಅನುಸರಿಸಬೇಕು ಎನ್ನುವುದು ಇತ್ತೀಚಿನ ಕಲ್ಪನೆ. ಹಿಂದೆ ಹೀಗಿರಲಿಲ್ಲ” ಎಂದಿದ್ದಾರೆ. ಹಿಂದೆ “ಅತೃಪ್ತಿಯುಂಟು ಮಾಡುವ ಆಳ್ವಿಕೆಗಾರರಿಗೆ ಜನರು ಸಹಕಾರ ನೀಡುತ್ತಿರಲಿಲ್ಲ. ಹಳ್ಳಿಯ ಜನರು ರಾಜನ ಆದೇಶದಿಂದ ಅಸಂತೃಪ್ತರಾದರೆಂದರೆ ತಕ್ಷಣವೇ ಹಳ್ಳಿಗಳನ್ನು ಖಾಲಿ ಮಾಡುತ್ತಿದ್ದರು. ರಾಜ ಬೆದರಿ ತನ್ನ ಪ್ರಜೆಗಳಲ್ಲಿ ಕ್ಷಮೆ ಕೇಳಿ ತನ್ನ ಆದೇಶವನ್ನು ಹಿಂಪಡೆಯುತ್ತಿದ್ದನು” ಎಂಬುದಾಗಿ ಗಾಂಧಿ ಹೇಳಿದ್ದರು. ಗಾಂಧಿಯವರ ಆವಿಷ್ಕಾರ ಅವರ ಸಂಪ್ರದಾಯದಿಂದಲೇ ಬಂದಿರಬೇಕೆಂದೇನಿಲ್ಲ. ಅವರೊಳಗಿಂದಲೂ ಬಂದಿರಬಹದು. ನಾಗರಿಕ ಅಸಹಕಾರಕ್ಕೆ ಚಾರಿತ್ರಿಕ ಸಂಪ್ರದಾಯದ ಹಿನ್ನೆಲೆಯೂ ಇದ್ದುದರಿಂದ ಅವರ ನಾಯಕತ್ವದಲ್ಲಿ ಅತಿದೊಡ್ಡ ಮಟ್ಟದಲ್ಲಿ ಅದನ್ನು ಪ್ರಯೋಗಿಸಲು ಸಾಧ್ಯವಾಗಿದ್ದಿರಬೇಕು ಎನ್ನುತ್ತಾರೆ ಧರ್ಮಪಾಲ್.
ಹಿಂದಿನಿಂದಲೂ ನಾಗರಿಕ ಅವಿಧೇಯತೆ ಮತ್ತು ಅಸಹಕಾರವು ದಮನಕಾರಿ ಮತ್ತು ಅನ್ಯಾಯದ ಆಳ್ವಿಕೆಯನ್ನು ಪ್ರತಿಭಟಿಸುವ ಭಾರತೀಯರ ಮುಖ್ಯವಿಧಾನಗಳಾಗಿದ್ದವು. ಈ ಬಗ್ಗೆ ೧೬೮೦ರ ಮದ್ರಾಸಿನ ಗವರ್ನಿಂಗ್ ಕೌನ್ಸಿಲ್ ನಡಾವಳಿಯಲ್ಲಿರುವುದನ್ನು ಧರ್ಮಪಾಲರು ಉಲ್ಲೇಖಿಸುತ್ತಾರೆ. ಮದ್ರಾಸ್ ಪಟ್ಟಣದಲ್ಲಿ ಬ್ರಿಟಿಷರ ಆಳ್ವಿಕೆಯ ಸ್ವೇಚ್ಛಾಧಿಕಾರ ಮತ್ತು ದಮನಕಾರಿ ಆಳ್ವಿಕೆಗೆ ಪ್ರತಿಯಾಗಿ ಚಿತ್ರಕಾರರು ಮತ್ತು ಇತರರು ಸೇಂಟ್ ಥೋಮಾದಲ್ಲಿ ಜಮಾಯಿಸುತ್ತಾರೆ. ಪಟ್ಟಣದ ಹಲವಾರು ‘ಜಿಂಟೂ’ (ಹಿಂದೂ)ಗಳ ಜಾತಿಯವರು ಮತ್ತು ಕಂಪೆನಿಯ ಸೇವೆಯಲ್ಲಿರುವ ಕಾರಕೂನ ಅಥವಾ ಮುಖ್ಯ ಸೈನಿಕರು, ವ್ಯಾಪಾರಿಗಳು, ಅಗಸರು, ಇತ್ಯಾದಿ ಹಲವರಿಗೆ ಪತ್ರಗಳನ್ನು ಕಳುಹಿಸಿ ಕೆಲಸ ನಿಲ್ಲಿಸಿ ಹೊರಬರದಿದ್ದರೆ ಬಹಿಷ್ಕರಿಸುವುದಾಗಿ ಕರೆ ಕೊಡುತ್ತಾರೆ. ಪಟ್ಟಣಕ್ಕೆ ಬರುವ ಸರಕುಗಳು ಮತ್ತು ಸೇವೆಗಳನ್ನು ನಿಲ್ಲಿಸುತ್ತಾರೆ. ಆದರೆ ಬ್ರಿಟಿಷರು ಈ ಪ್ರತಿಭಟನೆಯನ್ನು ಹತ್ತಿಕ್ಕಲು ಅದರಲ್ಲಿ ಭಾಗವಹಿಸಿದವರ ಹೆಂಡಿರುಮಕ್ಕಳನ್ನು ಬಂಧಿಸುತ್ತಾರೆ. ಅವರಲ್ಲಿ ನೂರು ಪ್ರಮುಖ ಪ್ರತಿಭಟನಕಾರರಿಗೆ ಘೋರ ಶಿಕ್ಷೆ ನೀಡುವುದಾಗಿ ಬೆದರಿಸುತ್ತಾರೆ. ಅಂತಿಮವಾಗಿ ಈ ಘಟನೆ ಕೆಲವು ಹೊಂದಾಣಿಕೆಗಳೊಂದಿಗೆ ನಿಲ್ಲುತ್ತದೆ.
ಇದೇ ರೀತಿಯಲ್ಲಿ ೧೮೩೦-೩೧ರಲ್ಲಿ ಕೆನರಾ (ಕರ್ನಾಟಕ)ದಲ್ಲಿ ರೈತಪ್ರತಿಭಟನೆ ನಡೆದುದನ್ನೂ ದಾಖಲಿಸಲಾಗಿದೆ. ೧೧ ಸಾವಿರ ರೈತರು ಪ್ರತಿಭಟಿಸುತ್ತಾರೆ. ೩೦೦ ರೈತರು ತಹಸೀಲ್ದಾರನನ್ನು ಕಂಡು ಒಂದು ಪೈಸೆ ತೆರಿಗೆಯನ್ನೂ ಕೊಡುವುದಿಲ್ಲವೆಂದೂ ಪೂರ್ಣ ತೆರಿಗೆ ಹಿಂಪಡೆಯಬೇಕೆಂದೂ ಒತ್ತಾಯಿಸುತ್ತಾರೆ. ಸರ್ಕಾರದ ಕೋರ್ಟು ಮತ್ತು ಸ್ಟಾಂಪ್ ನಿಯಂತ್ರಣ ದಮನಕಾರಿಯಾಗಿದೆ, ಉಪ್ಪು ಮತ್ತು ಅಡಿಕೆಗಳ ಏಕಸ್ವಾಮ್ಯ ಹೆಚ್ಚಾಗಿದೆ, ಅವನ್ನು ತೆಗೆದುಹಾಕಬೇಕು – ಎಂದು ಒತ್ತಾಯಿಸುತ್ತಾರೆ. “ತೆರಿಗೆಗಿಂತ ಸರ್ಕಾರದ ದÀಮನಕಾರಿ ನೀತಿ ಮತ್ತು ನಡವಳಿಕೆಗಳ ಬಗ್ಗೆ ಹೆಚ್ಚು ಪ್ರತಿರೋಧವಿರುವುದನ್ನು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.” ಬಹುತೇಕ ಪ್ರತಿಭಟನೆಗಳು ಅಹಿಂಸಾತ್ಮಕ ಮತ್ತು ನಾಗರಿಕವಾದ ರೀತಿಯಲ್ಲಿ ನಡೆದಿರುವುದಾಗಿ ದಾಖಲಿಸಿರುವುದನ್ನು ಧರ್ಮಪಾಲರು ಉಲ್ಲೇಖಿಸುತ್ತಾರೆ.
ಮನೆಕಂದಾಯ ಮತ್ತು ನಾಗರಿಕ ಅಸಹಕಾರ ೧೮೧೦–೧೨
ಧರ್ಮಪಾಲ್ರವರು ಈ ಸಂಪುಟದಲ್ಲಿ ೧೮೧೦-೧೨ರ ಸಂದರ್ಭದಲ್ಲಿ ಬಂಗಾಲ ಪ್ರಾಂತದಲ್ಲಿ ವಸಾಹತು ಪ್ರಭುತ್ವವು ಮನೆತೆರಿಗೆಯನ್ನು ವಿಧಿಸಿದಾಗ ಅದಕ್ಕೆ ಪ್ರತಿರೋಧವಾಗಿ ಬೃಹತ್ ಪ್ರಮಾಣದಲ್ಲಿ ಜನರು ನಾಗರಿಕ ಅಸಹಕಾರ ಚಳವಳಿಯನ್ನು ಸಂಘಟಿಸಿ ಹೋರಾಟ ಮಾಡಿರುವುದನ್ನು ಬ್ರಿಟಿಷ್ ದಾಖಲೆಗಳನ್ನೇ ಆಧರಿಸಿ ನಿರೂಪಿಸಿದ್ದಾರೆ. ಬಂಗಾಲದ ಬ್ರಿಟಿಷ್ ಆಳ್ವಿಕೆಗೆ ಗವರ್ನರ್-ಜನರಲ್ನ ನೇತೃತ್ವದ ಕೌನ್ಸಿಲ್ ಇತ್ತು. ಇದಕ್ಕೆ ಅಧೀನವಾಗಿ ಹಲವು ಬೋರ್ಡ್ಗಳಿದ್ದವು. ಅವುಗಳಲ್ಲಿ ಕಂದಾಯ ಬೋರ್ಡ್ ಮತ್ತು ಮಿಲಿಟರಿ ಬೋರ್ಡ್ ಬಹುಮುಖ್ಯವಾದವು. ಜಿಲ್ಲಾಡಳಿತದಲ್ಲಿ ಕಲೆಕ್ಟರ್ ಮತ್ತು ಮ್ಯಾಜಿಸ್ಟ್ರೇಟ್ ಎನ್ನುವ ಇಬ್ಬರು ಉನ್ನತ ಅಧಿಕಾರಿಗಳಿದ್ದರು. ಕಂದಾಯ ಲೆಕ್ಕ ಮತ್ತು ವಸೂಲಿ ಕಲೆಕ್ಟರ್ನ ಜವಾಬ್ದಾರಿಯಾಗಿದ್ದರೆ, ಪೊಲೀಸ್ ಮೇಲ್ವಿಚಾರಣೆ ಮತ್ತು ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಮ್ಯಾಜಿಸ್ಟ್ರೇಟ್ರದ್ದಾಗಿತ್ತು. ಜಿಲ್ಲಾ ಕಲೆಕ್ಟರ್ ಸೂಚನೆ ಪಡೆದು ಕೆಲಸಗಳ ಬಗ್ಗೆ ಕಂದಾಯ ಮಂಡಳಿಗೆ ವರದಿ ನೀಡುತ್ತಿದ್ದ. ಅದೇ ಮ್ಯಾಜಿಸ್ಟ್ರೇಟರು ನೇರವಾಗಿ ನ್ಯಾಯಾಂಗ ವಿಭಾಗದ ಗವರ್ನಿಂಗ್ ಕೌನ್ಸಿಲ್ನಿಂದ ಸೂಚನೆ ಪಡೆದು ಅವರಿಗೇ ವರದಿ ಸಲ್ಲಿಸಬೇಕಿತ್ತು. ಈರ್ವರಿಗೂ ಜಿಲ್ಲಾಡಳಿತದಲ್ಲಿ ಸ್ವತಂತ್ರ ಕಾರ್ಯನಿರ್ವಹಣೆಯ ಉನ್ನತ ಅಧಿಕಾರವಿತ್ತು. ಈ ಎಲ್ಲ ಅಧಿಕಾರಿಗಳ ಪತ್ರವ್ಯವಹಾರಗಳಿಂದ ಬನಾರಸ್, ಪಾಟ್ನಾ, ಸರುನ್, ಮುರ್ಷಿದಾಬಾದ್ ಮತ್ತು ಭಾಗಲ್ಪುರ್ ಜನತೆಯನ್ನು ಸಂಘಟಿಸುವ ಮೂಲಕ ಬೃಹತ್ ನಾಗರಿಕ ಅಸಹಕಾರ ಆಂದೋಲನವು ನಡೆದಿರುವುದು ಬೆಳಕಿಗೆ ಬರುತ್ತದೆ – ಎನ್ನುತ್ತಾರೆ ಧರ್ಮಪಾಲ್. ಇದು ಅತ್ಯುತ್ತಮವಾಗಿ ದಾಖಲಾಗಿರುವ ಗಾಂಧಿಪೂರ್ವ ಅಸಹಕಾರ ಮತ್ತು ನಾಗರಿಕ ಕಾನೂನುಭಂಗ ಆಂದೋಲನವೆಂದು ಪರಿಗಣಿಸಿ, ವಿವರವಾಗಿ ದಾಖಲಿಸಿದ್ದಾರೆ.
-೨-
೧೮೧೦ರಲ್ಲಿ ಇಂಗ್ಲೆಂಡಿನ ಅಧಿಕಾರಿಗಳ ಸೂಚನೆಗಳ ಮೇರೆಗೆ, ಬಂಗಾಳ ಸರ್ಕಾರವು (ಫೋರ್ಟ್ ವಿಲಿಯಂ) ಬಂಗಾಳ, ಬಿಹಾರ್, ಒರಿಸ್ಸಾ, ಬನಾರಸ್ ಮತ್ತು ವಶಪಡಿಸಿಕೊಂಡ ಇತರ ಪ್ರಾಂತಗಳಲ್ಲಿ ಹೊಸ ತೆರಿಗೆಗಳನ್ನು ವಿಧಿಸಲು ನಿರ್ಧರಿಸಿತು. ಇವುಗಳಲ್ಲಿ ಒಂದು, ಮನೆ ಮತ್ತು ಅಂಗಡಿಗಳ ಮೇಲಿನ ತೆರಿಗೆ. ಈ ತೆರಿಗೆಯನ್ನು ೬ನೇ ಅಕ್ಟೋಬರ್ ೧೮೧೦ರಂದು ಜಾರಿಗೆ ತರಲಾಯಿತು. ಎಲ್ಲ ವಾಸದ ಮನೆಗಳಿಗೆ ವಾರ್ಷಿಕ ಬಾಡಿಗೆಯ ಮೇಲೆ ಶೇ. ೫ ಮತ್ತು ಎಲ್ಲ ಅಂಗಡಿಗಳ ವಾರ್ಷಿಕ ಬಾಡಿಗೆಯ ಮೇಲೆ ಶೇ. ೧೦ ತೆರಿಗೆ ಕೊಡಬೇಕಿತ್ತು. ಬಾಡಿಗೆಗೆ ಪಡೆಯದೆ ಮಾಲೀಕರೇ ಸ್ವತಃ ಇದ್ದರೆ, ವಿಧಿಸಬೇಕಾದ ತೆರಿಗೆಯನ್ನು ಅದೇ ಬಗೆಯ ಇತರ ಮನೆ ಮತ್ತು ಅಂಗಡಿಗಳಿಗೆ ಪಾವತಿಸಿದ ಬಾಡಿಗೆಯ ಮೊತ್ತಕ್ಕೆ ಸಮನಾಗಿ ನಿಗದಿಪಡಿಸಲಾಗಿತ್ತು. ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಕಟ್ಟಬೇಕಿತ್ತು. ಕಟ್ಟದಿದ್ದರೆ ವಸ್ತು ಅಥವಾ ಮನೆ, ಅಂಗಡಿಗಳನ್ನೇ ಮಾರಿ ವಸೂಲು ಮಾಡಬಹುದಾಗಿತ್ತು. ಮನವಿ ಮೇಲ್ಮನವಿಗೆ ಅವಕಾಶವಿದ್ದರೂ ಆಧಾರರಹಿತ ಮತ್ತು ವ್ಯಾಜ್ಯಸ್ವರೂಪದ ಮನವಿಗಳನ್ನು ನಿರ್ಬಂಧಿಸಲು ಮತ್ತು ಹೆಚ್ಚಿನ ಮೊತ್ತದ ದಂಡ ವಿಧಿಸಲು ನ್ಯಾಯಾಧೀಶರಿಗೆ ಅವಕಾಶ ನೀಡಲಾಗಿತ್ತು. ವಸೂಲು ಮಾಡಿದ ಕಂದಾಯದಲ್ಲಿ ಶೇ. ೫ರಷ್ಟು ಕಮಿಷನ್ ಪಡೆಯಲು ಕಲೆಕ್ಟರ್ಗೆ ಅವಕಾಶ ನೀಡಲಾಗಿತ್ತು. ಇದು ಆ ಕಾಲಕ್ಕೆ ಅಲ್ಲಿ ಅಪರಿಚಿತ. ಉಳಿದ ತೆರಿಗೆಯ ಮೊತ್ತಕ್ಕಿಂತ (ರೂ. ೧೦.೬೮ ಕೋಟಿ) ಮನೆಗಂದಾಯದ ಅಂದಾಜು ಮೊತ್ತ (ರೂ. ೩ ಲಕ್ಷ) ಬಹಳ ಕಡಮೆಯೇ ಆದರೂ ಈ ಹೊಸದಾದ ಮನೆಗಂದಾಯ ಬೃಹತ್ ಪ್ರತಿಭಟನೆಗಳಿಗೆ ನಾಂದಿಯಾಗುತ್ತದೆ.
ಬನಾರಸ್ ಪ್ರತಿಭಟನೆ
ಮೊದಲು ಪ್ರತಿಭಟನೆ ಆರಂಭವಾದದ್ದು ಬನಾರಸ್ನಲ್ಲಿ. ಆ ಕಾಲಕ್ಕೆ ಇದು ಉತ್ತರಭಾರತದ ಪಾರಂಪರಿಕ ಮತ್ತು ಸಾಂಪ್ರದಾಯಿಕ ಬೃಹತ್ ನಗರಗಳಲ್ಲಿ ಒಂದಾಗಿತ್ತು. ಹೊಸದಾಗಿ ಜಾರಿಗೊಳಿಸಿದ ಮನೆತೆರಿಗೆಯ ವಸೂಲಿ ಮೊದಲು ಅಲ್ಲಿ ಆರಂಭವಾಗಿದ್ದರಿಂದ ಪ್ರತಿಭಟನೆಯೂ ಸಹ ಅಲ್ಲೇ ಆರಂಭವಾಗಿತ್ತು. ಈ ತೆರಿಗೆ ವಿಧಿಸುವುದರ ವಿರುದ್ಧ ಜನರ ಪ್ರಮುಖ ವಾದಗಳು ಅಂದಿನ ದಾಖಲೆಗಳಲ್ಲಿ ಉಲ್ಲೇಖವಾಗಿವೆ. ಅವುಗಳೆಂದರೆ:
- ಹಿಂದಿನ ರಾಜರು ಮತ್ತು ಸುಲ್ತಾನರು ಆಳ್ವಿಕೆಯ ಮೂಲ ಪ್ರದೇಶ ಅಥವಾ ಸ್ವಾಧೀನಪಡಿಸಿಕೊಂಡ ಪ್ರದೇಶಗಳ ಪ್ರಜೆಗಳ ಮೇಲೆ ಎಂದೂ ತಮ್ಮ ಸರ್ಕಾರದ ಅಧಿಕಾರವನ್ನು ಹೇರಿ ವಸತಿಗಳಿಗೆ ತೆರಿಗೆ ವಿಧಿಸಿರಲಿಲ್ಲ. ಈ ತೆರಿಗೆಯು ಅಲ್ಲಿಯ ಇಡೀ ಸಮುದಾಯದ ಹಕ್ಕನ್ನು ಉಲ್ಲಂಘಿಸಿದೆ. ಇದು ನ್ಯಾಯದ ಪ್ರಾಥಮಿಕ ತತ್ತ್ವಕ್ಕೇ ವಿರುದ್ಧ.
- ಪೊಲೀಸರ ವೆಚ್ಚವನ್ನು ಭರಿಸಲು ಮನೆ ತೆರಿಗೆಯನ್ನು ಇಲ್ಲಿ ಜಾರಿಗೊಳಿಸಲಾಗಿದೆ. ಬಂಗಾಲ ಮತ್ತು ಬಿಹಾರ್ ಪ್ರಾಂತಗಳಲ್ಲಿ, ಪೊಲೀಸ್ ವೆಚ್ಚವನ್ನು ಸ್ಟಾಂಪ್ ಮತ್ತು ಇತರ ಆದಾಯಗಳಿಂದ ಭರಿಸಲಾಗುತ್ತದೆ. ಬನಾರಸ್ನಲ್ಲಿ ಪೊಲೀಸ್ ವೆಚ್ಚವನ್ನು ಭೂಕಂದಾಯದಿಂದ ಭರಿಸುತ್ತಿರುವಾಗ ಈ ಮನೆತೆರಿಗೆ ಏಕೆ?
- ೧೮೧೦ರ ತೆರಿಗೆ ನಿಯಮಾನುಸಾರ ಪೂಜಾಸ್ಥಳಗಳಿಗೆ ತೆರಿಗೆಯಿಂದ ವಿನಾಯತಿ ನೀಡಿರುವುದರಿಂದ ಶಾಸ್ತ್ರಗಳ ಪ್ರಕಾರ ಪೂಜಾಸ್ಥಳವಾದ ಬನಾರಸ್ನಲ್ಲಿ ತೆರಿಗೆ ವಸೂಲಿ ತಪ್ಪು. ಅಲ್ಲದೆ, ಬನಾರಸ್ನ ಬಹುತೇಕ ಮನೆಗಳು ಹಿಂದೂಗಳ ಮತ್ತು ಮುಸಲ್ಮಾನರ ಮತ್ತು ಇತರ ಪಂಗಡಗಳ ಆರಾಧನಾ ಸ್ಥಳಗಳಾಗಿದ್ದು, ಅವು ಮುಸಲ್ಮಾನ್ ಮತ್ತು ಹಿಂದುಗಳು ದಾನವಾಗಿ ನೀಡಿದ ಮನೆಗಳು.
- ಬಹಳಷ್ಟು ಜನ ಪಾಳುಬಿದ್ದ ಮನೆಗಳನ್ನು ದುರಸ್ತಿ ಅಥವಾ ಮರುನಿರ್ಮಾಣ ಮಾಡಲಾಗದ ಸ್ಥಿತಿಯಲ್ಲಿದ್ದಾರೆ ಮತ್ತು ಅವರು ಕಷ್ಟದಲ್ಲಿದ್ದು ಆ ಮುರಿದ ಕಟ್ಟಡಗಳ ಬಾಡಿಗೆಯಲ್ಲಿ ಬದುಕುತ್ತಾರೆ. ಅಂತಹವರು ಈ ತೆರಿಗೆಯನ್ನು ಹೇಗೆ ಪಾವತಿಸಲು ಸಾಧ್ಯ?
- ಸರ್ಕಾರವು ಜನರ ಕಲ್ಯಾಣ ಮತ್ತು ಸುಖಕ್ಕಿಂತ ಕಷ್ಟಗಳನ್ನು ನೀಡುತ್ತಿದೆ. ಅಧಿಕಾರದ ದುರುಪಯೋಗ ನಡೆಸಿ ಜನರಿಗೆ ಹಾನಿಮಾಡಲಾಗುತ್ತಿದೆ.
- ಸರ್ಕಾರದ ಸ್ಟಾಂಪ್ ಸುಂಕಗಳು, ನ್ಯಾಯಾಲಯದ ಶುಲ್ಕಗಳು, ಸಾರಿಗೆ ಮತ್ತು ಪಟ್ಟಣ ಸುಂಕಗಳು ಹತ್ತುಪಟ್ಟು ಹೆಚ್ಚಾಗಿ ಬದುಕುವುದೇ ಕಷ್ಟಕರವಾಗಿದ್ದು ಶ್ರೀಮಂತ ಮತ್ತು ಬಡವರೆಲ್ಲರನ್ನು ಬಾಧಿಸುತ್ತಿರುವಾಗ, ಗಾಯದ ಮೇಲೆ ಉಪ್ಪು ಸುರಿದಂತೆ ಮನೆತೆರಿಗೆಯನ್ನು ವಿಧಿಸಲಾಗಿದೆ. ಸರ್ಕಾರದ ಸುಂಕಗಳು ಹತ್ತು ವರ್ಷಗಳಲ್ಲಿ ಹದಿನಾರು ಪಟ್ಟು ಹೆಚ್ಚಾಗಿ ಹಿಂದೂ ಮತ್ತು ಮುಸಲ್ಮಾನರೆಲ್ಲರಿಗೂ ಘಾಸಿಯಾಗಿದೆ.
ಜನರ ಈ ಬೇಡಿಕೆಗಳು ಸಮಂಜಸವಾಗಿಲ್ಲ ಮತ್ತು ಗೌರವಯುತ ಭಾಷೆಯಲ್ಲಿಲ್ಲ ಎಂದು ಹೇಳಿ ಅಲ್ಲಿನ ನ್ಯಾಯಾಲಯ ಮಾನ್ಯಮಾಡುವುದಿಲ್ಲ. ಆಗ ಜನರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಮ್ಮ ದೈನಂದಿನ ಕೆಲಸಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ತೀವ್ರಗೊಳಿಸುತ್ತಾರೆ. ಈ ಬೇಡಿಕೆಗಳನ್ನು ಸರ್ಕಾರಕ್ಕೆ ಕಳಿಸುವುದಾಗಿಯೂ ಅಲ್ಲಿಂದ ಆದೇಶ ಬರುವವರೆಗೂ ಈ ತೆರಿಗೆ ಪಾವತಿಸುವಂತೆಯೂ ಕಲೆಕ್ಟರ್ ಹೇಳುತ್ತಾನೆ. ಜನರು ಒಪ್ಪುವುದಿಲ್ಲ. ಮೂರು ದಿನಗಳ ನಂತರ ಪ್ರತಿಭಟನೆ ಇನ್ನೂ ತೀವ್ರಗೊಳ್ಳುತ್ತದೆ. ಹಿಂದೂ ಮುಸ್ಲಿಮರೆಲ್ಲರೂ ಒಟ್ಟಿಗೆ ಸೇರುತ್ತಾರೆ. ದರ್ಜಿ, ಕ್ಷೌರಿಕ ಇತ್ಯಾದಿ ಎಲ್ಲ ವರ್ಗಗಳವರೂ ತಮ್ಮ ವೃತ್ತಿಗಳನ್ನು ತೊರೆದು ಪ್ರತಿಭಟನೆಗಿಳಿಯುತ್ತಾರೆ.
ಪ್ರತಿಭಟನೆಯ ತೀವ್ರತೆ ಎಷ್ಟಿತ್ತೆಂದರೆ ಸಾಂಪ್ರದಾಯಿಕ ಅಂತಿಮ ವಿಧಿಗಳನ್ನು ನೆರವೇರಿಸುವುದನ್ನೂ ಜನರು ತ್ಯಜಿಸಿದ್ದರಿಂದ ಮೃತದೇಹಗಳು ಗಂಗೆಯಲ್ಲಿ ತೇಲುತ್ತವೆ. ನಗರದ ಕೇಂದ್ರಭಾಗದಲ್ಲಿ ಎಲ್ಲ ಬಗೆಯ ಕೆಲಸಗಾರರು, ವ್ಯಾಪಾರಿಗಳು, ಬಡವ, ಶ್ರೀಮಂತ, ಇತ್ಯಾದಿ ಎಲ್ಲ ವರ್ಗದ ಜನರೂ ಸೇರಿ ಅವರ ಬೇಡಿಕೆ ಈಡೇರುವವರೆಗೂ ಕದಲುವುದಿಲ್ಲವೆನ್ನುತ್ತಾರೆ. ಹಲವು ದಿನಗಳು ಕಳೆದರೂ ಪ್ರತಿಭಟನೆ ಮುಂದುವರಿಯುತ್ತದೆ. ಸಾವಿರಾರು ಜನರು ರಾತ್ರಿ-ಹಗಲು ಗುಂಪುಗೂಡಿ ಧರಣಿ ಮಾಡುತ್ತಿರುತ್ತಾರೆ. ಪ್ರತಿಭಟನೆಗೆ ಸೆರದಿರುವವರಿಗೆ ದಂಡ ವಿಧಿಸುತ್ತಾರೆ. ಪ್ರತಿಭಟನೆಗೆ ಸ್ವಲ್ಪ ಹಿಂಜರಿಯುವ ಜನರನ್ನೂ ಗುರುತಿಸಿ ಅವರವರ ಜಾತಿಯಿಂದ ಬಹಿಷ್ಕರಿಸುವುದಾಗಿ ಸಾರುತ್ತಾರೆ.
ದಿನಕಳೆದಂತೆ ಪ್ರಾಂತದ ಎಲ್ಲ ಭಾಗಗಳಿಂದಲೂ ಜನರು ಬಂದು ಸೇರಿ ಪ್ರತಿಭಟನಕಾರರ ಸಂಖ್ಯೆ ದಿನೇದಿನೇ ಹೆಚ್ಚುತ್ತಾ ಹೋಗುತ್ತದೆ. ಕಲೆಕ್ಟರ್ನ ವರದಿಯಂತೆ ಸುಮಾರು ೨೦,೦೦೦ ಜನರು ಪ್ರತಿಭಟನೆಗೆ ಕುಳಿತು ತೆರಿಗೆ ರದ್ದುಪಡಿಸುವವರೆಗೂ ಕದಲುವುದಿಲ್ಲವೆಂದು ಘೋಷಿಸುತ್ತಾರೆ. ಆಯಾ ಜಾತಿಯವರು ತಮ್ಮ ಜಾತಿಯವರೆಲ್ಲರೂ ಈ ಪ್ರತಿಭಟನೆಗೆ ಬರಬೇಕೆಂದು ಕರೆ ನೀಡುವ ಮೂಲಕ ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತಲೇ ಇರುತ್ತದೆ. ಕೃಷಿ ಕೆಲಸಗಳನ್ನೂ ನಿಲ್ಲಿಸಿ ಜಮೀನುದಾರರೂ ರೈತರೂ ಭಾಗಿಯಾಗುವ ಮೂಲಕ ಇಡೀ ಪ್ರಾಂತವೇ ಪ್ರತಿಭಟನೆಗೆ ನಿಂತಂತಾಗಿರುತ್ತದೆ.
ಇಷ್ಟಾದರೂ ಅವರ ಉದ್ದೇಶ ಹಿಂಸೆ ಆಗಿರುವುದಿಲ್ಲ. ತಾವು ನಿಃಶಸ್ತ್ರಧಾರಿಗಳಾಗಿರುವುದರಿಂದ ಮಿಲಿಟರಿ ಕೂಡ ತಮ್ಮ ಮೇಲೆ ದಾಳಿಮಾಡದೆನ್ನುವ ನಂಬಿಕೆಯಲ್ಲಿ ದಿನೇದಿನೇ ಸಂಖ್ಯೆ ವೃದ್ಧಿಯಾಗುತ್ತಲಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ದಿನಗೂಲಿಗಳ ಕುಟುಂಬಂದವರಿಗೆ ನೆರವು ನೀಡಲು ಹಣಸಂಗ್ರಹದಲ್ಲೂ ಜನ ತೊಡಗುತ್ತಾರೆ. ಅಲ್ಲಿ ಸೇರಿದವರಿಗಾಗಿ ದವಸಧಾನ್ಯ, ಎಣ್ಣೆ, ಸೌದೆಗಳನ್ನು ಸಂಗ್ರಹಿಸಿ ತಂದುಕೊಡಲಾಗುತ್ತಿತ್ತು. ಜನರನ್ನು ಒಟ್ಟಾಗಿಡಲು ಧಾರ್ಮಿಕ ಆದೇಶಗಳನ್ನು ಹೊರಡಿಸಲಾಗಿತ್ತು.
ಆರಂಭದಲ್ಲಿ ಈ ಬೃಹತ್ ಪ್ರತಿಭಟನೆಯಿಂದ ಹಿಂಸಾತ್ಮಕ ಕಲಹವಾಗಿ ಪರಿಸ್ಥಿತಿ ಕೈಮೀರಬಹುದೆಂದು ಭಯಪಟ್ಟಿದ್ದ ಮ್ಯಾಜಿಸ್ಟ್ರೇಟ್ ದಿನಕಳೆದಂತೆ ಆತಂಕಮುಕ್ತನಾಗುತ್ತಾನೆ. ಸಂಖ್ಯೆಯ ಹೆಚ್ಚಳವಾದರೂ ಯಾವುದೇ ಗಲಭೆ ಹಿಂಸೆಯ ಸೂಚನೆ ಕಾಣುವುದಿಲ್ಲ. ಗವರ್ನರ್-ಜನರಲ್ ಕೌನ್ಸಿಲ್ಗೆ ವಿಷಯ ತಲಪುತ್ತದೆ. ಯಾವ ಕಾರಣಕ್ಕೂ ಪ್ರತಿಭಟನೆಗೆ ಅಂಜಿ ತೆರಿಗೆ ಹಿಂಪಡೆಯುವ ಪ್ರಶ್ನೆ ಇಲ್ಲ, ಬದಲಿಗೆ ತೆರಿಗೆ ಪಾವತಿಸದೆ ಸರ್ಕಾರದ ಅಧಿಕಾರದ ವಿರುದ್ಧದ ಪ್ರತಿಭಟನೆಯಿಂದ ಆಗಬಹುದಾದ ಅನಾಹುತದ ಕೆಡುಕುಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಸೂಚನೆ ಅಲ್ಲಿಂದ ಬರುತ್ತದೆ. ಅದರಂತೆ ತೆರಿಗೆ ಹಿಂಪಡೆಯುವ ಯಾವುದೇ ಸಕಾರಣವಿಲ್ಲ, ಕಾನೂನು ಮತ್ತು ಸರ್ಕಾರದ ವಿರುದ್ಧವಾಗಿ ಪ್ರತಿಭಟಿಸುವವರಿಗೆ ತೀವ್ರ ಶಿಕ್ಷೆಯಾಗುತ್ತದೆ ಎಂದು ಸಾರಲಾಗುತ್ತದೆ. ಆಗಲೂ ಪ್ರತಿಭಟನೆ ನಿಲ್ಲುವುದಿಲ್ಲ. ಸ್ವಲ್ಪ ದಿನಗಳ ನಂತರ ಗವರ್ನಿಂಗ್ ಕೌನ್ಸಿಲ್ ಧಾರ್ಮಿಕ ಕಟ್ಟಡಗಳು ಮತ್ತು ಕೆಲವು ಕಡಮೆ ಆದಾಯದ ಮನೆಗಳಿಗೆ ವಿನಾಯತಿ ನೀಡುವ ಸೂಚನೆ ರವಾನಿಸುತ್ತದೆ. ಆದರೆ ಪ್ರತಿಭಟನನಿರತರ ಮುಂದೆ ಈ ಸಡಿಲಿಕೆ ಘೋಷಿಸುವುದು ದೌರ್ಬಲ್ಯವಾಗುತ್ತದೆ ಮತ್ತು ಸರ್ಕಾರದ ಅಧಿಕಾರವೇ ಪ್ರಶ್ನಾರ್ಹವಾಗುತ್ತದೆ, ಪ್ರತಿಭಟನಕಾರರು ಈ ಸಡಿಲಿಕೆಗೆ ಅರ್ಹರಲ್ಲ ಎಂದು ಮ್ಯಾಜಿಸ್ಟ್ರೇಟನು ವಿನಾಯತಿ ಘೋಷಿಸದೆ ಪ್ರತಿಭಟನಾ ಭಿತ್ತಿಪತ್ರ ಫಲಕಗಳನ್ನು ಹಿಡಿದವರನ್ನು ಒಪ್ಪಿಸಿದವರಿಗೆ ೫೦೦ ರೂ.ಗಳ ಬಹುಮಾನ ಘೋಷಿಸುತ್ತಾನೆ.
ಪ್ರತಿಭಟನೆಗೆ ಬಗ್ಗದೆ ನಿಗ್ರಹಿಸುವ ಕ್ರಮಗಳನ್ನೇ ಕೈಗೊಳ್ಳುತ್ತಿರುವುದರಿಂದ ಪ್ರತಿಭಟನಕಾರರು ಸಮಾನ ಸಮಸ್ಯೆಗಳಿರುವ ಎಲ್ಲ ನಗರಗಳ ಜನರು ಒಟ್ಟುಗೂಡಿ ನಿಯೋಗವಾಗಿ ಕಲ್ಕತ್ತಾಗೆ ತೆರಳುವ ನಿರ್ಣಯ ಮಾಡುತ್ತಾರೆ. ಪ್ರತಿಯೊಂದು ಮನೆಯವರೂ ನಿಯೋಗದಲ್ಲಿ ಹೋಗಬೇಕು, ಇಲ್ಲವೆ ತನ್ನಪರ ಓರ್ವನನ್ನು ಕಳಿಸಬೇಕು ಅಥವಾ ತನ್ನ ಪರವಾಗಿ ಖರ್ಚುಗಳನ್ನು ಭರಿಸಲು ಕೊಡುಗೆಯನ್ನು ನೀಡಬೇಕು ಎಂದು ತೀರ್ಮಾನಿಸುತ್ತಾರೆ. ಆದರೆ ಅದು ಕಾರ್ಯಗತಗೊಳ್ಳುವುದು ಸುಲಭವಲ್ಲ ಎನ್ನುವ ಕೆಲವರ ತಕರಾರಿನಿಂದ ಈ ಪ್ರಯತ್ನ ಮುಂದುವರಿಯುವುದಿಲ್ಲ. ತೆರಿಗೆ ವಸೂಲಿ ಪ್ರಯತ್ನವೂ ಗಂಡಾಂತರವಾಗಬಹುದು ಎಂದು ಅದೂ ಸಹ ಮುಂದುವರಿಯುವುದಿಲ್ಲ.
ಪ್ರತಿಭಟನಕಾರರು ಅಂತಿಮ ಮನವಿಯನ್ನು ರವಾನಿಸುತ್ತಾರೆ. “ಇಲ್ಲಿ ಪ್ರಶ್ನಾರ್ಹವಾಗಿದ್ದು ತೆರಿಗೆ ಮತ್ತು ಅದರ ಪ್ರಮಾಣಕ್ಕಿಂತ ತೆರಿಗೆಯ ಸ್ವರೂಪ ಮತ್ತು ಜಾರಿಗೊಳಿಸುವ ತಾತ್ತ್ವಿಕತೆ ಕುರಿತಾದದ್ದು ಎನಿಸುತ್ತದೆ. ನಗರವಾಸಿಗಳ ಪ್ರಕಾರ ಮನೆತೆರಿಗೆ ಬ್ರಿಟಿಷ್ ಸರ್ಕಾರದ ಆವಿಷ್ಕಾರ. ಇದು ಈ ದೇಶದ ಕಾನೂನು ಮತ್ತು ರೂಢಿಯಲ್ಲಿ ಇರಲಿಲ್ಲ. ಯಾವುದೇ ಸರ್ಕಾರಕ್ಕೆ ಈ ರೀತಿಯ ರೂಢಿಯಲ್ಲಿಲ್ಲದ ಹೊಸ ತೆರಿಗೆ ವಿಧಿಸುವ ಅಧಿಕಾರವಿಲ್ಲ. ತಾವು ಪ್ರತಿಭಟಿಸಲಿಲ್ಲವೆಂದರೆ ಈ ಬಗೆಯ ಹೊಸತೆರಿಗೆಗಳು ಹೆಚ್ಚಾಗುತ್ತವೆ. ಅವು ತಮ್ಮದೆನ್ನುವ ಮೂಲತತ್ತ್ವಗಳೆಲ್ಲವನ್ನೂ ಹಾನಿಗೊಳಿಸುತ್ತವೆ ಎಂದು ನಗರವಾಸಿಗಳು ಭಾವಿಸಿದ್ದಾರೆ. ಈ ಸನ್ನಿವೇಶದಲ್ಲಿ ನಮ್ಮ ಯಾವುದೇ ಕಠಿಣಕ್ರಮಗಳಿಗೆ ಅವರು ಸುಲಭವಾಗಿ ಬಗ್ಗುವವರಲ್ಲ” ಎನ್ನುವ ಜಿಲ್ಲಾ ಮ್ಯಾಜಿಸ್ಟ್ರೇಟನ ಟಿಪ್ಪಣಿ ವಿಶೇಷವಾಗಿದೆ.
ಇತರ ನಗರಗಳ ಪ್ರತಿಭಟನೆಗಳು
ಬನಾರಸಿನ ಪ್ರತಿಭಟನೆಗಳಿಂದ ಪ್ರೇರಿತರಾದ ಪಾಟ್ನಾದ ಜನರು ಸಹ ಮನೆತೆರಿಗೆ ವಿರುದ್ಧ ೧೨ ಅಂಶಗಳನ್ನೊಳಗೊಂಡ ಮನವಿಯನ್ನು ಸಲ್ಲಿಸುತ್ತಾರೆ. ಪಾಟ್ನಾ ಜನತೆಗೆ ಒಟ್ಟುಗೂಡದಂತೆ, ಸಭೆಗಳನ್ನು ಸೇರದಂತೆ ಎಚ್ಚರವಹಿಸುವಂತೆ ಸೂಚನೆ ನೀಡಲಾಗುತ್ತದೆ. ನಂತರ ಸರೂನ್ ನಗರದಲ್ಲಿ ಬರೀ ತೆರಿಗೆ ವಿರುದ್ಧ ಮನವಿ ಮಾತ್ರವಲ್ಲ, ಮನೆತೆರಿಗೆ ಲೆಕ್ಕಾಚಾರ ನಡೆಸಿ ನಿಗದಿಪಡಿಸಲೂ ಪ್ರತಿಭಟನೆಗಳಾಗುತ್ತಿರುವ ಬಗ್ಗೆ ವರದಿ ಮಾಡುತ್ತಾರೆ. ಮುರ್ಷಿದಾಬಾದ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು ಇನ್ನೂ ವಿಪರೀತವಾಗಿತ್ತು ಎಂದು ವರದಿ ಮಾಡಲಾಗಿದೆ. ಅಲ್ಲಿಯ ನಗರವಾಸಿಗಳ ಮನವಿಯ ಭಾಷೆಯೇ ಕಠೋರವಾಗಿದೆ ಎನ್ನುತ್ತಾನೆ ಮ್ಯಾಜಿಸ್ಟ್ರೇಟ್. ಅವರ ಮನವಿಯಲ್ಲಿದ್ದ ಅಂಶ ಇದು: “ಈ ಭೂಮಿಯ ಮೇಲೆ ಇಂಗ್ಲಿಷರಷ್ಟು ಇನ್ನಾವ ಅರಸರೂ ಇಷ್ಟೊಂದು ದಬ್ಬಾಳಿಕೆ ಮಾಡಿರಲು ಸಾಧ್ಯವಿಲ್ಲ. ನಮ್ಮ ದುರದೃಷ್ಟದಿಂದ ಹಲವು ವರ್ಷಗಳಿಂದ ಈ ದಮನಕಾರಿ ಆಳ್ವಿಕೆಯಲ್ಲಿ ನರಳಬೇಕಿದೆ… ಕೊಳ್ಳುವುದು ಮಾರುವುದು ಸಾಧ್ಯವಿಲ್ಲದಷ್ಟು ಎರಡುಪಟ್ಟು, ನಾಲ್ಕುಪಟ್ಟು ಹೆಚ್ಚು ಸುಂಕ ಹಾಕಲಾಗಿದೆ. ಇದರ ಜೊತೆಗೆ ಮನೆ ಮತ್ತು ಅಂಗಡಿಗಳ ತೆರಿಗೆಯ ಆದೇಶವು ಮತ್ತೊಂದು ಹೊಸ ದಬ್ಬಾಳಿಕೆ. ಸರ್ಕಾರದ ಈ ಆದೇಶ ನಮ್ಮನ್ನು ವಿನಾಶಮಾಡುವ ಸ್ಪೋಟಕದಂತಿದೆ.”
ಈ ಎಲ್ಲ ವರದಿಗಳನ್ನು ಗಮನಿಸಿದ ಕಂದಾಯ ಕಾರ್ಯದರ್ಶಿಯು ‘ಕಲ್ಕತ್ತ ಮತ್ತು ಹತ್ತಿರದ ನಗರಪ್ರದೇಶ ಹೊರತಾಗಿ ಉಳಿದೆಡೆ ಈ ಹೊಸ ತೆರಿಗೆಗಳ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದನ್ನು ಸರಿಪಡಿಸಲು ಕೆಲವು ವರ್ಷಗಳೇ ಬೇಕಾಗುತ್ತದೆ. ಇದಕ್ಕೆ ತೆರಿಗೆ ನಿಲ್ಲಿಸಿ ಎರಡು-ಮೂರು ಲಕ್ಷಗಳ ಕೈಬಿಟ್ಟು ಬಹುದೊಡ್ಡ ಸಂಖ್ಯೆಯ ಜನರ ಪ್ರೀತಿ-ವಿಶ್ವಾಸ ಗಳಿಸಬಹುದು’ ಎನ್ನುವ ಸಲಹೆ ನೀಡುತ್ತಾನೆ. ಅದನ್ನು ಸರ್ಕಾರ ಒಪ್ಪಿ ಈ ತೆರಿಗೆಯ ನಿಗದಿ ಮತ್ತು ವಸೂಲಿಯನ್ನು ಸ್ಥಗಿತಗೊಳಿಸುವಂತೆ ಸೂಚನೆ ಹೊರಡಿಸುತ್ತದೆ.
ಈ ತೆರಿಗೆಗೆ ಅತಿದೊಡ್ಡ ಪ್ರತಿರೋಧ ವ್ಯಕ್ತವಾದುದು ಭಾಗಲ್ಪುರ್ನಲ್ಲಿ. ತೆರಿಗೆ ಸಂಗ್ರಹಕ್ಕೆ ತಹಸೀಲ್ದಾರರು ಹೋದಾಗ ಎಲ್ಲರೂ ಮನೆ ಮತ್ತು ಅಂಗಡಿಗಳ ಬಾಗಿಲುಗಳನ್ನು ಮುಚ್ಚುತ್ತಾರೆ. ಸಾವಿರಾರು ನಿವಾಸಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು, ಯಾವುದೇ ಗಲಭೆ-ಹಿಂಸೆಗಳನ್ನು ಮಾಡದಿದ್ದರೂ ತಮ್ಮ ಕಷ್ಟಗಳನ್ನು, ದೂರುಗಳನ್ನು ಮತ್ತು ತೆರಿಗೆಯ ಭಾರವನ್ನು ಹೇಳಿ, ಕಟ್ಟಲು ಸಾಧ್ಯವಿಲ್ಲ ಎನ್ನುವ ದೂರಿನ ಮಳೆಯನ್ನೇ ಸುರಿಸಿದರು – ಎಂದು ಕಲೆಕ್ಟರ್ ವರದಿ ಮಾಡುತ್ತಾನೆ. ಇದಕ್ಕೆ ಅನುಗುಣವಾಗಿ ಮ್ಯಾಜಿಸ್ಟ್ರೇಟ್ ವರದಿಯಲ್ಲಿ “ನಾನು ಕೆಲವು ಮುಖ್ಯಸ್ಥರನ್ನು ಕರೆಸಿ ಸರ್ಕಾರದ ಆದೇಶವನ್ನು ತಿರಸ್ಕರಿಸುವ ನಿಮ್ಮ ಪ್ರತಿರೋಧ ನಿರುಪಯುಕ್ತವೆಂದು ಮನವರಿಕೆ ಮಾಡಲು ಪ್ರಯತ್ನಪಟ್ಟೆ. ಅದಕ್ಕೆ ಅವರು ನಾವು ನಮ್ಮ ಮನೆಗಳನ್ನೇ ಬಿಟ್ಟುಕೊಟ್ಟು ನಗರವನ್ನೇ ತ್ಯಜಿಸಿ ಹೋಗುವೆವೇ ವಿನಃ ಈ ತೆರಿಗೆಯನ್ನು ಪಾವತಿಸಲು ಸಮ್ಮತಿಸುವುದಿಲ್ಲ ಎಂದು ಘೋಷಿಸಿದರು” ಎಂದು ಹೇಳುತ್ತಾನೆ. ತೆರಿಗೆ ವಸೂಲಿ ಮಾಡದೆ ನಿಲ್ಲಿಸಲು ತೀರ್ಮಾನಿಸಿದ್ದು ಸರಿಯಲ್ಲ, ಬೇಕಿರುವ ನೆರವನ್ನು ಪಡೆದು ತೆರಿಗೆ ವಸೂಲಿ ಮುಂದುವರಿಸಬೇಕು ಎನ್ನುವ ಸೂಚನೆ ಸರ್ಕಾರ ಹೊರಡಿಸುತ್ತದೆ. ಅದಕ್ಕೆ ಪ್ರತಿಯಾಗಿ ಕಲೆಕ್ಟರ್ ಸರ್ಕಾರಕ್ಕೆ “ನಾನು ಮನೆತೆರಿಗೆ ವಸೂಲಿಗೆ ಹೋದಾಗ ಭೀಕರವಾಗಿ ಹಲ್ಲೆಗೊಳಗಾದೆ. ಇಟ್ಟಿಗೆ, ಕಲ್ಲು, ಇತ್ಯಾದಿಗಳಿಂದ ನನ್ನ ತಲೆಗೆ ಹೊಡೆದರು. ನನ್ನ ಮುಖ, ತಲೆಗೆ ಕೊಯ್ದಗಾಯಗಳಾಗಿವೆ. ತಪ್ಪಿಸಿಕೊಂಡು ಮಿ|| ಗ್ಲಾಸ್ ಮನೆಯೊಳಗೆ ಓಡಿರಲಿಲ್ಲವೆಂದರೆ ನಾನು ಬದುಕಿರುತ್ತಿರಲಿಲ್ಲ” ಎಂದು ಕಲೆಕ್ಟರ್ ದೂರಿದರೆ, ಮ್ಯಾಜಿಸ್ಟ್ರೇಟರ್ ವರದಿ ಇದಕ್ಕೆ ವ್ಯತಿರಿಕ್ತವಾಗಿತ್ತು. “ಕಲೆಕ್ಟರ್ ಜನಸ್ತೋಮವನ್ನು ಹೊಡೆದು ಕೆರಳಿಸಿರಲಿಲ್ಲವೆಂದರೆ ಅವರ ಮೇಲೆ ಹಲ್ಲೆಯಾಗುತ್ತಿರಲಿಲ್ಲ. ತೆರಿಗೆ ಸಂಗ್ರಹಕ್ಕೆ ಹೋದಾಗ ಹಲ್ಲೆಯಾಯಿತು ಎನ್ನುವುದೂ ಸತ್ಯಕ್ಕೆ ದೂರ” ಎಂದು ವರದಿ ಮಾಡುತ್ತಾನೆ. ಕಲೆಕ್ಟರ್ ಮೇಲೆ ಹಲ್ಲೆ ನಡೆದದ್ದನ್ನು ಪರಿಗಣಿಸಿ, ಮ್ಯಾಜಿಸ್ಟ್ರೇಟರ ಸಹಾನುಭೂತಿ ಇಲ್ಲದಿದ್ದರೆ ಭಾಗಲ್ಪುರದ ಜನತೆ ಕಲೆಕ್ಟರ್ನ ಮೇಲೆ ಹಲ್ಲೆಗೆ ಯೋಚಿಸುತ್ತಲೂ ಇರಲಿಲ್ಲ ಎಂದು ಮ್ಯಾಜಿಸ್ಟ್ರೇಟನನ್ನು ಅಮಾನತು ಮಾಡಲಾಗುತ್ತದೆ.
ಕಲೆಕ್ಟರ್ ನೆರವಿಗೆ ಹೆಚ್ಚುವರಿ ತುಕಡಿ ಕಳಿಸಲು ನಿರ್ಣಯಿಸಲಾಗುತ್ತದೆ. ಆದರೂ ತೆರಿಗೆ ವಸೂಲಿಯ ವಿರುದ್ದದ ಶಸ್ತ್ರರಹಿತ ಶಾಂತಿಯುತ ಪ್ರತಿಭಟನೆ ಮುಂದುವರಿಯುತ್ತದೆ. ೨೧ನೇ ಜನವರಿ, ೧೮೧೨ರಲ್ಲಿ ಮನೆ-ಅಂಗಡಿ ತೆರಿಗೆಗಳನ್ನು ರದ್ದುಮಾಡುವ ಚಿಂತನೆ ಇದೆ ಎಂದು ಕಂದಾಯ ಬೋರ್ಡ್ಗೆ ಗವರ್ನಿಂಗ್ ಕೌನ್ಸಿಲ್ ಮಾಹಿತಿ ನೀಡುತ್ತದೆ. ೮ನೇ ಮೇ, ೧೮೧೨ರಲ್ಲಿ ಈ ತೆರಿಗೆಯನ್ನು ರದ್ದುಗೊಳಿಸಿ ಆದೇಶ ಹೊರಬೀಳುತ್ತದೆ.
-೩-
ಹೀಗೆ ಈ ದಾಖಲೆಗಳ ಮೂಲಕ ಧರ್ಮಪಾಲರು ಬ್ರಿಟಿಷರ ಆಳ್ವಿಕೆಯ ದಮನಕಾರಿ ನೀತಿಗಳಿಗೆ ಭಾರತೀಯರ ಆರಂಭಿಕ ಪ್ರತಿರೋಧವು ಬಹುತೀಕ್ಷ್ಣವಾಗಿತ್ತು ಎನ್ನುತ್ತಾರೆ. ಜನರಲ್ಲಿ ಒಗ್ಗಟ್ಟಿತ್ತು. ವೃತ್ತಿಗಳನ್ನು ಬಿಟ್ಟರು. ಸರಕುಸೇವೆಗಳನ್ನು ನಿಲ್ಲಿಸಿದರು. ಅಂತಿಮಸಂಸ್ಕಾರಗಳನ್ನೇ ಸ್ಥಗಿತಗೊಳಿಸಿದರು. ಅಂದಾಜು ೨ ಲಕ್ಷಕ್ಕೂ ಹೆಚ್ಚಿನ ಜನರು ನಿರಂತರ ಧರಣಿಕೂತರು. ಕೊನೆಯವರೆಗೂ ನಿರ್ಗಮಿಸದ ಪಣತೊಟ್ಟರು. ಪ್ರಾಂತದ ಪ್ರತಿ ಮನೆಗಳಿಗೂ ಮಾಹಿತಿ ರವಾನಿಸಿ ಎಲ್ಲ ಬಗೆಯ ಬೆಂಬಲ ಪಡೆದರು. ಎಲ್ಲ ವರ್ಗಗಳೂ ಜೊತೆಯಾದವು. ದವಸ-ಧಾನ್ಯ ಉರುವಲುಗಳ ನೆರವು ದೊರೆಯಿತು. ಪ್ರತಿಭಟನೆಯ ಪರ ಧಾರ್ಮಿಕ ತೀರ್ಮಾನಗಳಾದವು. ಪೊಲೀಸ್ ಮತ್ತಿತರ ಬಲಪ್ರಯೋಗವಿದ್ದರೂ, ಆಮಿಷಗಳಿದ್ದರೂ ತೆರಿಗೆ ವಸೂಲಿ ಫಲಪ್ರದವಾಗದಂತೆ ನೋಡಿಕೊಂಡರು. ಕಲೆಕ್ಟರನೇ ಹಿಂಸೆಗೆ ಪ್ರಚೋದಿಸಿದರೂ ಸಹ ಸಣ್ಣಪ್ರಮಾಣದ ಹಲ್ಲೆಗೆ ಸೀಮಿತವಾಗಿ ನಂತರ ಸಂಯಮದಿಂದ ನಿಃಶಸ್ತ್ರ ಹೋರಾಟ ಮುಂದುವರಿಸಿದರು. ಇಷ್ಟೆಲ್ಲ ಪ್ರತಿಭಟನೆಗಳು ನಡೆಸಿದರೂ ಪ್ರಭುತ್ವದ ವಿರುದ್ಧ ದ್ವೇಷವನ್ನೇನೂ ಬೆಳೆಸಿಕೊಳ್ಳಲಿಲ್ಲ. ಪರಸ್ಪರ ಮಾತುಕತೆ ಇದ್ದೇ ಇತ್ತು.
“ಬಹುಶಃ ಇತ್ತೀಚೆಗೆ ಭಾರತೀಯರು ಅನ್ಯ ಮೌಲ್ಯವ್ಯವಸ್ಥೆಯನ್ನು ಹೊಂದಿರುವ ಬ್ರಿಟಿಷ್ ಪ್ರಭುತ್ವದ ವಿರುದ್ಧ ತಮ್ಮ ಸಾಂಪ್ರದಾಯಿಕ ಪ್ರತಿಭಟನೆಯ ಸ್ವರೂಪ ನಿರುಪಯುಕ್ತವೆಂದು ಬಿಟ್ಟಿರಬೇಕು. ಇದರ ಪರಿಣಾಮವಾಗಿ ಪ್ರತಿರೋಧ ಒಂದು ಕಡೆ ಹಿಂಸಾತ್ಮಕ ರೂಪ ಪಡೆದರೆ, ಮತ್ತೊಂದೆಡೆ ನಿಷ್ಕ್ರಿಯತೆ ಮತ್ತು ಜಡತ್ವಕ್ಕೆ ಜಾರುವಂತೆ ಮಾಡಿರಬೇಕು.”
೧೮೧೦ರ ಅವಧಿಯನ್ನು ೧೧೦-೧೨೦ ವರ್ಷಗಳ ನಂತರ ೧೯೨೦-೩೦ರಲ್ಲಿ ನಡೆದ ಅಸಹಕಾರ ಚಳವಳಿಗೆ ಹೋಲಿಸಿದರೆ, ಜನರ ಸಂಘಟನೆ, ಅನುಸರಿಸಿದ ವಿಧಾನ, ಐಕ್ಯತೆಕ್ಕಾಗಿ ತೆಗೆದುಕೊಂಡ ಕ್ರಮಗಳು, ಜನರ ಮನೋಭಾವದಲ್ಲಿದ್ದ ತರ್ಕ – ಎಲ್ಲವೂ ಈ ಎರಡೂ ಕಾಲಘಟ್ಟಗಳ ಭಾರತೀಯರಲ್ಲಿ ಒಂದೇ ತೆರನಾಗಿದ್ದವು. ಹೆಚ್ಚು ಭಿನ್ನತೆಗಳೇನಿಲ್ಲ. ಆದರೆ ೧೮೧೦ರ ಜನರು ತಾವೇ ಸಕ್ರಿಯವಾಗಿ ಪ್ರತಿರೋಧದಲ್ಲಿ ತೊಡಗುವವರಾಗಿದ್ದರು. ಒಂದು ಶತಮಾನದ ನಂತರದ ಭಾರತೀಯರಿಗೆ ಅದು ಸಾಧ್ಯವಿಲ್ಲ. ಈ ಒಂದು ಶತಮಾನವು ಅವರ ಧೈರ್ಯ, ವಿಶ್ವಾಸಗಳನ್ನು ಕುಂದಿಸಿ ನಿಷ್ಕ್ರಿಯರನ್ನಾಗಿಸಿ ಜಡತ್ವವನ್ನು ರೂಢಿಸಿತು. ಗಾಂಧಿಯವರು ಪ್ರವೇಶಿಸಿ ಆ ಧೈರ್ಯ ಮತ್ತು ವಿಶ್ವಾಸವನ್ನು ತುಂಬಿ ಪುನಃ ದಾರಿಗೆ ತಂದರು – ಎನ್ನುತ್ತಾರೆ ಧರ್ಮಪಾಲ್.
* * *
ಇಲ್ಲಿಂದ ಮುಂದೆ ಸ್ವತಂತ್ರ ಭಾರತದಲ್ಲಿ ಈ ನಾಗರಿಕ ಅಸಹಕಾರದ ಸಮಂಜಸತೆಯ ಬಗ್ಗೆ ಚರ್ಚೆಯನ್ನು ಮುಂದುವರಿಸುತ್ತಾರೆ ಧರ್ಮಪಾಲ್. ಪ್ರಜಾಪ್ರಭುತ್ವವು ಪ್ರಜೆಗಳ ಪ್ರತಿನಿಧಿಯಾಗಿರುವುದರಿಂದ ಅದರ ನೀತಿ-ನಿಯಮಗಳ ವಿರುದ್ಧ ಅಸಹಕಾರ ಸಮಂಜಸವಲ್ಲವೆಂದು ಒಂದು ಪಕ್ಷವು ವಾದಿಸಿದರೆ, ಮತ್ತೊಂದು ಪಕ್ಷವು ನಾಗರಿಕ ಅಸಹಕಾರವು ಪ್ರಜಾಪ್ರಭುತ್ವಕ್ಕೆ ಪೂರಕ ಮೌಲ್ಯವೆಂದೇ ಪ್ರತಿಪಾದಿಸುತ್ತದೆನ್ನುವುದನ್ನು ಗುರುತಿಸುತ್ತಾರೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾಗರಿಕ ಅಸಹಕಾರ ಮತ್ತು ಅವಿಧೇಯತೆಗೆ ಅವಕಾಶವಿಲ್ಲದಿದ್ದರೆ ಪ್ರಭುತ್ವವು ನಿರಂಕುಶವೂ ದಮನಕಾರಿಯೂ ಮತ್ತು ಅನ್ಯಾಯಯುತವೂ ಆಗುವ ಅಪಾಯವಿರುವುದರಿಂದ ಅದಕ್ಕೆ ಅವಕಾಶವಿರಬೇಕು. ಆದರೆ ಅದನ್ನು ಈ ಬಗೆಯ ಅನಿಷ್ಟಗಳಿಂದ ಪ್ರಭುತ್ವ ಮತ್ತು ಸಮಾಜವನ್ನು ರಕ್ಷಿಸಲು ಮಾತ್ರವೇ ಬಳಸಬೇಕು, ಇಲ್ಲವಾದರೆ ಸಮಾಜವು ಯಾಂತ್ರಿಕ ಆಚರಣೆ, ಅರಾಜಕತೆಗೆ ದಾರಿಮಾಡಿಕೊಡುವ ನಿರಂಕುಶತೆ ಮತ್ತು ಶಸ್ತ್ರಸಜ್ಜಿತ ಸಂಘರ್ಷಕ್ಕೆ ಕಾರಣವಾಗುತ್ತದೆ – ಎಂದು ಧರ್ಮಪಾಲರು ತಮ್ಮ ನಿರೂಪಣೆಯನ್ನು ಮುಗಿಸುತ್ತಾರೆ.
ಧರ್ಮಪಾಲರು ಉಲ್ಲೇಖಿಸುವ ಈ ಒಂದು ಅನಿಸಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ: “ಒಟ್ಟಾರೆ ಹೊಸ ಬ್ರಿಟಿಷ್ ಪ್ರಭುತ್ವದ ವಿರುದ್ಧದ ಭಾರತೀಯರ ನಾಗರಿಕ ಅವಿಧೇಯತೆಯ ಆಂದೋಲನವು ಸಫಲವಾಗುವುದಿಲ್ಲ. ಇದಕ್ಕೆ ಹಲವು ಕಾರಣಗಳಿರಬೇಕು. ಭಾಗಶಃ ಈ ಬಗೆಯ ಪ್ರತಿರೋಧ ಯಶಸ್ವಿಯಾಗಬೇಕಾದರೆ ಆಳುವವರು ಮತ್ತು ಆಳಿಸಿಕೊಳ್ಳುವವರ ನಡುವೆ ಸಾಮಾನ್ಯ ಮೌಲ್ಯಗಳಿರಬೇಕು. ದೇಸೀ ಆರಸರನ್ನು ಪಲ್ಲಟಗೊಳಿಸಿ ಬಂದ ಬ್ರಿಟಿಷರು ಈ ಬಗೆಯ ಸಾಮ್ಯವನ್ನು ಮಾಯವಾಗಿಸಿದರು. ೧೮-೧೯ನೇ ಶತಮಾನದ ಬ್ರಿಟಿಷ್ ಆಳ್ವಿಕೆಗಾರರ ಮತ್ತು ಅವರ ಭಾರತೀಯ ಪ್ರಜೆಗಳ ನೈತಿಕ ಮತ್ತು ಮಾನಸಿಕ ಜಗತ್ತು ಒಂದೇ ಆಗಿರಲಿಲ್ಲ.” ಈ ಬಗ್ಗೆ ಯೋಚಿಸಿದರೆ ಅಸಹಕಾರ ಅಥವಾ ನಾಗರಿಕ ಅವಿಧೇಯತೆ ಚೌಕಟ್ಟಿನ ಬದಲಿಗೆ ಬ್ರಿಟಿಷ್ ಪ್ರಭುತ್ವದ ನೀತಿಗೆ ಭಾರತೀಯರ ಆರಂಭಿಕ ಪ್ರತಿರೋಧವನ್ನು ಬೇರೆಯದೇ ಆಯಾಮದಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಈ ಒಳನೋಟವು ಅನ್ಯ ಆಳ್ವಿಕೆಗೆ ಭಾರತೀಯರ ಪ್ರತಿರೋಧದ ಸ್ವರೂಪ ಮತ್ತು ಅದರ ವಿಫಲತೆಯ ಕಾರಣವನ್ನು ಭಾರತೀಯ ಸಂಸ್ಕöÈತಿಯ ಕುರಿತ ಇತ್ತೀಚಿನ ಸಂಶೋಧನೆಗಳ ಹಿನ್ನೆಲೆಯಲ್ಲಿ ಇನ್ನೊಂದು ಕೋನದಿಂದ ನೋಡುವ ಸಾಧ್ಯತೆಯನ್ನು ತೆರೆದಿಡುತ್ತದೆ.
-೪-
ಪಾಶ್ಚಾತ್ಯ ಪ್ರಭುತ್ವ, ಭಾರತೀಯ ರಾಜ್ಯಾಡಳಿತ ಮತ್ತು ನಾಗರಿಕ ಅಸಹಕಾರ
ಯಾರೂ ಪ್ರಶ್ನಿಸಲಾರದ ಅಧಿಕಾರವಿರುವ ಸಾರ್ವಭೌಮ (Sovereign) ‘ಸ್ಟೇಟ್’ ಎಂಬುದು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಜನ್ಮತಳೆದ ಸಂಸ್ಥೆ. ಈ ಸ್ಟೇಟ್ನ ಆಳ್ವಿಕೆಗೆ ಒಳಪಟ್ಟ ಜನರ ಜೀವನವು ಈ ಸಾರ್ವಭೌಮ ಸ್ಟೇಟ್ನ ಕಾನೂನುಗಳ ನಿಯಂತ್ರಣ ಮತ್ತು ನಿರ್ದೇಶನಕ್ಕೆ ಒಳಪಟ್ಟಿರಬೇಕು. ಪಶ್ಚಿಮದಲ್ಲೂ ಸಹ ಈ ಸ್ವರೂಪದ ಸ್ಟೇಟ್ ಗ್ರೀಕ್-ರೋಮ್ ಕಾಲದಲ್ಲಿ ಇರಲಿಲ್ಲ. ಸಾರ್ವಭೌಮ ಕಾನೂನಿನ ಅಭಾವವಿದ್ದಲ್ಲಿ ಸಾರ್ವಭೌಮ ಸ್ಟೇಟ್ ಇರಲಾಗದು. ರೋಮ್ ಆಳ್ವಿಕೆಯ ಕಾಲದಲ್ಲಿ ಸಮುದಾಯಗಳ ರೂಢಿ-ಪದ್ಧತಿಗಳನ್ನೇ ಕಾನೂನು (Law)ಗಳೆಂದು ಕ್ರೋಡೀಕರಿಸಿಕೊಂಡು ಆಳುತ್ತಿದ್ದರು. ನೂರಾರು ಬುಡಕಟ್ಟುಗಳನ್ನು ಒಳಗೊಂಡಿದ್ದ ರೋಮ್ನಲ್ಲಿ ಆಯಾ ಬುಡಕಟ್ಟುಗಳ ರೂಢಿ-ಪದ್ಧತಿಗಳೇ ನಿಯಮಗಳಾಗಿದ್ದವೇ ವಿನಃ ಇಡೀ ರೋಮ್ ಸಾಮ್ರಾಜ್ಯದ ಜನರ ಜೀವನವನ್ನು ನಿಯಂತ್ರಿಸಿ ನಿರ್ದೇಶಿಸುವ ಸಾರ್ವತ್ರಿಕ ಸಾರ್ವಭೌಮ ಕಾನೂನುಗಳು ಅಸ್ತಿತ್ವದಲ್ಲಿರಲಿಲ್ಲ. ಕ್ರಿಶ್ಚಿಯಾನಿಟಿಯು ಪ್ರಭಾವಿಯಾದ ಮೇಲೆ ಒಂದೊಂದು ಬುಡಕಟ್ಟಿನವರು ವಿಭಿನ್ನ ಪದ್ಧತಿಗಳಂತೆ ಬದುಕುವುದು ಅಪಸವ್ಯಗಳು. ಅವು ಸಾರ್ವಭೌಮ ‘ಗಾಡ್’ ಸ್ಥಾನದ ಇಚ್ಛೆಗೆ ಮತ್ತು ಯೋಜನೆಗೆ ವಿರುದ್ಧವಾಗಿದ್ದು, ಇಡೀ ಮನುಕುಲ ‘ಗಾಡ್’ನ ನಿಯಮದಂತೆ ಬದುಕಿದರೆ ಮಾತ್ರವೇ ಮುಕ್ತಿ, ಇಲ್ಲವಾದಲ್ಲಿ ನರಕ. ಹೀಗಾಗಿ ಸಾರ್ವಭೌಮ ‘ಗಾಡ್’ ಹೇಳಿರುವ ನಿಯಮಗಳೇ ಸಾರ್ವಭೌಮ ಕಾನೂನುಗಳು, ಅವು ಗಾಡ್ ಹೇಳಿರುವ ನಿಯಮಗಳಾದ್ದರಿಂದ ಅವು ಪ್ರಶ್ನಾತೀತ, ಹೀಗಾಗಿ ಸಾರ್ವಭೌಮ. ಅದನ್ನೇ ಎಲ್ಲರೂ ಪಾಲಿಸಬೇಕೆಂದು ಚರ್ಚಿನ ಮೂಲಕ ಕ್ರಿಶ್ಚಿಯನ್ ಕಾನೂನುಗಳನ್ನು ಯೂರೋಪಿನಲ್ಲಿ ಸಾರ್ವತ್ರಿಕವಾಗಿ ಹೇರಲಾಯಿತು. ಹೀಗೆ ಸಾರ್ವಭೌಮ ಕಾನೂನು ಕ್ರಿಶ್ಚಿಯಾನಿಟಿಯ ಚೌಕಟ್ಟಿನಲ್ಲಿ ರೂಪಗೊಂಡಿತ್ತು. ಒಂದು ಸಾವಿರ ವರ್ಷಗಳ ಕ್ರಿಶ್ಚಿಯನ್ ಚರ್ಚಿನ ಆಳ್ವಿಕೆಗೆ ಒಳಪಟ್ಟ ಯೂರೋಪ್ನಲ್ಲಿ ಜನರ ಜೀವನವನ್ನು ನಿಯಂತ್ರಿಸುವ-ನಿರ್ದೇಶಿಸುವ ಸಾರ್ವಭೌಮ ಕಾನೂನಿನ ವ್ಯವಸ್ಥೆಯು ಗಟ್ಟಿಗೊಂಡಿತು.
೧೬-೧೭ನೇ ಶತಮಾನದ ನಂತರ ಚಿರಪರಿಚಿತ ‘ಚರ್ಚ್ ಮತ್ತು ಸ್ಟೇಟ್ ನಡುವಣ ವಿವಾದ’ ಅಂತ್ಯಗೊಂಡ ನಂತರ ಪ್ರವರ್ಧಮಾನಕ್ಕೆ ಬಂದ ಸ್ಟೇಟ್ ಹೆಚ್ಚುಕಡಮೆ ಚರ್ಚಿನ ಪಡಿಯಚ್ಚಿನಂತೆಯೇ ಇತ್ತು. ಅಂದರೆ, ಒಂದು ರೀತಿಯಲ್ಲಿ ಸೆಕ್ಯುಲರೀಕೃತಗೊಂಡ ಚರ್ಚಿನ ರೂಪದಂತೆ. ಈ ರೀತಿಯ ಸೆಕ್ಯುಲರೀಕೃತಗೊಂಡ ಸ್ಟೇಟ್ನ ಸಾರ್ವಭೌಮ ಕಾನೂನಿನ ಪರಿಕಲ್ಪನೆಯನ್ನು ಹ್ಯೂಗೋ ಗ್ರೋಷಿಯಸ್ (ಕ್ರಿ.ಶ. ೧೫೭೫) ಮೊಟ್ಟಮೊದಲಿಗೆ ಸೂತ್ರೀಕರಿಸುತ್ತಾನೆ. ಈ ರೀತಿಯ ಸೆಕ್ಯುಲರೀಕೃತ ಸಾರ್ವಭೌಮ ಕಾನೂನಿನ ಬೆಳವಣಿಗೆಯಾದ ಕೆಲವೇ ವರ್ಷಗಳಲ್ಲಿ ಸುಪ್ರಸಿದ್ದ ವೆಸ್ಟ್ಫೇಲಿಯ ಒಪ್ಪಂದ (ಕ್ರಿ.ಶ. ೧೬೪೮) ಏರ್ಪಟ್ಟಿತು. ಇಂದಿನ ನೇಷನ್-ಸ್ಟೇಟ್ನ ಪ್ರಾರಂಭವನ್ನು ಇಲ್ಲಿಂದ ಗುರುತಿಸುತ್ತಾರೆ. ಈ ಒಪ್ಪಂದದಂತೆ ಒಂದು ನೇಷನ್ (ಜನಾಂಗ) ವಾಸವಿರುವ ಭೂಪ್ರದೇಶದ ಗಡಿಯನ್ನು ಗುರುತಿಸಿಕೊಂಡು ಅದಕ್ಕೆ ಒಂದು ಸಾರ್ವಭೌಮ ಸ್ಟೇಟ್ ಇರಬೇಕು. ಹೀಗೆ, ಪ್ರತಿಯೊಂದು ಜನಾಂಗಕ್ಕೂ ಒಂದೊಂದು ಸ್ಟೇಟ್ ರೂಪಗೊಂಡು ಆಯಾ ಜನಾಂಗ ವಾಸಿಸುವ ಪ್ರದೇಶದಲ್ಲಿ ಮೇಲೆ ಆ ಸ್ಟೇಟ್ನ ಸಾರ್ವಭೌಮ ಕಾನೂನು ಚಾಲ್ತಿಯಲ್ಲಿರುತ್ತದೆ. ಇದನ್ನು ಇತರ ಸ್ಟೇಟ್ಗಳಾಗಲಿ, ಸ್ಟೇಟ್ನ ಒಳಗಿರುವವರಾಗಲಿ ಪ್ರಶ್ನಿಸುವಂತಿಲ್ಲ. ಈ ರೀತಿಯಲ್ಲಿ ಸಾರ್ವಭೌಮ ಪ್ರಭುತ್ವವು ಮೊಳಕೆಯೊಡೆಯುತ್ತದೆ.
ಈ ಬಗೆಯ ಸಾರ್ವಭೌಮ ಸ್ಟೇಟ್ ಭಾರತವನ್ನು ಪ್ರವೇಶಿಸಿದುದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಮೂಲಕ. ಭಾರತೀಯರ ಪ್ರತಿರೋಧ ತಮಗೆ ಸಂಪೂರ್ಣವಾಗಿ ಅಪರಿಚಿತವಾದ ಅನ್ಯರೀತಿಯ ಮತ್ತು ಅದುವರೆಗೂ ತಾವು ರೂಢಿಸಿಕೊಂಡಿದ್ದಕ್ಕೆ ವಿರುದ್ಧವಾದ ರೀತಿ ಅಳ್ವಿಕೆಗೆ ಹೇಗೆ ಪ್ರತಿಕ್ರಿಯಿಸಿದರು ಎನ್ನುವುದರ ಒಂದು ಉದಾಹರಣೆಯಾಗಿ ಧರ್ಮಪಾಲರ ಈ ಕೃತಿಯಲ್ಲಿ ಉಲ್ಲೇಖವಾಗಿರುವ ೧೮೧೦-೧೧ರ ಮನೆಕಂದಾಯ ವಿರುದ್ಧದ ಪ್ರತಿಭಟನೆಯನ್ನು ಪರಿಶೀಲಿಸಬಹುದು. ಇದನ್ನು ಅರಿಯಲು ಭಾರತೀಯ ಆಳ್ವಿಕೆ ಕ್ರಮದ ಸ್ವರೂಪವನ್ನು ಕುರಿತು ತಿಳಿಯುವುದು ಸೂಕ್ತ.
ಈಗಾಗಲೇ ಮೇಲೆ ವಿವರಿಸಿದಂತೆ ಸಾರ್ವಭೌಮ ಸ್ಟೇಟ್ ಪಶ್ಚಿಮ ಸಂಸ್ಕöÈತಿಯ ಕೊಡುಗೆ. ಅಂದಮೇಲೆ ಅದು ಭಾರತದಲ್ಲಿ ಇದ್ದಿರಲು ಸಾಧ್ಯವಿಲ್ಲ. ಇಲ್ಲಿ ರಾಜನು ಪ್ರಶ್ನಾತೀತ ಸಾರ್ವಭೌಮನಲ್ಲ ಎನ್ನುವುದಕ್ಕೆ ಪೂರಕವಾಗಿ “ಜನರಿಂದ ತೆರಿಗೆ ವಸೂಲಿ ಮಾಡಿ ಅವರ ಸಂಪತ್ತನ್ನು ಕಿತ್ತುಕೊಂಡು ಜನರಿಗೆ ಯಾವ ರಕ್ಷಣೆಯನ್ನೂ ನೀಡದ ರಾಜನನ್ನು ಜನರು ಕೊಲ್ಲಬೇಕು. ನಾನು ನಿಮ್ಮನ್ನು ರಕ್ಷಿಸುತ್ತೇನೆ ಎಂದು ಪ್ರಮಾಣಮಾಡಿ ರಕ್ಷಿಸದವನನ್ನು ಜನರು ಹುಚ್ಚುನಾಯಿಯನ್ನು ಕೊಲ್ಲುವಂತೆ ಕೊಲ್ಲಬೇಕು” ಎನ್ನುವ ಮಹಾಭಾರತದ ಉಲ್ಲೇಖವನ್ನೂ ಧರ್ಮಪಾಲರೇ ನೀಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೌಟಿಲ್ಯನ ಉಲ್ಲೇಖ ಹೀಗಿದೆ: “ಪ್ರಜೆಗಳು ತನ್ನ ಆಳ್ವಿಕೆಯ ಬಗ್ಗೆ ಸಂತೋಷದಲ್ಲಿರುವರೇ ಅಥವಾ ಅಸಂತುಷ್ಟಗೊಂಡಿರುವರೇ ಎಂದು ಗೂಢಚಾರರ ಮೂಲಕ ತಿಳಿಯಬೇಕು. ಸಂತುಷ್ಟರಾದವರನ್ನು ಮತ್ತಷ್ಟು ಧನ-ಮಾನಗಳಿಂದ ಸಂಮಾನಿಸಬೇಕು. ಅಸಂತುಷ್ಟರನ್ನು ಹಣಕೊಡುವುದರಿಂದಲೂ, ಸಾಂತ್ವನ ವಚನಗಳಿಂದಲೂ ತುಷ್ಟಿಗೊಳಿಸಿ ಪ್ರಸನ್ನೀಕರಿಸಬೇಕು.” ಅಂದರೆ ರಾಜನ ಅಧಿಕಾರದ ಅಸ್ತಿತ್ವ ಜನರು ಸಂತೃಪ್ತರಾಗಿರುವವರೆಗೆ ಮಾತ್ರ. ಇಲ್ಲವಾದರೆ ಅವರ ಕೋಪಕ್ಕೆ ಕಾರಣವಾಗಬೇಕಾಗುತ್ತದೆ. ದುಷ್ಟರಾಜನನ್ನು ಕೊಲ್ಲುವ ಅಧಿಕಾರವೂ ಜನರಿಗೆ ಇರುತ್ತದೆ.
ಭಾರತದಲ್ಲಿ ರಾಜನೀತಿಗೆ ‘ದಂಡನೀತಿ’ ಎನ್ನುವ ಅರ್ಥವೂ ಇದೆ. ‘ದಂಡ’ವೆಂದರೆ ಪ್ರಶ್ನಾತೀತ ಸಾರ್ವಭೌಮತೆಯ ಸ್ವರೂಪ ಇಲ್ಲದಿರುವುದು, ಕೌಟಿಲ್ಯನ ಈ ಉಲ್ಲೇಖ ತೋರಿಸುತ್ತದೆ: “ದಂಡದ ಅತಿ ಸೌಮ್ಯ ಪ್ರಯೋಗದಿಂದ ರಾಜನೇ ಅವಮಾನಿತನಾದರೆ, ಅತಿಕಠಿಣ ಪ್ರಯೋಗದಿಂದ ಪ್ರಜೆಗಳ ಕೋಪಕ್ಕೆ ಕಾರಣನಾಗುತ್ತಾನೆ. ಅದೇ ಯೋಗ್ಯವೂ ತಕ್ಕದ್ದೂ ಆದ ದಂಡ ಪ್ರಯೋಗಿಸುವ ರಾಜನು ಪೂಜಿಸಲ್ಪಡುತ್ತಾನೆ. ದುಷ್ಟಪ್ರಯೋಗವು ವಾನಪ್ರಸ್ಥ ಮತ್ತು ಸಂನ್ಯಾಸಿಗಳನ್ನೂ ಕೋಪಗೊಳಿಸುವುದು, ಹೀಗಿರುವಾಗ ಗೃಹಸ್ಥರ ಪಾಡೇನು?” ಎಂದು ಕೇಳುತ್ತಾನೆ. ಅಂದರೆ ದಂಡವು ದುಷ್ಟರ ಶಿಕ್ಷೆಗೆ, ಶಿಷ್ಟರ ರಕ್ಷಣೆಗೇ ಹೊರತು, ಶಿಷ್ಟರಾದ ಪ್ರಜೆಗಳ ಮೇಲೆ ಪ್ರಯೋಗ ಮಾಡಿ ಅವರನ್ನು ನಿಯಂತ್ರಿಸಿ ನಿರ್ದೇಶಿಸುವುದಕ್ಕಲ್ಲ. ತೆರಿಗೆಯ ಸಂಗ್ರಹವನ್ನು ಹೇಗೆ ಮಾಡಬೇಕು ಎನ್ನುವುದನ್ನೂ ಕೌಟಿಲ್ಯನೇ ಹೇಳುತ್ತಾನೆ: “ತೋಟದಿಂದ ಪಕ್ವವಾದ ಹಣ್ಣುಗಳನ್ನು ಕಿತ್ತುತರುವಂತೆ ತೆರಿಗೆ ಸಂಗ್ರಹಿಸಬೇಕು. ಅಪಕ್ವವಾದ ಹಣ್ಣನ್ನು ಕೀಳುವುದು ಕೋಪವನ್ನು (ಜನರಲ್ಲಿ) ಉತ್ಪತ್ತಿಮಾಡುತ್ತದೆ. ಅದು ಆತ್ಮಛೇಧ. ಅಂದರೆ ತನ್ನ (ರಾಜ) ನಾಶದ ಭಯವನ್ನು ಉತ್ಪತ್ತಿ ಮಾಡುತ್ತದೆ.” ಅಂದರೆ ಯಾರಿಗೆ ಪಾವತಿ ಮಾಡಲು ಸಾಧ್ಯವಿಲ್ಲವೋ ಅವರ ಮೇಲೆ ತೆರಿಗೆ ಹಾಕಬಾರದು. ಅದು ರಾಜತ್ವನಾಶದ ಸಂಭವವನ್ನುಂಟುಮಾಡುವಷ್ಟು ಕೋಪವನ್ನು ಪ್ರಜೆಗಳಲ್ಲಿ ಉಂಟುಮಾಡಬಹುದು – ಎನ್ನುತ್ತಾನೆ ಕೌಟಿಲ್ಯ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಭಾರತೀಯ ಪದ್ಧತಿಯ ರಾಜಾಳ್ವಿಕೆಯ ಸ್ವರೂಪವು ಪಾಶ್ಚಾತ್ಯ ಸಾರ್ವಭೌಮ ಸ್ಟೇಟ್ನ ಸ್ವರೂಪಕ್ಕೆ ಸಂಪೂರ್ಣ ವ್ಯತಿರಿಕ್ತ.
ರಾಜನ ‘ರಾಜತ್ವ’ದ ಅಸ್ತಿತ್ವವು ಪ್ರಜೆಗಳ ಸಮ್ಮತಿಯನ್ನು ಅವಲಂಬಿಸಿದೆ. ಆ ಸಮ್ಮತಿಯು ಅವನ ರಾಜಧರ್ಮ ಪಾಲನೆಯನ್ನು ಅವಲಂಬಿಸಿದೆ. ಬಹುತೇಕ ನಮ್ಮಲ್ಲಿ ಎಲ್ಲ ಬಗೆಯ ಸಂಬಂಧಗಳ ಅಸ್ತಿತ್ವಗಳೂ ಅದೇ ಸ್ವರೂಪದವೇ ಆಗಿವೆ ಎನ್ನುವುದನ್ನು ಗಮನಿಸಬೇಕು. ಅಪ್ಪ-ಮಗ, ತಾಯಿ-ಮಗ, ಅಪ್ಪ-ಮಗಳು, ಅಮ್ಮ-ಮಗಳು, ಅಣ್ಣ-ತಮ್ಮ, ಅಣ್ಣ-ತಂಗಿ, ಅಕ್ಕ-ತಂಗಿ ಇತ್ಯಾದಿ ಸಂಬಂಧಗಳು ಜೈವಿಕವಾಗಿದ್ದರೂ ಅವರು ತಮ್ಮ ಪಾತ್ರಗಳ ಕರ್ಮವನ್ನು ನೆರವೇರಿಸುವುದನ್ನು ಅವಲಂಬಿಸಿ ಆ ಸ್ಥಾನಗಳು ಮಾನ್ಯವಾಗುತ್ತವೆ. ಇದು ಹೆಚ್ಚು ಸ್ಪುಟವಾಗುವುದು ಗುರು-ಶಿಷ್ಯ ಸಂಬಂಧದಲ್ಲಿ. ಸಾಂಪ್ರದಾಯಿಕವಾಗಿ ಜ್ಞಾನ (ಮಾರ್ಗದರ್ಶನ) ನೀಡದ ಗುರು, ಜ್ಞಾನವನ್ನು ಕಲಿಯದ ಶಿಷ್ಯ ತಮ್ಮ ಸ್ಥಾನಗಳನ್ನು ಕಾಯ್ದುಕೊಳ್ಳಲಾರರು. (ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಗುರುವಿನ ನೇಮಕಾತಿ ಮತ್ತು ಶಿಷ್ಯನ ಪ್ರವೇಶಾತಿ ಪ್ರಕ್ರಿಯೆಗಳು ಈ ಸಂಬಂಧವನ್ನು ಯಾಂತ್ರಿಕವಾಗಿಸಿವೆ.) ಕಲಿಸುವವರನ್ನೇ ಗುರುವೆನ್ನುವ ಮಾನ್ಯತೆ ಸಿಗುವುದು ಶಿಷ್ಯಸಮುದಾಯಗಳಿಂದ. ಕಲಿಯುವವನನ್ನೇ ಶಿಷ್ಯನೆಂದು ಗುರು ಮಾನ್ಯಮಾಡುವನು. ಈ ದ್ವಿಮುಖ ಮಾನ್ಯತೆ ಇಲ್ಲದೆ ಎರಡೂ ಪಾತ್ರಗಳು ಸಾರ್ಥಕತೆಯನ್ನು ಕಳೆದುಕೊಳ್ಳುತ್ತವೆ. ಈ ಹಿನ್ನೆಲೆಯಿಂದ ಗುರುಧರ್ಮ, ಶಿಷ್ಯಧರ್ಮ, ಪಿತೃಧರ್ಮ, ಸುತಧರ್ಮ, ಮಾತೃಧರ್ಮ ಕಲ್ಪನೆಗಳನ್ನು ಗ್ರಹಿಸಿದರೆ ಅವರವರ ಧರ್ಮಪರಿಪಾಲನೆಯನ್ನು ಅನುಸರಿಸಿ ಅವರ ಪಾತ್ರಗಳಿಗೆ ಸಿಗುವ ಮಾನ್ಯತೆ ಸ್ಥಾನ-ಮಾನ ನಿರ್ಣಯವಾಗುತ್ತದೆ. ಅದೇ ರೀತಿಯಲ್ಲಿ ಪ್ರಜೆಗಳು ರಾಜನಿಗೆ ತೆರಿಗೆ ನೀಡಿ ವಿಧೇಯತೆ ತೋರುವ ಪ್ರಜಾಧರ್ಮವು ರಾಜನು ಪ್ರಜೆಗಳ ರಕ್ಷಣೆ ಮತ್ತು ಸೌಖ್ಯಕ್ಕನುಗಣವಾಗಿ ನೆರವೇರಿಸುವ ರಾಜಧರ್ಮ ಪರಿಪಾಲನೆಯನ್ನು ಅವಲಂಬಿಸಿದೆ. ಹೇಗೆ ಅಪ್ಪನಿಲ್ಲದೆ ಮಗನಿಲ್ಲ-ಮಗನಿಲ್ಲದೆ ಅಪ್ಪನಿಲ್ಲವೋ, ಗುರುವಿಲ್ಲದೆ ಶಿಷ್ಯನಿಲ್ಲ-ಶಿಷ್ಯನಿಲ್ಲದೆ ಗುರುವಿಲ್ಲವೋ, ಹಾಗೆಯೇ ರಾಜನಿಲ್ಲದೆ ಪ್ರಜೆ ಇಲ್ಲ-ಪ್ರಜೆ ಇಲ್ಲದೆ ರಾಜನೂ ಇಲ್ಲ. ಹೀಗೆ ಈ ಸಂಬಂಧಗಳಲ್ಲಿ ಒಂದನ್ನು ಹೊರತುಪಡಿಸಿ ಮತ್ತೊಂದಕ್ಕೆ ಮಾನ್ಯತೆಯೂ ಇಲ್ಲ, ಅಸ್ತಿತ್ವವೂ ಇಲ್ಲ. ಈ ಸಂಗತಿಯನ್ನು ಆಧರಿಸಿಯೇ ಈ ಸಂಸ್ಕöÈತಿಯಲ್ಲಿ ಧರ್ಮಪರಿಪಾನೆಯ ತತ್ತ್ವವು ಬಹುಮುಖ್ಯ ಸ್ಥಾನವನ್ನು ಪಡೆದಿದೆ.
ಈ ಬಗೆಯ ಆಳ್ವಿಕೆಯ ರಚನೆಗೆ ರೂಢಿಗೊಂಡಿದ್ದ ಭಾರತೀಯರು, ಇದ್ದಕ್ಕಿದ್ದಂತೆ ಬ್ರಿಟಿಷರ ಮೂಲಕ ಪಾಶ್ಚಾತ್ಯ ಪ್ರಶ್ನಾತೀತ ಸಾರ್ವಭೌಮ ಸ್ಟೇಟ್ ಪ್ರವೇಶಿಸಿದಾಗ ವಿಚಲಿತರಾಗಿದುದರಲ್ಲಿ ಆಶ್ಚರ್ಯವೇನಿಲ್ಲ. ಈ ಅಂಶವನ್ನೇ “ಆಳುವವರ ಮೌಲ್ಯ ಮತ್ತು ಆಳಿಸಿಕೊಳ್ಳುವವರ ಮೌಲ್ಯ ಭಿನ್ನ”ವಾಗಿರುವುದಾಗಿ ಧರ್ಮಪಾಲರು ಗುರುತಿಸಿರುವುದು. ಒಂದು ಸಾರ್ವಭೌಮ ಸ್ಟೇಟ್ ಆಗಿ ತನ್ನ ಸಾರ್ವಜನಿಕ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಯೂರೋಪಿನಲ್ಲಿ ಸಾಮಾನ್ಯವಾಗಿದ್ದ ಮನೆತೆರಿಗೆ ಮತ್ತು ಅಂಗಡಿ ತೆರಿಗೆಗಳ ಕಾನೂನನ್ನು ಜಾರಿಮಾಡಿದರು. ಭಾರತೀಯರಿಗೆ ಇದುವರೆಗೂ ಈ ಬಗೆಯ ತೆರಿಗೆ ಅಪರಿಚಿತವಾಗಿತ್ತು. ಅಲ್ಲದೆ ಬ್ರಿಟಿಷರ ಕೋರ್ಟ್ಗಳು, ಅಲ್ಲಿಯ ಪ್ರಕ್ರಿಯೆಗಳು, ಆಸ್ತಿಪರಭಾರೆ, ಮತ್ತಿತರ ಸುಂಕಗಳ ಕುರಿತ ಕಾನೂನುಗಳು ಭಾರತೀಯರನ್ನು ವಿಚಲಿತರನ್ನಾಗಿ ಮಾಡಿದ್ದವು. ಅದನ್ನು ತಮ್ಮ ಮನವಿಗಳಲ್ಲಿ ವ್ಯಕ್ತಪಡಿಸಿರುವುದನ್ನು ಬ್ರಿಟಿಷ್ ಅಧಿಕಾರಿಗಳು “ಇವರ ಅಸಹನೆ ಬರೀ ತೆರಿಗೆ ಮತ್ತು ತೆರಿಗೆ ಪ್ರಮಾಣದ ಬಗ್ಗೆ ಮಾತ್ರವೇ ಅಲ್ಲ, ಈ ಪ್ರಭುತ್ವದ ಪ್ರಕ್ರಿಯೆಗಳ ಕುರಿತೇ ಇರುವ ಹಾಗಿದೆ” ಎಂಬುದಾಗಿ ಗುರುತಿಸಿದರು. ಅಂದರೆ ಭಾರತೀಯರು ೧೮೧೧ರ ಮನೆತೆರಿಗೆಗೆ ಬೃಹತ್ ಪ್ರಮಾಣದಲ್ಲಿ ಸಂಘಟಿಸಿದ ಪ್ರತಿಭಟನೆಯು ಪಾಶ್ಚಾತ್ಯ ಪ್ರಭುತ್ವಕ್ಕೆ ಭಾರತೀಯ ಮಾದರಿಯಲ್ಲಿ ತೋರಿಸಿದ ಅಸಹಕಾರವೇ ಆಗಿತ್ತೇ ಎನ್ನುವ ಪ್ರಶ್ನೆಯನ್ನು ಇಲ್ಲಿ ಕೇಳಿಕೊಳ್ಳಬಹುದು.
ಮೇಲೆ ಹೇಳಿದಂತೆ ಇಲ್ಲಿ ರಾಜನ ಅಸ್ತಿತ್ವವು ಪ್ರಜೆಗಳ ಸಮ್ಮತಿಯನ್ನು ಅವಲಂಬಿಸಿದೆ. ಪ್ರಜೆಗಳ ಸಮ್ಮತಿಯು ರಾಜನ ರಾಜಧರ್ಮಪಾಲನೆಯನ್ನು ಅವಲಂಬಿಸಿದೆ. ರಾಜನು ಅಧರ್ಮವನ್ನೆಸಗಿದಾಗ ಪ್ರಜೆಗಳು ಅವನನ್ನು ರಾಜನೆಂದು ಒಪ್ಪಲು ನಿರಾಕರಿಸುವರು, ಅವನ ಅಧಿಕಾರವನ್ನು ಧಿಕ್ಕರಿಸುವರು. ಇದೇ ಪ್ರಕ್ರಿಯೆಯನ್ನು ಮನೆ ಮತ್ತು ಅಂಗಡಿ ತೆರಿಗೆಯನ್ನು ವಿಧಿಸಿದಾಗ ಭಾರತೀಯರು ತೋರಿಸಿರುವ ಸಾಧ್ಯತೆ ಇದೆ. ಇದನ್ನು ಧರ್ಮಪಾಲ್ ನಾಗರಿಕ ಅವಿಧೇಯತೆ ಮತ್ತು ಅಸಹಕಾರ ಆಂದೋಲನ ಎಂದೇ ಗುರುತಿಸಿದ್ದಾರೆ.
ಇದನ್ನು ಹೆನ್ರಿ ಡೇವಿಡ್ ಥೋರೋ ಪ್ರತಿಪಾದಿಸುವ ‘ಸಿವಿಲ್ ಡಿಸ್ಒಬೀಡಿಯನ್ಸ್’ಗೆ ಹೋಲಿಸಬಹುದೇ ಎನ್ನುವ ಪ್ರಶ್ನೆಯನ್ನೂ ಕೇಳಬಹುದು. ಗಾಂಧಿಯವರೇ ಅದರ ಪ್ರೇರೇಪಣೆಯನ್ನು ಒಪ್ಪಿರುವಾಗ ಈ ಪ್ರಶ್ನೆಯ ಪ್ರಸ್ತುತತೆ ಇದೆಯೇ ಎಂದೆನಿಸಬಹುದು. ಆದರೆ ಖಂಡಿತ ಇದೆ. ಏಕೆಂದರೆ ಪಾಶ್ಚಾತ್ಯರ ಕಲ್ಪನೆಯ ಸ್ಟೇಟ್ ಮತ್ತು ಅದರ ಸಾರ್ವಭೌಮ ಕಾನೂನುಗಳಿಗೆ ಪಾಶ್ಚಾತ್ಯ ಪ್ರಜೆಗಳು ಅವಿಧೇಯತೆ ತೋರಿಸಿ ಅಸಹಕಾರದ ಪ್ರತಿಭಟನೆ ಮಾಡುವುದು ಮತ್ತು ಆ ಪಾಶ್ಚಾತ್ಯ ಸ್ಟೇಟ್ ಮತ್ತು ಸಾರ್ವಭೌಮ ಕಾನೂನುಗಳ ಪರಿಚಯವೇ ಇಲ್ಲದೆ ಅವುಗಳ ವಿರುದ್ಧ ಭಾರತೀಯರು ಮಾಡಿದ ಪ್ರತಿಭಟನೆ – ಎರಡೂ ಒಂದೇ ರೀತಿಯ ಸಂಗತಿಯಾಗಿರಲು ಸಾಧ್ಯವೇ ಇಲ್ಲ.
ಈ ಅಂಶವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ: ಅಲ್ಲಿಯ ಸಿವಿಲ್ ಡಿಸ್ಒಬೀಡಿಯನ್ಸ್ ಕಲ್ಪನೆಯು ಅಲ್ಲಿಯ ಸಾವರೀನ್ಟಿ (ಸಾರ್ವಭೌಮತ್ವ) ಮತ್ತು ಸ್ಟೇಟ್ ಪರಿಕಲ್ಪನೆಯ ಭಾಗವಾಗಿಯೇ ಬೆಳೆದಿದೆ. ಚರ್ಚಿನ ಹಿಡಿತದಿಂದ ಬಿಡುಗಡೆಯಾದ ಸ್ಟೇಟ್ ತಾನೇ ಸಾರ್ವಭೌಮನ ರೂಪ ಧರಿಸಿತು. ತನ್ನ ಸಾರ್ವಭೌಮ ಕಾನೂನುಗಳ ಮೂಲಕ ಪ್ರಜೆಗಳ ಜೀವನವನ್ನು ನಿರ್ಣಯಿಸಿ ನಿರ್ವಹಿಸುವ ಪಾತ್ರವನ್ನು ಪಡೆಯಿತು. ಅದಾದ ನಂತರ ಲಾಕ್, ರೂಸೋ, ಹಾಬ್ಸ್ರ ‘ಸಾಮಾಜಿಕ ಒಪ್ಪಂದ’ ಸಿದ್ಧಾಂತಗಳು ಜನತಾ ಸಾರ್ವಭೌಮತ್ವ (ಪೀಪಲ್ ಸಾವರೀನ್ಟಿ) ತತ್ತ್ವವನ್ನು ಪ್ರಚುರಪಡಿಸಿದ್ದು, ಅದರ ಆಧಾರದಲ್ಲೇ ಪ್ರಜಾಪ್ರಭುತ್ವ ಸಿದ್ಧಾಂತಗಳು ಬೆಳೆದಿದ್ದು ಸುಪ್ರಸಿದ್ದ. ರಾಜನ ಏಕವ್ಯಕ್ತಿ ಸಾರ್ವಭೌಮತ್ವವನ್ನು ಪ್ರಶ್ನಿಸಿ ಪ್ರಜೆಗಳೇ ಸಾರ್ವಭೌಮ ಅಧಿಕಾರದ ಮೂಲ ಎನ್ನುವ ವಾದವು ಪ್ರಸಿದ್ಧವಾಗುತ್ತದೆ (ಇದೂ ಕೂಡ ಚರ್ಚ್ನ ಪೋಪ್ ಮತ್ತು ಪಾದ್ರಿಗಳ ಪ್ರೀಸ್ಟ್ನ ಅಧಿಕಾರ ಪ್ರಶ್ನಿಸಿ ಎಲ್ಲ ಮಾನವರೂ ಪ್ರೀಸ್ಟ್ಗಳೇ ಆಗಿದ್ದು ಎಲ್ಲರಿಗೂ ತಮಗೆ ಸಂಬಂಧಿಸಿದ ‘ಗಾಡ್’ನ ವಾಣಿ ಏನೆಂದು ನಿರ್ಣಯಿಸುವ ಅಧಿಕಾರವಿದೆ ಎನ್ನುವ ಪ್ರೊಟೆಸ್ಟಂಟ್ ವಾದದ ಸೆಕ್ಯುಲರ್ ರೂಪ). ಇದರ ಹಿನ್ನೆಲೆಯಲ್ಲೇ ಫ್ರೆಂಚ್ ಕ್ರಾಂತಿ ಅಲ್ಲದೆ ‘ಪ್ರಾತಿನಿಧ್ಯವಿಲ್ಲದೆ ತೆರಿಗೆ ಇಲ್ಲ’ ಎನ್ನುವ ಅಮೆರಿಕನ್ ಕ್ರಾಂತಿಗಳು ನಡೆಯುತ್ತವೆ. ಇದೇ ಜನತಾ ಸಾರ್ವಭೌಮತ್ವ ತತ್ತ್ವವನ್ನು ಆಧರಿಸಿಯೇ ಥೋರೋನ ‘ಸಿವಿಲ್ ಡಿಸ್ಒಬೀಡಿಯನ್ಸ್’ ಅಥವಾ ನಾಗರಿಕ ಅವಿಧೇಯತೆ ಆಂದೋಲನ ತತ್ತ್ವ ಬೆಳೆದಿರುವುದು ಕಾಣುತ್ತದೆ. ಈ ಹಿನ್ನೆಲೆಯಿಂದ ಹೇಳುವುದಾದರೆ ಕ್ರಿಶ್ಚಿಯಾನಿಟಿಯ ಪ್ರಭಾವದಡಿಯಲ್ಲಿ ರೂಪಗೊಂಡ ಸಾರ್ವಭೌಮತೆ, ರಾಜನ/ಸ್ಟೇಟ್ನ ಸಾರ್ವಭೌಮತ್ವ ಮತ್ತು ಜನತಾ ಸಾರ್ವಭೌಮತ್ವ ಚೌಕಟ್ಟಿನಲ್ಲಿ ಬ್ರಿಟಿಷ್ ಕಾನೂನುಗಳಿಗೆ ಭಾರತೀಯರ ಪ್ರತಿರೋಧವನ್ನು ಗ್ರಹಿಸುವುದು ಸರಿಯಾಗುವುದಿಲ್ಲ. ಅದನ್ನು ಭಾರತೀಯ ಚಿಂತನೆಯ ಚೌಕಟ್ಟಿನಲ್ಲಿ ಅದರಲ್ಲೂ ‘ರಾಜಧರ್ಮ’ದ ಚೌಕಟ್ಟಿನಲ್ಲಿ ಗ್ರಹಿಸುವುದು ಇಂದಿನ ಬಹಳಷ್ಟು ರಾಜ್ಯಾಡಳಿತ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಸಹಕಾರಿಯಾಗಬಲ್ಲದು.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಧರ್ಮಪಾಲರ ಕೃತಿಯಲ್ಲಿ ಭಾರತದ ರಾಜಕೀಯದ ಸಂಶೋಧನೆಗೆ ಹೊಸದಿಕ್ಕನ್ನು ನೀಡಬಹುದಾದ ಮೂರು ಬಹುಮುಖ್ಯ ಹೊಳಹುಗಳನ್ನು ಗುರುತಿಸಬಹುದಾಗಿದೆ:
೧. ಬ್ರಿಟಿಷ್ ಪ್ರಭುತ್ವ ಅಥವಾ ಆಧುನಿಕ ರಾಜಕೀಯ ವ್ಯವಸ್ಥೆಯೊಂದಿಗೆ ಭಾರತೀಯ ಸಂಸ್ಕೃತಿಗೆ ಒಂದು ರೀತಿಯ ತಕರಾರು ಇರುವುದು ಕಂಡುಬರುತ್ತಿದೆ. ೧೮ನೇ ಶತಮಾನದಿಂದ ನಡೆದ ಚಳವಳಿಗಳು ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯಾನಂತರದ ತುರ್ತುಪರಿಸ್ಥಿತಿ, ಅಯೋಧ್ಯೆಯ, ಜನ ಲೋಕಪಾಲ್, ನಿರ್ಭಯ ಇತ್ಯಾದಿ ಹೋರಾಟಗಳು ಯಾವುದೋ ಒಂದೆರಡು ವಿಷಯಾಧಾರಿತ ಚಳವಳಿಗಳು ಎಂದು ಮೇಲ್ನೋಟಕ್ಕೆ ಕಂಡರೂ, ಅವೆಲ್ಲವೂ ಒಂದು ರೀತಿಯಲ್ಲಿ ಆಧುನಿಕ ರಾಜಕೀಯ ಪ್ರಭುತ್ವದ ಕುರಿತ ಭಾರತೀಯರ ಅಸಮಾಧಾನವನ್ನು ನಿರಂತರವಾಗಿ ವ್ಯಕ್ತಪಡಿಸಿರುವ ಘಟನೆಗಳಾಗಿವೆ. ಈ ಹೋರಾಟಗಳು ಯಾವುದೋ ವಿಚಾರ ಅಥವಾ ರಾಜಕೀಯ ಪಕ್ಷದ ಪರ-ವಿರುದ್ಧ ಎನ್ನುವುದಕ್ಕಿಂತ ಅವು ಆಧುನಿಕ ‘ಪ್ರಭುತ್ವ’ಕ್ಕೂ ಭಾರತೀಯ ಸಂಸ್ಕೃತಿ-ಸಂಪ್ರದಾಯಗಳಿಗೂ ಇರುವ ತಾಕಲಾಟವನ್ನು ತೋರಿಸುತ್ತವೆ. ಪ್ರತಿ ದಶಕದಲ್ಲೂ ಈ ಬಗೆಯ ದೊಡ್ಡ ಮಟ್ಟದ ಜಾಗೃತಿಯ ಹೋರಾಟಗಳು ನಡೆಯುತ್ತಿವೆ, ಅಷ್ಟೇ ದೊಡ್ಡಮಟ್ಟದ ರಾಜಕೀಯ ಪರಿಣಾಮಗಳಿಗೂ ಅವು ಕಾರಣವಾಗುತ್ತಿವೆ. ಅಂದರೆ ಈ ಆಧುನಿಕ ‘ಪ್ರಭುತ್ವ’ವು ಭಾರತೀಯ ಸಂಸ್ಕöÈತಿಯ ಜನರ ಬದುಕಿಗೆ ಯಾವುದೊ ಒಂದು ಬಗೆಯಲ್ಲಿ ತೊಂದರೆಯನ್ನುಂಟು ಮಾಡುತ್ತಿದೆ. ಭಾರತೀಯರ ಬದುಕಿನಲ್ಲಿ ಈ ಸಂಸ್ಕೃತಿಗೆ ಸಹಜವಲ್ಲದ ಅನಪೇಕ್ಷಿತ ಹಸ್ತಕ್ಷೇಪವಾಗುತ್ತಿದೆ ಎನ್ನುವ ಧೋರಣೆ ಈ ಹೋರಾಟಗಳ ಮೂಲಕ ವ್ಯಕ್ತವಾಗುತ್ತಿದೆ. ಅದನ್ನು ಬ್ರಿಟಿಷ್ ಅಧಿಕಾರಿಗಳು ಗುರುತಿಸಿದ್ದುದನ್ನು ಧರ್ಮಪಾಲರು ದಾಖಲಿಸಿದ್ದಾರೆ.
೨. ಕಳೆದ ಎರಡು ಶತಮಾನಗಳ ಹೋರಾಟಗಳ ಮಾಹಿತಿಗಳನ್ನು ನೋಡಿದರೆ ಭಾರತೀಯರ ಮನೋಧರ್ಮವು ಪ್ರಭುತ್ವಗಳನ್ನು ಆಶ್ಚರ್ಯಕರ ರೀತಿಯಲ್ಲಿ ಮಣಿಸುತ್ತದೆ. ಬಲಪ್ರಯೋಗವು ಇಲ್ಲಿ ನಗಣ್ಯವಾಗಿದೆ. ಆಧುನಿಕ ಪ್ರಭುತ್ವದ ಸಂಸದರು, ಶಾಸಕರು, ಮಂತ್ರಿಗಳು ಇತ್ಯಾದಿ ರಾಜಕೀಯ ಅಧಿಕಾರಸ್ಥರು ರಾಜರುಗಳ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಆಕ್ಷೇಪಗಳಿದ್ದರೂ ಸಹ ಹಾಗಿಲ್ಲದಿರುವುದನ್ನೇ ಈ ಅಸಮಾಧಾನದ ಹೋರಾಟಗಳು ತೋರಿಸುತ್ತವೆ. ಅವರು ರಾಜರುಗಳಂತೆ ಆಗಬೇಕಾದ ಅನಿವಾರ್ಯತೆಯ ಸೂಚನೆಯೂ ಇಲ್ಲಿರುವುದು ಕಾಣುತ್ತದೆ. (ಪ್ರಾಚೀನ ವೈದಿಕ ರಾಜಕೀಯ ಸಂಸ್ಥೆಗಳಾದ ಸಭಾ, ಸಮಿತಿ, ವಿಧಾತಗಳಲ್ಲಿ ಭಾಗವಹಿಸುತ್ತಿದ್ದ ಸದಸ್ಯರನ್ನು ‘ರಾಜನ್’ ಎಂದೇ ಕರೆಯಲಾಗುತ್ತಿತ್ತು ಎನ್ನುವುದು ಇಲ್ಲಿ ಗಮನಾರ್ಹ). ರಾಜನಾಗುವುದು ಎಂದರೆ ಸರ್ವಾಧಿಕಾರ ಅಥವಾ ಸಾರ್ವಭೌಮಾಧಿಕಾರವನ್ನು ಪ್ರದರ್ಶಿಸಿ ಜನರನ್ನು ಹೆದರಿಸಿ ಅವರ ಜೀವನದಲ್ಲಿ ಹಸ್ತಕ್ಷೇಪ ಮಾಡುವುದಲ್ಲ. ಬದಲಿಗೆ ಜನರಿಗೆ ಹೆದರಿ ಅವರ ಹಿತಕ್ಕಾಗಿ ಕೆಲಸಮಾಡಿ ರಾಜಧರ್ಮವನ್ನು ಪಾಲಿಸುವುದು. ಆಗ ಮಾತ್ರ ಜನರು ಅವನನ್ನು ರಾಜನನ್ನಾಗಿ ಮಾನ್ಯಮಾಡುವರು, ತಾವು ಪ್ರಜಾಧರ್ಮದಂತೆ ರಾಜ್ಯಕ್ಕೆ ವಿಧೇಯರಾಗಿರುವರು.
೩. ಈ ಹಿನ್ನೆಲೆಯಲ್ಲಿ ಕಳೆದ ಎರಡು ಶತಮಾನಗಳ ಆಧುನಿಕ ರಾಜಕೀಯ ವ್ಯವಸ್ಥೆ ಮತ್ತು ಭಾರತೀಯ ಜನರ ನಡುವಣ ಸಂಘರ್ಷಗಳು ಒಂದು ಚಾರಿತ್ರಿಕ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಿದೆ. ಭಾರತೀಯರು ಜಗತ್ತಿಗೆ, ಅದರಲ್ಲೂ ಕ್ರಿಶ್ಚಿಯನೇತರ ಸಂಸ್ಕöÈತಿಯ ಜಗತ್ತಿಗೆ, ಈ ಆಧುನಿಕ ರಾಜಕೀಯ ವ್ಯವಸ್ಥೆಯನ್ನು ತನ್ನ ಸಂಸ್ಕೃತಿಗನುಗುಣವಾಗಿ ಮಾರ್ಪಡಿಸಿ ತಮಗೆ ಅನುಕೂಲಕರವಾಗುವ ರೀತಿಯಲ್ಲಿ ಮರುರೂಪಿಸಿಕೊಳ್ಳುವ ಉದಾಹರಣೆಯನ್ನು ನಿರ್ಮಿಸುವ ಸಾಧ್ಯತೆಯ ಪ್ರಶ್ನೆಯನ್ನು ನಮ್ಮ ಮುಂದೆ ತರುತ್ತಿದೆ. ಬಹುಶಃ ಜಯಪ್ರಕಾಶ ನಾರಾಯಣರ ರಾಜನೀತಿಯಿಂದ ಲೋಕನೀತಿಯ ಬದಲಿಗೆ ಲೋಕನೀತಿಯಿಂದ ರಾಜನೀತಿಯು ರೂಪುಗೊಳ್ಳಬೇಕು ಎನ್ನುವಂತಹ ವಿಚಾರಧಾರೆಗಳ ದಾರಿಗಳು ನೆರವಾಗಬಹುದು. ಆ ಬಗೆಯ ಬಹುದೊಡ್ಡ ಸಂಶೋಧನಾ ಕಾರ್ಯಕ್ರಮಕ್ಕೆ ಬೇಕಾದ ಚಾರಿತ್ರಿಕ ವಿವರಗಳು ಮತ್ತು ಒಳನೋಟಗಳನ್ನು ಧರ್ಮಪಾಲರ ಈ ಕೃತಿಯು ನಮಗೆ ತೆರೆದಿಟ್ಟಿದೆ ಎನ್ನಬಹುದು. ಈ ಬಗೆಯ ಸಂಶೋಧನೆಗಳಿಗೆ ನೆರವಾಗಬಲ್ಲ ಅತ್ಯಮೂಲ್ಯವಾದ ದಾಖಲೆಗಳನ್ನು ಸಂಗ್ರಹಿಸಿ ಈ ಕೃತಿಯನ್ನು ರಚಿಸಿದ ಧರ್ಮಪಾಲರು ಸ್ತುತ್ಯರ್ಹರು.