ಸ್ವಾತಂತ್ರ್ಯಾನಂತರದ ಕಾಲದಲ್ಲಿ ಮದ್ರಾಸ್ ರಾಜ್ಯದಲ್ಲಿ ಪಂಚಾಯತ್ರಾಜ್ ವ್ಯವಸ್ಥೆಯ ಬೆಳವಣಿಗೆಯ ಹಲವಾರು ವಿವರಗಳು ನಮಗೆ ಧರ್ಮಪಾಲ್ ಅವರ ವರದಿಯಲ್ಲಿ ಲಭ್ಯವಾಗುತ್ತವೆ. ಮದ್ರಾಸ್ ಪಂಚಾಯತ್ರಾಜ್ ಮಸೂದೆ ೧೯೫೮ರ ವಿವರಗಳು, ಅದನ್ನು ಕಾನೂನಾಗಿ ಅಳವಡಿಸಿಕೊಂಡ ನಂತರ ಇಡೀ ರಾಜ್ಯದಲ್ಲಿ ಯಾವ ಸಾಂಸ್ಥಿಕ ರೂಪವನ್ನು ಅದು ಪಡೆಯಿತು, ೧೯೫೮ರ ಕಾನೂನಿನನ್ವಯ ರಚಿತವಾದ ಪಂಚಾಯತಿಗಳು, ಪಂಚಾಯತಿ ಸಮಿತಿಗಳು, ತಾಲೂಕು ಮಂಡಳಿಗಳು, ಜಿಲ್ಲಾಡಳಿತ ವ್ಯವಸ್ಥೆ ಇವುಗಳ ನಡುವೆ ಇದ್ದ ಪರಸ್ಪರ ಸಂಬಂಧ, ರಾಜ್ಯ ಸರ್ಕಾರವು ಸ್ಥಳೀಯ ಆಡಳಿತಗಳ ಮೇಲೆ ಹೇಗೆ ನಿಯಂತ್ರಣ ಹೊಂದಿತ್ತು ಎನ್ನುವುದರ ಸವಿವರ ಚಿತ್ರಣ, ಪಂಚಾಯತಿಗಳಿಗೆ ನಡೆದ ಚುನಾವಣೆ, ಅದರ ಸ್ವರೂಪ, ಹಣಕಾಸಿನ ವಿತರಣೆ, ಅದರಲ್ಲಿದ್ದ ಸಮಸ್ಯೆಗಳು ಇವೇ ಮುಂತಾದ ವರದಿಯಲ್ಲಿರುವ ಪ್ರಮುಖ ವಿವರಗಳನ್ನು ಈ ಲೇಖನದಲ್ಲಿ ಪ್ರಸ್ತಾವಿಸಲಾಗಿದೆ.
ಪಂಚಾಯತಿಗಳು ಎಂದರೇನು? ಅದೊಂದು ಭಾರತಕ್ಕೇ ವಿಶಿಷ್ಟವಾದ ಗ್ರಾಮೀಣ/ಸ್ಥಳೀಯ ಆಡಳಿತ ವ್ಯವಸ್ಥೆಯಾಗಿತ್ತೆ? – ಎನ್ನುವುದರ ಬಗ್ಗೆ ವಿದ್ವಾಂಸರಲ್ಲಿ ಸಹಮತವಿಲ್ಲ. ಕೆಲವರ ಪ್ರಕಾರ ಪಂಚಾಯತಿ ಎನ್ನುವುದು ಪ್ರಾಚೀನ ಕಾಲದದಲ್ಲಿ ಅಸ್ತಿತ್ವದಲ್ಲಿದ್ದ ಗ್ರಾಮಗಳ ಜನರ ನಾಗರಿಕ, ಆಡಳಿತ ಹಾಗೂ ರಾಜಕೀಯ ಅಗತ್ಯಗಳನ್ನು ಪೂರೈಸುತ್ತಿದ್ದ ಒಂದು ಸ್ವಯಮಾಡಳಿತ ವ್ಯವಸ್ಥೆಯಾಗಿತ್ತು. ಮತ್ತೆ ಕೆಲವರು ಹೇಳುವಂತೆ (ಮೆಟ್ಕಾಫ್ ಅವರನ್ನೂ ಒಳಗೊಂಡು) ಪಂಚಾಯತ್ ಎನ್ನುವುದು ‘ಗ್ರಾಮ ಗಣರಾಜ್ಯ’ಗಳಾಗಿದ್ದವು ಎಂದು ಹೇಳುವುದಕ್ಕೆ ಯಾವುದೇ ಆಧಾರವಿಲ್ಲ. ಅವರ ಪ್ರಕಾರ ಪಂಚಾಯತಿಯು ಗ್ರಾಮೀಣ ಜನರ ಕಲಹಗಳನ್ನು (ನಾಗರಿಕ ಮತ್ತು ಕ್ರಿಮಿನಲ್ ಅಪರಾಧಗಳು) ಪರಿಹರಿಸುವ ಕೆಲಸವನ್ನಷ್ಟೇ ಮಾಡುತ್ತಿತ್ತು.
ಭಾರತದ ಸ್ಥಳೀಯ ಸರ್ಕಾರಗಳ ಪರಂಪರೆಯ ಬಗ್ಗೆ ಸಾಕಷ್ಟು ಜನರು ಬರೆದಿದ್ದಾರೆ. ಆದರೆ ಅವುಗಳ ಸ್ವರೂಪ ಮತ್ತು ಕಾರ್ಯವೈಖರಿಗಳ ವಿವರಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಬರೆದಿರುವವರಲ್ಲಿ ಧರ್ಮಪಾಲ್ ಅವರು ಅಗ್ರಗಣ್ಯರು. ಅವುಗಳ ಸಂಪೂರ್ಣ ವಿವರಗಳನ್ನು ದಾಖಲೆಸಹಿತ ನಮ್ಮ ಮುಂದಿಟ್ಟವರು ಅವರೊಬ್ಬರೇ ಎಂದರೂ ತಪ್ಪಾಗುವುದಿಲ್ಲ. ೧೯೭೨ರಲ್ಲಿ ‘ಮದ್ರಾಸ್ ಪಂಚಾಯತ್ ಸಿಸ್ಟಮ್’ (ಸಂ.೨) ವರದಿಯನ್ನು ಅವರು ಪ್ರಕಟಿಸಿದರು. ನವದೆಹಲಿಯ ಬಲವಂತ್ರಾಯ್ ಮೆಹ್ತಾ ಪಂಚಾಯತ್ರಾಜ್ ಫೌಂಡೇಷನ್ ಇದನ್ನು ಪ್ರಾಯೋಜಿಸಿತ್ತು. ಈ ವರದಿಯು ಮದ್ರಾಸಿನಲ್ಲಿ ಪಂಚಾಯತ್ರಾಜ್ ವ್ಯವಸ್ಥೆಯು ಹೇಗೆ ವಿಕಾಸಗೊಂಡಿತು ಎನ್ನುವುದರ ಪ್ರತಿಯೊಂದು ವಿವರವನ್ನೂ ನಮ್ಮ ಮುಂದಿಡುತ್ತದೆ.
ಸಂರಚನೆ; ಸಮನ್ವಯ
ಬ್ರಿಟಿಷರ ದಾಖಲೆಗಳನ್ನು ಪರಿಶೀಲಿಸಿದರೂ ಭಾರತದ ಬಹಳಷ್ಟು ಕಡೆ ಗ್ರಾಮಗಳು ನಾಗರಿಕ, ಆಡಳಿತ ಹಾಗೂ ರಾಜಕೀಯ ಅಗತ್ಯಗಳನ್ನು ಪೂರೈಸುವ ಸಂಘಟಿತವಾದ ಸಾಂಸ್ಥಿಕ ರಚನೆಗಳನ್ನು ಹೊಂದಿದ್ದವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅವುಗಳ ನಿಜವಾದ ಸ್ವರೂಪವೇನು? ಕೇಂದ್ರ ಆಡಳಿತದೊಡನೆ ಅವುಗಳಿಗಿದ್ದ ಸಂಬಂಧವೇನು? ಅವುಗಳಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಹೇಗೆ ವಿತರಿಸಲಾಗುತ್ತಿತ್ತು? – ಇವೇ ಮುಂತಾದ ವಿಷಯಗಳ ಬಗ್ಗೆ ಇನ್ನೂ ಸಂಶೋಧನೆ ನಡೆಯಬೇಕಿದೆ ಎನ್ನುವ ಅಂಶವನ್ನು ಧರ್ಮಪಾಲ್ ನಮ್ಮ ಗಮನಕ್ಕೆ ತರುತ್ತಾರೆ. ಮದ್ರಾಸ್ ಪಂಚಾಯತ್ರಾಜ್ ವ್ಯವಸ್ಥೆಯ ಬೆಳವಣಿಗೆಯ ಕುರಿತು ಅವರ ವರದಿಯು ಪ್ರಕಟವಾಗಿದ್ದು ೧೯೭೦ರ ದಶಕದಲ್ಲಿ. ಅದರ ಹಿಂದಿನ ಸುಮಾರು ಏಳು ದಶಕಗಳ ಕಾಲ ಪಂಚಾಯತ್ರಾಜ್ ಬೆಳವಣಿಗೆಯ ಬಗ್ಗೆ ಕಾಲಕಾಲಕ್ಕೆ ಬಂದ ಹಲವಾರು ವರದಿಗಳಲ್ಲಿ ಬಹು ಮುಖ್ಯವಾದ ಮೂರು ವರದಿಗಳನ್ನು ಆಧರಿಸಿ (೧೮೮೦, ೧೯೦೭ ಮತ್ತು ೧೯೪೬ರ ವರದಿಗಳು) ಧರ್ಮಪಾಲ್ರವರು ಸಮಗ್ರವಾದ ಚಿತ್ರಣವನ್ನು ನೀಡುತ್ತಾರೆ. ಬ್ರಿಟಿಷ್ ಆಳ್ವಿಕೆಯ ವರದಿಗಳು ಈ ಸಂಸ್ಥೆಗಳ ಸಹಜ ಬೆಳವಣಿಗೆಯ ಚಿತ್ರಣವನ್ನು ಮಾತ್ರ ಕೊಡುವುದಿಲ್ಲ; ಕಾಲಕಾಲಕ್ಕೆ, ಬ್ರಿಟಿಷ್ ಆಡಳಿತದ ಮಧ್ಯಪ್ರವೇಶದಿಂದಾಗಿ, ಅವುಗಳ ರಚನೆಯು ಸಮಗ್ರವಾಗಿ ಬದಲಾಗುತ್ತಾ ಹೋಗಿದ್ದನ್ನು ಅವರು ಗುರುತಿಸುತ್ತಾರೆ. ಗ್ರಾಮೀಣ ಮಟ್ಟದಲ್ಲಿ ಅಸ್ತಿತ್ವದಲ್ಲಿದ್ದ ಸಂಸ್ಥೆಗಳನ್ನು ವಿಭಿನ್ನ ಹೆಸರುಗಳಿಂದ ಗುರುತಿಸಲಾಗುತ್ತಿತ್ತು. ಅವುಗಳೆಲ್ಲವನ್ನೂ ಪಂಚಾಯತಿಗಳು ಎಂದು ಗುರುತಿಸಲು ಪ್ರಾರಂಭವಾಗಿದ್ದು ಬ್ರಿಟಿಷರ ಕೊಡುಗೆ ಎಂದು ಅವರು ಹೇಳುತ್ತಾರೆ. ಪಂಚಾಯತಿಗಳ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವಲ್ಲಿ ಧರ್ಮಪಾಲ್ರವರ ಈ ಕಾಣ್ಕೆ ಬಹಳ ಮಹತ್ತ್ವ ಪಡೆದುಕೊಳ್ಳುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ಉದ್ದೇಶಗಳಿಗಾಗಿ ಅಸ್ತಿತ್ವಕ್ಕೆ ಬಂದಿದ್ದ ಹಲವು ಬಗೆಯ – ಸ್ಥಳೀಯವಾದ ಸಂಘರ್ಷವನ್ನು ಬಗೆಹರಿಸಲು ಅಥವಾ ವಿವಿಧ ಸಮುದಾಯಗಳು ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸಹಮತಕ್ಕೆ ಬರಬೇಕಾದ ಕಾರಣದಿಂದ ಅಸ್ತಿತ್ವಕ್ಕೆ ಬಂದಿರಬಹುದಾದ – ಸ್ಥಳೀಯ ಸಂಘಟನೆಗಳೆಲ್ಲವನ್ನೂ ಸೇರಿಸಿ ಪಂಚಾಯತಿ ಎಂದು ಗುರುತಿಸಿರುವ ಸಾಧ್ಯತೆ ಕಾಣುತ್ತದೆ.
ಪುನಸ್ಸಂಘಟನೆ
ಬ್ರಿಟಿಷರು ತಮ್ಮ ಆಡಳಿತವನ್ನು ಜಿಲ್ಲಾ ಮಟ್ಟ ಹಾಗೂ ಅದರ ಕೆಳಗಿನ ಹಂತವಾದ ತಾಲೂಕು ಮತ್ತು ಗ್ರಾಮಗಳ (ಪಟ್ಟಣಗಳೂ ಸೇರಿದಂತೆ) ಹಂತದವರೆಗೂ ವ್ಯವಸ್ಥಿತಗೊಳಿಸಬೇಕೆಂದು ತೀರ್ಮಾನಿಸಿದ ಫಲವಾಗಿ ದೇಶಾದ್ಯಂತ ಮತ್ತು ವಿಶೇಷವಾಗಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸ್ಥಳೀಯ ಸಂಸ್ಥೆಗಳ ಪುನಸ್ಸಂಘಟನೆಯು ಪ್ರಾರಂಭವಾಯಿತು. ಅಂತಹ ಪುನಸ್ಸಂಘಟನೆಯ ಪ್ರಯತ್ನದ ಹಿಂದೆ ಮೂರು ಪ್ರಮುಖವಾದ ಚಿಂತನೆಗಳಿದ್ದವು ಎಂದು ಧರ್ಮಪಾಲ್ ಗುರುತಿಸುತ್ತಾರೆ:
(೧) ಕೆಳಹಂತದಲ್ಲಿ ಮಾಡಬೇಕಾದ ಕೆಲಸಗಳನ್ನು ಮಾಡಲು ಸ್ಥಳೀಯ ಮಟ್ಟದಲ್ಲಿ ಹೆಚ್ಚುವರಿ ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು.
(೨) ಮಾಮೂಲಿ ಆಡಳಿತದಿಂದ ಸ್ವತಂತ್ರವಾಗಿರುವ ಮತ್ತು ಆಡಳಿತಗಾರರು, ವಿಶೇಷವಾಗಿ ಕಲೆಕ್ಟರ್ಗಳು, ತಾವು ಗ್ರಾಮಮಟ್ಟದಲ್ಲಿ ಮಾಡಬೇಕೆನಿಸಿದ ಕೆಲಸಗಳನ್ನು ಮಾಡಲು ಅನುಕೂಲವಾಗುವಂತಹ ಆಡಳಿತ ವ್ಯವಸ್ಥೆಯನ್ನು ರೂಪಿಸುವುದು.
(೩) ಗ್ರಾಮಗಳಿಂದ ಹಿಡಿದು ಜಿಲ್ಲಾಮಟ್ಟದವರೆಗೆ ಜನರು ತಮ್ಮ ಹಾಗೂ ಸಾಮಾಜಿಕ ಒಳಿತಿಗಾಗಿ ಮಾಡುವ ಕೆಲಸಗಳಲ್ಲಿ ಸ್ವತಃ ಭಾಗವಹಿಸುವಂತೆ ಮಾಡುವುದು.
ರಿಪ್ಪನ್ ಕೊಡುಗೆ
ಇವುಗಳಲ್ಲಿ ಮೊದಲಿನ ಎರಡು ಬ್ರಿಟಿಷ್ ಆಡಳಿತಗಾರರು ಎದುರಿಸಿದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕೂಡಿದ್ದರೆ, ಮೂರನೆಯದು ಆಡಳಿತಗಾರರ ಅಗತ್ಯಗಳಿಗಿಂತ ಹೆಚ್ಚಾಗಿ ಆಗಿನ ವೈಸರಾಯ್ ಆಗಿದ್ದ ಲಾರ್ಡ್ ರಿಪ್ಪನ್ ಕೊಡುಗೆಯಾಗಿತ್ತು. ಅವಸಾನದ ಅಂಚಿನಲ್ಲಿದ್ದ ಪ್ರಾಚೀನ ಭಾರತದ ಗ್ರಾಮೀಣ ಸಮುದಾಯಗಳನ್ನು ಪುನಶ್ಚೇತನಗೊಳಿಸುವ ಆಶಯವನ್ನು ಆತ ಹೊಂದಿದ್ದ. ಅವು ಅವಸಾನದ ಅಂಚಿಗೆ ತಲಪಲು ಕಾರಣವೇನು ಎನ್ನುವುದರ ಬಗ್ಗೆ ಸಾಕಷ್ಟು ವಿವರಗಳು ಲಭ್ಯವಿದ್ದರೂ ಕೂಡ ಅವೆಲ್ಲವೂ ಕೇವಲ ಊಹೆಗಳಂತೆ ಕಾಣಿಸುತ್ತವೆ. ಸ್ಥಳೀಯ ಪರಿಸರಕ್ಕೆ ಪರಕೀಯವಾದ ಎರಡು ಆಡಳಿತ ವ್ಯವಸ್ಥೆಗಳ – ಮುಸ್ಲಿಂ ಮತ್ತು ನಂತರ ಬ್ರಿಟಿಷ್ – ಪ್ರಭಾವದಿಂದ ಭಾರತೀಯ ಸಂಸ್ಕೃತಿಯ ಪರಿಸರದಲ್ಲಿ ಹುಟ್ಟಿ ಬೆಳೆದ ಸಮುದಾಯಗಳ ಸ್ವಾಯತ್ತ ಆಡಳಿತ ವ್ಯವಸ್ಥೆ ಕ್ರಮೇಣ ಕಣ್ಮರೆಯಾಗಿರುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ೧೮೮೪ರ ಶಾಸನದ ಮೂಲಕ ಜಿಲ್ಲೆ, ತಾಲೂಕು (ಪಟ್ಟಣ) ಹಾಗೂ ಗ್ರಾಮೀಣ ಮಟ್ಟಗಳಲ್ಲಿ ಮೂರು ಹಂತದ ರಚನೆಯನ್ನು ಅಸ್ತಿತ್ವಕ್ಕೆ ತರಲಾಯಿತು.
ಆದರೆ ಈ ಬದಲಾವಣೆಯು ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿತು. ವಿವಿಧ ಹಂತಗಳ ಆಡಳಿತ ವ್ಯವಸ್ಥೆಯಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆ ಇತ್ತು. ೧೯೦೯ರಲ್ಲಿ ನೇಮಕವಾದ ರಾಯಲ್ ವಿಕೇಂದ್ರೀಕರಣ ಆಯೋಗವು ಸ್ಥಳೀಯ ಮಂಡಳಿಗಳು ಮತ್ತು ಗ್ರಾಮ ಪಂಚಾಯತಿಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿತು. ೧೯೦೯-೧೯೨೦ರ ಅವಧಿಯಲ್ಲಿ ಸ್ಥಳೀಯ ಸರ್ಕಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಆ ಸಮಯದಲ್ಲಿ ಪಂಚಾಯತಿಯ ಕುರಿತು ಪ್ರಕಟವಾದÀಷ್ಟು ಮಾಹಿತಿಯು ಬೇರೆ ಯಾವ ಕಾಲದಲ್ಲಿಯೂ, ಸ್ವಾತಂತ್ರ್ಯಾನಂತರವೂ ಕೂಡ, ಆಗಿಲ್ಲ ಎಂದು ಧರ್ಮಪಾಲ್ ಅಭಿಪ್ರಾಯಪಡುತ್ತಾರೆ.
ವರದಿಗಳ ಪ್ರಕಟಣೆಯ ನಂತರ ಗೋಖಲೆ ಮತ್ತು ಸಿ.ಪಿ. ರಾಮಸ್ವಾಮಿ ಅಯ್ಯರ್ರವರ ಪ್ರತಿಕ್ರಿಯೆಗಳನ್ನು ಅವರು ಉಲ್ಲೇಖಿಸುತ್ತಾರೆ:
ಗೋಖಲೆ: ಗೋಪ್ಯತೆ, ಅಧಿಕಾರಶಾಹಿತ್ವ ಮತ್ತು ವಿಳಂಬ ಇವು ಜಿಲ್ಲಾ ಆಡಳಿತದ ಮೂರು ಪ್ರಮುಖ ದೋಷಗಳು. ಜನರಿಗೆ ನೇರವಾಗಿ ಸಂಬಂಧಿಸಿದ ವಿಷಯಗಳನ್ನು ಕೇವಲ ಅಧಿಕಾರಿಗಳು ಸಲ್ಲಿಸಿದ ವರದಿಯ ಆಧಾರದ ಮೇಲೆ ಅವರಿಗೇ ತಿಳಿಯದಂತೆ ಅವರ ಬೆನ್ನ ಹಿಂದೆ ತೀರ್ಮಾನಿಸಲಾಗುತ್ತದೆ…. ಪ್ರತಿ ಜಿಲ್ಲೆಯಲ್ಲೂ ಒಂದು ಪುಟ್ಟದಾದ ಅಧಿಕಾರೇತರ ಸಮಿತಿ ಇರಬೇಕು…. ಪ್ರತಿಯೊಂದು ಮುಖ್ಯ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದರೂ ಕಲೆಕ್ಟರ್ರವರು ಸಮಿತಿಯನ್ನು ಕಡ್ಡಾಯವಾಗಿ ಸಂಪರ್ಕಿಸಬೇಕು.
ರಾಮಸ್ವಾಮಿ ಅಯ್ಯರ್: ಸ್ಥಳೀಯ ವ್ಯವಹಾರಗಳನ್ನು ನೋಡಿಕೊಳುವಲ್ಲಿ ಸ್ಥಳೀಯ ಜನರ ಸಾಮರ್ಥ್ಯವನ್ನು ನಾವು ನಂಬದೆ ಇದ್ದಲ್ಲಿ ಅವರು ತಮ್ಮ ವ್ಯವಹಾರಗಳನ್ನು ನಿರ್ವಹಿಸಲು ಕಲಿಯುವುದೇ ಇಲ್ಲ.
ಸಾಂಸ್ಥಿಕ ರೂಪ
ಈ ಎರಡು ಅಭಿಪ್ರಾಯಗಳು ಆಗ ಆಡಳಿತದ ಬಗ್ಗೆ ಜನರಿಗಿದ್ದ ನಿರೀಕ್ಷೆಯನ್ನು ಪ್ರತಿಬಿಂಬಿಸುತ್ತಿತ್ತು ಎಂದು ಧರ್ಮಪಾಲ್ ಹೇಳುತ್ತಾರೆ. ೧೯೨೦ರಲ್ಲಿ ಬಂದ ಶಾಸನವು ಇಂತಹ ನಿರೀಕ್ಷೆಗಳಿಗೆ ಒಂದು ಶಾಸನಬದ್ಧ ರೂಪವನ್ನು ಕೊಡುವ ಪ್ರಯತ್ನವಾಗಿತ್ತು. ಸಾಕಷ್ಟು ಅಧಿಕಾರಗಳು ಕೇಂದ್ರ ಆಡಳಿತದಲ್ಲಿ ಉಳಿದುಕೊಂಡಿದ್ದು ಹೌದಾದರೂ ಅವುಗಳಲ್ಲಿ ಬಹಳಷ್ಟನ್ನು ಜಿಲ್ಲೆ ಮತ್ತು ತಾಲೂಕು ಮಂಡಳಿಗಳಿಗೆ ನಿಯೋಜಿಸಲಾಯಿತು. ಧರ್ಮಪಾಲ್ ಹೇಳುವಂತೆ ೧೯೩೦ರವರೆಗೆ ಇದೇ ಪರಿಸ್ಥಿತಿಯು ಮುಂದುವರಿದು ಸ್ಥಳೀಯ ಮಟ್ಟದ ದಿನನಿತ್ಯದ ವ್ಯವಹಾರದಲ್ಲಿ ಮೇಲಧಿಕಾರಿಗಳ ಮಧ್ಯಪ್ರವೇಶವಿರಲಿಲ್ಲ.
ಸ್ವಾತಂತ್ರ್ಯಾನಂತರದ ಕಾಲದಲ್ಲಿ ಮದ್ರಾಸ್ ರಾಜ್ಯದಲ್ಲಿ ನಡೆದ ಪಂಚಾಯತ್ರಾಜ್ ವ್ಯವಸ್ಥೆಯ ಬೆಳವಣಿಗೆಯ ಪ್ರತಿಯೊಂದು ವಿವರಗಳೂ ಸಹ ನಮಗೆ ಧರ್ಮಪಾಲ್ ಅವರ ವರದಿಯಲ್ಲಿ ಲಭ್ಯವಾಗುತ್ತವೆ. ಮದ್ರಾಸ್ ಪಂಚಾಯತ್ರಾಜ್ ಮಸೂದೆ ೧೯೫೮ರ ವಿವರಗಳು, ಅದನ್ನು ಕಾನೂನಾಗಿ ಅಳವಡಿಸಿಕೊಂಡ ನಂತರ ಇಡೀ ರಾಜ್ಯದಲ್ಲಿ ಯಾವ ಸಾಂಸ್ಥಿಕ ರೂಪವನ್ನು ಅದು ಪಡೆಯಿತು, ೧೯೫೮ರ ಕಾನೂನಿನನ್ವಯ ರಚಿತವಾದ ಪಂಚಾಯತಿಗಳು, ಪಂಚಾಯತಿ ಸಮಿತಿಗಳು, ತಾಲೂಕು ಮಂಡಳಿಗಳು, ಜಿಲ್ಲಾಡಳಿತ ವ್ಯವಸ್ಥೆ ಇವುಗಳ ನಡುವೆ ಇದ್ದ ಪರಸ್ಪರ ಸಂಬಂಧ, ರಾಜ್ಯ ಸರ್ಕಾರವು ಸ್ಥಳೀಯ ಸರ್ಕಾರಗಳ ಮೇಲೆ ಹೇಗೆ ನಿಯಂತ್ರಣ ಹೊಂದಿತ್ತು ಎನ್ನುವುದರ ಸವಿವರ ಚಿತ್ರಣ, ಪಂಚಾಯತಿಗಳಿಗೆ ನಡೆದ ಚುನಾವಣೆ, ಅದರ ಸ್ವರೂಪ, ಹಣಕಾಸಿನ ವಿತರಣೆ, ಅದರಲ್ಲಿದ್ದ ಸಮಸ್ಯೆಗಳು ಇವೇ ಮುಂತಾದ ವರದಿಯಲ್ಲಿರುವ ಎಲ್ಲ ವಿವರಗಳನ್ನು ಈ ಲೇಖನದ ಮಿತಿಯಲ್ಲಿ ಹೇಳಲು ಸಾಧ್ಯವಾಗುವುದಿಲ್ಲ.
ಬದಲಾದ ವಿನ್ಯಾಸ
ಆದರೆ ಇಲ್ಲಿ ಉಲ್ಲೇಖಿಸಲೇಬೇಕಾದ ಧರ್ಮಪಾಲ್ರವರ ವರದಿಯ ಕೆಲವು ಮಹತ್ತ್ವದ ಸಂಗತಿಗಳಿವೆ. ಬ್ರಿಟಿಷರ ಆಳ್ವಿಕೆಯಲ್ಲಿ ಮತ್ತು ಸ್ವಾತಂತ್ರ್ಯಾನಂತರದಲ್ಲಿ ಪುನಶ್ಚೇತನಗೊಂಡ ಸ್ಥಳೀಯ ಸಂಸ್ಥೆಗಳು ತಮ್ಮ ಮೂಲ ಸತ್ತ್ವವನ್ನು ಕಳೆದುಕೊಳ್ಳುತ್ತವೆ. ಮೂಲದಲ್ಲಿ ಸ್ಥಳೀಯವಾದ ಸಮುದಾಯ (ಜಾತಿ ಇತ್ಯಾದಿ) ಮತ್ತು ಗ್ರಾಮಗಳ ಕೂಡು ಬದುಕಿನ ಅಗತ್ಯಗಳನ್ನು ಪೂರೈಸಲು ಅಸ್ತಿತ್ವಕ್ಕೆ ಬಂದಿದ್ದ ಈ ಸಂಸ್ಥೆಗಳು ಆಧುನಿಕ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರೀಕೃತ ಆಡಳಿತದ ಅಗತ್ಯಗಳನ್ನು ಪೂರೈಸುವ ಆಡಳಿತದ ಅಧೀನ ಉಪವಿಭಾಗಗಳಾಗಿ ಬದಲಾಗುತ್ತವೆ. ಪರಿಣಾಮವಾಗಿ ಅಧಿಕಾರ ವಿಕೇಂದ್ರೀಕರಣದ ಜೊತೆಯಲ್ಲಿಯೆ ಕೇಂದ್ರ ಆಡಳಿತ ವ್ಯವಸ್ಥೆಯ ಎಲ್ಲ ದೋಷಗಳೂ ವಿಕೇಂದ್ರೀಕರಣಗೊಳ್ಳುತ್ತವೆ.
ಧರ್ಮಪಾಲ್ರವರು ತಮ್ಮ ವರದಿಯ ಸುಮಾರು ೩೫ ಪುಟಗಳನ್ನು ಆಧುನಿಕ ಪಂಚಾಯತ್ ವ್ಯವಸ್ಥೆಯ ಇಂತಹ ದೋಷಗಳನ್ನು ಗುರುತಿಸುವುದಕ್ಕೆ ಮೀಸಲಿಡುತ್ತಾರೆ. ಅವರು ಗುರುತಿಸುವಂತೆ ಮದ್ರಾಸ್ ಪಂಚಾಯತ್ ವ್ಯವಸ್ಥೆಯಲ್ಲಿ ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿತ್ತು. ಧರ್ಮಪಾಲ್ರವರ ಪ್ರಕಾರ, ಸ್ಥಳೀಯ ಮಟ್ಟದ ಸಮಸ್ಯೆಗಳಿಗೆ ತಾವೇ ಸ್ವತಃ ಪರಿಹಾರ ಕಂಡುಕೊಳ್ಳುವ ಯಾವುದೇ ಅಧಿಕಾರವಾಗಲಿ, ಅವಕಾಶವಾಗಲಿ ಸ್ಥಳೀಯ ಜನರಿಗೆ ಇರಲಿಲ್ಲ. ಏನೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಮೇಲಿನ ಹಂತದವರ ಒಪ್ಪಿಗೆ ಅಗತ್ಯವಾಗಿತ್ತು. ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಯ ನಿಯಮಗಳನ್ನು ರೂಪಿಸುವಾಗ ಚುನಾಯಿತ ಸದಸ್ಯರುಗಳು ಜನರಿಗೆ ಯಾವುದೇ ಬಗೆಯ ಉತ್ತರದಾಯಿತ್ವ ಹೊಂದಿರಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡದೇ ಇದ್ದುದು ಪಂಚಾಯತ್ ವ್ಯವಸ್ಥೆಯ ಮತ್ತೊಂದು ದೊಡ್ಡ ಕೊರತೆಯಾಗಿತ್ತು. ಚುನಾಯಿತ ಸದಸ್ಯರು ಮತ್ತು ಆಡಳಿತಗಾರರು ತಮ್ಮ ಮೇಲಿನ ಹಂತದ ಚುನಾಯಿತ ರಾಜಕಾರಣಿಗಳಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಮಾತ್ರ ಉತ್ತರದಾಯಿತ್ವವನ್ನು ಹೊಂದಿದ್ದರು. ಈ ಹಂತದಲ್ಲಿಯೂ ಕೂಡ ಅಧಿಕಾರಗಳು ಸರಿಯಾದ ದಿಕ್ಕಿನಲ್ಲಿ ತಮ್ಮ ಅಧಿಕಾರವನ್ನು ಬಳಸುತ್ತಿರಲಿಲ್ಲ. ಅಂದರೆ, ಕೇಂದ್ರ ಮಟ್ಟದಲ್ಲಿಯೂ ಉತ್ತರದಾಯಿತ್ವದ ಕೊರತೆ ಇತ್ತು.
ವಿಶ್ಲೇಷಣೆ
ಮೇಲೆ ತಿಳಿಸಿದ ಎಲ್ಲ ವಿವರಗಳು ಮಾಹಿತಿಯಾಗಿ ಮಾತ್ರ ಮಹತ್ತ್ವವನ್ನು ಪಡೆದುಕೊಳ್ಳುತ್ತವೆ ಮತ್ತು ಪಂಚಾಯತಿ ವ್ಯವಸ್ಥೆಯ ಕುರಿತು ಅಧ್ಯಯನ ಮಾಡುವವರಿಗೆ ಅದ್ಭುತವಾದ ಆಕರಗಳಾಗುತ್ತವೆ. ಆದರೆ ಈ ವರದಿಯ ಕೊನೆಯಲ್ಲಿ ಪಂಚಾಯತಿಯ ಸಮಸ್ಯೆಗಳ ವಿಶ್ಲೇಷಣೆಯ ಸಂದರ್ಭದಲ್ಲಿ ಧರ್ಮಪಾಲ್ರವರು ಓದುಗರಿಗೆ ನೀಡುವ ಒಳನೋಟಗಳು ನನಗೆ ಅತ್ಯಂತ ಮಹತ್ತ್ವದೆನಿಸುತ್ತವೆ. ಈ ನಿಟ್ಟಿನಲ್ಲಿ ಧರ್ಮಪಾಲ್ ಅವರ ಅಭಿಪ್ರಾಯಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ಪಟ್ಟಿ ಮಾಡಬಹುದು:
೧. ಪಂಚಾಯತ್ ವ್ಯವಸ್ಥೆಯು ಅತ್ಯಂತ ಪ್ರಾಚೀನವಾಗಿದ್ದರೂ ಕೂಡ ಅದು ಭಾರತದ ಬಹುಭಾಗಗಳಲ್ಲಿ ಇತ್ತೀಚಿನವರೆಗೂ ಅಂದರೆ ೧೮೦೦ರವರೆಗೂ ಕ್ರಿಯಾಶೀಲವಾಗಿತ್ತು (ಇದಕ್ಕೆ ಪೂರಕವಾಗಿ ಧರ್ಮಪಾಲ್ರವರು ೧೭೫೮ರಲ್ಲಿ ಪ್ರಕಟವಾದ ಈಸ್ಟ್ ಇಂಡಿಯ ಕಂಪೆನಿಯ ನೆನಪಿನ ಟಿಪ್ಪಣಿಯನ್ನು ಉಲ್ಲೇಖಿಸುತ್ತಾರೆ).
೨. ಈ ವ್ಯವಸ್ಥೆಯು ರೂಢಿ ಸಂಪ್ರದಾಯಗಳನ್ನು ಆಧರಿಸಿದ್ದವು ಮತ್ತು (ಹಾಗಾಗಿ) ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದ್ದವು.
೩. ಆಂತರಿಕವಾಗಿ ಅವು ಧರ್ಮದ ಪರಮಾಧಿಕಾರಕ್ಕೆ ಒಳಗಾಗಿದ್ದರೆ ಬಾಹ್ಯವಾಗಿ ವಿಸ್ತಾರವಾದ ಪ್ರದೇಶವನ್ನು ಆಳುತ್ತಿದ್ದ ಶಕ್ತಿಗಳ ಪ್ರಭಾವಕ್ಕೊಳಗಾಗಿದ್ದವು.
೪. ರಾಜಕೀಯ ಅಧಿಕಾರವು ಧರ್ಮಕ್ಕೆ ಪ್ರತಿಕೂಲವಾಗಿಲ್ಲದೆ ಇರುವವರೆಗೆ ಈ ಸಂಸ್ಥೆಗಳು ಮತ್ತು ಆ ಪ್ರದೇಶದಲ್ಲಿದ್ದ ಜನರು ಹೆಚ್ಚು ಮುಕ್ತ ಜೀವನವನ್ನು ನಡೆಸುತ್ತಿದ್ದರು ಮತ್ತು ಆರ್ಥಿಕವಾಗಿ ಸಬಲರಾಗಿದ್ದರು, ಮತ್ತು ಹೆಚ್ಚುಕಡಮೆ ಸಾಮರಸ್ಯದ ಬದುಕು ಸಾಗಿಸುತ್ತಿದ್ದರು. ಆದರೆ, ಬಾಹ್ಯವಾದ ರಾಜಕೀಯ ಅಧಿಕಾರವು ತನ್ನ ಅಭಿಪ್ರಾಯಗಳನ್ನು ಹೇರಲು ಪ್ರಾರಂಭಿಸಲು ತೊಡಗಿದಾಗ ಈ ಸಂಸ್ಥೆಗಳು ಹೆಚ್ಚು ಅನಮ್ಯವಾಗತೊಡಗಿದವು ಮತ್ತು ಅಲ್ಲಿನ ಜನರು ಮುಕ್ತವಾದ ಜೀವನ ನಡೆಸಲು ದುಸ್ತರವಾಗತೊಡಗಿತು. ಹಾಗಿದ್ದೂ ಕೂಡ ಈ ಸಂಸ್ಥೆಗಳು ತಮ್ಮ ಕ್ರಿಯಾಶೀಲತೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳದೆ ಮುಂದುವರಿದವು.
೫. ೧೮ನೇ ಶತಮಾನದಲ್ಲಿ ಬಳಕೆಯಲ್ಲಿದ್ದ ರೂಢಿ ಸಂಪ್ರದಾಯಗಳು ಮತ್ತು ಧರ್ಮಕ್ಕೂ ೧೯ನೆ ಶತಮಾನದ ಉತ್ತರಾರ್ಧ ಮತ್ತು ೨೦ನೇ ಶತಮಾನದ ಅವುಗಳ ಬಳಕೆಗೂ ನಡುವೆ ಸಾಕಷ್ಟು ವ್ಯತ್ಯಾಸವಿತ್ತು. ಉದಾಹರಣೆಗೆ, ಆಗ ಇದ್ದ ಜಮೀನು ಹಾಗೂ ಉತ್ಪಾದನೆಯ ಮೇಲೆ ನಿಜವಾದ ಸಾಗುವಳಿದಾರನ ಹಕ್ಕು ನಂತರದ ಅವಧಿ ಮತ್ತು ಇಂದಿನ ಕಾಲಮಾನಕ್ಕೆ ಹೋಲಿಸಿದರೂ ಕೂಡ ಹೆಚ್ಚೇ ಇತ್ತು. ಅದೇ ರೀತಿ, ಕೆಳಗಿನ ಜಾತಿಯವರು ಎಂದು ಗುರುತಿಸಲಾಗಿರುವ ಜನರ ಮೇಲಿನ ದಬ್ಬಾಳಿಕೆ ಮತ್ತು ಆರ್ಥಿಕ ಶೋಷಣೆಯು ಅಷ್ಟೇನೂ ವ್ಯಾಪಕವಾಗಿರಲಿಲ್ಲ. ಇದು ಹೆಚ್ಚು ವ್ಯಾಪಕವಾದದ್ದು ೧೯ನೇ ಶತಮಾನದ ಉತ್ತರಾರ್ಧದಲ್ಲಿ.
೬. ೧೮ನೇ ಶತಮಾನದ ಉತ್ತರಾರ್ಧ ಮತ್ತು ೧೯ನೇ ಶತಮಾನದ ಮೊದಲ ಭಾಗದಲ್ಲಿ ಸ್ಥಳೀಯ ಸಂಸ್ಥೆಗಳ ಬಗ್ಗೆ ಬ್ರಿಟಿಷ್ ಸಂಗ್ರಹಾಲಯದಲ್ಲಿ ದೊರಕಿದ ಮಾಹಿತಿಗಳನ್ನು ದೋಷರಹಿತವೆಂದು ಸ್ವೀಕರಿಸಲು ಸಾಧ್ಯವಿಲ್ಲ. ಏಕೆಂದರೆ ಭಾರತೀಯ ಪರಿಕಲ್ಪನೆಗಳನ್ನು ಹಾಗೂ ನಂಬಿಕೆಗಳನ್ನು ಅವು ಪರಿಗಣಿಸುವುದಿಲ್ಲ, ಇಲ್ಲವೆ ಸಂಪೂರ್ಣವಾಗಿ ಬದಲಾಯಿಸುತ್ತವೆ. ಆಧುನಿಕ ಸಮಾಜವಿಜ್ಞಾನದ ಜ್ಞಾನವೇ ಇಲ್ಲದ ಆಡಳಿತಾಧಿಕಾರಿಗಳ ಬರಹಗಳ ರೂಪದಲ್ಲಿರುವ ಅವಲೋಕನವನ್ನು ನಾವು ಹೇಗೆ ಒಪ್ಪಿಕೊಳ್ಳುವುದು?
೭. ಪಂಡಿತರುಗಳು ಹಾಗೂ ಬುದ್ಧಿಜೀವಿಗಳಲ್ಲಿ ಪ್ರಚಲಿತದಲ್ಲಿರುವ ನಂಬಿಕೆಗಳು, ಪರಿಕಲ್ಪನೆಗಳ ಕಥನಗಳು ಇಂತಹ ದಾಖಲೆಗಳ ಆಯ್ದ ಭಾಗಗಳನ್ನು ಮಾತ್ರ ಆಧರಿಸಿವೆ. ೧೮ ಹಾಗೂ ೧೯ನೇ ಶತಮಾನದ ಭಾರತೀಯ ಸಮಾಜದ ಬಗ್ಗೆ ಪೂರ್ವಾರ್ಧದಲ್ಲಿ ಸಿಗುವ ಮಾಹಿತಿಗಳಿಗೆ ಲಭ್ಯವಿರುವ ಮತ್ತೊಂದು ದಾಖಲೆಯೆಂದರೆ ಬ್ರಾಹ್ಮಣರು ರಕ್ಷಿಸಿಕೊಂಡು ಬಂದ ಗ್ರಂಥಗಳು. ಆದರೆ ಈ ಎಲ್ಲ ಬ್ರಾಹ್ಮಣ ಗ್ರಂಥಗಳು ಸಿದ್ಧಾಂತಗಳು, ಐಡಿಯಾಲಜಿಗಳು ಇಲ್ಲವೆ ಕೇವಲ ವ್ಯಾಖ್ಯಾನಗಳು. ಇತರ ಎಲ್ಲ ಸಿದ್ಧಾಂತಗಳು ಹಾಗೂ ಐಡಿಯಾಲಜಿಗಳಂತೆ ಇವೂ ಕೂಡ ಕೇವಲ ಪಾಲಿಸಲು ಅರ್ಹವಾದ ಆದರ್ಶಗಳನ್ನು ನಮ್ಮ ಮುಂದಿಡುತ್ತವೆ. ಅವು ವಾಸ್ತವದಲ್ಲಿ ಆಚರಣೆಯಲ್ಲಿದ್ದವು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.
ಬ್ರಿಟಿಷ್ ಪ್ರಾಬಲ್ಯ
೮. ೧೭೫೦ರಿಂದ ೧೮೪೦ರ ಅವಧಿಯಲ್ಲಿ ಬಹಳಷ್ಟು ಅಡೆತಡೆಗಳು ಹಾಗೂ ಆಡಳಿತದ ಕುಸಿತದಿಂದಾಗಿ ಸಾಕಷ್ಟು ಪ್ರದೇಶಗಳಲ್ಲಿ ಪಂಚಾಯತಿಗಳು ಕಣ್ಮರೆಯಾದವು. ಹೀಗಾಗಲು ಮುಖ್ಯವಾಗಿ ಎರಡು ಕಾರಣಗಳಿವೆ: ಒಂದು, ಗ್ರಾಮದ ಎಲ್ಲ ಆದಾಯವನ್ನು ಮತ್ತು ಭೂ ದಾಖಲೆ ನಿರ್ವಹಿಸುವವನು ಮತ್ತು ಗ್ರಾಮದ ಪೊಲೀಸ್ ಸಮೇತ ಭೂ ದಾಖಲೆಗಳನ್ನು ಬ್ರಿಟಿಷ್ ಅಧಿಕಾರಿಗಳು (ಅವರ ನೇರ ಆಡಳಿತವಿದ್ದ ಕಡೆ) ಮತ್ತು ಅವರ ನೆರವಿನಿಂದ ಅಧಿಕಾರಕ್ಕೆ ಬಂದ ರಾಜರುಗಳು ವಶಪಡಿಸಿಕೊಂಡಿದ್ದು; ಎರಡು, ಭಾರತದ ಬಹಳಷ್ಟು ಪ್ರಾಂತಗಳಲ್ಲಿ ಮತ್ತು ಮದ್ರಾಸ್ ಪ್ರಾಂತದ ಆಡಳಿತಕ್ಕೊಳಗಾಗಿದ್ದ ಎಲ್ಲ ಕಡೆಗಳಲ್ಲಿ ಭೂ-ಕಂದಾಯವನ್ನು ಒಟ್ಟು ಕೃಷಿ ಉತ್ಪಾದನೆಯ ಶೇಕಡ ೫೦ರಷ್ಟು ನಿಗದಿ ಮಾಡಿದ್ದು. ಕೆಲವು ಬ್ರಿಟಿಷ್ ಸಂಶೋಧಕರ ಪ್ರಕಾರ ಭೂ-ಕಂದಾಯ ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಪ್ರಾರಂಭವಾಯಿತು. ಅದೇನೇ ಇದ್ದರೂ ಅಂತಹ ಭೂ-ಕಂದಾಯ ಪದ್ಧತಿಯು ೧೮ನೇ ಶತಮಾನದ ಮಧ್ಯಭಾಗದವರೆಗೆ ಅಸ್ತಿತ್ವದಲ್ಲೇ ಇರಲಿಲ್ಲ. ಆದರೆ ಇಂತಹ ಪದ್ಧತಿಗೆ ಕಾನೂನಿನ ರೂಪ ಕೊಟ್ಟಿದ್ದು ಮಾತ್ರ ಬ್ರಿಟಿಷರು.
೯. ಇಂತಹ ತೆರಿಗೆ ಪದ್ಧತಿಯ ಜೊತೆಗೆ ಪರಂಪರಾನುಗತವಾಗಿ ಕ್ರಿಯಾಶೀಲವಾಗಿದ್ದ ಸ್ಥಳಿಯ ಸಂಸ್ಥೆಗಳ ಮೇಲೆ ಬಾಹ್ಯ ರಾಜಕೀಯ ಅಧಿಕಾರದ ಹೇರಿಕೆ, ಕೆಲವೊಮ್ಮೆ ತೆರಿಗೆಯನ್ನು ಶೇಕಡ ೫೦ ರಿಂದ ಶೇ. ೭೦ ಮತ್ತು ೮೦ಕ್ಕೆ ಏರಿಸಿದ್ದು, ಕಾಲದಿಂದ ಕಾಲಕ್ಕೆ ಎದುರಾದ ಬರಗಾಲ – ಇವೆಲ್ಲವೂ ಭೂಮಾಲೀಕರು ಭೂಮಿಯನ್ನು ತೊರೆದು ವಲಸೆಹೋಗುವ ಪರಿಸ್ಥಿತಿಯನ್ನು ನಿರ್ಮಿಸಿತು. ಕೃಷಿಯು ವಿನಾಶದ ಅಂಚು ತಲಪಿತು. ಇಂತಹ ಪರಿಸ್ಥಿತಿಯು ಮದ್ರಾಸ್ ಪ್ರಾಂತದಲ್ಲಿ ಒಂದು ಶತಮಾನ ಮತ್ತು ಅದಕ್ಕೂ ಹೆಚ್ಚು ಕಾಲ ಮುಂದುವರಿಯಿತು.
೧೦. ಇಂತಹ ವಿನಾಶಕರ ಬೆಳವಣಿಗೆಯ ಪರಿಣಾಮವಾಗಿ ಪ್ರಾಚೀನ ಗ್ರಾಮೀಣ ವ್ಯವಸ್ಥೆಯು ಕಣ್ಮರೆಯಾಯಿತು. ಹಾಗಿದ್ದೂ, ಗ್ರಾಮಗಳಲ್ಲಿದ್ದ ಸಮುದಾಯಗಳು ಇಪ್ಪತ್ತನೇ ಶತಮಾನದ ಪ್ರಾರಂಭದವರೆಗೂ ಮುಂದುವರಿದುಕೊಂಡು ಬಂದವು. ಆದರೆ ಇವು ಕೇವಲ ಸಮುದಾಯದ ರೂಪವನ್ನು ಉಳಿಸಿಕೊಂಡಿದ್ದವೇ ಹೊರತು ಪರಂಪರಾಗತವಾದ ರೀತಿಯಲ್ಲಿ ಕ್ರಿಯಾಶೀಲವಾಗುವ ಸತ್ತ್ವವನ್ನು ಕಳೆದುಕೊಂಡಿದ್ದವು. ಅವೂ ಸಹ ೧೯೪೦ರ ವೇಳೆಗೆ ಕಣ್ಮರೆಯಾದವು. ತನ್ನದೇ ಆದ ಇತಿಮಿತಿಯಲ್ಲಿ ಕ್ರಿಯಾಶೀಲವಾಗಿರುವ ಸಮುದಾಯದ ಪರಿಕಲ್ಪನೆಯು ‘ಮಹಿಮ’ ಗುಂಪುಗಳ ಹೆಸರಿನಲ್ಲಿ ರಾಮ್ನಾಡ್ ಮತ್ತು ಮಧುರೈಯ ಕೆಲ ಪ್ರದೇಶಗಳಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವುದು ಕಂಡುಬರುತ್ತದೆ.
೧೧. ಭಾರತದಲ್ಲಿ ಈಗ ಪ್ರಚಲಿತದಲ್ಲಿರುವ ಸರ್ಕಾರದ ರಚನೆಯು ೧೮೦ ವರ್ಷಗಳ ಹಿಂದೆ ಮದ್ರಾಸ್, ಬಂಗಾಳ ಮತ್ತು ಮುಂಬೈ ಪ್ರಾಂತಗಳಲ್ಲಿ ಅಸ್ತಿತ್ವವನ್ನು ಪಡೆದುಕೊಂಡವು. ಕಾಲ ಕಳೆದಂತೆ ಆಡಳಿತದ ರಚನೆಯು ಸರ್ಕಾರದ ಆದೇಶ ಹಾಗೂ ಲಿಖಿತ ಸೂಚನೆಗಳ ಮೂಲಕ ಸೂಕ್ಷ್ಮವಾಗಿ ತನ್ನ ಸ್ವರೂಪವನ್ನು ಕಂಡುಕೊಳ್ಳತೊಡಗಿತು. ಮೂಲಭೂತವಾದ ಕೆಲವು ತತ್ತ್ವಗಳು ಮತ್ತು ಅದರ ಪರಿಣಾಮವಾಗಿ ಬಂದ ಸಾಂಸ್ಥಿಕ ರಚನೆ ಮತ್ತು ಪ್ರಕ್ರಿಯೆಗಳು ೧೮೪೦ ಅಥವಾ ೧೮೫೦ರ ಹೊತ್ತಿಗೆ ಸ್ಪಷ್ಟ ರೂಪವನ್ನು ಪಡೆದುಕೊಳ್ಳತೊಡಗಿದವು. ಇಂದಿಗೂ ಮುಂದುವರಿದುಕೊಂಡು ಬಂದಿರುವ ಜಿಲ್ಲಾ ಕಲೆಕ್ಟರ್, ಗ್ರಾಮದ ಮುನ್ಷೀಫ್ ಅಥವಾ ಕರ್ಣಮ್ ಅವರು ನಿರ್ವಹಿಸಬೇಕಾದ ಕಾರ್ಯಗಳನ್ನು ಸೂಚಿಸುವ ನಿಬಂಧನೆಗಳು ಮತ್ತು ಸಚಿವಾಲಯ ವ್ಯವಸ್ಥೆಯ ರೂಪರೇಷೆಗಳು ೧೮೦೦-೧೮೨೦ರ ಅವಧಿಯಲ್ಲಿ ಜಾರಿಗೆ ಬಂದ ವಿಧೇಯಕಗಳ ಮುಂದುವರಿಕೆಯೇ ಆಗಿವೆ.
ವಿಕೃತೀಕರಣ
೧೨. ಪ್ರಾರಂಭದ ಹಂತದಲ್ಲಿ ಬ್ರಿಟಿಷರು ಆಡಳಿತದಲ್ಲಿ ಸುಧಾರಣೆಯನ್ನು ತರಲು ಒಂದು ಮುಖ್ಯವಾದ ಉದ್ದೇಶವಿತ್ತು. ಅದೇನೆಂದರೆ, ಹೆಚ್ಚುಕಡಮೆ ಶಾಂತಿಯುತವಾದ ಮತ್ತು ಗಲಭೆಗಳಿಲ್ಲದ ಕಾಲದಲ್ಲಿ ಪರಕೀಯ ರಾಷ್ಟ್ರವು ತನ್ನ ಆಳ್ವಿಕೆಯನ್ನು ಇಲ್ಲಿ ಸ್ಥಾಪಿಸುವುದು ಮತ್ತು ಮೇಲ್ನೋಟಕ್ಕೆ ಗೋಚರವಾಗುವಂತಹ ರೀತಿಯಲ್ಲಿ ಎಲ್ಲರಿಗೂ ನ್ಯಾಯ ಸಲ್ಲಿಸುವಂತೆ ತೋರಿಸಿಕೊಳ್ಳುವುದು. ಆದರೆ, ಭಾರತೀಯ ಸಮಾಜದ ಆಂತರಿಕ ಸಂಬಂಧಗಳನ್ನು ಹಾಗೂ ಅದರ ರಚನೆಯನ್ನು ಅರ್ಥ ಮಾಡಿಕೊಳ್ಳಲು ಅಸಮರ್ಥರಾದ ಬ್ರಿಟಿಷರು ಭಾರತವು ತಮ್ಮ ಹಿಡಿತಕ್ಕೆ ಒಳಗಾದ ನಂತರ ಅದರ ಮೇಲೆ ತಮ್ಮ ಸಂಪೂರ್ಣ ಹಿಡಿತವನ್ನು ಸಾಧಿಸಿ ಅದನ್ನು ಶ್ರೇಣೀಕರಣಗೊಳಿಸಿ, ಕಾನೂನಿನ ಚೌಕಟ್ಟನ್ನು ನೀಡಿ ಅದರ ಮೂಲಸ್ವರೂಪವನ್ನೇ ಧ್ವಂಸ ಮಾಡಿ ಸುಮಾರು ಒಂದು ಶತಮಾನದ ಕಾಲ ತಮ್ಮ ಆಡಳಿತಕ್ಕೆ ಒಳಪಡಿಸಿದರು.
೧೩. ೧೯೦೦ರ ನಂತರ ಆದ ಬದಲಾವಣೆಯೆಂದರೆ ಬ್ರಿಟಿಷ್ ಅಧಿಕಾರಿಗಳ ಸ್ಥಾನಕ್ಕೆ ಭಾರತೀಯ ಅಧಿಕಾರಿಗಳು ನೇಮಕವಾದದ್ದು. ಆದರೆ ಹುದ್ದೆಗಳನ್ನು ಪಡೆಯುವ ಹೊತ್ತಿಗಾಗಲೇ ವಿದ್ಯಾವಂತ ಭಾರತೀಯರು ಉಳಿದವರಿಗಿಂತ ಹೆಚ್ಚಾಗಿ ಸ್ಥಳೀಯ ಸಮಾಜಕ್ಕೆ ಪರಕೀಯರಾಗಿಬಿಟ್ಟಿರುತ್ತಿದ್ದರು. ಅತಿ ಎಚ್ಚರಿಕೆಯಿಂದ ಆಡಳಿತದಲ್ಲಿರುವ ‘ದೋಷಗಳನ್ನು’ ಸರಿಪಡಿಸಲು ಪ್ರಯತ್ನಿಸಿ ಆಡಳಿತದಲ್ಲಿ ಮತ್ತಷ್ಟು ಹೆಚ್ಚಿನ ನಿಯಂತ್ರಣವನ್ನು ತರುತ್ತಿದ್ದರು.
೧೪. ಪಂಚಾಯತ್ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಬ್ರಿಟಿಷ್ ಆಳ್ವಿಕೆಯ ಕೆಲವು ಪ್ರಯತ್ನಗಳು ಧನಾತ್ಮಕವಾಗಿಯೆ ಇದ್ದವು. ಉದಾಹರಣೆಗೆ ೧೯೦೯ರಲ್ಲಿ ನೇಮಕವಾದ ವಿಕೇಂದ್ರೀಕರಣ ಆಯೋಗ ಮತ್ತು ಆಗಿನ ಭಾರತದ ಸರ್ಕಾರವು ಸ್ವತಂತ್ರ ಭಾರತದ ಆಳ್ವಿಕೆಗಿಂತ ಉತ್ತಮವಾದ ದೂರದೃಷ್ಟಿ ಮತ್ತು ಎಚ್ಚರಿಕೆಯನ್ನು ಪ್ರಕಟಿಸಿದ್ದವು. ಆದರೆ ಭಾರತದ ಒಂದು ವರ್ಗದ ಜನರು ಬ್ರಿಟಿಷರು ಮಾಡಿದ್ದೆಲ್ಲದರಲ್ಲಿಯೂ ಕೆಡುಕನ್ನು ಕಾಣುತ್ತಿದ್ದುದರಿಂದ ಅವರೊಂದಿಗೆ ಅವರು ಹುಟ್ಟುಹಾಕಿದ ಎಲ್ಲ ಸಂಸ್ಥೆಗಳೂ ಕಣ್ಮರೆಯಾಗಬೇಕೆಂಬ ಇಚ್ಛೆಯನ್ನು ಹೊಂದಿದ್ದವು. ಒಟ್ಟಾರೆಯಾಗಿ ಸ್ವಾತಂತ್ರಾö್ಯನಂತರದ ಭಾರತವು ಸ್ಥಳೀಯ ಸಂಸ್ಥೆಗಳಿಗೆ ಜೀವ ನೀಡುವ ಕಾರ್ಯದಲ್ಲಿ ಅಗತ್ಯವಾದ ಇಚ್ಚಾಶಕ್ತಿಯನ್ನು ಹೊಂದಿರಲಿಲ್ಲ ಎನ್ನುವುದಂತೂ ಸ್ಪಷ್ಟ.
ಜಡತೆ
೧೫. ಪಂಚಾಯತ್ ರಚನೆಯ ಇಂದಿನ ವೈಫಲ್ಯಗಳಿಗೆ ಅದರಲ್ಲಿ ಕೆಲಸ ಮಾಡುತ್ತಿರುವ ಜನರು ಕಾರಣರಾಗಿರದೆ ಅದನ್ನು ವ್ಯವಸ್ಥೆಗೊಳಿಸಿರುವ ವಿಧಾನವೇ ಮುಖ್ಯ ಕಾರಣವಾಗಿದೆ. ಸ್ಥಳೀಯ ಸಂಸ್ಥೆಗಳನ್ನು ಸರಿಯಾದ ರೀತಿಯಲ್ಲಿ ವ್ಯವಸ್ಥಿತಗೊಳಿಸಿದರೆ ಅತ್ಯಂತ ಸಾಧಾರಣ ಜನರೂ ಕೂಡ ಅವನ್ನು ಉತ್ತಮವಾಗಿ ನಡೆಸಬಲ್ಲರು. ಈಗಿನ ರಚನೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಅವರಿಗೆ ಏನು ಹೇಳಲಾಗಿದೆಯೊ ಮತ್ತು ಏನನ್ನು ಮಾಡಲು ಅವಕಾಶವನ್ನು ಕಲ್ಪಿಸಿಕೊಡುತ್ತದೆಯೊ ಅಷ್ಟನ್ನು ಮಾತ್ರ ಮಾಡುತ್ತಾರೆ. ಸಾಮಾನ್ಯವಾಗಿ ಆಡಳಿತ ವ್ಯವಸ್ಥೆಯು ಯಥಾಸ್ಥಿತಿಯನ್ನು ಕಾಪಾಡಿಕೊಂಡು ಬರುವುದರಲ್ಲಷ್ಟೆ ಆಸಕ್ತಿಯನ್ನು ಹೊಂದಿರುತ್ತದೆ.
೧೬. ಯಥಾಸ್ಥಿತಿಯನ್ನು ಕಾಪಾಡಿಕೊಂಡು ಬರುವುದು ಮತ್ತು ದೇಶದ ರಕ್ಷಣೆ – ಇವಷ್ಟೆ ರಚನೆಯ ಮುಖ್ಯ ಉದ್ದೇಶವಾಗಿದ್ದಿದ್ದರೆ ಅದು ಹಾಗೆಯೆ ನಿರಂತರವಾಗಿ ಮುಂದುವರಿಯುತ್ತಿತ್ತೇನೊ. ಆದರೆ ರಾಷ್ಟ್ರಕ್ಕೆ ಇತರ ಆಕಾಂಕ್ಷೆಗಳೂ ಇರುತ್ತವೆ. ಅಂತಹ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸೂಕ್ತವಾದ ಸಾಧನಸಲಕರಣೆಗಳ ಅಗತ್ಯವಿರುತ್ತದೆ. ಅಂತಹ ಸಲಕರಣೆಗಳನ್ನು ಸೃಷ್ಟಿಸಲು ಸ್ವತಂತ್ರ ಭಾರತವು ವಿಫಲವಾಯಿತು. ಹಳೆಯ ಸಲಕರಣೆಗಳು ಮತ್ತು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಸೃಷ್ಟಿಯಾಗಿದ್ದ ಹೊಸ ಪಡೆಗೆ ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಾಲಾವಕಾಶವನ್ನೆ ನೀಡಲಿಲ್ಲ. ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಮತ್ತು ಹೊಸ ಸವಾಲುಗಳನ್ನು ಎದುರಿಸಲು ಅಂತಹ ವ್ಯವಸ್ಥೆಗೆ ಮತ್ತಷ್ಟು ಕಾಲಾವಕಾಶದ ಅಗತ್ಯವಿತ್ತು. ಹಳೆಯ ಸಲಕರಣೆಗಳು, ಹೊಸ ಪಡೆ ಮತ್ತು ಜನರ ಪ್ರತಿನಿಧಗಳು ಇವರೆಲ್ಲರ ಕಲಬೆರಕೆಯಾದ ಪಂಚಾಯತ್ ವ್ಯವಸ್ಥೆಯನ್ನು ೧೫೦ ವರ್ಷಗಳ ಬ್ರಿಟಿಷರು ಹುಟ್ಟುಹಾಕಿದ ಆಡಳಿತದ ಮೇಲ್ರಚನೆಯ ಅಧೀನಕ್ಕೊಳಪಡಿಸಲಾಯಿತು. ಮತ್ತೂ ಒಂದು ದುರಂತವೆಂದರೆ ಹಳೆಯ ಸಲಕರಣೆಗಳನ್ನು ಅವು ಆಧುನಿಕ ಪ್ರಜಾಪ್ರಭುತ್ವಕ್ಕೆ ಅಡ್ಡಿ ಎನ್ನುವಂತೆ ಬಿಂಬಿಸಲಾಯಿತು.
೧೭. ಸ್ಥಳೀಯ ಸಂಸ್ಥೆಗಳು ನಿಜವಾದ ಅರ್ಥದಲ್ಲಿ ಸ್ವಯಮಾಡಳಿತ ಸಂಸ್ಥೆಗಳಾಗಬೇಕಿದ್ದರೆ ತಾವು ಕಾರ್ಯನಿರ್ವಹಿಸುತ್ತಿರುವ ವಲಯದೊಳಗೆ ಮಾಡುವ ಎಲ್ಲ ಕೆಲಸಗಳಿಗೆ ಜನರು ನೇರವಾಗಿ ಹೊಣೆಗಾರಿಕೆಯನ್ನು ಹೊಂದಿರಬೇಕಾಗುತ್ತದೆ. ಯಾವುದೇ ಹಂತದಲ್ಲಾಗಲಿ ಒಂದು ಸ್ವಯಮಾಡಳಿತ ಸಂಸ್ಥೆಯು ಹೀಗಲ್ಲದೆ ಬೇರೆ ಯಾವ ರೀತಿಯಿಂದಲೂ ಕಾರ್ಯಶೀಲವಾಗಿರಲು ಸಾಧ್ಯವಿಲ್ಲ. ಬೇರೆ ಯಾವುದೇ ಮಾರ್ಗವನ್ನು ಅನುಸರಿಸಿದಲ್ಲಿ ಅವು ಒಂದೋ ಸಂಸ್ಥೆಗಳನ್ನು ಬಾಹ್ಯವಾದ ಶಕ್ತಿಗಳ ನಿಯೋಗಗಳ ಮಟ್ಟಕ್ಕೆ ಇಳಿಸಿದಂತಾಗುತ್ತದೆ ಇಲ್ಲವೆ ಹೊಣೆಗೇಡಿ ಸಂಸ್ಥೆಗಳಾಗಿ ಮಾರ್ಪಡುತ್ತವೆ. ಜನರಿಗೆ ಉತ್ತರದಾಯಿತ್ವ ಹೊಂದಿರದ ಸ್ಥಳೀಯ ಸಂಸ್ಥೆ ಅರ್ಥಹೀನವೆನಿಸಿಕೊಳ್ಳುತ್ತದೆ.
ನಿಷ್ಕ್ರಿಯತೆಯ ಬೀಜ
೧೮. ಸ್ಥಳೀಯ ಸಂಸ್ಥೆಗಳ ಇಂದಿನ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣವೆಂದರೆ: ಒಂದು, ಅವುಗಳ ಮೂಲಸ್ವರೂಪವನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿರುವುದು; ಎರಡು, ಪರಕೀಯ ನುಡಿಗಟ್ಟನ್ನು (ಈಡಿಯಮ್) ಅವುಗಳ ಮೇಲೆ ಹೇರಿರುವುದು. ಇದರ ಪರಿಣಾಮವಾಗಿ ಅವು ನಿಷ್ಕ್ರಿಯಗೊಂಡಿವೆ ಇಲ್ಲವೆ ನಗೆಪಾಟಲಿಗೆ ಈಡಾಗಿವೆ. ತಮ್ಮದೇ ಸಮಾಜದ ಮೂಲದ ನುಡಿಗಟ್ಟಿನಡಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾದಲ್ಲಿ ಮಾತ್ರ ಅವು ಅರ್ಥಪೂರ್ಣವೆನಿಸಿಕೊಳ್ಳುತ್ತವೆ. ಇಂದಿನ ಪರಿಸ್ಥಿತಿಯಲ್ಲಿ ಜನರು ತಮ್ಮ ವಲಯದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ತಮಗೆ ಉತ್ತರದಾಯಿತ್ವ ಹೊಂದಿರುವಂತೆ ಮಾಡಲಾಗುತ್ತಿಲ್ಲ. ಸದ್ಯದ ಕಾಯಿದೆಯಲ್ಲಿ ಹಾಗೆ ಮಾಡಲು ಯಾವುದೇ ಅವಕಾಶವಿಲ್ಲದಿರುವುದು ಒಂದು ಕಾರಣವಾದರೆ, ಅವುಗಳ ಕಾರ್ಯನಿರ್ವಹಣೆಯ ಸ್ವರೂಪವನ್ನೆ ಅವರಿಗೆ ಗ್ರಹಿಸಲಾಗುತ್ತಿಲ್ಲ. ಈ ಸಂಸ್ಥೆಗಳು ಮಾಡುತ್ತಿರುವ ಎಲ್ಲ ಕೆಲಸಗಳು ಅವರಿಗೆ ಒಗಟಿನಂತೆ ಕಾಣುತ್ತವೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ಜನರಿಗೆ ಹೊಣೆಗಾರರನ್ನಾಗಿ ಮಾಡುವುದು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ.
೧೯. ಸ್ಥಳೀಯ ಸ್ವಯಮಾಡಳಿತದಲ್ಲಿ ತೊಡಗುವವರಿಗೆ ತರಬೇತಿಯನ್ನು ನೀಡಲಾಗುತ್ತದೆ ನಿಜ. ಆದರೆ ಅಂತಹ ತರಬೇತಿಗಳು ಸ್ವಯಮಾಡಳಿತಕ್ಕೆ ಅಗತ್ಯವಾದ ಮನೋಧರ್ಮವನ್ನು ಅವರಲ್ಲಿ ತುಂಬುವ ಬದಲು ಅವರನ್ನು ಮತ್ತಷ್ಟು ಬಲಹೀನರನ್ನಾಗಿ ಮಾಡುತ್ತಿವೆ. ಯಾವುದೇ ಸಮುದಾಯದ ಅಥವಾ ಸಮಾಜದ ಚಟುವಟಿಕೆಗಳಲ್ಲಿ ಜನರು ಮುಕ್ತವಾಗಿ ಭಾಗವಹಿಸದಂತೆ ಅವು ತಡೆಯುತ್ತಿವೆ.
* * *
ಉಪಸಂಹಾರ
ಮದ್ರಾಸ್ ಪಂಚಾಯತ್ರಾಜ್ ವ್ಯವಸ್ಥೆಯ ಕುರಿತು ಧರ್ಮಪಾಲ್ರವರ ವರದಿಯು ಮದ್ರಾಸ್ ಪ್ರಾಂತದಲ್ಲಿ ಬ್ರಿಟಿಷ್ ಆಡಳಿತದ ಕಾಲದಿಂದ ಹಿಡಿದು ೧೯೬೫ರವರೆಗಿನ ಪಂಚಾಯತ್ರಾಜ್ ವ್ಯವಸ್ಥೆಯ ಚಿತ್ರಣವನ್ನು ಆಮೂಲಾಗ್ರವಾಗಿ ನಮ್ಮ ಮುಂದಿಡುತ್ತದೆ. ವರದಿಯು ಎರಡು ಅಂಶಗಳ ಮೇಲೆ ಬೆಳಕು ಚೆಲ್ಲುವ ಮೂಲಕ ನಮ್ಮ ಗಮನಸೆಳೆಯುತ್ತದೆ. ಮೊದಲನೆಯದಾಗಿ, ಅತ್ಯಂತ ಕ್ರಿಯಾಶೀಲವಾದ ಮತ್ತು ಅರ್ಥಪೂರ್ಣವಾದ ಸ್ವಯಮಾಡಳಿತ ವ್ಯವಸ್ಥೆಯು ಪ್ರಾಚೀನ ಕಾಲದಿಂದಲೂ ಭಾರತದ ಗ್ರಾಮೀಣ ಪ್ರದೇಶದಲ್ಲಿ ಅಸ್ತಿತ್ವದಲ್ಲಿತ್ತು. ಅಂತಹ ಸಂಸ್ಥೆಗಳು ಕಾಲಾನಂತರದಲ್ಲಿ (ಮುಖ್ಯವಾಗಿ ಮುಸ್ಲಿಮರ ಆಡಳಿತ ಕಾಲ ಮತ್ತು ನಂತರ ಬಂದ ಬ್ರಿಟಿಷರ ಆಡಳಿತದ ಸಮಯದಲ್ಲಿ) ಎಷ್ಟೆಲ್ಲ ಸಮಸ್ಯೆಗಳನ್ನು ಎದುರಿಸಿದರೂ ಕೂಡ ಅವುಗಳ ರಚನೆಯು ೧೮೦೦ರ ಅಂತ್ಯ ಭಾಗದವರೆಗೂ ಮುಂದುವರಿದುಕೊಂಡು ಬಂದವು. ಎರಡನೆಯದಾಗಿ, ಪ್ರಾಚೀನ ಸಮಾಜದ ಅಂತರ್ಗತ ಭಾಗವಾಗಿ ವಿಕಸಿತವಾದ ಸ್ಥಳೀಯ ಸಂಸ್ಥೆಗಳ ಸ್ವರೂಪವನ್ನಾಗಲಿ ಅವು ಯಾವ ಸಮಾಜದ ಉಳಿವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವೊ ಅಂತಹ ಸಮಾಜದ ಸ್ವರೂಪವನ್ನಾಗಲಿ ಅರ್ಥ ಮಾಡಿಕೊಳ್ಳಲಾಗದ ಬ್ರಿಟಿಷರು ಅಂತಹ ಸಮಾಜದ ಮೇಲೆ ತಮ್ಮ ಸಾಮ್ರಾಜ್ಯಶಾಹಿ ಆಡಳಿತ ವ್ಯವಸ್ಥೆಯ ಮೇಲ್ರಚನೆಯನ್ನು ನಿರ್ಮಿಸಿ ಸಮಾಜ ಮತ್ತು ಅದಕ್ಕೆ ಪೂರಕವಾಗಿದ್ದ ಆಡಳಿತ ವ್ಯವಸ್ಥೆ ಇವೆರಡನ್ನು ವಿಕೃತಗೊಳಿಸಿದರು. ಹಾಗೆ ಘಾಸಿಗೊಂಡ ಸಮಾಜಕ್ಕೆ ಆಗಾಗ ಮುಲಾಮುಗಳನ್ನು ಹಚ್ಚುವ ಕೆಲಸವಾಯಿತಾದರೂ ಅದರಿಂದ ಪೂರ್ಣ ಪ್ರಯೋಜನವೇನೂ ಆಗಲಿಲ್ಲ. ಇದರ ಪುನರುಜ್ಜೀವನಕ್ಕೆ ಮಹಾತ್ಮ ಗಾಂಧಿಯವರು ಮಾಡಿದ ಪ್ರಯತ್ನವು ಫಲಿಸಬಹುದೆಂದು ಹಲವರು ಆಶಿಸಿದ್ದರು. ಆದರೆ ಬ್ರಿಟಿಷರಿರಲಿ, ಸ್ವತಂತ್ರ ಭಾರತದ ಸರ್ಕಾರವೂ ಸಹ ಅವರ ನಿರೀಕ್ಷೆಯನ್ನು ಹುಸಿಗೊಳಿಸಿತು.
ಆಧುನಿಕ ರಾಜಕೀಯ ಪ್ರಭುತ್ವವು ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಮೂಲಕ ಅಭಿವೃದ್ಧಿಯನ್ನು ಸಾಧಿಸಲು ವಿಫಲವಾಗಿದೆ ಎನ್ನುವುದು ಭಾರತದಲ್ಲಿ ಪಂಚಾಯತ್ರಾಜ್ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲ ಉದ್ದೇಶವೆಂಬಂತೆ ಬಿಂಬಿಸಲಾಗುತ್ತಿದೆ. ಇದೊಂದೇ ಉದ್ದೇಶವಾಗಿದ್ದರೆ ಅಧಿಕಾರ ವಿಕೇಂದ್ರೀಕರಣ ಎನ್ನುವುದು ಅತ್ಯಂತ ಸೀಮಿತ ಅರ್ಥವನ್ನು ಪಡೆದುಕೊಳ್ಳುತ್ತದೆ ಮತ್ತು ಗ್ರಾಮ ಪಂಚಾಯತಿಗಳು ಕೇಂದ್ರ ಮತ್ತು ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲಪಿಸುವ ಕೇವಲ ಉಪಕರಣಗಳಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಹೆಚ್ಚುಕಡಮೆ ಈಗ ಆಗುತ್ತಿರುವುದೂ ಅದೇ. ಅಂದರೆ ಧರ್ಮಪಾಲ್ ಹೇಳಿದ ಹಾಗೆ ಪಂಚಾಯತ್ರಾಜ್ ಅನ್ನು ಪುನರುಜ್ಜೀವನಗೊಳಿಸುವ ಸ್ವತಂತ್ರ ಭಾರತದ ಉದ್ದೇಶವು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಲಾರ್ಡ್ ರಿಪ್ಪನ್ರವರ ಉದ್ದೇಶಕ್ಕಿಂತ ಹೆಚ್ಚು ಸಂಕುಚಿತವಾಗಿದೆ ಎಂದಾಯಿತು. ಅವರಿಗೆ ಸ್ಥಳೀಯ ಸಮುದಾಯಗಳನ್ನು ಆಡಳಿತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎನ್ನುವ ಆಕಾಂಕ್ಷೆ ಇತ್ತು. ಅದು ಸಾಧ್ಯವಾಗಲಿಲ್ಲ. ಸ್ಥಳೀಯ ಸಂಸ್ಥೆಗಳ ಮೇಲೆ ಆಧುನಿಕ ರಾಜಕೀಯ ಪ್ರಭುತ್ವದ ಹೇರಿಕೆ ಅದು ಸಫಲವಾಗದೆ ಇರಲು ಮುಖ್ಯ ಕಾರಣ ಎಂದು ಧÀರ್ಮಪಾಲ್ ಗುರುತಿಸುತ್ತಾರೆ.
ಅಂದರೆ ಕೇಂದ್ರ ಮಟ್ಟದಲ್ಲಿ ಆಡಳಿತವನ್ನು ನಿಯಂತ್ರಿಸುವ ಪ್ರಭುತ್ವದ (ಸ್ಟೇಟ್) ಪರಿಕಲ್ಪನೆಯೇ ಭಾರತೀಯರಿಗೆ ಪರಕೀಯವಾದ ಅನುಭವವಾಗಿತ್ತು. ಹಾಗಾಗಿ ಅನೂಚಾನವಾಗಿ ಬಂದ ಸ್ಥಳೀಯ ವ್ಯವಸ್ಥೆಯು ಹೊಸ ವ್ಯವಸ್ಥೆಯ ಹೇರಿಕೆಯನ್ನು ತಡೆದುಕೊಳ್ಳದಾಯಿತು. ಇಂದಿಗೂ ಸಹ ಅದೇ ಪರಿಸ್ಥಿತಿ ಮುಂದುವರಿಯುತ್ತಿದೆ. ಇಂದಿನ ಪ್ರಭುತ್ವವೂ ಕೂಡ ಕೇಂದ್ರ ನಿರ್ಧರಿತ ಅಭಿವೃದ್ಧಿ, ಸಾಮಾಜಿಕ-ಸಾಂಸ್ಕೃತಿಕ ಬದಲಾವಣೆಗಳನ್ನು ಸ್ಥಳೀಯ ಮಟ್ಟದಲ್ಲಿ ಅನುಷ್ಠಾನಗೊಳಿಸುವ ವಾಹಕವೆಂಬಂತೆ ಗ್ರಾಮ ಪಂಚಾಯತಿಗಳನ್ನು ಪರಿಗಣಿಸುತ್ತಿದೆ. ಕೆಲವು ವಿಷಯಗಳಲ್ಲಿ ಗ್ರಾಮೀಣ ಸಮುದಾಯಗಳಿಗೆ ಸ್ವಾಯತ್ತತೆ ಇರುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಹಾಗಿರುವ ಸ್ವಾಯತ್ತ ಅಧಿಕಾರವನ್ನು ಹೇಗೆ ಚಲಾಯಿಸಬೇಕೆಂಬ ವಿಶಾಲವಾದ ಚೌಕಟ್ಟನ್ನೂ ಆಧುನಿಕ ಪ್ರಭುತ್ವವೇ ನಿರ್ಧರಿಸುತ್ತದೆ.
ಮತ್ತೊಂದು ಬಗೆಯಲ್ಲಿ ಹೇಳುವುದಾದರೆ: ಸ್ಥಳೀಯ ಸಮುದಾಯಗಳ ಬಗ್ಗೆ ಅಂಬೇಡ್ಕರ್ರವರಿಗಿದ್ದ ಅಪನಂಬಿಕೆ ಇಂದಿನ ಪ್ರಭುತ್ವದ ವಿಚಾರಧಾರೆಯಲ್ಲೂ ಮುಂದುವರಿಯುತ್ತಿದೆ.
ಭಾರತೀಯ ಸಾಂಪ್ರದಾಯಿಕ ಸಮಾಜದ ಸ್ವರೂಪವು ೧೮೦೦ಕ್ಕೂ ಮೊದಲು ನಾವು ಈಗ ಚಿತ್ರಿಸುತ್ತಿರುವುದಕ್ಕಿಂತ ಭಿನ್ನವಾಗಿತ್ತು ಎಂದು ಧರ್ಮಪಾಲ್ ಹೇಳಿರುವುದು ಅತ್ಯಂತ ಮಹತ್ತ್ವದ್ದಾಗಿ ಕಾಣಿಸುತ್ತದೆ. ಧರ್ಮಪಾಲ್ರವರ ಈ ಅವಲೋಕನ ಕೂಡ ಅತ್ಯಂತ ಮಹತ್ತ್ವದ್ದಾಗಿದೆ. ಪ್ರಾಚೀನ ಕಾಲದಿಂದ ಬ್ರಿಟಿಷರು ಬರುವವರೆಗಿನ ಭಾರತದ ಇತಿಹಾಸವನ್ನು ಆಧುನಿಕಪೂರ್ವ ಎನ್ನುವ ಒಂದೇ ಬಣ್ಣದಿಂದ ಚಿತ್ರಿಸಲಾಗಿದೆ. ಅಂದರೆ ಸಾವಿರಾರು ವರ್ಷಗಳ ಕಾಲ ಸಮಾಜವು ಬದಲಾಗದೆ ಉಳಿದುಕೊಂಡಿತ್ತು ಮತ್ತು ಬ್ರಿಟಿಷರ ಆಗಮನದಿಂದಾಗಿ ಆಧುನಿಕತೆಗೆ ತೆರೆದುಕೊಂಡಿದ್ದರಿಂದ ಭಾರತೀಯ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು ಎನ್ನುವ ಸಂಶೋಧನೆಯ ಆಧಾರವೇ ಇಲ್ಲದ ನಂಬಿಕೆ ಈಗಲೂ ಜನಜನಿತವಾಗಿದೆ. ಭಾರತೀಯ ಸಮಾಜವು ಒಂದು ಸ್ಥಗಿತ ಸಮಾಜವಾಗಿತ್ತು ಎನ್ನುವ ಕಾರ್ಲ್ ಮಾರ್ಕ್ಸ್ ಅಭಿಪ್ರಾಯಕ್ಕೆ ಟೀಕೆಗಳು ಬಂದಿವೆ ನಿಜ. ಆದರೆ ಅವು ಮುಖ್ಯವಾಗಿ ಆರ್ಥಿಕ ಮತ್ತು ರಾಜಕೀಯ ಬದಲಾವಣೆಗೆ ಸಂಬಂಧಿಸಿದ ಟೀಕೆಗಳಾಗಿದ್ದವು. ಸಾಮಾಜಿಕ ಸ್ವರೂಪ, ಸಂಘ ಸಂಸ್ಥೆಗಳು, ಅದರಲ್ಲೂ ಮುಖ್ಯವಾಗಿ ಧರ್ಮ – ಇವು ಅನೂಚಾನವಾಗಿ ಮುಂದುವರಿದುಕೊಂಡು ಬಂದಿವೆ ಎನ್ನುವ ನಂಬಿಕೆ ಮಾತ್ರ ಹಾಗೆಯೆ ಉಳಿದುಕೊಂಡುಬಂದಿದೆ. ಭಾರತದ ‘ಜಾತಿ ವ್ಯವಸ್ಥೆ’ ಎನ್ನುವುದು ಪ್ರಾಚೀನ ಕಾಲದಿಂದ ಉಳಿದುಕೊಂಡು ಬಂದ ಸಂಸ್ಥೆಯಾಗಿದೆ ಎನ್ನುವ ನಂಬಿಕೆಯೂ ಹಾಗೆಯೆ ಗಟ್ಟಿಯಾಗಿ ಉಳಿದುಕೊಂಡು ಬಂದಿದೆ. ವಾಸ್ತವವಾಗಿ ‘ಜಾತಿ ವ್ಯವಸ್ಥೆ’ಯ ಬಗ್ಗೆ ನಡೆದಿರುವ ಬಹಳಷ್ಟು ಸಂಶೋಧನೆಗಳು ಇಂತಹ ನಂಬಿಕೆಯಿಂದಲೇ ಹೊರಡುತ್ತವಾದ್ದರಿಂದ ಅವು ಹುಟ್ಟುಹಾಕಿರುವ ಸಿದ್ಧಾಂತಗಳು ಗೊಂದಲದ ಗೂಡಾಗಿವೆ.
ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಪಂಚಾಯತ್ ವ್ಯವಸ್ಥೆಯ ಪುನರುಜ್ಜೀವನಗೊಳಿಸುವ ಬಗ್ಗೆ ನಡೆದ ಚರ್ಚೆ ಮತ್ತು ಅದಕ್ಕೆ ಅಂಬೇಡ್ಕರ್ ಆದಿಯಾಗಿ ಹಲವರಿಂದ ಬಂದ ವಿರೋಧ ಈ ಎಲ್ಲ ವಿವರಗಳನ್ನು ಧರ್ಮಪಾಲ್ರವರ ಮತ್ತೊಂದು ಕೃತಿಯಾದ ‘ಪಂಚಾಯತ್ರಾಜ್ ವ್ಯವಸ್ಥೆ’ಯಲ್ಲಿ ನಾವು ನೋಡಬಹುದು. ಬ್ರಿಟಿಷರ ಸಾಮ್ರಾಜ್ಯಶಾಹಿ ಧೋರಣೆ ಹಾಗೂ ನಂತರ ಭಾರತೀಯ ನಾಯಕರ/ಬುದ್ಧಿಜೀವಿಗಳ ವಸಾಹತು ಪ್ರಜ್ಞೆಯು ಒಂದು ಅದ್ಭುತವಾದ ಪ್ರಾಚೀನ ಸಾಂಸ್ಥಿಕ ರಚನೆಯ ಸ್ವರೂಪ ಹಾಗೂ ಉದ್ದೇಶವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದದ್ದು ಮತ್ತು ಅದರ ಪರಿಣಾಮವನ್ನು ಧರ್ಮಪಾಲ್ ಸಚಿತ್ರವಾಗಿ ನಮ್ಮ ಮುಂದಿಡುತ್ತಾರೆ. ಪಂಚಾಯತ್ರಾಜ್ ವ್ಯವಸ್ಥೆಯ ಬಗ್ಗೆ ಧರ್ಮಪಾಲ್ರವರ ಬರಹಗಳನ್ನು ಸಂಪೂರ್ಣವಾಗಿ ಗಮನಿಸಿದರೆ ಅವುಗಳ ಬಗ್ಗೆ ನಮಗೆ ತಿಳಿದಿರುವುದಕ್ಕಿಂತ ತಿಳಿಯದಿರುವುದೇ ಹೆಚ್ಚು ಎನ್ನುವ ಭಾವನೆ ಖಂಡಿತವಾಗಿಯೂ ಬರುತ್ತದೆ.
ಇಂದು ೨೧ನೆಯ ಶತಮಾನದ ಭಾರತದಲ್ಲಿ ಪಂಚಾಯತಿಗಳ ಪುನರುಜ್ಜೀವನ ಮತ್ತು ಅಧಿಕಾರ ವಿಕೇಂದ್ರೀಕರಣವೆಂಬ ಘೋಷವಾಕ್ಯಗಳು ಕೇವಲ ಭಾಷಣದ ಸರಕಾಗಿವೆ. ನಿಜವಾದ ಅರ್ಥದಲ್ಲಿ ಪಂಚಾಯತಿಗಳ ಸ್ವಾಯತ್ತತೆ ಮತ್ತು ಪ್ರಜಾಧಿಕಾರವನ್ನು ಕಾಣುವ ಕನಸೇನಾದರೂ ನಮಗಿದ್ದರೆ, ನಾವು ನಮ್ಮ ಮುಂದಿರುವ ಈಗಿನ ಪರ್ಯಾಯಗಳನ್ನೆಲ್ಲಾ ಬಿಟ್ಟು ಭಾರತೀಯ ಸಮಾಜವು ಯಾವ ರೀತಿಯ ವ್ಯವಸ್ಥೆಯಿಂದ ತನ್ನನ್ನು ತಾನು ಸದೃಢವಾಗಿಸಿಕೊಂಡಿತ್ತು ಎನ್ನುವ ಸುಮಾರು ಎರಡು ಶತಮಾನಗಳ ಕಾಲದ ಹಿಂದಿನ ಕಥೆಯನ್ನು ಶೋಧಿಸಬೇಕಾಗಿದೆ. ಆ ಮೂಲಕ ಆಧುನಿಕ ಜಗತ್ತಿಗೆ ಭಾರತೀಯ ಪರ್ಯಾಯಗಳನ್ನು ರಚಿಸಬೇಕಿದೆ.