ಸಾವರಕರರ ವಿವಿಧ ಸಂದರ್ಭಗಳಲ್ಲಿನ ನಿಲವುಗಳನ್ನು ಅರಿಯಲು ಆಗಿನ ಸನ್ನಿವೇಶಗಳ ಯಥಾರ್ಥ ಗ್ರಹಿಕೆ ಅವಶ್ಯವಾಗುತ್ತದೆ. 20ನೇ ಶತಮಾನದ ಆರಂಭದ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಕುರಿತ ಪ್ರತಿಪಾದನೆಗಳು ಪ್ರಚಲಿತವಿದ್ದವು. ಲೋಕಮಾನ್ಯ ತಿಲಕರೂ ಆ ದಿಶೆಯಲ್ಲಿ ಹಲವೊಮ್ಮೆ ಮಾತನಾಡಿದ್ದುದುಂಟು. ಆದರೆ 1920ರ ದಶಕದಲ್ಲಿ ಇಂತಹ ಪ್ರಯಾಸಗಳು ನಿರೀಕ್ಷಿತ ಫಲಿತವನ್ನು ನೀಡಿರಲಿಲ್ಲವೆಂದು ಗಾಂಧಿಯವರೇ ಹಲವು ಬಾರಿ ಹೇಳಬೇಕಾಗಿಬಂದಿತು. ಇಂತಹ ಸಾಮಾಜಿಕ ಪ್ರವೃತ್ತಿಗಳು ಸುಲಭವಾಗಿಯಾಗಲಿ ಅಲ್ಪಕಾಲದಲ್ಲಾಗಲಿ ಬದಲಾಗುವ ಸಂಭವ ಕಡಮೆಯಿತ್ತು. ಈ ಭೂಮಿಕೆಯಲ್ಲಿ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸಬೇಕಾದುದು ಅನಿವಾರ್ಯವೆಂದು ಸಾವರಕರರು ನಿರ್ಣಯಿಸಿ ಹಿಂದೂ ಮಹಾಸಭೆಯನ್ನು ಬೆಳೆಸುವುದಕ್ಕೆ ಹೆಚ್ಚಿನ ಗಮನವನ್ನು ನೀಡತೊಡಗಿದರು. ಗಾಂಧಿಯವರ ಸದುದ್ದೇಶದ ಧೋರಣೆಗಳ ಪರಿಣಾಮಕಾರಿತೆ ಪರಿಮಿತವಾದುದೆಂಬ ಸಾವರಕರರ ವಿಶ್ಲೇಷಣೆ ಸತರ್ಕವೇ ಆಗಿದ್ದಿತು.
1930ರ ದಶಕದ ನಡುಭಾಗದಿಂದಾಚೆಗೆ ಗಾಂಧಿಯವರ ನೇತೃತ್ವವೂ ಹಿಂದಿನ ಪ್ರಭಾವವನ್ನು ಉಳಿಸಿಕೊಂಡಿರಲಿಲ್ಲ. ಅಲ್ಲದೆ ಗಾಂಧಿಯವರು ವ್ಯೂಹಾತ್ಮಕ (ಸ್ಟ್ರಾಟೀಜಿಕ್) ಕಾರಣಗಳಿಂದ ರೂಢಿಸಿಕೊಂಡಿದ್ದ ಕೆಲವು ನಿಲವುಗಳೂ ಅವರ ಅನುಯಾಯಿ ವರ್ಗದಲ್ಲೇ ಅನೇಕರಿಗೆ ಸಮಾಧಾನಕರವಿರಲಿಲ್ಲ. ನಿದರ್ಶನಕ್ಕೆ: ಹೈದರಾಬಾದ್ ಭಾಗದಲ್ಲಿ ನಿಜಾಮನ ದಬ್ಬಾಳಿಕೆಯ ವಿರುದ್ಧ ಅನೇಕ ವರ್ಷಗಳ ಹಿಂದಿನಿಂದ ಹಿಂದೂಗಳು ಬವಣೆ ಪಡುತ್ತಿದ್ದರೂ ಹೈದರಾಬಾದ್ ವಿಮೋಚನೆಗೆ ಗಾಂಧಿಯವರಿಂದ ಅತ್ಯಲ್ಪ ಸಮರ್ಥನೆಯೂ ಸಿಗಲಿಲ್ಲ. ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲಿ ಆರ್ಯಸಮಾಜ ಮೊದಲಾದ ಸಂಘಟನೆಗಳವರು ಸಂಘರ್ಷದ ಹೊಣೆ ಹೊರಬೇಕಾಯಿತು. 1930ರ ದಶಕದ ಉತ್ತರಾರ್ಧದ ಪರಿಮಿತ ಪ್ರಾಂತೀಯ ಸ್ವಾಧೀನತಾ ಪ್ರಯತ್ನಗಳಾಗಲಿ ಅನಂತರದ ‘ಭಾರತ್ ಛೋಡೋ’ ಕರೆಯಾಗಲಿ ನಿರೀಕ್ಷಿತ ಫಲವನ್ನು ನೀಡಲಿಲ್ಲ. ಒಂದು ದೃಷ್ಟಿಯಿಂದ ಸ್ವಾತಂತ್ರ್ಯಪ್ರಾಪ್ತಿಯನ್ನು ಸಮೀಪಗತಗೊಳಿಸಬೇಕಾಗಿದ್ದ ಜನಶಕ್ತಿಯು ಹ್ರಾಸಗೊಳ್ಳುತ್ತ ಸಾಗಿತ್ತೆಂದೇ ಅನಿಸುತ್ತದೆ. ಈ ಪ್ರಯಾಸಕ್ಕೆ ಒಂದಷ್ಟು ಚೇತರಿಕೆ ಬಂದದ್ದು ದ್ವಿತೀಯ ಮಹಾಯುದ್ಧದ ಅವಸಾನ ದಶೆಯಿಂದಲಷ್ಟೆ.
ರಾಜನೀತಿಪ್ರೇರಿತ ನಿಲವು
ಎರಡನೇ ಮಹಾಯುದ್ಧ ಆರಂಭವಾಗಲಿದ್ದ ಸಮಯದಲ್ಲಿ ಗಾಂಧಿಯವರು ಆ ಸನ್ನಿವೇಶದಲ್ಲಿ ಭಾರತ ಇಂಗ್ಲೆಂಡಿನೊಡನೆ ಸಹಕರಿಸುವುದಿಲ್ಲ ಎಂದು ಘೋಷಿಸಿದರು. ಇದೊಂದು ಕೌತುಕಕರ ವಿದ್ಯಮಾನ. ಮೊದಲ ಮಹಾಯುದ್ಧದ ಸಮಯದಲ್ಲಿ ಇದೇ ಗಾಂಧಿಯವರು ಇಂಗ್ಲೆಂಡಿಗೆ ಭಾರತ ಶಕ್ಯವಿದ್ದ ಸಹಕಾರವನ್ನೆಲ್ಲ ನೀಡುವುದೆಂದು ಘೋಷಿಸಿದ್ದರು; ಸೈನ್ಯದಲ್ಲಿ ಸೇರ್ಪಡೆಯಾಗಬೇಕೆಂದು ಭಾರತೀಯ ತರುಣರಿಗೆ ಕರೆಯನ್ನೂ ನೀಡಿದ್ದರು. (ಆ ಕರೆಗೆ ಎಷ್ಟು ಮಾತ್ರವೂ ಸ್ಪಂದನ ದೊರೆಯಲಿಲ್ಲವೆಂಬುದು ಬೇರೆ ವಿಷಯ.) ಎದ್ದುತೋರುವ ಸಂಗತಿಯೆಂದರೆ ಕಾಂಗ್ರೆಸಿನ ನಿಲವುಗಳ ಹಿಂದೆ ಯಾವ ಪ್ರಬುದ್ಧ ವಿಚಾರಪರಾಮರ್ಶನೆಯೂ ಇದ್ದಿತೆಂದೆನಿಸುವುದಿಲ್ಲ. ಇದರಿಂದ ಭಿನ್ನವಾಗಿ ಸಾವರಕರರು ಹೇಳಿದುದು ಮಹಾಯುದ್ಧದ ಅವಕಾಶವನ್ನು ಬಳಸಿಕೊಂಡು ಭಾರತದ ಯುವಕರು ಅಧಿಕ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗಿ ಸಮರಶಿಕ್ಷಣ ಪಡೆದುಕೊಂಡಲ್ಲಿ ಅದು ಮುಂದೆ ದೇಶದ ಹಿತಕ್ಕೆ ಪೋಷಕವಾಗುತ್ತದೆ ಎಂದು.
ಹೀಗೆ ಒಂದೊಂದು ಸಂದರ್ಭದಲ್ಲಿಯೂ ಸಾವಕರರದು ದೀರ್ಘಾವಧಿ ಚಿಂತನೆಯಾಗಿರುತ್ತಿತ್ತು.
ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ವೈಸರಾಯ್ ಲಿನ್ಲಿತ್ಗೋ ಸಾವರಕರರನ್ನು ವಿಚಾರವಿನಿಮಯಕ್ಕಾಗಿ ಆಮಂತ್ರಿಸಿದ್ದ. ಸಾವರಕರರ ಸ್ಪಷ್ಟ ಚಿಂತನೆಯಿಂದ ಪ್ರಭಾವಿತನಾದ ಲಿನ್ಲಿತ್ಗೋ ಉದ್ಗರಿಸಿದ: “ಯುದ್ಧಪರಿಸ್ಥಿತಿಯ ಭೂಮಿಕೆಯನ್ನೂ ಅಂತರರಾಷ್ಟ್ರೀಯ ವಿದ್ಯಮಾನಗಳ ಸಾಂದರ್ಭಿಕತೆಯನ್ನೂ ಗ್ರಹಿಸಿ ವಸ್ತುನಿಷ್ಠವಾಗಿ ಅಭಿಮತ ತಳೆದ ಏಕೈಕ ರಾಜನೀತಿಜ್ಞರೆಂದರೆ ಸಾವರಕರರು.”
ಮುಂದೆ ಅನತಿಕಾಲದಲ್ಲಿ ಭಾರತೀಯ ಸೈನಿಕರಿಗೆ ಸ್ವದೇಶಪ್ರೇಮವನ್ನು ಬಲವಾಗಿ ಪ್ರಕಟಗೊಳಿಸುವ ಅವಕಾಶ ದೊರೆಯುತ್ತದೆ ಎಂದು ಸತರ್ಕವಾಗಿ ಯೋಚಿಸಿದವರು ಸಾವರಕರ್. ಮುಂದಿನ ಕೆಲವೇ ವರ್ಷಗಳಲ್ಲಿ ಈ ಧಾರೆಯ ಚಿಂತನೆಯನ್ನು ಅಳವಡಿಸಿಕೊಂಡು ಕಾರ್ಯರತರಾಗಿ ನೇತಾಜಿ ಸುಭಾಷಚಂದ್ರ ಬೋಸ್ ಅವರು ಮೆರೆದ ಸಾಗರೋತ್ತರ ಸಾಹಸವೇ ಭಾರತದ ಸ್ವಾತಂತ್ರ್ಯಸಂಘರ್ಷಕ್ಕೆ ನಿರ್ಣಾಯಕ ತಿರುವನ್ನು ಕೊಟ್ಟಿತೆಂಬುದು ಸುವಿದಿತ.
ತಾನು ಆಂಗ್ಲ ಸಾಮ್ರಾಜ್ಯದ ವಿಘಟನೆಯನ್ನು ಆಗಗೊಡೆನೆಂದು ಇಂಗ್ಲೆಂಡಿನ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಘೋಷಿಸಿದುದು ಹೌದಾದರೂ ಅದೇ ಸಮಯದಲ್ಲಿ ಭಾರತದ ಸಹಕಾರದ ಅನಿವಾರ್ಯತೆಯನ್ನೂ ಆತ ಗ್ರಹಿಸಿಯೇ ಇದ್ದ. ನಿಕಟ ಭವಿಷ್ಯದಲ್ಲಿಯಾದರೂ ಭಾರತದ ಸಹಕಾರದ ಮುಂದುವರಿಕೆಗೆ ಮಾರ್ಗ ಕಲ್ಪಿಸಬೇಕೆಂಬ ದೃಷ್ಟಿಯಿಂದಲೇ ಆತ ಸ್ಟಾಫರ್ಡ್ ಕ್ರಿಪ್ಸ್ ಆಯೋಗವನ್ನು ಸಂಧಾನಕ್ಕಾಗಿ ಭಾರತಕ್ಕೆ ಕಳಿಸಿದುದು.
‘ಮುಸ್ಲಿಂ ವಿರೋಧ’ವೆಂಬ ಆರೋಪ
ಹಲವು ‘ದೃಷ್ಟಿದೋಷ’ಗಳೂ ಸಾವರಕರರ ಪ್ರತಿಮೆಗೆ ಮಸಿ ಬಳಿಯಲು ಕಾರಣವಾದವು. ಸಾವರಕರರು ಇತಿಹಾಸದ ಗಹನ ಅಧ್ಯಯನದ ಆಧಾರದ ಮೇಲೆ ತಮ್ಮ ನಿಲವುಗಳನ್ನು ರೂಪಿಸಿಕೊಳ್ಳುತ್ತ ಬಂದವರು. ಇತಿಹಾಸಪರಿಜ್ಞಾನದ ಹಿನ್ನೆಲೆ ಇಲ್ಲದವರು ಸಾವರಕರರನ್ನು ಸಾಂಪ್ರದಾಯಿಕರೆಂದು ಕರೆದರು. ನಿದರ್ಶನಕ್ಕೆ: ಶಿವಾಜಿಮಹಾರಾಜರ ವ್ಯೂಹಗಳೂ ಸೇರಿದಂತೆ ಸಾವರಕರರು ಮರಾಠರ ಸ್ವಾಭಿಮಾನವನ್ನೂ ಸಾಹಸವಂತಿಕೆಯನ್ನೂ ಪ್ರಶಂಸಿಸುತ್ತಿದ್ದರು. ಇದನ್ನು ವ್ಯಾಜವಾಗಿಸಿಕೊಂಡು ಟೀಕಾಕಾರರು ಸಾವರಕರರಿಗೆ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯನ್ನು ತೊಡಿಸಿದರು. ಸಾವರಕರರ ಹಿಂದೂ ಸಮಾಜ ಸುಧಾರಕ ಕ್ರಮಗಳನ್ನೂ ಅವರು ಸಾಂಪ್ರದಾಯಿಕರೆಂಬ ಟೀಕೆಯನ್ನು ಪೋಷಿಸುವುದಕ್ಕಾಗಿ ಬಳಸಲಾದದ್ದು ಒಂದು ವಿಪರ್ಯಾಸ.
ಇಂತಹ ಆರೋಪಗಳ ಪೊಳ್ಳುತನ ಸ್ಪಷ್ಟವೇ ಆಗಿದೆ. ಇಡೀ ಹಿಂದೂ ಸಮಾಜವೇ ಇಸ್ಲಾಮೀಕೃತವಾಗುವ ಸನ್ನಿವೇಶ ಇದ್ದಾಗ ಅದನ್ನು ಶಿವಾಜಿಮಹಾರಾಜರು ಶತಾಯಗತಾಯ ತಡೆಯಲು ಉಜ್ಜುಗಿಸಿದರು. ಅಂತಹವರನ್ನು ಕೀರ್ತಿಸುವುದು ಅಪರಾಧವಾದೀತೆ? ಹಾಗೆ ನೋಡಿದರೆ 1857ರ ಮಹಾಸಂಗ್ರಾಮದ ಕಥನದಲ್ಲಿ ಸಾವರಕರರು ಆ ಸಂದರ್ಭದಲ್ಲಿ ಮುಸಲ್ಮಾನರು ಹಿಂದೂಗಳಷ್ಟೇ ರಾಷ್ಟ್ರಪ್ರಜ್ಞೆಯನ್ನು ಮೆರೆದಿದ್ದುದನ್ನು ಪ್ರಶಂಸಿಸಿಯೇ ಇದ್ದಾರೆ.
ಇನ್ನು ಶಿವಾಜಿಯಾದರೂ ಮುಸ್ಲಿಂ ವಿರೋಧಿಯಾಗಿದ್ದರೆಂದು ಆರೋಪಿಸಲಾದೀತೆ? ಮುಸ್ಲಿಂ ಸ್ವಮತಾಚರಣೆಗೆ ಶಿವಾಜಿಮಹಾರಾಜರು ಸತತ ಪೋಷಣೆಯನ್ನೇ ನೀಡಿದ್ದರಲ್ಲವೆ?
* * *
1930ರ ದಶಕದ ಅಂತ್ಯದ ವೇಳೆಗೆ ಹಿಂದೂ-ಮುಸ್ಲಿಂ ಸಂಬಂಧಗಳು ಯಾವ ಸ್ಥಿತಿ ತಲಪಿದ್ದವೆಂಬುದಕ್ಕೆ ವ್ಯಾಖ್ಯಾನದ ಆವಶ್ಯಕತೆಯಿಲ್ಲ. 1920ರ ದಶಕದ ಖಿಲಾಫತ್ ಆಂದೋಲನದಂತಹ ವಿಕಟತೆಗಳೂ ಕಾಂಗ್ರೆಸಿನ ಮಾನಸಿಕತೆಯಲ್ಲಿ ಪರಿವರ್ತನೆ ತರದೆಹೋದವು.
ತುಷ್ಟೀಕರಣ – ವಿಕೃತ ಧೋರಣೆ
ಸಾವರಕರರು ತೀಕ್ಷ್ಣವಾಗಿ ವಿರೋಧಿಸಿದುದು ತುಷ್ಟೀಕರಣವನ್ನು. ತುಷ್ಟೀಕರಣ ಧೋರಣೆಯಿಂದ ಕಾಂಗ್ರೆಸಿಗೂ ಅತ್ಯಲ್ಪ ಲಾಭವೂ ಘಟಿಸಲಿಲ್ಲವೆಂಬುದು ಈಗ ಇತಿಹಾಸ. ಅಲ್ಪಸಂಖ್ಯಕ ಸಮುದಾಯವು ತನ್ನ ತಥೋಕ್ತ ‘ಅಸಹಾಯಕತೆ’ಯನ್ನೇ ಬಂಡವಾಳ ಮಾಡಿಕೊಂಡು ಸದಾ ಲಾಭ ಗಳಿಕೆಯಲ್ಲಿ ತೊಡಗುತ್ತದೆ – ಎಂಬ ಮಾರ್ಲೆ ಮಹಾಶಯನ ವ್ಯಂಗ್ಯೋಕ್ತಿಯನ್ನು ಅನಂತರದ ಇತಿಹಾಸವು ನಿಜಗೊಳಿಸಿತು.
ಸಾಮರಸ್ಯದ ನೆಪದಲ್ಲಿ ಬಹುಸಂಖ್ಯಕ ಸಮಾಜವು ಸದಾ ಅವನತವಾಗುವ ಸ್ಥಿತಿ ಬರಬಾರದೆಂಬುದು ಸಾವರಕರರ ದೃಢವಾದ ನಿಲವು ಆಗಿದ್ದಿತು. ಈ ವಿಕೃತಿಗೆ ಪರಿಹಾರವು ಈಗಲೂ ಇನ್ನೂ ಹೊಮ್ಮಬೇಕಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಜನಸಂಖ್ಯೆಯ ಅನುಪಾತವು ಭವಿಷ್ಯದ ದೃಷ್ಟಿಯಿಂದ ಮಹತ್ತ್ವದ್ದಾಗುತ್ತದೆಂದು ಸಾವರಕರರು ಹಿಂದಿನಿಂದ ಹೇಳುತ್ತ ಬಂದಿದ್ದರು. ಸಾವರಕರರ ಈ ಚಿಂತನೆಯ ಸತರ್ಕತೆಯನ್ನು ಅಂತಿಮವಾಗಿ ದೇಶವಿಭಜನೆಗೆ ಆಧಾರವಾದ ಮೌಂಟ್ಬ್ಯಾಟನ್ ಯೋಜನೆ ಸಾಕ್ಷ್ಯಪಡಿಸಿತು. ಪಂಜಾಬ್, ಬಂಗಾಳಗಳ ಅರ್ಧಭಾಗ ಭಾರತದ ಪಾಲಿಗೆ ಉಳಿದುದಕ್ಕೆ ಒಂದು ಪ್ರಮುಖ ಕಾರಣ ಸಾವರಕರರು ವರ್ಷಗಳುದ್ದಕ್ಕೂ ಮಂಡಿಸಿದ್ದ ಚಿಂತನೆ.
ಗಾಂಧಿ ಹತ್ಯೆಯ ಆರೋಪವನ್ನು ಸಾವರಕರರ ಹೆಗಲಿಗೆ ಕಟ್ಟುವುದಕ್ಕಾಗಿ ಭಾರತ ಸರ್ಕಾರ ಮತ್ತು ಮುಂಬಯಿ ಸರ್ಕಾರ ಬಳಸಿಕೊಂಡದ್ದು ಸಾವರಕರರು ವರ್ಷಗಳುದ್ದಕ್ಕೂ ಪ್ರತಿಪಾದಿಸಿದ್ದ ಅಸ್ಖಲಿತ ರಾಷ್ಟ್ರೀಯತಾಪರ ನಿಲವುಗಳು.
‘ಹಿಂದು’, ‘ಹಿಂದುತ್ವ’ ಶಬ್ದಗಳ ವಿಷಯದಲ್ಲಿ ಅಸಹನೆ ಮೂಡಿದುದು ಇತ್ತೀಚಿನ ಕಾಲದಲ್ಲಷ್ಟೆ. ಈಗಿನ ಸಮಾಲೋಚಕರ ಕಟುಟೀಕೆಗೆ ಗುರಿಯಾಗಿರುವ ಮೆಕಾಲೆ ಮಹಾಶಯನೂ ಈ ದೇಶದ ಜನತೆಯನ್ನು ‘ಹಿಂದೂಗಳು’ ಎಂದೇ ಪರಿಭಾಷೆಗೊಳಿಸಿದ್ದ.
ತಾರತಮ್ಯ – ರಾಷ್ಟ್ರವಾದಕ್ಕೆ ಪ್ರತಿಕೂಲ
ದೇಶದ ಮುಂದಿರುವ ಒಂದೊಂದು ಸಮಸ್ಯೆಯನ್ನೂ ರಾಷ್ಟ್ರವಾದದ ಭೂಮಿಕೆಯಲ್ಲಿಯೆ ಪರಿಶೀಲಿಸುತ್ತಿದ್ದುದು ಸಾವರಕರರ ವಿಶಿಷ್ಟತೆ. ಇದರಿಂದಾಗಿಯೆ ಅವರು ನೀಡಿದ ಹಲವಾರು ಮುನ್ನೋಟಗಳು ಮುಂದಿನ ದಿನಗಳಲ್ಲಿ ನಿಜವಾದವು. ಎಲ್ಲ ಮತಪಂಥಗಳವರಿಗೂ ಈ ದೇಶದಲ್ಲಿ ವಾಸಿಸಲು ಅವಕಾಶ ಇರಬೇಕೆಂಬುದರಲ್ಲಿ ಆಕ್ಷೇಪಿಸಬೇಕಾದುದೇನಿಲ್ಲ. ಸಾವರಕರರ ವಿರೋಧವಿದ್ದುದು ಮತಾಧಾರಿತ ತುಷ್ಟೀಕರಣಕ್ಕೆ.
1938ರಲ್ಲಿ ಹಿಂದೂ ಮಹಾಸಭೆಯ ಅಧಿವೇಶನಕ್ಕಾಗಿ ಸಾವರಕರರು ಲಾಹೋರಿಗೆ ಹೋಗಿದ್ದಾಗ ಒಬ್ಬ ಪತ್ರಕರ್ತ “ತಾವೂ ಜಿನ್ನಾರವರೂ ಮತೀಯ ಆಧಾರದ ಮೇಲೆ ಸಮಾಜವನ್ನು ವಿಭಜಿಸುವುದು ಏಕೆ?” ಎಂದು ಪ್ರಶ್ನಿಸಿದುದಕ್ಕೆ ಸಾವರಕರರು ಉತ್ತರಿಸಿದರು: “ನಿಮ್ಮ ಪ್ರಶ್ನೆಯೇ ಸಮಂಜಸವಲ್ಲ. ಜಿನ್ನಾರವರು ಮುಸ್ಲಿಮರಿಗೆ ಅಧಿಕತರ ಸವಲತ್ತುಗಳನ್ನು ಕೇಳುತ್ತಿದ್ದಾರೆ. ನಾನು ಕೋರುತ್ತಿರುವುದು ದೇಶದ ಎಲ್ಲರಿಗೂ ಸಮಾನ ಅಧಿಕಾರ ಇರಲಿ ಎಂದು.”
1942ರಲ್ಲಿ ಲಖ್ನೌದಲ್ಲಿನ ಮುಸ್ಲಿಮರ ಒಂದು ಗಣ್ಯ ವರ್ಗವು ಹಿಂದೂ-ಮುಸ್ಲಿಂ ಸಾಮರಸ್ಯಕ್ಕಾಗಿ ಹೆಚ್ಚಿನ ಪ್ರಯಾಸ ನಡೆಯಬೇಕಾಗಿದೆಯೆಂದೂ ಅದರಲ್ಲಿ ಉಭಯರೂ ಸಹಕರಿಸಬೇಕೆಂದೂ ಅಭಿಪ್ರಾಯಪಟ್ಟಾಗ ಸಾವರಕರರು ಅದು ಸ್ವಾಗತಾರ್ಹವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾವರಕರರ ‘ತಥ್ಯ’ದರ್ಶನ
ರಾಷ್ಟ್ರದಲ್ಲಿ ಎಲ್ಲ ಪ್ರಜೆಗಳಿಗೆ ಸಮಾನ ಅಧಿಕಾರಗಳು ಇರಬೇಕೆಂಬ ನಿಲವನ್ನು ಸಾವರಕರರು ವರ್ಷಗಳುದ್ದಕ್ಕೂ ತಳೆದಿದ್ದುದುಂಟು. ಇದೇ ಅಭಿಪ್ರಾಯವನ್ನು ತಮ್ಮ ಕಲ್ಪನೆಯ ‘ಹಿಂದೂ ರಾಷ್ಟ್ರ’ ಕುರಿತ ಪ್ರಸಿದ್ಧ ಘೋಷಣಾ ಪತ್ರದಲ್ಲಿಯೂ ಅವರು ಪುನರುಚ್ಚರಿಸಿದ್ದರು. ಯಾವುದೇ ಪಂಥದ ಧಾರ್ಮಿಕ ಆಚರಣೆಗಳಿಗೆ ಯಾರಾದರೂ ವಿಘ್ನ ತಂದಲ್ಲಿ ಅದನ್ನು ನಿವಾರಿಸಲು ಸರ್ಕಾರವು ಬದ್ಧವಾಗಿರಬೇಕು ಎಂದೂ ಅವರು ಹೇಳಿದರು. ಆದರೆ ‘ಅಲ್ಪಸಂಖ್ಯಕ’ ಎಂಬ ಆಧಾರದ ಮೇಲಿನ ತುಷ್ಟೀಕರಣ ಧೋರಣೆಯಿಂದ ರಾಷ್ಟ್ರದ ಪ್ರಗತಿಗೂ ಸಾಮರಸ್ಯಕ್ಕೂ ಭಂಗ ಬರುತ್ತದೆ ಎಂದು ಎಚ್ಚರಿಸಿದ್ದರು. ಸಾವರಕರರ ಈ ದೃಷ್ಟಿಯ ತಥ್ಯತೆಯೂ ಅನಂತರದ ವರ್ಷಗಳಲ್ಲಿ ಸಮರ್ಥನೆಗೊಂಡಿದೆ.
ಸಾವರಕರರು ಪ್ರತಿಪಾದಿಸಿದ ರಾಷ್ಟ್ರವಾದದ ಒಂದು ಪ್ರಮುಖ ಅಂಶವೆಂದರೆ ಹಿಂದೂ ಸಮಾಜವು ಶಕ್ತಿವಂತವಾದಲ್ಲಿ ಅದು ಇಡೀ ಜಗತ್ತಿಗೇ ಹಿತಕಾರಿಯಾಗುತ್ತದೆ – ಎಂಬುದು. ಜಾಗತಿಕ ಮಾನ್ಯತೆ ಪಡೆದ ವಿಲ್ ಡ್ಯುರಂಟ್ ಸೇರಿದಂತೆ ಅನೇಕ ಚಿಂತಕರು ಇದೇ ಅಭಿಮತ ನೀಡಿರುವುದನ್ನು ಸ್ಮರಿಸಬಹುದು.
ದೇಶವಿಭಜನೆಯ ತರುವಾಯವೂ ಭಾರತದೊಳಗೆ ಘರ್ಷಣೆಗಳು ಪದೇ ಪದೇ ನಡೆಯುತ್ತಿದ್ದುದರ ಹಿನ್ನೆಲೆಯಲ್ಲಿ 1952ರಲ್ಲಿ (ಪುಣೆಯ ನಗರಸಭೆಯ ಒಂದು ಕಾರ್ಯಕ್ರಮದಲ್ಲಿ) ಸಾವರಕರ್ ನೊಂದು ಹೇಳಿದರು:
“ವಿಭಜನೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರತಿ ಹಂತದಲ್ಲಿಯೂ ತಪ್ಪು ಹೆಜ್ಜೆಗಳನ್ನಿಡುತ್ತ ಬಂದಿದ್ದುದರ ಬಗೆಗೆ ಹಿಂದೂ ಸಮಾಜವನ್ನು ಉದ್ದೇಶಿಸಿ ಎಚ್ಚರಿಕೆಯ ಮಾತುಗಳನ್ನು ಆಡಿದ್ದೆ. ದುರದೃಷ್ಟದಿಂದ ನಾನು ವ್ಯಕ್ತಪಡಿಸಿದ್ದ ಶಂಕೆಗಳೆಲ್ಲವೂ ನಿಜಗೊಂಡಿವೆ. ನನ್ನ ಶಂಕೆಯು ನಿರಾಧಾರವೆಂದು ಸಾಬೀತುಗೊಂಡಿದ್ದಿದ್ದರೆ ಅದರಿಂದ ನನಗಿಂತ ಹರ್ಷಗೊಳ್ಳುತ್ತಿದ್ದವರು ಬೇರೆ ಇಲ್ಲ.”
1940ರಲ್ಲಿ ಸಿಂಧ್ ಭಾಗವನ್ನು ಮುಂಬಯಿ ಪ್ರಾಂತದಿಂದ ಸರ್ಕಾರವು ಪ್ರತ್ಯೇಕಿಸಿದಾಗ ಅದು ಆಗಾಮಿ ಪಾಕಿಸ್ತಾನದ ಪ್ರಭಾವದಿಂದಾದ ಕ್ರಮ – ಎಂದು ಸಾವರಕರರು ವಿಶ್ಲೇಷಿಸಿದ್ದರು. ಅನಂತರದ ದಿನಗಳಲ್ಲಿ ಆದದ್ದಾದರೂ ಏನು? ‘ಪಾಕಿಸ್ತಾನ ಆಗುವುದಾದರೆ ನನ್ನ ಹೆಣದ ಮೇಲೆ’ ಎಂದು ಗಾಂಧಿ ಮತ್ತು ನೆಹರು ವೀರಾವೇಶದಿಂದ ಹೇಳಿದ್ದರೇನೋ ಹೌದು. ಆದರೆ ಅದಾದ ಆರೇಳು ವರ್ಷಗಳಲ್ಲಿಯೆ ಸಾವರಕರರು ನಿರೀಕ್ಷಿಸಿದ್ದಂತೆಯೆ ವಿಭಜನೆ ನಡೆದುಹೋಯಿತು.
(ಸಶೇಷ)