ಗ್ರಾಮ ಪಂಚಾಯತ್ ಸಂಸ್ಥೆಯು ರಾಜಕೀಯ ಪಕ್ಷಗಳಿಂದ ಮುಕ್ತವಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ ಪ್ರಸ್ತುತ ‘ಪಂಚಾಯತ್ ಸಂಸ್ಥೆ’ಯನ್ನು ರಾಜಕೀಯ ಪಕ್ಷಗಳೇ ನಿಯಂತ್ರಿಸುತ್ತಿವೆ ಎನ್ನಲಾಗಿದೆ. ‘ಆಡಳಿತದಲ್ಲಿರುವ ಪಕ್ಷವು ತನ್ನ ಬೆಂಬಲಿಗರನ್ನೇ ಪಂಚಾಯತ್ರಾಜ್ ಕಾರ್ಯಕ್ರಮಗಳ ಫಲಾನುಭವಿಗಳನ್ನಾಗಿ ಆಯ್ಕೆ ಮಾಡುತ್ತದೆ. ಈ ಪ್ರಕ್ರಿಯೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಲವಾರು ಚಿಂತಕರು ಗುರುತಿಸುವ ಅಂಶವೆಂದರೆ ಆಡಳಿತದಲ್ಲಿರುವ ರಾಜಕೀಯ ಪಕ್ಷವು ತನ್ನ ಆಸಕ್ತಿಯನ್ವಯ ಪಂಚಾಯತ್ರಾಜ್ ಸಂಸ್ಥೆಯನ್ನು ನಿಯಂತ್ರಿಸುತ್ತಿದೆ.
ಭಾರತ ಗ್ರಾಮಗಳ ದೇಶವಾದ್ದರಿಂದ ಗ್ರಾಮಗಳು ಅಭಿವೃದ್ಧಿ ಹೊಂದಿದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಗ್ರಾಮಗಳನ್ನು ಅಭಿವೃದ್ಧಿಗೊಳಿಸುವ ಆಶಯದ ಹಿನ್ನೆಲೆಯಲ್ಲಿ ಉದಿಸಿದುದು ಪಂಚಾಯತ್ರಾಜ್ ವ್ಯವಸ್ಥೆ. ಆಧುನಿಕ ಪಂಚಾಯತ್ರಾಜ್ ಸಂಸ್ಥೆಗಳ ರಚನೆ ಮತ್ತು ಕಾರ್ಯವೈಖರಿಯ ಬಗ್ಗೆ ಭಾರತದಲ್ಲಿ ಅಸಂಖ್ಯಾತ ಅಧ್ಯಯನಗಳು ನಡೆದಿವೆ, ಈಗಲೂ ನಡೆಯುತ್ತಲೇ ಇವೆ. ಆ ಎಲ್ಲ ಅಧ್ಯಯನಗಳು ಈಗಿರುವ ಪಂಚಾಯತ್ ವ್ಯವಸ್ಥೆಯ ಮಿತಿಗಳನ್ನು ಗುರುತಿಸುವ ಪ್ರಯತ್ನವನ್ನು ಮಾಡಿವೆ. ಅದಕ್ಕೆ ಕಾರಣಗಳನ್ನೂ ಗುರುತಿಸುವಲ್ಲಿ ಯಶಸ್ವಿಯಾಗಿದ್ದು, ಕಾರಣಗಳೆಲ್ಲವೂ ಜನರ ಕೊರತೆಯನ್ನು ತೋರಿಸುವುದಕ್ಕೇ ಸೀಮಿತವಾಗಿವೆ ಎಂದರೆ ತಪ್ಪಾಗಲಾರದು. ಅಂದರೆ ಜನರ ಅನಕ್ಷರತೆ, ಅಸಹಕಾರ, ಜಾತಿಭಾವನೆ, ಭ್ರಷ್ಟಾಚಾರ ಇತ್ಯಾದಿಗಳನ್ನು ಸಾಮಾನ್ಯವಾಗಿ ಗುರುತಿಸುತ್ತಾರೆ. ಆದರೆ ಮದ್ರಾಸ್ ಪಂಚಾಯತ್ ವ್ಯವಸ್ಥೆಯನ್ನು ಆಳವಾಗಿ ಅಧ್ಯಯನಕ್ಕೊಳಪಡಿಸಿದ ಧರ್ಮಪಾಲ್, ವಿಭಿನ್ನವಾಗಿ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಆಲೋಚನೆಗಳು ಪಂಚಾಯತ್ ಸಂಸ್ಥೆಗಳ ಮೇಲೆ ಬೆಳಕು ಚೆಲ್ಲುವ, ಹೊಸ ಸಿದ್ಧಾಂತಗಳನ್ನು ಬೆಳೆಸುವ ಪ್ರಯತ್ನಕ್ಕೆ ದಾರಿದೀಪವಾಗಲಿವೆ. ಈ ಅಂಶವನ್ನು ಪ್ರಸ್ತುತ ಲೇಖನವು ಸ್ಪಷ್ಟಪಡಿಸಲು ಯತ್ನಿಸುತ್ತದೆ.
ಪ್ರಸ್ತುತ ಪಂಚಾಯತಿಗಳು ಮತ್ತು ಅವುಗಳ ಮಿತಿಗಳು
ಪಂಚಾಯತ್ರಾಜ್ ಸಂಸ್ಥೆಯು ಭಾರತೀಯ ರಾಜಕೀಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಆದರೆ ಸಂವಿಧಾನದ ಪ್ರಾರಂಭಿಕ ಕರಡು ರಚನೆಯಾದಾಗ, ಅವುಗಳಿಗೆ ಅವಕಾಶವನ್ನು ನೀಡಿರಲಿಲ್ಲ ಎಂಬುದೂ ಅಷ್ಟೇ ಸತ್ಯ. ಆದರೆ ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಗಳು ಹಾಗೂ ಗಾಂಧಿಯವರ ಗ್ರಾಮಸ್ವರಾಜ್ಯ ಕಲ್ಪನೆಯ ಪ್ರಭಾವವು ಈ ಸಂಸ್ಥೆಗಳ ರಚನೆಗೆ ನಾಂದಿಯಾಯಿತು. ಅಧಿಕಾರದ ಕೇಂದ್ರೀಕರಣವನ್ನು ಪ್ರಶ್ನಿಸಿದ ಗಾಂಧಿಯವರ ಆಲೋಚನೆಯ ಪ್ರಕಟ ರೂಪವೆಂದು ಪರಿಗಣಿಸಲ್ಪಡುವ ಪಂಚಾಯತ್ರಾಜ್ ಸಂಸ್ಥೆಗಳು ಗ್ರಾಮೀಣ ಜನರ ಸ್ವಾವಲಂಬನೆಗೆ ಅವಕಾಶ ನೀಡುವ ಬದಲು ಅದಕ್ಕೆ ವ್ಯತಿರಿಕ್ತವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅಧ್ಯಯನಗಳು ಗುರುತಿಸಿವೆ. ಅಂದರೆ ಪಂಚಾಯತ್ ಕಾರ್ಯಚಟುವಟಿಕೆಗಳು ಸಂಸ್ಥೆಯ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾದ ಫಲಿತಾಂಶಕ್ಕೆ ಸಾಕ್ಷಿಯಾಗಿರುವುದನ್ನು ಮತ್ತು ಅದಕ್ಕೆ ಕಾರಣಗಳನ್ನು ಗುರುತಿಸುವ ಯತ್ನವನ್ನು ಈಗಾಗಲೇ ಅಧ್ಯಯನಗಳು ಮಾಡಿವೆ. ಅವುಗಳು ಗುರುತಿಸುವ ಕಾರಣಗಳನ್ನು ಎರಡು ರೀತಿಯಾಗಿ ವಿಂಗಡಿಸಬಹುದು. ಒಂದು, ಜನರ ಸಹಕಾರ ಅಥವಾ ಭಾಗವಹಿಸುವಿಕೆಯ ಕೊರತೆ. ಎರಡು, ಪಂಚಾಯತ್ ಸಂಸ್ಥೆಯು ಜನಪರವಾಗಿಲ್ಲದೆ ಇರುವುದು. ಈ ಕಾರಣಗಳನ್ನು ಒಂದೊಂದಾಗಿ ವಿಶ್ಲೇಷಣೆಗೊಳಪಡಿಸೋಣ.
ಜನರ ಭಾಗವಹಿಸುವಿಕೆಯ ಕೊರತೆ
ಸರ್ಕಾರದ ಯೋಜನೆಗಳ ಸಫಲತೆ ಜನರ ಭಾಗವಹಿಸುವಿಕೆಯನ್ನು ಅವಲಂಬಿಸಿರುತ್ತದೆ. ಆದರೆ ಸ್ಥಳೀಯ ಸಂಸ್ಥೆಯ ಮೂಲಕ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗಳಲ್ಲಿ ಜನರು ನಿರೀಕ್ಷಿತ ಮಟ್ಟದಲ್ಲಿ ಭಾಗವಹಿಸದೇ ಇರುವುದು ಈ ಸಂಸ್ಥೆಯ ವಿಫಲತೆಗೆ ಕಾರಣವಾಗಿದೆ. ಹಾಗಾದರೆ, ಪಂಚಾಯತಿಯ ಕೆಲಸಗಳಲ್ಲಿ ಜನರು ಭಾಗವಹಿಸದೇ ಇರಲು ಕಾರಣವೇನು?
ಅನಕ್ಷರತೆ: ಜನರಿಗೆ ಪಂಚಾಯತಿಯ ಕಾರ್ಯಗಳ ಬಗ್ಗೆ ಅರಿವಿನ ಕೊರತೆ ಇದೆ. ಇದಕ್ಕೆ ಅನಕ್ಷರತೆ ಕಾರಣ ಎಂದು ಬಹುಪಾಲು ಅಧ್ಯಯನಗಳು ಅಭಿಪ್ರಾಯಪಟ್ಟಿವೆ. (A.K. Majumdar. ೧೯೯೭: ೧೩). ಒಂದುವೇಳೆ ಅನಕ್ಷರತೆಯೇ ಕಾರಣವಾಗಿದ್ದಲ್ಲಿ ಪಂಚಾಯತಿಗಳು ಅಸ್ತಿತ್ವಕ್ಕೆ ಬಂದ ದಿನದಿಂದ ಇಂದಿಗೆ ಅಕ್ಷರಸ್ಥರ ಸಂಖ್ಯೆಯು ಹೆಚ್ಚಾಗಿದೆಯಲ್ಲ? ಇದು ಗೊತ್ತಿರುವ ಸತ್ಯ (Census of India report. ೨೦೧೧). ಆದರೆ ಈ ಮೂಲಕ ಜನರ ಭಾಗವಹಿಸುವಿಕೆಯ ಪ್ರಮಾಣದಲ್ಲಿ ಅಂತಹ ವ್ಯತ್ಯಾಸವನ್ನು ಕಾಣಲು ಸಾಧ್ಯವಿಲ್ಲ (Hussain ೨೦೧೨: ೨೮೬). ಅಂದರೆ ಅನಕ್ಷರತೆ ಕಾರಣ ಎಂಬುದು ಸಮಂಜಸ ವಾದವಲ್ಲ ಎಂಬುದು ಸ್ಪಷ್ಟ.
ನಿರಾಸಕ್ತಿ: ೨೦೦೮ರಲ್ಲಿ ಕರ್ನಾಟಕ ಸರ್ಕಾರವು ಗ್ರಾಮಸ್ವರಾಜ್ ಕಾರ್ಯಕ್ರಮದ ಕುರಿತು ಅಧ್ಯಯನ ಮಾಡಲು ಸಮಿತಿಯನ್ನು ನೇಮಿಸಿತ್ತು. ಈ ಸಮಿತಿಯು ಕರ್ನಾಟಕದ ಎಚ್.ಡಿ. ಕೋಟೆ, ಚಾಮರಾಜನಗರ, ಬಾಗೇಪಲ್ಲಿ, ಮಾಗಡಿ ಮತ್ತು ಕನಕಪುರ, ಶಿರಾ – ಈ ತಾಲೂಕುಗಳನ್ನು ಆಯ್ದುಕೊಂಡು ಅಲ್ಲಿನ ಗ್ರಾಮ ಪಂಚಾಯತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದೆ. ಈ ಸಮಿತಿಯು ಪಂಚಾಯತಿಯ ಕಾರ್ಯಗಳ ಕುರಿತು ಜನರು ಆಸಕ್ತರಾಗಿಲ್ಲ ಎಂದು ತಿಳಿಸುತ್ತದೆ (Decentralization Analysis Cell Report.. ೨೦೦೮: ೫). ಪಂಚಾಯತಿಗಳ ಬಗ್ಗೆ ಜ್ಞಾನವಿದ್ದರೂ ಸಹ ಅನೌಪಚಾರಿಕ ಅಥವಾ ಸರ್ಕಾರೇತರ ಸಂಸ್ಥೆಗಳಾದ ಸ್ವಸಹಾಯ ಸಂಸ್ಥೆಗಳ ಬಗ್ಗೆ ಜನರು ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ ಎಂದು ಕೆಲವರು ಗುರುತಿಸಿದ್ದಾರೆ (Eswar Kumar. ೨೦೧೪: ೪೦). ಹಾಗೂ ‘ಪಂಚಾಯತ್ ಸಂಸ್ಥೆಗಳನ್ನು ಗ್ರಾಮೀಣ ಜನರು ತಮ್ಮ ಜೀವನದ ಭಾಗವಾಗಿ ಒಪ್ಪಿಕೊಂಡಿಲ್ಲ ಎಂಬುದನ್ನು ಅಧ್ಯಯನಗಳು ಗುರುತಿಸಿವೆ’. ಅಂದರೆ ಹಳ್ಳಿಗರು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಮ್ಮ ಸ್ವಂತ ಕಕ್ಷೆಯವು ಎನ್ನುವ ರೀತಿಯಲ್ಲಿ ಪರಿಗಣಿಸಲೇ ಇಲ್ಲ. ಇವರ ಪ್ರಕಾರ ಅವುಗಳು ಕೇವಲ ಸರ್ಕಾರದಿಂದ ರಚನೆಯಾದಂಥ ಯೋಜನೆಗಳಷ್ಟೇ ಎಂಬ ಭಾವನೆ ಇದೆ (Harichandran. ೧೯೮೩: ೨೦). ಪಂಚಾಯತ್ ಸಂಸ್ಥೆಗಳ ಕುರಿತಾಗಿ ಈ ಪರಕೀಯ ಬಾವನೆ ಮೂಡಲು ಕಾರಣವೇನು? ಈ ನಿಟ್ಟಿನಲ್ಲಿ ಅಧ್ಯಯನಗಳು ಉತ್ತರಿಸಲು ಪ್ರಯತ್ನಿಸಿದಂತಿಲ್ಲ.
ಕಾರ್ಯನಿರ್ವಹಣೆಯಲ್ಲಿನ ದೋಷಗಳು
ಗ್ರಾಮೀಣ ಅಭಿವೃದ್ಧಿ ಯೋಜನೆಗಳ ವಿಫಲತೆಗೆ ಸಂಬಂಧಿಸಿದಂತೆ ಎರಡು ಭಿನ್ನ ಕಾರಣಗಳು ಪ್ರಚಲಿತದಲ್ಲಿವೆ. ಒಂದು, ‘ಜನರ ಆವಶ್ಯಕತೆಗೆ ತಕ್ಕಂತೆ ಗ್ರಾಮೀಣ ಅಭಿವೃದ್ಧಿ ಯೋಜನೆಗಳು ರೂಪಗೊಳ್ಳುತ್ತಿಲ್ಲ’ ಎಂಬುದು.
“ನಮ್ಮ ಜನನಾಯಕರು ದಿಲ್ಲಿಯಲ್ಲೋ ಅಥವಾ ರಾಜಧಾನಿಯಲ್ಲೋ ಕುಳಿತು ೧೨೦ ಕೋಟಿ ಜನರ ಆವಶ್ಯಕತೆಗಳೇನು, ಅವರ ತೊಂದರೆಗಳೇನು, ಹಣ ಹೇಗೆ ಬಳಸಬೇಕೆಂದು ನಿರ್ಣಯ ತೆಗೆದುಕೊಳ್ಳುತ್ತಾರೆ. ಸರ್ಕಾರಗಳು ಅವರದೇ ಸೀಮಿತ ಉದ್ದೇಶಗಳನ್ನು ಹೊಂದಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತವೆಯೇ ಹೊರತು, ಜನರ ಆವಶ್ಯಕತೆಯನ್ನು ಅರಿತುಕೊಳ್ಳುವುದಿಲ್ಲ (ಕೇಜ್ರಿವಾಲ್. ೨೦೧೩: ೧೭). ಮತ್ತು ಚುನಾಯಿತ ಪ್ರತಿನಿಧಿಗಳು ‘ತಯಾರಿಸಿದ’ ಯೋಜನೆಗಳಾಗಿ ಬದಲಾಗುತ್ತವೆ ಮತ್ತು ಜನರಿಂದ ತಯಾರಿಸಿದ ಯೋಜನೆಗಳಾಗುವುದಿಲ್ಲ…. ಎಲ್ಲಿ ಜನರು ಭಾಗವಹಿಸುತ್ತಿಲ್ಲವೋ, ಅಲ್ಲಿ ಯೋಜನೆಗಳ ಅನುಷ್ಠಾನಗಳು ಉತ್ತಮವಾಗಿಲ್ಲ ಮತ್ತು ಲಾಭದಾಯಕವಾಗಿಲ್ಲ” (ಅದೇ: ೧೨).
ಎರಡು, ‘ಗ್ರಾಮೀಣ ಅಭಿವೃದ್ಧಿ ಯೋಜನೆಗಳು ಉತ್ತಮವಾಗಿ ರೂಪಗೊಂಡರೂ ಅವುಗಳನ್ನು ಜಾರಿಗೊಳಿಸುವ ಪಂಚಾಯತ್ರಾಜ್ ಸಂಸ್ಥೆಯು ದುರ್ಬಲವಾಗಿದೆ’ (Praveen Kumar. ೨೦೧೪: ೧೪). ಯೋಜನೆಗಳು ಜನರ ಆವಶ್ಯಕತೆಗಳ ಅನುಗುಣವಾಗಿ ರೂಪಗೊಂಡರೂ ಸ್ಥಳೀಯ ಸಂಸ್ಥೆಗಳು ಆ ಯೋಜನೆಗಳನ್ನು ಸೂಕ್ತವಾಗಿ ಜಾರಿಗೊಳಿಸುವಲ್ಲಿ ವಿಫಲವಾಗುತ್ತಿವೆ ಎಂಬ ವಾದವು ಒಂದೆಡೆಯಾದರೆ, ಜನರ ಆವಶ್ಯಕತೆಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸದೆ ಇರುವುದೇ ಯೋಜನೆಗಳ ವಿಫಲತೆಗೆ ಕಾರಣ ಎಂಬ ವಾದವು ಇನ್ನೊಂದೆಡೆ ಇದೆ. ಈ ರೀತಿಯಾಗಿ ಪರಸ್ಪರ ವೈರುಧ್ಯವುಳ್ಳ ಗೊಂದಲಾತ್ಮಕವಾದ ವಿವÀರಣೆಗಳು ಪ್ರಸ್ತುತತೆ ಪಡೆದಿವೆ. ಈ ಮೂಲಕ ಈ ಸಂಸ್ಥೆಗಳ ವಿಫಲತೆಯನ್ನು ಅರ್ಥ ಮಾಡಿಕೊಳ್ಳುವುದು ಕಠಿಣವೇ ಆಗಿದೆ.
ಅನುದಾನದ ಸಮಸ್ಯೆ: ‘ಪಂಚಾಯತ್ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸೂಕ್ತ ಅನುದಾನದ ಕೊರತೆ ಇದೆ’ ಎಂದು ಹಣಕಾಸು ಆಯೋಗದ ವರದಿ ಗುರುತಿಸಿವೆ. ಅದೇ ವರದಿಯಲ್ಲಿ ‘ಪಂಚಾಯತ್ ಸಂಸ್ಥೆಗಳು ಲಭ್ಯವಿರುವ ಸಂಪನ್ಮೂಲಗಳನ್ನೇ ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದೂ ವಿವರಿಸಲಾಗಿದೆ’. ಹೀಗೆ ಪಂಚಾಯತಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸೂಕ್ತ ಸಂಪನ್ಮೂಲಗಳಿಲ್ಲ ಎಂಬ ವಾದ ಒಂದೆಡೆಯಾದರೆ, ಲಭ್ಯವಿರುವ ಸಂಪನ್ಮೂಲಗಳನ್ನೇ ಸರಿಯಾಗಿ ಬಳಕೆಮಾಡಿಕೊಂಡಿಲ್ಲ ಎಂಬ ವಾದ ಇನ್ನೊಂದೆಡೆ. ಹೀಗೆ ಅನುದಾನ ಸಮಸ್ಯೆಯ ಕುರಿತಾದ ವಿವರಣೆಗಳೂ ಗೊಂದಲದಲ್ಲಿ ಕೊನೆಗೊಳ್ಳುತ್ತವೆ.
ಅಧಿಕಾರಶಾಹಿ ದಬ್ಬಾಳಿಕೆ: ಔಪಚಾರಿಕ ಸಂಸ್ಥೆಯೆಂದ ಮೇಲೆ ಅದರ ಕಾರ್ಯಗಳು ಅಧಿಕಾರಶಾಹಿ ವರ್ಗದ ಮೂಲಕವೇ ಜಾರಿಯಾಗುತ್ತವೆ. ‘ಪಂಚಾಯತ್ ಸಂಸ್ಥೆಗಳಲ್ಲಿ ರಾಜ್ಯವು ಅಧಿಕಾರಶಾಹಿಗಳ ಮೂಲಕ ಹಸ್ತಕ್ಷೇಪ ಮಾಡುತ್ತಿದೆ. ಅಧಿಕಾರಶಾಹಿಗಳ ದಬ್ಬಾಳಿಕೆ ವಿಫಲತೆಗೆ ಕಾರಣ’ ಎಂಬುದಾಗಿ ಅಧ್ಯಯನಗಳು ಗುರುತಿಸಿವೆ (Harihar Sethy. ೨೦೧೦: ೧೯; A.K. Majumdar. ೧೯೯೭: ೭೫). ಇದಕ್ಕೆ ವ್ಯತಿರಿಕ್ತವಾಗಿ, ‘ಚುನಾಯಿತ ಪ್ರತಿನಿಧಿಗಳು ಸ್ಥಳೀಯರಾಗಿದ್ದು ಇದನ್ನು ಬಳಸಿಕೊಂಡು ಅಧಿಕಾರಶಾಹಿ ವರ್ಗದವರನ್ನು ನಿಯಂತ್ರಿಸುತ್ತಾರೆ. ಅಲ್ಲದೇ ಅತಿಯಾದ ಒತ್ತಡವನ್ನು ಹೇರುವ ಮೂಲಕ ಅಧಿಕಾರಿಗಳನ್ನು ಸಂಕಟಕ್ಕೆ ನೂಕುತ್ತಾರೆ. ಹಲವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು ಇದಕ್ಕೆ ಉತ್ತಮ ಉದಾಹರಣೆ’ ಎನ್ನುವ ವಿವರಣೆಗಳಿವೆ. ಹೀಗೆ ವಿಫಲತೆಗೆ ನೀಡುವ ಕಾರಣಗಳಲ್ಲಿ ಗೊಂದಲವಿರುವುದು ಕಂಡುಬರುತ್ತದೆ.
ರಾಜಕೀಯ ಪಕ್ಷಗಳ ಹಸ್ತಕ್ಷೇಪ: ಗ್ರಾಮ ಪಂಚಾಯತ್ ಸಂಸ್ಥೆಯು ರಾಜಕೀಯ ಪಕ್ಷಗಳಿಂದ ಮುಕ್ತವಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ ಪ್ರಸ್ತುತ ‘ಪಂಚಾಯತ್ ಸಂಸ್ಥೆ’ಯನ್ನು ರಾಜಕೀಯ ಪಕ್ಷಗಳೇ ನಿಯಂತ್ರಿಸುತ್ತಿವೆ ಎನ್ನಲಾಗಿದೆ. ‘ಆಡಳಿತದಲ್ಲಿರುವ ಪಕ್ಷವು ತನ್ನ ಬೆಂಬಲಿಗರನ್ನೇ ಪಂಚಾಯತ್ರಾಜ್ ಕಾರ್ಯಕ್ರಮಗಳ ಫಲಾನುಭವಿಗಳನ್ನಾಗಿ ಆಯ್ಕೆ ಮಾಡುತ್ತದೆ. ಈ ಪ್ರಕ್ರಿಯೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಲವಾರು ಚಿಂತಕರು ಗುರುತಿಸುವ ಅಂಶವೆಂದರೆ ಆಡಳಿತದಲ್ಲಿರುವ ರಾಜಕೀಯ ಪಕ್ಷವು ತನ್ನ ಆಸಕ್ತಿಯನ್ವಯ ಪಂಚಾಯತ್ರಾಜ್ ಸಂಸ್ಥೆಯನ್ನು ನಿಯಂತ್ರಿಸುತ್ತದೆ. ಈ ರೀತಿಯಾಗಿ ಸ್ವಯಂ ಸರ್ಕಾರದ ಕಾರ್ಯನಿರ್ವಹಣೆಗೆ ಹಲವಾರು ಅಡೆತಡೆಗಳಿವೆ’ (Craig Johnson. ೨೦೦೩: ೭೩). ಮತ್ತು ‘ಅಧಿಕಾರದಲ್ಲಿರುವ ಪಕ್ಷ ತನ್ನ ತಪ್ಪುಗಳನ್ನು ಬಚ್ಚಿಟ್ಟುಕೊಳ್ಳಲು ಬಳಸಿಕೊಂಡರೆ, ವಿರೋಧಪಕ್ಷವು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತದೆ. ಕೇರಳ ಮತ್ತು ಕರ್ನಾಟಕ ಎರಡೂ ರಾಜ್ಯಗಳಲ್ಲಿಯೂ ಒಂದಕ್ಕಿಂತ ಹೆಚ್ಚು ಪಕ್ಷಗಳ ಪ್ರಭಾವವು ಸ್ಥಳೀಯ ಸರ್ಕಾರದ ಮೇಲಿದೆ’ ಎಂಬ ವಾದವನ್ನು ಮಂಡಿಸಿದ್ದಾರೆ (Palanithurai ೨೦೦೨: ೧೫). ಅಂದರೆ ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದಾಗಿ, ಗಾಂಧಿ ಅವರು ಪ್ರತಿಪಾದಿಸುವ ಸಂಪೂರ್ಣ ಸ್ವಾಯತ್ತತೆ ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ವಿಕೇಂದ್ರೀಕರಣ ಸಮಸ್ಯೆ: ಭಾರತೀಯ ಸಂವಿಧಾನವು ಪಂಚಾಯತ್ರಾಜ್ ಸಂಸ್ಥೆಗಳನ್ನು ಸ್ಥಳೀಯ ಸರ್ಕಾರ ಸಂಸ್ಥೆಗಳನ್ನಾಗಿ ವ್ಯಾಖ್ಯಾನಿಸಿದೆ. ಇದರರ್ಥ, ‘ಸ್ಥಳೀಯ ಅಭಿವೃದ್ಧಿಯನ್ನು ಮಾಡಲು ಆಡಳಿತಾತ್ಮಕ, ಹಣಕಾಸಿನ ಮತ್ತು ರಾಜಕೀಯ ವಿಕಸನಕ್ಕಾಗಿ ಸ್ಥಳೀಯ ಸರ್ಕಾರಗಳು ಅಧಿಕಾರವನ್ನು ಹೊಂದುವುದೇ ಆಗಿದೆ’. ಆದರೆ ‘ಈ ಸಂಸ್ಥೆಗಳಿಗೆ ಸೂಕ್ತ ಅಧಿಕಾರವನ್ನು ನೀಡದೇ ಇರುವುದರ ಕಡೆಗೆ ಕೆಲವು ಅಧ್ಯಯನಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಈ ಸಂಸ್ಥೆಯ ಮೂಲಕ ಧ್ಯೇಯವೇ ಇಡೇರದೇ ಇರುವುದು ಸ್ಪಷ್ಟವಾಗುತ್ತದೆ. ಅಂದರೆ ಪ್ರಭುತ್ವ ಪಂಚಾಯತ್ ಸಂಸ್ಥೆಯನ್ನು ನಿಯಂತ್ರಣದಲ್ಲಿರಿಸಿಕೊಂಡು ಸ್ವಾಯತ್ತತೆಯನ್ನು ಕಸಿದುಕೊಂಡಿದೆ.
ಒಟ್ಟಾರೆಯಾಗಿ ಪಂಚಾಯತ್ ಸಂಸ್ಥೆಗಳ ವಿಫಲತೆಯ ಚರ್ಚೆಗಳು ಎರಡು ನೆಲೆಗಳಲ್ಲಿ ಹುಟ್ಟಿಕೊಳ್ಳುತ್ತವೆ. ಮೊದಲನೆಯದಾಗಿ, ಪಂಚಾಯತ್ ಸಂಸ್ಥೆಯೊಂದಿಗೆ ಗ್ರಾಮೀಣ ಜನರ ಅಸಹಕಾರಕ್ಕೆ ಸಂಬಂಧಿಸಿದ್ದಾದರೆ, ಎರಡನೆಯದಾಗಿ, ಪಂಚಾಯತ್ರಾಜ್ ಸಂಸ್ಥೆಯ ಔಪಚಾರಿಕ ರಚನೆ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ್ದು. ಈ ಎರಡು ನೆಲೆಗಳಿಂದಲೂ ಈ ಸಂಸ್ಥೆ ಭಾರತೀಯ ಗ್ರಾಮಗಳಿಗೆ ಸಮರ್ಪಕವಾಗಿಲ್ಲದಿರುವುದು ಅನುಭವಸಿದ್ಧವಾಗಿದೆ. ಪಂಚಾಯತ್ರಾಜ್ ಸಂಸ್ಥೆಗಳ ಕುರಿತ ಈ ಎಲ್ಲ ಮಿತಿಗಳನ್ನು ಹೇಗೆ ಬಗೆಹರಿಸಬೇಕು? ಅದರಲ್ಲೂ ಮುಖ್ಯವಾಗಿ ಗ್ರಾಮಗಳ ಸ್ವಾವಲಂಬನೆ ಜನರ ಭಾಗವಹಿಸುವಿಕೆಯನ್ನು ಅವಲಂಬಿಸಿರುತ್ತದೆ ಎಂದಾದರೆ, ಅವರ ಭಾಗವಹಿಸುವಿಕೆಯ ಕೊರತೆಯನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ?
ಗಾಂಧಿ ಮತ್ತು ಗ್ರಾಮಗಳ ಸ್ವಾವಲಂಬನೆ
ಸ್ವರಾಜ್ಯದ ಬಗೆಗಿನ ಗಾಂಧಿಯವರ ವಿಚಾರಗಳನ್ನು ತಿಳಿಯದವರೇ ಇಲ್ಲ ಎನ್ನಬಹುದಾದರೂ, ಅದರ ನಿಜವಾದ ಆಶಯಗಳು ನಮ್ಮ ಆಧುನಿಕ ಪಂಚಾಯತ್ರಾಜ್ನಲ್ಲಿ ವ್ಯಕ್ತವಾಗಿವೆಯೇ ಎಂಬುದು ಇಲ್ಲಿ ನಾವು ಕೇಳಿಕೊಳ್ಳಬೇಕಿರುವ ಪ್ರಶ್ನೆ. ಆಗ ಕೆಲವರ ಮನಸ್ಸಿನಲ್ಲಿ ಈ ರೀತಿಯ ಆಲೋಚನೆಗಳೂ ಬರಬಹುದು: “ಭಾರತೀಯರ ನಿಶ್ಶಸ್ತ್ರೀಕರಣದ ಪರಿಸ್ಥಿತಿಯ ಸ್ವಾತಂತ್ರö್ಯ ಹೋರಾಟದಲ್ಲಿ ಗಾಂಧಿಯವರ ಸತ್ಯಾಗ್ರಹದಂತಹ ತಂತ್ರ ಮತ್ತು ಅವರ ತಾತ್ತ್ವಿಕತೆಗಳು ಉಪಯುಕ್ತವಾಗಿದ್ದಿರಬಹುದು, ಆದರೆ ಅವರ ವಿಚಾರಗಳು ಸ್ವಾತಂತ್ರ್ಯೋತ್ತರ ಪುನರ್ನಿರ್ಮಾಣದ ಕಾರ್ಯಗಳಿಗೆ ಪ್ರಸ್ತುತವಲ್ಲ.” ಸ್ವಾತಂತ್ರ್ಯ ಹೋರಾಟಗಾರರಲ್ಲಿ ಗಾಂಧಿ ವಿಚಾರದ ಬಗೆಗಿದ್ದ ಶ್ರದ್ಧೆ ಮತ್ತು ಸ್ಪಷ್ಟತೆಯು ಆನಂತರ ಸಂವಿಧಾನ ಸಂರಚನೆಯಲ್ಲಿ ಮಾಯವಾಗಿದ್ದರ ಕುರಿತು ಜಯಪ್ರಕಾಶ್ ಗಮನ ಸೆಳೆಯುತ್ತಾರೆ. ಗಾಂಧಿಯ ಆಲೋಚನೆಯ ಕುರಿತು ಇಂತಹ ಭಾವನೆ ಬಂದರೆ, ಅದೊಂದು ದೋಷವೇ ಸರಿ ಎಂಬ ತಮ್ಮ ನಿಲವನ್ನು ವ್ಯಕ್ತಪಡಿಸುತ್ತಾರೆ (Dharampal. ೨೦೦೦).
ಸಂವಿಧಾನ ರಚನಾಸಭೆಯ ನಡವಳಿಗಳನ್ನು ಸರಿಯಾಗಿ ಅನುಸರಿಸಲು ನನಗೆ ಸಾಧ್ಯವಾಗಲಿಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ… ಸಂವಿಧಾನದ ಮುನ್ಸೂಚಿಯಲ್ಲಿ ಗ್ರಾಮ ಪಂಚಾಯತಿಗಳು ಮತ್ತು ವಿಕೇಂದ್ರೀಕರಣದ ಬಗ್ಗೆ ಯಾವುದೇ ಉಲ್ಲೇಖವಾಗಲಿ ಅಥವಾ ನಿರ್ದೇಶನವಾಗಲಿ ಇಲ್ಲ ಎಂದು ಸಂವಾದಕ ಹೇಳುತ್ತಾನೆ. ನಮ್ಮ ಸ್ವಾತಂತ್ರ್ಯವು ಜನರ ಧ್ವನಿಯನ್ನು ಪ್ರತಿಬಿಂಬಿಸಬೇಕೆಂದಾದರೆ, ಅದು ತಕ್ಷಣದ ಗಮನವನ್ನು ಈ ನಿಟ್ಟಿನಲ್ಲಿ ಕೊಡಬೇಕಿದೆ. ಪಂಚಾಯತಿಗಳ ಶಕ್ತಿ ಹೆಚ್ಚಾದಷ್ಟೂ ಜನರಿಗೆ ಹೆಚ್ಚು ಅನುಕೂಲಕರವಾಗಲಿದೆ… (ಹರಿಜನ್ನಲ್ಲಿ ಗಾಂಧಿ, ೨೧ ಡಿಸೆಂಬರ್ ೧೯೪೭)
ಸಂವಿಧಾನದ ಆರಂಭಿಕ ಕರಡು ಪ್ರತಿಯಲ್ಲಿ ಪಂಚಾಯತಿಗಳ, ಗ್ರಾಮಗಳ ಸ್ಥಾನಮಾನದ ಕುರಿತು ಯಾವುದೇ ಉಲ್ಲೇಖವಿಲ್ಲದಿರುವುದು ಹಲವರ ಕೆಂಗಣ್ಣಿಗೆ ಗುರಿಯಾದ ಸಂಗತಿ. ಆದರೆ ಆನಂತರದ ತೀವ್ರ ಚರ್ಚೆಯಲ್ಲಿ ರಾಜ್ಯನೀತಿ ನಿರ್ದೇಶಕ ತತ್ತ್ವಗಳಲ್ಲಿ ಅವಕಾಶ ಮಾಡಿಕೊಡಲಾದುದನ್ನು ಸಂವಿಧಾನ ರಚನಾ ಸಭೆಯ ಚರ್ಚೆಗಳು ಸ್ಪಷ್ಟಪಡಿಸುತ್ತವೆ. ಈ ನಿಟ್ಟಿನಲ್ಲಿ ನಡೆದ ಚರ್ಚೆಯನ್ನು ಧರ್ಮಪಾಲ್ರವರು ತಮ್ಮ ‘ಪಂಚಾಯತ್ರಾಜ್ ಆಸ್ ದ ಬೇಸಿಸ್ ಆಫ್ ಇಂಡಿಯಾಸ್ ಪಾಲಿಟಿ’ ಕೃತಿಯಲ್ಲಿ ಕ್ರೋಡೀಕರಿಸಿ, ವಿಶ್ಲೇಷಿಸುತ್ತಾರೆ. ಗಾಂಧಿಯವರು ಗ್ರಾಮಗಳಿಗೆ ಸ್ವಾಯತ್ತತೆ ನೀಡುವುದೇ ನಿಜವಾದ ಸ್ವಾತಂತ್ರö್ಯ ಎನ್ನುತ್ತಾರೆ. ಆದರೆ ಗ್ರಾಮಗಳನ್ನೇ ಕಡೆಗಣಿಸಿದ ಸಂದರ್ಭವನ್ನು ಈ ಕೃತಿಯು ನೆನಪಿಸುತ್ತದೆ. ಅಲ್ಲದೆ ಗ್ರಾಮಗಳ ಬಗೆಗೆ ಸಂವಿಧಾನ ರಚನಾಕಾರರಲ್ಲಿಯೇ ಇದ್ದಂತಹ ಎರಡು ದೃಷ್ಟಿಕೋನಗಳನ್ನು ಈ ಕೃತಿಯು ಪರಿಚಯಿಸುತ್ತದೆ.
ಸಂವಿಧಾನ ರಚನಾ ಸಭೆಯ ತೀವ್ರವಾದ ಚರ್ಚೆಗಳ ನಂತರ ಸ್ಥಳೀಯ ಸರ್ಕಾರಗಳ ರಚನೆಗೆ ಅವಕಾಶ ನೀಡಲಾಯಿತು. ಹಾಗೂ ಗಾಂಧಿಯವರ ಗ್ರಾಮಸ್ವರಾಜ್ಯ ಪರಿಕಲ್ಪನೆಯನ್ನು ಆಧರಿಸಿ ಪಂಚಾಯತ್ರಾಜ್ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ತೀರ್ಮಾನಿಸಲಾಯಿತು. ಗ್ರಾಮಸ್ವರಾಜ್ಯದ ಪರಿಕಲ್ಪನೆಯು ‘ಸ್ವಾವಲಂಬನೆ’ ಮತ್ತು ‘ಸ್ವಯಂಆಡಳಿತ’ವನ್ನು ಮುಖ್ಯವಾಗಿ ಪರಿಗಣಿಸುತ್ತದೆ. ಈಗಿರುವ ಪಂಚಾಯತಿಗಳು ಈ ಪರಿಕಲ್ಪನೆಯನ್ನು ಒಳಗೊಂಡಿದ್ದರೆ, ಜನರು ಇದನ್ನು ಪರಕೀಯವೆಂದು ಭಾವಿಸಲು ಕಾರಣವೇ ಇರಲಾರದು. ಹೀಗೆ ಪರಕೀಯವೆನಿಸಲು ಹಾಗೂ ಹಲವು ಹೊಸ ಸಮಸ್ಯೆಗಳ ಉದ್ಭವಕ್ಕಿರುವ ಕಾರಣಗಳನ್ನು ಧರ್ಮಪಾಲ್ರವರು ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅವರು ತಮ್ಮ ‘ದಿ ಮದ್ರಾಸ್ ಪಂಚಾಯತ್ ಸಿಸ್ಟಮ್’ ಎಂಬ ಕ್ಷೇತ್ರಕಾರ್ಯ-ಆಧಾರಿತ ಕೃತಿಯಲ್ಲಿ ಈ ಔಪಚಾರಿಕ ಸಂಸ್ಥೆಗಳ ಉಗಮದ ನಂತರದ ಸ್ಥಿತಿಯನ್ನು ಸವಿವರವಾಗಿ ಚರ್ಚಿಸಿದ್ದಾರೆ. ಅವರ ಅಧ್ಯಯನ ಮತ್ತು ವಿಶ್ಲೇಷಣೆಗಳ ಹಿನ್ನೆಲೆಯಲ್ಲಿ, ಈಗಿರುವ ಪಂಚಾಯತಿ ವ್ಯವಸ್ಥೆಯ ಸಮಸ್ಯೆಗಳು ಮತ್ತು ಹಿಂದಿನ ಗ್ರಾಮನಿರ್ವಹಣೆಯ ಪ್ರಕ್ರಿಯೆಯ ಕುರಿತು ಹೆಚ್ಚಿನ ಬೆಳಕು ಚೆಲ್ಲಲು ಸಾಧ್ಯವಾಗಬಹುದು.
ಗ್ರಾಮೀಣ ಜನರ ಅಭಿವೃದ್ಧಿಗಾಗಿ ಜಾರಿಗೆ ಬಂದಂತಹ ಈ ಸಂಸ್ಥೆಯು ಅವರ ಅಭಿವೃದ್ಧಿಗೆ ಸಹಕರಿಸುವ ಬದಲಾಗಿ ಗ್ರಾಮೀಣ ಜೀವನದಲ್ಲಿ ಸಮಸ್ಯೆಗಳಿಗೆ ಅವಕಾಶ ಮಾಡುತ್ತಿದೆ ಎನ್ನಲಾಗುತ್ತಿದೆ. ಅವರದೇ ಉಲ್ಲೇಖವನ್ನು ಗಮನಿಸಿ: “ಪಂಚಾಯತ್ರಾಜ್ ಎರಡು ಶತಮಾನಗಳಿಂದ ಪಶ್ಚಿಮ ಬಂಗಾಳದಲ್ಲಿ ಒಳ್ಳೆಯದನ್ನು ಮಾಡುವುದಕ್ಕಿಂತ ಹೆಚ್ಚಾಗಿ ಕೇಡನ್ನೇ ಮಾಡಿದೆ. ಏಕೆಂದರೆ ಇದು ಹಳ್ಳಿಯ ಐಕ್ಯಸ್ವರೂಪನ್ನು ಹಾಳುಮಾಡಿದೆ. ವಾಸ್ತವವಾಗಿ ಹಳ್ಳಿಯ ಏಕತೆಯು ಪಕ್ಷದ ಏಕತೆಯಾಗಿ ಬದಲಾಗಿದೆ” (Acharya. ೨೦೦೨: ೭೯೪). ಹಾಗಾದರೆ ಇಂತಹ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿರಲು ಕಾರಣವೇನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ಮೊದಲು ಔಪಚಾರಿಕ ಪಂಚಾಯತ್ರಾಜ್ ಸಂಸ್ಥೆಗಳು ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿ ಗ್ರಾಮಗಳು ಹೇಗಿದ್ದವು ಎಂಬುದನ್ನು ತಿಳಿಯುವುದು ಅಗತ್ಯವಾಗುತ್ತದೆ.
ಕೆಲವು ಇತಿಹಾಸಕಾರರು ಸೂಚಿಸುವಂತೆ, ‘ಬ್ರಿಟಿಷ್ಪೂರ್ವ ಭಾರತದಲ್ಲಿ ಗ್ರಾಮಗಳು ಸುವ್ಯವಸ್ಥಿತವಾಗಿದ್ದವು. ಬ್ರಿಟಿಷರು ಭಾರತದಲ್ಲಿ ಆಡಳಿತ ಅಧಿಕಾರವನ್ನು ಹೊಂದುವುದಕ್ಕೆ ಪೂರ್ವದಲ್ಲಿ ಗ್ರಾಮಗಳ ನಿರ್ವಹಣೆಯು ಆ ಗ್ರಾಮಸ್ಥರ ಕೈಯಲ್ಲಿಯೇ ಇತ್ತು. ಆ ಸಂದರ್ಭದಲ್ಲಿನ ಗ್ರಾಮಗಳ ಆಡಳಿತ ವ್ಯವಸ್ಥೆ, ನೀರಾವರಿ ವ್ಯವಸ್ಥೆ, ನ್ಯಾಯದಾನ, ಹೀಗೆ ಗ್ರಾಮಗಳು ಉತ್ತಮ ನಿರ್ವಹಣೆಯಲ್ಲಿದ್ದವು ಎಂಬಂತಹ ಚಿತ್ರಣ ದೊರೆಯುತ್ತದೆ’ (Thaper. ೨೦೦೨: ೩೩೬, ೩೩೯). ‘ಗ್ರಾಮಗಳಲ್ಲಿನ ಜನರು ಕೊಡುಕೊಳ್ಳುವ ಸಂಬಂಧದ ಮೂಲಕ ಸಮತೋಲನವಿದ್ದ ಜೀವನಕ್ರಮವನ್ನು ನಡೆಸುತ್ತಿದ್ದರು’ (Dube. ೧೯೯೦: ೮೫). ಹಾಗಾದರೆ ಪಂಚಾಯತ್ರಾಜ್ ಸಂಸ್ಥೆಗಳು ಗ್ರಾಮಗಳ ಸ್ವಾವಲಂಬನೆಗೆ ಸಹಕರಿಸುವ ಬದಲು ಈಗಾಗಲೇ ಇದ್ದಂತಹ ಸ್ವಾವಲಂಬನೆಯನ್ನು ಹಾಳುಮಾಡಿವೆಯೇ? ಇಲ್ಲಿ ಮತ್ತೊಂದು ಅಂಶವೂ ಮುಖ್ಯವಾಗುತ್ತದೆ. ಗಾಂಧಿಯವರ ಸ್ವಾವಲಂಬಿ ಗ್ರಾಮದ ಪರಿಕಲ್ಪನೆಯು ಊಹೆಯಲ್ಲಿ ಜನ್ಮತಳೆದುದಲ್ಲ, ಬದಲಾಗಿ ಭಾರತೀಯ ಗ್ರಾಮಗಳಲ್ಲಿ ಇದ್ದಂತಹ ಜೀವನಕ್ರಮವೇ ಆಗಿದೆ ಎಂಬುದು. ಬ್ರಿಟಿಷ್ ಆಡಳಿತ ಅವಧಿಯಲ್ಲಿ ಈ ಸಂಸ್ಥೆಗಳಿಗೆ ಸಾಂಸ್ಥಿಕ ರೂಪವನ್ನು ನೀಡುವ ಪ್ರಯತ್ನಗಳು ಅವುಗಳ ವಿಘಟಣೆಗೆ ಕಾರಣವಾಗಿವೆ. ಹಾಗಾಗಿ, ಜನರು ಇಂತಹ ಔಪಚಾರಿಕ ಸಂಸ್ಥೆಗಳಿಂದ ದೂರ ಉಳಿಯಲು ಕಾರಣವಾಯಿತೆಂಬುದು ಗಾಂಧೀವಾದಿ ಚಿಂತಕರಾದ ಧರ್ಮಪಾಲ್ರ ವಿಶ್ಲೇಷಣೆ.
ಧರ್ಮಪಾಲ್ರ ಪರ್ಯಾಯ ನೋಟ
ಭಾರತದಲ್ಲಿನ ಸಾಂಪ್ರದಾಯಿಕ ಸ್ವಯಮಾಡಳಿತಕ್ಕೆ ಬದಲಾಗಿ ಬ್ರಿಟಿಷ್ ಆಡಳಿತ ವ್ಯವಸ್ಥೆಯನ್ನು ಅಳವಡಿಕೆ ಮಾಡಿಕೊಂಡಿದ್ದು ಸಮಸ್ಯೆಗಳಿಗೆ ಕಾರಣವಾಗಿದೆ ಎಂಬುದನ್ನು ಧರ್ಮಪಾಲ್ ಸ್ಪಷ್ಟವಾಗಿ ಉಲ್ಲೇಖಿಸುತ್ತಾರೆ. ಅವರು ಬ್ರಿಟಿಷ್ ಜೀವನಕ್ರಮಕ್ಕೂ ಭಾರತೀಯ ಜೀವನರೀತಿಗೂ ವ್ಯತ್ಯಾಸವಿರುವುದನ್ನು ಗುರುತಿಸುತ್ತಾರೆ. ಹಾಗೆಯೇ ನಮ್ಮ ಚಿಂತನೆಗಳಲ್ಲಿ ನಾವು ಬಳಸುವ ಪರಿಭಾಷೆಗಳು ಪಶ್ಚಿಮ ಪ್ರಣೀತವಾಗಿರುವುದರ ಕುರಿತು ಗಮನಸೆಳೆಯುತ್ತಾರೆ.
“ಈಗ ಮೊಟ್ಟಮೊದಲು ಆಗಬೇಕಾದ ಕಾರ್ಯವೆಂದರೆ ನಮ್ಮ ಚಿಂತನೆಯ ಪರಿಭಾಷೆಯೇ ಬದಲಾಗಬೇಕಾಗಿದೆ. ಕಳೆದ ಹಲವಾರು ದಶಕಗಳುದ್ದಕ್ಕೂ ಬೇರೆಯವರಾರೋ ಅವರ ಅನುಭವದ ಆಧಾರದ ಮೇಲೆ ರೂಪಿಸಿಕೊಂಡ ಪರಿಭಾಷೆಯಲ್ಲಿ ನಾವು ಸಂವಾದ ನಡೆಸುತ್ತ ಬಂದಿದ್ದೇವೆ. ಈ ಮೂಲಭೂತ ಸಮಸ್ಯೆ ಇರುವವರೆಗೆ ನಮ್ಮ ಚಿಂತನೆಗೆ ಸ್ಪಷ್ಟತೆ ಬರುವುದು ದುಸ್ತರ. ಶಬ್ದಗಳು ಒಂದೇ ಇದ್ದರೂ ಅವುಗಳ ಅರ್ಥದ ಹರವು ಬೇರೆ ಬೇರೆ ಸಮಾಜಗಳಲ್ಲಿ ಬೇರೆ ಬೇರೆ ಆಗಿರುತ್ತದೆ.” (ಧರ್ಮಪಾಲ್. ೧೯೯೬: ಪು. ಸಂ. xxviii.)
ಈ ಹೇಳಿಕೆಯು ನಮ್ಮ ದೇಶದ ಚಿಂತನೆಯನ್ನು ಭಾರತೀಕರಣಗೊಳಿಸುವುದರ ಕುರಿತು ಗಮನಸೆಳೆಯುತ್ತಲೇ, ಬ್ರಿಟಿಷ್ ಚಿಂತನೆ/ಆಳ್ವಿಕೆಯು ಸೃಷ್ಟಿಸಿದ ಅವಾಂತರಗಳ ಕುರಿತೂ ಮಾತನಾಡುತ್ತದೆ. ಅವರ ‘ಬ್ಯೂಟಿಫುಲ್ ಟ್ರೀ’ ಕೃತಿಯು ಭಾರತದಲ್ಲಿದ್ದ ಸಾಂಪ್ರದಾಯಿಕ ಶಿಕ್ಷಣ ಕ್ರಮವನ್ನೂ ಆಂಗ್ಲ ಶಿಕ್ಷಣ ಕ್ರಮವನ್ನೂ ಪರಿಚಯಿಸಿದ ಬಗೆಯನ್ನು ತಿಳಿಸುತ್ತದೆ. ಶಿಕ್ಷಣದ ಕುರಿತು ಈಗಿರುವ ಹಲವು ತಪ್ಪುಕಲ್ಪನೆಗಳನ್ನು ಮರುವಿಮರ್ಶೆಗೆ ಒಳಪಡಿಸುವ ಮಹತ್ತ್ವದ ಅಂಶಗಳನ್ನು ಆ ಕೃತಿಯು ನೀಡುತ್ತದೆ. ಅಂದರೆ ಭಾರತದಲ್ಲಿನ ಚಿಂತನೆಯ ಮೇಲೆ, ಶಿಕ್ಷಣದ ಮೇಲೆ ಬ್ರಿಟಿಷರು ಮಾಡಿರುವ ಹಾನಿಯನ್ನು ಗುರುತಿಸುತ್ತಾರೆ. ಮುಂದುವರಿದು, ಪಂಚಾಯತಿಗಳ ರಚನೆ ಮತ್ತು ಕಾರ್ಯವೈಖರಿಯಲ್ಲಾದ ಪಲ್ಲಟಗಳ ಕಡೆಗೆ ಅವರ ‘ಪಂಚಾಯತ್ರಾಜ್ ಅಂಡ್ ಇಂಡಿಯಾಸ್ ಪಾಲಿಟಿ’ ಎಂಬ ಸಂಪುಟದಲ್ಲಿ ಗಮನ ಸೆಳೆಯುತ್ತಾರೆ. ಆ ಕುರಿತ ಈ ಉಲ್ಲೇಖವನ್ನೊಮ್ಮೆ ಗಮನಿಸಿ:
“೧೭೫೦ರ ಸುಮಾರಿನಲ್ಲಿ ತೊಂದರೆಗೊಳಗಾದ ರಾಜಕೀಯ ಪರಿಸ್ಥಿತಿಗಳು ಮತ್ತು ಪರಿಣಾಮವಾಗಿ ದಬ್ಬಾಳಿಕೆಯ ಆಡಳಿತ ಆರಂಭಗೊಂಡು, ೧೭೫೦ರಿಂದ ೧೮೪೦ರ ವರೆಗಿನ ವರ್ಷಗಳು ಅಡ್ಡಿ-ಆತಂಕ ಮತ್ತು ಅವನತಿಯ ವರ್ಷಗಳಾಗಿದ್ದವು; ಮತ್ತು ಹೆಚ್ಚಿನ ಪ್ರದೇಶಗಳಲ್ಲಿ ಹಳ್ಳಿ ಪಂಚಾಯತಿ ವ್ಯವಸ್ಥೆಯು ಎಲ್ಲ ಪ್ರಾಯೋಗಿಕ ಉದ್ದೇಶಗಳಿಂದ ಕಣ್ಮರೆಯಾಯಿತು. ಎರಡು ಮುಖ್ಯ ಕಾರಣಗಳೆಂದರೆ, ಒಂದು, ಹಳ್ಳಿಯ ಕರ್ಣಂ, ಹಳ್ಳಿಯ ಭೂ ದಾಖಲೆಗಳು ಮತ್ತು ಹಳ್ಳಿಯ ಕಾವಲುಗಾರರನ್ನೂ ಒಳಗೊಂಡ ಎಲ್ಲ ಅಧಿಕಾರವನ್ನೂ ಹಾಗೂ ಅಲ್ಲಿನ ಒಟ್ಟಾರೆ ಆದಾಯವನ್ನೂ ಬ್ರಿಟಿಷ್ ಇಂಡಿಯಾದಲ್ಲಿ ತಮ್ಮ ನೇರ ನಿಯಂತ್ರಣಕ್ಕೆ ಪಡೆದುಕೊಂಡರು. ಕ್ರಮೇಣ ಬ್ರಿಟಿಷ್-ಅವಲಂಬಿತ ಸ್ಥಳೀಯ ಆಡಳಿತಗಾರರ ಪ್ರದೇಶಗಳಿಗೂ ಇದನ್ನು ವಿಸ್ತರಿಸಲಾಯಿತು. ಮತ್ತು ಎರಡನೆಯದು, ಭಾರತದ ಬಹುತೇಕ ಭಾಗಗಳಲ್ಲಿ ಮತ್ತು ಮದ್ರಾಸ್ ಪ್ರೆಸಿಡೆನ್ಸಿಯ ನಿಯಂತ್ರಣಕ್ಕೆ ಒಳಪಟ್ಟ ಎಲ್ಲ ಪ್ರದೇಶಗಳಲ್ಲಿನ ಒಟ್ಟು ಕೃಷಿ ಉತ್ಪನ್ನದ ಸುಮಾರು ೫೦ ಪ್ರತಿಶತದಷ್ಟು ಭೂ ತೆರಿಗೆಯನ್ನು ನಿರ್ಧರಿಸಿದುದು ಮತ್ತು ವಿಧಿಸಿದುದು (ಈಗ ಭೂ ಕಂದಾಯ ಎಂದು ಕರೆಯಲಾಗುತ್ತದೆ).
…ತೆರಿಗೆಯನ್ನು ನಿರ್ಧರಿಸಿದ ಮತ್ತು ವಿಧಿಸಿದ ಕೆಲವು ವರ್ಷಗಳ ನಂತರ, ಅಧಿಕೃತವಾಗಿ ನಿರ್ಧರಿಸಿದ ಸರಾಸರಿ ಬೆಲೆಗಳ ಆಧಾರದ ಮೇಲೆ ಭೂ ಆದಾಯವನ್ನು ಹಣದ ತೆರಿಗೆಯನ್ನಾಗಿ ಪರಿವರ್ತಿಸಲಾಗುತ್ತದೆ. ಇದು ದೇಶಾದ್ಯಂತ ಅಳವಡಿಸಲ್ಪಡುತ್ತದೆ. ಕೆಲವು ಕಡೆಗಳಲ್ಲಿ ಸ್ವಲ್ಪ ಬೇಗನೆ ಆದರೆ, ಮತ್ತೆ ಕೆಲವೆಡೆ ಸ್ವಲ್ಪ ತಡವಾಗಿ.” (Dharampal. ೨೦೦೦: ೨೫೩)
ಸಾಮುದಾಯಿಕವಾಗಿ ನಡೆಯುತ್ತಿದ್ದ ಹಳ್ಳಿಗಳ ನಿರ್ವಹಣೆಯು ಬ್ರಿಟಿಷ್ ಆಡಳಿತದಲ್ಲಿ ಕ್ರಮಬದ್ಧಗೊಳಿಸುವ ಮತ್ತು ಹೀಗೆ ಹೆಚ್ಚಿನ ತೆರಿಗೆಗೆ ಒಳಪಡಿಸುವ ಮೂಲಕ ಗ್ರಾಮಜೀವನದ ಮೇಲೆ ಮಾರಕವಾಗಿ ಪರಿಣಮಿಸಿತು. ಕೃಷಿಯ ಮೇಲೆ ದೊಡ್ಡ ಹೊಡೆತವನ್ನು ನೀಡುತ್ತದೆ. ಕೃಷಿ ಭಾರತದ ಜೀವಾಳವಾಗಿರುವಾಗ, ಇಂತಹ ಹೊಡೆತಗಳು ಇಲ್ಲಿನ ಆರ್ಥಿಕತೆಯ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತದೆ. ಬ್ರಿಟಿಷರು ತಮ್ಮ ಆಳ್ವಿಕೆಯ ಮೂಲಕ ಹಳ್ಳಿಗಳಿಗೆ ಇದ್ದ ಸ್ವಾಯತ್ತತೆಗೆ ಧಕ್ಕೆ ತರುವ ಪ್ರಯತ್ನವನ್ನು ನಡೆಸಿದರು. ಹಳ್ಳಿ ಸಮುದಾಯಗಳು ತಮ್ಮ ಅಗತ್ಯತೆಗಳನ್ನು ತಾವೇ ನಿರ್ವಹಿಸಿಕೊಂಡು ಹೋಗುತ್ತಿದ್ದ ಕ್ರಮವು ಕಣ್ಮರೆಯಾಗಲಾರಂಭಿಸಿತು. ಈ ಕುರಿತ ಧರ್ಮಪಾಲ್ರ ವಿಶ್ಲೇಷಣೆ ಹೀಗಿದೆ:
“ಪ್ರಾಚೀನ ಗ್ರಾಮ ವ್ಯವಸ್ಥೆಯು ಇಂತಹ ವಿನಾಶಕಾರಿ ಪ್ರಭಾವದ ಅಡಿಯಲ್ಲಿ ಕಣ್ಮರೆಯಾಯಿತು. ಇನ್ನೂ, ಹಳ್ಳಿಗಳಲ್ಲಿನ ಸಮುದಾಯಗಳ ಅವಶೇಷಗಳು ಪ್ರಸ್ತುತ (೨೦ನೇ) ಶತಮಾನದ ಆರಂಭದವರೆಗೂ ಇಲ್ಲಿ ಮತ್ತು ಅಲ್ಲಿ ಮುಂದುವರಿದಿವೆ. ಆದರೆ ಇವುಗಳು ೧೯೪೦ರ ಹೊತ್ತಿಗೆ ತಂಜಾವೂರು ಜಿಲ್ಲೆಯ ಉಳಿದ ಹಳ್ಳಿಗಳಲ್ಲಿಯೂ ಕಣ್ಮರೆಯಾಯಿತು. ಆದಾಗ್ಯೂ, ಸಮುದಾಯದ ಪರಿಕಲ್ಪನೆ ಮತ್ತು ಸೀಮಿತ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುವ ವಿಧಾನವನ್ನು ರಾಮನಾಡ್ ಮತ್ತು ಮಧುರೈನಂತಹ ಕೆಲವು ಪ್ರದೇಶಗಳಲ್ಲಿ ಈಗಲೂ ಗುರುತಿಸಬಹುದು. ಅಂದರೆ ಮಹಿಮಾಯಿ ಗುಂಪುಗಳ ರೂಪದಲ್ಲಿ ಮತ್ತು ವೈವಿಧ್ಯಮಯ ಜಾತಿ ಸಭೆಗಳ ರೂಪದಲ್ಲಿ ಮತ್ತು ಸ್ಥಳೀಯ ದೇವಾಲಯಗಳ ಸುತ್ತಲೂ ಹಳ್ಳಿಯ ಗುಂಪುಗಳ ರೂಪದಲ್ಲಿ ಇನ್ನೂ ಗುರುತಿಸಬಹುದಾಗಿದೆ. ಇತ್ತೀಚಿನ ಅಧ್ಯಯನದಿಂದ, ಅಂತಹ ಅಳಿದುಳಿದ ಸಮುದಾಯ ಸಂಸ್ಥೆಗಳ ಕಾರ್ಯಚಟುವಟಿಕೆಯ ವಿವರಣೆಯನ್ನು ಮುಂದೆ (ಅನುಬಂಧ ೫ರಲ್ಲಿ) ನೀಡಲಾಗಿದೆ.” (Dharmapal. ೨೦೦೦: ೨೫೪-೨೫೫)
ವ್ಯವಸ್ಥೆಯ ಪಲ್ಲಟ
ಈ ಉಲ್ಲೇಖವು ಸ್ಪಷ್ಟಪಡಿಸುವ ಕೆಲವು ಅಂಶಗಳನ್ನು ಗಮನಿಸುವುದಾದರೆ, ಹಳ್ಳಿಗಳು ಸ್ವತಃ ತಮ್ಮನ್ನು ನಿರ್ವಹಣೆಮಾಡಿಕೊಳ್ಳುವ ಕ್ರಮವು ಪ್ರಾಚೀನ ಕಾಲದಿಂದಲೂ ಇತ್ತು; ಹಳ್ಳಿ ಸಮುದಾಯಗಳು ತಮ್ಮದೇ ಆದ ವ್ಯವಸ್ಥೆಯ ಮೂಲಕ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು; ಬ್ರಿಟಿಷರ ಆಡಳಿತ ಕ್ರಮದ ಪರಿಣಾಮವಾಗಿ ಅವುಗಳು ಕ್ರಮೇಣ ಕಣ್ಮರೆಯಾದವು; ಆದರೂ, ಈಗಲೂ ಕೆಲವು ಪ್ರಮಾಣದಲ್ಲಿ ಹಾಗೂ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಅಂತಹ ವ್ಯವಸ್ಥೆಯನ್ನು ಕೆಲವು ಹಳ್ಳಿಗಳಲ್ಲಿ ಗುರುತಿಸುವ ಸಾಧ್ಯತೆಗಳಿವೆ.
ಬ್ರಿಟಿಷ್ಪೂರ್ವ ಗ್ರಾಮಗಳ ಸ್ವಾಯತ್ತತೆ ಕುರಿತು, “ಈ ಗ್ರಾಮೀಣ ಗಣರಾಜ್ಯವು ಎಲ್ಲ ರೀತಿಯ ಪ್ರಭುತ್ವವನ್ನು ಹೊಂದಿತ್ತಲ್ಲದೆ, ಸಂಪತ್ತನ್ನು ಸಂಗ್ರಹಿಸುವ ಮತ್ತು ಅದನ್ನು ಬಳಕೆ ಮಾಡುವ ಅಧಿಕಾರವನ್ನು ಹೊಂದಿತ್ತು” (ಧರ್ಮಪಾಲ್. ೨೦೧೫: ೭).
ನಂತರ ಬ್ರಿಟಿಷರ ಆಡಳಿತ ವ್ಯವಸ್ಥೆಯಿಂದಾಗಿ ಗ್ರಾಮ ವ್ಯವಸ್ಥೆಯಲ್ಲಾದಂತಹ ಪಲ್ಲಟವನ್ನು ಈ ರೀತಿಯಾಗಿ ಗುರುತಿಸುತ್ತಾರೆ:
“ಜಮೀನಿನ ಲೆಕ್ಕಪತ್ರ ಸಂಬಂಧಿ ಜನರನ್ನು ದಕ್ಷಿಣದಲ್ಲಿ ಕನಪಿಳ್ಳೆ (ಶಾನಭೋಗ) ಮತ್ತು ಉತ್ತರದಲ್ಲಿ ಲೇಖಪಾಲ, ಪಟವಾರಿ ಎಂದು ಕರೆಯಲಾಗುತ್ತಿತ್ತು. ಇದೇ ರೀತಿ ಊರಿನ ಸ್ತರದಲ್ಲಿ ಬಡಗಿ, ಕಮ್ಮಾರ, ಧೋಬಿ, ಬಟ್ಟೆಹೊಲೆಯುವವರು, ಗಾಯಕ ಮತ್ತಿತರ ಕರ್ಮಚಾರಿಗಳು, ಊರು ಮತ್ತು ನಗರಗಳಲ್ಲಿ ಮೊಹಲ್ಲಾ (ವಠಾರ)ಗಳಿಗೆ ಸಂಬಂಧಪಟ್ಟವರಾಗಿರುತ್ತಿದ್ದರು. ಊರಿನಲ್ಲಿ ಇವರೆಲ್ಲರಿಗೂ ಕೃಷಿ ಉತ್ಪಾದನೆಯಲ್ಲಿ ಭಾಗವಿರುತ್ತಿತ್ತು. ಆಂಗ್ಲ ಶಾಸನ ಬಂದೊಡನೆ ಸೇನೆ, ಪೊಲೀಸ್, ಶಾನುಭೋಗ, ಇತ್ಯಾದಿಯವರೆಲ್ಲರಿಗೂ ಆವರೆಗೆ ಸಿಗುತ್ತಿದ್ದುದು ನಿಂತುಹೋಯಿತು. ಏಕೆಂದರೆ ಬ್ರಿಟಿಷ್ ಸರ್ಕಾರವೇ ಕರದ ರೂಪದಲ್ಲಿ ಅದನ್ನು ವಸೂಲು ಮಾಡುತ್ತಿತ್ತು. ಅವರೆಲ್ಲರನ್ನು ವ್ಯವಸ್ಥೆಯಿಂದ ಬೇರ್ಪಡಿಸಲಾಯಿತು. ಇವರಲ್ಲಿ ಕೆಲವರನ್ನು ಬ್ರಿಟಿಷ್ ಸರ್ಕಾರ ತನ್ನ ನೌಕರರನ್ನಾಗಿ ಮಾಡಿಕೊಂಡಿತು. ಉಳಿದವರು ಕೆಲಸಕ್ಕೆ ಬಾರದವರಾಗಿಬಿಟ್ಟರು” (Dharmapal.. ೨೦೦೦: ೨೫೨).
ಬ್ರಿಟಿಷರ ಆಡಳಿತಾವಧಿಯಲ್ಲಿ ಶಾಸನವನ್ನು ಹೊರಡಿಸುವ ಮೂಲಕ ಕೆಲವರಿಗೆ ಮಾತ್ರ ತಮ್ಮ ಸರ್ಕಾರದಲ್ಲಿ ಉದ್ಯೋಗ ನೀಡಿದರು. ಉಳಿದವರು ತಮ್ಮ ಕೆಲಸಕ್ಕೆ ಸೂಕ್ತ ಪ್ರತಿಫಲ ದೊರೆಯದೆ ಇದ್ದುದರಿಂದ ಗ್ರಾಮಗಳಲ್ಲಿ ಅವರು ನಿರ್ವಹಿಸುತ್ತಿದ್ದಂಥ ಕಾರ್ಯಗಳಿಂದ ವಿಮುಖವಾದರು. ಈ ರೀತಿಯಾಗಿ ಹಳ್ಳಿಯ ಸಾಮುದಾಯಿಕ ಜೀವನದಲ್ಲಿದ್ದಂತಹ ಸಮತೋಲನಕ್ಕೆ ಬ್ರಿಟಿಷರ ಆಡಳಿತದ ನೀತಿಯು ಕೊಡಲಿ ಪೆಟ್ಟಾಯಿತು. ಅದೇ ರೀತಿ ಗ್ರಾಮೀಣ ನ್ಯಾಯ ವ್ಯವಸ್ಥೆಯಲ್ಲಿಯೂ ಬದಲಾವಣೆಗಳನ್ನು ತಂದರು.
“ಗ್ರಾಮೀಣ ಭಾರತದವರೆಂದಿಗೂ ಹೋರಾಟ ಮನೋಭಾವದವರಾಗಿರಲಿಲ್ಲ. ಹಾಗೆಯೇ ನ್ಯಾಯಾಲಯಗಳಿಗೆ ಹೋಗುವ ಚಾಳಿ ಕೂಡಾ ಇರಲಿಲ್ಲ. ಆಂಗ್ಲ ಶಾಸನವು ಅವರ ಜಮೀನನ್ನು ಕಸಿದುಕೊಂಡು, ಉದ್ಯೋಗಗಳನ್ನು, ಮನೆಯನ್ನು ಕಿತ್ತು ಬಿಸಾಡಿದರು. ಅವರಿಗೆ ನ್ಯಾಯಾಲಯಗಳ ಅಸತ್ಯದ ಜೊತೆ ದಾಖಲೆಗಳನ್ನು ಪಡೆಯುವುದು ಅವಶ್ಯವಾಯಿತು. ಆಂಗ್ಲರು ಸ್ಥಾಪಿಸಿದ ನ್ಯಾಯಾಲಯಗಳಲ್ಲಿ ಭಾರತೀಯರು ಅಸತ್ಯವನ್ನೇ ಹೇಳುವವರೆಂದು ನಂಬಲಾಯ್ತು. ಅವರಿಗೆ ಅಸತ್ಯ ಹೇಳುವುದನ್ನು ಅವರ ವಕೀಲರು, ಕೆಲಸಗಾರರು ಮತ್ತು ನ್ಯಾಯಾಲಯಗಳೇ ಕಲಿಸಿದವು…. ಆಂಗ್ಲರು ಎಷ್ಟು ಸಾಧ್ಯವೋ ಅಷ್ಟು ಭಾರತವನ್ನು ಅದುಮಿಟ್ಟರು. ಜನರಿಗೆ ಅಲ್ಲಾಡಲು, ಉಸಿರಾಡಲೂ ಅವಕಾಶ ನೀಡಲಿಲ್ಲ. ಭಯ, ಬಡತನ ಮತ್ತು ದಾರಿದ್ರö್ಯಗಳ ರಾಜ್ಯ ಹುಟ್ಟಿತು” (ಧರ್ಮಪಾಲ್. ೨೦೦೩: ೮೧).
ಈ ರೀತಿಯಾಗಿ ಬ್ರಿಟಿಷರ ಆಡಳಿತ ವ್ಯವಸ್ಥೆಯಿಂದ ಭಾರತೀಯ ಸಾಮುದಾಯಿಕ ಜೀವನದಲ್ಲಾದ ವೈಪರೀತ್ಯಗಳನ್ನು ವಿವರಿಸಿದ್ದಾರೆ. ಹಾಗೂ ಬ್ರಿಟಿಷ್ ಆಡಳಿತದ ಭಾಗವಾಗಿದ್ದಂತಹ ಔಪಚಾರಿಕ ಸಂಸ್ಥೆಗಳು ಗ್ರಾಮೀಣ ಜನಜೀವನದ ಮೇಲೆ ಬೀರಿದ ಪರಿಣಾಮಗಳನ್ನು ಸ್ಪಷ್ಟಪಡಿಸುತ್ತಾರೆ. ಮದ್ರಾಸ್ ಪಂಚಾಯತ್ ವ್ಯವಸ್ಥೆಯನ್ನು ಅಧ್ಯಯನಕ್ಕೆ ಒಳಪಡಿಸಿ ಲೋಪಗಳು ಮತ್ತು ಸರಿಪಡಿಸುವ ಮಾರ್ಗಗಳನ್ನು ವಿವರಿಸಿದ್ದಾರೆ.
ಔಪಚಾರಿಕ ಆಡಳಿತ ವಿಧಾನ
೧೮೦೦ರ ಸಂದರ್ಭದಲ್ಲಿ ಗ್ರಾಮಸೇವಕರು ಗ್ರಾಮದ ಎಲ್ಲ ದಾಖಲೆಗಳನ್ನು ಸಾಮುದಾಯಿಕ ಬದ್ಧತೆಯ ಆಧಾರದ ಮೇಲೆ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದರು (೨೫೨). ಬ್ರಿಟಿಷ್ ಆಡಳಿತ ಅವಧಿಯಲ್ಲಿ ಅವರಿಗೆ ದಾಖಲಾತಿ ನಿರ್ವಹಿಸುವ ಬಗ್ಗೆ ತರಬೇತಿ ನೀಡಲಾಯಿತು. ನಂತರ ಅವರು ಸಮುದಾಯದ ಅಗತ್ಯತೆಗಳನ್ನು ಆಲಿಸುವ ಬದಲು ಕೇವಲ ಅಂಕಿ ಅಂಶಗಳನ್ನು ದಾಖಲಿಸಿ ಸರ್ಕಾರಕ್ಕೆ ಒಪ್ಪಿಸುವ ಕೆಲಸ ಮಾತ್ರ ಮಾಡತೊಡಗಿದರು (೨೧೧). ಮುಖ್ಯ ಸೇವಕ ಆಗಲಿ ಗ್ರಾಮ ಸೇವಕ ಆಗಲಿ ಗ್ರಾಮೀಣ ಜನರೊಡನೆ ಈ ಮೊದಲು ಹೊಂದಿದ್ದ ಸಂಬಂಧ ಸ್ವರೂಪ ನಕಾರಾತ್ಮಕವಾಗಿ ಬದಲಾಗುತ್ತ ಬಂದಿತು (೨೧೨).
- ಭ್ರಷ್ಟಾಚಾರದಂತಹ ಸಮಸ್ಯೆಗಳು ಪಂಚಾಯತಿಯ ಆಂತರಿಕ ಅಂಶಗಳಲ್ಲ. ಎಲ್ಲಿಂದಲೂ ಸ್ವೀಕರಿಸಲಾದ ಆಡಳಿತದ ಭಾಗವಾಗಿ ಬಂದಂತಹವುಗಳಾಗಿವೆ(೨೩೬).
- ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯನ್ನು ಪ್ರಜಾಪ್ರಭುತ್ವದ ಆತ್ಮ ಎಂದು ಕರೆಯಲಾಗುತ್ತದೆ. ಆದರೆ ಇದು ಜಾತಿಭಾವನೆ ಮತ್ತು ಪಕ್ಷಪಾತತೆಯನ್ನು ಬೆಳೆಸುವ ಮೂಲಕ ಭಾರತೀಯ ಸಮಾಜವನ್ನು ಹಾಳುಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲೂ ವ್ಯಕ್ತಿಯ ಆಯ್ಕೆ ವ್ಯಕ್ತಿಗತವಾಗಿರುವುದಿಲ್ಲ. ಬದಲಾಗಿ ಆತನ ಗುಂಪಿನಿಂದ ಅವರ ಆಯ್ಕೆ ನಿರ್ಧಾರವಾಗುತ್ತದೆ.
- ಈ ಸಂಸ್ಥೆಗಳ ರಚನಾ ವಿಧಾನ, ಈ ಸಂಸ್ಥೆಗಳು ಹೆಚ್ಚಿನ ನಿಯಮ ಬದ್ಧತೆ ಹೊಂದಿದ್ದು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣವನ್ನು ಹೊಂದಿಲ್ಲ.
“ಭಾರತದಲ್ಲಿನ ಸಾಂಪ್ರದಾಯಿಕ ಸ್ವಯಮಾಡಳಿತಕ್ಕೆ ಬದಲಾಗಿ ಬ್ರಿಟಿಷ್ ಆಡಳಿತ ವ್ಯವಸ್ಥೆಯನ್ನು ಅಳವಡಿಕೆ ಮಾಡಿಕೊಂಡಿದ್ದು ಸಮಸ್ಯೆಗಳಿಗೆ ಕಾರಣವಾಗಿದೆ. ೧೮೦೦ರ ಹೊತ್ತಿಗೆ ಮದ್ರಾಸ್ ಪ್ರಾಂತದಲ್ಲಿ ಪಂಚಾಯತಿಗಳು ಗ್ರಾಮಮಟ್ಟದಿಂದಲೇ ಕೆಲಸ ಮಾಡುತ್ತಿದ್ದವು. ಅಂದರೆ ಅವು ಇಂದಿನ ಸರ್ಕಾರ ಮಾಡುವ ಬಹುತೇಕ ಕೆಲಸಗಳನ್ನು – ಅಂದರೆ ತೆರಿಗೆ ಸಂಗ್ರಹಣೆ, ಆದಾಯ ಕ್ರೋಡೀಕರಣ ಮತ್ತು ಸಾಮುದಾಯಿಕ ಸ್ವತ್ತು-ಸೇವೆಗಳ ನಿರ್ವಹಣೆ ಇತ್ಯಾದಿಗಳನ್ನು – ಸ್ಥಳೀಯ ನೆಲೆಯಲ್ಲಿ ದಕ್ಷತೆಯಿಂದಲೇ ನಡೆಸಿದ್ದವು. ಮೊದಮೊದಲು ಬ್ರಿಟಿಷ್ ಆಡಳಿತಗಾರರು ಇದನ್ನು ಮೆಚ್ಚಿ ಅಭ್ಯಾಸ ಮಾಡಿದರು; ಬಳಿಕ, ತಮ್ಮ ಆಡಳಿತದೊಳಗೂ ಈ ಮಾದರಿಗಳನ್ನು ಸೇರಿಸಿಕೊಳ್ಳುವ ಪ್ರಯೋಗ ಮಾಡಿದರು. ಆದರೆ ಕ್ರಮೇಣ, ಕೇಂದ್ರೀಕೃತ ಲಾಭವನ್ನೇ ಉದ್ದೇಶವಾಗಿಟ್ಟುಕೊಂಡು ಔದ್ಯಮಿಕ ಮನೋಭೂಮಿಕೆಯ ವಸಾಹತುಶಾಹಿ ಆಡಳಿತಕ್ಕೆ ಈ ಸ್ಥಳೀಯ ಸಂಸ್ಥೆಗಳು ಅಡಚಣೆಯಾಗಿ ಕಾಣಲಾರಂಭಿಸಿದವು; ಈ ಸಂಸ್ಥೆಗಳಿಗೂ ಜಿಲ್ಲೆ/ತಾಲೂಕು ಮಟ್ಟದ ಸರ್ಕಾರೀ ಆಡಳಿತಕ್ಕೂ ನಡುವೆ ಸಂಘರ್ಷಗಳು ಆರಂಭವಾದವು. ಆಗ ‘ನಿರ್ದೇಶನ’, ‘ನಿಯಂತ್ರಣ’ ಮತ್ತು ‘ತರಬೇತಿ’ ಎಂಬ ಇತ್ಯಾತ್ಮಕ ಹಣೆಪಟ್ಟಿ ಕಾರ್ಯಕ್ರಮಗಳ ಮೂಲಕವೇ ನಿಧಾನವಾಗಿ ಈ ಸಂಸ್ಥೆಗಳ ಸ್ವಾಯತ್ತತೆಯನ್ನು ನಾಶಗೊಳಿಸುತ್ತ ಹೋಗಲಾಯಿತು.
ಪರಿಣಾಮವಾಗಿ ಎರಡು ಪ್ರಮುಖ ಪಲ್ಲಟಗಳು ಸಂಭವಿಸಿದವು – ಒಂದು, ದೇಶದ ಯಾವುದೇ ಮೂಲೆಯ ಯಾವುದೇ ಸಾರ್ವಜನಿಕ ಕೆಲಸವೂ ಸರ್ಕಾರೀ ಹಸ್ತಕ್ಷೇಪ ಮತ್ತು ನಿಯಂತ್ರಣವಿಲ್ಲದೆ ನಡೆಯದಂತಾಯಿತು. ಎರಡು, ಇಂಥ ಕೆಲಸಗಳಲ್ಲಿ ಸಾಮುದಾಯಿಕ ಸಹಭಾಗಿತ್ವವು ಕ್ಷೀಣಿಸುತ್ತ ಹೋಯಿತು. ಆದರ ಫಲವಾಗಿ, ಭಾರತಕ್ಕೆ ಸ್ವಾತಂತ್ರ್ಯ ಬರುವ ವೇಳೆಗಾಗಲೇ ಸರ್ಕಾರವೆಂಬುದು ಜನರ ಸಂಸ್ಥೆಯೆಂಬ ಭಾವನೆಯೇ ನಶಿಸಿ, ಬಹುತೇಕರು ಅದಕ್ಕೂ ತಮಗೂ ಸಂಬಂಧವಿಲ್ಲ, ಅದು ‘ಅನ್ಯ’ ಸಂಸ್ಥೆಯೆಂದು ಭಾವಿಸುವ ಮನೋವಿಕಲ್ಪಕ್ಕೆ ಕಾರಣವಾಯಿತು.”
ನಾವಿನ್ನೂ ಕ್ರಮಿಸಬೇಕಿರುವುದು…
ಧರ್ಮಪಾಲರು ಯಾವುದೋ ಊಹಾಪೋಹಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸದೆ, ಸೂಕ್ತ ಮಾಹಿತಿಗಳನ್ನು ಪ್ರಚುರಪಡಿಸಿಯೇ ವಾದವನ್ನು ಮಂಡಿಸಿದ್ದಾರೆ. ದಕ್ಷಿಣ ಭಾರತವನ್ನು ಮುಖ್ಯವಾಗಿ ಅಧ್ಯಯನಕ್ಕೆ ಒಳಪಡಿಸುತ್ತಾರೆ. ಪ್ರಮುಖವಾಗಿ ಮದ್ರಾಸ್ ಮತ್ತಿತರ ದಕ್ಷಿಣ ಭಾರತದ ಪ್ರಾಂತಗಳಲ್ಲಿನ ಹಳ್ಳಿಗಳನ್ನು ಮತ್ತು ಆಧುನಿಕ ಪಂಚಾಯತ್ ವ್ಯವಸ್ಥೆಯ ರಚನೆ ಮತ್ತು ಕಾರ್ಯಸ್ವರೂಪವನ್ನು ಕ್ಷೇತ್ರಕಾರ್ಯದ ಮೂಲಕ ಅಧ್ಯಯನಕ್ಕೊಳಪಡಿಸಿ ನೀಡಿದ ವಿವರಣೆಗಳಾಗಿವೆ. ಇಂತಹ ಅಧ್ಯಯನಗಳನ್ನು ಮುಂದೆ ಕೊಂಡೊಯ್ಯುವುದು ಸದ್ಯದ ಜರೂರು.
ಧರ್ಮಪಾಲರು ಶಿಕ್ಷಣದ ಕುರಿತು ನೀಡುವ ಒಳನೋಟಗಳಿರಬಹುದು, ನಮ್ಮ ಚಿಂತನಾ ಕ್ರಮದಲ್ಲಾಗಿರುವ ಪಲ್ಲಟಗಳಿರಬಹುದು, ಹಾಗೂ ಹಳ್ಳಿಗಳು ಅಥವಾ ಗ್ರಾಮಗಳ ಕಾರ್ಯ ನಿರ್ವಹಣೆಯಲ್ಲಾದ ಬದಲಾವಣೆಗಳೇ ಇರಬಹುದು – ಅತ್ಯಂತ ಮಹತ್ತ್ವದ ವಿವರಣೆಗಳಾಗಿವೆ. ಏಕೆಂದರೆ, ಮೊದಲನೆಯದಾಗಿ, ಭಾರತದ ಹಳ್ಳಿಗಳ ಕುರಿತ ನಕಾರಾತ್ಮಕ ಚಿತ್ರಣಗಳು ಈಗಾಗಲೇ ಸತ್ಯದ ಪಟ್ಟವನ್ನು ಅಲಂಕರಿಸಿ ಹಲವು ಶತಮಾನಗಳೇ ಕಳೆದಿವೆ. ಆದರೆ ಧರ್ಮಪಾಲರು ಗುರುತಿಸುವ ಈ ಅಂಶಗಳು ವಸಾಹತುಪೂರ್ವ ಭಾರತೀಯ ಹಳ್ಳಿಗಳ ಕುರಿತು ಇದುವರೆಗೂ ಇದ್ದಂತಹ ನಕಾರಾತ್ಮಕ ಚಿತ್ರಣಕ್ಕೆ ಸವಾಲಾಗಿ ಪರಿಣಮಿಸುತ್ತವೆ. ಹಳ್ಳಿಗಳು ಅತ್ಯಂತ ಕ್ರೂರ ಮತ್ತು ಶೋಷಣೆಯ ಕೂಪಗಳಾಗಿದ್ದು, ಅಲ್ಲಿನ ಜನರು ತುಂಬಾ ಅಸ್ತವ್ಯಸ್ತವಾಗಿ ಜೀವನವನ್ನು ಸಾಗಿಸುತ್ತಿದ್ದರು ಎಂಬ ಓರಿಯೆಂಟಲ್ ನಿರೂಪಣೆಗಳನ್ನು ಪ್ರಶ್ನಿಸುತ್ತವೆ. ಆ ಮೂಲಕ ಭಾರತೀಯ ಹಳ್ಳಿಗಳ ಕುರಿತು, ಇಲ್ಲಿನ ಜನರು ಮತ್ತು ಆಚರಣೆ ನಡವಳಿಕೆ ಬಗೆಗಿನ ತಪ್ಪು ಚಿತ್ರಣಗಳನ್ನು ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸುವ ಅಗತ್ಯವನ್ನು ಇವರ ಚಿಂತನೆಗಳು ಒತ್ತಿ ಹೇಳುತ್ತವೆ.
ಎರಡನೆಯದಾಗಿ, ಭಾರತೀಯ ಸಮಾಜವಿಜ್ಞಾನ ಚಿಂತನೆಯು ಸಂಪೂರ್ಣ ಪಶ್ಚಿಮಪ್ರಣೀತವಾಗಿರುವುದರ ಕುರಿತು ಹಲವು ಚಿಂತಕರು ನಮ್ಮ ಗಮನವನ್ನು ಈಗಾಗಲೇ ಸೆಳೆದಿದ್ದಾರೆ. ಹಾಗಾಗಿಯೇ ಅವುಗಳನ್ನು ನಿರ್ವಸಾಹತೀಕರಣಗೊಳಿಸುವ ಪ್ರಕ್ರಿಯೆಗೆ ನಾಂದಿಹಾಡಲಾಗಿದೆ. ಆದರೆ ಆ ದಿಕ್ಕಿನಲ್ಲಿ ನಿರೀಕ್ಷಿತ ಯಶಸ್ಸು ಇನ್ನೂ ದೊರಕದಿರುವುದು ಅಷ್ಟೇ ನಿಜ. ಧರ್ಮಪಾಲರ ಒಳನೋಟಗಳು ಆ ದಿಕ್ಕಿನಲ್ಲಿ ಇನ್ನಷ್ಟು ಕ್ರಮಿಸಲು ದಾರಿದೀಪವಾಗಲಿದೆ.
ಮೂರನೆಯದಾಗಿ, ಪಂಚಾಯತಿಗಳಲ್ಲಿ ಸುಧಾರಣೆಗಳನ್ನು ತರುವ ಕ್ರಮಗಳು ಆಗಾಗ್ಗೆ ಜರುಗುವುದನ್ನು ನೋಡುತ್ತೇವೆ. ಅಲ್ಲದೆ ಅದರ ಅಗತ್ಯತೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಹಲವಾರು ಅಧ್ಯಯನಗಳು, ಸಮಿತಿಗಳು ಸಲಹೆಗಳನ್ನು ನೀಡಿವೆ. ಆದರೆ ಪಂಚಾಯತ್ ಸಂಸ್ಥೆಯ ರಚನೆ ಮತ್ತು ಕಾರ್ಯಕ್ಕಿಂತ ಜನರ ಮಿತಿಗಳನ್ನು ಗುರುತಿಸುವುದರಲ್ಲಿ ಅವು ಯಶಸ್ವಿಯಾಗಿವೆ. ಆದರೆ ಧರ್ಮಪಾಲರ ವಿಚಾರಗಳು ಈ ಔಪಚಾರಿಕ ಸಂಸ್ಥೆಗಳ ಮಿತಿಗಳ ಕುರಿತು ಹೆಚ್ಚು ಒತ್ತು ಕೊಡುತ್ತವೆ. ಅಲ್ಲದೆ ಈ ಐರೋಪ್ಯ ಸ್ವರೂಪದ ಸಾಂಸ್ಥಿಕತೆಯೇ ಜನರಲ್ಲಿ ಪರಕೀಯ ಭಾವನೆ ಹುಟ್ಟಲು ಕಾರಣವಾಗಿದೆ ಎಂದು ಸಾಬೀತು ಮಾಡುತ್ತಾರೆ. ಹಾಗಾಗಿ ಆಧುನಿಕ ಸರ್ಕಾರೀ ಸಂಸ್ಥೆಗಳ ಮಿತಿಗಳ ಕುರಿತು ಕ್ರಮಬದ್ಧವಾಗಿ ಯೋಚಿಸುವ ಸಾಧ್ಯತೆಯನ್ನು ನಮ್ಮ ಮುಂದಿಟ್ಟಿದೆ.
ಉಪಸಂಹಾರ
ಪಂಚಾಯತಿ ವ್ಯವಸ್ಥೆಯು ಜನಸಮುದಾಯದ ಅಭಿವೃದ್ಧಿಗಿರುವ ಬಹುಮುಖ್ಯ ಸಾಧನವೆಂಬ ನಿಲವು ಸರ್ವೇಸಾಮಾನ್ಯವಾಗಿದೆ. ಆದ್ದರಿಂದ ಜನರ ಜೀವನ ಸುಧಾರಣೆಯಲ್ಲಿ ಅವುಗಳ ಪಾತ್ರ ತುಂಬಾ ಹಿರಿದಾದುದು ಎಂದು ಭಾವಿಸಲಾಗಿದೆ. ಆದರೆ ಅವುಗಳು ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಈಗ ಉಪಯುಕ್ತವಾಗಿಲ್ಲದಿರುವುದು ಅಧ್ಯಯನಗಳಿಂದ ವೇದ್ಯವಾಗಿದೆ. ಅದಕ್ಕೆಲ್ಲ ಇಲ್ಲಿನ ಜನರನ್ನೇ ಹೊಣೆಗಾರರನ್ನಾಗಿಸುವುದು ಸರ್ವೇಸಾಮಾನ್ಯವಾದ ಸಂಗತಿ. ಆದರೆ ಧರ್ಮಪಾಲರ ವಿಚಾರಗಳು ಜನರನ್ನು ಆರೋಪಮುಕ್ತಗೊಳಿಸಿ, ಆಲೋಚನೆಯ ದಿಕ್ಕನ್ನು ಬದಲಾಯಿಸುತ್ತದೆ. ಇಲ್ಲಿನ ಜನರು ಸಾಂಪ್ರದಾಯಿಕವಾಗಿ ತಮ್ಮದೇ ರೀತಿಯ ಗ್ರಾಮನಿರ್ವಹಣೆಯ ಕೌಶಲ್ಯಗಳನ್ನು ಹೊಂದಿದ್ದರು. ಇಲ್ಲಿನ ಪ್ರಾಯೋಗಿಕ ಜ್ಞಾನದ ಮೂಲಕ ಆಯಾ ಹಳ್ಳಿಗಳು ಆ ಕೌಶಲಗಳನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಅಗತ್ಯ, ಸೂಕ್ತ ಬದಲಾವಣೆಗಳೊಂದಿಗೆ ದಾಟಿಸಿಕೊಂಡು ಬಂದಿವೆ. ಆ ಕೌಶಲಗಳ ಮೂಲಕ ಆಯಾ ಹಳ್ಳಿಗಳ ಅಗತ್ಯಗಳನ್ನು ತಾವೇ ಈಡೇರಿಸಿಕೊಳ್ಳುತ್ತಿದ್ದರು. ಆದರೆ ಬ್ರಿಟಿಷ್ ಆಡಳಿತವು ತಂದ ಪಲ್ಲಟವು ಭಾರತೀಯ ಜೀವನ ಕ್ರಮಕ್ಕೆ ತೀರಾ ಭಿನ್ನವಾಗಿದ್ದು, ಹಲವು ಹೊಸ ಸಮಸ್ಯೆಗಳಿಗೆ ಕಾರಣವಾಯಿತು, ಭ್ರಷ್ಟಾಚಾರ, ಜಾತೀಯತೆ, ಸ್ವಜನಪಕ್ಷಪಾತದಂತಹ ಸಮಸ್ಯೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಯಿತು ಎಂಬುದನ್ನು ತೋರಿಸುತ್ತಾರೆ. ಈ ನಿಟ್ಟಿನಲ್ಲಿ ಇನ್ನೂ ಸಾಗಬೇಕಿದೆ. ಹಳ್ಳಿಗಳು ಕಾಯ್ದೆ ಕಾನೂನುಗಳ ಅನುಪಸ್ಥಿತಿಯಲ್ಲಿ ಹೇಗೆ ಕ್ರಮಬದ್ಧವಾಗಿ ಗ್ರಾಮನಿರ್ವಹಣೆಯಲ್ಲಿ ತೊಡಗಿದ್ದವು ಎಂಬುದನ್ನು ಇನ್ನೂ ಸೈದ್ಧಾಂತೀಕರಿಸಬೇಕಿದೆ. ಆ ಜವಾಬ್ದಾರಿಯನ್ನು ನಾವು ತೆಗೆದುಕೊಂಡರೆ, ಭವ್ಯ ಭಾರತದ ಕನಸು ನನಸಾಗಲಿದೆ.
ಪರಾಮರ್ಶನ ಗ್ರಂಥಗಳು:
- ಧರ್ಮಪಾಲ್. ೨೦೦೩. ಸ್ವದೇಶೀ ಮತ್ತು ಭಾರತೀಯತೆ. ಚಕ್ರವರ್ತಿ(ಅನು). ಬೆಂಗಳೂರು: ಸ್ವರಾಜ್ಯ ಪ್ರಕಾಶನ
- ಗಾಂಧಿ, ಎಂ. ಕೆ. ೨೦೦೧. ಮಹಾತ್ಮ ಗಾಂಧಿಯವರ ಆಯ್ದ ಕೃತಿಗಳು. ಸಂಪುಟ-೧.೩.೫. ಎಸ್. ವಿ. ಕೃಷ್ಣಮೂರ್ತಿರಾವ್ (ಅನು).
ಅಹಮದಾಬಾದ್: ನವಜೀವನ ಪ್ರಕಾಶನ ಮಂದಿರ.
- brief study on the functioning of Local Self-Government. 2008:20
Baxi, Upendra and Marc Galanter.1979. “Panchayat Justice: An Indian Experiment in Legal Access”. M. Cappelleti (ed). Access to Justice (1979). - Census of India. 2011. Provisional Population Tables. Paper 2. [Karnataka. Series 30]. Vol. 1. New Delhi: Government of India.
- Craig Johnson, Feb 2003, Decentralisation in India: Poverty, Politics and Panchayt Raj. London: Overseas Development Institute.
- Desai A.R. 1948. Social Background of Indian Nationalism. Delhi: Tarun Enterprises,
Development Goals and Policies, Governament of India, Vol-1:214
Dharampal, 2000. Panchayat Raj and India’s Polity. Goa: Other India Press.
Dube S.C. 1990. Indian Society. India: National Book Trust.
Dutt R. C. 1902, The Economic History of India, vol-1, Great Britain: Kegan Paul Trench Tribune. 129.
Kumar Praveen, 2014, (feb) Kurukshetra, A Journal on Rural Development, Publications Division Ministry Of Information & broadcasting Government of India. 20 - Majumdar, A. K. 1997, Decentralisation of Power Politics in India, New Delhi: Radha Publications.
Sethy, Harihar. 2010. “Effectiveness of Panchayt Raj Systems, Problems and National Declaration. 171 - Surie Mandakini Devasher. 2010. “Decentralisation – The Path to Inclusive Governance” Accountability Initiative, Centre for Policy Research, Dharam Marg, Chanakyapuri. New Delhi.
Thapar Romila. 2002. Early India from the Origins to AD 1300. Penguin Group. England. - Vijayalakshmi V, “Accountability and Governance: Local Government in Kerala and Karnataka”, Institute for Social and Econimic Change, Bangalore.