ದ್ರಷ್ಟಾರ ಸಾವರಕರ್ ೫
ಒಂದು ಪ್ರಸಂಗವಂತೂ ಪ್ರಸಿದ್ಧವೇ ಇದೆ. ಸಾವರಕರರಿಗೆ ನ್ಯಾಯಾಲಯವು ಎರಡು ಆಜೀವನ ಕಾರಾವಾಸದ ದಂಡನೆ ಘೋಷಿಸಿದ ಮೇಲೆ ಅವರನ್ನು ಜೈಲಿಗೆ ಒಯ್ಯುತ್ತಿದ್ದ ಅಧಿಕಾರಿ ವ್ಯಂಗ್ಯವಾಗಿ ಹೇಳಿದ: ಬ್ರಿಟಿಷ್ ಸರ್ಕಾರ ಎಷ್ಟು ನ್ಯಾಯಪ್ರಿಯವೂ ಕರುಣಾಶಾಲಿಯೂ ಆಗಿದೆಯೆಂದರೆ ಇನ್ನು ಐವತ್ತು ವರ್ಷ ಮುಗಿದ ಕೂಡಲೇ (ಎಂದರೆ ೧೯೬೦ರಲ್ಲಿ) ನಿಮ್ಮನ್ನು ನಿಶ್ಚಿತವಾಗಿ ಮುಕ್ತಗೊಳಿಸುತ್ತದೆ. ಇದಕ್ಕೆ ಸಾವರಕರರು ಮುಗುಳ್ನಕ್ಕು ಪ್ರಶಾಂತ ಸ್ವರದಲ್ಲಿ ಉತ್ತರಿಸಿದರು: ನಿಮ್ಮ ಬ್ರಿಟಿಷ್ ಸರ್ಕಾರಕ್ಕಿಂತ ಮೃತ್ಯುದೇವತೆ ಇನ್ನೂ ಹೆಚ್ಚು ಕರುಣಾಳುವಾಗಿದ್ದಾಳೆ. ನೀವು ವಿಧಿಸಿರುವ ದಂಡನೆಯ ಅವಧಿಗೆ ಮುಂಚೆಯೇ ಅವಳು ನನ್ನನ್ನು ಬಿಡುಗಡೆಗೊಳಿಸಿಬಿಡುತ್ತಾಳೆ.
ವೀರ ಎಂಬ ಶಬ್ದವು ಅನೇಕ ವೇಳೆ ಆಲಂಕಾರಿಕವಾಗಿ ಬಳಕೆಯಾಗುತ್ತದೆ. ಆದರೆ ಸಾವರಕರರು ವೀರ ಎಂಬ ಉಪಾಧಿಯನ್ನು ತ್ಯಾಗದಿಂದಲೂ ಸಾಧನೆಯಿಂದಲೂ ಗಳಿಸಿಕೊಂಡಿದ್ದರು. ಯಾವ ದೃಷ್ಟಿಯಿಂದ ತುಲನೆ ಮಾಡಿದರೂ ಸಾವರಕರರು ಅನನ್ಯರಾಗಿಯೇ ಉಳಿಯುತ್ತಾರೆ.
೧೯ನೇ ಶತಮಾನದ ಅಂತ್ಯಭಾಗದಲ್ಲಿ ಲೋಕಮಾನ್ಯ ತಿಲಕರು ಗಣೇಶೋತ್ಸವ ಮತ್ತು ಶಿವಾಜಿ ಜಯಂತಿ ಉತ್ಸವಗಳನ್ನು ಸಾಮೂಹಿಕವಾಗಿಸಿ ಅವನ್ನು ಜನಜಾಗರಣದ ಪ್ರಭಾವಿ ಮಾಧ್ಯಮಗಳನ್ನಾಗಿ ಬಳಸಿದುದು ಆಗ ೧೦-೧೧ ವರ್ಷ ವಯಸ್ಸಿನ ಸಾವರಕರರ ಅಂತರಂಗದ ಮೇಲೆ ಬೀರಿದ ಗಾಢ ಪ್ರಭಾವವೇ ಅವರ ರಾಷ್ಟ್ರೀಯತಾಪರ ಜೀವನದೃಷ್ಟಿಗೆ ಒಂದು ಪ್ರಮುಖ ಪ್ರೇರಣೆಯಾಗಿ ಕೆಲಸ ಮಾಡಿತ್ತು. ಮೊದಲ ಬಾರಿಗೆ ವಿದೇಶೀ ವಸ್ತ್ರಗಳ ದಹನವನ್ನು ಆಯೋಜಿಸಿದಾಗ ಸಾವರಕರರು ಇನ್ನೂ ವಿದ್ಯಾರ್ಥಿ ದಶೆಯಲ್ಲಿ ಇದ್ದರು; ಫರ್ಗ್ಯುಸನ್ ಕಾಲೇಜಿನಲ್ಲಿ ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದರು. ಆ ದಿನಗಳಲ್ಲಿಯೆ ಸಾವರಕರರು ಹುಟ್ಟುಹಾಕಿದ ಮಿತ್ರಮಂಡಲ ಶಾಖೆಗಳು ಕ್ಷಿಪ್ರವಾಗಿ ಹರಡತೊಡಗಿದವು.
ಬೆಳೆಯುವ ಕುಡಿ ಮೊಳಕೆಯಲ್ಲಿ
ಬಾಲ್ಯಕಾಲದಲ್ಲಿಯೆ ಸಾವರಕರರ ಮನಸ್ಸಿನ ಮೇಲೆ ಆಳವಾದ ಪ್ರಭಾವಮುದ್ರೆಯನ್ನು ಒತ್ತಿದ್ದುದು ಇಟಲಿಯ ದೇಶಭಕ್ತಾಗ್ರಣಿ ಜೋಸೆಫ್ ಮೆಟ್ಸಿನಿಯ ಜೀವನ ಮತ್ತು ಸಾಧನೆ. ಆಮೇಲಿನ ವರ್ಷಗಳಲ್ಲಿ ಮೆಟ್ಸಿನಿಯ ಜೀವನಚರಿತ್ರೆಯನ್ನು ಸಾವರಕರರು ಬರೆದರು.
ಮೇಲಣ ವಿದ್ಯಮಾನಗಳನ್ನು ಮೆಲುಕುಹಾಕುವಾಗ ಸ್ವಾತಂತ್ರ್ಯಪ್ರಾಪ್ತಿ ಪ್ರಯಾಸಗಳಲ್ಲಿ ಸಾವರಕರರದು ಹೇಗೆ ಸಮೂಲವೂ ಸರ್ವಂಕಷವೂ ಆದ ದೃಷ್ಟಿಯಾಗಿದ್ದಿತೆಂಬುದು ಗಮನ ಸೆಳೆಯುತ್ತದೆ. ಆ ಪ್ರಕ್ರಿಯೆಗೆ ಪೋಷಣೆ ನೀಡಿದ್ದ ಮತ್ತೊಂದು ಪ್ರಮುಖ ಸಂಗತಿಯೆಂದರೆ ಬಾಲ್ಯಕಾಲದಿಂದಲೇ ಸಾವರಕರರು ಜಗತ್ತಿನ ಇತಿಹಾಸದ ಅಧ್ಯಯನದಲ್ಲಿ ಅಭಿರುಚಿಯನ್ನು ಬೆಳೆಸಿಕೊಂಡಿದ್ದುದು. ಈ ಭೂಮಿಕೆ ಇದ್ದುದರಿಂದ ಬ್ರಿಟಿಷರ ಸಾಮ್ರಾಜ್ಯಶಾಹಿ ಧೋರಣೆಗಳನ್ನು ಸಾವರಕರರು ಕರಾರುವಾಕ್ಕಾಗಿ ಮೌಲ್ಯಮಾಪನ ಮಾಡಬಲ್ಲವರಾಗಿದ್ದರು.
ಭಾರತೀಯ ದೇಶಭಕ್ತ ತರುಣರು ಪ್ರೌಢ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳಲು ಅನುಕೂಲ ಕಲ್ಪಿಸಿದ್ದ ಶ್ಯಾಮಜೀ ಕೃಷ್ಣವರ್ಮರ ವ್ಯವಸ್ಥೆಯ ಅಡಿಯಲ್ಲಿ ಇಂಗ್ಲೆಂಡಿಗೆ ಹೋಗುವ ಅವಕಾಶ ಪ್ರಾಪ್ತವಾದುದು ಸಾವರಕರರಿಗೆ ಅವರ ಅನೇಕ ಕಲ್ಪನೆಗಳನ್ನು ಸಾಕಾರಗೊಳಿಸಲು ದೋಹದ ನೀಡಿತು.
ಸಾವರಕರರು ಇಂಗ್ಲೆಂಡ್ ಪರ್ಯಟನೆಗೆ ಮುಂದಾದುದಕ್ಕೂ ಪ್ರಬಲ ಪ್ರೇರಣೆಯಾಗಿದ್ದುದು ಯೂರೋಪಿನ ದೇಶಗಳಲ್ಲಿ ಭಾರತ ಸ್ವಾತಂತ್ರ್ಯಪರ ವಾತಾವರಣವನ್ನು ಸೃಷ್ಟಿಸಬೇಕು ಎಂಬುದಾಗಿತ್ತು.
ಸಾವರಕರರ ಮಂಡನೆಗಳ ಹಿಂದಿದ್ದ ದೀರ್ಘಾಲೋಚನೆಯನ್ನು ನಿದರ್ಶನಪಡಿಸುವ ಇನ್ನೂ ಒಂದೆರಡು ಪ್ರಸಂಗಗಳನ್ನು ನೆನೆಯಬಹುದು.
ಸ್ವೋಪಜ್ಞ ಮಂಥನ
೧೮೫೭ರಲ್ಲಿ ನಡೆದಿದ್ದುದು ಕೇವಲ ವಿದ್ರೋಹವಲ್ಲ, ಮಹಾಸಂಗ್ರಾಮ – ಎಂದು ಮೊತ್ತಮೊದಲಿಗೆ ಪರಾಮರ್ಶನೆ ಮಾಡಿದವರು ಸಾವರಕರರು. ಈ ಶೋಧಕಾರ್ಯದ ಮೂಲಕ ಸಾವರಕರರು ಇತಿಹಾಸವನ್ನು ಹೇಗೆ ಅಭ್ಯಾಸ ಮಾಡಬೇಕೆಂಬುದಕ್ಕೂ ಹೊಸದೊಂದು ಪ್ರಸ್ಥಾನಕ್ಕೆ ನಾಂದಿ ಹಾಡಿದರು. ವಿಶುದ್ಧ ಸತ್ಯವನ್ನು ಪ್ರಕಟೀಕರಿಸುವ ಇತಿಹಾಸರಚನೆ ಮಾತ್ರ ವರ್ತಮಾನಕಾಲಕ್ಕೂ ಭವಿಷ್ಯತ್ಕಾಲಕ್ಕೂ ಯುಕ್ತ ಮಾರ್ಗದರ್ಶನ ಮಾಡಬಲ್ಲದು.
ಸಾಂದರ್ಭಿಕವಾಗಿ ಗಮನಿಸಬೇಕಾದ ಸಂಗತಿಯೆಂದರೆ – ಪ್ರೇರಣಾದಾಯಕ ಇತಿಹಾಸದ ಪ್ರತಿಪಾದನೆಗೆ ಅನುಕೂಲಿಸುವ ಓಜಸ್ವಿ ಶೈಲಿಯನ್ನೂ ಸಾವರಕರರು ಆವಿಷ್ಕರಿಸಿದರು.
ಸಾವರಕರರು ೧೮೫೭ರ ಮೊದಲ ಸ್ವಾತಂತ್ರ್ಯ ಮಹಾಸಂಗ್ರಾಮ ಕುರಿತು ಸಂಶೋಧನೆ ನಡೆಸತೊಡಗಿದುದು ಎರಡು ಪ್ರಮುಖ ಕಾರಣಗಳಿಂದ: (೧) ಬ್ರಿಟಿಷ್ ರಚಿತ ಇತಿಹಾಸದಲ್ಲಿದ್ದ ನ್ಯೂನತೆಗಳನ್ನು ನೇರ್ಪಡಿಸುವುದು; (೨) ವ್ಯವಸ್ಥಿತ ಸಂಘಟನೆಯ ಮಹತ್ತ್ವವನ್ನು ಜನರಿಗೆ ತಿಳಿಯಪಡಿಸುವುದು. ಬ್ರಿಟಿಷರ ದೃಷ್ಟಿಯಲ್ಲಿ ವಿಫಲಗೊಂಡ ಆ ಮಹಾಸಮರ ಅರ್ಧಾಂತಕವಾದುದಕ್ಕೆ ಪ್ರಮುಖ ಕಾರಣಗಳು ಸಾವರಕರರ ದೃಷ್ಟಿಯಲ್ಲಿ ಪ್ರಯಾಸದ ಏಕಮುಖತೆಯ ಕೊರತೆ, ಉದ್ದೇಶದಲ್ಲಿ ಸ್ಪಷ್ಟತೆಯ ಕೊರತೆ, ದೂರದೃಷ್ಟಿಯ ನಾಯಕತ್ವದ ಎಂದರೆ ನೇತೃತ್ವದ ಕೊರತೆ. ಅದರ ಪರಿಣಾಮ ದುಬಾರಿಯಾಯಿತು. ನಿದರ್ಶನಕ್ಕೆ: ಈಚಿನ ಇತಿಹಾಸಕಾರರೂ ಅಭಿಪ್ರಾಯಪಟ್ಟಿರುವಂತೆ ದೆಹಲಿ ಪ್ರಾಂತದಲ್ಲಿ ಬ್ರಿಟಿಷರನ್ನು ಪರಾಭವಗೊಳಿಸುವುದು ಅಷ್ಟೇನೂ ಕಷ್ಟವಿರಲಿಲ್ಲ; ಆದರೆ ಆಂದೋಲನಕಾರರು ಪ್ರತ್ಯೇಕ ಪ್ರಯತ್ನಗಳಲ್ಲಿ ತಮ್ಮ ಶಕ್ತಿಯ ದುರ್ವ್ಯಯ ಮಾಡಿದರು. ಹೀಗೆ ದುರ್ಬಲ ಸೇನೆಯ ವಿರುದ್ಧ ಸಶಕ್ತ ಸೇನೆಯು ಸೋಲುವಂತಾಯಿತು.
ಇಂತಹ ಹಲವಾರು ಸೂಕ್ಷ್ಮತೆಗಳನ್ನು ಸಾವರಕರರು ಸ್ವೀಯ ಪರಾಮರ್ಶನೆಯಿಂದ ಕಂಡುಕೊಂಡು ವ್ಯಾಖ್ಯಾನ ಮಾಡಿದರು.
* * *
ಬೆಂಕಿಯಲ್ಲಿ ಅರಳಿದ ಹೂ
ಸಾವರಕರರು ಕಾಲಾ ಪಾನೀ ಅಂಡಮಾನ್ ದ್ವೀಪದ ಸೆಲ್ಯುಲರ್ ಜೈಲಿಗೆ ದಾಖಲಾದಾಗ ಅವರು ೨೮ ವರ್ಷದ ತರುಣ. ಜಗತ್ತಿನ ಅನ್ಯ ಜೈಲುಗಳಿಗಿಂತ ಅತ್ಯಂತ ದುರ್ಭೇದ್ಯ ಹಾಗೂ ಕ್ರೌರ್ಯಮಯವೆಂದು ಕುಪ್ರಸಿದ್ಧವಾಗಿದ್ದಿತು ಸೆಲ್ಯುಲರ್ ಜೈಲು. ಅಂಡಮಾನ್ ದ್ವೀಪದ ಕಮಿಷನರನಾಗಿದ್ದ ರಿಚರ್ಡ್ ಕಾರ್ನಾಕ್ ಟೆಂಪಲ್ ಮಹಾಶಯನದೇ ವರ್ಣನೆ ಇದು: ಇಲ್ಲಿಗೆ ಬಂದ ಪ್ರತಿಯೊಬ್ಬ ಕ್ರಾಂತಿಕಾರಿಯ ಮನೋಬಲವನ್ನು ನಿರ್ಣಾಮ ಮಾಡಿ ಅವನನ್ನು ಸುಧಾರಿಸಬಲ್ಲ ವ್ಯವಸ್ಥೆ ಇದ್ದುದು ಈ ಜೈಲಿನಲ್ಲಿ. ಒಮ್ಮೆಗೇ ನೇಣು ಬಿಗಿಯುವುದಕ್ಕಿಂತ ಹೆಚ್ಚು ಭಯಾನಕವಾಗಿರುತ್ತಿತ್ತು ಅಲ್ಲಿಯ ಸ್ಥಿತಿ.
ಒಂದು ಪ್ರಸಂಗವಂತೂ ಪ್ರಸಿದ್ಧವೇ ಇದೆ. ಸಾವರಕರರಿಗೆ ನ್ಯಾಯಾಲಯವು ಎರಡು ಆಜೀವನ ಕಾರಾವಾಸದ ದಂಡನೆ ಘೋಷಿಸಿದ ಮೇಲೆ ಅವರನ್ನು ಜೈಲಿಗೆ ಒಯ್ಯುತ್ತಿದ್ದ ಅಧಿಕಾರಿ ವ್ಯಂಗ್ಯವಾಗಿ ಹೇಳಿದ: ಬ್ರಿಟಿಷ್ ಸರ್ಕಾರ ಎಷ್ಟು ನ್ಯಾಯಪ್ರಿಯವೂ ಕರುಣಾಶಾಲಿಯೂ ಆಗಿದೆಯೆಂದರೆ ಇನ್ನು ಐವತ್ತು ವರ್ಷ ಮುಗಿದ ಕೂಡಲೇ (ಎಂದರೆ ೧೯೬೦ರಲ್ಲಿ) ನಿಮ್ಮನ್ನು ನಿಶ್ಚಿತವಾಗಿ ಮುಕ್ತಗೊಳಿಸುತ್ತದೆ. ಇದಕ್ಕೆ ಸಾವರಕರರು ಮುಗುಳ್ನಕ್ಕು ಪ್ರಶಾಂತ ಸ್ವರದಲ್ಲಿ ಉತ್ತರಿಸಿದರು: ನಿಮ್ಮ ಬ್ರಿಟಿಷ್ ಸರ್ಕಾರಕ್ಕಿಂತ ಮೃತ್ಯುದೇವತೆ ಇನ್ನೂ ಹೆಚ್ಚು ಕರುಣಾಳುವಾಗಿದ್ದಾಳೆ. ನೀವು ವಿಧಿಸಿರುವ ದಂಡನೆಯ ಅವಧಿಗೆ ಮುಂಚೆಯೇ ಅವಳು ನನ್ನನ್ನು ಬಿಡುಗಡೆಗೊಳಿಸಿಬಿಡುತ್ತಾಳೆ.
ಆ ಜೈಲಿನಲ್ಲಿಯ ಯಾತನೆಯನ್ನು ಸಹಿಸಲಾರದೆ ಇಂದುಭೂಷಣನೆಂಬ ಕೈದಿ ಆತ್ಮಹತ್ಯೆ ಮಾಡಿಕೊಂಡದ್ದು, ಉಲ್ಲಾಸಕರದತ್ತ ಮನೋವೈಕಲ್ಯಕ್ಕೊಳಗಾದುದು – ಇವೆಲ್ಲ ಪ್ರಸಿದ್ಧ ಸಂಗತಿಗಳು.
ಅಂತಹ ಅಮಾನುಷ ಪರಿಸ್ಥಿತಿಯಿಂದಲೂ ಸುಧಾರಿತರಾಗದಿದ್ದವರು ಸಾವರಕರ್.
ಸಾವರಕರರಿಗಿಂತ ಹಿಂದೆಯೇ ಬಂಧಿತರಾಗಿದ್ದ ಬಾರೀಂದ್ರ ಘೋಷ್ ಮೊದಲಾದವರು ಜೈಲಿನ ಅಧಿಕಾರಿಗಳಿಂದ ಒಂದೆರಡು ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಳ್ಳುವುದರಲ್ಲಿ ಸಫಲರಾಗಿದ್ದರು. ಅವರ ಪ್ರಯತ್ನಗಳನ್ನು ಸಾವರಕರ್ ಸೋದರರು ರಹಸ್ಯವಾಗಿ ಪ್ರೋತ್ಸಾಹಿಸಿದ್ದುದೂ ಇತ್ತು. ಆದರೆ ಸಾವರಕರರು ತಮ್ಮ ಸಲುವಾಗಿ ಯಾವುದೇ ಹೆಚ್ಚಿನ ಸವಲತ್ತುಗಳನ್ನು ಕೋರಲು ನಿರಾಕರಿಸಿದರು.
ಸಾವರಕರರು ಸಿದ್ಧಿಸಿಕೊಂಡಿದ್ದ ಮಾನಸಿಕ ಪ್ರಶಾಂತಿಗೆ ಜೈಲಿನ ದಾಖಲೆಗಳೇ ಸಾಕ್ಷ್ಯ ನೀಡಿವೆ. ಆರಂಭದ ವರ್ಷಗಳಲ್ಲಿ ಬಂಧನದಲ್ಲಿದ್ದಾಗ ಪತ್ರಗಳನ್ನು ಬರೆದ ಅಪರಾಧಕ್ಕಾಗಿ ಅಧಿಕ ಶಿಕ್ಷೆಗಳಿಗೆ ಸಾವರಕರರು ಹಲವು ಬಾರಿ ಒಳಗಾಗಿದ್ದರೂ (ಇಡೀ ದಿನ ಸಂಕೋಲೆ ಧರಿಸಬೇಕಾಗಿದ್ದುದು ಇತ್ಯಾದಿ) ಆಮೇಲಿನ ಕಾಲದಲ್ಲಿ ಅವರು ಸದಾ ಸೌಮ್ಯರಾಗಿಯೂ ಉದ್ವೇಗರಹಿತರೂ ಆಗಿರುತ್ತಿದ್ದರು ಎಂದಿದೆ ಒಂದು ಜೈಲು ದಾಖಲೆ.
ಆಂತರಂಗಿಕ ಪ್ರಜ್ವಲತೆ
ಸುಡುತ್ತಿರುವ ಬೆಂಕಿಗೆ ಬಟ್ಟೆ ತುಂಡಿನ ಗೌಸನ್ನು ಹೊದಿಸಿದಲ್ಲಿ ಅದು ಎಷ್ಟು ಮಾತ್ರ ಪ್ರಯೋಜನಕ್ಕೆ ಬಂದೀತು? ಅಂಡಮಾನಿನ ಕಠಿಣ ಕಾರಾವಾಸವಾಗಲಿ ಅನಂತರದ ಸ್ಥಾನಬದ್ಧತೆಯಾಗಲಿ ಸಾವರಕರರ ಕಾರ್ಯಶೀಲತೆಯನ್ನು ಕುಗ್ಗಿಸುವುದು ಅಸಂಭವವಾಗಿದ್ದಿತು. ಯಾವ ಅತ್ಯಲ್ಪ ಅನುಕೂಲತೆಯಾಗಲಿ ಇಲ್ಲದ ಸೆಲ್ಯುಲರ್ ಜೈಲಿನ ಏಕಾಂತದಲ್ಲಿಯೆ ಅವರು ಕೇವಲ ಸ್ಮರಣಶಕ್ತಿಯನ್ನೂ ಧಾರಣಸಾಮರ್ಥ್ಯವನ್ನೂ ಅವಲಂಬಿಸಿ ಶ್ರೇಷ್ಠ ಕಾವ್ಯವನ್ನು ರಚಿಸಿದರು. ಅಂಥವರ ಕ್ರಿಯಾಶೀಲತೆಗೆ ಸ್ಥಾನಬದ್ಧತೆ ಅಡ್ಡಿಯಾದೀತೆ? ಅವರ ಪ್ರಖರ ರಾಷ್ಟ್ರಚಿಂತನೆಯಂತೂ ಬಹಳ ಹಿಂದೆಯೇ ಜನಜನಿತವಾಗಿತ್ತು. ಹೀಗಾಗಿ ಅದನ್ನು ಹೊಸದಾಗಿ ಪುನರುಚ್ಚರಿಸದಿದ್ದರೂ ಅದರ ಪ್ರಭಾವವೇನೂ ಕುಗ್ಗುವಂತಿರಲಿಲ್ಲ.
* * *
ಸಾವರಕರರು ವಾಸ್ತವವಾದಿಗಳಾಗಿದ್ದರು. ರಾಜಕಾರಣದಲ್ಲಿ ಪರಿಸ್ಥಿತಿಗಳು ಬದಲಾಗುತ್ತವೆ; ಹಲವೊಮ್ಮೆ ತೀಕ್ಷ್ಣವಾಗಿಯೆ ಬದಲಾಗುತ್ತವೆ. ಆಗಾಗಿನ ಸೂಕ್ಷ್ಮತೆಗಳನ್ನು ಗ್ರಹಿಸಿ ಸ್ವಂತ ನಿಲವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಸದಿಚ್ಛೆಯ ಮನವಿಗಳಿಗೆ ಆಂಗ್ಲ ಪ್ರಭುತ್ವವು ಸೊಪ್ಪುಹಾಕುವುದಿಲ್ಲವೆಂದು ಸಾವರಕರರ ಅಭಿಪ್ರಾಯವೂ ಅನುಭವವೂ ಆಗಿದ್ದಿತು. ಆದರೂ ನಿರ್ಣಾಯಕ ಸಮಯ ಎದುರಾದಾಗ ವ್ಯಾವಹಾರಿಕ ಸ್ತರದ ಪ್ರಯಾಸಗಳನ್ನು ಕೈಬಿಡಬಾರದು ಎಂಬ ಧೋರಣೆಯನ್ನೂ ಅವರು ತಳೆದುದುಂಟು. ಆಗ್ನೇಯ ಏಷ್ಯಾದಲ್ಲಿ ಬ್ರಿಟಿಷ್ ಸೇನೆಯ ವರ್ಚಸ್ಸು ಇಳಿಮುಖವಾಗಿದ್ದ ಸನ್ನಿವೇಶದಲ್ಲಿ ಸಾವರಕರರು ಬ್ರಿಟಿಷ್ ಪ್ರಭುತ್ವಕ್ಕೆ ಮನವಿ ಮಾಡಲು ಹಿಂದೆಗೆಯಲಿಲ್ಲ. ಜಪಾನಿನ ಆಗಿನ ಮೇಲುಗೈ ಸ್ಥಿತಿ ಮುಂದುವರಿದರೆ ಅದು ಭಾರತದ ಗಡಿಗೆ ತಲಪುವುದು ನಿಶ್ಚಿತ; ಆ ವಿಷಮ ಸನ್ನಿವೇಶದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಸ್ಪಷ್ಟ ಘೋಷಣೆ ಮಾಡಿ ಭಾರತದ ಸಹಕಾರವನ್ನು ಪಡೆಯುವುದು ಬ್ರಿಟಿಷ್ ಪ್ರಯತ್ನಕ್ಕೆ ಹಿತಕರವಾಗಿ ಪರಿಣಮಿಸಬಹುದು. ಭಾರತ ಸ್ವಾಧೀನತೆಯ ಘೋಷಣೆಯಾದಲ್ಲಿ ಬ್ರಿಟಿಷರಿಗೆ ಸಹಕಾರ ನೀಡಲು ಭಾರತೀಯ ಸೈನಿಕರು ಸಂಕೋಚಪಡಬೇಕಾದ ಕಾರಣ ಇರುವುದಿಲ್ಲ. ಹೀಗೆ ನಡೆದಲ್ಲಿ ಗಣನೀಯ ಪ್ರಮಾಣದ ಅವ್ಯವಸ್ಥೆಯನ್ನು ನಿವಾರಿಸಲಾದೀತು – ಎಂಬುದು ಸಾವರಕರರ ನಿವೇದನೆಯಾಗಿತ್ತು.
* * *
ಸುಧಾರಣ ಪ್ರಯಾಸಗಳು
ಸಾವರಕರರು ಅಸ್ಪೃಶ್ಯತಾ ನಿರ್ಮೂಲನದ ಆವಶ್ಯಕತೆಯಲ್ಲಿ ಮನಸಾರ ನಂಬಿದ್ದರೆಂಬುದನ್ನು ಸಂಶಯದೃಷ್ಟಿಯಿಂದ ನೋಡುವವರು ಕಡಮೆ ಇರಲಿಲ್ಲ. ಅದೊಂದು ವ್ಯೂಹಾತ್ಮಕ (ಸ್ಟ್ರಾಟಜಿಕ್) ನಡೆಯಷ್ಟೆ ಎಂದು ತಳ್ಳಿಹಾಕುವವರಿಗೂ ಕಡಮೆ ಇರಲಿಲ್ಲ. ಸಾವರಕರರ ಅನುಯಾಯಿಗಳಲ್ಲಿಯೂ ಅನೇಕರು ಈ ದಿಕ್ಕಿನ ಪ್ರಯಾಸಗಳಿಂದ ದೂರ ಉಳಿದದ್ದೂ ಉಂಟು. ಆದರೆ ಸಾವರಕರರು ಅಸ್ಪೃಶ್ಯತಾನಿವಾರಣೆಯ ವಿಷಯದಲ್ಲಿ ನಿಶ್ಚಲರೂ ಪ್ರಯತ್ನಶೀಲರೂ ಆಗಿದ್ದರು.
ಮತಾಂತರದ ಇತಿಹಾಸವನ್ನೂ ಸನ್ನಿವೇಶಗಳನ್ನೂ ಕುರಿತೂ ಸಾವರಕರರು ಗಾಢವಾಗಿ ಅಧ್ಯಯನ ಮಾಡಿದ್ದರು. ಹಿಂದಿನ ಹಲವು ಶತಮಾನಗಳಲ್ಲಿ ಬಲಾತ್ಕಾರಪೂರ್ವಕವಾಗಿಯೂ ರಾಜ್ಯಾಧಿಕಾರ ಬಲದಿಂದಲೂ ಹೆಚ್ಚಿನ ಮತಾಂತರಣಗಳು ನಡೆದಿದ್ದವು; ಆಗೀಗ ವಿರಳ ಪ್ರತಿಭಟನೆಗಳೂ ಆಗಿದ್ದವು. ಆದರೆ ರಾಜ್ಯಶಕ್ತಿಯೇ ಬೆಂಬಲಿಸಿದ್ದುದರಿಂದ ಗಣನೀಯ ಸಂಖ್ಯೆಯ ಸ್ಥಳೀಯ ಜನತೆ ಇಸ್ಲಾಮಿಗೂ ಕ್ರೈಸ್ತಮತಕ್ಕೂ ಮತಾಂತರಗೊಂಡಿದ್ದರು. ಈ ಪ್ರವೃತ್ತಿಗೆ ಪ್ರತಿಕ್ರಿಯಾತ್ಮಕವಾಗಿಯೇ ವಿದ್ಯಾರಣ್ಯರು ಹರಿಹರ-ಬುಕ್ಕರನ್ನು ಮಾಧ್ಯಮವಾಗಿ ಬೆಳೆಸಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿಸಿದುದು. ಪರಾವರ್ತನ ಪ್ರಯತ್ನಗಳು ರಾಜಸ್ಥಾನ ಪಂಜಾಬ್ಗಳಲ್ಲಿಯೂ ಬಹಳ ಹಿಂದಿನಿಂದ ನಡೆದಿದ್ದವು. ಈ ವಿಶಾಲ ಹಿನ್ನೆಲೆಗೆ ಗಮನ ಸೆಳೆಯುತ್ತ ಸಾವರಕರರು ವರ್ಷಗಳುದ್ದಕ್ಕೂ ಪರಾವರ್ತನ ಪ್ರಕ್ರಿಯೆಯನ್ನು ಬೆಂಬಲಿಸಿದರು. ಕಾಶ್ಮೀರದಲ್ಲಿ ಹಿಂದೆ ಬಲಾತ್ಕಾರದಿಂದ ಮತಾಂತರಿತರಾಗಿದ್ದವರನ್ನು ಹಿಂದೂಧರ್ಮದೊಳಕ್ಕೆ ಹಿಂದಕ್ಕೆ ಕರೆಯಿಸಿಕೊಳ್ಳಲು ಕಾಶ್ಮೀರ ಮಹಾರಾಜ ಬಯಸಿದಾಗ ಕಾಶಿಯ ಪಂಡಿತರು ಅದು ಶಾಸ್ತ್ರವಿರೋಧಿಯಾಗುತ್ತದೆಂದು ಆಗ್ರಹಿಸಿದುದರಿಂದ ಕಾಶ್ಮೀರ ಭಾಗದಲ್ಲಿ ಮುಸ್ಲಿಮರ ಸಂಖ್ಯೆ ಬೆಳೆಯುತ್ತಹೋದದ್ದು ವಿಷಾದಮಯ ಇತಿಹಾಸ. ಈಶಾನ್ಯಭಾರತದಲ್ಲಿ ಮಿಷನರಿ ಚಟುವಟಿಕೆಗಳನ್ನು ಪ್ರತಿಬಂಧಿಸದ ಕಾರಣದಿಂದ ಆ ಭಾಗ ಕ್ರೈಸ್ತ ಬಹುಸಂಖ್ಯಾತವಾಗುತ್ತಿದ್ದುದರ ಬಗೆಗೂ ಸಾವರಕರರು ವೇದನಾಪೂರ್ಣವಾಗಿ ಅನೇಕ ಬಾರಿ ಎಚ್ಚರಿಸಿದ್ದರು.
* * *
೧೯೪೨ರ ಭಾರತ್ ಛೋಡೋ ಆಂದೋಲನ ಸಾಕಷ್ಟು ಪೂರ್ವಾಲೋಚನೆಯೂ ಪೂರ್ವಸಿದ್ಧತೆಯೂ ಇಲ್ಲದೆ ಚಾಲನೆಗೊಂಡದ್ದಾಗಿತ್ತು ಎಂಬುದು ಸಾವರಕರರ ಪರಾಮರ್ಶನೆಯಾಗಿತ್ತು. ಆದರೂ ಎಲ್ಲ ಕಾಂಗ್ರೆಸ್ ಪ್ರಮುಖರ ಬಂಧನವಾದಾಗ ಇಡೀ ಭಾರತ ಸಮಾಜದ ಸಹಾನುಭೂತಿ ತಮ್ಮೆಲ್ಲರೊಡನೆ ಇದೆ. ದೇಶಭಕ್ತಿಯಿಂದ ಪ್ರೇರಿತರಾಗಿ ತಾವೆಲ್ಲ ಬಂಧನಕ್ಕೆ ಒಳಗಾಗಿದ್ದೀರಿ. ಅದನ್ನು ನಾವೆಲ್ಲ ಗೌರವಿಸುತ್ತಿದ್ದೇವೆ ಎಂದು ಹಿಂದೂ ಮಹಾಸಭೆಯ ಪರವಾಗಿ ಹೇಳಿಕೆಯನ್ನಿತ್ತರು.
(ಸಶೇಷ)