ಸಂಗೀತ, ಚಿತ್ರಕಲೆ, ಶಿಲ್ಪಕಲೆ, ಸ್ಥಾಪತ್ಯ, ಆಗಮಶಾಸ್ತ್ರ – ಈ ವಿಷಯಗಳನ್ನು ಕುರಿತು ಸಮರ್ಥವಾಗಿಯೂ ಶಾಸ್ತ್ರಶುದ್ಧವಾಗಿಯೂ ಕನ್ನಡದಲ್ಲಿ ಬರೆಯಬಲ್ಲವರು ಹಿಂದೆ ಹೆಚ್ಚು ಮಂದಿ ಇರಲಿಲ್ಲ, ಈಗಲೂ ಹೆಚ್ಚು ಮಂದಿ ಇಲ್ಲ. ಈ ಬಹು–ಆಯಾಮ ಕ್ಷೇತ್ರದಲ್ಲಿ ರಾಮಚಂದ್ರರಾಯರಷ್ಟು ವಿಶಾಲವಾಗಿ ಕೃಷಿ ಮಾಡಿದವರು ಬಹುಶಃ ಬೇರೆ ಇರಲಿಲ್ಲ. ರಾಮಚಂದ್ರರಾಯರು ಸ್ವತಃ ವೀಣಾವಾದಕರೂ ಚಿತ್ರಕಾರರೂ ಶಿಲ್ಪಕಾರರೂ ಆಗಿದ್ದುದು ಸುವಿದಿತವೇ ಆಗಿದೆ. ಈ ಹಲವು ಕ್ಷೇತ್ರಗಳಲ್ಲಿ ಅಪೂರ್ವ ಒಳನೋಟಗಳನ್ನೂ ಅವರು ಬೆಳೆಸಿಕೊಂಡಿದ್ದರು. ಅವರು ರಚಿಸಿದ ಚಿತ್ರಗಳು ಮತ್ತು ಶಿಲ್ಪಗಳೇ ಒಂದು ದೊಡ್ಡ ಪ್ರದರ್ಶನಕ್ಕೆ ಆಗುವಷ್ಟು ಇದ್ದವು.
ನಾಲ್ಕಾರು ಶಾಸ್ತ್ರಗಳಲ್ಲಿ ಮೇಲ್ಮಟ್ಟದ ಸಮಾನಪ್ರಭುತ್ವ ಪಡೆದು ಆ ಹಲವಾರು ಕ್ಷೇತ್ರಗಳಿಗೆ ಅತಿಶಯವಾದ ಕೊಡುಗೆ ನೀಡಿದವರನ್ನು ‘ರಿನೈಸಾನ್ಸ್ ಮ್ಯಾನ್’ ಎಂದು ಕರೆಯುವುದು ವಾಡಿಕೆ. ನಮ್ಮ ನಡುವೆಯೇ ಇದ್ದು ಈಗ್ಗೆ ಹದಿನೆಂಟು ವರ್ಷ ಹಿಂದೆ (೨-೨-೨೦೦೬) ನಿಧನರಾದ ವಿದ್ಯಾಲಂಕಾರ, ಶಾಸ್ತ್ರಚೂಡಾಮಣಿ, ವಾಚಸ್ಪತಿ, ವೇದರತ್ನ ಪ್ರೊ|| ಎಸ್.ಕೆ. ರಾಮಚಂದ್ರರಾಯರು ಆ ವಿರಳವರ್ಗಕ್ಕೆ ಸೇರಿದವರು; ಹತ್ತಿರಹತ್ತಿರ ಆರು ದಶಕಗಳ ಕಾಲ ಸಾರಸ್ವತಕ್ಷೇತ್ರದಲ್ಲಿ ಸಾರ್ವಭೌಮಿಕೆ ಮೆರೆದವರು. ಅವರ ಮೇಧೆಯ ವೈಶಾಲ್ಯವನ್ನೂ ಬಹುಮುಖತೆಯನ್ನೂ ಕುರಿತು ಯೋಚಿಸುವಾಗ ನಮ್ಮ ಶಾಸ್ತ್ರೇತಿಹಾಸದಲ್ಲಿ ಮೂರ್ಧನ್ಯರಾದ ಅಪ್ಪಯ್ಯದೀಕ್ಷಿತ ಮೊದಲಾದ ಮಹಾಮಹಿಮರ ಪರಂಪರೆಯ ನಮ್ಮ ಕಾಲದ ಪ್ರತಿನಿಧಿ ರಾಮಚಂದ್ರರಾಯರು- ಎನಿಸುತ್ತದೆ. ರಾಮಚಂದ್ರರಾಯರಿಗೆ ಯಾವಯಾವ ವಿಷಯದಲ್ಲಿ ಅಧಿಕಾರ ಇತ್ತೆಂದು ಪಟ್ಟಿಮಾಡಲು ಹೊರಟರೆ ನಮ್ಮ ಪರಂಪರೆಯ ಎಲ್ಲ ವೇದ-ವೇದಾಂಗಗಳನ್ನೂ ಎಲ್ಲ ದರ್ಶನಶಾಸ್ತ್ರಗಳನ್ನೂ ಕಾವ್ಯವಾಙ್ಮಯವನ್ನೂ ಸಂಗೀತ-ನೃತ್ಯಾದಿ ಕಲೆಗಳನ್ನೂ ಪಟ್ಟಿ ಮಾಡಬೇಕಾಗುತ್ತದೆ. ಅವರು ಕಲೆಗಳಲ್ಲಿ ಅಭಿಜ್ಞರಾಗಿದ್ದುದು ಮಾತ್ರಲ್ಲದೆ ಸ್ವಯಂ ಚಿತ್ರಕಾರರೂ ಶಿಲ್ಪಿಯೂ ವೀಣಾವಾದಕರೂ ಕೂಡಾ ಆಗಿದ್ದುದು ಗಮನ ಸೆಳೆಯುವ ಸಂಗತಿ.
ಈಗಿರುವುದಕ್ಕಿಂತ ಹಿಂದಿನ ಎರಡು ಪೀಳಿಗೆಗಳಲ್ಲಿ ಶಾಸ್ತ್ರಪಂಡಿತರ ಸಂಖ್ಯೆ ಗಣನೀಯವಾಗಿ ಅಧಿಕವಾಗಿತ್ತು. ಆದರೆ ವಿದ್ವತ್ತೆ ತುಂಬಿದ್ದ ಆ ಕಾಲದಲ್ಲಿಯೂ ರಾಮಚಂದ್ರರಾಯರಷ್ಟು ಬಹುಮುಖತೆ ಇದ್ದವರು ದುರ್ಲಭ. ಅನ್ಯ ದಿಗ್ದಂತಿ ವಿದ್ವಾಂಸರುಗಳು ಅನೇಕ ಮಂದಿ ಇದ್ದರೂ ಅವರ ವ್ಯವಹಾರಕ್ಷೇತ್ರ ಹೆಚ್ಚೆಂದರೆ ಮೂರೋ ನಾಲ್ಕೋ ಜ್ಞಾನಾಂಗಗಳಿಗೆ ಸೀಮಿತವಿರುತ್ತಿತ್ತು.
ಸವ್ಯಸಾಚಿತ್ವ
ಪ್ರಕಾಂಡ ಶಾಸ್ತ್ರಪಾಂಡಿತ್ಯ ಇರುವವರಲ್ಲೆಲ್ಲ ಗ್ರಂಥಲೇಖನಕೌಶಲವೂ ಇರುತ್ತದೆಂದು ಹೇಳಲಾಗುವುದಿಲ್ಲ. ಶಾಸ್ತ್ರಕ್ಷೇತ್ರದಲ್ಲಾಗಲಿ ಲೌಕಿಕಸಾಹಿತ್ಯಕ್ಷೇತ್ರದಲ್ಲಾಗಲಿ ಒಳ್ಳೆಯ ಬರವಣಿಗೆ ಮಾಡಬಲ್ಲವರು ಲಕ್ಷದಲ್ಲಿ ಒಬ್ಬಿಬ್ಬರಷ್ಟೆ – ಎಂಬುದು ಲೋಕಾನುಭವ. ಪಾಂಡಿತ್ಯವೂ ಲೇಖನಕಲೆಯೂ ಮೇಳನಗೊಳ್ಳುವುದು ಅತ್ಯಂತ ವಿರಳ. ‘ಓದು ಬರಹದ ಶತ್ರು’ ಎಂಬ ತೀ.ನಂ.ಶ್ರೀ. ಅವರ ಮಾತೂ ಪ್ರಸಿದ್ಧವೇ ಇದೆ. ಪಾಂಡಿತ್ಯವು ಉನ್ನತಿಗೆ ಏರಿದಷ್ಟೂ ಬರವಣಿಗೆಯಲ್ಲೂ ಲೌಕಿಕವ್ಯವಹಾರಗಳಲ್ಲಿಯೂ ಆಸಕ್ತಿಯು ಕ್ಷೀಣಿಸುತ್ತಹೋಗುವುದೂ ಸ್ವಾಭಾವಿಕ.
ರಾಮಚಂದ್ರರಾಯರಿಗಿದ್ದ ಒಂದು ಅಸಾಮಾನ್ಯ ಆನುಕೂಲ್ಯವೆಂದರೆ ಅವರ ವಿದ್ವತ್ತೆಯ ಬಹುಮುಖತೆ. ಅವರ ಪಾಂಡಿತ್ಯದ ಆಳ, ಎತ್ತರ, ಅಗಲ-ಎಲ್ಲವೂ ಅಸಾಧಾರಣವೇ. ಯಾವುದೋ ಒಂದೋ ಎರಡೋ ಶಾಸ್ತ್ರಗಳಲ್ಲಿ ಪ್ರಭುತ್ವವನ್ನು ಸಾಧಿಸಿರುವವರು ವಿರಳವಾಗಿಯಾದರೂ ದೊರೆತಾರು. ಆದರೆ ರಾಮಚಂದ್ರರಾಯರಂತೆ ಹಲವಾರು ಶಾಸ್ತ್ರಗಳನ್ನು ಅವಗತ ಮಾಡಿಕೊಂಡವರು ತೀರಾ ವಿರಳ. ಅವರ ಪ್ರತಿಭೆಯ ಈ ಬೀಸಿನಿಂದಾಗಿ ಅವರ ಬರಹದ ಗುಣವಂತಿಕೆ ಪ್ರಜ್ವಲವಾಯಿತು. ಕೇವಲ ಒಂದು ಶಾಸ್ತ್ರದ ಪ್ರಾಕಾರದೊಳಗಷ್ಟೆ ಸಂಚಾರ ಮಾಡುವುದರಿಂದ ಲಭಿಸಲಾರದ ವೈಶಾಲ್ಯವೂ ಪರಿಜ್ಞಾನಸೂಕ್ಷ್ಮತೆಯೂ ಸೇರ್ಪಡೆಗೊಂಡು ಅವರ ಬರಹವನ್ನು ವಿಶಿಷ್ಟವಾಗಿಸಿತ್ತು. ಎರಡನೆಯದಾಗಿ ಪ್ರತಿಭೆಯ ಔನ್ನತ್ಯದ ಹಿನ್ನೆಲೆಯಿಂದಾಗಿ ಅವರು ಹತ್ತಾರು ವಿಷಯಗಳ ಬಗೆಗೆ ಅಧಿಕಾರಯುತವಾಗಿ ಬರೆಯಲು ಸಮರ್ಥರಾದರು.
ಉದ್ಬೋಧನಶ್ರದ್ಧೆ
ಅವರ ಮನೋಬುದ್ಧಿಗಳಷ್ಟೂ ಶಾಸ್ತ್ರಸಂಸ್ಕಾರದಿಂದ ರೂಪಗೊಂಡಿದ್ದವು. ಹೀಗೆ ಅತ್ಯಂತ ಪರಿಷ್ಕಾರಕ್ಕೆ ಒಳಪಡದ ಮಾತಾಗಲಿ ಬರವಣಿಗೆಯಾಗಲಿ ಅವರಿಗೆ ಸಾಧ್ಯವೇ ಇರಲಿಲ್ಲ. ಅವರಷ್ಟು ವಿಪುಲವಾಗಿ ಬರೆದವರು ಬೇರೆ ಇಲ್ಲ. ಅವರಷ್ಟು ಪರಿಷ್ಕಾರವಾಗಿ ಮತ್ತು ಸಾಮಗ್ರ್ಯದೃಷ್ಟಿಯಿಂದ ಬರೆದವರೂ ವಿರಳ. ಹೀಗೆ ಅವರ ಬರಹದ ಗಾತ್ರಬಾಹುಳ್ಯ, ಗುಣವತ್ತತೆ – ಎರಡೂ ಅಸಾಧಾರಣವೇ. ಎಲ್ಲ ದೃಷ್ಟಿಗಳಿಂದಲೂ ವಿಸ್ಮಯಾವಹವಾದ ಸಾರಸ್ವತಸಂಪತ್ತನ್ನು ಅವರು ಲೋಕಕ್ಕೆ ನೀಡಿದ್ದಾರೆ. ಅವರು ಪ್ರೀತಿಯಿಂದ ನಡೆಸಿದ ಈ ಆರಾಧನೆಗೆ ನಾವು ಹೇಗೆ ತಾನೆ ಕೃತಜ್ಞತೆ ಸಲ್ಲಿಸಲು ಆದೀತು? ಇತಿಹಾಸದಲ್ಲಿ ತುಂಬಾ ವಿರಳವಾಗಿಯಷ್ಟೆ ಇಂತಹ ದೈತ್ಯಪ್ರತಿಭೆ ಒಮ್ಮೊಮ್ಮೆ ಹಾದುಹೋಗುತ್ತದೆ. ಅಂತಹ ಅದ್ಭುತ ನಮ್ಮ ಕಾಲದಲ್ಲಿ, ನಮ್ಮ ನಡುವೆಯೇ, ನಮ್ಮ ಕಣ್ಣೆದುರಿಗೇ ನಡೆದದ್ದು ನಮ್ಮೆಲ್ಲರ ಸುಕೃತ.
ಸಾಂಪ್ರದಾಯಿಕ ಹಾಗೂ ಅದ್ಯತನೀಯ ಅಧ್ಯಯನದ ಗಟ್ಟಿಯಾದ ಹಿನ್ನೆಲೆ ಅವರಿಗೆ ಇದ್ದದ್ದು ಹೌದಾದರೂ, ಪ್ರವಚನಪಟುತೆಯೂ ಲೇಖನಕೌಶಲವೂ ಅವರು ಕಷ್ಟಪಟ್ಟು ಕರಗತ ಮಾಡಿಕೊಂಡಂಥವು. ತಾವು ಶ್ರಮಪೂರ್ವಕ ಗಳಿಸಿಕೊಂಡಿದ್ದ ಜ್ಞಾನದ ಪ್ರಯೋಜನ ತಮ್ಮ ಸಮಾಜಕ್ಕೆ ವಿನಿಯೋಗವಾಗಬೇಕು – ಎಂಬ ಶ್ರದ್ಧೆ ಅವರ ಅಂತರಂಗವನ್ನು ತುಂಬಿಕೊಂಡು ಅವರನ್ನು ಇಂತಹ ಕಾಯಕಕ್ಕೆ ಸಜ್ಜುಗೊಳಿಸಿತ್ತು. ಹನಿಹನಿಯಾಗಿ ಆರಂಭವಾದ ಬರವಣಿಗೆ ಕೆಲವೇ ವರ್ಷಗಳಲ್ಲಿ ಪ್ರವಾಹವೇ ಆಯಿತು.
ಸಾವಿರಾರು ವರ್ಷಗಳ ಅವಧಿಯಲ್ಲಿ ಬೆಳೆದುಬಂದಿರುವ ಜ್ಞಾನರಾಶಿಯನ್ನು ಅದ್ಯತನೀಯ ನುಡಿಗಟ್ಟಿನಲ್ಲಿ ಈಗಿನ ಪೀಳಿಗೆಗೆ ಪರಿಚಯಿಸಬೇಕಾದುದು ಅತ್ಯಂತ ಅವಶ್ಯವಿದೆ. ಈ ಪರಿಚರ್ಯೆಯನ್ನು ರಾಮಚಂದ್ರರಾಯರಷ್ಟು ಅಗಾಧಪ್ರಮಾಣದಲ್ಲಿ ಮಾಡಿರುವವರು ನಮ್ಮ ತಲೆಮಾರಿನಲ್ಲಿ ಇನ್ನೊಬ್ಬರಿರಲಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. “ಇದನ್ನೆಲ್ಲ ನಾನೇ ಮಾಡಿದೆನೆ? – ಎಂದು ನನಗೇ ಕೆಲವು ಸಲ ಅನ್ನಿಸಿಬಿಡುತ್ತದೆ!” ಎಂದು ಸ್ವಯಂ ರಾಮಚಂದ್ರರಾಯರೇ ಕೆಲವು ಸಲ ಉದ್ಗರಿಸುತ್ತಿದ್ದುದುಂಟು.
ಸಾಂದರ್ಭಿಕವಾಗಿ ಇನ್ನೊಂದು ಮಾತನ್ನು ಹೇಳಬೇಕು. ಸಾಮಾನ್ಯವಾಗಿ ಶಾಸ್ತ್ರಾಧ್ಯಯನ-ಅಧ್ಯಾಪನಗಳಲ್ಲಿ ನಿರತರಾದವರು ಬೇರೆ ಯಾವುದೇ ವಿಕ್ಷೇಪಗಳನ್ನು – ಡಿಸ್ಟ್ರ್ಯಾಕ್ಷನ್ಸ್ – ಇಷ್ಟಪಡುವುದಿಲ್ಲ. ಅವರ ಅಂತರಂಗವಷ್ಟನ್ನೂ ಶಾಸ್ತ್ರಪ್ರಪಂಚ ದಟ್ಟವಾಗಿ ಆವರಿಸಿರುತ್ತದೆ. ಇಪ್ಪತ್ತನಾಲ್ಕು ಗಂಟೆಯೂ ಅದೇ ಆವರಣದಲ್ಲಿ ಇರುತ್ತಾರೆ. ಅದರಿಂದ ಹೊರಕ್ಕೆ ಬರಲು ಇಚ್ಛಿಸುವುದಿಲ್ಲ. ಆದರೆ ರಾಮಚಂದ್ರರಾಯರು ಇದಕ್ಕೆ ಅಪವಾದ. ಅತ್ಯಂತ ಗಹನವಾದ ವಿಷಯದ ಗ್ರಂಥರಚನೆಯಲ್ಲಿ ಮುಳುಗಿದ್ದಾಗಲೂ ಅವರನ್ನು ಯಾರಾದರೂ ಯಾವುದೋ ವಿಚಾರಗೋಷ್ಠಿಗೋ ಸಮ್ಮೇಳನಕ್ಕೋ ಬರುವಂತೆ ಆಮಂತ್ರಿಸಿದರೆ ಅವರು ಎಂದೂ ‘ನನಗೆ ಪುರಸತ್ತು ಇಲ್ಲ’ ಎಂದು ಹೇಳಿದವರಲ್ಲ. ಇದಕ್ಕೆ ಒಂದು ಕಾರಣ ಅವರ ಸ್ವಭಾವಸಹಜ ಸಜ್ಜನಿಕೆಯಾದರೆ, ಇನ್ನೊಂದು ಕಾರಣ ‘ನಾನು ಯಾವ ಸಮಾಜದ ಭಾಗವಾಗಿದ್ದೇನೋ ಅದಕ್ಕೆ ಸಾಧ್ಯವಾದಷ್ಟು ರೀತಿಗಳಲ್ಲಿ ನನ್ನಿಂದಾದ ಸೇವೆಯನ್ನು ಸಲ್ಲಿಸುವುದು ನನ್ನ ಮೂಲಭೂತ ಕರ್ತವ್ಯ’ ಎಂಬ ಸಂತತ ಪ್ರಜ್ಞೆ. ಅವರ ಈ ಸ್ನೇಹಪ್ರವೃತ್ತಿಗಾಗಿ ಸಮಾಜದಿಂದ ಅವರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಬೇಕಾಗಿದೆ.
ರಾಮಚಂದ್ರರಾಯರು ೧೯೯೦ರ ದಶಕದಿಂದಾಚೆಗೆ ಆದರಣೀಯ ಜ್ಯೌತಿಷತಜ್ಞ ದೈವಜ್ಞ ಸೋಮಯಾಜಿಯವರಿಂದ ಸಂಚಾಲಿತವಾದ ಕಲ್ಪತರು ರಿಸರ್ಚ್ ಅಕಾಡೆಮಿಯ ಮೂಲಕ ಹೊರತಂದ ಗ್ರಂಥಸರಣಿಗಳು ರಾಯರ ಸಾಧನೆಗೆ ಶಿಖರಪ್ರಾಯವಾದವು ಮಾತ್ರವಲ್ಲ, ಸಾರಸ್ವತಲೋಕಕ್ಕೆ ನಮ್ಮ ಕಾಲದ ಒಂದು ಪ್ರಮುಖ ಕೊಡುಗೆಯಾಗಿವೆ. ಆಗಮಕೋಶ, ಪ್ರತಿಮಾಕೋಶ, ಋಗ್ವೇದದರ್ಶನ – ಈ ಮೂರು ಗ್ರಂಥಶ್ರೇಣಿಗಳು ಅಗಾಧವಾದ ವೇದವಾಙ್ಮಯದ, ಆಗಮಗಳ ಮತ್ತು ಸ್ಥಾಪತ್ಯಾದಿ ಪರಂಪರೆಗಳ ಸಮಗ್ರವೂ ಪ್ರೌಢವೂ ಆದ ಸಮೀಕ್ಷೆಯನ್ನು ಒದಗಿಸಿವೆ. ಈ ಸಾಧನೆಯ ಗಾತ್ರವನ್ನು ನೆನೆದರೆಯೇ ವಿಸ್ಮಯಾದ್ಭುತದ ಅನುಭವವಾಗುತ್ತದೆ. ವಿಶ್ವಕೋಶರೀತಿಯ ಇಂತಹ ದೈತ್ಯಕಾರ್ಯವನ್ನು ನಿರ್ವಹಿಸಬಲ್ಲ ಸಾಮರ್ಥ್ಯವೂ ಬಹುಶಾಸ್ತ್ರಾಧಿಕಾರವೂ ಇದ್ದವರು ಇನ್ನೊಬ್ಬರಿಲಿಲ್ಲ ಎಂದರೆ ಅದು ಉತ್ಪ್ರೇಕ್ಷೆಯು ಮಾತಾಗುವುದಿಲ್ಲ.
ರಾಮಚಂದ್ರರಾಯರು ಆರ್ಷಸಂಸ್ಕೃತಿಯ ಉಚ್ಚಕೋಟಿಯ ಪ್ರತಿನಿಧಿಯಾಗಿದ್ದರೆಂಬುದನ್ನು ಸೂಚಿಸುವ ಅವರ ಒಂದು ಗುಣಲಕ್ಷಣ ಅವರು ತಮ್ಮ ಗುರುವರ್ಗದವರಲ್ಲಿಯೂ ಅವರು ಹಿರಿಯರೆಂದು ಗೌರವಿಸಿದ್ದ ಡಿ.ವಿ.ಜಿ., ರಾಳ್ಳಪಲ್ಲಿ ಅನಂತಕೃಷ್ಣ ಶರ್ಮಾ ಮೊದಲಾದವರಲ್ಲಿಯೂ ಅವರ ಜೀವನದುದ್ದಕ್ಕೂ ಉಳಿಸಿಕೊಂಡಿದ್ದ ನಿತಾಂತ ಭಕ್ತಿಭಾವ. ವೇದಿಕೆಗಳಲ್ಲಿ ಮಾತ್ರವಲ್ಲ; ಖಾಸಗಿ ಮಾತುಕತೆಯಲ್ಲಿಯೂ ಆ ಹಿರಿಯರ ಪ್ರಸ್ತಾವ ಬಂದಾಗ ರಾಯರ ಮುಖವನ್ನು ಪ್ರಣತಭಾವ ಆವರಿಸಿಬಿಡುತ್ತಿತ್ತು. ರಾಯರ ಆ ವಿನೀತ ಪ್ರವೃತ್ತಿಯನ್ನು ನೆನೆಯುವಾಗ ನಮ್ಮ ಮನಸ್ಸು ಈಗಲೂ ಆರ್ದ್ರವಾಗುತ್ತದೆ. ರಾಯರ ಮೇರುಸದೃಶ ಪಾಂಡಿತ್ಯಕ್ಕೆ ದಾರಿಮಾಡಿದವು ಅವರಲ್ಲಿ ರಕ್ತಗತವಾಗಿದ್ದ ಉದಾತ್ತ ಜೀವನಮೌಲ್ಯಗಳೇ ಎನಿಸುತ್ತದೆ.
***
ಕಲಾಭಿಜ್ಞತೆ
ಸಂಗೀತ, ಚಿತ್ರಕಲೆ, ಶಿಲ್ಪಕಲೆ, ಸ್ಥಾಪತ್ಯ, ಆಗಮಶಾಸ್ತ್ರ – ಈ ವಿಷಯಗಳನ್ನು ಕುರಿತು ಸಮರ್ಥವಾಗಿಯೂ ಶಾಸ್ತ್ರಶುದ್ಧವಾಗಿಯೂ ಕನ್ನಡದಲ್ಲಿ ಬರೆಯಬಲ್ಲವರು ಹಿಂದೆ ಹೆಚ್ಚು ಮಂದಿ ಇರಲಿಲ್ಲ, ಈಗಲೂ ಹೆಚ್ಚು ಮಂದಿ ಇಲ್ಲ. ಈ ಬಹು-ಆಯಾಮ ಕ್ಷೇತ್ರದಲ್ಲಿ ರಾಮಚಂದ್ರರಾಯರಷ್ಟು ವಿಶಾಲವಾಗಿ ಕೃಷಿ ಮಾಡಿದವರು ಬಹುಶಃ ಬೇರೆ ಇರಲಿಲ್ಲ. ರಾಮಚಂದ್ರರಾಯರು ಸ್ವತಃ ವೀಣಾವಾದಕರೂ ಚಿತ್ರಕಾರರೂ ಶಿಲ್ಪಕಾರರೂ ಆಗಿದ್ದುದು ಸುವಿದಿತವೇ ಆಗಿದೆ. ಈ ಹಲವು ಕ್ಷೇತ್ರಗಳಲ್ಲಿ ಅಪೂರ್ವ ಒಳನೋಟಗಳನ್ನೂ ಅವರು ಬೆಳೆಸಿಕೊಂಡಿದ್ದರು. ಅವರು ರಚಿಸಿದ ಚಿತ್ರಗಳು ಮತ್ತು ಶಿಲ್ಪಗಳೇ ಒಂದು ದೊಡ್ಡ ಪ್ರದರ್ಶನಕ್ಕೆ ಆಗುವಷ್ಟು ಇದ್ದವು. ಅವರು ಕನ್ನಡದಲ್ಲಿ ಬರೆಯತೊಡಗಿದ ಆರಂಭಕಾಲದಲ್ಲಿಯೇ ‘ನಮ್ಮ ಸಂಗೀತ ಮತ್ತು ವಾಗ್ಗೇಯಕಾರರು’ ಪರಿಚಯ ಪುಸ್ತಕವನ್ನು ಬರೆದರು. ಆಮೇಲಿನ ವರ್ಷಗಳಲ್ಲಿ ‘ಮೂರ್ತಿಶಿಲ್ಪ: ನೆಲೆ-ಹಿನ್ನೆಲೆ’, ‘ಭಾರತದ ದೇವಾಲಯ’, ‘ಸಂಗೀತ: ಇತಿಹಾಸ-ಪರಂಪರೆ’, ‘ಸಂಪ್ರದಾಯ: ಶಿಲ್ಪಕಲೆ – ಚಿತ್ರಕಲೆ’ ‘ಗಣಪತಿಯ ರೂಪಗಳು’ ಮೊದಲಾದ ನಾಲ್ಕಾರು ಸ್ಮರಣೀಯ ಕೃತಿಗಳು ಅವರಿಂದ ಹೊರಬಂದವು. ರಾಮಚಂದ್ರರಾಯರ ಕೃತಿಗಳಲ್ಲಿ ವಿವಿಧ ಕಲೆಗಳಿಗೆ ಸಂಬAಧಪಟ್ಟವುಗಳದೇ ಗಣನೀಯ ಭಾಗವಾಗಿದೆ ಎನ್ನಬಹುದು.
ಬೆಂಗಳೂರು ವಿಶ್ವವಿದ್ಯಾಲಯದ ಪ್ರಕಟಣ ವಿಭಾಗಕ್ಕಾಗಿ ೧೯೭೫ರಲ್ಲಿ ಅವರು ಬರೆದ ದೊಡ್ಡ ಗಾತ್ರದ (ಕ್ರೌನ್ ಚತುರ್ಥ) ೩೫೦ ಪುಟಗಳ ‘ಮೂರ್ತಿಶಿಲ್ಪ: ನೆಲೆ-ಹಿನ್ನೆಲೆ’; ಅವರ ಪ್ರಧಾನ ಸಂಪಾದಕತ್ವದಲ್ಲಿ ೧೯೮೦ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ‘ಕರ್ನಾಟಕದ ಕಲೆಗಳು’ ಸರಣಿಗೆ ಪ್ರವೇಶಿಕೆಯಾಗಿ ಮೊದಲ ಸಂಪುಟಕ್ಕೆ ಅವರು ಬರೆದಿರುವ ದೊಡ್ಡ ಗಾತ್ರದ ೨೦೦ ಪುಟಗಳಷ್ಟರ ‘ಭೂಮಿಕೆ’; – ಇವು ಈ ವಿಷಯಗಳನ್ನು ಕುರಿತ ಸಮಗ್ರ ಆಧಿಕಾರಿಕ ಬರಹಗಳಾಗಿವೆ, ಈ ಕ್ಷೇತ್ರಗಳ ಅಭ್ಯಾಸಿಗಳಿಗೆ ಆಧಾರಪಾಠ್ಯಗ್ರಂಥಗಳೆನಿಸಲು ಅರ್ಹವಾಗಿವೆ.
ದೇವಾಲಯ ವಿನ್ಯಾಸದ ಸಾಂಕೇತಿಕತೆಯನ್ನು ಹೀಗೆ ಸ್ಫುಟೀಕರಿಸಿದ್ದಾರೆ:
“ಬುಡಮೇಲಾದ ಮರದ ರೂಪಕವನ್ನು ಉಪನಿಷತ್ತುಗಳು ಬಳಸಿಕೊಂಡಾಗ ಅದರ ತಾತ್ಪರ್ಯವೇನೆಂದರೆ ಜಡ-ಚೇತನಗಳ ಈ ಪ್ರಪಂಚದ ಬೇರುಗಳು ಬ್ರಹ್ಮವಸ್ತುವಿನ ಅವ್ಯಕ್ತ ನೆಲೆಯಲ್ಲಿ ಇವೆಯೆಂಬುದು. ಇಲ್ಲಿ ಪ್ರಕೃತನಾದವನು ಮನುಷ್ಯ; ಅಜ್ಞಾನ, ಮೋಹ, ಆಸೆ, ಕರ್ಮಗಳ ಜಾಲದಲ್ಲಿ ಸಿಕ್ಕಿಕೊಂಡವನು. ಅವನ ಬೇರುಗಳ ಭೌತಿಕಶರೀರದಾಚೆ ನೆತ್ತಿಯ ಮೇಲ್ಭಾಗದಲ್ಲಿರುವ ಸಹಸ್ರಾರಚಕ್ರದಲ್ಲಿ ಅಡಗಿವೆ. ಅವನು ಈ ಬುನಾದಿಯಿಂದ ದೂರ ಸರಿದು ಪ್ರಪಂಚದಲ್ಲೆಲ್ಲ ತನ್ನ ವ್ಯವಹಾರವನ್ನು ರೆಂಬೆಕೊಂಬೆಗಳಂತೆ ಹರಡಿಕೊಳ್ಳುತ್ತಾನೆ. ಅವನ ಕರ್ತವ್ಯವು ತನ್ನ ಬೇರುಗಳನ್ನು ತಾನು ಅರಿತುಕೊಳ್ಳುವುದು; ತನ್ನ ಇರವಿಗೆ ಅದನ್ನೇ ಆಸರೆಯಾಗಿ ಇರಿಸಿಕೊಳ್ಳುವುದು. ಈ ಪುರುಷಾರ್ಥದ ಸಾಧನೆಯೆಂದರೆ ಮೇಲೆದ್ದು ಹಾಯುವುದು, ಉತ್ಥಿತಿ.”
(‘ಭಾರತದ ದೇವಾಲಯ: ನೆಲೆ, ಹಿನ್ನೆಲೆ’)
ಸಂಗೀತ ಮತ್ತು ಕಲೆಗಳ ಕ್ಷೇತ್ರದ ಹಲವರು ಅಪೂರ್ವ ಸಾಧಕರ ಜೀವನಪರಿಚಯ ಪುಸ್ತಿಕೆಗಳನ್ನೂ ರಾಯರು ನೀಡಿದ್ದಾರೆ. ‘ಕೆ. ವೆಂಕಟಪ್ಪ’, ‘ಸಂಗೀತರತ್ನ ಮೈಸೂರು ಟಿ. ಚೌಡಯ್ಯ’, ‘ಪುರುಷಸರಸ್ವತಿ ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ’, ‘ಸಂಗೀತಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ’ – ಇವು ಹೃದ್ಯವಾದ, ಗಮನಿಸಬೇಕಾದ ಬರಹಗಳು.
ಸಾಮಾನ್ಯವಾಗಿ ಹೆಚ್ಚಿನವರು ಗಮನಿಸದಿರುವ ಆದರೆ ಅತ್ಯಂತ ಸಂಗತವೂ ಮುಖ್ಯವೂ ಆದ ಒಂದು ಅಂಶಕ್ಕೆ ರಾಮಚಂದ್ರರಾಯರು ಸೆಳೆದಿದ್ದಾರೆ:
“ಕಲೆ, ಸಾಹಿತ್ಯ, ನಾಟಕ, ವಾಸ್ತುಶಿಲ್ಪ, ಮನೋರಂಜನೆ, ಕ್ರೀಡೆ, ಜಾನಪದ – ಎಲ್ಲವೂ ಆಗಮಪರಂಪರೆಯಿಂದಲೇ ಉಗಮವಾಗಿರುವುದು. ಆಗಮತತ್ತ್ವವೇ ಭಾರತೀಯ ಸಂಸ್ಕೃತಿಗೆ ಸಮನ್ವಯದ ಪರಿಮಳವನ್ನು ಕೊಟ್ಟಿರುವುದು. ಅದು ಅನೇಕ ಸಿದ್ಧರಿಗೆ, ಪ್ರವೀಣರಿಗೆ, ಸಾಧುಗಳಿಗೆ ಸ್ಫೂರ್ತಿಯಿತ್ತಿದೆ.”
(‘ಭಾರತೀಯ ಸಂಸ್ಕೃತಿಯ ತಿರುಳು’)
ದಾಸಸಾಹಿತ್ಯ ಅವಲೋಕನ
ರಾಮಚಂದ್ರರಾಯರ ದಾಸಸಾಹಿತ್ಯ ಅವಲೋಕನ-ಸಂಪಾದನ ಕೃತಿಗಳು ಕರ್ನಾಟಕ ಸಂಸ್ಕೃತಿಗೇ ವಿಶಿಷ್ಟವಾದ ಈ ವಾಙ್ಮಯವನ್ನು ವ್ಯವಸ್ಥಿತರೀತಿಯಲ್ಲಿ ಲಭ್ಯವಾಗಿಸಿವೆ. ಕಿರಿವಯಸ್ಸಿನವರನ್ನು ಉದ್ದೇಶಿಸಿದ ಅವರ ‘ಪುರಂದರದಾಸರು’, ‘ಕನಕದಾಸರು’ ಸಂಕ್ಷಿಪ್ತ ಜೀವನಕಥನಗಳು ೧೯೭೦ರ ಸುಮಾರಿಗೇ ಪ್ರಕಟವಾಗಿದ್ದವು. ‘ವಿಜಯನಗರದ ಈಚಿನ ದಾಸಸಾಹಿತ್ಯ’ ಕುರಿತ ಅವರ ಪ್ರೌಢ ಶೋಧಪ್ರಬಂಧವು ೧೯೮೭ರಲ್ಲಿ ಪ್ರಕಟಗೊಂಡಿತು. ಆ ಪ್ರಬಂಧವು ಕನ್ನಡದಲ್ಲಿ ಅದಕ್ಕೆ ಹಿಂದಿನ ಅರವತ್ತು ವರ್ಷಗಳಲ್ಲಿ – ಎಂದರೆ ೨೦ನೇ ಶತಮಾನದ ಮಧ್ಯದ ದಶಕಗಳಲ್ಲಿ – ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಶ್ರಮಿಸಿದ್ದವರ ಸ್ಮರಣೆಯನ್ನೂ ಒಳಗೊಂಡಿರುವುದು ವಿಶೇಷವಾಗಿ ಗಮನಿಸಬೇಕಾದದ್ದು. ಅವರ ಪ್ರಧಾನ ಸಂಪಾದಕತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ೧೯೮೦ರ ದಶಕದಲ್ಲಿ ಪ್ರಕಟಗೊಂಡ ‘ಪುರಂದರ ಸಾಹಿತ್ಯ ದರ್ಶನ’ ನಾಲ್ಕು ಸಂಪುಟಗಳ ಕೃತಿಶ್ರೇಣಿಯಂತೂ ವಿಶಾಲ ಜನಾದರಣೆ ಪಡೆದುಕೊಂಡಿದೆ. (೧) ಜೀವನದರ್ಶನ, (೨) ಅಧ್ಯಾತ್ಮದರ್ಶನ, (೩) ಸಮಾಜದರ್ಶನ, (೪) ಕೀರ್ತನದರ್ಶನ; – ಎಂಬ ನಾಲ್ಕು ವಿಭಾಗಗಳಲ್ಲಿ ವಿಂಗಡಣೆಗೊಂಡಿರುವ ಪುರಂದರದಾಸ ವಾಙ್ಮಯ ಇಷ್ಟು ಅಚ್ಚುಕಟ್ಟಾಗಿ, ಆಕರ್ಷಕವಾಗಿ, ಸಹಾಯಕ ಟಿಪ್ಪಣಿಗಳ ಸಮೇತ ಬೇರೆ ಯಾವ ಆವೃತ್ತಿಯಲ್ಲಿಯೂ ದೊರೆತಿಲ್ಲ. ಮೊದಲ ಸಂಪುಟಕ್ಕೆ ರಾಮಚಂದ್ರರಾಯರು ನೀಡಿರುವ ೫೫ ಪುಟಗಳಷ್ಟು ವಿಸ್ತಾರವಾದ ಪ್ರಸ್ತಾವನೆ ಪುರಂದರದಾಸರ ಜೀವನವನ್ನೂ ಸಾಂದರ್ಭಿಕತೆಯನ್ನೂ ರಚನೆಗಳ ಸ್ವರೂಪವನ್ನೂ ಇತಿಹಾಸ ಶೋಧದೃಷ್ಟಿಗೆ ಕಾಣುವ ಹಲವಾರು ಸಂದಿಗ್ಧಾಂಶಗಳನ್ನೂ ದಾಖಲೆ ಮಾಡಿದೆ. ಅತಿವೈಭವೀಕರಣ, ಅನುದಾರ ಅವಗಣನೆ – ಎರಡರಿಂದಲೂ ದೂರ ಉಳಿದು ಸಹೃದಯ ಸಮೀಕ್ಷೆಯನ್ನು ನೀಡಿರುವುದು ರಾಮಚಂದ್ರರಾಯರ ಔನ್ನತ್ಯಕ್ಕೆ ಸಲ್ಲುವಂತಿದೆ.
ದಾಸವಾಙ್ಮಯದ ಆದರಣೀಯತೆಯನ್ನು ಕುರಿತ ರಾಮಚಂದ್ರರಾಯರ ಈ ಮಾತುಗಳ ಸ್ಮರಣೀಯವಾಗಿವೆ:
“ಹರಿದಾಸರು ಕನ್ನಡವನ್ನು ಹಿಡಿದುದು ಇಲ್ಲಿ ಮುಖ್ಯವಾದುದು. ಭಾಗವತರೂ ಪುರಾಣಿಕರೂ ಮೂಲ ಸಂಸ್ಕೃತವನ್ನೇ ಹೇಳಿ ಕನ್ನಡದಲ್ಲಿ ಅರ್ಥವನ್ನು ವಿವರಿಸುತ್ತಿದ್ದರು.
ಪಂಡಿತರಂತೂ ಸಂಸ್ಕೃತದಲ್ಲಿಯೇ ವಾಕ್ಯಾರ್ಥಗಳನ್ನೂ ವ್ಯಾಖ್ಯಾನಗಳನ್ನೂ ನಡೆಸುತ್ತಿದ್ದರು. ಕನ್ನಡವು ಮಡಿಗೆ ಬಾರದು ಎನ್ನುವ ಹಟ ಅವರಲ್ಲಿತ್ತು. ಹರಿದಾಸರಲ್ಲಿ ಆದ್ಯರು ಸಂಸ್ಕೃತ ಪಂಡಿತರೇ ಆಗಿದ್ದರೂ ಜನಗಳಿಗೆ ತಿಳಿಯಹೇಳುವ ಕೆಲಸಕ್ಕೆ ಕನ್ನಡವನ್ನು ಧಾರಾಳವಾಗಿ ಬಳಸಿದರು.
ಕನ್ನಡದ ಪುಣ್ಯ, ಈ ಹಿರಿಯರ ಆದರ್ಶ ಸಫಲವಾಯಿತು; ಕನ್ನಡದಲ್ಲಿ ಹರಿದಾಸ ಸಾಹಿತ್ಯದ ಬೆಳೆ ಯಥೇಚ್ಛವಾಗಿ ಬಂದಿತು. ಪುರಂದರದಾಸರ ಕೈಯಿಂದ ಕನ್ನಡದ ಜಾಯಮಾನ ಪ್ರೌಢವಾಯಿತು; ಮುಂದೆ ಸಾರೋದ್ಧಾರವಾಗಿ ಬೆಳೆಯಿತು. ವೇದಾಂತದ ಪ್ರಮೇಯಗಳು, ಶಾಸ್ತ್ರಗ್ರಂಥಗಳ ಸಾರ, ಆಚಾರ್ಯರ ಬೋಧೆ – ಇವೆಲ್ಲ ತಿಳಿಗನ್ನಡದಲ್ಲಿ ಸಾಮಾನ್ಯಮನುಷ್ಯರಿಗೆ ಎಟಕುವಂತೆ ಮಾಡಿದವರು ಹರಿದಾಸರು. ಮೇಲುಮಟ್ಟದ ಸಂಸ್ಕೃತಿ ಕೆಳಗಿನ ಮಟ್ಟಗಳಲ್ಲಿಯೂ ಹರಿಯುವಂತೆ ಮಾಡಲು ಅವರು ಶ್ರಮಿಸಿದರು.
“ಒಂದು ಕಾಲದಲ್ಲಿ ನಮ್ಮ ನಾಡಿನ ಹಿರಿಯರು ಬೆಳೆಸಿದ ಹರಿದಾಸ ಪಂಥ, ಅದರಿಂದ ಹೊರಹೊಮ್ಮಿದ ಅಪೂರ್ವಸಾಹಿತ್ಯ – ಎರಡೂ ನಾಡಿಗೆ ಬಲವನ್ನೂ ಕಳೆಯನ್ನೂ ಒದಗಿಸಿದುವು ಎನ್ನುವುದು ಹೆಮ್ಮೆಯನ್ನೂ ಸಮಾಧಾನವನ್ನೂ ತರುವ ನೆನಪು.”
(‘ವಿಜಯನಗರದ ಈಚಿನ ದಾಸಸಾಹಿತ್ಯ’)
* * *
ದಾರ್ಶನಿಕ ಪರಂಪರೆಯ ಪ್ರತಿಪಾದನೆ
ನಮ್ಮ ಸಾಂಸ್ಕೃತಿಕ ಮತ್ತು ದಾರ್ಶನಿಕ ಪರಂಪರೆಯ ಸ್ಫುಟೀಕರಣದ ಶ್ರೇಷ್ಠ ಕೃತಿಗಳನ್ನು ರಾಮಚಂದ್ರರಾಯರು ನೀಡಿದ್ದಾರೆ. ನೆನೆಯಬೇಕಾದ ಸಂಗತಿಯೆಂದರೆ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ – ಈ ಮೂವರು ಆಚಾರ್ಯರ ದರ್ಶನಗಳನ್ನು ಕುರಿತೂ ರಾಯರು ಬೋಧಪ್ರದ ಕೃತಿಗಳನ್ನು ರಚಿಸಿದ್ದಾರೆ. ಅವಕ್ಕೆ ಪೂರಕವಾದ ರೀತಿಯ ‘ಶಂಕರವಾಣಿ’ ಮೊದಲಾದ ಸಂಕಲನಗಳನ್ನೂ ನೀಡಿದ್ದಾರೆ. ಅವರು ಮಾನಸಿಕ ಗುರುಗಳಾಗಿ ಆರಾಧಿಸುತ್ತಿದ್ದ ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳನ್ನು ಕುರಿತ ಅವರ ‘ಶಾರದಾಪೀಠದ ಮಾಣಿಕ್ಯ’ ಕೃತಿಯಂತೂ ಅತ್ಯಂತ ಆರ್ದ್ರವಾದ ಆತ್ಮನಿವೇದನೆಯೇ ಆಗಿದೆ.
ಒಂದು ದೃಷ್ಟಿಯಿಂದ ಅದಕ್ಕೆ ಪೂರಕವೆನ್ನಬಹುದಾದದ್ದು ಎಲ್ಲ ಸಂಪ್ರದಾಯಗಳಿಂದ ಅತೀತರಾದ ಮತ್ತು ‘ಉನ್ಮತ್ತ’ರಂತೆ ಕಾಣುವ, ಆತ್ಮಾನುಭವೈಕಸ್ಥಿತಿಯಲ್ಲಿ ರಮಿಸುವ ‘ಅವಧೂತ’ರ ಚರ್ಯೆಯನ್ನು ಕುರಿತ ಪರಿಚಯಗ್ರಂಥ. ಅವಧೂತತ್ವಕ್ಕೇ ವಿಶಿಷ್ಟವಾದ ‘ಸಾಕ್ಷಿಭಾವ’ ಕುರಿತು ರಾಯರು ನೀಡಿರುವ ನಿರೂಪಣೆ ಮನನೀಯವಾಗಿದೆ.
ಅವರ ಒಂದು ಪ್ರಮುಖ ಬೋಧನಕ್ಷೇತ್ರವಾಗಿದ್ದ ಮನೋವಿಜ್ಞಾನ, ಆಯುರ್ವೇದ ಕುರಿತ ಅವರ ಬರಹಗಳೂ ವಿಪುಲವಾಗಿವೆ. ಹಲವಾರು ಆಯುರ್ವೇದ ಪರಿಚಯ ಪುಸ್ತಿಕೆಗಳಲ್ಲದೆ ‘ನಾಡೀ ವಿಜ್ಞಾನ’, ‘ಆತ್ರೇಯವೆಂಕಟೇಶಕೃತ ವೈದ್ಯಹಿತೋಪದೇಶ’, ‘ಪರಮಾನಸಶಾಸ್ತ್ರ’, ‘ಅತೀಂದ್ರಿಯ ಅನುಭವ’ ಇತ್ಯಾದಿ ಪೂರಕ ಸಾಹಿತ್ಯವನ್ನೂ ನೀಡಿದ್ದಾರೆ.
ತಮ್ಮ ಒಂದು ಪ್ರಮುಖ ಆಸಕ್ತಿಕ್ಷೇತ್ರವಾಗಿದ್ದ ಬೌದ್ಧಧರ್ಮ, ಜೈನಧರ್ಮಗಳಿಗೆ ಸಂಬಂಧಿಸಿದಂತೆ ಹಲವು ಉತ್ಕೃಷ್ಟಕೃತಿಗಳನ್ನು ರಾಯರು ನೀಡಿದ್ದಾರೆ: ‘ಟಿಬೆಟ್ಟಿನ ಯೋಗಿ ಮಿಲರೇಪ’, ‘ಬೋಧಿಯ ಬೆಳಕಿನಲ್ಲಿ’, ‘ವರ್ಧಮಾನ ಮಹಾವೀರ’, ‘ವೈಶಾಖಪೂರ್ಣಿಮೆ ಸಂಬೋಧಿಯ ಸಂದರ್ಭ’ ಮೊದಲಾದವು.
ನಮ್ಮ ಪರಂಪರೆಯ ಉಜ್ಜ್ವಲ ಸಾಧಕರಾದ ಅಭಿನವಗುಪ್ತ, ಆನಂದಕುಮಾರಸ್ವಾಮಿ ಮೊದಲಾದವರ ವಾಙ್ಮಯದ ಪರಾಮರ್ಶನಾತ್ಮಕ ಪರಿಚಯಗಳನ್ನು ರಾಯರು ನೀಡಿರುವುದು ತುಂಬಾ ಉಪಕಾರಕವಾಗಿದೆ.
* * *
ರಾಮಚಂದ್ರರಾಯರು ಶ್ರುತಿ-ಸ್ಮೃತಿ-ಇತಿಹಾಸ ಪರಿಚಾಯಕಗಳಾದ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ. ಇವುಗಳ ಸಂಗತತೆಯನ್ನು ಅವರವೇ ಮಾತುಗಳಲ್ಲಿ ಸೂಚಿಸಬಹುದು:
“ಭಾರತೀಯ ಸಮಾಜದ ಇತಿಹಾಸ ಒಮ್ಮೆಲೇ ಸೂಚ್ಯವೂ ಹೊಂದಾಣಿಕೆಯದೂ ಆದ ವಿಶಾಲ ಸಾಂಸ್ಕೃತಿಕ ಚೌಕಟ್ಟನ್ನು ಒಳಗೊಂಡಿದೆ. ಅದನ್ನು ಇಡೀ ಸಮಾಜಕ್ಕೆ ಮಾತ್ರವಲ್ಲ, ಉಪಸಂಸ್ಕೃತಿಗಳಿಗೂ ಒದಗಿಸಲಾಗಿತ್ತು. ಈ ಚೌಕಟ್ಟು ಜೀವಗುಣವೃದ್ಧಿಕಾರಕವಾದ ಜೀವನಶೈಲಿಯನ್ನು ತೋರಿಸುವಂಥದು. ಅದು ವಿಶ್ವವ್ಯವಸ್ಥೆ ಹಾಗೂ ಜೀವರಾಶಿಗಳ ಮತ್ತು ಪರಿಸರವ್ಯವಸ್ಥೆಗಳ ಏಕತೆ (ಋತ) ಹಾಗೂ ಮಾನವನಾಗಿ ತನ್ನ ಕುಟುಂಬ, ತನ್ನ ಸಮುದಾಯ ಹಾಗೂ ಮಾನವಜೀವಿಯಾದ ತನ್ನ ಬಗ್ಗೆಯೆ ಇರುವ ಹೊಣೆಗಾರಿಕೆ (ಋಣ) – ಈ ಎರಡು ವಿಚಾರಗಳನ್ನು ಆಧರಿಸಿತ್ತು. ಈ ವಿಚಾರಧಾರೆಯಿಂದ ಹೊಮ್ಮಿದ್ದು ಸಾಮಾನ್ಯಜೀವನದ ಅಂತಿಮ ಮೌಲ್ಯಗಳ ಪರಿಕಲ್ಪನೆ. (‘ಪುರುಷಾರ್ಥ’ವೆಂದರೆ ‘ಬಾಳಿನ ಗುರಿ’.)”
– (‘ಭಾರತೀಯ ಸಂಸ್ಕೃತಿ: ತಿರುಳು ಮತ್ತು ಪರಂಪರೆ’)
ರಾಮಚಂದ್ರರಾಯರ ಕೃತಿಗಳಲ್ಲಿ ವ್ಯಾಖ್ಯಾನರೂಪವಾದವು ‘ಈಶಾವಾಸ್ಯ ಉಪನಿಷತ್ತು’, ‘ಶ್ರೀಸೂಕ್ತ’. ಸಂಕ್ಷಿಪ್ತ ಪರಾಮರ್ಶನಕೃತಿಗಳು: ‘ವಾಲ್ಮೀಕಿಯ ಪ್ರತಿಭೆ’, ‘ಚಿತ್ರರಾಮಾಯಣ’, ‘ಗೀತೆಗೊಂದು ಕೈಪಿಡಿ’ ಮೊದಲಾದವು.
ರಾಮಚಂದ್ರರಾಯರ ಪ್ರತಿಪಾದನೆಯ ವಿನೂತನತೆಯನ್ನೂ ಅಂತರ್ದೃಷ್ಟಿಯನ್ನೂ ಸೂಚಿಸಲು ಭಗವದ್ಗೀತೆಯ ವೈಶಿಷ್ಟö್ಯ ಕುರಿತ ಅವರ ವ್ಯಾಖ್ಯೆಯನ್ನು ಸ್ಮರಿಸಬಹುದು:
“ಗೀತೆಯು ಕರ್ಮ, ಯಜ್ಞ, ಯೋಗ, ಸಂನ್ಯಾಸ ಮೊದಲಾದ ಬಳಕೆಯ ಮಾತುಗಳಿಗೆಲ್ಲ ಹೊಸ ತಿರುವನ್ನು ನೀಡುತ್ತದೆ. ಹೊಸದೆಂದರೆ ಕರ್ಮಕಾಂಡದ ಚೌಕಟ್ಟಿಗೆ ಹೊಸತು ಅಷ್ಟೆ; ಇವೆಲ್ಲ ಸಾಂಪ್ರದಾಯಿಕವಾದ ವೈದಿಕ ಪ್ರತಿಮೆಗಳೇ. ಕಾಲದೇಶಾಧೀನವಾಗಿ ಸಂಕುಚಿತ ಅರ್ಥವನ್ನು ಪಡೆದುಕೊಂಡು ಸಾರ್ಥಕತೆಯನ್ನು ಕಳೆದುಕೊಂಡಿದ್ದ ಕಲ್ಪನೆಗಳಿಗೆ ಮತ್ತೆ ವಿಶಾಲವಾದ, ವ್ಯಾಪಕವಾದ, ಸಾರ್ವಜನೀನವಾದ ಅರ್ಥವನ್ನು ತುಂಬಿಸಿ ಅವನ್ನು ಸಂಸ್ಕೃತಿಸAದರ್ಭದಲ್ಲಿ ಪುನಶ್ಚೇತನಗೊಳಿಸಿದ್ದು ಗೀತೆಯಲ್ಲಿನ ಅಪೂರ್ವತೆ.”
(‘ಗೀತೆಗೊಂದು ಕೈಪಿಡಿ’)
* * *
ಪುರುಷಾರ್ಥ ಪ್ರಕಟೀಕರಣ
ಹಲವಾರು ವಿಶಿಷ್ಟ ವಿಷಯಗಳ ವಿಶ್ಲೇಷಣಾತ್ಮಕ ಸಮೀಕ್ಷೆಗಳನ್ನು ರಾಯರು ನೀಡಿದ್ದಾರೆ: ‘ಪ್ರಾಚೀನ ಸಂಸ್ಕೃತಿ’, ‘ಕನ್ನಡನಾಡಿನ ಧಾರ್ಮಿಕ ಪರಂಪರೆ’, ‘ವೇದವಾಙ್ಮಯ ಮತ್ತು ಉಪನಿಷತ್ತುಗಳು’, ‘ಬ್ರಾಹ್ಮಧರ್ಮ – ಬ್ರಹ್ಮೋಪಾಸನೆ’ ಮೊದಲಾದವು.
ವಿಸ್ತಾರವೂ ಜಟಿಲವೂ ಆದ ವಿಷಯದ ತಾತ್ತ್ವಿಕ ಹಿನ್ನೆಲೆಯನ್ನು ನೀಡಿ ವಿಷಯದ ಹೃದಯವನ್ನು ಅಡಕವಾಗಿ ನಿರೂಪಿಸುವುದು ರಾಯರ ಕ್ರಮ. ಉದಾಹರಣೆಗೆ:
“ಧರ್ಮವನ್ನು ತಿಳಿಯಪಡಿಸುವುದು, ಧರ್ಮವನ್ನು ಪಡೆದುಕೊಳ್ಳಲು ನೆರವಾಗುವುದು, ಧರ್ಮವನ್ನು ಕುರಿತಂತೆ ವಿಚಾರಮಾಡುವುದು ವೇದದಿಂದ ನಾವು ನಿರೀಕ್ಷಿಸುವ ಪ್ರಯೋಜನಗಳು.
ಧರ್ಮವೆಂದರೇನು? ಬದುಕಿನಲ್ಲಿ ನಾವು ಕಾಲು ಜಾರುವಂತಾದಾಗ, ಎಡವಿ ಬೀಳುವಂತಾದಾಗ, ನಮಗೆ ಆಸರೆಯಾಗಿ ನಿಂತು, ನಾವು ಕಾಲು ಜಾರದಂತೆ, ಬೀಳದಂತೆ ನಮ್ಮನ್ನು ಹಿಡಿದೆತ್ತಿ ನಿಲ್ಲಿಸುವುದು – ಎಂಬುದು ಧರ್ಮವೆಂಬ ಮಾತಿನ ಮೂಲಾರ್ಥ (‘ಧೃಙ್ ಧಾರಣೇ’). ಅಭ್ಯುದಯಕ್ಕೆ ನೆರವಾಗುವುದು ಧರ್ಮ, ಶ್ರೇಯಸ್ಕರವಾದುದು ಎಂಬ ವಿವರಣೆಯಿದೆ
(‘ಯತೋಽಭ್ಯುದಯನಿಃಶ್ರೇಯಸಸಿದ್ಧಿB ಸ ಧರ್ಮಃ’, ವೈಶೇಷಿಕಸೂತ್ರ).
ಧರ್ಮವೆಂಬ ಕಟ್ಟುಪಾಡನ್ನು ಒಪ್ಪಿಕೊಳ್ಳುವವರು ಆಸ್ತಿಕರು. ಇವರೆಲ್ಲರೂ ವೇದದ ಪ್ರಾಮಾಣ್ಯವನ್ನು ಅಂಗೀಕರಿಸುತ್ತಾರೆ. ಏಕೆಂದರೆ ವೇದದ ಹಿನ್ನೆಲೆಯಿಲ್ಲದೆ ಧರ್ಮವು ತೋರಿಕೊಳ್ಳಲಾರದು. ವೇದದ ಬಲವಿಲ್ಲದೆ ಅದು ನಮ್ಮನ್ನು ಅಭ್ಯುದಯದತ್ತ ನಡೆಸಲಾಗದು.”
(‘ವೇದವಾಙ್ಮಯ ಮತ್ತು ಉಪನಿಷತ್ತುಗಳು’)
ಸಂಕೇತಾರ್ಥ ಸ್ಫುಟೀಕರಣದ ಆಶಯದ ರಾಯರ ಕೃತಿಗಳು – ‘ಗಣಪತಿಯ ಕಲ್ಪನೆ’, ‘ಶ್ರೀಕೃಷ್ಣನ ವ್ಯಕ್ತಿತ್ವ’, ‘ಆಂಜನೇಯ ಕಲ್ಪನೆಯಲ್ಲಿ ಸ್ವಾರಸ್ಯ’ ಮೊದಲಾದವು.
ಶ್ರೀಕೃಷ್ಣಚಾರಿತ್ರದ ಬಗೆಗೆ ಜಿಜ್ಞಾಸುಗಳಲ್ಲಿ ಸಾಮಾನ್ಯವಾಗಿ ತಲೆದೋರುವ ಶಂಕೆಗಳಿಗೆ ಸಮಾಧಾನ ನೀಡಿ ಸಮಗ್ರೀಕರಿಸುವ ರಾಮಚಂದ್ರರಾಯರ ವಿಧಾನವು ಅತ್ಯಂತ ಸ್ಪೃಹಣೀಯವೆನಿಸುತ್ತದೆ:
“ಮನುಷ್ಯನಾಗಿ ಅವತಾರದ ತಾತ್ಪರ್ಯವನ್ನು ಮೂಡಿಸಿಕೊಂಡವನು ಕೃಷ್ಣ. ಭಗವಂತನ ಸಂಬಂಧವನ್ನು ಬಿಟ್ಟರೂ, ಅವನ ಮನುಷ್ಯತ್ವದಲ್ಲಿಯೇ ಒಂದು ವಿಶೇಷವಾದ ಕಳೆಯಿದೆ, ಲೋಕಕ್ಕೆ ಉಪಕಾರವಾದ ಪ್ರಯೋಜನವಿದೆ.
ಮನುಷ್ಯನಾಗಿಯೇ ಇದ್ದು ಮಾನುಷವ್ಯವಹಾರದಲ್ಲೇ ತೊಡಗಿರುತ್ತ, ಮನುಷ್ಯಸಾಧ್ಯವಾದುದನ್ನೇ ಮಾಡಿ ಮನುಷ್ಯರಲ್ಲೆಲ್ಲ ಶ್ರೇಷ್ಠನೆನಿಸಿಕೊಂಡವನು ಕೃಷ್ಣ.
ಅನವರತವಾದ ಇಂಥ ಆಧ್ಯಾತ್ಮಿಕ ಸಾಧನೆಯಿಂದಲೇ ಮನುಷ್ಯ-ಕೃಷ್ಣನು ಲೋಕೋತ್ತರವಾದ ಕಾರ್ಯವನ್ನು ಸಾಧಿಸುವುದಾದದ್ದು. ಋಗ್ವೇದದ ಋಷಿಯಾಗಿ, ಸಾತ್ವತಪಂಥದ ಪ್ರವರ್ತಕನಾಗಿ ಬದುಕಿ ಬಾಳಿದ ಕೃಷ್ಣನು ಧರ್ಮಸಂಸ್ಥಾಪನೆಗಾಗಿ ಮಹಾಭಾರತದುದ್ದಕ್ಕೂ ಹೆಣಗಾಡಿ, ಲೋಕಕ್ಕೆ ಉಪಕಾರಕವಾದ ಭಗವದ್ಗೀತೆಯನ್ನೂ ಹೊರಹೊಮ್ಮಿಸಿದ. ಭಗವದ್ಗೀತೆ ಲೋಕಕ್ಕೆ ದೊರೆತದ್ದು ಕೃಷ್ಣನ ಈ ಸಹಜವ್ಯವಹಾರದಲ್ಲಲ್ಲ; ತನ್ನ ಸಾಧನೆಯಿಂದ ಅಳವಡಿಸಿಕೊಂಡ ದಿವ್ಯವಿಭೂತಿ ಅವನ ಚೇತನವನ್ನು ಮೇಲೆತ್ತಿ ಬೆಳಗಿಸಿದಾಗ ಗೀತಾಶಾಸ್ತ್ರ ಕಾಣಿಸಿಕೊಂಡಿತು. ಅರ್ಜುನವಿಷಾದದ ಸಂದರ್ಭದಲ್ಲಿ ಕೃಷ್ಣನ ಚೇತನ ಹೀಗೆ ದಿವ್ಯವಿಭೂತಿಯ ವಶವಾಯಿತು; ‘ಯೋಗ-ಯುಕ್ತ’ನಾದ ಅವನು ಗೀತೆಯನ್ನು ಹೇಳುವುದಾಯಿತು.
ಗೀತೆಯನ್ನು ಹೇಳುವ ಕಾಲಕ್ಕೆ ಮನುಷ್ಯನಾಗಿದ್ದ ಕೃಷ್ಣ ಮನುಷ್ಯಮಾತ್ರದವನಾಗಿರಲಿಲ್ಲ. ಎಲ್ಲ ಮಾನವರ ಸ್ವಭಾವದ ಒಳಪದರದಲ್ಲಿ ಅಡಗಿರುವ ಪ್ರಜ್ಞೆಯೊಂದು ಮೇಲೆದ್ದು ಬಂದು, ತಾತ್ಕಾಲಿಕವಾದ ಅರಿವನ್ನು ಕೊಚ್ಚಿಸಿಕೊಂಡು ಹೋಗಿದ್ದಿತು. ಆಗ ಅವನು ದೇವಕೀಪುತ್ರನಾದ, ಅರ್ಜುನನ ಮಿತ್ರನಾದ, ಅವನ ರಥಕ್ಕೆ ಸಾರಥಿಯಾದ ಕೃಷ್ಣನಾಗಿರಲಿಲ್ಲ; ವಿಶ್ವವ್ಯಾಪಕವಾದ ಪರಮಾರ್ಥತತ್ತ್ವದ ಪ್ರತಿನಿಧಿಯಾಗಿದ್ದ.”
(‘ಶ್ರೀಕೃಷ್ಣನ ವ್ಯಕ್ತಿತ್ವ’)
ನಿಷ್ಕೃಷ್ಟವಾಗಿರುವುದರ ಜೊತೆಗೆ ಸದ್ಯಃಸಂವಹನಶೀಲವೂ ಆದ ಈ ಜಾಡಿನ ವಿಶ್ಲೇಷಣೆಗಳಿಂದ ರಾಮಚಂದ್ರರಾಯರ ಬರಹಗಳು ನಿಬಿಡವಾಗಿವೆ.
ಧಾರ್ಮಿಕೇತಿಹಾಸ, ಆಗಮಾದಿ ಶಾಸ್ತ್ರಗಳು – ಈ ಎರಡೂ ಆಯಾಮಗಳನ್ನು ಒಳಗೊಂಡ ಅವರ ಬರಹಗಳು ಹಲವಿವೆ: ‘ತಿರುಪತಿ ತಿಮ್ಮಪ್ಪ’ (ವಿಸ್ತೃತ ಸಮಗ್ರ ಆವೃತ್ತಿ, ೨೦೦೬), ‘ಭಾರತದ ದೇವಾಲಯ; ನೆಲೆ-ಹಿನ್ನೆಲೆ’, ‘ಭಾರತೀಯ ದೇವಾಲಯಗಳ ಜಾನಪದ ಮೂಲ’ (೧೯೮೧), ‘ಅಣ್ಣಪ್ಪದೈವ’ (೧೯೮೩, ೨೦೦೨) ಮೊದಲಾದವು. ಹತ್ತಿರಹತ್ತಿರ ಐವತ್ತು ವರ್ಷಗಳ ಅವಧಿಯಲ್ಲಿ ಹಲವು ಹಂತಗಳಲ್ಲಿ ಬೆಳೆದು ೨೦೦೬ರಲ್ಲಿ ಈಗಿನ ವಿಸ್ತೃತರೂಪ ಪಡೆದುಕೊಂಡ ‘ತಿರುಪತಿ ತಿಮ್ಮಪ್ಪ’ ರಾಮಚಂದ್ರರಾಯರ ಒಂದು ವಿಶಿಷ್ಟ ಶೋಧಗ್ರಂಥ. ತಿರುಪತಿ ಕ್ಷೇತ್ರದ ಬಗೆಗೆ, ದೈವದ ಬಗೆಗೆ ಇಷ್ಟು ಸಮಗ್ರವಾದ ಮತ್ತು ಸಾಹಿತ್ಯಗುಣದ ದೃಷ್ಟಿಯಿಂದಲೂ ಮೇಲ್ಮಟ್ಟದ್ದಾದ ಗ್ರಂಥ ಬಹುಶಃ ಬೇರಾವ ಭಾಷೆಯಲ್ಲಿಯೂ ಬಂದಿರಲಾರದು.
ಇಲ್ಲಿಯ ಪರಿಮಿತಿಯಲ್ಲಿ ಹೆಸರಿಸಿದವಲ್ಲದೆ ಹತ್ತಾರು ಬಿಡಿ ಕೃತಿಗಳೂ ರಾಮಚಂದ್ರರಾಯರಿಂದ ಹೊಮ್ಮಿವೆ. ಸಣ್ಣದಾಗಲಿ ದೊಡ್ಡದಾಗಲಿ – ರಾಮಚಂದ್ರರಾಯರ ಯಾವುದೇ ಬರಹವನ್ನು ಕೈಗೆತ್ತಿಕೊಂಡರೂ ಅದರಲ್ಲಿ ಪ್ರತಿಪಾದನೆಯ ಅನನ್ಯತೆಯನ್ನೂ ಅಪೂರ್ವ ಒಳನೋಟಗಳನ್ನೂ ಕಾಣಬಹುದು. ಉದಾಹರಣೆಗೆ: ‘ವಿವಾಹಪದ್ಧತಿಗಳು’ ಪುಸ್ತಿಕೆಯಲ್ಲಿ ಭಾರತೀಯ ವಿವಾಹವಿಧಿಗಳನ್ನು ಮಾತ್ರವಲ್ಲದೆ ಮುಸಲ್ಮಾನರ ಮತ್ತು ಕ್ರೆöÊಸ್ತರ ವಿವಾಹಪದ್ಧತಿಗಳನ್ನೂ ಅವರು ಪರಿಚಯಿಸಿದ್ದಾರೆ.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಪಾರಂಪರಿಕ ಜ್ಞಾನರಾಶಿಗೂ ಇಪ್ಪತ್ತನೇ ಶತಮಾನದ ಜಿಜ್ಞಾಸುಗಳಿಗೂ ನಡುವಣ ಸೇತುವೆಯಾದವರು ರಾಮಚಂದ್ರರಾಯರು.
ಅವರು ಈ ದೃಷ್ಟಿಯಿಂದ ಶೇಖರಿಸಿಕೊಟ್ಟು ಹೋಗಿರುವ ವಾಙ್ಮಯರಾಶಿಯು ಸದಾಕಾಲಕ್ಕೂ ತವನಿಧಿಯಾಗಿ ಉಳಿಯುತ್ತದೆಂದು ನಿರ್ವಿವಾದವಾಗಿ ಹೇಳಬಹುದು.
‘ಭಾರತೀಯ ಸಂಸ್ಕೃತಿಯ ತಿರುಳು’ ಪ್ರಬಂಧದ ಉಪಸಂಹಾರದಲ್ಲಿ ರಾಮಚಂದ್ರರಾಯರು ಭಾವಗತೋಕ್ತ ‘ಆದಿವೃಕ್ಷ’ವನ್ನು ಪ್ರಸ್ತಾವಿಸಿ ಆಡಿರುವ ಮಾತುಗಳ ಸಂದೇಶಾತ್ಮಕತೆಯು ಮನನೀಯವಾಗಿದೆ.
“ಅಂತಹ ಮಹಾವೃಕ್ಷದ ಅಡಿಯಲ್ಲಿ ನಾವು ಬಾಳಿದ್ದೇವೆ. ಪೀಳಿಗೆಯ ನಂತರ ಪೀಳಿಗೆ, ದಿನವಾದ ಮೇಲೆ ದಿನ ಬಾಳಿದ್ದೇವೆ. ಸಾವಿರಾರು ವರ್ಷ ಬಾಳಿದ್ದೇವೆ. ಈ ಮರವನ್ನು ಕತ್ತರಿಸಿ ಬೀಳಿಸಲು ಹೊರಗಿನಿಂದ ಪ್ರಯತ್ನಗಳು ನಡೆದಿವೆ. ಒಳಗೇ ಮರವನ್ನು ಬಾಡಿಸಿ ಒಣಗಿಸಲು ಸಾಯಿಸಲು ರೋಗ ತಟ್ಟಿದೆ. ಆದರೆ ಇದು ಜೀವನವೃಕ್ಷ, ಮತ್ತೆಮತ್ತೆ ಹೊಸದಾಗುವ ವಿಶೇಷಸಾಮರ್ಥ್ಯವುಳ್ಳ ಮರ; ಸದಾ ಕಾಲ ನಿಲ್ಲಬಲ್ಲ ಮರ; ಸುಳ್ಳಿನಿಂದ ನಿಜಕ್ಕೆ, ಕತ್ತಲಿನಿಂದ ಬೆಳಕಿಗೆ ಮತ್ತು ಸಾವಿನಿಂದ ಸಾವಿಲ್ಲದ ಬಾಳಿಗೆ ನಾವು ಸಾಗಲು ನೆರವಾಗುವ ವೃಕ್ಷ.”
[‘ದೀಪ್ತಶೃಂಗಗಳು’ (ಸಾಹಿತ್ಯ ಸಿಂಧು ಪ್ರಕಾಶನ,
ಬೆಂಗಳೂರು, ೨೦೧೭) ಕೃತಿಯಲ್ಲಿ ಪ್ರಕಟವಾದ
ಲೇಖನದ ಆಯ್ದ ಭಾಗಗಳು.]