ಹೊರಗಿನಿಂದ ಬಂದ ಬ್ರಿಟಿಷರು ಭಾರತದ ಕುರಿತು ಹೇಳುತ್ತಿದ್ದ ಮಾತುಗಳನ್ನು ಅಕ್ಷರಶಃ ನಂಬಿದವರು ಭಾರತ ಆಧುನಿಕವಾಗಬೇಕು ಎಂದರು. ಹೊಸತು ಎನ್ನುವುದು ಹಳತರ ಮುಂದುವರಿದ ಭಾಗ ಅಥವಾ ಹಳೆಯ ಬೇರಿನಿಂದ ಸತ್ತ್ವವನ್ನು ಹೀರಿ ಬೆಳೆದ ಹೊಸ ಚಿಗುರು ಎನ್ನಿಸಬೇಕಿತ್ತು. ಆದರೆ ಆಧುನಿಕ ಎನ್ನುವುದಕ್ಕೆ ಹಳತರ ಹಂಗೇ ಇಲ್ಲ ಎನ್ನುವ ನಿರ್ಣಯ ತೆಗೆದುಕೊಂಡಿದ್ದರಿಂದ ಬೆಳವಣಿಗೆಯ ನಡೆಯಲ್ಲಿ ಭಾರತದ ಸ್ಪರ್ಶವೇ ಉಳಿಯಲಿಲ್ಲ. ಭಾರತ ಕತ್ತಲೆಯ ಯುಗದಿಂದ ಬೆಳಕಿಗೆ ತೆರೆದುಕೊಂಡಿತು ಎಂದು ಮಂಡಿಸಿ ಇತಿಹಾಸವನ್ನೇ ಕತ್ತಲೆಗೆ ದೂಡಲಾಯಿತು. ಕಾಲ ಎನ್ನುವುದು ನೇರ ರೇಖೆಯಲ್ಲಿ ಚಲಿಸುತ್ತದೆ, ಹೊಸತು-ಹಳತು ಎಂದು ಸುಲಭವಾಗಿ ವಿಭಾಗಿಸಬಹುದು ಎನ್ನುವುದು ಇದರ ಹಿಂದಿನ ಪ್ರಜ್ಞೆ.
ಭಾರತದ ಸ್ವಾತಂತ್ರ್ಯ ಹೋರಾಟ ಕೇವಲ ಬ್ರಿಟಿಷರಿಂದ ಮುಕ್ತಿ ಪಡೆಯುವುದಕ್ಕೆ ಸೀಮಿತವಾಗಿರಲಿಲ್ಲ. ಸಾವಿರಾರು ವರುಷಗಳ ಗುಲಾಮೀ ಮಾನಸಿಕತೆಯಿಂದ ಹೊರಬರುವ ಪ್ರಯತ್ನವಾಗಿತ್ತು. ಸ್ವಾಮಿ ವಿವೇಕಾನಂದರು ಜಗತ್ತಿನೆದುರು ಭಾರತವನ್ನು ಪ್ರತಿನಿಧಿಸಿದ್ದು ಅದರ ಸತ್ತ್ವದ ನೆಲೆಯಲ್ಲಿ, ಸಂಸ್ಕೃತಿಯ ನೆಲೆಯಲ್ಲಿ. ಬಾಲಗಂಗಾಧರ ತಿಲಕರಿಂದಾರಂಭಿಸಿ ಹೆಚ್ಚಿನವರೆಲ್ಲ ಭಾರತದ ಪುನರುತ್ಥಾನದ ಕನಸು ಕಂಡವರೇ ಆಗಿದ್ದರು. ಭಾರತದ ಸಮಗ್ರ ಉತ್ಥಾನವನ್ನು ಬಯಸಿದ ಮಹಾತ್ಮ ಗಾಂಧಿಯವರು ಭಾರತದ ಶ್ರದ್ಧೆಯನ್ನು ಜಾಗೃತಗೊಳಿಸುವುದರ ಮೂಲಕ ಅದನ್ನು ಸಾಧಿಸಬಯಸಿದ್ದರು. ಗಾಂಧಿಯವರ ಈ ದರ್ಶನವನ್ನು ವಿಸ್ತಾರವಾದ ಭಾರತೀಯ ಪರಂಪರೆಯ ಪರಿಪ್ರೇಕ್ಷ್ಯದಲ್ಲಿ ವಿವೇಚಿಸಿದವರು, ವಿಶ್ಲೇಷಿಸಿದವರು ಧರ್ಮಪಾಲ್ ಅವರು. ಧರ್ಮಪಾಲ್ ಅವರ ‘ಭಾರತೀಯ ಚಿತ್ತ, ಮಾನಸಿಕತೆ, ಕಾಲ’ ಎನ್ನುವ ಕಿರು ಹೊತ್ತಗೆ ನವಭಾರತ ನಿರ್ಮಾಣದ ಹಾದಿಗೆ ಹಿಡಿದ ಕನ್ನಡಿಯಾಗಿದೆ.
ಅಭಿವೃದ್ಧಿಗೆ ಸಿದ್ಧ ಮಾದರಿಗಳು
ಭಾರತ ಬ್ರಿಟಿಷರಿಂದ ಬಿಡುಗಡೆ ಪಡೆದಾಗ ಅಧಿಕಾರ ಹಿಡಿದವರು ಬ್ರಿಟಿಷರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆದರೆ ಸಾಕು, ಭಾರತ ಉದ್ಧಾರವಾಗುತ್ತದೆ ಎಂದು ನಂಬಿದ್ದರು. ಹಾಗಾಗಿ ಹೆಸರಿನಲ್ಲಿ ಗಾಂಧಿ ಇದ್ದರೂ ಉಸಿರಿನಲ್ಲಿ ಪಾಶ್ಚಾತ್ಯದ ಗಾಳಿಯೇ ಇತ್ತು. ಜಗತ್ತಿನ ಅಭಿವೃದ್ಧಿಗೆ ಬೇಕಾದ ಚಿಂತನೆಯನ್ನು ಈಗಾಗಲೇ ಮಾಡಿಯಾಗಿದೆ. ಒಂದು ಬಂಡವಾಳಶಾಹಿ ಪದ್ಧತಿ, ಇನ್ನೊಂದು ಸಾಮ್ಯವಾದಿ ಪದ್ಧತಿ. ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಷ್ಟೇ ನಮಗಿರುವ ಅವಕಾಶ. ಈ ಎರಡು ಮಾದರಿಗಳನ್ನು ಬಿಟ್ಟು ಮೂರನೆಯದನ್ನು ಆಲೋಚಿಸಲೂ ಆಗದ ಮನಃಸ್ಥಿತಿ ಇತ್ತು. ಪ್ರಜಾಪ್ರಭುತ್ವ ಮಾದರಿಯ ಸಂಸತ್ತು, ಸರಕಾರಗಳನ್ನು ಒಪ್ಪಿಕೊಂಡಿದ್ದರಿಂದ ಕಮ್ಯೂನಿಸಂನ್ನು ನೇರವಾಗಿ ತರಲು ಸಾಧ್ಯವಿಲ್ಲದ್ದರಿಂದ ತಮ್ಮದನ್ನು ಬಂಡವಾಳ ಮತ್ತು ಸಾಮ್ಯವಾದಗಳ ಬೆರಕೆಯ ಮಿಶ್ರ ಅರ್ಥವ್ಯವಸ್ಥೆ (ಮಿಕ್ಸ್ಡ್ ಎಕೊನೊಮಿ) ಎಂದು ಕರೆದರು. ವ್ಯಕ್ತಿಗತ ಉದ್ಯಮಶೀಲತೆಗೆ ಸರ್ಕಾರೀ ಅನುಮತಿ, ಪರವಾನಿಗೆಯ ಕಡಿವಾಣ, ಸರ್ಕಾರೀ ಉದ್ದಿಮೆಯಲ್ಲಿ ಆಲಸ್ಯ ಮತ್ತು ಭ್ರಷ್ಟಾಚಾರ…. ಹೀಗೆ ಅಭಿವೃದ್ಧಿಯ ಸಿದ್ಧ ಮಾದರಿ ಸಹಾಯಕ್ಕೆ ಬರಲಿಲ್ಲ.
ವೈಶ್ವಿಕ ಚಿಂತನೆ ಎಂದರೆ ವೈವಿಧ್ಯವನ್ನು ಕಳೆಯುವುದು!
ವೈಶ್ವಿಕ ಚಿಂತನೆ ಎಂದರೆ ಜಗತ್ತಿಗೆಲ್ಲ ಒಂದೇ ಮಾದರಿಯ ಆಡಳಿತ ಮತ್ತು ಅರ್ಥವ್ಯವಸ್ಥೆಯನ್ನು ನೀಡುವುದು ಎನ್ನುವ ಸರಳ ಸಮೀಕರಣ. ಭಾರತ ಬಡ ದೇಶ, ಇಲ್ಲಿನ ಜನರಿಗೆ ಹೊಟ್ಟೆಗೆ ಬಟ್ಟೆಗೆ ಸಿಕ್ಕರೆ ಸಾಕು. ರಷ್ಯಾದ ಕ್ರಾಂತಿ, ಚೀನಾದ ಪ್ರಗತಿ ನಮಗೆ ಮಾದರಿ. ಹಾಗಾಗಿ ಆ ದೇಶಗಳಲ್ಲಿ ಜಾರಿಯಾದ ಯೋಜನೆಗಳನ್ನು ಇಲ್ಲಿ ಜಾರಿ ಮಾಡಿದರೆ ಸಾಕು ನಾವು ಉದ್ಧಾರವಾಗುತ್ತೇವೆ. ಈ ರೀತಿಯ ‘ಸಿದ್ಧ ಮಾದರಿ’ಗಳ ಅನುಸರಣೆಯೇ ನಮ್ಮ ಸಮಸ್ಯೆಯಾಯಿತು. ಆದರೆ ಆರ್ಥಿಕ ಕ್ಷೇತ್ರದಲ್ಲಿ ಉದಾರ ನೀತಿಗೆ ತೆರೆದುಕೊಂಡರೂ ಶೈಕ್ಷಣಿಕ ಮತ್ತು ವೈಚಾರಿಕ ಕ್ಷೇತ್ರ ಅದೇ ಮಾದರಿಗಳಿಗೆ ಜೋತು ಬಿದ್ದಿದೆ.
ಅಭಿಜಾತವನ್ನು ಅಭಿಶಾಪವೆಂದು ಕರೆದರು
ಸ್ವಾತಂತ್ರ್ಯಾನಂತರದ ಯೋಜನೆಗಳ ಅನುಷ್ಠಾನದಲ್ಲಿ ಬಂದ ಅಡಚಣೆಗಳೆಂದರೆ ಭಾರತದ ಸ್ಥಾನೀಯ ಬದುಕಿನ ವಿಧಾನಗಳು ಮತ್ತು ಆಯಾ ಪ್ರದೇಶಕ್ಕೇ ವಿಶಿಷ್ಟವಾದ ಸಾಂಪ್ರದಾಯಿಕ ಆಚರಣೆಗಳು. ಆಗೆಲ್ಲ ಸ್ಥಳೀಯ ಸಂಪ್ರದಾಯಗಳ ಮಹತ್ತ್ವವನ್ನು ಪರಿಗಣಿಸದೆ ಅವನ್ನೆಲ್ಲ ಅನಿಷ್ಟಗಳೆಂದೇ ತೀರ್ಮಾನಿಸಿದರು. ಮತ್ತು ಅಭಿಜಾತವಾದ ಅಂತಹ ಜೀವನವಿಧಾನಗಳನ್ನು ಅಭಿಶಾಪವೆಂದು ಪರಿಗಣಿಸಿ, ಅವುಗಳೆಲ್ಲದರ ನಿರ್ಮೂಲನೆ ಅಭಿವೃದ್ಧಿಯ ಮೊದಲ ಹೆಜ್ಜೆ ಎಂದು ಭಾವಿಸಿದರು. ಅದಕ್ಕೆ ಬೇಕಾಗಿ ಎಡ ಪಂಥದ ಬೌದ್ಧಿಕತೆಯನ್ನು ಆಶ್ರಯಿಸಿದರು.
ಸರ್ಕಾರೀ ಪ್ರಗತಿಯ ಸೆಕ್ಯೂಲರ್ ಸಂಕಷ್ಟ
ಮನುಷ್ಯನ ಹಸಿವೆಗೂ ಅವನ ಶ್ರದ್ಧೆಗೂ ಸಂಬಂಧವಿಲ್ಲ. ಆಹಾರ, ಔಷಧ, ವಸತಿ, ಉದ್ಯೋಗಗಳೆಲ್ಲ ಸೆಕ್ಯೂಲರ್ ವಿಷಯಗಳು, ಇವುಗಳಲ್ಲಿ ಶ್ರದ್ಧೆಯ ಸಂಬಂಧ ಇರಬಾರದು ಎನ್ನುವ ಶ್ರದ್ಧಾಹೀನ ಸಾರ್ವಜನಿಕ ಬದುಕನ್ನು ಕಟ್ಟುವ ಚಿಂತನೆ ಎಲ್ಲರನ್ನೂ ಕಷ್ಟಕ್ಕೆ ನೂಕಿತು. ಭಾರತದ ಸಮಸ್ಯೆಗಳಿಗೆಲ್ಲ ಇಲ್ಲಿನ ಧಾರ್ಮಿಕ ನಂಬುಗೆಗಳೇ ಕಾರಣ, ಅದರಲ್ಲೂ ಭಾರತದ ಅಭಿಜಾತ ಧರ್ಮಪ್ರಜ್ಞೆಯಾದ ಹಿಂದುತ್ವವೇ ಇಲ್ಲಿನ ಎಲ್ಲ ಅನಿಷ್ಟಗಳಿಗೆ ಮೂಲ ಕಾರಣ ಎಂದು ತೀರ್ಮಾನಿಸಲಾಯಿತು. ಈ ತೀರ್ಮಾನದ ತೀವ್ರತೆ ಎಂಥದ್ದೆಂದರೆ; ವೈಚಾರಿಕತೆ, ಪ್ರಗತಿಪರ ಚಿಂತನೆ ಎಂದರೇ ಹಿಂದುತ್ವದ ವಿರೋಧ ಎನ್ನುವಷ್ಟು! ಹೊಸ ಭಾರತವನ್ನು ಕಟ್ಟುತ್ತೇವೆ ಎನ್ನುವಾಗ ಭಾರತದ ಪರಂಪರೆಯನ್ನು ಬದಿಗೆ ಸರಿಸಿ ಧಾರ್ಮಿಕ ಶ್ರದ್ಧೆಯ ಹಂಗಿಲ್ಲದ ‘ಕೇವಲ ಮನುಷ್ಯ’ರನ್ನು ಸೃಷ್ಟಿಸುವ ಹಂಬಲ ಅನೇಕರಿಗಿತ್ತು, ಇದೆ.
ಪರಂಪರೆಯ ಹಂಗಿಲ್ಲದ ಆಧುನಿಕತೆ
ಹೊರಗಿನಿಂದ ಬಂದ ಬ್ರಿಟಿಷರು ಭಾರತದ ಕುರಿತು ಹೇಳುತ್ತಿದ್ದ ಮಾತುಗಳನ್ನು ಅಕ್ಷರಶಃ ನಂಬಿದವರು ‘ಭಾರತ ಆಧುನಿಕವಾಗಬೇಕು’ ಎಂದರು. ಹೊಸತು ಎನ್ನುವುದು ಹಳತರ ಮುಂದುವರಿದ ಭಾಗ ಅಥವಾ ಹಳೆಯ ಬೇರಿನಿಂದ ಸತ್ತ್ವವನ್ನು ಹೀರಿ ಬೆಳೆದ ಹೊಸ ಚಿಗುರು ಎನ್ನಿಸಬೇಕಿತ್ತು. ಆದರೆ ಆಧುನಿಕ ಎನ್ನುವುದಕ್ಕೆ ಹಳತರ ಹಂಗೇ ಇಲ್ಲ ಎನ್ನುವ ನಿರ್ಣಯ ತೆಗೆದುಕೊಂಡಿದ್ದರಿಂದ ಬೆಳವಣಿಗೆಯ ನಡೆಯಲ್ಲಿ ಭಾರತದ ಸ್ಪರ್ಶವೇ ಉಳಿಯಲಿಲ್ಲ. ಭಾರತ ಕತ್ತಲೆಯ ಯುಗದಿಂದ ಬೆಳಕಿಗೆ ತೆರೆದುಕೊಂಡಿತು ಎಂದು ಇತಹಾಸವನ್ನೇ ಕತ್ತಲೆಗೆ ದೂಡಲಾಯಿತು. ಕಾಲ ಎನ್ನುವುದು ನೇರ ರೇಖೆಯಲ್ಲಿ ಚಲಿಸುತ್ತದೆ, ಹೊಸತು-ಹಳತು ಎಂದು ಸುಲಭವಾಗಿ ವಿಭಾಗಿಸಬಹುದು ಎನ್ನುವುದು ಇದರ ಹಿಂದಿನ ಪ್ರಜ್ಞೆ.
ಮೇಲೆ ಪಟ್ಟಿಮಾಡಿದ ಸಂಗತಿಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಸೋದಾಹರಣವಾಗಿ ವಿವರಿಸಿದ ಪುಸ್ತಕ ಧರ್ಮಪಾಲ್ ಅವರ ‘ಭಾರತೀಯ ಚಿತ್ತ, ಮಾನಸಿಕತೆ, ಕಾಲ’. ಮನುಷ್ಯರ ಬದುಕನ್ನು, ಸಮಾಜದ ಉನ್ನತಿಯನ್ನು ಗಣಿತೀಯ ಮಾದರಿಯಲ್ಲಿ ಸಾಧಿಸಬಹುದು ಎನ್ನುವ ಚಿಂತನೆಯೇ ನಮಗೆ ತೊಡಕಾದದ್ದು. ಚಿಂತನೆ, ಯೋಜನೆ ಎಲ್ಲದರಲ್ಲೂ ಪಾಶ್ಚಾತ್ಯ ಜೀವನದೃಷ್ಟಿ ನಮ್ಮ ಕಣ್ಣನ್ನು ಕಟ್ಟಿದ್ದರಿಂದ ಭಾರತೀಯ ಬದುಕಿನ ಮರ್ಮ ಅರಿವಿಗೆ ಬರಲಿಲ್ಲ. ಸಂಗಡ ಶ್ರದ್ಧೆಯ ಸಹವಾಸವೇ ಇಲ್ಲದ ಸೆಕ್ಯೂಲರ್ ಭೂತ ಅಮರಿಕೊಂಡಿದ್ದರಿಂದ ಅಭಿವೃದ್ಧಿ ಎಂದರೆ ಆವರಣವಾಯಿತೇ ಹೊರತು ಹೂರಣವಾಗಲಿಲ್ಲ. ಈ ಸಮಸ್ಯೆಗಳನ್ನು ಧರ್ಮಪಾಲ್ ಅವರು ಭಾರತೀಯ ನೆಲೆಯಲ್ಲಿ ಚಿಂತಿಸಿ ವಿಶ್ಲೇಷಿಸಿದ್ದಾರೆ.
ಕಾಲ ನೇರ ಗತಿಯದಲ್ಲ, ಚಕ್ರಗತಿಯದು
ಭಾರತೀಯರು ಕಾಲವನ್ನು ಶತಮಾನದ ಲೆಕ್ಕದಲ್ಲಿ ಗಣಿಸಿದವರಲ್ಲ. ಯುಗಗಳ ಲೆಕ್ಕದಲ್ಲಿ, ಮನ್ವಂತರದ ಲೆಕ್ಕದಲ್ಲಿ ಗಣಿಸಿದವರು. ಉನ್ನತಿ-ಅವನತಿಗಳ ಚಕ್ರಾಕಾರದ ಚಲನೆ ಕಾಲದ ಲಕ್ಷಣ ಎಂದು ಭಾವಿಸಿದವರು. ಭಾರತೀಯರ ಪುರಾಣದ ಪ್ರಜ್ಞೆಯು ಕಾಲದ ಭೇದವಿಲ್ಲದೆ ಯುಗಯುಗಗಳಲ್ಲಿ ಸಂಚರಿಸುವ ಸಾಮರ್ಥ್ಯ ನೀಡುತ್ತದೆ. ಒಬ್ಬನೇ ವ್ಯಕ್ತಿ ಒಂದೇ ದಿನ ಬೇರೆಬೇರೆ ಕಾಲಗಳಲ್ಲಿ ಬದುಕಬಲ್ಲ. ಒಂದು ಸಮಾಜವೂ ತನ್ನ ಮನೋಭೂಮಿಕೆಯಿಂದಾಗಿ ವ್ಯವಹಾರದಲ್ಲಿ ವರ್ತಮಾನವನ್ನೂ, ಭಕ್ತಿಯಲ್ಲಿ ದ್ವಾಪರವನ್ನೂ, ಆರಾಧನೆಯಲ್ಲಿ ತ್ರೇತೆಯನ್ನೂ ಅನುಭವಿಸಬಲ್ಲದು.
ಇದು ಶ್ರದ್ಧಾವಂತರಿಗೆ ಮಾತ್ರ ಅರ್ಥವಾಗುವ, ಅನುಭವಕ್ಕೆ ಬರುವ ವಿಷಯ. ಹನುಮಜ್ಜಯಂತಿ, ರಾಮನವಮಿ, ಗೋಕುಲಾಷ್ಟಮಿಗಳನ್ನು ಆಚರಿಸುವ ಭಾರತೀಯರಿಗೆ ಭೂತ-ವರ್ತಮಾನಗಳನ್ನು ಒಟ್ಟುಗೂಡಿಸುವ ಸಾಮರ್ಥ್ಯವೂ ಇದೆ, ಎಲ್ಲ ಕಾಲಗಳನ್ನೂ ಒಂದೇ ಸಂದರ್ಭದಲ್ಲಿ ಅನುಭವಿಸುವ ಕೌಶಲವೂ ಇದೆ. ಇಂತಹ ಸೂಕ್ಷö್ಮಗಳನ್ನು ಆಲೋಚಿಸಲಾರದವರು ಭಾರತವನ್ನು ಅರಿಯಲಾರರು, ಸನಾತನ ಸಂಸ್ಕೃತಿ ಎಂದರೇನೆಂದು ತಿಳಿಯಲಾರರು. ಇದನ್ನೇ ಧರ್ಮಪಾಲ್ ಹೇಳುತ್ತಾರೆ: “ನಮ್ಮ ಪಾರಂಪರಿಕ ಸಾಹಿತ್ಯದಲ್ಲಿ ನಿವೇಶಗೊಂಡ ಚಿತ್ತ-ಕಾಲಗಳ ನಕ್ಷೆಯಲ್ಲಿ ಆಧುನಿಕ ಜಗತ್ತನ್ನೂ ಅದರ ರೀತಿನೀತಿಗಳನ್ನೂ ಯುಕ್ತಸ್ಥಾನಗಳಲ್ಲಿ ಯೋಜಿಸಿಡುವ ಕೆಲಸ ನಮ್ಮಿಂದ ಸಾಧ್ಯವಾಗುತ್ತಿಲ್ಲ.
ಇದರ ಅರ್ಥ ನಮ್ಮ ಪ್ರಾಚೀನ ಸಾಹಿತ್ಯದ ಅಧ್ಯಯನ ನಡೆದೇ ಇಲ್ಲವೆಂದಲ್ಲ; ಅನೇಕ ಉನ್ನತ ವಿದ್ವಾಂಸರು ಆ ಕೆಲಸಕ್ಕಾಗಿ ಜೀವ ತೇಯ್ದಿದ್ದಾರೆ. ಈ ಕೆಲಸವೆಲ್ಲ ಅವಶ್ಯವಾಗಿ ಆಗಬೇಕಾದ್ದೇ. ಆದರೆ ವಿಪರ್ಯಾಸವೆಂದರೆ ಈಗ ನಮ್ಮದೇ ದೃಷ್ಟಿಯಿಂದ ಆಧುನಿಕಜಗತ್ತನ್ನು ಅಳೆಯುವುದಕ್ಕೆ ಬದಲಾಗಿ ‘ಆಧುನಿಕ’ ದೃಷ್ಟಿಯಿಂದ ನಮ್ಮ ಸಾಹಿತ್ಯವನ್ನೆಲ್ಲ ಅಭ್ಯಾಸಮಾಡಲಾಗುತ್ತಿದೆ! ನಮ್ಮ ನೈಜ ‘ಕಾಲ’ ಸಂದರ್ಭದಿಂದ ಇಪ್ಪತ್ತನೇ ಶತಮಾನವನ್ನು ಗ್ರಹಿಸುವುದಕ್ಕೆ ಬದಲಾಗಿ ಇಪ್ಪತ್ತನೇ ಶತಮಾನದ ಸಂದರ್ಭಕ್ಕೆ ನಮ್ಮ ‘ಕಾಲ’ವನ್ನು ಹೊಂದಿಸುವ ವ್ಯರ್ಥ ಪ್ರಯಾಸ ನಡೆಯುತ್ತಿದೆ.”
‘ಭಾರತೀಯರಿಗೆ ಶ್ರದ್ಧೆಯಿಂದಾಚೆಯ ಸಂಗತಿಯೇ ಇಲ್ಲ’
ಮರವನ್ನು ಕಡಿಯುವ ಮೊದಲು ಕೊಡಲಿ ಹಿಡಿದವನು ಮರಕ್ಕೆ ನಮಸ್ಕರಿಸುತ್ತಾನೆ ಎಂದರೆ ಸುಲಭಕ್ಕೆ ಅರ್ಥವಾಗುವ ಮಾತಲ್ಲ, ಆದರೆ ನಿಜ. ಈ ದೃಷ್ಟಿಯಿಂದ ನೋಡಿದಾಗ ಮಾತ್ರ ಭಾರತೀಯ ಶ್ರದ್ಧೆಯು ಅರ್ಥವಾಗುತ್ತದೆ. ಅನ್ನವನ್ನು ಪ್ರಸಾದ ಎಂದು ಸ್ವೀಕರಿಸುವ ನಮಗೆ ಅನ್ನ ಸೆಕ್ಯೂಲರ್ ಅಲ್ಲ. ಮನಸು ದೇಹಗಳ ಪರಿಶುದ್ಧಿಗಾಗಿ ಉಪವಾಸವ್ರತ ಕೈಗೊಳ್ಳುತ್ತಿದ್ದ ಗಾಂಧಿಯವರಿಗೆ ಹಸಿವು ಕೂಡಾ ಶ್ರದ್ಧೆಯ ಸಂಗತಿ, ಸೆಕ್ಯೂಲರ್ ಅಲ್ಲ. ಭಾರತದ ಬದುಕು, ಭಾಷೆಗಳು ಶ್ರದ್ಧೆ-ನಂಬುಗೆಗಳ ಮೇಲೆ ಬೆಳೆದಿವೆ. ಹಾಗಾಗಿ ಕಾನೂನಿನ ರಾಜ್ಯ ಎಂದಾಗ ಅದು ಹೊರಗಿನದು ಎನಿಸುತ್ತದೆ. ರಾಜಧರ್ಮ ಪ್ರಜಾಧರ್ಮ ಎಂದಾಗ ನಮ್ಮದು ಎನಿಸುತ್ತದೆ. ಜಮೀನಿನ ಒಡೆತನಕ್ಕಾಗಿ ಅಣ್ಣತಮ್ಮಂದಿರಲ್ಲಿ ಕೋರ್ಟಿನಲ್ಲಿ ವ್ಯಾಜ್ಯ ನಡೆದಿದ್ದರೂ ಭೂಮಿಹುಣ್ಣಿಮೆಯಂದು ಪೂಜೆಗೆ ಅಡ್ಡಿಮಾಡದ ಸಂದರ್ಭವನ್ನು ನಮ್ಮಲ್ಲಿ ಕಾಣಬಹುದು.
ಜನರಲ್ಲಿ ಪರಿಸರದ ಕಾಳಜಿ, ಬಳಕೆಯ ಸಂಯಮಗಳನ್ನು ಕಲಿಸಿದ್ದು ಧರ್ಮಪ್ರಜ್ಞೆ. ಭೂಮಿ ತಾಯಿ, ನೀರು ತಾಯಿ ಎಂದು ಹೇಳಿದಾಗ ಸುಲಭವಾಗಿ ಅರ್ಥವಾಗುವ ಮಾತನ್ನು ಗ್ಲೋಬಲ್ ವಾರ್ಮಿಂಗ್-ಭೂಮಿ ಬಿಸಿಯಾಗುತ್ತಿದೆ ಎನ್ನುವುದರ ಮೂಲಕ ತಿಳಿಸಲು ಪ್ರಯತ್ನಿಸಿದರೆ ಸ್ಪಂದನ ಸಿಗುವುದಿಲ್ಲ. ನಮಗೆ ಆಹಾರ, ನಿದ್ರೆ, ಭಯ. ಮೈಥುನಗಳೆಲ್ಲ ಶ್ರದ್ಧೆಯ ಭಾಗವೇ. ಅವೆಲ್ಲವುಗಳ ಮೌಲ್ಯವರ್ಧನೆ ಮಾಡಿಕೊಟ್ಟ ಪರಂಪರೆ ನಮ್ಮ ಸ್ವಭಾವದಲ್ಲಿ ಬಂದಿದೆ. ಅದನ್ನು ಬಿಟ್ಟು ಬೇರೆ ಭಾಷೆಯಲ್ಲಿ ಹೇಳಿದರೆ ಅದು ಮನಸಿಗೆ ಹೊಗುವುದಿಲ್ಲ. ನೀತಿನಿರೂಪಕರು ಮನುಷ್ಯನ ಶ್ರದ್ಧೆಯ ಮಾತೆತ್ತದೆ ಸಾರ್ವಜನಿಕ ವ್ಯವಹಾರಕ್ಕೆ ಬೇಕಾದ ನೀತಿ ನಿಯಮಗಳನ್ನು ರೂಪಿಸಬೇಕು ಎಂದಾಗ ಸಮಸ್ಯೆ ಕಾಣಿಸಿಕೊಂಡಿತು. ನಾವೇ ಬೀಸಿದ ಬಲೆಯಲ್ಲಿ ಸಿಲುಕಿಕೊಂಡ ನಾವು ಹೊರಬರಲಾರದ ದ್ವಂದ್ವದಲ್ಲಿದ್ದೇವೆ – ಪ್ರವಾಹಪತಿತರು.
ಮಾಹಿತಿಯೇ ಮಹಾದೇವ
ಶಿಕ್ಷಣ ಕ್ಷೇತ್ರ ಅಕ್ಷರ ಕ್ಷೇತ್ರವಾದದ್ದು ವಿಚಿತ್ರವಾದರೂ ಸತ್ಯ! ಅಲ್ಲಿಯೂ ಶ್ರದ್ಧೆಯ ನೆಲೆಯಲ್ಲಿ ಕಲಿಸಬಾರದು ಎನ್ನುವ ಸೆಕ್ಯೂಲರ್ ಸಿದ್ಧಾಂತ ಕೆಲಸಮಾಡಿದ್ದರಿಂದ ಶಿಕ್ಷಣವು ಬಹಿರಂಗದ ಮಾಹಿತಿಯಷ್ಟೆ ಆಯಿತು, ಅಂತರಂಗದ ಶೀಲವಾಗಲಿಲ್ಲ. ಸೆಕ್ಯೂಲರ್ ಸಿದ್ಧಾಂತದ ಅವಾಂತರ ಅದೆಷ್ಟು ಮೆರೆಯಿತೆಂದರೆ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ಪಠ್ಯದಲ್ಲಿ, ಈ-ಈಶ್ವರ, ಕ-ಕಮಲ ಇದ್ದಿದ್ದನ್ನು ಈ-ಈಳಿಗೆ, ಕ-ಕತ್ತೆ ಎಂದು ಬದಲಿಸಲಾಯಿತು! ಅಕ್ಷರಜ್ಞಾನವೇ ಶಿಕ್ಷಣ ಎಂದಾಗ ಸಹಜವಾಗಿಯೇ ಅನಕ್ಷರಸ್ಥರು, ಶಾಲೆಯ ಶಿಕ್ಷಣ ಪಡೆಯದ ಪಾಲಕರು ಅಜ್ಞಾನಿಗಳು ಎನಿಸಿಕೊಂಡರು. ಮಕ್ಕಳಲ್ಲಿ ಪಾಲಕರ ಬಗೆಗಿರಬೇಕಾಗಿದ್ದ ಗೌರವ ಕಡಮೆಯಾಯಿತು. ಪ್ರತಿಭಾವಂತರು, ಸಾಧಕರು ಸಾಕಷ್ಟು ಕಲಿತರೂ ದುಡಿಯುವುದಕ್ಕಿಂತ ಹೆಚ್ಚಿನ ಗುರಿಯನ್ನು ಕಲ್ಪಿಸುವಲ್ಲಿ ಶಿಕ್ಷಣ ಸೋತಿತು.
ಭಾರತದ ನೈಜ ಇತಿಹಾಸವನ್ನು, ಪರಂಪರೆಯ ಮೌಲ್ಯಗಳನ್ನು ಶಾಲೆಯಲ್ಲಿ ಕಲಿಸದಿದ್ದರೂ ಮನೆಯಲ್ಲಿ, ದೇವಸ್ಥಾನಗಳಲ್ಲಿ ಕೇಳಿ, ಪರಂಪರೆಯ ಕಲೆಗಳಲ್ಲಿ ನೋಡಿ, ಮಹಾಭಾರತ ರಾಮಾಯಣಗಳನ್ನು ಓದಿ ಅನೇಕರು ಪರಂಪರೆಯೊಂದಿಗೆ ಸಂಬಂಧ ಬೆಳೆಸಿಕೊಂಡರು. ಆದರೆ, ಸಾರ್ವಜನಿಕ ಅಭಿವ್ಯಕ್ತಿಗೊಂದು, ವೈಯಕ್ತಿಕ ಜ್ಞಾನಕ್ಕೆ ಇನ್ನೊಂದು – ಎನ್ನುವ ದ್ವಂದ್ವ ಅನಿವಾರ್ಯವಾಯಿತು. ಈಗಂತೂ ಭಾರತೀಯ ಭಾಷೆಯಲ್ಲಿ ಕಲಿತವರಿಗೆ ಉಜ್ಜ್ವಲ ಭವಿಷ್ಯವಿಲ್ಲ, ಅದಕ್ಕೆ ಇಂಗ್ಲಿಷ್ ಕಲಿಕೆ ಅನಿವಾರ್ಯ – ಎನ್ನುತ್ತಿದ್ದೇವೆ. ಬದುಕಿನ ಯಶಸ್ಸು ಪರಕೀಯ ಭಾಷೆಯಲ್ಲಿದೆ ಎಂದುಕೊಂಡ ಸಮಾಜ ತನ್ನೆಲ್ಲ ವಿವೇಕವನ್ನೂ ಕಳೆದುಕೊಳ್ಳುತ್ತದೆ. ಅಪ್ಪ-ಅಮ್ಮನ ಭಾಷೆ ಬೇರೆ, ಮಕ್ಕಳ ಭಾಷೆ ಬೇರೆ ಎಂದಾದಾಗ ಸಂಬಂಧದಲ್ಲಿ ಭಾವಸ್ಪಂದ ಉಳಿಯುವುದಿಲ್ಲ. ಮನೆಯಲ್ಲಿಯೇ ಪರಸ್ಪರ ಅಪರಿಚಿತರಾಗುತ್ತಾರೆ. ಲೌಕಿಕ ಸಮೃದ್ಧಿಯ ಸಂಗಡ ಭಾವ ಸಮೃದ್ಧಿಯನ್ನೂ ರೂಡಿಸದ ಶಿಕ್ಷಣ ಮಾಹಿತಿಗೆ ಶರಣಾಗುತ್ತದೆ, ಮನುಷ್ಯಸಮಾಜವನ್ನು ಕಟ್ಟುವಲ್ಲಿ ವಿಫಲವಾಗುತ್ತದೆ.
ಇದನ್ನು ಧರ್ಮಪಾಲ್ ಸ್ಪಷ್ಟವಾಗಿ ಹೇಳುವ ಕ್ರಮ ಹೀಗೆ; “ನಮ್ಮಲ್ಲಿ ಕೆಲವರು ಅಮೆರಿಕನ್ ಇಂಗ್ಲಿಷ್ ಕಲಿತೆವೆಂದು ಇಟ್ಟುಕೊಳ್ಳೋಣ. ಆಗಲೂ ಕೆಲವರು ಹೇಳಿಯಾರು – ಈಗ ಅಮೆರಿಕ ದೇಶ ಹಿಂದೆ ಬಿದ್ದಿದೆ. ಇನ್ನುಮುಂದೆ ಜರ್ಮನಿಯೋ ರಷ್ಯವೋ ಅತ್ಯಂತ ಪ್ರಗತಿಪರ ದೇಶವೆನಿಸೀತು. ಒಂದಲ್ಲೊಂದು ದಿನ ಆಫ್ರಿಕನರೋ ಅರಬರೋ ಮುಂಚೂಣಿಗೆ ಬಂದಾರು. ಆ ಸನ್ನಿವೇಶದಲ್ಲಿ ಆ ಜನರ ಭಾಷೆಯನ್ನು ಕಲಿತವರಷ್ಟೇ ‘ಶಿಕ್ಷಿತ’ರೆನಿಸುತ್ತಾರೆ, ಉಳಿದವರೆಲ್ಲ ‘ಅಶಿಕ್ಷಿತ’ ವರ್ಗಕ್ಕೆ ಸೇರುತ್ತಾರೆ.”
ಹಾಗೆ ಹೇಳಿದ ಧರ್ಮಪಾಲ್ ವಾಸ್ತವದ ನೆಲೆಯಲ್ಲಿಯೇ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತಾರೆ: “ಭೌತಶಾಸ್ತ್ರದ ಮೂಲತತ್ತ್ವಗಳು ಬದಲಾಗುತ್ತವೆ; ರಾಜ್ಯಶಾಸ್ತ್ರದ ಪರಿಭಾಷೆ ವ್ಯತ್ಯಾಸವಾಗುತ್ತದೆ; ದರ್ಶನಶಾಸ್ತ್ರಗಳ ದಿಕ್ಕೂ ಪರಿವರ್ತನೆಗೊಳ್ಳುತ್ತದೆ. ಈ ಯಾವುದೂ ಶಾಶ್ವತವಾದವಲ್ಲ. ಬದಲಾವಣೆಯಾಗದೆ ಉಳಿಯುವಂಥವು ಕೆಲವು ಮೂಲಭೂತ ತತ್ತ್ವಗಳು ಮಾತ್ರ. ಜಗತ್ತಿನ ವ್ಯವಹಾರಗಳೆಲ್ಲ ನಡೆಯುವುದು ಸ್ಥಾಯಿಯಲ್ಲದ ತಾತ್ಪೂರ್ತಿಕ ಸಂರಚನೆಗಳ ಅಧಾರದ ಮೇಲೆಯೇ. ಆದ್ದರಿಂದ ಅಂಥದೇ ತಾತ್ಪೂರ್ತಿಕ ನೆಲೆಗಟ್ಟೊಂದನ್ನು ನಮ್ಮ ಚಿತ್ತ ಮತ್ತು ಕಾಲದ ಬಗ್ಗೆ ರೂಪಿಸಿಕೊಳ್ಳಬೇಕಾಗುತ್ತದೆ. ಮತ್ತು ಈ ಕೆಲಸವನ್ನು ನಾವೇ ಸ್ವಯಂ ಮಾಡಬೇಕಾಗಿದೆ. ಹೊರಗಿನವರಾರೋ ಬಂದು ನಿರ್ಮಿಸಿಟ್ಟ ರಚನೆ ನಮ್ಮ ಸಹಜ ಚಿತ್ತ-ಕಾಲಗಳಿಗೆ ಅನುರೂಪವಾಗಿರಲಾರದು. ಅಲ್ಲದೆ ನಾವು ನಮ್ಮದೇ ಆದ ನೆಲಗಟ್ಟನ್ನು ರೂಪಿಸಿಕೊಳ್ಳಬಾರದೆಂದೇ ಹೊರಗಿನವರು ಅಪೇಕ್ಷಿಸುತ್ತಾರೆ. ಆದ್ದರಿಂದ ಕೆಲಸ ಮಾಡಬೇಕಾದವರು ನಾವೇ.”
ಈ ನಾವೇ ಮಾಡುವ ಕೆಲಸವನ್ನು ಮರೆತಿದ್ದರಿಂದ ಏನಾಗಿದೆ ಎಂದರೆ ಧರ್ಮಪಾಲ್ ಹೇಳುವಂತೆ “ನಮ್ಮ ಸಹಜ ಚಿತ್ತ, ಮಾನಸಿಕತೆ ಮತ್ತು ಕಾಲಗಳಿಂದ ನಮ್ಮ ಭೂಮಿಕೆ ವಿಚ್ಛೇದಗೊಂಡಿದ್ದರಿಂದ ನಮ್ಮ ಜಗತ್ತನ್ನು ಬಿಟ್ಟು ಬೇರಾರದೋ ಜಗತ್ತಿನಲ್ಲಿ ನಾವು ಜೀವಿಸತೊಡಗಿದ್ದೇವೆ. ಆದರೆ ಆ ಅನ್ಯ ಜಗತ್ತಿನಲ್ಲಿ ಬದುಕುವುದು ಹೇಗೆಂದೂ ನಾವು ಅರಿಯೆವು. ಅದಕ್ಕೆ ನಾವು ಹೊಂದಿಕೊಳ್ಳಲಾರೆವು. ಹೀಗೆ ಬೇರಾವುದೋ ಜಗತ್ತಿನ ವ್ಯವಹಾರ ಮಾಡುವ ಪ್ರಯತ್ನವನ್ನು ನಮ್ಮ ದೊಡ್ಡ ರಾಜಕಾರಣಿಗಳು, ವಿದ್ವಾಂಸರು, ವ್ಯಾಪಾರಿಗಳು ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅವರು ಬಹುತೇಕ ವಿಫಲರಾಗಿದ್ದಾರೆ – ಅಂಥ ಭಿನ್ನ ವ್ಯವಹಾರಕ್ಷೇತ್ರ ಅವರದಲ್ಲವಾದ್ದರಿಂದ. ಆ ಅನ್ಯ ಜಗತ್ತನ್ನು ಅರ್ಥಮಾಡಿಕೊಳ್ಳುವುದರಲ್ಲಿಯೂ ಅವರು ವಿಫಲರಾಗಿದ್ದಾರೆ.”
ಈ ಸಮಸ್ಯೆ ಎಲ್ಲರನ್ನೂ ಬಾಧಿಸುತ್ತಿದ್ದರೂ ಅದಕ್ಕೇ ಹೊಂದಿಕೊಳ್ಳುವ ವ್ಯರ್ಥ ಪ್ರಯತ್ನ ಯಾಕೆ – ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಈ ಸ್ಥಿತಿಗೆ ಕಾರಣ ನಮ್ಮ ನೀತಿನಿರೂಪಕರು, ವಿದ್ವಾಂಸರು, ವ್ಯವಹಾರನಿಪುಣರೆಲ್ಲರೂ ಅನುಕರಣೆಯ ಹಾದಿಯನ್ನು ಹಿಡಿದಿದ್ದು. ಈಗ ಅವರೆಲ್ಲರ ಪಯಣ ಅದೆಷ್ಟು ದೂರ ಸಾಗಿದೆ ಎಂದರೆ ತಿರುಗಿ ಬರುವುದು ಅಸಾಧ್ಯ ಎನ್ನುವಷ್ಟು. ಆದರೂ ಭಾರತದ ಭವಿಷ್ಯಕ್ಕೆ, ಭಾರತೀಯರ ಆಶಾವಾದಕ್ಕೆ ಭರವಸೆ ಇದೆ.
ಸಮಾಜಕ್ಕೂ ಒಂದು ಸ್ವಭಾವವಿದೆ
ಧರ್ಮಪಾಲ್ ಅವರ ಈ ಪುಸ್ತಕಕ್ಕೆ ಎಸ್.ಆರ್. ರಾಮಸ್ವಾಮಿಯವರು ಬರೆದ ಉಪೋದ್ಘಾತ ಅತ್ಯಂತ ಮುಖ್ಯವಾದುದು. ಅದರಲ್ಲಿ ಅವರು ಹೇಳುತ್ತಾರೆ; “ಯಾವುದೇ ದೇಶದ ಗತಿಯಲ್ಲಿ ಬದಲಾವಣೆ ಆಗುತ್ತಿರುವುದು ಸಹಜ. ಆದರೆ ಅಂಥ ಒಂದೊಂದು ಬದಲಾವಣೆಯೂ ಹೆಚ್ಚು ಉನ್ನತಿಕಾರಕವಾಗಬೇಕೇ ಹೊರತು ಅಧೋಮುಖವಾಗಬಾರದು. ವ್ಯಾವಹಾರಿಕ ಜೀವನದಿಂದ ಸಂಸ್ಕೃತಿಯನ್ನು ಗಡಿಪಾರುಮಾಡುವ ಈಗಿನ ಪ್ರಯಾಸಗಳು ನಾಗರಿಕತೆಯ ಸಹಜ ಪ್ರಕ್ರಿಯೆಗೇ ವಿರುದ್ಧವಾದವು. ಲೌಕಿಕ ಪ್ರಯಾಸಗಳಿಗೆ ಚೈತನ್ಯ ಬರುವುದು ಭಾವನಾತ್ಮಕ ಅಧಿಷ್ಠಾನದಿಂದ. ಈ ಪ್ರಕೃತಿತತ್ತ್ವವನ್ನು ಅಲಕ್ಷಿಸಿರುವುದೇ ಇಂದಿನ ಅನೇಕ ವೈಫಲ್ಯಗಳಿಗೆ ಕಾರಣ. ಭಾವಸಂಪನ್ನತೆಯ ಸಂಪರ್ಕವಿಲ್ಲದಿದ್ದಲ್ಲಿ ಅಹಿತಕರ ಸ್ಪರ್ಧೆ, ಅಸಾಮರಸ್ಯಗಳು ಹೆಚ್ಚದೆ ಇದ್ದಾವೆ?
ಜೀವನವು ಸಹ್ಯವೂ ಸುಂದರವೂ ಆಗಿರಬೇಕಾದಲ್ಲಿ ಜೀವನಪ್ರವಾಹದಲ್ಲಿ ಒಂದು ಸಾತತ್ಯ (ಕಂಟಿನ್ಯೂಯಿಟಿ) ಇರಬೇಕಾಗುತ್ತದೆ. ಇಂಥ ಸಾತತ್ಯ ಉಂಟಾಗುವುದು ಸಮಾಜಾಂಗೀಕೃತ ಶಿಷ್ಟತೆ ಸಭ್ಯತೆಗಳಿಂದ. ಜೀವನಶೈಲಿಯ ಮೇಲೆ ದಿನದಿನವೂ ಹೊಸ ವಿಘಾತಗಳು ಎರಗುತ್ತಿದ್ದರೆ ಸಾತತ್ಯಕ್ಕೆ ಭಂಗ ಒದಗುತ್ತದೆ. ಕೆಲವು ಮೌಲ್ಯಗಳನ್ನು ವಿವಾದಾತೀತ ಎಂದು ಯಾವುದೇ ಶಿಷ್ಟ ಸಮಾಜ ಉಳಿಸಿಕೊಳ್ಳಬೇಕಾಗುತ್ತದೆ.”
ಈ ಉಪೋದ್ಘಾತದಲ್ಲಿ ಲೇಖಕರು ‘ಸಮಾಜದ ಸಹಜ ಸ್ವಭಾವವನ್ನು ಬಹಳ ಕಾಲ ಹತ್ತಿಕ್ಕಲಾಗದು. ಅದುಮಿದಷ್ಟೂ ಅದು ಮತ್ತಷ್ಟು ಪ್ರಬಲವಾಗಿ ಪ್ರಕಟವಾಗುತ್ತದೆ’ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ಭಾರತದ ವರ್ತಮಾನವನ್ನು ಅವಲೋಕಿಸಿದಾಗ ರಾಮಸ್ವಾಮಿಯವರ ಅಭಿಪ್ರಾಯವನ್ನು ಸಮರ್ಥಿಸುವ ಅನೇಕ ನಿದರ್ಶನಗಳು ಕಂಡುಬರುತ್ತವೆ. ಸಂಘರ್ಷವೇ ಆದರೂ ಭಾರತ ಭಾರತವೇ ಆಗುವ ಲಕ್ಷಣಗಳೂ ಗೋಚರಿಸುತ್ತವೆ.
ತುರ್ತುಪರಿಸ್ಥಿತಿ ಮತ್ತು ಅಯೋಧ್ಯೆ
ಧರ್ಮಪಾಲರು ಗುರುತಿಸುವಂತೆ ಭಾರತೀಯ ಜನಮಾನಸಕ್ಕೆ ತನ್ನದೇ ಆದ ಒಂದು ನಿರ್ದಿಷ್ಟವಾದ ಗತಿಯಿದೆ. ಇದನ್ನು ಅವರು ಭಾರತೀಯ ಚಿತ್ತ, ಮಾನಸಿಕತೆ ಮತ್ತು ಕಾಲ ಎಂಬ ಮೂರು ಪರಿಕಲ್ಪನೆಗಳಲ್ಲಿ ವಿವರಿಸಿಕೊಳ್ಳುತ್ತಾರೆ. ಅವರ ಪ್ರಕಾರ ಈ ರೀತಿಯ ಭಾರತೀಯ ಮನಸ್ಸನ್ನು ಸರಿಯಾಗಿ ಅರಿತಿದ್ದವರು ಮಹಾತ್ಮ ಗಾಂಧಿಯವರು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಕಾಲಘಟ್ಟದಲ್ಲಿ ಗಾಂಧಿಯವರಿಗೆ ಭಾರತವನ್ನು ಮುನ್ನಡೆಸುವ ಶಕ್ತಿ ಕುಂದಿತ್ತು. ಅವರು ಸ್ವಾತಂತ್ರ್ಯ ಸಂಗ್ರಾಮದ ಕಾರಣಕ್ಕಾಗಿ ಬಸವಳಿದಿದ್ದರು. ಆನಂತರ ಭಾರತೀಯ ಚಿತ್ತ, ಮನಸ್ಸುಗಳು ಸಿಡಿದೆದ್ದದ್ದು ಜಯಪ್ರಕಾಶ ನಾರಾಯಣರ ಕಾರಣಕ್ಕಾಗಿ, ತುರ್ತುಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ. ಈ ಸಂದರ್ಭದ ಪ್ರತಿಭಟನೆಗಳು ಅಲ್ಪಕಾಲದವಾದರೂ ಸಹ ಒಂದರ್ಥದಲ್ಲಿ ಭಾರತೀಯ ಚಿತ್ತ, ಮನಸ್ಸುಗಳು ತನ್ನದೇ ದಾರಿಯಲ್ಲಿ ಹೊರಟಿರುವ ಭವಿಷ್ಯದ ಮುನ್ಸೂಚನೆಯಾಗಿದ್ದವು. ಆ ಕಾರಣಕ್ಕಾಗಿಯೇ ಅಯೋಧ್ಯೆ ಆಂದೋಲನದ ಮೂಲಕ ತನ್ನ ಮೇಲೆ ಕವಿದಿದ್ದ ದಾಸ್ಯದ ಪರಿಯನ್ನು ಹರಿದುಹಾಕುವ ಮೂಲಕ ತನ್ನ ಶಕ್ತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿತು. ಆದರೆ ಈ ಬಾರಿ ಭಾರತೀಯ ಚಿತ್ತ ಮನಸ್ಸುಗಳಿಗೆ ಯಾವುದೇ ವ್ಯಕ್ತಿಯ ಅಗತ್ಯವಿರಲಿಲ್ಲ. ಇದೊಂದು ಸಾಮೂಹಿಕ ನಾಯಕತ್ವದಿಂದ ತನ್ನ ದಾರಿಯನ್ನು ನಿರ್ಧರಿಸಿಕೊಳ್ಳುವ ಸಂಸ್ಕೃತಿಯೊಂದು ಅಭಿವ್ಯಕ್ತಿಯಾಗಿ ಕಾಣಿಸತೊಡಗಿತ್ತು.
ಇದು ಭಾರತೀಯ ಸಮಾಜದ ಮೂಲಭೂತ ಗುಣಲಕ್ಷಣವೇ ಆಗಿದೆ ಮತ್ತು ಭಾರತ ಇಂದು ತನ್ನ ಬೇರುಗಳ ಮೇಲೆ ನಿಲ್ಲಲು ಹೊರಟಿದೆ ಎಂದು ಧರ್ಮಪಾಲರು ೯೦ರ ದಶಕದಲ್ಲೇ ಗುರುತಿಸಿದ್ದರು. ಯಾರು ಏನೇ ಪ್ರಯತ್ನ ಮಾಡಿದರೂ ಸಮಾಜದ ಸಹಜ ಸ್ವಭಾವವನ್ನು ತುಳಿಯಲಾಗುವುದಿಲ್ಲ ಎನ್ನುವ ಮಾತಿಗೆ ಈ ಘಟನೆಗಳು ಜೀವಂತ ನಿದರ್ಶನವಾಗಿದೆ. ಇಂದಿನ ರಾಜಕಾರಣ ಸರಿಯಿಲ್ಲ, ದಬ್ಬಾಳಿಕೆ ಎಂದೆಲ್ಲ ಹೇಳುವವರೂ ಇದ್ದಾರೆ. ಆದರೆ ರಾಜಕೀಯ ಪಕ್ಷಗಳು ನಾವೂ ಭಾರತದ ಬದಲಾವಣೆಯ ಪರವಾಗಿದ್ದೇವೆ ಎಂದು ತಮ್ಮ ತಪ್ಪನ್ನು ತಿದ್ದಿಕೊಳ್ಳತೊಡಗಿವೆ. ಘೋಷಿತ ಬುದ್ಧಿಜೀವಿಗಳಿಗೆ ಮಾತ್ರ ಭಾರತೀಯ ವಿವೇಕ ಗಾವುದ ದೂರ ಇದೆ.
ಯೋಗಕ್ಕೆ ವಿಶ್ವ ಮಾನ್ಯತೆ
ಜೀವಜಗತ್ತುಗಳ ನಿರಂತರ ಸಂಬಂಧವಾದ ಉಸಿರಾಟದ ವಿದ್ಯೆ ಯೋಗ. ಜೀವ-ಜಗತ್ತು-ದೇವರು ಈ ಮೂರರ ಸಾಮರಸ್ಯವನ್ನು ಹೇಳುವ ವಿದ್ಯೆ ಯೋಗವನ್ನು ವಿಶ್ವಕ್ಕೆ ಪರಿಚಯಿಸಲು ಹೆಮ್ಮೆಯಿಂದ ಮುಂದೆಬಂದ ರಾಜಕೀಯ ಇಚ್ಛಾಶಕ್ತಿಯನ್ನು ಕಂಡಾಗ ಭಾರತ ಭಾರತವಾಗುತ್ತಿದೆ ಎಂದೆನಿಸುವುದಿಲ್ಲವೆ? ವಿಶ್ವದಲ್ಲಿ ಆರ್ಥಿಕ ಆಕ್ರಮಣವಾದ, ಸೈನಿಕ ವಿಸ್ತಾರವಾದ, ಮತೀಯ ಅತಿಕ್ರಮಣಗಳ ಮೆರವಣಿಗೆ ನಡೆದಿರುವಾಗ ಅಂತರಂಗಕ್ಕೆ ಅನಂತದೊಡನೆ ನೇರ ಸಂಬಂಧ ಕಲ್ಪಿಸುವ ಯೋಗ ವಿದ್ಯೆ ನಿಜವಾದ ವೈಶ್ವಿಕ ಚಿಂತನೆ, ದರ್ಶನ. ಯೋಗ ಭಾರತದ್ದು ಮತ್ತು ಅದು ಸಾಧಿಸಿದ ಎಲ್ಲರದ್ದೂ ಎಂದು ಒಪ್ಪಿಕೊಂಡ ಕಾಲದಲ್ಲಿ ನಾವಿದ್ದೇವೆ. ಕೆಲವೇ ವರ್ಷಗಳ ಹಿಂದೆ ಇಂಥಹದ್ದನ್ನು ಆಲೋಚಿಸಲೂ ಆಗುತ್ತಿರಲಿಲ್ಲ!
ರಾಷ್ಟ್ರಭಕ್ತಿಯೇ ಭ್ರಷ್ಟತೆಗೆ ಮದ್ದು
ರಾಜಕೀಯದಲ್ಲಿ ಪ್ರಾಮಾಣಿಕರನ್ನು ಕಾಣುವುದು ಇನ್ನು ಸಾಧ್ಯವೇ ಇಲ್ಲ ಎಂದು ಎಲ್ಲರೂ ಸಿನಿಕತೆಗೆ ಶರಣಾಗಿದ್ದರು. ಆ ಸಂದರ್ಭದಲ್ಲಿ ಕೆಲವಾದರೂ ಶೀಲಸಂಪನ್ನ ನೇತೃತ್ವ ಗೋಚರಿಸುತ್ತಿವೆಯಲ್ಲ. ‘ಮಹಾತ್ಮ ಗಾಂಧಿ ಅಧಿಕಾರ ಹಿಡಿಯಲಿಲ್ಲ, ಜಯಪ್ರಕಾಶ ನಾರಾಯಣರು ಅಧಿಕಾರ ಹಿಡಿಯಲಿಲ್ಲ. ಹಾಗಾಗಿ ಅವರು ಪ್ರಾಮಾಣಿಕರಾಗಿ ಉಳಿದರು’ ಎಂದು ಹೇಳುತ್ತ ಅಧಿಕಾರದಲ್ಲಿರುವವರ ಭ್ರಷ್ಟತೆಗೆ ನೈತಿಕ ಬೆಂಬಲ ನೀಡುತ್ತಿದ್ದವರ ಯೋಚನಾದಾರಿದ್ರö್ಯ ಎಲ್ಲರ ಅರಿವಿಗೂ ಬರುವಂತಾಯಿತಲ್ಲ. ಇಷ್ಟು ಸಾಲದು, ಕೇವಲ ನೇತೃತ್ವದ ಪ್ರಾಮಾಣಿಕತೆ ದೇಶದ ಸಂಸ್ಕೃತಿಗೆ ಪ್ರಮಾಣವಲ್ಲ. ಆದರೆ ಉತ್ತಮ ಆರಂಭವಂತೂ ಆಗಿದೆ. ಜನಸಾಮಾನ್ಯರಲ್ಲಿರುವ ಸಿನಿಕತೆ ಕಡಮೆಯಾಗುತ್ತಿದೆ. ಗಂಗೆಯನ್ನು ತೊಳೆಯುವ ಸಂಕಲ್ಪದಂತೆಯೇ ಇದು ಬಹು ಸಾಹಸದ ಕೆಲಸವಾದರೂ ಅಸಾಧ್ಯವಲ್ಲ ಎನ್ನುವ ವಿಶ್ವಾಸ ಬರುತ್ತಿದೆ. ರಾಷ್ಟ್ರದ ಬದುಕಿನಲ್ಲಿ ಪ್ರತಿಯೊಬ್ಬನ ಕೊಡುಗೆಯೂ ಮುಖ್ಯ ಎಂದು ಪ್ರತಿಯೊಬ್ಬ ಪ್ರಜೆಯ ಬದುಕನ್ನೂ ಗೌರವಿಸಿದಾಗ ಪ್ರಾಮಾಣಿಕ ಬದುಕಿನಲ್ಲಿ ಎಲ್ಲರಿಗೂ ವಿಶ್ವಾಸ ಬರುತ್ತದೆ.
ಧರ್ಮಪಾಲ್ ಹೇಳುತ್ತಾರೆ, “ಕೆಲವು ಪ್ರಶ್ನೆಗಳಿಗೆ ತೀರಾ ತಡಮಾಡದೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ. ನಮ್ಮ ಇತಿಹಾಸದ, ಸಾಹಿತ್ಯದ ಅವಲೋಕನದಿಂದ ನಮ್ಮ ಚಿತ್ತದ, ಮಾನಸಿಕತೆಯ, ಕಾಲಕಲ್ಪನೆಯ ಬಗ್ಗೆ ಪ್ರಾಥಮಿಕ ಅರಿವನ್ನು ಪಡೆಯಬೇಕು. ಜಗತ್ತಿನ ಬಗ್ಗೆ, ವಿಕಾಸ ಪ್ರಕ್ರಿಯೆಯ ಬಗ್ಗೆ ಭಾರತೀಯ ಮಾನಸಿಕತೆಗೆ ಅನುಗುಣವಾದ ಚಿತ್ರವೊಂದನ್ನು ರೂಪಿಸಬೇಕು. ಜೊತೆಗೆ ಇಂದು ಪ್ರಬಲಿಸಿರುವ ಅಸಮತೋಲಗಳಿಗೆ ಆಳವಡುವಂಥಹ ಚಿತ್ತ-ಕಾಲ ವ್ಯಾಖ್ಯೆಯನ್ನು ಮುಂದಿಡಬೇಕು. ಹೀಗೆ ಆದಲ್ಲಿ ವಿಶ್ವದಲ್ಲಿ ಭಾರತೀಯತೆಯನ್ನು ಮತ್ತೆ ಪ್ರತಿಷ್ಠಾಪಿಸಲಾದೀತು.”
ಧರ್ಮಪಾಲರ ದರ್ಶನ ನಮಗೆ ಮಾರ್ಗದರ್ಶಕ. ನಮ್ಮ ವ್ಯವಹಾರ ಮತ್ತು ಅಭಿವ್ಯಕ್ತಿಯಲ್ಲಿ ಭಾರತೀಯತೆ ಎದ್ದುಕಾಣುವಂತಿರಬೇಕು. ನಮ್ಮ ಭಾಷೆಯಲ್ಲಿ ನಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಹೇಳಬಲ್ಲ ಭಾಷಾಪರಿಣತಿ ಬೇಕು. ನಮಗರಿವಿಲ್ಲದೆ ನಮ್ಮೊಂದಿಗೆ ಸೇರಿಕೊಂಡಿರುವ ವಸಾಹತೀಕರಣದ ಲಕ್ಷಣಗಳನ್ನು ಗುರುತಿಸಿ ದೂರಮಾಡಬೇಕು. ಉದಾಹರಣೆಗೆ: ಯಾರಾದರೂ ತೀರಿಕೊಂಡಾಗ ‘ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎನ್ನುತ್ತೇವೆ. ‘ರೆಸ್ಟ್ ಇನ್ ಪೀಸ್’ ಎನ್ನುವುದು ಆಮದಾದ ಪದಗುಚ್ಛ. ಭಾರತೀಯವಾದ ಕ್ರಮ ಆತ್ಮಕ್ಕೆ ಸದ್ಗತಿಯನ್ನು ಕೋರುವುದು. ಒಂದು ಬಾರಿ ನಮ್ಮಲ್ಲಿ ಈ ಪ್ರಜ್ಞೆ ಜಾಗೃತವಾದರೆ, ಮುಂದೆ ಅದು ಸರಪಳಿಯ ಕ್ರಮದಂತೆ ಒಂದೊಂದೇ ಕೊಂಡಿಗಳನ್ನು ಜೋಡಿಸಿಕೊಂಡು ಮುಂದುವರಿಯುತ್ತದೆ.
ಚಿತ್ತಶುದ್ಧಿಗೆ ಮೊದಲ ಆದ್ಯತೆ
ಬಹುತ್ವದ ಮಾತನಾಡುತ್ತಿರುವ ಎಡಪಂಥ ಇಡೀ ಜಗತ್ತಿಗೆ ಒಂದೇ ಮಾದರಿಯನ್ನು ರೂಢಿಸಲು ಹವಣಿಸುತ್ತಿರುತ್ತದೆ. ಅದರ ಮಾರೀಚಮಾಯೆಯಿಂದ ತಪ್ಪಿಸಿಕೊಳ್ಳುವುದು ಮೊದಲ ಅಗತ್ಯ. ಪರಿಸರ ಹೋರಾಟವಿರಲಿ, ಲಿಂಗಸಮಾನತೆಯ ಅಭಿಯಾನವಿರಲಿ, ಮಾನವಹಕ್ಕುಗಳ ಜಾಗೃತಿಯಿರಲಿ – ಎಲ್ಲ ಕಡೆ ಶ್ರದ್ಧಾಹೀನ ಆಲೋಚನಾ ಪದ್ಧತಿಯನ್ನು ಬೆಳೆಸುವುದು ವಿಚಾರವಾದದ ಗುರಿ. ಭಾವಹೀನವಾದ ವೈಚಾರಿಕತೆಯು ಮಾನವಿಕವಾಗಲಾರದು. ನಮ್ಮ ಶಿಕ್ಷಣ ಪದ್ಧತಿ ಸಂಪೂರ್ಣ ಭಾರತೀಯವಾಗುವವರೆಗೂ ಭಾರತೀಯ ಇತಿಹಾಸವನ್ನು ಲೋಕಶಿಕ್ಷಣವಾಗಿ ಕಲಿಸುವ ಹೊಣೆ ನಮ್ಮದು. ಆರ್ಥಿಕ ಆಕ್ರಮಣವನ್ನು ಎದುರಿಸಲು ಸ್ವದೇಶೀ ವ್ರತ ಅಗತ್ಯ. ಭಾರತೀಯ ಅಭಿಮಾನ, ಅಭಿಜ್ಞಾನ ಎಲ್ಲ ಕ್ಷಣಗಳಲ್ಲೂ ನಮ್ಮನ್ನೆಚ್ಚರಿಸುವಂತಾದಾಗ ಚಿತ್ತಶುದ್ಧಿಯು ಸಾಧ್ಯ.