ಭಾರತದಲ್ಲಿ ಶೈಕ್ಷಣಿಕ ವ್ಯವಸ್ಥೆಯೇ ಇರಲಿಲ್ಲ, ಇದ್ದರೂ ಅದು ಕೇವಲ ಮೇಲ್ಜಾತಿಯ ಸಮುದಾಯಗಳಿಗೆ ಮಾತ್ರ ಸೀಮಿತವಾಗಿತ್ತು, ಸಮಾಜದ ಎಲ್ಲರಿಗೂ ಅದು ಲಭ್ಯವಿರಲಿಲ್ಲ ಎಂಬ ಜನಪ್ರಿಯ ಹೇಳಿಕೆ ಎಲ್ಲ ಕಡೆಗೂ ಈಗಲೂ ಪ್ರಚಲಿತವಾಗಿದೆ. ೧೯ನೆಯ ಶತಮಾನದ ಉತ್ತರಾರ್ಧ ಮತ್ತು ೨೦ನೆಯ ಶತಮಾನದ ಉದ್ದಗಲಕ್ಕೆ ಈ ಮಾತು ಮತ್ತೆ ಮತ್ತೆ ಕೇಳಿಬರುತ್ತಿತ್ತು. ಇಂದಿಗೂ ಈ ಮಾತನ್ನು ಆಗಾಗ ಉಲ್ಲೇಖಿಸಲಾಗುತ್ತದೆ. ಜೊತೆಗೆ ಬ್ರಿಟಿಷ್ ಆಡಳಿತವು ಭಾರತಕ್ಕೆ ವಸಾಹತು ರೂಪದಲ್ಲಿ ಬಂದುದರಿಂದ ನಮ್ಮ ದೇಶಕ್ಕೆ ಕೆಡುಕಾದಂತೆ ಒಳ್ಳೆಯದು ಕೂಡ ಆಗಿದೆ, ಇದರಲ್ಲಿ ಸಾರ್ವಜನಿಕವಾಗಿ ಶಿಕ್ಷಣ ಲಭಿಸುವಂತಾದುದು ಕೂಡ ಒಂದಾಗಿದೆ ಎಂದು ಹೇಳಲಾಗುತ್ತದೆ.
ಭಾರತದಲ್ಲಿ ಕನಿಷ್ಠಪಕ್ಷ ಕಳೆದ ಒಂದು ಶತಮಾನದಿಂದ ಅನೇಕ ವಿಷಯಗಳನ್ನು ಕುರಿತು ಪರ-ವಿರೋಧ ಚರ್ಚೆಗಳಾಗಿವೆ. ಇದರಲ್ಲಿ ಭಾರತದಲ್ಲಿ ಸಾಂಪ್ರದಾಯಿಕ ಶಿಕ್ಷಣ ಕುರಿತ ಚರ್ಚೆ ಕೂಡ ಸೇರಿದೆ. ಇದಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿ ಅವರು ಬ್ರಿಟಿಷರೊಡನೆ ಸಂವಾದದ ಸಂದರ್ಭದಲ್ಲಿ ಭಾರತದಲ್ಲಿ ಸಾಂಪ್ರದಾಯಿಕ ಶಿಕ್ಷಣ ಉತ್ತಮವಾಗಿತ್ತೆಂದು ಹೇಳಿದ್ದಕ್ಕೆ ೨೦ನೆಯ ಶತಮಾನದ ಆರಂಭದ ದಶಕಗಳಲ್ಲಿ ತೀವ್ರವಾದ ಪರ-ವಿರೋಧ ಚರ್ಚೆಗಳು ನಡೆದವು. ಆದರೆ ಗಾಂಧಿಯವರು ತಮ್ಮ ಮಾತಿಗೆ ಪೂರಕವಾದ ಅಂಕಿ-ಅಂಶಗಳನ್ನು ಮತ್ತು ದಾಖಲೆಗಳನ್ನು ನೀಡಿ ತಮ್ಮ ಮಾತನ್ನು ಪ್ರಬಲವಾಗಿ ಪ್ರತಿಪಾದಿಸಲಿಲ್ಲ. ಆದರೆ ಪ್ರಬಲ ಗಾಂಧಿವಾದಿಯಾಗಿದ್ದ ಧರ್ಮಪಾಲ್ ಅವರು ಅನಂತರದ ವರ್ಷಗಳಲ್ಲಿ ಈ ಕೆಲಸವನ್ನು ಯಶಸ್ವಿಯಾಗಿ ಮಾಡಿದರು. ಬ್ರಿಟಿಷರು ಭಾರತೀಯ ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಕುರಿತು ನಡೆಸಿದ ಅಧ್ಯಯನಗಳನ್ನು ಮತ್ತು ಬ್ರಿಟಿಷರು ನೀಡಿದ್ದ ಅಂಕಿ-ಅಂಶಗಳನ್ನು ವ್ಯಾಪಕವಾಗಿ ಶ್ರಮಪೂರ್ವಕ ಸಂಗ್ರಹಿಸಿ ಅದನ್ನು ತಮ್ಮ ‘ದಿ ಬ್ಯೂಟಿಫುಲ್ ಟ್ರೀ’ ಗ್ರಂಥದಲ್ಲಿ (೧೯೮೩) ವಿಸ್ತಾರವಾಗಿ ತಿಳಿಸಿದ್ದಾರೆ.
ಭಾರತದಲ್ಲಿ ಶೈಕ್ಷಣಿಕ ವ್ಯವಸ್ಥೆಯೇ ಇರಲಿಲ್ಲ, ಇದ್ದರೂ ಅದು ಕೇವಲ ಮೇಲ್ಜಾತಿಯ ಸಮುದಾಯಗಳಿಗೆ ಮಾತ್ರ ಸೀಮಿತವಾಗಿತ್ತು, ಸಮಾಜದ ಎಲ್ಲರಿಗೂ ಅದು ಲಭ್ಯವಿರಲಿಲ್ಲ ಎಂಬ ಜನಪ್ರಿಯ ಹೇಳಿಕೆ ಎಲ್ಲ ಕಡೆಗೂ ಈಗಲೂ ಪ್ರಚಲಿತವಾಗಿದೆ. ೧೯ನೆಯ ಶತಮಾನದ ಉತ್ತರಾರ್ಧ ಮತ್ತು ೨೦ನೆಯ ಶತಮಾನದ ಉದ್ದಗಲಕ್ಕೆ ಈ ಮಾತು ಮತ್ತೆ ಮತ್ತೆ ಕೇಳಿ ಬರುತ್ತಿತ್ತು. ಇಂದಿಗೂ ಈ ಮಾತನ್ನು ಆಗಾಗ ಉಲ್ಲೇಖಿಸಲಾಗುತ್ತದೆ. ಜೊತೆಗೆ ಬ್ರಿಟಿಷ್ ಆಡಳಿತ ಭಾರತಕ್ಕೆ ವಸಾಹತು ರೂಪದಲ್ಲಿ ಬಂದುದರಿಂದ ನಮ್ಮ ದೇಶಕ್ಕೆ ಕೆಡುಕಾದಂತೆ ಒಳ್ಳೆಯದು ಕೂಡ ಆಗಿದೆ, ಇದರಲ್ಲಿ ಸಾರ್ವಜನಿಕವಾಗಿ ಶಿಕ್ಷಣ ಲಭಿಸುವಂತಾದುದು ಕೂಡ ಒಂದಾಗಿದೆ ಎಂದು ಹೇಳಲಾಗುತ್ತದೆ. ಕನ್ನಡದಲ್ಲೇ ನೋಡುವುದಾದರೆ ಕುವೆಂಪು ಅವರಂಥ ಲೇಖಕರು ಬ್ರಿಟಿಷರು ಭಾರತಕ್ಕೆ ಬಂದು ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಮಾಡದಿದ್ದರೆ ನಾನು ಅದೆಲ್ಲೋ ದನ-ಕುರಿ ಮೇಯಿಸಿಕೊಂಡು ಇರಬೇಕಾಗುತ್ತಿತ್ತು ಎಂದು ಹೇಳಿದ್ದನ್ನು ಅನೇಕರು ಉಲ್ಲೇಖಿಸುತ್ತಾ ಬಂದು ತಮಗೂ ಈ ಮಾತು ಅನ್ವಯ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದೇ ಬ್ರಿಟಿಷ್ ಅಧಿಕಾರಿಗಳು ತಾವು ಬರುವುದಕ್ಕಿಂತ ಮುಂಚೆ ಮತ್ತು ಬಂದ ಸಂದರ್ಭದಲ್ಲಿ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಸಾಂಪ್ರದಾಯಿಕ ರೀತಿಯಲ್ಲಿ ಹೇಗಿತ್ತು, ಅದರ ಪಠ್ಯಗಳು ಹೇಗಿದ್ದವು, ಯಾವೆಲ್ಲ ಜಾತಿ-ವರ್ಗದ ಎಷ್ಟೆಷ್ಟು ವಿದ್ಯಾರ್ಥಿಗಳು ಏನೆಲ್ಲ ಕಲಿಯುತ್ತಿದ್ದರು ಎಂಬುದನ್ನು ಅಂಕಿ-ಅಂಶ ಸಹಿತ ದೇಶಾದ್ಯಂತ ಪ್ರಾಂತವಾರು ರೀತಿಯಲ್ಲಿ ದಾಖಲೆ ಮಾಡಿ ಇಟ್ಟಿದ್ದಾರೆ. ಈ ಅಂಕಿ-ಅಂಶಗಳು ಭಾರತದ ಶೈಕ್ಷಣಿಕ ವ್ಯವಸ್ಥೆ ಈಗಾಗಲೇ ಉಲ್ಲೇಖಿಸಿದ ಜನಪ್ರಿಯ ಹೇಳಿಕೆಗೆ ಪೂರ್ಣ ವಿರುದ್ಧವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಅಂಕಿ-ಅಂಶಗಳ ದಾಖಲೆಗಳು ಲಂಡನ್ ಮತ್ತು ಯೂರೋಪಿನ ಅನೇಕ ಕಡೆ ಹಂಚಿಹೋಗಿದ್ದವು. ಇವುಗಳನ್ನು ಒಂದು ಕಡೆ ಸಂಗ್ರಹಿಸಿ ಧರ್ಮಪಾಲ್ ಅವರು ‘ದಿ ಬ್ಯೂಟಿಪುಲ್ ಟ್ರೀ’ ಕೃತಿಯಲ್ಲಿ ಸಾಧಾರವಾಗಿ ತೋರಿಸಿಕೊಟ್ಟಿದ್ದಾರೆ. ಈ ಕೃತಿಯನ್ನು ಓದಿದರೆ ಭಾರತದ ಸಾಂಪ್ರದಾಯಿಕ ಶಿಕ್ಷಣ ಯಾವ ರೀತಿಯಲ್ಲಿತ್ತು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಭೌಗೋಳಿಕವಾಗಿ
ಸ್ವತಃ ಬ್ರಿಟಿಷ್ ಅಧಿಕಾರಿಗಳೇ ಸರ್ವೇಕ್ಷಣೆ ನಡೆಸಿ ಕಷ್ಟಪಟ್ಟು ಸಂಗ್ರಹಿಸಿದ್ದ ಈ ಮಾಹಿತಿಗೆ ವಿರುದ್ಧವಾಗಿ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣವೇ ಇರಲಿಲ್ಲವೆಂದೂ ಅದನ್ನು ತಾವೇ ಭಾರತಕ್ಕೆ ಪರಿಚಯಿಸಿದೆವು ಎಂದೂ ಏಕೆ ಹೇಳಿಕೊಂಡು ಅದನ್ನೇ ಈ ದೇಶದಲ್ಲಿ ಸ್ಥಾಪಿಸಿದರು ಎಂಬುದು ಅರ್ಥವಾಗದ ಸಂಗತಿ ಏನೂ ಅಲ್ಲ. ಏಕೆಂದರೆ ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾಗಿ ತಮ್ಮದೇ ಶಿಕ್ಷಣ ಕ್ರಮವನ್ನು ಭಾರತಕ್ಕೆ ಪರಿಚಯಿಸಿದರು, ಹಾಗೂ ಭಾರತೀಯ ಸಾಂಪ್ರದಾಯಿಕ ಶಿಕ್ಷಣ ಕ್ರಮ ಅವರಿಗೆ ಅರ್ಥವಾಗಲಿಲ್ಲ. ತಮ್ಮ ಆಡಳಿತ ಈ ದೇಶದಲ್ಲಿ ಬೇರೂರಬೇಕೆಂದರೆ ನಮ್ಮದೇ ಶಿಕ್ಷಣ ಕ್ರಮ, ಭಾಷೆ, ರಿಲಿಜನ್ ಮತ್ತು ವ್ಯವಸ್ಥೆಗಳನ್ನು ಹಾಗೂ ಪಠ್ಯಕ್ರಮಗಳನ್ನು ಇಲ್ಲಿ ಪರಿಚಯಿಸಬೇಕೆಂದು ಮೆಕಾಲೆ ಮುಂತಾದ ಆಡಳಿತಗಾರರು ಅಭಿಪ್ರಾಯಪಟ್ಟು ಅದೇ ರೀತಿ ವ್ಯವಸ್ಥೆ ಜಾರಿಗೆ ಬರುವಂತೆ ಮಾಡಿದರು. ಇದರ ಪರಿಣಾಮವಾಗಿ ಭಾರತದಲ್ಲಿ ಬ್ರಿಟಿಷರಿಗಿಂತ ಮುಂಚೆ ಎಲ್ಲರಿಗೂ ಶಿಕ್ಷಣವಿರಲಿಲ್ಲ, ಮಹಿಳೆಯರೂ ಇದರಿಂದ ವಂಚಿತರಾಗಿದ್ದರು ಎಂಬ ಹೇಳಿಕೆ ಜನಪ್ರಿಯವಾಗುವಂತೆ ಆಯಿತು; ಮತ್ತು ಇದಕ್ಕೆ ಪೂರಕವೆಂಬಂತೆ ಭಾರತದ ಕಥೆ ಪುರಾಣ ಸ್ಮೃತಿಗ್ರಂಥಗಳನ್ನು ಹಾಗೂ ಅವುಗಳಲ್ಲಿ ಇರುವ ಆಯ್ದ ಭಾಗಗಳನ್ನು ಮಾತ್ರ ತಮ್ಮ ಅನುಕೂಲಕ್ಕೆ ಬರುವಂತೆ ಬಳಸಿಕೊಂಡರು. ಇದರ ಫಲವಾಗಿ ಇಲ್ಲಿ ವ್ಯವಸ್ಥಿತ ಶಿಕ್ಷಣವಿರಲಿಲ್ಲವೆಂಬ ಹೇಳಿಕೆ ಸತ್ಯವೆಂದು ಸ್ಥಾಪನೆಯಾಗುವಂತಾಯಿತು.
ಗಾಂಧಿಯವರ ವಿಶ್ಲೇಷಣೆ
ಆದರೆ ಬ್ರಿಟಿಷ್ ಅಧಿಕಾರಿಗಳೇ ಕೊಡುವ ಅಂಕಿ-ಅಂಶಗಳು ಭಾರತದ ಶಿಕ್ಷಣ ವ್ಯವಸ್ಥೆ ಸ್ವತಃ ಬ್ರಿಟನಿನಲ್ಲಿದ್ದುದಕ್ಕಿಂತ ಅನೇಕಪಟ್ಟು ಉತ್ತಮವಾಗಿತ್ತು ಎಂಬುದನ್ನು ತೋರಿಸುತ್ತವೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿಯವರು ಲಂಡನ್ನಿನ ಚಾತಂ ಹೌಸ್ನಲ್ಲಿ ೧೯೩೧ರಲ್ಲಿ ಮಾಡಿದ ಭಾಷಣದ ಕೆಲವು ಸಾಲುಗಳನ್ನು ಇಲ್ಲಿ ಮತ್ತೆ ಉಲ್ಲೇಖಿಸಬಹುದು. “ಬ್ರಿಟಿಷ್ ಸರ್ಕಾರದ ಶಿಕ್ಷಣವನ್ನು ನಾವು ನೋಡಬೇಕಿದೆ. ಭಾರತವು ೫೦ ಅಥವಾ ೧೦೦ ವರ್ಷಗಳ ಹಿಂದಿಗಿಂತ ಇಂದು ಹೆಚ್ಚು ಅಶಿಕ್ಷಿತವಾಗಿದೆ. ಬ್ರಿಟಿಷ್ ಆಡಳಿತಗಾರರು ಭಾರತಕ್ಕೆ ಬಂದಾಗ ಇಲ್ಲಿರುವ ಸಂಗತಿಗಳನ್ನು ಅವಿರುವ ಸ್ಥಿತಿಯಲ್ಲಿಯೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಬದಲು ಅವುಗಳ ಮೂಲೋತ್ಪಾಟನೆ ಮಾಡಲು ಆರಂಭಿಸಿದರು. ಅವರು ಮಣ್ಣು ಬಗೆದು ಬೇರುಗಳನ್ನು ಹುಡುಕಲು ಆರಂಭಿಸಿದರು ಹಾಗೂ ಬೇರುಗಳನ್ನು ಹಾಗೆಯೇ ಬಿಟ್ಟರು. ಇದರಿಂದ ಸುಂದರ ವೃಕ್ಷ ನಾಶವಾಯಿತು. ಹಳ್ಳಿಯ ಶಾಲೆಗಳು ಬ್ರಿಟಿಷ್ ಆಡಳಿತಗಾರರಿಗೆ ಅನುಕೂಲಕರವಾಗಿರಲಿಲ್ಲ. ಹೀಗಾಗಿ ಅವರು ತಮ್ಮದೇ ಕಾರ್ಯಕ್ರಮಗಳ ಮೂಲಕ ಬಂದರು. ಪ್ರತಿ ಶಾಲೆಯೂ ಕಟ್ಟಡ ಮತ್ತಿತ್ತರ ಅನುಕೂಲಗಳನ್ನು ಹೊಂದಿರಬೇಕಾಗಿತ್ತು. ನಮ್ಮಲ್ಲಿ ಅಂತಹ ಶಾಲೆಗಳು ಇರಲಿಲ್ಲ. ಬ್ರಿಟಿಷ್ ಆಡಳಿತಗಾರರು ಬಿಟ್ಟುಹೋದ ಅಂಕಿ-ಅಂಶಗಳು ತೋರಿಸುವುದು ಏನೆಂದರೆ ಅವರು ಸರ್ವೇಕ್ಷಣೆ ಕೈಗೊಂಡ ಸ್ಥಳಗಳಲ್ಲಿ ಇದ್ದ ಶಾಲೆಗಳು ಈ ಹೊಸ ವ್ಯವಸ್ಥೆಯಿಂದ ನಾಶವಾದವು. ಹೊಸದಾಗಿ ಪ್ರಾರಂಭವಾದ ವ್ಯವಸ್ಥೆಯಲ್ಲಿ ಪ್ರಾಚೀನ ಶಾಲೆಗಳಿಗೆ ಮಾನ್ಯತೆ ಇರಲಿಲ್ಲ ಯೂರೋಪಿನ ಮಾದರಿಯಲ್ಲಿ ಸ್ಥಾಪನೆಗೊಂಡ ಶಾಲೆಗಳು ನಮ್ಮ ಜನರಿಗೆ ತುಂಬಾ ದುಬಾರಿಯಾಗಿದ್ದವು ಹಾಗಾಗಿ ಅವು ಜನರ ಕೈಗೆ ಎಟುಕಲಿಲ್ಲ.
ಒಂದು ಶತಮಾನದ ಒಳಗೆ ಈ ಪ್ರಮಾಣದ ಜನರಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಒದಗಿಸಬೇಕೆಂದು ಯಾರೇ ಹೇಳಿದರೂ ನಾನು ಅದನ್ನು ಅಲ್ಲಗಳೆಯುತ್ತೇನೆ. ಈ ನನ್ನ ಬಡ ದೇಶ ಇಂತಹ ದುಬಾರಿ ಶಾಲಾ ಮಾದರಿಯ ಮುಂದೆ ನಿಲ್ಲಲಾರದು. ನಮ್ಮ ದೇಶ ಹಳ್ಳಿಯ ಹಳೆಯ ಶಾಲಾ ಮಾದರಿಯನ್ನು ಪುನರುತ್ಥಾನಗೊಳಿಸಿಕೊಂಡರೆ ಉಳಿಯಬಲ್ಲದು. ಹಾಗೆಯೇ ನಮ್ಮ ದೇಶ ಹಳೆಯ ಶಾಲಾ ಶಿಕ್ಷಕರನ್ನು ಉದ್ಧರಿಸಬಹುದು ಹಾಗೂ ಹುಡುಗರು ಮತ್ತು ಹುಡುಗಿಯರಿಗೆ ಪ್ರತಿ ಹಳ್ಳಿಯಲ್ಲಿಯೂ ಶಾಲೆ ಇರುವಂತೆ ಮಾಡಬಹುದು.”
ಬ್ರಿಟಿಷರು ನೀಡಿರುವ ಅಂಕಿ-ಅಂಶಗಳಂತೆ ಅವರು ಮದ್ರಾಸ್, ಮಲಬಾರ್, ಬಂಗಾಳ ಮತ್ತು ಬಿಹಾರ, ಗುಜರಾತ್ ಮತ್ತು ಒರಿಸ್ಸಾ ಮೊದಲಾದ ಕಡೆಯ ಸಾಂಪ್ರದಾಯಿಕ ಶಿಕ್ಷಣ ಕ್ರಮವನ್ನು ಕುರಿತ ವ್ಯಾಪಕ ಮಾಹಿತಿಯನ್ನು ನೀಡಿದ್ದಾರೆ.
ಅಂದರೆ ಭಾರತಕ್ಕೆ ಈಗಿರುವಂತೆ ಅಂದು ಯಾವುದೇ ರೀತಿಯ ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿ ಇರದೆ ಇಂದಿನ ಪಾಕಿಸ್ತಾನ, ಬಾಂಗ್ಲಾದೇಶ ಮೊದಲಾದವೆಲ್ಲ ಒಳಗೊಂಡಂತೆ ಎಲ್ಲ ಭಾಗಗಳಲ್ಲಿ ಶಿಕ್ಷಣ ಲಭಿಸುತ್ತಿತ್ತು. ಇದರ ಒಳಗಡೆ ಕೂಡ ಇಂದಿನ ರಾಜ್ಯಗಳ ವ್ಯಾಪ್ತಿ ಅಥವಾ ಭಾಷಾವಾರು ರಾಜ್ಯಗಳ ಗಡಿ ಇರಲಿಲ್ಲ. ರಾಜರು ಮತ್ತು ಬೇರೆ ಬೇರೆ ರಾಜವಂಶಗಳು ಆಡಳಿತ ನಡೆಸಿ ಹೋದರೂ ಶಿಕ್ಷಣ ಕೊಡುವ ಕ್ರಮ ಮಾತ್ರ ಬದಲಾಗಲಿಲ್ಲ. ಅದಕ್ಕೆ ಸಮಾಜ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಕಾರಣ. ಇದರಲ್ಲಿ ಯಾವುದೇ ಆಡಳಿತ ಅಥವಾ ಪ್ರಭುತ್ವ ಹಸ್ತಕ್ಷೇಪ ಮಾಡುತ್ತಿರಲಿಲ್ಲ; ಅದಕ್ಕೆ ಅವಕಾಶ ಕೂಡ ಇರಲಿಲ್ಲ. ಸ್ವತಃ ಸಮಾಜವೇ ಮುಂದಿನ ಪೀಳಿಗೆಗೆ ಜ್ಞಾನವನ್ನು ವರ್ಗಾಯಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು. ಭಾರತದ ದೇಶಿ ಶಿಕ್ಷಣವನ್ನು ಪಾಠಶಾಲೆಗಳು, ಮದರಸಾಗಳು ಮತ್ತು ಗುರುಕುಲಗಳ ಮೂಲಕ ನೀಡಲಾಗುತಿತ್ತು ಎಂಬುದನ್ನು ಒತ್ತಿ ಹೇಳುವುದು ಮುಖ್ಯ. ಈ ಸಾಂಪ್ರದಾಯಿಕ ಸಂಸ್ಥೆಗಳಲ್ಲಿನ ಶಿಕ್ಷಣವು ಅನಕ್ಷರಸ್ಥ ರೈತರು ಸೇರಿದಂತೆ ಸಮುದಾಯದ ಕೊಡುಗೆಗಳ ಆದಾಯದ ಮೂಲಕ ಉಳಿಸಲಾಗಿತ್ತು. ಇದನ್ನೇ ಶಿಕ್ಷಣ ಎಂದು ಕರೆಯಲಾಗಿತ್ತು. ಈ ಸಂಸ್ಥೆಗಳು ನಿಜವಾಗಿ ಸಾಂಪ್ರದಾಯಿಕ ಸಮುದಾಯಗಳನ್ನು ಉಳಿಸುವ ನೀರಿನ ಒರತೆಗಳಂತೆ ಇರುತ್ತಿದ್ದವು. ಆದ್ದರಿಂದ ಇವುಗಳನ್ನು ‘ಶಾಲೆ’ ಎಂಬ ದುರ್ಬಲ ಭಾಷಾಂತರದ ಮೂಲಕ ಕರೆಯುವುದು ಅವು ಭಾರತೀಯ ಸಮಾಜದಲ್ಲಿ ವಹಿಸಿದ ಪಾತ್ರವನ್ನು ಕುರಿತು ಹೇಳುವಾಗ ದುರ್ಬಲ ಎನಿಸುತ್ತದೆ.
ಮಹಾತ್ಮ ಗಾಂಧಿಯವರ ಈ ವಿಶ್ಲೇಷಣೆ ಬ್ರಿಟಿಷ್ ಪೂರ್ವದಲ್ಲಿ ನಮ್ಮ ದೇಶದಲ್ಲಿದ್ದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕುತೂಹಲ ಹುಟ್ಟಿಸುತ್ತದೆ. ಇಂಥ ಕುತೂಹಲ ತಣಿಯಬೇಕಾದರೆ ಧರ್ಮಪಾಲ್ ಅವರ ಕೃತಿಯನ್ನು ಓದಬೇಕು (ದಿ ಬ್ಯೂಟಿಪುಲ್ ಟ್ರೀ, ಪು. ೬). ಆ ಕುರಿತ ಒಂದು ಅವಲೋಕನ ಇಲ್ಲಿದೆ. ಗಾಂಧಿಯವರ ಮಾತನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಆಡಳಿತದ ಪರವಾಗಿದ್ದ ಹಾರ್ಟಾಗ್ರಂಥವರು ಗಾಂಧಿ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದರು. ಇದಕ್ಕೆ ಪೂರಕವಾಗಿ ಬ್ರಿಟಿಷರು ತಮಗೆ ಅನುಕೂಲವಾಗುವಂತೆ ಭಾರತದ ಪುರಾಣ ಕಥೆಗಳಿಂದ ಆಯ್ದ ಭಾಗಗಳನ್ನು ಎತ್ತಿತೋರಿಸಿ ಭಾರತದಲ್ಲಿ ಸಾರ್ವಜನಿಕ ಶಿಕ್ಷಣ ಇರಲಿಲ್ಲವೆಂದು ಪ್ರತಿಪಾದಿಸತೊಡಗಿದರು.
ಆಕರ ಸಾಹಿತ್ಯ
ಬ್ರಿಟಿಷ್ ಪೂರ್ವದಲ್ಲಿ ಭಾರತದಲ್ಲಿ ತಮಗಿಂತ ಹಿಂದೆ ಶಿಕ್ಷಣ ವ್ಯವಸ್ಥೆ ಹೇಗಿತ್ತು ಎಂಬುದನ್ನು ತಿಳಿಯಲು ೧೯೩೦ ಮತ್ತು ೧೯೪೦ರ ದಶಕಗಳಲ್ಲಿ ವಿಶೇಷವಾಗಿ ಭಾರತದ ಶಿಕ್ಷಣದ ಇತಿಹಾಸವನ್ನು ಕುರಿತು ಒಂದು ಮಹಾನ್ ವಿದ್ವತ್ ಕೃತಿ ಪ್ರಕಟವಾಗಿದೆ. ವಾಸ್ತವವಾಗಿ ಈ ವಿಷಯವನ್ನು ಕುರಿತಂತೆ ಬ್ರಿಟಿಷ್ ಅಧಿಕಾರಿಗಳು ಮತ್ತು ವಿದ್ವಾಂಸರು ಕೆಲಸ ಆರಂಭಿಸಿದರು. ೧೯ನೆಯ ಶತಮಾನದ ಮಧ್ಯಭಾಗದ ಆರಂಭದಲ್ಲಿ ಅವರ ಇಂಥ ಕೆಲಸಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಆದರೆ ಈ ಚರಿತ್ರೆಯ ಬಹುಭಾಗ ಪ್ರಾಚೀನ ಅವಧಿಗೆ ಸಂಬಂಧಿಸಿದ ಕೆಲವೊಮ್ಮೆ ಹತ್ತು ಅಥವಾ ಹನ್ನೆರಡನೆಯ ಶತಮಾನದವರೆಗೂ ಇವು ಹೋಗುತ್ತವೆ. ಇನ್ನೂ ಕೆಲವರು ಬ್ರಿಟಿಷ್ ಆಡಳಿತ ಮತ್ತು ಆನಂತರದ ಅವಧಿಯ ಶಿಕ್ಷಣದ ಚರಿತ್ರೆಯನ್ನು ಗಮನಿಸುತ್ತಾರೆ. ಪ್ರಾಚೀನ ಶೈಕ್ಷಣಿಕ ಸಂಸ್ಥೆಗಳ ನಿರ್ದಿಷ್ಟ ವಿಸ್ತೃತ ವಿದ್ವತ್ ಕೃತಿಗಳ ಹೊರತಾಗಿ (ನಲಂದಾ ಅಥವಾ ತಕ್ಷಶಿಲಾದಂತ) ಪ್ರಾಚೀನ ವಿದ್ವತ್ ಸಂಸ್ಥೆಗಳ ಹೊರತಾಗಿ ಎ.ಎಸ್. ಆಲ್ಟೇಕರ್ರಂಥವರು ರಚಿಸಿದ ಸಾಮಾನ್ಯ ಕೃತಿಗಳು ಬೇಕಾದಷ್ಟು ಇದ್ದವು. ಆನಂತರದ ಅವಧಿಯಲ್ಲಿ ಅನೇಕ ಪ್ರಕಟಣೆಗಳು ಕಾಣಿಸುತ್ತವೆ. ಸ್ವತಃ ಭಾರತ ಸರ್ಕಾರ ಹಿಂದೆ ಪ್ರಕಟಿಸಿದ್ದ ‘ಶೈಕ್ಷಣಿಕ ದಾಖಲೆಗಳಿಂದ ಆಯ್ದ ಭಾಗ’ ಎಂಬ ಎರಡು ಸಂಪುಟಗಳ ಹೊರತಾಗಿ ಎಸ್. ನೂರುಲ್ಲಾ ಮತ್ತು ಜೆ.ಪಿ. ನಾಯಕ್ ಅವರ ಕೃತಿಗಳನ್ನು ಇಲ್ಲಿ ಹೆಸರಿಸಬಹುದು. ಇಬ್ಬರು ಲೇಖಕರು ರಚಿಸಿದ ಆನಂತರದ ಈ ಕೃತಿ ಕುತೂಹಲಕರ ಸಂಗತಿಗಳನ್ನು ವಿವರಿಸುತ್ತದೆ (ಅಂದರೆ ಅದರ ಕಾಲ ಮತ್ತು ಚಿಂತನಾ ರೀತಿಯನ್ನು ಸೂಚಿಸುತ್ತದೆ) ಈ ಕೃತಿಯು ಕಳೆದ ಒಂದುನೂರು ಅಥವಾ ಅರವತ್ತು ವರ್ಷಗಳ ಅವಧಿಯ ಭಾರತೀಯ ಶೈಕ್ಷಣಿಕ ಇತಿಹಾಸದ ಉತ್ತಮ ದಾಖಲಾತಿಯ ಮತ್ತು ಭಾರತೀಯ ದೃಷ್ಟಿಕೋನದ ವಿಶ್ಲೇಷಣೆಯ ಒಂದು ಪ್ರಯತ್ನವಾಗಿದೆ.
ವ್ಯಾಪಕ ಓದುಗರನ್ನು ತಲಪುವುದು ಕಷ್ಟಸಾಧ್ಯ. ಆದರೂ ಪ್ರಾಯಃ ಕಡಮೆ ಶೈಕ್ಷಣಿಕವೆನಿಸಿದ ಪಂಡಿತ್ ಸುಂದರ್ಲಾಲ್ರವರ ಕೃತಿ ೧೯೩೯ರಲ್ಲಿ ಮೊದಲು ಪ್ರಕಟವಾಯಿತು. ಪ್ರಸಿದ್ಧವಾದ ಈ ಕೃತಿಯ ಮೂವತ್ತಾರನೆಯ ಅಧ್ಯಾಯದ ಶೀರ್ಷಿಕೆ ‘ದಿ ಡಿಸ್ಟ್ರಕ್ಷನ್ ಆಫ್ ಇಂಡಿಯನ್ ಇಂಡಿಜಿನಸ್ ಎಜುಕೇಶನ್’ ಎಂದಿತ್ತಲ್ಲದೆ. ಇದು ಸುಮಾರು ನಲವತ್ತು ಪುಟಗಳಷ್ಟಿತ್ತು ಹಾಗೂ ವಿವಿಧ ಬ್ರಿಟಿಷ್ ಅಧಿಕಾರಿಗಳ ಹೇಳಿಕೆಗಳನ್ನು ವ್ಯಾಪಕವಾಗಿ ಉದ್ಧೃತಮಾಡಲಾಗಿತ್ತು. ಇದು ಸುಮಾರು ನೂರು ವರ್ಷಗಳ ವ್ಯಾಪ್ತಿಯನ್ನು ಹೊಂದಿತ್ತು: ೧೮೧೪ ಜೂನ್ ೩ರಂದು ಭಾರತಕ್ಕೆ ಗವರ್ನರ್ ಜನರಲ್ ಅವರನ್ನು ಇಂಗ್ಲೆಂಡಿನಿಂದ ಕಳಿಸಿದ್ದರಿಂದ ಹಿಡಿದು ಮ್ಯಾಕ್ಸ್ಮುಲ್ಲರ್ ಮತ್ತು ೧೯೦೯ರ ಬ್ರಿಟಿಷ್ ಕಾರ್ಮಿಕ ಮುಖಂಡ ಕೀರ್ಹಾರ್ಡಿ ಅವರ ಹೇಳಿಕೆಯ ವರೆಗೆ ಇದು ಎಲ್ಲವನ್ನು ಒಳಗೊಂಡಿತ್ತು. ಆದರೆ ಕೃತಿಯನ್ನು ರಚಿಸಿದ ಕಾಲ ಮತ್ತು ಹಸ್ತಪ್ರತಿಗಳ ವಿಸ್ತೃತ ದಾಖಲೆಗಳ ಅಲಭ್ಯತೆಯನ್ನು ಗಮನಿಸಿದಾಗ ಲೇಖಕರು ಈ ಕೃತಿಯನ್ನು ಪ್ರಕಟಿತ ಆಧಾರಗಳ ಮೇಲೆ ರಚಿಸಿದ್ದಾರೆಂದು ಹೇಳುವುದು ಕಷ್ಟವಾಗುತ್ತದೆ. ಅಷ್ಟಲ್ಲದೆ ಪ್ರಸ್ತಾವನೆಯಾಗಿ ಈ ಕೃತಿಯಲ್ಲಿ ‘ಭಾರತ್ ಮೇ ಅಂಗ್ರೇಜೀ ರಾಜ್’ ಎಂಬ ಅಧ್ಯಾಯವಿದ್ದು ಇದು ೧೮ನೆಯ ಶತಮಾನದ ಉತ್ತರಾರ್ಧ ಹಾಗೂ ೧೯ನೆಯ ಶತಮಾನದ ಪೂರ್ವಾರ್ಧದ ಭಾರತೀಯ ದೇಶೀ ಶಿಕ್ಷಣ ವಿಷಯ ಕುರಿತಂತೆ ಗಮನಾರ್ಹ ಅಧ್ಯಾಯವಾಗಿದೆ.
ಚಿಕ್ಕದಾಗಿದ್ದರೂ ಇದರಲ್ಲಿ ಈ ಅವಧಿಯಲ್ಲಿನ ಶಿಕ್ಷಣದ ಸ್ಥಿತಿ ಅಥವಾ ಇತಿಹಾಸವನ್ನು ಕೊಡಲಾಗಿದೆ. ೧೩ನೆಯ ಶತಮಾನದಿಂದ ಹಿಡಿದು ೧೯ನೆಯ ಶತಮಾನದ ಆರಂಭದವರೆಗೆ ನಿಸ್ಸಂದೇಹವಾಗಿ, ಮುಸ್ಲಿಂ ಶಿಕ್ಷಣ ಕುರಿತಂತೆ ಎಸ್.ಎಂ. ಜಾಫರ್ ಅವರ ಕೃತಿಯಂಥ ಕೆಲವು ಕೃತಿಗಳನ್ನು ಇಲ್ಲಿ ದಾಖಲಿಸಲಾಗಿದೆ. ಪೂರಕವಾಗಿ ಬ್ರಿಟಿಷ್ ಆಡಾಳಿತಾವಧಿಯ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಭಾರತೀಯ ದೇಶೀ ಶಿಕ್ಷಣದ ೧೮ನೆಯ ಶತಮಾನದ ಉತ್ತರಾರ್ಧ ಮತ್ತು ೧೯ನೆಯ ಶತಮಾನದ ಆರಂಭದ ಕಾಲದ ಅವನತ ಸ್ಥಿತಿ ಕುರಿತಂತೆ ಒಂದೆರಡು ಅಧ್ಯಾಯಗಳಿವೆ. ನೂರುಲ್ಲಾ ಮತ್ತು ನಾಯಕ್ರವರ ಕೃತಿಯ (೬೪೩ ಪುಟಗಳಲ್ಲಿ) ಮೊದಲ ೪೩ ಪುಟಗಳು ೧೯ನೆಯ ಶತಮಾನದ ಆರಂಭದ ದೇಶೀ ಶಿಕ್ಷಣದ ಪರಿಸ್ಥಿತಿಯನ್ನು ಚರ್ಚಿಸಲು ಮೀಸಲಾಗಿವೆ ಹಾಗೂ ಇದರ ಸ್ವರೂಪ ಮತ್ತು ಅಸ್ತಿತ್ವಕ್ಕೆ ಬ್ರಿಟಿಷರ ದೃಷ್ಟಿಕೋನ ಸವಾಲಾಗಿರುವುದನ್ನು ಚರ್ಚಿಸುತ್ತದೆ.
ಕೆಲವು ಅನ್ಯ ಮೂಲಗಳು
೧೯ನೆಯ ಶತಮಾನದ ಆರಂಭದಲ್ಲಿ ಭಾರತೀಯ ದೇಶೀ ಶಿಕ್ಷಣದ ಸ್ಥಿತಿ ಕುರಿತ ಚರ್ಚೆ ಮತ್ತು ಅದರ ಉನ್ನತಿಯನ್ನು ಕುರಿತ ವಿಭಿನ್ನ ನಿಲವುಗಳು ಅವುಗಳ ಮೂಲ ಆಕರಗಳಾಗಿ ಬಳಕೆಯಾಗಿವೆ: (೧) ಮಾಜಿ ಕ್ರಿಶ್ಚಿಯನ್ ಮತ ಪ್ರಚಾರಕನಾಗಿದ್ದ ವಿಲಿಯಂ ಆ್ಯಡಂ ನೀಡಿದ್ದ ಬಂಗಾಳ ಮತ್ತು ಬಿಹಾರಗಳಲ್ಲಿನ ದೇಶೀ ಶಿಕ್ಷಣ ವ್ಯವಸ್ಥೆ ಕುರಿತು ೧೮೩೫-೩೮ರ ಅವಧಿಯ ವರದಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. (೨) ೧೮೨೦ರ ದಶಕದಲ್ಲಿ ಮುಂಬೈ ಪಾಂತದ ದೇಶೀ ಶಿಕ್ಷಣ ಕುರಿತಂತೆ ಬ್ರಿಟಿಷ್ ಅಧಿಕಾರಿಗಳು ಸರ್ವೇಕ್ಷಣೆಯನ್ನು ಪ್ರಕಟಿಸಿದರು; ಮತ್ತು (೩) ಮದ್ರಾಸ್ ಪ್ರಾಂತದಲ್ಲಿನ ದೇಶೀ ಶಿಕ್ಷಣವನ್ನು ಕುರಿತಂತೆ ೧೮೨೨-೨೫ರ ಅವಧಿಯ (ಉತ್ತರ ಗಂಜಾಂನಿಂದ ದಕ್ಷಿಣ ತಿನ್ನೆವೆಲ್ಲಿಯವರೆಗೆ ಮತ್ತು ಪಶ್ಚಿಮದ ಮಲಬಾರ್ ವರೆಗೆ) ದೇಶೀ ಶಿಕ್ಷಣ ಕುರಿತ ವಿಸ್ತೃತ ಸರ್ವೇಕ್ಷಣೆ ವರದಿಗಳು ಪ್ರಕಟವಾದವು. ಇದೇ ಸ್ವರೂಪದ ಬಹಳ ತಡವಾಗಿ ಬಂದ ಇದೇ ವಿಷಯದ ಕೃತಿ ಜಿ.ಡಬ್ಲುö್ಯ. ಲೇಟಿನರ್ ಅವರು ಬರೆದ ಪಂಜಾಬ್ನಲ್ಲಿ ದೇಶೀ ಶಿಕ್ಷಣ ಕುರಿತ ಕೃತಿಯಾಗಿದೆ.
ಮೇಲೆ ಉಲ್ಲೇಖಿಸಿದ ಮೂಲಗಳಲ್ಲಿ ಜಿ.ಡಬ್ಲುö್ಯ. ಲೇಟಿನರ್ ಅವರ ಕೃತಿ ಈ ಹಿಂದಿನ ಸರ್ಕಾರೀ ದಾಖಲೆಗಳನ್ನು ಆಧರಿಸಿದೆ, ಮತ್ತು ಸ್ವತಃ ನಡೆಸಿದ ಸಮೀಕ್ಷೆಯನ್ನು ಆಧರಿಸಿದ್ದು ಇದು ಬ್ರಿಟಿಷ್ ನೀತಿಗಳನ್ನು ವ್ಯಾಪಕವಾಗಿ ಟೀಕಿಸಿದೆ. ಪಂಜಾಬ್ನಲ್ಲಿನ ಮತ್ತು ಈ ಪುಸ್ತಕ ಗಮನಿಸುವ ಪ್ರದೇಶಗಳ ದೇಶೀ ಶಿಕ್ಷಣದ ಅವನತಿ ಮತ್ತು ಪತನಕ್ಕೆ ಇದು ಬ್ರಿಟಿಷ್ ಅಧಿಕಾರಿಗಳನ್ನು ಹೊಣೆಯಾಗಿಸುತ್ತದೆ; ಅಂತೆಯೇ ಆ್ಯಡಮ್ನ ವರದಿಗಳೂ ಮದ್ರಾಸ್ ಪ್ರಾಂತದ ಕೆಲವು ಜಿಲ್ಲಾಧಿಕಾರಿಗಳ ವರದಿಗಳೂ ಭಾರತದ ಕೆಲವು ಪ್ರದೇಶಗಳಲ್ಲಿ ದೇಶೀ ಶಿಕ್ಷಣದ ಅವನತಿಯನ್ನು ಇದೇ ರೀತಿ ಚಿತ್ರಿಸುತ್ತವೆ. ಅಂದ ಹಾಗೆ ಇವು ಹೆಚ್ಚು ಸ್ಪಷ್ಟವಾಗಿ ಇವನ್ನು ಹೇಳುವುದಿಲ್ಲ. ಬ್ರಿಟಿಷ್ ಅಧಿಕಾರಿಗಳು ಮತ್ತು ‘ಉನ್ನತ’ರಿಗೆ ಸರಿಹೋಗುವ ಭಾಷೆಯಲ್ಲಿ ಇದು ಕಾಣಿಸಿಕೊಳ್ಳುತ್ತದೆ (ಲೇಟಿನರ್ ಬ್ರಿಟಿಷ್ ಅಧಿಕಾರಿ ಆಗಿದ್ದರೂ ಆತ ಆಂಗ್ಲನಾಗಿರಲಿಲ್ಲ).
ಭಾರತದ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕೆಯನ್ನು ಖಾಸಗಿಯಾಗಿ ಮನೆಗಳಲ್ಲಿ ಅಥವಾ ಅಗ್ರಹಾರಗಳಲ್ಲಿ ನೀಡಲಾಗುತ್ತಿತ್ತು. ಇಂದಿನ ಶಾಲೆಗಳ ಸ್ಥಾನವನ್ನು ಪ್ರಾಚೀನ ಕಾಲದಲ್ಲಿ ಹಳ್ಳಿಹಳ್ಳಿಗಳಲ್ಲಿದ್ದ ಮಠಮಾನ್ಯಗಳು, ಕೂಲಿಮಠಗಳು, ಪಾಠಶಾಲೆಗಳು, ಮದರಸಾಗಳು ಮತ್ತು ಗುರುಕುಲಗಳು ಪಡೆದುಕೊಂಡಿದ್ದವು.
ಶಾಲಾ ದಾಖಲಾತಿ, ನಿತ್ಯದ ವೇಳೆ ಇತ್ಯಾದಿ ಈಗಾಗಲೇ ಉಲ್ಲೇಖಿಸಿದಂತೆ ಜಿಲ್ಲೆಯಿಂದ ಜಿಲ್ಲೆಗೆ ಮಾಹಿತಿಯ ಸಂಗತಿಗಳು ಗಮನಾರ್ಹವಾಗಿ ಬೇರೆಯಾಗುತ್ತವೆ. ಬಹಳಷ್ಟು ಜಿಲ್ಲಾಧಿಕಾರಿಗಳು ಗಂಡುಮಕ್ಕಳು (ಪ್ರಾಯಶಃ ಹೆಣ್ಣುಮಕ್ಕಳು ಕೂಡ) ಶಾಲೆಗೆ ಸೇರುವ ಸಾಮಾನ್ಯ ವಯಸ್ಸನ್ನು ದಾಖಲಿಸಿದ್ದಾರೆ. ರಾಜ ಮಹೇಂದ್ರಿಯ ಜಿಲ್ಲಾಧಿಕಾರಿಯ ಪ್ರಕಾರ ಗಂಡುಮಗುವಿನ ಐದನೇ ವರ್ಷದ ಐದನೆಯ ತಿಂಗಳ ಐದನೆಯ ದಿನವನ್ನು ಶಾಲೆಗೆ ಸೇರುವ ‘ಪವಿತ್ರ ದಿನ’ -‘ಅದೃಷ್ಟದ ದಿನ’ವೆಂದು ಭಾವಿಸಲಾಗಿತ್ತು. ಆದರೆ ಕಡಪಾದ ಜಿಲ್ಲಾಧಿಕಾರಿಯ ಪ್ರಕಾರ ಬ್ರಾಹ್ಮಣ ಮಕ್ಕಳು ಶಾಲೆಗೆ ಸೇರುವ ವಯಸ್ಸು ಐದರಿಂದ ಆರು ವರ್ಷಗಳವರೆಗೆ ತೂಗುತ್ತಿತ್ತು. ಆದರೆ ಶೂದ್ರರಲ್ಲಿ ಆರರಿಂದ ಎಂಟು ವರ್ಷವಾಗಿರುತ್ತಿತ್ತು ಹಾಗೂ ಸಾಮಾನ್ಯವಾಗಿ ಮಕ್ಕಳು ಶಾಲೆಯಲ್ಲಿರುತ್ತಿದ್ದ ಅವಧಿಯನ್ನು ಕೂಡ ಕಡಪಾ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದಾರೆ. ನೆಲ್ಲೂರು ಮತ್ತು ಸೇಲಂ ಜಿಲ್ಲಾಧಿಕಾರಿಗಳು ೩ರಿಂದ ೫ ಅಥವಾ ೬ ವರ್ಷ ಎಂದಿದ್ದಾರೆ. ಬಹುತೇಕ ಇತರರು ಅಧ್ಯಯನದ ಅವಧಿ ಕನಿಷ್ಠ ೫ರಿಂದ ಗರಿಷ್ಟ ೧೫ ವರ್ಷದವರೆಗೆ ವ್ಯತ್ಯಾಸವಾಗುತ್ತಿತ್ತೆಂದು ಉಲ್ಲೇಖಿಸಿದ್ದಾರೆ. ಇತರ ಅನೇಕ ಜಿಲ್ಲಾಧಿಕಾರಿಗಳು ಅಂದಿನ ಶಾಲಾವಧಿಯ ಬಗ್ಗೆ ಹೆಚ್ಚು ಯೋಚಿಸಿಲ್ಲ. ಅಲ್ಲದೆ ಅವರು ಕಲಿಕೆ ಮತ್ತು ಶಿಷ್ಯತ್ವ, ಶಿಕ್ಷಕರ ಪಾಂಡಿತ್ಯದ ಬಗ್ಗೆಯೂ ಚಿಂತಿಸಿಲ್ಲ. ಶಿಕ್ಷಣ ಉಪಯುಕ್ತವೆಂದು ಕೆಲವರು ಹೇಳಿದ್ದಾರೆ. ಮದ್ರಾಸಿನ ಜಿಲ್ಲಾಧಿಕಾರಿ ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ೧೩ ವರ್ಷದವರಾದಾಗ ಶಾಲೆಗೆ ಸೇರಿಸಲಾಗುತ್ತಿತ್ತೆಂದು ಹೇಳಿದ್ದಾರೆ. ಕಲಿಕೆಯ ವಿವಿಧ ಶಾಖೆಗಳಲ್ಲಿ ಅವರ ಗ್ರಹಿಕೆ ಆಗ ಅಸಾಧಾರಣವಾಗಿರುತ್ತದೆಂದು ಹೇಳಿದ್ದಾರೆ.
ಶಾಲೆಗಳಲ್ಲಿ ಬಳಸುತ್ತಿದ್ದ ಪುಸ್ತಕಗಳು
ಭಾರತೀಯ ಶಾಲೆಗಳಲ್ಲಿ ಓದಲು, ಬರೆಯಲು ಮತ್ತು ಅಂಕಗಣಿತ ಬೋಧಿಸಲಾಗುತ್ತಿತ್ತೆಂದು ಹೇಳಲಾಗಿದೆ. ಬಳ್ಳಾರಿಯ ಶಾಲೆಗಳಲ್ಲಿ ಕೆಳಕಂಡ ಪುಸ್ತಕಗಳನ್ನು ಬಳಸಲಾಗುತ್ತಿತ್ತು. (ಇದೇ ರಾಜಮಹೇಂದ್ರಿಯಲ್ಲಿ ಕೂಡ). ಇಲ್ಲಿನ ಶಾಲೆಗಳಲ್ಲಿ ಇವುಗಳ ಸಾರವನ್ನು ಕಲಿಸಲಾಗುತ್ತಿತ್ತು.
ಬಳ್ಳಾರಿ ಜಿಲ್ಲೆಯಲ್ಲಿ ಶಾಲೆಗಳಲ್ಲಿ ಬಳಸಲಾಗುತ್ತಿದ್ದ ಪುಸ್ತಕಗಳು
ಎ) ಅತ್ಯಂತ ಸಾಮಾನ್ಯವಾಗಿದ್ದವು
೧. ರಾಮಾಯಣ ೨. ಮಹಾಭಾರತ ೩. ಭಾಗವತ
ಬಿ) ಉತ್ಪಾದನಾ ತರಗತಿಯ ಮಕ್ಕಳು ಬಳಸುತ್ತಿದ್ದ ಪುಸ್ತಕಗಳು
೧. ನಾಗಲಿಂಗನ – ಕೂಟ ೨. ವಿಶ್ವ ಕರ್ಮ – ಪುರಾಣ ೩. ಕುಮಟೇಶ್ವರ ಕಾಳಿಕಾಮರ
ಸಿ) ಲಿಂಗಾಯತ ಮಕ್ಕಳು ಬಳಸುತ್ತಿದ್ದವು ರಾಘವಾಂಕ- ಕಾವ್ಯ
೧. ಭಾವಪೂರ್ಣ ೨. ಗಿರಿಜಾ ಕಲ್ಯಾಣ ೩. ಅನುಭವಾಮೃತ ೪. ಚೆನ್ನಬಸವೇಶ್ವರ ಪುರಾಣ ೫. ಗುರಿಲಗೂತೂ ಇತ್ಯಾದಿ.
ಡಿ) ಲಘು ಸಾಹಿತ್ಯ ಓದು.
೧. ಪಂಚತಂತ್ರ ೨. ಬೇತಾಳ ಪಂಚವಿಂಶತಿ
೩. ಪಂಖಲೀ – ಸೂಪೂಕಟಲಕ್
೪. ಮಹಾತರಂಗಿಣಿ
ಬಳಸುತ್ತಿದ್ದ ಶಬ್ದಕೋಶ ಮತ್ತು ವ್ಯಾಕರಣಗಳು
೧. ನಿಘಂಟು ೨. ಅಮರ ೩. ಶಬ್ದಮಂಜರಿ
೪. ಶಬ್ದಮಣಿ ದರ್ಪಣ ೫. ವ್ಯಾಕರಣ
೬. ಆಂಧ್ರ ದೀಪಿಕಾ ೭. ಆಂಧ್ರನಮಶೃಂಗಾರ ಇತ್ಯಾದಿ.
ರಾಜಮಹೇಂದ್ರಿಯ ಶಾಲೆಗಳಲ್ಲಿ ಬಳಸುತ್ತಿದ್ದ ಪುಸ್ತಕಗಳ ಹೆಸರು
೧. ಬಾಲ ರಾಮಾಯಣಮ್ ೨. ರುಕ್ಮಿಣೀ ಕಲ್ಯಾಣಮ್ ೩. ಪೌಣೀಜಂಕ ಪತ್ರರಾಣಮ್ ೪. ಮೊಲ್ಲೇ ರಾಮಾಯಣಂ ೫. ರಾಮಾಯಣಂ ೬. ದಶಾದ್ರಿ ಶತಕಂ ೭. ಕೃಷ್ಣಶತಕಂ ೮. ಸುಮತಿ ಶತಕಂ ೯. ಜಾನಕಿ ಶತಕಂ ೧೦. ಪ್ರಸನ್ನ ರಾಜರ ಶತಕಂ ೧೧. ರಾಮತಾರಕ ಶತಕಂ ೧೨. ಭಾಸ್ಕರ ಶತಕಂ ೧೩. ಬೀಸನಕಾಸವ ಶತಕಂ ಇತ್ಯಾದಿ.
ಉನ್ನತ ಶಿಕ್ಷಣ ಸಂಸ್ಥೆಗಳು
ತಮ್ಮ ಜಿಲ್ಲೆಯಲ್ಲಿ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಗಳು ಇದ್ದ ಬಗ್ಗೆ ಮಾಹಿತಿ ಇಲ್ಲವೆಂದು ಬಹುತೇಕ ಜಿಲ್ಲಾಧಿಕಾರಿಗಳು ಹೇಳಿದ್ದರೆ, ಉಳಿದವರು ಅಂಥ ಒಟ್ಟು ೧೦೯೪ ಸ್ಥಳಗಳಿವೆ ಎಂದಿದ್ದಾರೆ. ಇವುಗಳನ್ನು ‘ಕಾಲೇಜು’ಗಳೆಂದು ಕರೆಯಲಾಗಿದೆ. (ನಿಗದಿತ ನಮೂನೆಯಲ್ಲಿರುವಂತೆ). ಇವುಗಳಲ್ಲಿ ಹೆಚ್ಚಿನ ಸಂಖ್ಯೆ ೨೭೯ ಆಗಿದ್ದು ರಾಜಮಹೇಂದ್ರಿ ಜಿಲ್ಲೆಯಲ್ಲಿ ಒಟ್ಟು ೧,೪೫೪ ವಿದ್ಯಾರ್ಥಿಗಳಿದ್ದರು. ಆನಂತರ ಕೊಯಂಬತ್ತೂರ್ ಇದ್ದು, ಇಲ್ಲಿ ಇಂಥ ೧೭೩ ಸ್ಥಳಗಳಿದ್ದು (೭೨೪ ವಿದ್ಯಾರ್ಥಿಗಳು), ಗುಂಟೂರಿನಲ್ಲಿ ೧೭೧ ಸ್ಥಳಗಳಿದ್ದು (೯೩೧ ವಿದ್ಯಾರ್ಥಿಗಳು), ತಂಜಾವೂರಲ್ಲಿ ೧೦೯ (೭೬೯ ವಿದ್ಯಾರ್ಥಿಗಳು), ನೆಲ್ಲೂರು ೧೦೭, ಉತ್ತರ ಆರ್ಕಾಟ್ ೬೯ (೪೧೮ ವಿದ್ಯಾರ್ಥಿಗಳು) ಸೇಲಂ ೫೩ (೩೨೪ ವಿದ್ಯಾರ್ಥಿಗಳು), ಚಂಗಲ್ಪೇಟೆ ೫೧ (೩೯೮ ವಿದ್ಯಾರ್ಥಿಗಳು), ಮಚಲೀಪಟ್ಟಣ ೪೯, (೧೦೯ ವಿದ್ಯಾರ್ಥಿಗಳು), ಬಳ್ಳಾರಿ ೨೩, ತಿರುಚನಾಪಳ್ಳಿ ೯ (೧೩೧ ವಿದ್ಯಾರ್ಥಿಗಳು) ಮತ್ತು ಮಲಬಾರಿನಲ್ಲಿ ಸಮುದ್ರಿನ್ (ಜಾಮೋರಿನ್) ರಾಜ ನಡೆಸುತ್ತಿದ್ದ ಒಂದು ಹಳೆಯ ಸಂಸ್ಥೆ- ಇಲ್ಲಿ ೭೫ ವಿದ್ಯಾರ್ಥಿಗಳಿದ್ದರು. ಉಳಿದ ಬಹಳಷ್ಟು ಜಿಲ್ಲೆಗಳಲ್ಲಿ ಇಂಥ ಸಂಸ್ಥೆಗಳಿದ್ದ ಬಗ್ಗೆ ತಿಳಿದಿಲ್ಲ. ಇಂಥ ಸಂಸ್ಥೆಗಳಲ್ಲಿ, ವೇದಗಳು, ಶಾಸ್ತ್ರಗಳು, ಕಾನೂನುಗಳು, ನ್ಯಾಯ, ಖಗೋಳ, ಜ್ಯೋತಿಷ, ಗಣಿತ, ನಾಡಿಶಾಸ್ತ್ರ, ಮುಂತಾದವನ್ನು ಬೋಧಿಸಲಾಗುತ್ತಿತ್ತೆಂದು ಜಿಲ್ಲಾಧಿಕಾರಿಗಳು ವರದಿ ಮಾಡಿದ್ದಾರೆ. ಇವು ಬಹುತೇಕ ಅಗ್ರಹಾರದ ಮನೆಗಳಲ್ಲಿ ನಡೆಯುತ್ತಿದ್ದವು. ಖಾಸಗಿಯಾಗಿದ್ದ ಇಂಥ ಸಂಸ್ಥೆಗಳ ಮಾಹಿತಿ ಮಲಬಾರ್ನಲ್ಲಿ ಲಭಿಸಿದ್ದು, ಉಳಿದ ಜಿಲ್ಲೆಗಳಲ್ಲೂ ಇಂಥ ಕ್ರಮವಿತ್ತೆಂಬುದನ್ನು ಇದು ಸೂಚಿಸುತ್ತದೆ. ಮಕ್ಕಳಲ್ಲಿ ಬ್ರಾಹ್ಮಣರ ಸಂಖ್ಯೆ ಕಡಮೆ ಇತ್ತು. ಆದರೆ, ಉನ್ನತ ಶಿಕ್ಷಣದಲ್ಲಿ ಹೆಚ್ಚಾಗಿ ವೃತ್ತಿಪರ ತರಬೇತಿ ಇದ್ದು ಅದು ಬ್ರಾಹ್ಮಣರಿಗೆ ಸೀಮಿತವಾಗಿದ್ದÀಂತೆ ಕಾಣುತ್ತದೆ. ವಿಶೇಷವಾಗಿ ಇದು ಧರ್ಮಶಾಸ್ತ್ರ, ಅಧ್ಯಾತ್ಮ, ನೀತಿಶಾಸ್ತ್ರ, ಮತ್ತು ವಿಶಾಲಾರ್ಥದಲ್ಲಿ ನೀತಿಶಾಸ್ತ್ರಗಳಲ್ಲಿತ್ತು. ಆದರೆ, ಜ್ಯೋತಿಷ, ಖಗೋಳ ವಿಜ್ಞಾನ ಮತ್ತು ವೈದ್ಯಕೀಯವನ್ನು ಕಲಿಯಲು ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳು ಬರುತ್ತಿದ್ದರು. ಇದು ಮಲಬಾರಿನ ಮಾಹಿತಿಯಿಂದ ಹೆಚ್ಚು ಸ್ಪಷ್ಟವಾಗುತ್ತದೆ. ಖಗೋಳ ಕಲಿಯುತ್ತಿದ್ದ ೮೧೦೮ ವಿದ್ಯಾರ್ಥಿಗಳಲ್ಲಿ ೭೮ ಜನ ಬ್ರಾಹ್ಮಣರಾಗಿದ್ದರು. ವೈದ್ಯಕೀಯ ಕಲಿಯುತ್ತಿದ್ದ ೧೯೪ ಮಕ್ಕಳಲ್ಲಿ ಕೇವಲ ೩೧ ವಿದ್ಯಾರ್ಥಿಗಳು ಮಾತ್ರ ಬ್ರಾಹ್ಮಣರಾಗಿದ್ದರು. ಹೀಗೆಯೇ ರಾಜಮಹೇಂದ್ರಿಯಲ್ಲಿ ಉನ್ನತ ಶಿಕ್ಷಣ ಕೇಂದ್ರದಲ್ಲಿದ್ದವರು ಶೂದ್ರರಾಗಿದ್ದರು. ಮದ್ರಾಸ್ ಪ್ರಾಂತದ ಸರ್ವೇಕ್ಷಣೆಯಂತೆ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ಕಲಿಯುತ್ತಿದ್ದವರಲ್ಲಿ ಎಲ್ಲರೂ ವಿವಿಧ ಜಾತಿಗಳಿಗೆ ಸೇರಿದ್ದರೆನ್ನಲಾಗಿದೆ. ಇವರಲ್ಲಿ ಕ್ಷೌರಿಕರೂ ಸೇರಿದ್ದರು; ಬ್ರಿಟಿಷ್ ವೈದ್ಯನ ಪ್ರಕಾರ ಇವರು ಶಸ್ತ್ರಚಿಕಿತ್ಸೆಯಲ್ಲಿ ಶ್ರೇಷ್ಠರಾಗಿದ್ದರು.
ಹೆಣ್ಣುಮಕ್ಕಳ ಶಿಕ್ಷಣ
ಈ ಮೊದಲೇ ಉಲ್ಲೇಖಿಸಿದಂತೆ ಶಾಲೆಗೆ ಹಾಜರಾಗುತ್ತಿದ್ದ ಹೆಣ್ಣುಮಕ್ಕಳ ಸಂಖ್ಯೆ ತುಂಬಾ ಸಣ್ಣದಾಗಿತ್ತು. ಮಲಬಾರ್ ಮತ್ತು ಜೈಪುರ ಜಿಲ್ಲೆಗಳ ಮಾಹಿತಿಯ ಹೊರತಾಗಿ ಬ್ರಾಹ್ಮಣ, ಕ್ಷತ್ರಿಯ, ಮತ್ತು ವೈಶ್ಯ ಜಾತಿಯ ಹೆಣ್ಣುಮಕ್ಕಳು ಶಾಲೆಗಳಲ್ಲಿ ಇರಲೇ ಇಲ್ಲ. ಆದರೆ ಕೆಲವು ಮುಸ್ಲಿಂ ಹೆಣ್ಣುಮಕ್ಕಳು ಶಾಲಾ ಶಿಕ್ಷಣ ಪಡೆಯುತ್ತಿದ್ದರು. ತಿರುಚಿನಾಪಳ್ಳಿಯಲ್ಲಿ ಇವರ ಸಂಖ್ಯೆ ೫೬ ಮತ್ತು ಸೇಲಂನಲ್ಲಿ ಇವರು ೨೭ ಇದ್ದರು. ಶಾಲೆಗೆ ಹಾಜರಾಗುತ್ತಿದ್ದರು, ಹಾಗೂ ಮಧುರಾ, ಮಚಲೀಪಟ್ಟಣ, ತಿರುತ್ವೀರಿಯ ಜಿಲ್ಲಾಧಿಕಾರಿಗಳ ಪ್ರಕಾರ ಇವರಲ್ಲಿ ಬಹುತೇಕ ಹೆಣ್ಣುಮಕ್ಕಳು ನೃತ್ಯದವರಾಗಿದ್ದರು. ದೇವಾಲಯದ ದೇವದಾಸಿಯರಾಗಿದ್ದರು. ಶಾಲೆಗೆ ಹಾಜರಾಗುತ್ತಿದ್ದ ಹೆಣ್ಣುಮಕ್ಕಳ ಜಾತಿವಾರು ಸಂಖ್ಯೆಯನ್ನು ಕೃತಿಯಲ್ಲಿ ಕೊಡಲಾಗಿದೆ. ಶಾಲೆ ಅಥವಾ ಖಾಸಗಿ ಶಿಕ್ಷಣ ಪಡೆಯುತ್ತಿದ್ದವರ ಪ್ರಮಾಣ ತೋರಿಸುತ್ತದೆ.
ಮಲಬಾರಿನ ಪರಿಸ್ಥಿತಿಗೆ ಹೋಲಿಸಿದರೆ ಜೈಪುರದ ಮತ್ತು ವಿಶಾಖಪಟ್ಟಣದ ಜಮೀನ್ದಾರಿ ಜಿಲ್ಲೆಯ ಸ್ಥಿತಿ ತುಂಬ ಭಿನ್ನವಾಗಿತ್ತು. ಶಾಲೆಗೆ ಹೋಗುತ್ತಿದ್ದ ಹುಡುಗ ಮತ್ತು ಹುಡುಗಿಯರ ಪ್ರಮಾಣ ಕೊಡಲಾಗಿದೆ.
ಪ್ರತಿಶತ ಪ್ರಮಾಣದಲ್ಲಿ ಶಾಲೆಗೆ ಹೋಗುತ್ತಿದ್ದ ಹುಡುಗಿಯರ ಪ್ರಮಾಣ ಹುಡುಗರಿಗಿಂತ ಹೆಚ್ಚಾಗಿದ್ದು ಇದು. ಶೇ ೨೯.೭ರಷ್ಟಿತ್ತು. ಇಷ್ಟಲ್ಲದೆ ಇನ್ನೂ ಕುತೂಹಲಕಾರಿ ಸಂಗತಿ ಎಂದರೆ, ಬ್ರಾಹ್ಮಣ ಹುಡುಗರ ಸಂಖ್ಯಾಪ್ರಮಾಣಕ್ಕಿಂತ ಬ್ರಾಹ್ಮಣ ಹುಡುಗಿಯರ ಪ್ರಮಾಣ ಶಾಲೆಗೆ ಹೋಗುವ ಸಂಖ್ಯೆಯಲ್ಲಿ ಶೇ.೩೭ರಷ್ಟು ಹೆಚ್ಚಿತ್ತು. ಅಂತೆಯೇ ಮಲಬಾರಿನಲ್ಲಿ ಮುಸ್ಲಿಂ ಹುಡುಗರಿಗಿಂತ ಶಾಲೆಗೆ ಹೋಗುತ್ತಿದ್ದ ಹುಡುಗಿಯರ ಪ್ರಮಾಣ ಶೇ.೩೫.೧ ರಷ್ಟು ಹೆಚ್ಚಿತ್ತೆಂಬುದು ಅಚ್ಚರಿಯ ಸಂಗತಿ. ಮಲಬಾರಿ ಶೂದ್ರ ಹಾಗೂ ಇತರ ಜಾತಿಯ ಜನರಲ್ಲಿ ಹುಡುಗರಿಗೆ ಹೋಲಿಸಿದರೆ ಹುಡುಗಿಯರ ಸಂಖ್ಯೆ ಶೇ.೧೫.೫ರಷ್ಟು ಹೆಚ್ಚಿತ್ತು, ಹಾಗೂ ಕ್ರಮವಾಗಿ ಶೇ. ೧೯.೧ ಹಾಗೂ ಶೇ. ೧೨.೪ ರಷ್ಟಿತ್ತು; ಪ್ರಮಾಣದ ೨ಕ್ಕೂ ಲೆಕ್ಕ ಶೇ. ೧೮.೩ ರಷ್ಟಿತ್ತು. ಇಂಥ ವಿಶಾಲವಾದ ಎರಡು ಪ್ರತ್ಯೇಕ ಪ್ರದೇಶಗಳು (ಪಶ್ಚಿಮ ಕರಾವಳಿಯ ಮಲಬಾರ್ ಹಾಗೂ ಜೈಪುರ ಜಮೀನ್ದಾರಿಯ ಗುಡ್ಡಗಾಡಿನ ಗಡಿಯ ದಕ್ಷಿಣ ಒರಿಸ್ಸಾ) ಒಂದೇ ಬಗೆಯ ಸಾಮಾಜಿಕ ಸಾಮ್ಯ ಹೊಂದಿರುವುದರ ಗಂಭೀರ ಅಧ್ಯಯನವಾಗಬೇಕಾಗಿದೆ.
ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಜಾತಿ, ಲಿಂಗ ಇತ್ಯಾದಿ
ಬ್ರಿಟಿಷ್ ಅಧಿಕಾರಿಗಳು ನೀಡಿದ ವರದಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜಾತಿವಾರು ಪಟ್ಟಿ ಕೂಡ ಇದೆ. ಶಿಕ್ಷಕರ ವಿವರವನ್ನು ಕೊಡುವಾಗ ಕೆಲವು ಪ್ರಾಂತಗಳ ಶಿಕ್ಷಕರ ಜಾತಿವಾರು ಮಾಹಿತಿ ಇದೆ, ಆದರೆ ಲಿಂಗವಾರು ವಿವರ ದೊರೆಯುವುದಿಲ್ಲ. ಇದಕ್ಕೆ ಕಾರಣವೆಂದರೆ ಆಯಾ ಭಾಗದ ಜಿಲ್ಲಾಧಿಕಾರಿಗಳು ತಮಗೆ ಲಭ್ಯವಾದ ಸಮಗ್ರ ಮಾಹಿತಿಯನ್ನು ಕೊಟ್ಟಿದ್ದಾರೆಯೇ ವಿನಾ ಬ್ರಿಟಿಷ್ ಆಡಳಿತ ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ನಮೂನೆಯನ್ನು ತಯಾರಿಸಿ ಕೊಟ್ಟಿರಲಿಲ್ಲ ಇದರಿಂದಾಗಿ ಪ್ರಾಂತವಾರು ಮಾಹಿತಿಗಳು ವ್ಯತ್ಯಾಸವಾಗುತ್ತವೆ.
೧೮೦೦ರ ಸರ್ವೇಕ್ಷಣ ಸಾಮಗ್ರಿಗಿಂತ ಮುಂಚಿನ ಸರ್ವೇಕ್ಷಣೆ: ಮೊದಲನೆಯ ವರದಿ
ಆ್ಯಡಂನ ಮೊದಲನೆಯ ವರದಿಯು ೧೮೦೦ಕ್ಕಿಂತ ಮುಂಚಿನ ಅಧಿಕೃತ ಮತ್ತು ಇತರ ಮೂಲಗಳಿಂದ ಪಡೆದುಕೊಂಡ ದತ್ತಾಂಶಗಳ ಪರಿಸ್ಥಿತಿ ಮತ್ತು ವಾಸ್ತವಗಳನ್ನು ಕುರಿತ ಸಾಮಾನ್ಯ ಹೇಳಿಕೆಯ ಮೊದಲನೆಯ ವರದಿಯಾಗಿದೆ. ಅದರ ಸಾರಾಂಶಗಳೆಂದರೆ: ಮೊದಲನೆಯದಾಗಿ ಪ್ರತಿಯೊಂದು ಹಳ್ಳಿಯಲ್ಲಿ ಕನಿಷ್ಠಪಕ್ಷ ಒಂದು ಶಾಲೆ ಮತ್ತು ಬಂಗಾಳ ಮತ್ತು ಬಿಹಾರಗಳಲ್ಲಿ ಪ್ರಾಯಶಃ ೧,೫೦,೭೪೮ ಹಳ್ಳಿಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಶಾಲೆಗಳಿದ್ದವು ಹಾಗೂ ಇವುಗಳಲ್ಲಿ ೧,೦೦,೦೦ ಹಳ್ಳಿಗಳಲ್ಲಿ ಈಗಲೂ ಇಂಥ ಶಾಲೆಗಳಿವೆ ಎಂಬುದು. ಎರಡನೆಯದಾಗಿ ವೈಯಕ್ತಿಕ ಗ್ರಹಿಕೆಯ ಆಧಾರದಲ್ಲಿ ಮತ್ತು ಆತ ಇತರ ಪುರಾವೆಗಳಿಂದ ತಿಳಿದುಕೊಂಡಂತೆ ಈ ಸ್ಥಳಗಳಲ್ಲಿ ಬಂಗಾಳದ ಪ್ರತಿ ಜಿಲ್ಲೆಯಲ್ಲಿ ಉನ್ನತ ಕಲಿಕೆಯ ಸರಾಸರಿ ಸುಮಾರು ೧೦೦ ಸಂಸ್ಥೆಗಳಿದ್ದವು. ಇದೇ ಸಂದರ್ಭಗಳಲ್ಲಿ ಆತ ಬಂಗಾಳದ ೧೮ ಜಿಲ್ಲೆಗಳಲ್ಲಿ ಆತ ೧,೮೦೦ ಇಂಥ ಸಂಸ್ಥೆಗಳಿಗೆ ಭೇಟಿ ಕೊಟ್ಟಿದ್ದಾಗಿ ಹೇಳುತ್ತಾನೆ. ಕಡೆಯದಾಗಿ ಆತ ಕೊಡುವ ಸಂಖ್ಯೆಯನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿದರೆ ಪ್ರತಿಯೊಂದು ಕೇಂದ್ರಗಳಲ್ಲಿ ಕನಿಷ್ಠವೆಂದರೆ ಆರು ಪಂಡಿತರು ಇದ್ದುದು ಮಾತ್ರ ತಿಳಿಯುತ್ತದೆ. ಆತ ಈ ಸಂಸ್ಥೆಗಳಲ್ಲಿ ಒಟ್ಟು ೧೦,೮೦೦ ವಿದ್ಯಾರ್ಥಿಗಳು ಕಲಿಯುತ್ತಿದ್ದರೆಂದು ಲೆಕ್ಕ ಕೊಟ್ಟಿದ್ದಾನೆ.
ಅಲ್ಲದೆ ಆತ ಮುಂದುವರಿದು ಪ್ರಾಥಮಿಕ ಶಾಲೆಗಳು ‘ಸಾಮಾನ್ಯವಾಗಿ ಸ್ಥಳೀಯ ನಿವಾಸಿಗಳಲ್ಲಿ ಹೆಚ್ಚು ಪ್ರತಿಷ್ಠಿತರಾದವರ ಕೆಲವು ಮನೆಗಳಲ್ಲಿ ಅಥವಾ ಅವುಗಳ ಸಮೀಪದಲ್ಲಿ ನಡೆಯುತ್ತಿದ್ದವೆಂದು’ ಹೇಳುತ್ತಾನೆ. ‘ಉನ್ನತ ಶಿಕ್ಷಣ ಕಲಿಕಾ ಕೇಂದ್ರಗಳು ಕಟ್ಟಡಗಳನ್ನು ಹೊಂದಿದ್ದು ಇವು ಸಾಮಾನ್ಯವಾಗಿ ಮಣ್ಣಿನವಾಗಿರುತ್ತಿದ್ದವು. ಕೆಲವೊಮ್ಮೆ ಮೂರು ಅಥವಾ ಐದು ಕೋಣೆಗಳನ್ನು ಹೊಂದಿರುತ್ತಿದ್ದವು’ ಮತ್ತು ಇತರ ಕಡೆಗಳಲ್ಲಿ ಒಂಬತ್ತು ಅಥವಾ ಹನ್ನೊಂದು ಕೋಣೆಗಳು ಕೂಡ ಇರುತ್ತಿದ್ದವು ಎಂದಿದ್ದಾನೆ. ಕೋಣೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಇವು ಮಣ್ಣಿನವಾಗಿರುತ್ತಿದ್ದವು. ಈ ಸ್ಥಳಗಳನ್ನು ಪಂಡಿತರ ವಾಸಸ್ಥಳಗಳಾಗಿ ಬಳಸಲಾಗುತ್ತಿತ್ತು: ಮತ್ತು ಪಡಿತರು ಸಾಮಾನ್ಯವಾಗಿ ಶಿಕ್ಷಕರಿಂದ ಊಟ ವಸತಿಯನ್ನು ಪಡೆಯುತ್ತಿದ್ದರು. ಇವುಗಳನ್ನು ಸ್ಥಳೀಯ ಜನತೆ ಅಗತ್ಯವಿದ್ದಾಗ ಪೂರೈಸುತ್ತಿದ್ದರು. ಎರಡು ಬಗೆಯ ಸಂಸ್ಥೆಗಳಲ್ಲಿನ ಬೋಧನಾ ವಿಧಾನವನ್ನು ವಿವರಿಸಿದ ಆನಂತರ ಮತ್ತು ಅವುಗಳ ನಿತ್ಯದ ಕ್ರಮವನ್ನು ಹೇಳಿದ ನಂತರ ಆ್ಯಡಂ ೧೮೦೦ರ ಮುಂಚಿನ ದತ್ತಾಂಶವನ್ನು ಕೊಟ್ಟು ಅದನ್ನು ಪರಿಶೀಲಿಸುತ್ತಾನೆ. ಇದರಲ್ಲಿ ವಿಷಯ ಮತ್ತು ಜಿಲ್ಲಾವಾರು ವಿವರಗಳಿವೆ.
ಭಾಷಾವಾರು ವಿಭಜನೆ
ಆಯ್ದ ಜಿಲ್ಲೆಗಳಲ್ಲಿ ಎಲ್ಲ ಬಗೆಯ ಶಾಲೆಗಳ ಒಟ್ಟು ಸಂಖ್ಯೆ ೨,೫೬೬ ಆಗಿತ್ತು. ಈ ಶಾಲೆಗಳನ್ನು ಬಂಗಾಳಿ (೧,೦೯೮), ಹಿಂದಿ (೩೭೫), ಸಂಸ್ಕೃತ (೩೫೩), ಪರ್ಷಿಯನ್ (೬೯೪), ಅರೇಬಿಕ್ (೩೧), ಇಂಗ್ಲಿಷ್ (೮), ಹೆಣ್ಣುಮಕ್ಕಳು (೬) ಮತ್ತು ಶಿಶುಗಳು (೧) ಎಂದು ವಿಂಗಡಿಸಲಾಗಿತ್ತು. ಮಿಡ್ನಾಪುರ್ ಜಿಲ್ಲೆಯ ಶಾಲೆಯ ಸಂಖ್ಯೆಯನ್ನು ಕೂಡ ಕೊಡಲಾಗಿದೆ; ೫೪೮ ಬಂಗಾಳಿ ಶಾಲೆಗಳು, ೧೮೨ ಒರಿಯಾ ಶಾಲೆಗಳು, ೪೮ ಪರ್ಷಿಯನ್ ಶಾಲೆಗಳು ಮತ್ತು ೧ ಇಂಗ್ಲಿಷ್ ಶಾಲೆ ಇತ್ತು.
ಶಾಲಾ ಬೋಧನೆಯ ನಾಲ್ಕು ಹಂತಗಳು
ಪ್ರಾಥಮಿಕ ಶಾಲೆಗಳಲ್ಲಿ ಕಳೆಯುತ್ತಿದ್ದ ಅವಧಿಯ ನಾಲ್ಕು ಹಂತಗಳನ್ನು ಆ್ಯಡಂ ವಿಭಾಗಿಸಿದ್ದಾನೆ. ಅವನ ಪ್ರಕಾರ: ಇವುಗಳೆಂದರೆ: ಮೊದಲನೆಯ ಹಂತ ಅಪರೂಪಕ್ಕೆ ಹತ್ತು ದಿನಗಳನ್ನು ಮೀರುತ್ತಿತ್ತು. ಇದರಲ್ಲಿ ಚಿಕ್ಕ ವಿದ್ಯಾರ್ಥಿಗಳಿಗೆ ನೆಲದ ಮೇಲೆ ಸಣ್ಣ ಕಡ್ಡಿಯಲ್ಲಿ ಅಥವಾ ಬಿದಿರಿನ ಕಡ್ಡಿಯಲ್ಲಿ ವರ್ಣಮಾಲೆಯನ್ನು ಕಲಿಸಲಾಗುತ್ತಿತ್ತು ಅಥವಾ ಮರಳಿನ ಹಲಗೆಯಲ್ಲಿ ಕಲಿಸಲಾಗುತ್ತಿತ್ತು. ಎರಡನೆಯ ಹಂತ ಎರಡರಿಂದ ನಾಲ್ಕೂವರೆ ವರ್ಷಗಳ ವರೆಗೆ ಇರುತ್ತಿತ್ತು; ಇದನ್ನು ತಾಳೆಗರಿಯಲ್ಲಿ ಬರೆದು ತೋರಿಸುವ ತರಬೇತಿಯಿಂದ ಗುರುತಿಸಲಾಗುತ್ತಿತ್ತು ಮತ್ತು ವಿದ್ಯಾರ್ಥಿಗೆ ಇದನ್ನು ಓದುವ ಮತ್ತು ಬರೆಯುವ ತರಬೇತಿ ಕೊಡಲಾಗುತ್ತಿತ್ತು ಹಾಗೂ ಬಾಯಿಪಾಠ ಮಾಡಿಸಲಾಗುತ್ತಿತ್ತು ಮಗ್ಗಿ ಕೋಷ್ಟಕವನ್ನು ೧೦೦ರವರೆಗೆ ಕಂಠಪಾಠ ಮಾಡಿಸಲಾಗುತ್ತಿತ್ತು. ಅಂತೆಯೇ ಖಾತಾಪಟ್ಟಿ (ನೆಲ ಅಥವಾ ಭೂಮಿಯ ಅಳತೆಯ ಪಟ್ಟಿ) ಸಂಖ್ಯಾ ಕೋಷ್ಠಕ ಇತ್ಯಾದಿಗಳನ್ನು ಕಲಿಸಲಾಗುತ್ತಿತ್ತು. ಮೂರನೆಯ ಹಂತ ಎರಡರಿಂದ ಮೂರು ವರ್ಷದವರೆಗೆ ಇರುತ್ತಿತ್ತು. ಇದರಲ್ಲಿ ಬಾಳೆ ಎಲೆಯ ಮೇಲೆ ಬರೆಯುವುದನ್ನು ಕಲಿಸಲಾಗುತ್ತಿತ್ತು. ಜೊತೆಗೆ ವ್ಯವಕಲನ ಹಾಗೂ ಇತರ ಅಂಕಗಣಿತದ ನಿಯಮಗಳನ್ನು ಅವಧಿಯಲ್ಲಿ ಬೋಧಿಸಲಾಗುತ್ತಿತ್ತು. ನಾಲ್ಕನೆಯ ಮತ್ತು ಕೊನೆಯ ಹಂತ ಎರಡು ವರ್ಷಗಳವರೆಗೆ ಇರುತ್ತಿತ್ತು ಇದರಲ್ಲಿ ಕಾಗದದ ಮೇಲೆ ಬರೆಯುವ ಕೆಲಸ ಇರುತ್ತಿತ್ತು. ವಿದ್ಯಾರ್ಥಿ ರಾಮಾಯಣ, ಮಾನಸ ಮಂಗಲ ಇತ್ಯಾದಿಗಳನ್ನು ಓದಬೇಕಾಗಿತ್ತು, ಅಂತೆಯೇ ಲೆಕ್ಕಗಳಲ್ಲಿ ಪರಿಣತನಾಗಬೇಕಾಗಿತ್ತು ಹಾಗೂ ಪತ್ರಗಳನ್ನು ಬರೆಯುವುದು ವ್ಯಾಜ್ಯ ಬರೆಯುವುದು ಇತ್ಯಾದಿ ಮಾಡಬೇಕಾಗಿತ್ತು. ಸರ್ವೇಕ್ಷಣೆ ನಡೆಸಿದ ಸ್ಥಳಗಳಲ್ಲಿ ಬರವಣಿಗೆಗೆ ಬಳಸಲಾಗುತ್ತಿದ್ದ ವಿವಿಧ ಸಾಮಗ್ರಿಗಳು, ಸಂಖ್ಯೆಗಳು ಮೊದಲಾದವನ್ನು ಕೊಡಲಾಗಿದೆ.
ಎಲ್ಲ ವರ್ಗಗಳ ಪ್ರಾಥಮಿಕ ಶಿಕ್ಷಣ
ಈ ವ್ಯಾಪಕ ಸರ್ವೇಕ್ಷಣೆಯ ಎದ್ದುಕಾಣುವ ಮೊದಲ ಅಂಶವೆಂದರೆ ಪ್ರಾಥಮಿಕ ಶಾಲಾ ಹಂತದಲ್ಲಿ ಇದ್ದ ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು. ಶಿಕ್ಷಕರಲ್ಲಿ ಹೆಚ್ಚಿನವರು ಕ್ಷತ್ರಿಯ, ಬ್ರಾಹ್ಮಣ, ಸಡಗೋಪ ಮತ್ತು ಅಗುರಿ ಜಾತಿಗಳವರು ಆಗಿರುತ್ತಿದ್ದರೆಂಬುದು ನಿಜ. ಆದರೂ ಗಮನಾರ್ಹ ಸಂಖ್ಯೆಯಲ್ಲಿ ೩೦ ಇತರ ಜಾತಿಗಳಿಂದ ಕೂಡ ಬರುತ್ತಿದ್ದರು. ಅಂತೆಯೇ ‘ಚಾಂಡಾಲ’ರ ೬ ಶಿಕ್ಷಕರಿದ್ದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹೆಚ್ಚು ವೈವಿಧ್ಯದಲ್ಲಿ ಹಾಜರಾಗುತ್ತಿದ್ದರು. ಪ್ರತಿಯೊಂದು ಜಾತಿಗಳ ಗುಂಪಿನಿಂದಲೂ ವಿದ್ಯಾರ್ಥಿಗಳು ಇರುತ್ತಿದ್ದರೆಂದು ಕಾಣಿಸುತ್ತದೆ. ಬ್ರಾಹ್ಮಣ ಮತ್ತು ಕಾಯಸ್ಥರು ಎಲ್ಲಿಯೂ ಒಟ್ಟು ಪ್ರಮಾಣದಲ್ಲಿ ಶೇ. ೪೦ಕ್ಕಿಂತ ಹೆಚ್ಚು ಇರಲಿಲ್ಲ. ಬಿಹಾರದ ಎರಡು ಜಿಲ್ಲೆಗಳಲ್ಲಿ ಇವರು ಒಟ್ಟು ಶೇ. ೧೫ ರಿಂದ ೧೬ಕ್ಕಿಂತ ಹೆಚ್ಚು ಇರಲಿಲ್ಲ. ಹೆಚ್ಚು ಅಚ್ಚರಿದಾಯಕ ಮಾಹಿತಿಯೆಂದರೆ ೬೧ ವಿದ್ಯಾರ್ಥಿಗಳು ‘ಡಾಮ್’ ಜಾತಿಯವರು ಮತ್ತು ೬೧ ‘ಚಾಂಡಾಲ’ ಶಾಲಾ ವಿದ್ಯಾರ್ಥಿಗಳು ಬರ್ದವಾನ್ ಜಿಲ್ಲೆಯಲ್ಲಿ ಇದ್ದರು. ಹತ್ತಿರಹತ್ತಿರ ಅಷ್ಠೇ ಸಂಖ್ಯೆಯಲ್ಲಿ ವೈದ್ಯ ವಿದ್ಯಾರ್ಥಿಗಳಿದ್ದರು. ಆ ಜಿಲ್ಲೆಯಲ್ಲಿ ೧೨೬ ಇದ್ದರು. ಬರ್ದವಾನ್ನಲ್ಲಿ ೧೩ ಮಿಷನರಿ ಶಾಲೆಗಳಿದ್ದವು ಇವುಗಳಲ್ಲಿನ ಡಾಮ್ ಮತ್ತು ಚಾಂಡಾಲ ವಿದ್ಯಾರ್ಥಿಗಳ ಸಂಖ್ಯೆ ಕೇವಲ ನಾಲ್ಕು ಆಗಿತ್ತು; ಹಾಗೂ ಆ್ಯಡಂ ಉಲ್ಲೇಖಿಸುವಂತೆ ೧೬ ಅತ್ಯಂತ ‘ಕೆಳ’ ಜಾತಿಯ ಕೇವಲ ೮೬ ವಿದ್ಯಾರ್ಥಿಗಳು ಮಾತ್ರ ಈ ಮಿಷನರಿ ಶಾಲೆಗಳಲ್ಲಿದ್ದರೆ “ದೇಶೀ ಶಾಲೆಗಳಲ್ಲಿ” ೬೭೪ ವಿದ್ಯಾರ್ಥಿಗಳಿದ್ದರು.
ಶೈಕ್ಷಣಿಕ ಸಮೀಕ್ಷೆಗಳ ವಿಶ್ಲೇಷಣೆಯಿಂದ ಹೊರಡುವ ಹೆಚ್ಚು ಪ್ರಸಿದ್ಧ ಮತ್ತು ವಿವಾದಾತ್ಮಕ ಸಂಗತಿಯೊಂದು ವಿಲಿಯಂ ಆ್ಯಡಂ ಗ್ರಹಿಸಿದ ಸಂಗತಿಗಳಲ್ಲಿ ಇದೆ. ಆತ ಬಂಗಾಳ ಮತ್ತು ಬಿಹಾರದಲ್ಲಿ ೧೮೩೦ರ ಸುಮಾರಿಗೆ ಅಸ್ತಿತ್ವದಲ್ಲಿದ್ದ ಸುಮಾರು ೧,೦೦,೦೦೦ ಹಳ್ಳಿ ಶಾಲೆಗಳನ್ನು ಗಮನಿಸಿ ತನ್ನ ವರದಿಯನ್ನು ಸಿದ್ಧಪಡಿಸಿದ್ದ. ಈ ಹೇಳಿಕೆ ವಿವಿಧ ಉನ್ನತ ಬ್ರಿಟಿಷ್ ಅಧಿಕಾರಿಗಳಲ್ಲಿ ಇದ್ದ ಗ್ರಹಿಕೆಯನ್ನು ತೋರಿಸುವಂತೆ ಕಾಣುತ್ತದೆ. ಇದು ಬ್ರಿಟಿಷ್ ಅಧಿಕಾರಿಗಳ ದಾಖಲೆಯನ್ನು ಸಮರ್ಥಿಸುವುದಿಲ್ಲ. ಅಂತೆಯೇ ವಿಲಿಯಂ ಆ್ಯಡಂಗಿಂತ ಸಾಕಷ್ಟು ಮುಂಚೆ ಹೇಳಿಕೆಯನ್ನು ಮದ್ರಾಸ್ ಪ್ರಾಂತವನ್ನು ಕುರಿತಂತೆ ಥಾಮಸ್ ಮನ್ರೋರಂಥವರು ಹೇಳಿದ್ದಾರೆ. ಈತ ಪ್ರತಿ ಹಳ್ಳಿಯಲ್ಲಿ ಶಾಲೆ ಇದ್ದುದಾಗಿ ಹೇಳುತ್ತಾನೆ. ಇವು ೧೮೨೦ರ ವೇಳೆಗೆ ಮುಂಬೈ ಪ್ರಾಂತ ಹೊಸದಾಗಿ ವಿಸ್ತರಿಸಿಕೊಂಡ ಪ್ರದೇಶಗಳಲ್ಲಿ ಇತ್ತು. ಈ.ಎಲ್. ಪ್ರೆಂಡರ್ಗಾಸ್ಡ್ರಂತಹ ಹಿರಿಯ ಅಧಿಕಾರಿ ‘ನಮ್ಮ ಪ್ರದೇಶದ ಉದ್ದಗಲಕ್ಕೆ ಸಣ್ಣದೋ ದೊಡ್ಡದೋ ಯಾವುದೇ ಹಳ್ಳಿಯಾಗಿರಲಿ ಕನಿಷ್ಠಪಕ್ಷ ಒಂದೂ ಶಾಲೆ ಇರದ ಒಂದೇ ಒಂದು ಹಳ್ಳಿಯೂ ಇಲ್ಲ. ದೊಡ್ಡ ಹಳ್ಳಿಗಳಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದವು’ ಎಂದು ಹೇಳುತ್ತಾನೆ. ೧೮೮೨ರಲ್ಲಿ ಜಿ.ಡ್ಲುö್ಯ. ಲೇಟಿನರ್ ಹೇಳುವಂತೆ ೧೮೫೦ರ ಸುಮಾರಿಗೆ ಪಂಜಾಬಿನಲ್ಲಿ ಹರಡಿದ್ದ ಶಿಕ್ಷಣ ಹೆಚ್ಚುಕಡಮೆ ಇದೇ ರೀತಿಯಲ್ಲಿ ಇತ್ತು.
ಈ ಸಂಗತಿಗಳನ್ನು ಗಮನಿಸಿದರೆ ಇವುಗಳನ್ನು ಬಹಳ ಭಿನ್ನವಾಗಿ ಪರಿಗಣಿಸಲಾಗಿದೆ ಎಂಬುದು ತಿಳಿಯುತ್ತದೆ. ಕೆಲವರು ಇದರಲ್ಲಿ ಪಾವಿತ್ರö್ಯವನ್ನು ಗಮನಿಸಿದರೆ ಇನ್ನು ಕೆಲವರು ಪಕ್ಷಪಾತವನ್ನು ಕಂಡಿದ್ದಾರೆ. ಸಹಜವಾಗಿ ಮೊದಲನೆಯ ದೃಷ್ಟಿ ಭಾರತೀಯ ರಾಷ್ಟ್ರವಾದದ ದನಿಯ ಬೆಳವಣಿಗೆಗೆ ಸಂಬಂಧಿಸಿದೆ. ಈ ಮಾತನ್ನು ಹೇಳುವವರು ೧೯ನೆಯ ಶತಮಾನದ ಅಂತ್ಯ ಮತ್ತು ೨೦ನೆಯ ಶತಮಾನದ ಆರಂಭದಲ್ಲಿದ್ದ ಪ್ರಮುಖ ಭಾರತೀಯರಾಗಿದ್ದಾರೆ ಇವರಲ್ಲಿ ಕೀರ್ಹಾರ್ಡಿರಂತಹ ಇಂಗ್ಲಿಷರು ಮತ್ತು ಮ್ಯಾಕ್ಸ್ ಮುಲ್ಲರ್ರಂಥ ಶಿಕ್ಷಣ ತಜ್ಞರು ಸೇರಿದ್ದಾರೆ. ಪಕ್ಷಪಾತದ ದೃಷ್ಟಿಯನ್ನು ತಳೆದವರಲ್ಲಿ ಆನಂತರದ ಅವಧಿಯ ಬ್ರಿಟಿಷ್ ಆಡಳಿತದ ಅಧಿಕಾರಿವರ್ಗದ ಜನ ಸೇರಿದ್ದಾರೆ, ಅಥವಾ ಕೆಲವೊಮ್ಮೆ ಇವೆಲ್ಲಾ ಅಸಹಜ ಎಂಬ ತಮ್ಮ ಸಾಮಾಜಿಕ ಸೈದ್ಧಾಂತಿಕ ಗ್ರಹಿಕೆಗೆ ಕಟ್ಟುಬಿದ್ದ ಜನ ಸೇರಿದ್ದಾರೆ. ವಿಶೇಷವಾಗಿ ೧೮೬೦ರ ನಂತರ ಭಾರತೀಯ ಬ್ರಿಟಿಷ್ ಆಡಳಿತದಲ್ಲಿ ದೀರ್ಘ ಸೇವೆ ಸಲ್ಲಿಸಿದವರು ಈ ಬಗೆಯ ದೃಷ್ಟಿಯನ್ನು ಹೊಂದುವುದು ಅನಿವಾರ್ಯವಾಯಿತು. ಅಥವಾ ಬರೆಯುವ ಸಾಮರ್ಥ್ಯ ಇದ್ದವರು ಬ್ರಿಟಿಷ್ ಆಡಳಿತವನ್ನು ಸಮರ್ಥಿಸಲು ವಿಶೇಷವಾಗಿ ಅವರ ಪ್ರಯತ್ನವನ್ನು ಸಮರ್ಥಿಸಲು, ಬ್ರಿಟಿಷರಿಗೆ ಅಡ್ಡಿಯಾಗಿದ್ದ ದೇಶಿ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಹೇಳಿಕೆಯನ್ನು ಅಲ್ಲಗಳೆಯಲು ಇಂಥ ತಿರ್ಮಾನಕ್ಕೆ ಬರುವುದು ಅಗತ್ಯವಾಯಿತು. ಈ ಮೂಲಕ ಬ್ರಿಟಿಷರು ಭಾರತದ ಮೇಲೆ ಗಮನಾರ್ಹ ಧಕ್ಕೆಯನ್ನು ಉಂಟುಮಾಡಿದರು.
ಇಂಥ ವಿವಾದವನ್ನು ಹರಡಲು ಸಾಕಷ್ಟು ಪ್ರಮಾಣದಲ್ಲಿ ಬರವಣಿಗೆ ನಡೆಸಲಾಯಿತು. ಇಂಥ ಹೇಳಿಕೆಯನ್ನು ಸಮರ್ಥಿಸಲು ಸಾಂದರ್ಭಿಕ ದೃಷ್ಟಿಯಿಂದ ಬಹಳ ಕಡಮೆ ಪ್ರಯತ್ನ ಹಾಕಲಾಯಿತು. ಲೇಟಿನರ್ನ ಕೃತಿಯನ್ನು ಬಿಟ್ಟರೆ ಈ ಬಗೆಯ ಹೇಳಿಕೆಗಳ ಬಹುಪಾಲು ೧೯ನೆಯ ಶತಮಾನದ ಆರಂಭಿಕ ದಶಕಕ್ಕೆ ಸೇರಿದೆ. ಆನಂತರದ ಬ್ರಿಟಿಷ್ ಆಡಳಿತಗಾರರಿಗೆ ಇಂಥ ವಿವಾದಾತ್ಮಕ ಸಂಗತಿಯನ್ನು ಮೆಚ್ಚುವುದು ಕಷ್ಟವಾಯಿತು ಎಂಬುದು ಅರ್ಥವಾಗುವ ಸಂಗತಿ. ೧೮೦೦ ರವರೆಗೆ ಇಂಗ್ಲೆಂಡಿನಲ್ಲಿ ಜನಸಾಮಾನ್ಯರ ಮಕ್ಕಳಿಗೆ ಶಾಲೆಗಳೇ ಇರಲಿಲ್ಲ; ಕೆಲವು ಪ್ರಾಚೀನ ವ್ಯಾಕರಣ ಶಾಲೆಗಳು ಕೂಡ ಆ ಕಾಲದಲ್ಲಿ ಹೀನಾಯ ಸ್ಥಿತಿಯಲ್ಲಿದ್ದವು. ಅದಕ್ಕಿಂತ ಹೆಚ್ಚಾಗಿ ಭಾರತದ ಬಗ್ಗೆ ಬರೆದವರು ಶಿಕ್ಷಣ ಅಥವಾ ಕೈಗಾರಿಕೆ ಮತ್ತು ಅದರ ಕಲೆ ಬಗ್ಗೆ ಬರೆದಿದ್ದೇ ಆಗಲಿ ಅಥವಾ ಕೃಷಿ ಕಾರ್ಮಿಕರ ಬಗ್ಗೆಯೇ ಆಗಲಿ ಇವರು ಇಂಗ್ಲೆಂಡಿನ ಪರಿಸ್ಥಿತಿಯೊಂದಿಗೆ ಹೋಲಿಸಿ ಹೇಳಿದ್ದರು. ಈ ಎಲ್ಲ ವಿಷಯಗಳಲ್ಲಿ ೧೯ನೆಯ ಶತಮಾನದ ಅಂತ್ಯ ಮತ್ತು ೨೦ನೆಯ ಶತಮಾನದ ಆರಂಭದಲ್ಲಿ ಭಾರತದ ಪರಿಸ್ಥಿತಿ ಇಂಗ್ಲೆಂಡಿನ ಸಮಾಜಕ್ಕಿಂತ ಹೆಚ್ಚು ಚೆನ್ನಾಗಿತ್ತು. ಸಹಜವಾಗಿಯೇ ಭಾರತದಲ್ಲಿನ ಪ್ರತಿ ಹಳ್ಳಿಯ ಶಾಲೆಗಳ ಬಗ್ಗೆ ಅವರು ಬರೆಯುವಾಗ – ಅದು ಅಕ್ಷರಶಃ ನಿಜವಲ್ಲದಿದ್ದರೂ – ಬ್ರಿಟಿಷ್ ಪರಿಸ್ಥಿತಿಗೆ ಪ್ರತಿಯಾಗಿ ಅವರಿಗೆ ಅದು ಹಾಗೆಯೇ ಕಂಡಿತು. ಅವರು ಇಂಥ ಪ್ರತಿರೋಧÀವನ್ನು ಹೆಚ್ಚು ಉಲ್ಲೇಖಿಸದಿದ್ದರೂ ಅವರ ಗ್ರಹಿಕೆ ಅವರ ಇಂಥ ತೀರ್ಮಾನ ಕೈಗೊಳ್ಳಲು ಎಡೆಮಾಡಿಕೊಟ್ಟಿತ್ತೆಂದು ನಾವು ಸಕಾರಣವಾಗಿ ಗ್ರಹಿಸಬಹುದು.
ಮೇಲ್ಜಾತಿಗಳೆಂದು ಗ್ರಹಿಸಲಾದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಸಮುದಾಯಗಳು ಮಾತ್ರವಲ್ಲದೆ ಶೂದ್ರ ಮತ್ತಿತರ ಜಾತಿಗಳ ಜನರು ಕೂಡ ತಮಗೆ ಬೇಕಾದ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು. ಅಚ್ಚರಿಯ ಸಂಗತಿಯೆಂದರೆ ವೈದ್ಯಕೀಯದಲ್ಲಿ ಅದರಲ್ಲೂ ಶಸ್ತ್ರ ಚಿಕಿತ್ಸೆಯಲ್ಲಿ ಕ್ಷೌರಿಕ ಸಮುದಾಯವು ಮುಂಚೂಣಿಯ ಸ್ಥಾನ ಪಡೆದಿತ್ತಲ್ಲದೆ ದಕ್ಷಿಣ ಭಾರತದ ಪ್ರಾಂತಗಳಲ್ಲಿ ಅದರಲ್ಲೂ ಕೇರಳದಲ್ಲಿ ಇಂಥ ಸಾಂಪ್ರದಾಯಿಕ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದವರಲ್ಲಿ ಇತರ ವರ್ಗದವರೇ ಹೆಚ್ಚಾಗಿದ್ದರು. ಆಯಾ ಪ್ರದೇಶದ ಭಾಷೆಗಳನ್ನು ಕೂಡ ಕಲಿಸಲಾಗುತ್ತಿತ್ತು. ಕೆಲವು ಕಡೆಗಳಲ್ಲಿ ಶಾಲಾ ಶಿಕ್ಷಣ ಪಡೆಯುತ್ತಿದ್ದ ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳ ಸರಾಸರಿ ಪ್ರಮಾಣ ಶೇ. ೩೦ರಷ್ಟು ಹೆಚ್ಚಾಗಿತ್ತು. ಈ ಎಲ್ಲಾ ಜಾತಿ, ಲಿಂಗವಾರು, ಜಾತಿವಾರು ಹಾಗೂ ವಿಷಯವಾರು ಅಂಕಿ-ಅಂಶಗಳನ್ನು ಬ್ರಿಟಿಷ್ ಅಧಿಕಾರಿಗಳು ಕೊಟ್ಟಿರುವುದನ್ನು ಧರ್ಮಪಾಲ್ ರವರು ಪ್ರತ್ಯೇಕ ಕೋಷ್ಠಕಗಳ ಮೂಲಕ ತಮ್ಮ ಕೃತಿಯಲ್ಲಿ ವಿಸ್ತಾರವಾಗಿ ಕೊಟ್ಟಿದ್ದಾರೆ. ಇವುಗಳನ್ನು ಓದುತ್ತಾ ಹೋದಂತೆ ನಮ್ಮ ಇದುವರೆಗಿನ ಭಾರತೀಯ ಶಿಕ್ಷಣ ಕುರಿತ ತಿಳಿವಳಿಕೆ ಪಲ್ಲಟವಾಗುತ್ತದೆ.
ಮೇಲ್ಕಂಡ ಸಂಗತಿಗಳನ್ನು ಗಮನಿಸಿದಾಗ ಭಾರತೀಯ ಸಾಂಪ್ರದಾಯಿಕ ಶಿಕ್ಷಣ ಕ್ರಮದ ಒಂದು ಸ್ಪಷ್ಟ ಚಿತ್ರಣ ದೊರೆಯುವುದಲ್ಲದೆ ಇಂದಿನ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡಿದ್ದಂತೆ ಕಾಣಿಸುತ್ತದೆ. ಏಕೆಂದರೆ ಆ ಶಿಕ್ಷಣ ಕ್ರಮದಲ್ಲಿ ಯಾವುದೇ ರೀತಿಯ ಭಾಷೆ ಅಥವಾ ಮಾಧ್ಯಮ, ಜಾತಿಗಳ ಸಂಘರ್ಷ ಇದ್ದಂತೆ ಕಾಣಿಸುವುದಿಲ್ಲ ಹಾಗೂ ಇಂದಿನ ಎಲ್ಲರೂ ಒಳಗೊಳ್ಳುವ ಮತ್ತು (ಇನ್ಕ್ಲೂಸಿವ್) ಕೆಲವರನ್ನು ಹೊರಗಿಡುವ (ಎಕ್ಸ್ಕ್ಲೂಸಿವ್ ಇತ್ಯಾದಿ) ಇತ್ಯಾದಿ ಚರ್ಚೆಗಳು ಬರುವುದಿಲ್ಲ. ಇಂದಿನ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಭಾಷೆ ಸಮಾಜದ ಎಲ್ಲರ ಒಳಗೊಳ್ಳುವಿಕೆ ಮುಂತಾದ ಅನೇಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆಯಷ್ಟೆ.
ಈ ಹಿಂದೆ ಗಾಂಧಿಯವರ ಮಾತಿಗೆ ಹಾರ್ಟಾಗ್ ವಿರೋಧ ವ್ಯಕ್ತಪಡಿಸಿದ್ದಂತೆ ಇಂದಿಗೂ ನಮ್ಮ ಸಮಾಜಶಾಸ್ತ್ರಜ್ಞರು ಮತ್ತು ‘ಪ್ರಗತಿಪರ’ ಚಿಂತಕರು ಭಾರತದಲ್ಲಿ ಈ ಬಗೆಯ ಶಿಕ್ಷಣ ಕ್ರಮ ಇರಲಿಲ್ಲವೆಂದೇ ಹೇಳುತ್ತಾರೆ. ಆದರೆ ಧರ್ಮಪಾಲ್ ರವರ ಕೃತಿ ಈ ಎಲ್ಲ ಮಾತುಗಳಿಗೆ ಉತ್ತರ ಕೊಡುತ್ತದೆ.
ಭಾರತದ ಸಾಂಪ್ರದಾಯಿಕ ಶಿಕ್ಷಣ ಕ್ರಮ ಸರಿಯಿಲ್ಲವೆಂದೋ ಇದರಲ್ಲಿ ಕಂಠಪಾಠ ಮಾದರಿ ಇದೆ ಎಂದೋ ಇದರಲ್ಲಿ ಕಾನ್ಸೆಪ್ಟ್ ಲರ್ನಿಂಗ್ ಇಲ್ಲವೆಂದೋ ಹೇಳುತ್ತಾ ತಮ್ಮ ಕ್ರಮದಲ್ಲಿ ಇವೆಲ್ಲಾ ಸೇರಿವೆ ಎಂದು ಪ್ರತಿಪಾದಿಸಿದರು; ಇದನ್ನೇ ನಾವು ಕೂಡ ನಂಬಿ ಅಳವಡಿಸಿಕೊಂಡೆವು. ಆದರೆ ಭಾಷೆ ಮಾಧ್ಯಮ ಕಲಿಕೆಯ ಸಮಸ್ಯೆಗಳು ಬಗೆಹರಿಯಲಿಲ್ಲ ಇಂದಿಗೊ ಶಿಕ್ಷಣ ನೂರಾರು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಸಾಂಪ್ರದಾಯಿಕ ಶಿಕ್ಷಣದಲ್ಲಿ ಕಲಿಕೆ ಶಿಕ್ಷಕ ಕೇಂದ್ರಿತವಾಗಿತ್ತು. ವಿದ್ಯಾರ್ಥಿಗಳು ತಮಗೆ ಬೇಕಾದ ಜ್ಞಾನ ಪಡೆಯಲು ಅಂಥ ಶಿಕ್ಷಕರ ಬಳಿ ಹೋಗುತ್ತಿದ್ದರು. ಇಂದು ಕೂಡ ಶಿಕ್ಷಣ ಶಿಕ್ಷಕ-ಕೇಂದ್ರಿತವಾಗಿದ್ದರೂ ಶಿಕ್ಷಕರಿಗೆ ನೀಡಬೇಕಾದ ತರಬೇತಿ, ಅವರ ಆಸಕ್ತಿ ಮೊದಲಾದವುಗಳ ಸಮಸ್ಯೆಯನ್ನು ನೋಡುತ್ತಿದ್ದೇವೆ. ಹಾಗಾದರೆ ಶಿಕ್ಷಣ ಎಂದರೆ ಕೇವಲ ಸಾಕ್ಷರತೆ ಸಾಧಿಸುವುದಲ್ಲ, ಜ್ಞಾನ ಪಡೆಯುವುದು ಎಂಬುದನ್ನು ನಮ್ಮ ಸಾಂಪ್ರದಾಯಿಕ ಕ್ರಮ ತೋರಿಸುತ್ತದೆ. ನಮ್ಮ ಕಲಿಕೆ ಏನು ಮತ್ತು ಹೇಗೆ ಕಲಿಯಬೇಕು ಅದರ ಜವಾಬ್ದಾರಿ ಯಾರದು ಎಂಬುದನ್ನು ಧರ್ಮಪಾಲರ ಕೃತಿ ತೋರಿಸುತ್ತದೆ.
ನಿಜವಾಗಿ ಒಂದೊಂದು ಸಮುದಾಯ ತಲತಲಾಂತರದಿಂದ ಉಳಿಸಿಕೊಂಡು ಬಂದ ತಮ್ಮ ತಮ್ಮ ವೃತ್ತಿಸಂಬಂಧವಾದ ಜ್ಞಾನ ಈ ರೀತಿ ಕಲಿಕೆಯ ಮೂಲಕ ಹರಿದುಬರುತ್ತಿತ್ತು ಇಂಥ ಕುಲವೃತ್ತಿ ಮತ್ತು ಆ ಸಂಬಂಧವಾದ ಜ್ಞಾನ ಅರ್ಥವಾಗದ ಬ್ರಿಟಿಷರು ಇವುಗಳನ್ನು ವರ್ಣ ಮತ್ತು ಜಾತಿವ್ಯವಸ್ಥೆಯ ಅಡಿಯಲ್ಲಿ ಗುರುತಿಸಿ ಜ್ಞಾನವನ್ನು ತಮ್ಮ ಕಲಿಕಾ ಕ್ರಮದ ಮೂಲಕ ಒಡೆದರು. ಇದರಿಂದ ಕಲಿಕೆ ಮತ್ತು ಜ್ಞಾನ ಪರಸ್ಪರ ಬೇರೆಯಾಗುವಂತಾಯಿತು ಹಾಗೂ ಕಲಿಯುವವರ ಆಸಕ್ತಿ ಮತ್ತು ಅನುಭವಗಳೂ ಬೇರೆಯಾದವು. ಇದು ಇಡೀ ನಮ್ಮ ದೇಶೀ ಕಲಿಕಾ ವ್ಯವಸ್ಥೆಗೆ ವಿರುದ್ಧವಾಗಿತ್ತು. ಆದರೆ ಬ್ರಿಟಿಷರು ತಮ್ಮ ಕಲಿಕಾ ಕ್ರಮವನ್ನು ಇಲ್ಲಿ ಹೇರುವುದಕ್ಕಾಗಿ ಭಾರತೀಯ ಕಥೆ ಪುರಾಣಗಳ ನಿದರ್ಶನಗಳನ್ನು ಎತ್ತಿತೋರಿಸತೊಡಗಿದರು. ಇದಕ್ಕಾಗಿ ಅವರು ಏಕಲವ್ಯ, ಕರ್ಣ, ಶಂಬೂಕ, ಮೊದಲಾದ ಪಾತ್ರಗಳ ಸನ್ನಿವೇಶಗಳನ್ನು ವಿಕೃತವಾಗಿ ಚಿತ್ರಿಸಿ ತೋರಿಸಿದರು. ಇದನ್ನೇ ತಮ್ಮ ಪಠ್ಯಕ್ರಮಗಳಲ್ಲಿ ಸೇರಿಸಿ ಭಾರತದಲ್ಲಿ ಶಿಕ್ಷಣದ ಅಸಮಾನತೆ ಇತ್ತೆಂದು ಬಿಂಬಿಸಿದರು. ನಿಜವಾಗಿ ಭಾರತೀಯ ಸಾಂಪ್ರದಾಯಿಕ ಶಿಕ್ಷಣ ಕ್ರಮದಲ್ಲಿ ಇದಕ್ಕೆ ವಿರುದ್ಧವಾದ ಅಂಶಗಳನ್ನು ಅವರದೇ ಅಧಿಕಾರಿಗಳು ಕೊಡುತ್ತಾರೆ. ಪ್ರತಿಯೊಂದು ಸಮುದಾಯ ಕೂಡ ತನ್ನದೇ ಆದ ಜ್ಞಾನ ಪರಂಪರೆಯನ್ನು ಉಳಿಸಿಕೊಂಡು ಬಂದಿತ್ತು. ಇದರಲ್ಲಿ ಓದು-ಬರಹ ಇರಬೇಕಾಗಿರಲಿಲ್ಲ. ಮೌಖಿಕ ಮತ್ತು ಅನುಭವದ ರೂಪದಲ್ಲಿ ಇವು ಹರಿದು ಬರುತ್ತಿದ್ದವು. ಬ್ರಾಹ್ಮಣರು ತಮ್ಮ ಸಮುದಾಯದ ಆಚರಣೆ, ಜ್ಯೋತಿಷ ಸಂಪ್ರದಾಯ, ವೇದಕಲಿಕೆ ಮುಂತಾದವನ್ನು ಇದೇ ರೀತಿ ಕಲಿತುಕೊಂಡು ಬರುತ್ತಿದ್ದರು. ಅಕ್ಕಸಾಲಿಗರು, ಮರ ಮತ್ತು ಶಿಲೆಗಳ ಕೆತ್ತನೆಗಾರರು ಮತ್ತು ಇನ್ನುಳಿದ ಸಮುದಾಯದವರೂ ತಮ್ಮದೇ ಜ್ಞಾನ ಪರಂಪರೆಯನ್ನು ಹೊಂದಿದ್ದರು. ಇವೆಲ್ಲವೂ ಬ್ರಾಹ್ಮಣರಿಗೆ ಗೊತ್ತಿರಲಿಲ್ಲ ಮತ್ತು ಗೊತ್ತಿರಬೇಕಾಗಿಯೂ ಇರಲಿಲ್ಲ. ಉದಾಹರಣೆಗೆ ಕೆತ್ತನೆಗೆ ಯಾವ ಬಗೆಯ ಶಿಲೆ ಮತ್ತು ಮರ ಸೂಕ್ತವೆಂದು ಕೆತ್ತನೆಗಾರ ಸುಲಭವಾಗಿ ಗುರುತಿಸುತ್ತಿದ್ದ. ಅದೇ ರೀತಿ ಒಬ್ಬ ಬೋವಿ ನೆಲವನ್ನು ನೋಡುತ್ತಿದ್ದಂತೆ ಸುತ್ತಮುತ್ತಲಿನ ಪರಿಸರವನ್ನು ಗಮನಿಸಿ ಎಲ್ಲಿ ನೀರು ನೆಲದೊಳಗೆ ದೊರೆಯಬಲ್ಲದು ಎಂಬುದನ್ನು ಹೇಳುವ ಜ್ಞಾನ ಗಳಿಸಿಕೊಂಡಿರುತ್ತಿದ್ದ. ಇದು ನಮ್ಮ ದೇಶೀ ಕಲಿಕೆಯಾಗಿರುತ್ತಿತ್ತು. ಇದೇ ರೀತಿಯ ಕಲಿಕೆ ಕಲೆ ಮತ್ತು ನೃತ್ಯಗಳಲ್ಲೂ ಇರುತ್ತಿತ್ತು. ಇಂಥ ಶಿಕ್ಷಣ ನಮ್ಮಿಂದ ಮತ್ತು ಇಡೀ ಪ್ರಪಂಚದಿಂದ ದೂರವಾಗಿರುವುದು ಜ್ಞಾನದ ನಷ್ಟವೇ ವಿನಾ ಬೇರೆಯಲ್ಲ.
ಮತ್ತೆ ನಾವು ಬ್ರಿಟಿಷ್ಪೂರ್ವದ ಭಾರತೀಯ ಶಿಕ್ಷಣ ಕ್ರಮ ಹೇಗಿತ್ತು ಹಾಗೂ ಅದರ ಪ್ರಯೋಜನ ಏನು ಹಾಗೂ ಇಂದು ಅದಕ್ಕೆ ಪ್ರಸ್ತುತತೆ ಇದೆಯೇ ಎಂದು ಕೇಳಿಕೊಂಡರೆ ಚಾತಂ ಹೌಸ್ನಲ್ಲಿ ಗಾಂಧಿಯವರು ಹೇಳಿದ ಆರಂಭದ ಮಾತನ್ನು ಮತ್ತೆ ನೆನೆದು ಬ್ರಿಟಿಷ್ ಶಿಕ್ಷಣ ಕ್ರಮ ನಮ್ಮ ದೇಶಕ್ಕೆ ಸೂಕ್ತವಲ್ಲವೆಂದು ಒಪ್ಪಲೇಬೇಕಾಗುತ್ತದೆ. ಅವರಿಗಿಂತ ಸೊಗಸಾಗಿ ಇದನ್ನು ನಮ್ಮ ಜನರ ಮುಂದಿಡುವುದು ಸಾಧ್ಯವಿಲ್ಲ. ಅವರು ಇಟ್ಟಿದ್ದಾಗಿದೆ, ಧರ್ಮಪಾಲರೂ ಭಾರತೀಯ ಶಿಕ್ಷಣ ಕ್ರಮ ಬ್ರಿಟಿಷ್ಪೂರ್ವದಲ್ಲಿ ಹೇಗಿತ್ತೆಂದು ದಾಖಲೆ ಸಹಿತ ಚಿತ್ರಿಸಿದ್ದಾಗಿದೆ. ಈ ಬಗ್ಗೆ ಗಂಭೀರವಾಗಿ ನಾವು ಚಿಂತಿಸಬೇಕಾದ ಸಮಯ ಇದೀಗ ಕೂಡಿಬಂದಿದೆ.
ಧರ್ಮಪಾಲರ ಈ ವಿವರಗಳು ಭಾರತದಲ್ಲಿ ಇಂದಿನ ಶಿಕ್ಷಣವನ್ನು ಕುರಿತು ಆಲೋಚಿಸಲು ನಮಗೆ ಕೆಲವು ಹೊಸ ಸಾಧ್ಯತೆಗಳನ್ನು ಹುಟ್ಟಿಸುತ್ತಿವೆÉ. ಭಾರತೀಯ ಪಾರಂಪರಿಕ ಶಿಕ್ಷಣವು ಪ್ರಭುತ್ವದ ಆಧಾರದ ಮೇಲೆ ನಿಂತಿರಲಿಲ್ಲ. ಸಮಾಜವು ಈ ವ್ಯವಸ್ಥೆಯನ್ನು ತನ್ನಿಂತಾನೆ ನಿರ್ವಹಿಸುತ್ತಿತ್ತು. ಪ್ರಭುತ್ವ ಅದರ ಪೋಷಣೆಗೆ ಅಗತ್ಯವಾದ ಸಂದರ್ಭದಲ್ಲಿ ಸಹಾಯ ಮಾಡುತ್ತಿತ್ತು. ಆದರೆ ಪ್ರಭುತ್ವಕ್ಕೆ ಈ ಶೈಕ್ಷಣಿಕ ವ್ಯವಸ್ಥೆಯನ್ನು ನಿಯಂತ್ರಿಸುವುದಾಗಲಿ, ಮಾರ್ಪಾಡು ಮಾಡುವುದಾಗಲಿ ಸಾಧ್ಯವಿರಲಿಲ್ಲ. ಆ ರೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆಯೊಂದು ರೂಪಗೊಂಡರೆ ಇಂದಿನ ಭಾರತದಲ್ಲಿ ಆಧುನಿಕ ಶಿಕ್ಷಣವನ್ನು ಹೇಗೆ ರಚಿಸಬಹುದು ಎಂದು ಯೋಚಿಸುವುದು ಇಂದು ನಮಗೆ ಅನಿವಾರ್ಯವಾಗಿದೆ. ಸರ್ಕಾರೀ ಶಾಲಾ-ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳು ಸರ್ಕಾರದಿಂದ ನಿರ್ವಹಿಸಲ್ಪಟ್ಟರೂ ಅವುಗಳು ಸಾಗುತ್ತಿರುವ ದಾರಿಯನ್ನು ಗಮನಿಸಿದಾಗ ಮತ್ತೊಮ್ಮೆ ನಾವು ನಮ್ಮ ಗತದಿಂದ ಏನನ್ನು ಕಲಿಯಬೇಕು ಎಂದು ಆಲೋಚಿಸುವುದು ಅನಿವಾರ್ಯವಾಗಿದೆ.
ಭಾರತದಲ್ಲಿ ಮಹಿಳಾ ಶಿಕ್ಷಣ
ಈಗಿನ ಆಂಧ್ರಪ್ರದೇಶದ ಹೆಚ್ಚು ಭಾಗವನ್ನೂ ಕರ್ನಾಟಕ, ಕೇರಳ, ಒಡಿಶಾಗಳ ಹಲವು ಜಿಲ್ಲೆಗಳನ್ನೂ ಒಳಗೊಂಡಿದ್ದ ತಮಿಳುನಾಡು (ಆಗ ‘ಮದರಾಸು’) ಪ್ರಾಂತದಲ್ಲಿ ಬ್ರಿಟಿಷರು ೧೮೨೨-೨೫ರಲ್ಲಿ ನಡೆಸಿದ ವ್ಯಾಪಕ ಸಮೀಕ್ಷೆಯಿಂದ ಹೊರಪಡುವ ವಿವರಗಳು ಗಮನಸೆಳೆಯುವಂತಿವೆ. ಇಡೀ ಮದರಾಸು ಪ್ರಾಂತದಲ್ಲಿ ಆಗ ಇದ್ದ ಶಾಲೆಗಳ ಸಂಖ್ಯೆ ೧೦,೫೭೫; ಮಹಾವಿದ್ಯಾಲಯಗಳು (ಕಾಲೇಜುಗಳು) ೧೦೯೪. ಅವುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ: ಶಾಲೆಗಳಲ್ಲಿ ೧,೫೭,೧೯೫; ಕಾಲೇಜುಗಳಲ್ಲಿ ೫,೪೩೧. ವಿದ್ಯಾರ್ಥಿಗಳಲ್ಲಿ ‘ಶೂದ್ರ’ ಮತ್ತು ‘ಕೆಳ’ಜಾತಿಗಳವರ ಪ್ರಮಾಣ ಶೇ. ೭೦ರಿಂದ ಶೇ. ೮೦ರಷ್ಟಿದ್ದಿತು. ಪ್ರಾಂತದಲ್ಲಿನ ಅರ್ಹವಯಸ್ಕರಲ್ಲಿ ಶೇ. ೨೫ಕ್ಕೂ ಹೆಚ್ಚು ಭಾಗ ಶಾಲೆಗಳಿಗೆ ಹೋಗುತ್ತಿದ್ದರೆ ಅಧಿಕಸಂಖ್ಯೆಯ ಬಾಲಕರೂ ವಿಶೇಷವಾಗಿ ಬಾಲಿಕೆಯರೂ ಮನೆಗಳಲ್ಲಿಯೆ ವ್ಯಾಸಂಗ ಮಾಡುವ ವ್ಯವಸ್ಥೆ ಇದ್ದಿತು – ಎಂದು ಮದರಾಸು ಗವರ್ನರನ ವರದಿ ಇದೆ. ಬಳ್ಳಾರಿ ಭಾಗದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಸಂಖ್ಯೆ ೧,೧೮೫ ಇದ್ದರೆ ಶೂದ್ರ ವಿದ್ಯಾರ್ಥಿಗಳ ಸಂಖ್ಯೆ ೨,೯೯೮ ಇದ್ದಿತು. ಶ್ರೀರಂಗಪಟ್ಟಣದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು ೪೮; ಶೂದ್ರ ವಿದ್ಯಾರ್ಥಿಗಳು ೨೯೮. ಉತ್ತರ ಆರ್ಕಾಟ್ ಜಿಲ್ಲೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು ೬೯೮; ಶೂದ್ರ ವಿದ್ಯಾರ್ಥಿಗಳು ೪,೮೫೬. ಹೆಚ್ಚಿನ ಜಿಲ್ಲೆಗಳಲ್ಲಿ ಬಾಲಕರಿಗಿಂತ ಬಾಲಿಕೆಯರ ಸಂಖ್ಯೆ ಅಧಿಕವಾಗಿದ್ದಿತು.
ಪೂರ್ವಭಾರತದಲ್ಲಿಯೂ ೧೯ನೇ ಶತಮಾನದ ಆರಂಭದ ದಶಕಗಳಲ್ಲಿ ಇಂತಹದೇ ಚಿತ್ರ ಇದ್ದುದು ವಿಲಿಯಂ ಆ್ಯಡಂ ಎಂಬಾತ ೧೮೩೫-೩೮ರಲ್ಲಿ ನಡೆಸಿದ ಸಮೀಕ್ಷೆಯಿಂದ ವ್ಯಕ್ತವಾಗುತ್ತದೆ. ಹದಿನಾಲ್ಕೂವರೆ ಲಕ್ಷ ಜನಸಂಖ್ಯೆಯ ಪೂರ್ಣೀ ಜಿಲ್ಲೆಯಲ್ಲಿ ೧೮೦೧ರಲ್ಲಿ ೧೧೯ ಪ್ರೌಢ ವಿದ್ಯಾಲಯಗಳು, ಹದಿನಾರೂಕಾಲು ಲಕ್ಷ ಜನಸಂಖ್ಯೆ ಇದ್ದ ೨೪-ಪರ್ಗಣ ಜಿಲ್ಲೆಯಲ್ಲಿ ೧೯೦ ಪ್ರೌಢ ವಿದ್ಯಾಲಯಗಳು ಇದ್ದವು. ಉಲ್ಲೇಖಾರ್ಹ ಸಂಗತಿಯೆಂದರೆ ಮುರ್ಶಿದಾಬಾದ್, ಬೀರ್ಫೋಂ, ಬುರ್ದವಾನ್, ದಕ್ಷಿಣ ಬಿಹಾರ, ತಿರ್ಹಟ್ – ಈ ಐದೂ ಜಿಲ್ಲೆಗಳಲ್ಲಿ ಅಧ್ಯಾಪಕರಲ್ಲಿ ಬ್ರಾಹ್ಮಣರಿಗಿಂತ ಕಾಯಸ್ಥರು ಹೆಚ್ಚು ಸಂಖ್ಯೆಯಲ್ಲಿದ್ದರು. ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಸ್ಥಾನಿಕಭಾಷೆಗಳಲ್ಲಿ (ಬಂಗಾಳಿ ಅಥವಾ ಒಡಿಯಾ) ಇರುತ್ತಿತ್ತು. ಇಂತಹ ಹತ್ತಾರು ವಿವರಗಳು ವಿಲಿಯಂ ಆ್ಯಡಂ ಸಮೀಕ್ಷೆಯ ಮತ್ತಿತರ ವರದಿಗಳಲ್ಲಿ ದಾಖಲೆಗೊಂಡು ಲಭ್ಯವಿವೆ.