ನೇತಾಜಿಯವರಂತೆ ತಮ್ಮ ಅನುಪಮ ತ್ಯಾಗದ, ಸರ್ವಸ್ವಾರ್ಪಣೆಯ ಮತ್ತು ಚಿಂತನಸ್ಫುಟತೆಯ ಮೂಲಕ ಸ್ವಾತಂತ್ರ್ಯಪ್ರಾಪ್ತಿಪಥವನ್ನು ಪ್ರಶಸ್ತಗೊಳಿಸಿದ ಅಪ್ರತಿಮ ದೇಶಭಕ್ತರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರ್ (೨೮.೦೫.೧೮೮೩-೨೬.೨.೧೯೬೬). ನೇತಾಜಿಯವರಂತೆ ಸಾವರಕರರಿಗೂ ದೇಶದ ಅತ್ಯುನ್ನತ ಗೌರವಸ್ಥಾನ ಅಧಿಕೃತವಾಗಿ ಸಲ್ಲಬೇಕು.
ದ್ರಷ್ಟಾರ ಸಾವರಕರ್ -1
ಭಾರತದ ಇತಿಹಾಸದ ಈಗಿನ ಕಾಲಖಂಡವನ್ನು ‘ಪರಿಮಾರ್ಜನಪರ್ವ’ ಎಂದು ಲಕ್ಷಣೀಕರಿಸುವುದು ಔಚಿತ್ಯಪೂರ್ಣವೆನಿಸುತ್ತದೆ. ಅಯೋಧ್ಯೆಯ ದೇಗುಲದ ಪುನರ್ನಿರ್ಮಾಣದ ಉದ್ಘಾಟನೆ, ಪವಿತ್ರ ಕಾಶಿ ಕ್ಷೇತ್ರದ ಉನ್ನತೀಕರಣ ಮೊದಲಾದ ಈಚಿನ ಸಾಧನೆಗಳಂತೂ ಸಂದೇಹಾತೀತವಾಗಿ ನವಯುಗದ ಪರಿಚಾಯಕಗಳಾಗಿವೆ. ಅವುಗಳೊಡಗೂಡಿ ಆಗಲೇಬೇಕಾಗಿದ್ದ ಇನ್ನೊಂದು ಅತ್ಯಾವಶ್ಯಕ ಕಾರ್ಯವೆಂದರೆ ಸ್ವಾತಂತ್ರ್ಯಸಂಘರ್ಷಕಥನದಲ್ಲಿ ಕಳೆದ ಏಳೂವರೆ ದಶಕಗಳುದ್ದಕ್ಕೂ ಸ್ವಹಿತಾಸಕ್ತ ವಲಯಗಳಿಂದ ಉದ್ದೇಶಪೂರ್ವಕವಾಗಿ ನೆಲೆಗೊಳಿಸಲ್ಪಟ್ಟಿದ್ದ ಸತ್ಯದೂರ ಮಂಡನೆಗಳ ಉಚ್ಚಾಟನೆ ಹಾಗೂ ನಿಜೇತಿಹಾಸದ ದೃಢೀಕರಣ ಮತ್ತು ಸಾಧಿಕಾರಿಕ ಪ್ರವರ್ತನೆ. ಈ ದಿಶೆಯಲ್ಲಿ ಸ್ವಾತಂತ್ರ್ಯಸಾಧಕ ಶ್ರೇಣಿಯ ಅಗ್ರಪಂಕ್ತಿಯಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ರವರಿಗೆ ನ್ಯಾಯವಾಗಿ ಸಲ್ಲಲೇಬೇಕಾದ ಸಂಮಾನ್ಯತೆಯನ್ನು ನೀಡಿರುವ ಈಗಿನ ಆರೂಢ ನರೇಂದ್ರಮೋದಿ ಸರ್ಕಾರದ ಕ್ರಮಕ್ಕೆ ಇಡೀ ದೇಶದ ಅಭಿವಂದನೆ ಸಲ್ಲುತ್ತದೆ.
ನೇತಾಜಿಯವರಂತೆ ತಮ್ಮ ಅನುಪಮ ತ್ಯಾಗದ, ಸರ್ವಸ್ವಾರ್ಪಣೆಯ ಮತ್ತು ಚಿಂತನಸ್ಫುಟತೆಯ ಮೂಲಕ ಸ್ವಾತಂತ್ರ್ಯಪ್ರಾಪ್ತಿಪಥವನ್ನು ಪ್ರಶಸ್ತಗೊಳಿಸಿದ ಅಪ್ರತಿಮ ದೇಶಭಕ್ತರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರ್ (೨೮.೫.೧೮೮೩-೨೬.೨.೧೯೬೬).
ನೇತಾಜಿಯವರಂತೆ ಸಾವರಕರರಿಗೂ ದೇಶದ ಅತ್ಯುನ್ನತ ಗೌರವಸ್ಥಾನ ಅಧಿಕೃತವಾಗಿ ಸಲ್ಲಬೇಕು. ಇದಕ್ಕೂ ಪರಿಮಾರ್ಜನಪರ್ವದಲ್ಲಿ ಆದ್ಯತೆ ಪ್ರಾಪ್ತವಾಗಬೇಕಾಗಿದೆ. ಈ ವರ್ಷ ಸಾವರಕರರ ಸ್ವರ್ಗವಾಸವಾದದ್ದರ ೫೬ನೇ ವರ್ಷ.
ನೇತಾಜಿಯವರಿಗೆ ಪ್ರೇರಕ
ಒಂದು ದೃಷ್ಟಿಯಿಂದ ನೇತಾಜಿಯವರಿಗೂ ಸ್ಫೂರ್ತಿಸ್ಥಾನವಾಗಿದ್ದವರು ಸಾವರಕರ್ ಅವರೇ.
ಹಿಂದುಗಳು ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ಸೇನೆಗೆ ಸೇರಬೇಕೆಂದು ವರ್ಷಗಳುದ್ದಕ್ಕೂ ಪ್ರತಿಪಾದಿಸುತ್ತ ಬಂದಿದ್ದವರು, ಸಾವರಕರ್. ಇಂಗ್ಲೆಂಡ್ ಮಹಾಯುದ್ಧದ ಆತಂಕವನ್ನೆದುರಿಸುತ್ತಿದ್ದಾಗ ಆ ಅವಕಾಶವನ್ನು ಬಳಸಿಕೊಂಡು ಜರ್ಮನಿ-ಜಪಾನ್ಗಳ ನೆರವನ್ನು ಪಡೆದು ಗಡಿಯಾಚೆಯಿಂದ ಭಾರತದ ಮೇಲೆ ದಾಳಿ ಮಾಡಿ ಬ್ರಿಟಿಷರ ಕೈಯಿಂದ ಭಾರತವನ್ನು ಮುಕ್ತಗೊಳಿಸಬೇಕೆಂಬ ಯೋಜನೆಯನ್ನು ಸುಭಾಷಚಂದ್ರ ಬೋಸರ ಮನದಲ್ಲಿ ಸ್ಥಿರಗೊಳಿಸಿದವರು ಸಾವರಕರ್ (೨೨-೬-೧೯೪೦). ಸಾವರಕರರ ಸ್ಫುಟವಾದ ದಿಗ್ದರ್ಶನವನ್ನು ನೇತಾಜಿ ತಮ್ಮ ಪೂರ್ವಏಷ್ಯ ಅಭಿಯಾನದಲ್ಲಿ ಮೇಲಿಂದ ಮೇಲೆ ಸ್ಮರಿಸಿದರು. ಸಿಂಗಾಪುರದ ಫ್ರೀ ಇಂಡಿಯಾ ರೇಡಿಯೋದಿಂದ ಪ್ರಸಾರ ಮಾಡಿದ ಭಾಷಣವೊಂದರಲ್ಲಿ ನೇತಾಜಿ ಹೇಳಿದರು:
“ರಾಜಕೀಯ ಪ್ರಬುದ್ಧತೆಯಿಲ್ಲದ ಕಾಂಗ್ರೆಸ್ ನಾಯಕರು ಭಾರತೀಯ ರಕ್ಷಣಾದಳದ ಸೈನಿಕರನ್ನು ‘ಹಣಕ್ಕಾಗಿ ಮಾರಿಕೊಂಡವರು’ ಎಂದು ಹೀಗಳೆಯುತ್ತಿರುವಾಗ ವೀರ ಸಾವರಕರರು ‘ಸೇನೆಗೆ ಸೇರಿ’ ಎಂದು ಭಾರತೀಯ ತರುಣರನ್ನು ಹುರಿದುಂಬಿಸುತ್ತಿರುವುದು ಸ್ಫೂರ್ತಿದಾಯಕವಾಗಿದೆ.”
ಅಂತಿಮವಾಗಿ ಭಾರತದ ಸ್ವಾತಂತ್ರ್ಯ ಪ್ರಾಪ್ತಿಯನ್ನು ತೀವ್ರಗೊಳಿಸಿದುದು ನೇತಾಜಿಯವರ ಕಾರ್ಯಾಚರಣೆಯೇ ಎಂಬುದನ್ನು ಆಗಿನ ಇಂಗ್ಲೆಂಡಿನ ಪ್ರಧಾನಮಂತ್ರಿ ಕ್ಲೆಮೆಂಟ್ ಆಟ್ಲಿಯೇ ಬ್ರಿಟನ್ನಿನ ಸಂಸತ್ತಿನಲ್ಲಿ ಹೇಳಿದ:
“ಇಂಗ್ಲೆಂಡು ಭಾರತದಿಂದ ಕಾಲ್ತೆಗೆಯಲು ಸಮಯ ಬಂದಿದೆ ಎಂಬ ಸ್ಫುಟವಾದ ಎಚ್ಚರಿಕೆಯ ಗಂಟೆ ಬಾರಿಸಿದ ಸಂಗತಿಗಳು ಐ.ಎನ್.ಎ. ಬೆಳವಣಿಗೆ ಮತ್ತು ರಾಯಲ್ ಇಂಡಿಯನ್ ನೇವಿಯ ಬಂಡಾಯ.”
ರಾಸಬಿಹಾರಿ ಬೋಸ್ ಮತ್ತು ಸುಭಾಷಚಂದ್ರ ಬೋಸ್ ಅವರನ್ನು ಕುರಿತ ‘Two Great Indians in Japan’ ಎಂಬ ಪ್ರಸಿದ್ಧ ಗ್ರಂಥದಲ್ಲಿ ಜೆ.ಜಿ. ಒಹಸಾವಾ ಎಂಬ ಪ್ರತಿಷ್ಠಿತ ಲೇಖಕ ಆಜಾದ್ ಹಿಂದ್ ಫೌಜ್ ಕಲ್ಪನೆಯ ಆವಿಷ್ಕರ್ತರು ಸಾವರಕರ್ ಎಂದು ಉಲ್ಲೇಖಿಸಿದ್ದಾರೆ.
ದೂರದೃಷ್ಟಿ
ಹೆಚ್ಚುಹೆಚ್ಚು ಹಿಂದೂ ತರುಣರು ಸೈನಿಕ ಶಿಕ್ಷಣ ಪಡೆದುಕೊಳ್ಳಬೇಕೆಂಬ ಸಾವರಕರರ ಸಲಹೆ ಸಂಕುಚಿತ ಮಾನಸಿಕತೆಯದೆಂದು ಹಲವರು ‘ಉದಾರವಾದಿ’ಗಳು ಟೀಕಿಸಿದರು. ಕಾಂಗ್ರೆಸ್ ನೇತಾರರಂತೂ ಸಾವರಕರರನ್ನು ಬ್ರಿಟಿಷ್ ಸಾಮ್ರಾಜ್ಯದ ಪ್ರಚ್ಛನ್ನ ಬೆಂಬಲಿಗರೆಂದೂ ದೂಷಿಸಲು ಹಿಂದೆಗೆಯಲಿಲ್ಲ. ಆದರೆ ಇತಿಹಾಸಗತಿಯು ಭ್ರಾಮಕ ಭಾವನೆಗಳಿಗೆ ಸೊಪ್ಪುಹಾಕುವುದಿಲ್ಲ.
೧೯೫೪ರ ದಿನಗಳಲ್ಲಿ ‘ಹಿಂದೂ-ಚೀನೀ ಭಾಯಿಭಾಯಿ’ ಉದ್ಗಾರಗಳ ನಡುವೆ ನೆಹರು ಪಂಚಶೀಲ ತತ್ತ್ವದ ಜಪದಲ್ಲಿ ನಿರತರಾಗಿದ್ದಾಗ ಚೀಣಾದ ಆಕ್ರಮಣಶೀಲತೆಯ ಬಗೆಗೂ ಅವಿಶ್ವಸನೀಯತೆಯ ಬಗೆಗೂ ನೆಹರುರವರನ್ನು ಸಾವರಕರರು ಸ್ಪಷ್ಟ ಶಬ್ದಗಳಲ್ಲಿ ಎಚ್ಚರಿಸಿದ್ದರು. ಭಾರತದ ಭೂಭಾಗವನ್ನು ವಶಪಡಿಸಿಕೊಳ್ಳಲು ಚೀಣಾ ಹಿಂದೆಗೆಯುವುದಿಲ್ಲ ಎಂದೂ ಹೇಳಿದ್ದರು. ಈ ಶಂಕೆಗಳೆಲ್ಲ ಭ್ರಮೆಯಿಂದ ಉಂಟಾಗಿದ್ದವೆಂದು ನೆಹರು ಅವನ್ನು ತಳ್ಳಿಹಾಕಿದ್ದರು. ಕೆಲವೇ ವರ್ಷಗಳಲ್ಲಿ ಈಶಾನ್ಯಭಾರತದ ವಿಶಾಲ ಭಾಗವನ್ನು ಚೀಣಾ ನುಂಗಿ ಕುಳಿತಿತು.
ಹೀಗೆ ಸಾವರಕರರ ಒಂದೊಂದು ಭವಿಷ್ಯವಾಣಿಯೂ ದುರದೃಷ್ಟದಿಂದ ನಿಜಗೊಂಡಿತು. ಬಂಗ್ಲಾದೇಶೀಯ ಮುಸ್ಲಿಮರು ಅಸ್ಸಾಂ ಭಾಗಕ್ಕೆ ಅಪಾರ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದುದು ಭವಿಷ್ಯದಲ್ಲಿ ಭಾರತಕ್ಕೆ ದೊಡ್ಡ ಸಮಸ್ಯೆ ಆಗುತ್ತದೆಂದೂ ಸಾವರಕರರು ಅಂದೇ ಎಚ್ಚರಿಸಿದ್ದರು. ಸಾವರಕರರ ಹಾಗೂ ಇತರರ ಎಚ್ಚರಿಕೆಗೆ ನೆಹರು ನೀಡಿದ ಪ್ರತಿಕ್ರಿಯೆ ಹಾಸ್ಯಾಸ್ಪದವೆಂದೇ ಅನಿಸುತ್ತದೆ. ನೆಹರು ಹೇಳಿದರು: ಖಾಲಿ ಸ್ಥಳ ಇರುವ ಕಡೆ ಯಾರೋ ಆಶ್ರಯಹೀನರು ಬಂದು ನೆಲೆಸುವುದನ್ನು ಹೇಗೆ ತಪ್ಪಿಸಬೇಕು? ಏಕೆ ತಪ್ಪಿಸಬೇಕು? ಆ ಔದಾಸೀನ್ಯದ ಫಲಿತವಾಗಿ ಅಸ್ಸಾಂ ಭಾಗದಲ್ಲಿ ಮುಸ್ಲಿಮರ ಜನಸಂಖ್ಯೆ ಬೆಳೆಯುತ್ತ ಹೋಗಿ ಶೇ. ೩೫ಕ್ಕೂ ಮೀರಿದೆ. ಇವೆಲ್ಲ ಛದ್ಮ ಸೆಕ್ಯುಲರ್ವಾದದ ದುಷ್ಫಲಿತಗಳು. ಅಸ್ಸಾಮಿನಲ್ಲಿ ಹಿಂದುಗಳೇ ಪೀಡಿತರೆಂಬ ಸ್ಥಿತಿ ನಿರ್ಮಾಣವಾಯಿತು.
ಅವರ ಎಪ್ಪತ್ತೈದನೆ ಜನ್ಮದಿನದ ನಿಮಿತ್ತ (೨೮-೫-೧೯೫೮) ಮುಂಬಯಿ ನಗರಸಭೆ ಏರ್ಪಡಿಸಿದ್ದ ಸಂಮಾನೋತ್ಸವದಲ್ಲಿ ಸಾವರಕರ್ ಭಾರತ ರಕ್ಷಣಾಬಲವನ್ನು ಹೆಚ್ಚಿಸಿಕೊಳ್ಳುವುದರ ಆವಶ್ಯಕತೆಯನ್ನು ಒತ್ತಿಹೇಳಿ ಸರ್ಕಾರ ಇದನ್ನು ಉದಾಸೀನ ಮಾಡಿದೆಯೆಂದು ವಿಷಾದ ವ್ಯಕ್ತಪಡಿಸಿದರು. ಇದಾದ ನಾಲ್ಕೇ ವರ್ಷಗಳಲ್ಲಿ (ಅಕ್ಟೋಬರ್ ೧೯೬೨) ಚೀಣಾ ಆಕ್ರಮಣ ನಡೆದು ಭಾರತ ಹೀನಾಯ ಸೋಲನ್ನು ಅನುಭವಿಸಬೇಕಾಯಿತು. ಆ ಸನ್ನಿವೇಶದಲ್ಲಿಯೂ ಭಾರತೀಯ ಸೈನಿಕರ ಮನೋಬಲವನ್ನು ವೃದ್ಧಿಸುವ ಉತ್ತೇಜಕ ಸಂದೇಶವನ್ನು ಸಾವರಕರ್ ಕಳುಹಿಸಿದರು.
೧೯೬೨ರಲ್ಲಿ ಚೀಣಾದಿಂದ ದುರಾಕ್ರಮಣ ನಡೆದು ಭಾರತ ಹೀನಾಯ ಸೋಲನ್ನು ಉಂಡ ಸನ್ನಿವೇಶದಲ್ಲಿ ದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ನೊಂದು ಹೀಗೆಂದಿದ್ದರು: “ದೊಡ್ಡ ಪ್ರಮಾಣದಲ್ಲಿ ಹಿಂದೂಗಳು ಸೈನ್ಯವನ್ನು ಸೇರಬೇಕೆಂಬ ಸಾವರಕರರು ಹಿಂದಿನಿಂದ ಹೇಳುತ್ತ ಬಂದಿರುವ ಹಿತವಾದವನ್ನು ನಾವು ಆಲಿಸಿ ಆ ದಿಕ್ಕಿನಲ್ಲಿ ಪ್ರಯತ್ನಶೀಲರಾಗಿದ್ದಿದ್ದರೆ ಬಹುಶಃ ಈಗಿನ ದುಃಸ್ಥಿತಿ ನಮಗೆ ಬರುತ್ತಿರಲಿಲ್ಲವೇನೋ!”
ಒಂದು ಸಂದರ್ಭದಲ್ಲಿ ಸಾವರಕರರು ನೀಡಿದ ವ್ಯಾಖ್ಯೆ ಅವರ ಜೀವಿತ-ಸಾಧನೆಯನ್ನು ಗ್ರಹಿಸಲು ತೋರ್ಬೆರಳಾಗಿದೆ: “ನಾನು ಈ ದೇಶಭಕ್ತಿವ್ರತವನ್ನು ಸ್ವೀಕರಿಸಿರುವುದು ಅಂಧಶ್ರದ್ಧೆಯಿಂದಲ್ಲ. ನನಗೆ ಇದಕ್ಕೆ ಪ್ರೇರಣೆ ದೊರೆತಿರುವುದು ಪ್ರಕೃತಿಯಿಂದ ಮತ್ತು ಇತಿಹಾಸದಿಂದ. ಈ ಮಾರ್ಗದ ಅನುಸರಣೆಯಲ್ಲಿ ಅನೇಕ ವಿಪತ್ತುಗಳು ಒದಗುವುದೆಂಬುದನ್ನು ನಾನು ನಿರೀಕ್ಷಿಸಿಯೇ ಇದ್ದೆ. ಈ ಪೂರ್ಣ ಅರಿವಿನೊಡಗೂಡಿಯೇ ನಾನು ನನ್ನ ಆತ್ಮಯಜ್ಞವ್ರತವನ್ನು ಸ್ವೀಕರಿಸಿದುದು.”
ಸತರ್ಕ ಚಿಂತನೆ
ಸಾವರಕರರ ಬಗೆಗೆ ಕುತ್ಸಿತಮತಿಗಳು ಏನೇನು ಆಕ್ಷೇಪಗಳನ್ನು ಉತ್ಥಾಪಿಸುತ್ತಾರೋ ಅವುಗಳಲ್ಲಿಯೇ ಅವಕ್ಕೆ ಉತ್ತರವೂ ನಿಕ್ಷಿಪ್ತವಿರುತ್ತದೆ. ಈ ಸಂದರ್ಭದಲ್ಲಿ ಪ್ರಕೃತಿನಿಯಮವನ್ನು ನೆನೆಯಬಹುದು. ಯಾರೋ ಒಬ್ಬ ವ್ಯಕ್ತಿ ಏನೋ ಒಂದು ಶಬ್ದಪ್ರಯೋಗವನ್ನು ಯೋಜಿಸಿ ಪ್ರಕಟಿಸಿದನೆಂದರೆ ಅದನ್ನು ಎಲ್ಲರೂ ಒಪ್ಪಿಬಿಡುತ್ತಾರೆಯೆ? ಪ್ರಸಿದ್ಧರನೇಕರು ತಾವು ಆವಿಷ್ಕರಿಸಿದ ಕಲ್ಪನೆಗಳನ್ನು ಪ್ರಚಲಿತಗೊಳಿಸಲು ದೀರ್ಘಕಾಲ ಶ್ರಮಿಸಬೇಕಾಗುತ್ತದೆ; ಆಗಲೂ ಅವರು ಸಫಲರಾಗುವ ನಿಶ್ಚಯ ಇರುವುದಿಲ್ಲ. ಸಾವರಕರರು ಪರಿಭಾಷಿತಗೊಳಿಸಿದ ‘ರಾಷ್ಟ್ರೀಯತೆ’, ‘ಹಿಂದುತ್ವ’ ಮೊದಲಾದ ಕಲ್ಪನೆಗಳೂ ಶಬ್ದಗಳೂ ನೋಡುನೋಡುತ್ತಿದ್ದಂತೆ ಚಲಾವಣೆಗೊಂಡದ್ದು ಹೇಗೆ? ಹಾಗೆ ನೋಡಿದರೆ ಇಪ್ಪತ್ತನೇ ಶತಮಾನದ ಆರಂಭಕಾಲದಲ್ಲಿ ಸಾವರಕರರ ವ್ಯಕ್ತಿಪರಿಚಯವೂ ದೇಶದೆಲ್ಲೆಡೆ ಇದ್ದಿತೆನ್ನಲಾಗದು. ರಾಷ್ಟ್ರೀಯತೆಗೂ ಹಿಂದುತ್ವಕ್ಕೂ ಹೊಸ ಆಯಾಮಗಳು ಸೇರಿದ ವ್ಯಾಖ್ಯಾನದ ಆವಶ್ಯಕತೆ ಇದ್ದ ಕಾರಣದಿಂದಲೇ, ಯುಗಧರ್ಮದ ಆವಶ್ಯಕತೆಯನ್ನು ಈ ಅರ್ಥವಿಸ್ತಾರವು ಪೂರೈಸುವಂತೆ ಇದ್ದ ಕಾರಣದಿಂದಲೇ ಇವು ವ್ಯಾಪಕ ಸ್ವೀಕೃತಿಯನ್ನು ಪಡೆದುಕೊಂಡದ್ದು. ಸಮಕಾಲಿಕ ಯುಗಧರ್ಮಕ್ಕೆ ಸ್ಪಂದಿಸಿದುದೇ ಸಾವರಕರರ ಅನನ್ಯತೆ ಎಂದು ಒಪ್ಪಬೇಕು. ಸಾವರಕರರ ಮಂಡನೆಗಳು ಪೂರ್ಣ ಇತಿಹಾಸಾಧಾರಿತವಾಗಿರುತ್ತಿದ್ದುದು ಅವುಗಳ ಪ್ರಚಲನೆಗೆ ಕಾರಣವಾಯಿತು. ಸಾವರಕರರು ಅವಲಂಬಿಸಿದುದು ದೃಢಗೊಂಡ ತಥ್ಯಗಳನ್ನು; ಅವರ ಟೀಕಾಕಾರರು ಅವಲಂಬಿಸಿರುವುದು ಕಲ್ಪಿತ-ವಾದಗಳನ್ನು. ವಾಸ್ತವ ತಥ್ಯಗಳೆದುರು ಕೇವಲ ಬೌದ್ಧಿಕ ವಾದಗಳು ನಿಲ್ಲಲಾರವು.
ಚೀಣಾ, ರಷ್ಯಾ, ಇಟಲಿ ಮೊದಲಾದೆಡೆಗಳ ಕ್ರಾಂತಿಕಾರಿಗಳು ಸೆಣಸಿದ್ದು ತಮ್ಮ ದೇಶದವರೇ ಆಗಿದ್ದ ಸರ್ವಾಧಿಕಾರಿಗಳ ವಿರುದ್ಧ. ಆದರೆ ಸಾವರಕರ್ ಮೊದಲಾದವರು ರಕ್ತ ಸುರಿಸಬೇಕಾಗಿ ಬಂದದ್ದು ಭಾರತೀಯ ನಾಗರಿಕತೆಗೆ ವಿಮುಖವಾಗಿದ್ದ, ಭಾರತದ ಪರಂಪರೆಯ ಪರಿಜ್ಞಾನವಿಲ್ಲದ ಪೂರ್ಣ ವಿದೇಶೀ ದಮನಶಾಹಿಯ ವಿರುದ್ಧ. ಈ ವಾಸ್ತವವನ್ನು ಗ್ರಹಿಸಿದಲ್ಲಿ ಸಾವರಕರ್ ಮತ್ತಿತರ ಶ್ರೇಷ್ಠರ ಸಾಧನೆ ಇನ್ನಷ್ಟು ಮಹತ್ತ್ವದ್ದೆಂದು ಅರಿವಾದೀತು.
ಕಾರಣ ಏನಾದರಿರಲಿ, ರಾಷ್ಟ್ರದ ಶ್ರದ್ಧಾಬಿಂದುಗಳನ್ನು ಅವಮಾನಿಸುವುದು ರಾಷ್ಟ್ರದ ಸ್ವಾಸ್ಥ್ಯದ ಮೇಲೆ ವಿಪರಿಣಾಮ ಬೀರುತ್ತದೆ; ಹಾಗೆ ಅವಮಾನಿಸುವವರೂ ಉತ್ತರೋತ್ತರ ಇದರ ಪರಿಣಾಮಪರಂಪರೆಯಿಂದ ತಪ್ಪಿಸಿಕೊಳ್ಳಲಾಗದು.
ಶಿವಾಜಿಯ ಆರಾಧಕ ಸಾವರಕರರನ್ನು ಹೀಗಳೆದುದು ಮಾತ್ರವಲ್ಲ; ಶಿವಾಜಿಯಿಂದ ಹತನಾದ ಅಫಜಲಖಾನನನ್ನು ಕೀರ್ತಿಸಹೊರಟಿತು ಕಾಂಗ್ರೆಸ್! ರಾಷ್ಟ್ರೀಯತೆ, ದೇಶಭಕ್ತಿ – ಇವು ಕಾಂಗ್ರೆಸ್ಸಿನ ನಿಘಂಟುವಿನಲ್ಲಿ ಅಪಶಬ್ದಗಳೆನಿಸಿದವು.
ಪ್ರಜಾಪ್ರಭುತ್ವದಲ್ಲಿ ಕ್ಷುದ್ರ ಪರಿಗಣನೆಗಳಿಂದ ಜನಿಸಿದ ವಿದ್ವೇಷಕ್ಕೆ ಸ್ಥಾನವಿರಬಾರದು.
ಕ್ಷುದ್ರ ವರ್ತನೆ
ಒಂದು ವೇಳೆ ಎರಡು ಜೀವಾವಧಿ ಶಿಕ್ಷೆಗಳನ್ನು ಸಾವರಕರ್ ಪೂರ್ತಿ ಅನುಭವಿಸಿದ್ದಿದ್ದರೆ ಆ ಜೈಲುವಾಸ ೧೯೬೦ರಲ್ಲಿ ಮುಗಿಯುತ್ತಿತ್ತು. ಇದರ ನಿಮಿತ್ತವಾಗಿ ೧೯೬೧ರಲ್ಲಿ ದೇಶದ ಪ್ರಮುಖ ಪಟ್ಟಣಗಳಲ್ಲಿ ‘ಮೃತ್ಯುಂಜಯ ದಿವಸ’ದ ಸಂಭ್ರಮಪೂರ್ಣ ಆಚರಣೆ ನಡೆಯಿತು. ಆದರೆ ನೆಹರು ಪಾಳೆಗಾರಿಕೆಯಿಂದಾಗಿ ಆಕಾಶವಾಣಿ ಆ ಸುದ್ದಿಯನ್ನು ಪೂರ್ತಿ ‘ಬ್ಲ್ಯಾಕ್ ಔಟ್’ ಮಾಡಿತು.
ಸ್ವಾತಂತ್ರ್ಯಾನಂತರ ಕ್ರಾಂತಿಕಾರಿಗಳ ಸ್ಮೃತಿ ಉಳಿಯಬಾರದೆಂದು ಬಯಸಿದ ಜವಾಹರಲಾಲ್ ನೆಹರು ಅಂಡಮಾನಿನ ಸೆಲ್ಯುಲರ್ ಜೈಲನ್ನು ನಿರ್ಣಾಮ ಮಾಡಿ ಅಲ್ಲಿ ಆಸ್ಪತ್ರೆ ಕಟ್ಟಲು ಬಯಸಿದರು! ಆದರೆ ಸಂಸತ್ತಿನಲ್ಲಿ ವಿರೋಧವೆದ್ದುದರಿಂದ ಈ ಅದ್ಭುತ ಯೋಜನೆ ಕಾರ್ಯಗತವಾಗಲಿಲ್ಲ.
ಸಾವರಕರ್ ನಿಧನರಾದಾಗ ಲೋಕಸಭೆ ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವ ಬಂದಾಗ ಅದನ್ನು ಆಗಿನ ನೆಹರು ಸರ್ಕಾರ ಪೋಷಿತ ಸಭಾಧ್ಯಕ್ಷರು ತಿರಸ್ಕರಿಸಿದರು – “ಸಾವರಕರ್ ಈ ಸಂಸತ್ತಿನ ಸದಸ್ಯರಾಗಿರಲಿಲ್ಲ” ಎಂಬ ಕಾರಣ ನೀಡಿ. ಆದರೆ ಅದೇ ಸಂಸತ್ತು ಸದಸ್ಯರಲ್ಲದ ಗಾಂಧಿಯವರಿಗೂ, ಈ ದೇಶದವನೇ ಅಲ್ಲದ ಸ್ಟಾಲಿನ್ನನಿಗೂ ಗೌರವಾರ್ಪಣೆ ಮಾಡಲು ಸಂಕೋಚಪಡಲಿಲ್ಲ.
ಇದು ತಥಾಕಥಿತ ಸೆಕ್ಯುಲರ್ವಾದದ ವೈಫಲ್ಯದ ಒಂದು ಅಭಿವ್ಯಕ್ತಿ ಎನ್ನಬಹುದು.
ಆದರೆ ನಡೆದುಹೋದ ಇತಿಹಾಸವನ್ನು ಯಾವ ಜಾಣತನದ ಕಸರತ್ತುಗಳೂ ಅಲ್ಲಗಳೆಯಲಾಗದು. ಸಾವರಕರರ ತ್ಯಾಗಮಯ ಬದುಕು ಎಷ್ಟು ಜಾಜ್ವಲ್ಯಮಾನವಾಗಿದೆಯೆಂದರೆ ಅವರು ಭಾರತದ ಸೀಮೆಗಳಿಂದ ಆಚೆಗೂ ಜಾಗತಿಕ ಸ್ತರದಲ್ಲಿಯೆ ಉನ್ನತ ಸ್ಥಾನಕ್ಕೆ ಭಾಜನರಾಗಿದ್ದಾರೆ. ಎರಡನೆಯದಾಗಿ ಸಾವರಕರರು ತಳೆದಿದ್ದ ನಿಲವುಗಳಿಗೆ ಆಮೇಲಿನ ವರ್ಷಗಳ ವಿದ್ಯಮಾನಗಳು (ವ್ಯಾಪಿಸುತ್ತಿರುವ ಇಸ್ಲಾಮೀ ಮೂಲಭೂತವಾದ ಮೊದಲಾದವು) ತಾವೇ ಸಮರ್ಥನೆಯನ್ನು ಒದಗಿಸುತ್ತಿವೆ. ತೀರಾ ಈಚೆಗೆ (ಜುಲೈ ೨೦೧೮) ದೇಶಾದ್ಯಂತ ಶರಿಯಾ ನ್ಯಾಯಾಲಯಗಳು ಏರ್ಪಡಬೇಕೆಂಬ ಆಗ್ರಹವನ್ನು ಮುಸ್ಲಿಂ ಲಾ ಬೋರ್ಡ್ ವ್ಯಕ್ತಪಡಿಸಿದೆ.
ದೇಶದ ರಕ್ಷಣೆಗೆ ಸಂಬಂಧಿಸಿದಂತೆಯಂತೂ ಸಾವರಕರರು ವರ್ಷಗಳುದ್ದಕ್ಕೂ ಮಾಡಿದ್ದ ಮಂಡನೆಗಳ ತಾರ್ಕಿಕತೆ ಮತ್ತೆಮತ್ತೆ ಪುರಾವೆಗೊಂಡಿದೆ.
ನಿರಾಧಾರ ಅವಹೇಳನ
ಒಂದು ವೈಚಿತ್ರ್ಯವನ್ನು ಗಮನಿಸಬಹುದು. ಕಳೆದ (ಇಪ್ಪತ್ತನೇ) ಶತಮಾನದ ನಡುಭಾಗದಲ್ಲಿ ಬಹುತೇಕ ಎಲ್ಲ ಪಕ್ಷಗಳ ಹಿನ್ನೆಲೆಗಳವರೂ ಪ್ರಖರ ರಾಷ್ಟ್ರವಾದಿ ಎಂದೂ ಕ್ರಾಂತಿಕಾರಿಗಳಲ್ಲಿ ಅಗ್ರಗಣ್ಯರೆಂದೂ ಸಾವರಕರರನ್ನು ಪ್ರಶಂಸಿಸುತ್ತಿದ್ದರು. ಸ್ವಯಂ ಇಂದಿರಾಗಾಂಧಿಯವರೂ ಇದಕ್ಕೆ ಹೊರತಾಗಿರಲಿಲ್ಲ. ೧೯೬೨ರ ಚೀಣಾ ಯುದ್ಧ ಘಟನಾವಳಿಯ ತರುವಾಯ ಜವಾಹರಲಾಲ್ ನೆಹರು ಅವರೂ ಹಿಂದೆ ತಳೆದಿದ್ದ ನಿಲವಿನಿಂದ ದೂರ ಸರಿದಿದ್ದರು.
ಆದರೆ – ಬಹುಶಃ ಹಿಂದುತ್ವಪರ ಶಕ್ತಿಗಳ ಉಚ್ಛ್ರಾಯವನ್ನು ಸಹಿಸದೆಯೋ ಏನೋ – ವಾಮಪಂಥೀಯರೂ ಕಾಂಗ್ರೆಸಿನ ಹಲವರೂ ಸಾವರಕರರನ್ನು ಅವಹೇಳನ ಮಾಡತೊಡಗಿದರು.
ಹಲವರು ದೊಡ್ಡ ವ್ಯಕ್ತಿಗಳ ಬಗೆಗೆ ಕ್ಷುಲ್ಲಕವಾಗಿ ಮಾತನಾಡುವುದನ್ನು ಒಂದು ಮನೋವೈಕಲ್ಯವೆಂದು ಭಾವಿಸಿದರೆ ತಪ್ಪಾಗದೇನೋ. ತಾರ್ಕಿಕ ಕಾರಣಗಳಿಂದ ಒಬ್ಬ ವ್ಯಕ್ತಿಯನ್ನು – ಆತ ಎಷ್ಟೇ ಉನ್ನತನಾಗಿರಲಿ – ಟೀಕಿಸುವುದಕ್ಕೆ ಆಕ್ಷೇಪವಿರದು. ಆದರೆ ಯಾವುದೇ ಗಟ್ಟಿಯಾದ ಆಧಾರವಿಲ್ಲದಿದ್ದಾಗಲೂ ಅಧಿಕ ಜನತೆಯ ಗೌರವಕ್ಕೆ ಪಾತ್ರರಾಗಿರುವವರನ್ನು ಟೀಕಿಸುವುದನ್ನು ಏನೆನ್ನಬೇಕು? ಅಂತಹವರನ್ನು ಕುರಿತೇ ಇರಬೇಕು ಭರ್ತೃಹರಿ ಹೇಳಿದುದು – “ಬ್ರಹ್ಮಾäýಪಿ ನರಂ ನ ರಂಜಯತಿ” ಎಂದು. ಅಂತಹವರನ್ನು ಒಪ್ಪಿಸುವ ಪ್ರಯತ್ನ ನಿರರ್ಥಕ. ಅಂತಹವರ ವರ್ತನೆಯಲ್ಲಿ ಹಲವಾರು ಎಳೆಗಳು ಇರುತ್ತವೆ: ಜನತೆಯೆಲ್ಲ ಅಂಗೀಕರಿಸಿರುವುದಕ್ಕೆ ವಿರುದ್ಧವಾಗಿ ಏನನ್ನೊ ಹೇಳಿ ಗಮನಸೆಳೆಯಬೇಕೆಂಬ ಚಪಲ; ‘ಅಷ್ಟು ದೊಡ್ಡವರನ್ನು ನಾನು ಟೀಕಿಸಿದರೆ ನನ್ನನ್ನು ಜನರು ದೊಡ್ಡವನೆಂದು ಭಾವಿಸಬಹುದು’ ಎಂಬ ಚಪಲ; ತಿಳಿವಿನ ಅಭಾವ, ಎಂದರೆ ನಾನು ಅಂದುಕೊಂಡಿರುವುದಷ್ಟೆ ಸತ್ಯ – ಎಂಬ ನಿಲವು; ಐತಿಹಾಸಿಕಾದಿ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳದೆಯೆ ಅಪಕ್ವ ಅನಿಸಿಕೆಗಳನ್ನು ಹಾರಬಿಡುವುದು. ಈ ಪಟ್ಟಿಯನ್ನು ಇನ್ನೂ ಬೆಳೆಸಲಾದೀತು. ಒಂದೇ ಮಾತಿನಲ್ಲಿ ಹೇಳಬೇಕಾದರೆ ಈ ಪ್ರವೃತ್ತಿಯನ್ನು ಒಂದು ಬಗೆಯ ಮನೋರೋಗವೆಂದಷ್ಟೆ ಗಣಿಸಬಹುದು. ಇಂತಹ ವರ್ತನೆಗಳನ್ನು ಮನಃಶಾಸ್ತ್ರದ – ‘ಬಿಹೇವಿಯೊರಲ್ ಸಯನ್ಸ್’ ಅಂಗದಲ್ಲಿ ಪರಾಮರ್ಶಿಸಲಾಗುತ್ತದೆ. ವಿಷಯಗಳ ಗ್ರಹಿಕೆಯ ಸ್ತರದಲ್ಲಿಯೇ ವಿಸಂಗತತೆ (‘Cognitive dissonance’) ಮೊದಲಾದ ಹಲವಾರು ವಿಕೃತಿಗಳು ಈ ವರ್ಗಕ್ಕೆ ಸೇರುತ್ತವೆ.
ಅಪಲಾಪಗಳು
ಸಾವರಕರ್ ಅವರ ಬಗೆಗೆ ಯೋಚಿಸುವಾಗ ತೋರುವುದು ಮೇಲಣ ಅನಿಸಿಕೆ. ಸಾವರಕರರ ಜ್ವಲಂತ ಜೀವನದ ಬಗೆಗೆ ಅಧಿಕೃತ ದಾಖಲೆಗಳಿಗೆ ಕೊರತೆಯಿಲ್ಲ. ಆದರೂ -ವಿಶೇಷವಾಗಿ ಕಾಂಗ್ರೆಸ್ ವಲಯದಲ್ಲಿ ಮತ್ತು ಕಾಂಗ್ರೆಸ್ ಸರ್ಕಾರ ಪೋಷಿತ ಇತಿಹಾಸ ಬರಹಗಳಲ್ಲಿ – ಸಾವರಕರರ ಬಗೆಗೆ ಟೀಕಾತ್ಮಕವಾದ ಮತ್ತು ಸತ್ಯದೂರವಾದ ಅಭಿಪ್ರಾಯಗಳು ದಶಕಗಳುದ್ದಕ್ಕೂ ಹೊಮ್ಮಿವೆ. ಹಲವು ‘ಸೆಕ್ಯುಲರ್’ ಮಾಧ್ಯಮಗಳೂ ಆಗೀಗ ಅಂತಹ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದುಂಟು. ರಾಷ್ಟ್ರಮಟ್ಟದ ಒಂದು ಸಾಪ್ತಾಹಿಕ ಈಗ್ಗೆ ನಾಲ್ಕು ವರ್ಷಗಳಷ್ಟು ಹಿಂದೆ ಕೂಡಾ ‘ಒಬ್ಬ ನಿಷ್ಪ್ರಯೋಜಕ ಸಾಮಾನ್ಯ ವ್ಯಕ್ತಿಯನ್ನು ಒಂದು ಜನವರ್ಗ ಸಿಂಹಸದೃಶನೆಂದು ನಿರಾಧಾರವಾಗಿ ಆರಾಧಿಸುತ್ತಿದೆ’ ಎಂಬ ಅಭಿಪ್ರಾಯದ ಲೇಖನವನ್ನು ಅದೊಂದು ಹೊಸ ಶೋಧವೆಂದು ಬಿಂಬಿಸಿ ಪ್ರಕಟಿಸಿತ್ತು.
ಇಂತಹ ಅಪಲಾಪಗಳಿಂದ ನಿಜಚರಿತ್ರೆಯನ್ನು ಮುಚ್ಚಿಹಾಕಲಾಗುವುದಿಲ್ಲ ಮತ್ತು ಲಕ್ಷಾಂತರ ಜನರ ಅಭಿಮತವನ್ನು ಪರಿವರ್ತಿಸಲಾಗುವುದಿಲ್ಲ ಎಂಬುದು ವಾಸ್ತವವೇ. ಆದರೂ ಈಚಿನ ಯುಗದಲ್ಲಿ ಇತಿಹಾಸವನ್ನೇ ನಿರ್ಮಿಸಿದ ವೀರರೊಬ್ಬರ ಚಾರಿತ್ರ್ಯಹನನ ಮಾಡುವ ಪ್ರಯತ್ನಗಳಿಗೆ ಏನೆನ್ನಬೇಕು? ಅದು ಸಂಸ್ಕಾರಯುತ ವರ್ತನೆ ಎನಿಸೀತೆ? ಅದು ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸಬಲ್ಲ ನಡೆಯೆ? ತಮ್ಮ ಜೀವನಸರ್ವಸ್ವವನ್ನು ನಿಃಶೇಷವಾಗಿ ರಾಷ್ಟ್ರಸ್ವಾತಂತ್ರ್ಯಕ್ಕೂ ರಾಷ್ಟ್ರಾಭ್ಯುದಯಕ್ಕೂ ಅರ್ಪಿಸಿದ ಮಹಿಮಾನ್ವಿತರನ್ನೇ ಅವಹೇಳನ ಮಾಡಿದಲ್ಲಿ ಈಗಿನ ಪೀಳಿಗೆಯಲ್ಲಿ ದೇಶಭಕ್ತಿಯನ್ನೂ ತ್ಯಾಗಪ್ರವೃತ್ತಿಯನ್ನೂ ಹೇಗೆ ತಾನೆ ಬೆಳೆಸಲಾದೀತು? ಯಾವುದೊ ಒಂದೆರಡು ವಿವಾದಾಂಶಗಳನ್ನು ಕಷ್ಟಪಟ್ಟು ಹೆಕ್ಕಿ ತೆಗೆದು ಮೆರೆಸುವುದರಿಂದ ಅವುಗಳಿಗಿಂತ ನೂರುಪಟ್ಟು ಪ್ರಜ್ವಲವಾದ ಮತ್ತು ಅಧಿಕೃತಗೊಂಡಿರುವ ಸಾಧನೆಗಳನ್ನು ತಿರಸ್ಕರಿಸಲಾದೀತೆ?
ಸಾವರಕರರು ಲಂಡನ್ನಿನಲ್ಲಿ ಕಾನೂನು ವ್ಯಾಸಂಗ ನಡೆಸಿದ್ದ ದಿನಗಳಲ್ಲಿಯೇ ಕ್ರಾಂತಿಕಾರಿಗಳಿಗೆ ಸ್ಫೂರ್ತಿಸ್ರೋತವಾದುದು, ಹಡಗಿನಿಂದ ಸಮುದ್ರಕ್ಕೆ ಜಿಗಿದು ತಪ್ಪಿಸಿಕೊಂಡದ್ದು, ಮರುಬಂಧನ, ಅಂತಿಮವಾಗಿ ಎರಡು ಜೀವಾವಧಿ ಸೆರೆವಾಸ, ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿ ಕಠಿಣ ಕಾರಾವಾಸ, ಅವರ್ಣನೀಯ ದೈಹಿಕ ಮಾನಸಿಕ ದಂಡನೆ -ಇಷ್ಟೆಲ್ಲ ಅನುಭವಿಸಿದ ಮೇಲೂ ಮನಸೋಲದೆ ನಿರಂತರ ರಾಷ್ಟ್ರಾಭಿಮುಖ ಚಿಂತನೆ ಮತ್ತು ಬಗೆಬಗೆಯ ಸಾಮಾಜಿಕ ಸುಧಾರಣ ಪ್ರಯತ್ನಗಳಲ್ಲಿ ತೊಡಗಿದುದು – ಇವೆಲ್ಲ ಈಗ ದಂತಕಥೆಯಾಗಿವೆ. ಸಾವರಕರರ ಘಟನಾಪೂರ್ಣ ಬದುಕಿನ ಬಗೆಗೆ ಸಾವಿರಾರು ಪುಟಗಳ ಅಧಿಕೃತ ಸಾಹಿತ್ಯ ಲಬ್ಧವಿದೆ. ಇಲ್ಲಿ ಅದನ್ನೆಲ್ಲ ಪುನರಾವರ್ತಿಸುವುದು ಚರ್ವಿತಚರ್ವಣವಾಗುತ್ತದಾದ್ದರಿಂದ – ಅದು ಬೋಧಕವೂ ಸ್ಫೂರ್ತಿದಾಯಕವೂ ಆಗಿದ್ದರೂ – ಅದಕ್ಕೆ ಕೈಹಾಕದೆ, ಕ್ರಾಂತಿಶಾಸ್ತ್ರನಿರ್ಮಾಪಕರೂ ಸ್ವಾತಂತ್ರ್ಯಸಂಘರ್ಷೋದ್ಯಮದ ಅಗ್ರಣಿಯೂ ಆಗಿದ್ದಂತೆ ಸಾವರಕರರು ಅತುಲ್ಯ ದಾರ್ಶನಿಕರೂ ಆಗಿದ್ದುದನ್ನು ಎತ್ತಿತೋರಿಸುವ ಅವರ ಪಯಣದ ಹಲವು ಅನ್ಯಾದೃಶ ಆಯಾಮಗಳನ್ನು ಮೆಲುಕುಹಾಕುವುದು ಈ ಬರಹದ ಪರಿಮಿತ ಆಶಯ.
(ಸಶೇಷ)