ಸನಾತನಧರ್ಮದ ಭಾಗವೇ ಆಗಿದ್ದ ಹಲವು ದೂರವ್ಯಾಪಿ ಅಂಶಗಳನ್ನು ಮುನ್ನೆಲೆಗೆ ತಂದು ಪ್ರಖರವಾಗಿ ಮತ್ತು ವೈಚಾರಿಕಪ್ರಾಕಾರದಲ್ಲಿ ಪ್ರಭಾವಿಯಾಗಿ ಪ್ರತಿಪಾದಿಸಿದುದು ಶ್ರೀ ಅರವಿಂದರ ಕೊಡುಗೆ.
ಸಮಕಾಲೀನ ರಾಷ್ಟ್ರಭಕ್ತರಲ್ಲಿ ದರ್ಶನಸ್ಫುಟತೆಯನ್ನೂ ಕಾರ್ಯೋತ್ಸಾಹವನ್ನೂ ಉಜ್ಜೀವಿಸುವುದರಲ್ಲಿ ಶ್ರೀ ಅರವಿಂದರ ಮಾತೂ ಬರಹವೂ ಮಹತ್ತ್ವದ ಪಾತ್ರ ವಹಿಸಿದವು.
ಸ್ವಾತಂತ್ರ್ಯಸಂಗ್ರಾಮ ನಡೆದುಬಂದ ದಾರಿಯನ್ನು ಪರಿಶೀಲಿಸುವಾಗ ಸಾಮಾನ್ಯವಾಗಿ ರಾಜಕೀಯ ನೆಲೆಯ ಸಂಧಾನಗಳನ್ನು ಪ್ರಧಾನವಾಗಿ ಪ್ರಸ್ತಾವಿಸುವುದಾಗುತ್ತದೆ. ಆದರೆ ಸ್ವಾತಂತ್ರ್ಯಸಾಧನೆಗೆ ಅಷ್ಟೇ ಮಹತ್ತ್ವದ ಭೂಮಿಕೆಯನ್ನು ನಿರ್ಮಿಸಿದ ಆಧ್ಯಾತ್ಮಿಕಪುರುಷರ, ಭೂಗತ ಸಶಸ್ತ್ರ ಆಂದೋಲನಕಾರರ ಮತ್ತಿತರರ ಕೊಡುಗೆಗೂ ಗಮನ ಸೆಳೆಯುವ ಆವಶ್ಯಕತೆಯಿದೆ. ಭಾರತೀಯರ ಮಾನಸಿಕತೆಯನ್ನು ಸ್ವಾತಂತ್ರ್ಯಾಭಿಮುಖವಾಗಿ ಸಜ್ಜುಗೊಳಿಸಿದ ಆಧ್ಯಾತ್ಮಿಕಕ್ಷೇತ್ರದ ಧೀಮಂತರು ಸ್ವಾಮಿ ದಯಾನಂದ ಸರಸ್ವತಿಗಳು, ಸ್ವಾಮಿ ವಿವೇಕಾನಂದರು, ಶ್ರೀ ಅರವಿಂದರು. ಇವರನ್ನು ಸಾಮಾನ್ಯವಾಗಿ ಧಾರ್ಮಿಕ ನವೋತ್ಥಾನದ ಅಧ್ವರ್ಯುಗಳೆಂದು ಸ್ಮರಿಸಲಾಗುತ್ತದೆ. ಆದರೆ ಸ್ವಾತಂತ್ರ್ಯಾಂದೋಲನಕ್ಕೆ ಅವರಿಂದ ನೇರವಾಗಿಯೂ ಪರೋಕ್ಷವಾಗಿಯೂ ದೊರೆತ ಯೋಗದಾನ ಅತಿಶಯವಾದ್ದೆಂದು ಗ್ರಹಿಸುವುದು ಅವಶ್ಯವಿದೆ.
ಅರ್ಜಿದಾರ ಮಾನಸಿಕತೆಯಿಂದ ಆಗಿನ ಪ್ರಯಾಸವನ್ನು ಹೊರಕ್ಕೆ ತಂದು ಪೂರ್ಣಸ್ವರಾಜ್ಯಕ್ಕಾಗಿ ಆಗ್ರಹಿಸುವುದರ ಅನಿವಾರ್ಯತೆಯನ್ನು ಬೋಧಿಸಿ ಸ್ವಾತಂತ್ರ್ಯಾಂದೋಲನಕ್ಕೆ ಬೇರೆಯದೇ ತಿರುವನ್ನಿತ್ತವರು ಲೋಕಮಾನ್ಯ ಬಾಲಗಂಗಾಧರ ತಿಲಕರು ಮತ್ತು ಯೋಗಿ ಅರವಿಂದರು.
ಶ್ರೀ ಅರವಿಂದರ ೧೪೪ನೇ ಜನ್ಮದಿನ ಸಂದರ್ಭದಲ್ಲಿ (ಜನನ: ೧೫-೮-೧೮೭೨) ಅವರ ಚಿಂತನೆಯನ್ನೂ ಅವರಿತ್ತ ರಾಷ್ಟ್ರದರ್ಶನವನ್ನೂ ಸ್ಮರಿಸುವುದು ಸಂಗತವಾಗಿದೆ.
ಸನಾತನಧರ್ಮದ ಭಾಗವೇ ಆಗಿದ್ದ ಹಲವು ದೂರವ್ಯಾಪಿ ಅಂಶಗಳನ್ನು ಮುನ್ನೆಲೆಗೆ ತಂದು ಪ್ರಖರವಾಗಿ ಮತ್ತು ವೈಚಾರಿಕಪ್ರಾಕಾರದಲ್ಲಿ ಪ್ರಭಾವಿಯಾಗಿ ಪ್ರತಿಪಾದಿಸಿದುದು ಶ್ರೀ ಅರವಿಂದರ ಕೊಡುಗೆ. ಈ ಅಂಶಗಳು ಬೀಜರೂಪದಲ್ಲಿ ವಿವೇಕಾನಂದರಿಂದ ಅಭಿವ್ಯಕ್ತಗೊಂಡಿದ್ದವು. ಅವಕ್ಕೆ ಸಮರ್ಥವಾದ ವ್ಯಾಖ್ಯಾನವನ್ನು ನೀಡುವುದರ ಮೂಲಕ ಸಮಕಾಲೀನ ರಾಷ್ಟ್ರಭಕ್ತರಲ್ಲಿ ದರ್ಶನಸ್ಫುಟತೆಯನ್ನೂ ಕಾರ್ಯೋತ್ಸಾಹವನ್ನೂ ಉಜ್ಜೀವಿಸುವುದರಲ್ಲಿ ಶ್ರೀ ಅರವಿಂದರ ಮಾತೂ ಬರಹವೂ ಮಹತ್ತ್ವದ ಪಾತ್ರ ವಹಿಸಿದವು. ವಿದೇಶೀ ಪ್ರಭುತ್ವದ ದೈತ್ಯಬಲದೆದುರಿಗೆ ತಾವು ಅಸಹಾಯರೆಂಬ ಕೀಳರಿಮೆ ಜನಸಾಮಾನ್ಯರಲ್ಲಿ ದಟ್ಟವಾಗಿದ್ದಿತು. ಆ ಮನಃಸ್ಥಿತಿಯಿಂದ ಜನರನ್ನು ಹೊರಕ್ಕೆ ತಂದು ಜನರ ಸ್ವಾಭಿಮಾನವನ್ನು ಸಚೇತನಗೊಳಿಸುವುದನ್ನು ತಮ್ಮ ಬಾಳಿನ ಪ್ರಮುಖ ಗುರಿಯೆಂದೇ ವಿವೇಕಾನಂದರು ಪರಿಗಣಿಸಿ ಶ್ರಮಿಸಿದ್ದರು. ಅದೇ ಪ್ರಕ್ರಿಯೆಯನ್ನು ಉಜ್ಜ್ವಲವಾಗಿ ಮುಂದುವರಿಸಿದವರು ಶ್ರೀ ಅರವಿಂದರು. ಅವರ ೧೯೦೫-೧೯೧೦ರ ಈ ಜಾಡಿನ ಬರಹಗಳಲ್ಲಿ ಸಾರ್ವಕಾಲಿಕ ಮೌಲ್ಯವಿದೆ. ಅವನ್ನು ರಾಷ್ಟ್ರಭಕ್ತಿಯ ಪ್ರಾಥಮಿಕ ಪಾಠ್ಯಗಳಾಗಿ ಈಗಲೂ ಅಧ್ಯಯನ ಮಾಡಬಹುದಾಗಿದೆ.
ಲಕ್ಷ್ಯಸಾಧನೆಯೇ ನಿರ್ಣಾಯಕ
ಲೋಕಮಾನ್ಯ ತಿಲಕರು ಮತ್ತು ಶ್ರೀ ಅರವಿಂದರು – ಇಬ್ಬರ ನಡುವೆ ಸಾಮ್ಯವಿದೆ. ಪಶ್ಚಿಮಭಾರತದಲ್ಲಿ ತಿಲಕರು ಯಾವ ಪ್ರಖರ ಸಮಾಜಜಾಗರಣ ಅಭಿಯಾನವನ್ನು ನಡೆಸಿದ್ದರೋ ಅಂತಹದೇ ಸಾಮ್ರಾಜ್ಯಶಾಹಿವಿರೋಧಿ ಪ್ರಯತ್ನಸರಣಿಯನ್ನು ಶ್ರೀ ಅರವಿಂದರು ಪೂರ್ವಭಾರತದಲ್ಲಿ ನಡೆಯಿಸಿದರು. ತಿಲಕರಂತೆ ಶ್ರೀ ಅರವಿಂದರೂ ತಾರುಣ್ಯಕಾಲದಿಂದಲೇ ತೀವ್ರ ವಿಚಾರಧಾರೆಯವರಾಗಿದ್ದರು; `ಕ್ರಾಂತಿಕಾರಿ’ಗಳೆಂಬ ಅಯಥಾರ್ಥ ಶಬ್ದದಿಂದ ಯಾರನ್ನು ಸಾಮಾನ್ಯವಾಗಿ ವರ್ಣಿಸಲಾಗುತ್ತದೆಯೋ ಆ ಅಪ್ಪಟ ದೇಶಭಕ್ತರ ಪ್ರಯತ್ನಗಳನ್ನು ಶ್ರೀ ಅರವಿಂದರು ತಮ್ಮ ಪೂರ್ವವಯಸ್ಸಿನಿಂದಲೇ ಸಮರ್ಥಿಸಿದ್ದರು. ಬ್ರಿಟಿಷ್ ಪ್ರಭುತ್ವದ ಉಚ್ಚಾಟನೆ ಮಾತ್ರ ಭಾರತದ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಎಂದು ತಿಲಕರೂ ಶ್ರೀ ಅರವಿಂದರೂ ನಂಬಿದ್ದರು; ಮಾತ್ರವಲ್ಲ, ಈ ಗುರಿಯ ಸಾಧನೆಗಾಗಿ ಉಗ್ರಕ್ರಮಗಳ ಅನುಸರಣೆಯೂ ಅಯುಕ್ತವಾಗದು ಎಂದು ಪ್ರತಿಪಾದಿಸಿದ್ದರು. ಲಕ್ಷ್ಯದ ಸಾಧನೆಯೇ ಪ್ರಮುಖವೆಂದೂ ವಿಧಾನವು ಗೌಣವೆಂದೂ ದೇಶವ್ಯಾಪಿ ಸಶಸ್ತ್ರ ಆಂದೋಲನದ ದಿಶೆಯಲ್ಲಿ ಹಲವು ವಲಯಗಳಲ್ಲಿ ಚಿಂತನೆ ನಡೆದಿದ್ದಾಗ ಅದು ಅಸಮರ್ಥನೀಯವಲ್ಲವೆಂಬ ನಿಲವನ್ನು ಶ್ರೀ ಅರವಿಂದರು ತಳೆದಿದ್ದರು. ಅಹಿಂಸಾತ್ಮಕ ಮಾರ್ಗದಿಂದ ಗುರಿಯ ಸಾಧನೆ ಆಗುವುದಾದರೆ ಆಗಲಿ, ಆದರೆ ಅದು ವಿಫಲಗೊಂಡು ಹೆಚ್ಚು ಕ್ಷಾತ್ರಪೂರ್ಣ ವಿಧಾನಗಳ ಮೊರೆಹೊಗಬೇಕಾದರೆ ಅದಕ್ಕೆ ಆಕ್ಷೇಪಿಸಬೇಕಾದುದಿಲ್ಲ – ಎಂಬ ಧೋರಣೆ ಶ್ರೀ ಅರವಿಂದರದಾಗಿತ್ತು. ಒಂದು ಹಂತದವರೆಗೆ ಅವರು ಕಾಂಗ್ರೆಸ್ ವಲಯದೊಡನೆಯೂ ಸಕ್ರಿಯರಾಗಿದ್ದರು. ಆದರೆ ಕ್ರಮೇಣ ಕಾಂಗ್ರೆಸ್ಸಿನ ಆಗಿನ ಧೋರಣೆಗಳ ಬಗೆಗೆ ಅಸಂತೃಪ್ತಿ ಮೂಡಿ ಭೂಗತ ಕಾರ್ಯಕರ್ತ ತಂಡಗಳಿಗೆ ನಿಕಟವರ್ತಿಯಾದರು.
ಶ್ರೀ ಅರವಿಂದರಿಗೆ ಮಹಾರಾಷ್ಟ್ರದ ಕ್ರಾಂತಿಕಾರಿಗಳ ಸಂಪರ್ಕವೂ ಇದ್ದಿತು. ೧೯೦೨ರಲ್ಲಿ ಸತೀಶ ಮುಖರ್ಜಿ ಮತ್ತಿತರರು ಬಂಗಾಳದಲ್ಲಿ ರಚಿಸಿಕೊಂಡಿದ್ದ `ಅನುಶೀಲನ ಸಮಿತಿ’ ಗುಪ್ತಸಂಘಟನೆಯ ಶಾಖೆಗಳ ಪರಿಚಯ ಮಾಡಿಕೊಳ್ಳುವಂತೆ ನಿರ್ದೇಶಿಸಿ ಜತೀನ್ ಬ್ಯಾನರ್ಜಿ ಮೊದಲಾದ ಒಬ್ಬಿಬ್ಬರನ್ನು ಬಂಗಾಳಕ್ಕೆ ಕಳುಹಿಸಿದರು; ಸ್ವಯಂ ತಮ್ಮ ಸೋದರ ಬಾರೀಂದ್ರ ಘೋಷ್ ಅವರನ್ನೂ ಬಂಗಾಳಕ್ಕೆ ಕಳುಹಿಸಿದರು. ಅದರ ಆಶಯ ಸಮಯ ಒದಗಿದಾಗ ಕಾರ್ಯೋನ್ಮುಖವಾಗಲು ದೇಶದ ತರುಣ ಸಮುದಾಯವನ್ನು ಸಜ್ಜುಗೊಳಿಸಿರಬೇಕು – ಎಂಬುದು. ೧೯೦೩ರಲ್ಲಿ ಸ್ವಯಂ ಶ್ರೀ ಅರವಿಂದರೇ ಬಂಗಾಳಕ್ಕೆ ತೆರಳಿ ಭೂಗತ ಕಾರ್ಯಕರ್ತ ತಂಡಗಳನ್ನು ಸುಸಂಘಟಿತಗೊಳಿಸಲು ಯತ್ನಿಸಿದರು.
ಈ ಪೂರ್ವಸಿದ್ಧತೆ ಆಗಿದ್ದುದರಿಂದ ೧೯೦೫ರಲ್ಲಿ ಕರ್ಜನನು ವಂಗಭಂಗದ ಘೋಷಣೆ ಮಾಡುವ ವೇಳೆಗೆ ದೇಶವ್ಯಾಪಿ ವಿರೋಧವನ್ನು ಸಂಘಟಿಸುವುದು ದುಷ್ಕರವಾಗಲಿಲ್ಲ. ತರುಣಜನತೆ ವಂಗಭಂಗದಂತಹ ಸನ್ನಿವೇಶಕ್ಕಾಗಿ ಕಾಯುತ್ತಿತ್ತೆಂದೇ ಅನಿಸುವಮಟ್ಟಿಗೆ ವ್ಯಾಪಕ ಪ್ರತಿರೋಧ ಹೊಮ್ಮಿತು. ಇದಕ್ಕೆ ಪೂರಕವೆಂಬ ರೀತಿಯಲ್ಲಿ ಕಾಂಗ್ರೆಸ್ಸಿನ ಮುಖ್ಯಧಾರೆಯ ಮನವಿದಾರ ಮನೋವೃತ್ತಿಯು ಸ್ವಾತಂತ್ರ್ಯಾಂದೋಲನವನ್ನು ಮನ್ನಡೆಸಲಾರದೆಂಬ ಚಿಂತನಸ್ಫುಟತೆ ತರುಣಜನತೆಯಲ್ಲಿ ಮೊಳೆತಿತ್ತು. ಪ್ರಾರ್ಥನಾಪತ್ರಗಳಿಗೆ ಎಷ್ಟುಮಾತ್ರವೂ ಸೊಪ್ಪುಹಾಕದ ಬ್ರಿಟಿಷ್ ಪಾಶವೀ ಪ್ರಭುತ್ವವನ್ನು ಎದುರಿಸಬಹುದಾದುದು ಒಂದಲ್ಲ ಒಂದು ರೀತಿಯ ಶಕ್ತಿಯ ಪರಿಭಾಷೆಯಿಂದಲೇ ಎಂಬ ನಿಶ್ಚಯ ತಲೆದೋರಿತ್ತು.
ಚೈತನ್ಯದ ಉಪಾಸನೆ
ಈ ಬೆಳವಣಿಗೆಗಳ ಹಿಂದುಗೂಡಿ ಶ್ರೀ ಅರವಿಂದರ ಬೆಂಬಲ ಮತ್ತು ನೆರವಿನಿಂದ ಬಾರೀಂದ್ರ ಘೋಷ್ ಅವರು `ಯುಗಾಂತರ’ ಸಾಪ್ತಾಹಿಕವನ್ನು ಆರಂಭಿಸಿದುದು ಸುವಿದಿತ. ಆ ದಿನಗಳಲ್ಲಿಯೆ ಸ್ಥಾಪನೆಗೊಂಡ `ಭವಾನಿ ಮಂದಿರ’ದ ರೂಪರೇಖೆಗಳನ್ನು ತಯಾರಿಸಿದ್ದವರೂ ಶ್ರೀ ಅರವಿಂದರೇ.
೧೯೦೫ರಲ್ಲಿ `ಭವಾನಿ ಮಂದಿರ’ ಕಲ್ಪನೆಯನ್ನು ವಿವರಿಸುತ್ತ ಶ್ರೀ ಅರವಿಂದರು ಹೇಳಿದ್ದ ಈ ಮಾತುಗಳು ಅವರ ಚಿಂತನಧೋರಣೆಯನ್ನು ಬಿಂಬಿಸಿವೆ:
“ನಮ್ಮಲ್ಲಿ ಬೇರೆ ಎಲ್ಲವೂ ಇದ್ದರೂ ಶಕ್ತಿ ಮತ್ತು ಚೈತನ್ಯಗಳ ಕೊರತೆ ಇದೆ. ನಾವು ಶಕ್ತಿಯ ಕೈ ಬಿಟ್ಟಿದ್ದೇವೆ, ಆದ್ದರಿಂದ ಶಕ್ತಿಯೂ ನಮ್ಮನ್ನು ಬಿಟ್ಟಿದ್ದಾಳೆ….. ಭಕ್ತಿ, ಪ್ರೇಮ, ಸದುದ್ದೇಶಗಳ ಕೊರತೆಯಿಲ್ಲ. ಆದರೆ ಶಕ್ತಿಯ ಅಭಾವವಿರುವಾಗ ಅವನ್ನೆಲ್ಲ ನಾವು ಕಾಪಾಡಿಕೊಳ್ಳುವುದು ದುಃಸಾಧ್ಯ….. ಇಂಧನದ ಕೊರತೆ ಇದ್ದರೆ ಬೆಂಕಿ ಎಷ್ಟು ಸಮಯ ಉರಿಯಬಲ್ಲದು?….. ಮರುಹುಟ್ಟು ಪಡೆಯಬೇಕಾದರೆ ಪ್ರಚಂಡಶಕ್ತಿಯು ನಮ್ಮ ವ್ಯಕ್ತಿತ್ವದ ಪ್ರಸರವಷ್ಟನ್ನೂ ಫಲವತ್ತಾಗಿಸಬೇಕು.”
ಬಾರೀಸಾಲ್ ಸಮಾವೇಶದ ಸಂದರ್ಭದಲ್ಲಿ ಬ್ರಿಟಿಷ್ ಪೊಲೀಸರು ನಡೆಸಿದ ದೌರ್ಜನ್ಯಕ್ಕೆ ತೀಕ್ಷ್ಣ ಪ್ರತಿರೋಧವನ್ನು ಸಂಘಟಿಸುವುದರಲ್ಲಿ ಶ್ರೀ ಅರವಿಂದರ ಪಾತ್ರವಿದ್ದಿತು. ಆದರೆ ಕ್ರುದ್ಧ ತರುಣರು ಅನಿಯಂತ್ರಿತ ಹಿಂಸಾಚರಣೆಯಲ್ಲಿ ತೊಡಗಿದುದು ಶ್ರೀ ಅರವಿಂದರನ್ನು ವಿಚಲಿತಗೊಳಿಸಿತು. ಆ ಹಂತದಿಂದ ಆಚೆಗೆ ರಾಜಕೀಯ ಸ್ತರದಲ್ಲಿ ಬ್ರಿಟಿಷ್ ಪ್ರಭುತ್ವದ ಮೇಲೆ ಒತ್ತಡವನ್ನು ಅಧಿಕಗೊಳಿಸುವ ಪ್ರಯತ್ನಗಳಿಗೆ ಶ್ರೀ ಅರವಿಂದರು ಇಂಬುಗೊಡತೊಡಗಿದರು, ತಿಲಕ್ ಬಣದ ಪ್ರಬಲ ಸಮರ್ಥಕರಾದರು.
೧೯೦೬-೭ರಲ್ಲಿ ಕಾಂಗ್ರೆಸ್ `ನರಂ ದಳ’ – `ಗರಂ ದಳ’ಗಳಾಗಿ ಹೋಳಾದದ್ದೂ ಅಲ್ಲಿಂದಾಚೆಯ ಬೆಳವಣಿಗೆಗಳೂ ಸುವಿದಿತ.
ಪ್ರಖರ ಮಂಡನೆ
೧೯೦೬-೭ರಲ್ಲಿ `ವಂದೇ ಮಾತರಂ’ ಪತ್ರಿಕೆಯಲ್ಲಿಯೂ ೧೯೦೯-೧೦ರಲ್ಲಿ `ಕರ್ಮಯೋಗಿನ್’ ಪತ್ರಿಕೆಯಲ್ಲಿಯೂ ೧೯೧೪-೨೧ರ ವರ್ಷಗಳಲ್ಲಿ `ಆರ್ಯ’ ಪತ್ರಿಕೆಯಲ್ಲಿಯೂ ಸನಾತನಧರ್ಮವನ್ನು ಕುರಿತೂ ೨೦ನೇ ಶತಮಾನದ ಆರಂಭದ ದಶಕಗಳಲ್ಲಿ ಇದ್ದ ಭಾರತದ ಪರಿಸ್ಥಿತಿಯ ಬಗೆಗೂ ಶ್ರೀ ಅರವಿಂದರ ಪ್ರಖರ ಲೇಖನಗಳು ಪ್ರಕಾಶಗೊಂಡವು. `ವಂದೇ ಮಾತರಂ’ ಮಂತ್ರಸದೃಶ ಗೀತವನ್ನು ವ್ಯಾಪಕವಾಗಿ ಪ್ರಚಾರ ಮಾಡಿದವರು ಶ್ರೀ ಅರವಿಂದರು.
ಆಧ್ಯಾತ್ಮಿಕ ಶಕ್ತಿಯು ಸುಸಂಬದ್ಧವಾಗಿದ್ದರೆ ಅದು ಆನುಕ್ರಮಿಕವಾಗಿ ಭೌತಿಕ ಶಕ್ತಿಯನ್ನೂ ಸೃಷ್ಟಿಸುತ್ತದೆ – ಎಂದು ಒತ್ತಿಹೇಳಿದರು, ಶ್ರೀ ಅರವಿಂದರು. ಸ್ವಾತಂತ್ರ್ಯಪ್ರಾಪ್ತಿಯೆಂಬುದು ಕೇವಲ ಬಾಹ್ಯ ವ್ಯವಹಾರದ ಸಂಗತಿಯಲ್ಲವೆಂದೂ ಅದು ಇಡೀ ವ್ಯಕ್ತಿತ್ವವನ್ನು ವ್ಯಾಪಿಸಬೇಕಾದಂತಹದು ಎಂದೂ ಅವರು ಪ್ರತಿಪಾದಿಸಿದರು. ಇದಕ್ಕೆ ವಿಶೇಷ ಸಾಂದರ್ಭಿಕತೆಯೂ ಇದ್ದಿತು: ಅಲ್ಪಸ್ವಲ್ಪ ಸುಧಾರಣೆಗಳಿಂದ ತೃಪ್ತರಾಗುವುದು, ರಾಜ್ಯಾಂಗ-ಆರ್ಥಿಕಾದಿ ಕಲಾಪಗಳ ಒಂದಷ್ಟು ಪುನರ್ಯೋಜನೆಯೇ ಸ್ವಾತಂತ್ರ್ಯ – ಎಂಬೀ ರೀತಿಯ ವಿಕಲ ಕಾರ್ಯಾವಳಿಗಳಿಂದ ಜನರನ್ನು ಬಹಿರ್ಗತಗೊಳಿಸಿ ಸಮಗ್ರ ಸ್ವರಾಜ್ಯಕ್ಕೆ ಅಭಿಮುಖರನ್ನಾಗಿ ಮಾಡುವುದರ ಆವಶ್ಯಕತೆ ಇದ್ದಿತು.
ಬ್ರಿಟಿಷ್ ಪ್ರಭುತ್ವವನ್ನು ಕ್ಷಾತ್ರರೀತಿಯಲ್ಲಿ ಎದುರಿಸಬೇಕಾದುದರ ಅನಿವಾರ್ಯತೆಯನ್ನು ಪ್ರಖರವಾಗಿ ಮಂಡಿಸಿದುದು ಮಾತ್ರವಲ್ಲದೆ ಶ್ರೀ ಅರವಿಂದರು ಈ ಪ್ರಕ್ರಿಯೆಗೆ ಸೈದ್ಧಾಂತಿಕ ತಳಹದಿಯನ್ನೂ ನಿರ್ಮಿಸಿದರು. ಇದನ್ನು ಶ್ರೀ ಅರವಿಂದರ ಅನನ್ಯವಾದ ಕೊಡುಗೆ ಎಂದು ಒಪ್ಪಲೇಬೇಕು. ಏನಕೇನ ಪ್ರಕಾರೇಣ ಸ್ವಾತಂತ್ರ್ಯಪ್ರಾಪ್ತಿಯು ವ್ಯಾವಹಾರಿಕ ಆವಶ್ಯಕತೆಯಲ್ಲದೆ ಧಾರ್ಮಿಕ ಕರ್ತವ್ಯವೂ ಆಗಿದೆ – ಎಂಬ ವ್ಯಾಖ್ಯಾನವನ್ನು ಶ್ರೀ ಅರವಿಂದರು ಬಾರೀಂದ್ರ ಘೋಷ್ರವರ `ಯುಗಾಂತರ’ದ ಮತ್ತು ಅದೇ ದಿನಗಳಲ್ಲಿಯೇ ಬಿಪಿನಚಂದ್ರ ಪಾಲ್ ಹೊರತಂದ `ವಂದೇ ಮಾತರಂ’ ಪತ್ರಿಕೆಗಳ ಮೂಲಕ ಪ್ರವರ್ತನೆ ಮಾಡಿದುದನ್ನು ಸ್ವಾತಂತ್ರ್ಯೇತಿಹಾಸದ ಒಂದು ಮೈಲಿಗಲ್ಲು ಎಂದು ಗುರುತಿಸಬೇಕು. ಬ್ರಾಹ್ಮ ಮತ್ತು ಕ್ಷಾತ್ರಗಳ ಸಾಹಚರ್ಯವೇ ಪರಮ ಆದರ್ಶ ಮತ್ತು ಯಾವುದೇ ರಾಷ್ಟ್ರದ ಏಳ್ಗೆಗೆ ನಿರ್ಣಾಯಕ ಎಂಬುದು ಹಿಂದೂ ಪಾರಂಪರಿಕ ವಾಙ್ಮಯದಲ್ಲಿ ಸುಸ್ಪಷ್ಟವೇ ಆಗಿದ್ದರೂ ೧೯-೨೦ನೇ ಶತಮಾನದ ಸಂಧಿಕಾಲಕ್ಕೆ ಅದರ ಅನ್ವೇಯತೆಯನ್ನು ಪರಿಸ್ಫುಟಗೊಳಿಸಿದವರು ಸ್ವಾಮಿ ದಯಾನಂದ ಸರಸ್ವತಿಗಳು, ಸ್ವಾಮಿ ವಿವೇಕಾನಂದರು ಮತ್ತು ನಿರ್ಣಾಯಕ ಸಮಯದಲ್ಲಿ ಶ್ರೀ ಅರವಿಂದರು.
ಬಂಧನ; ಬಿಡುಗಡೆ
ಪ್ರಭುತ್ವದೊಡನೆ ಅಸಹಕಾರ, ಪೂರ್ಣಸ್ವಾತಂತ್ರ್ಯಕ್ಕಾಗಿ ಆಗ್ರಹ, ವಿದೇಶೀ ವಸ್ತು ಬಹಿಷ್ಕಾರ, ನಿಃಶಸ್ತ್ರ ಪ್ರತಿರೋಧ – ಈ ಜ್ವಲಂತ ಸಂದೇಶಗಳನ್ನು ಶ್ರೀ ಅರವಿಂದರು ತಮ್ಮ ಸತತ ಬರಹಗಳ ಮೂಲಕ ಬಿತ್ತರಿಸಿದರು. ಆದರೆ ಶ್ರೀ ಅರವಿಂದರು ಎಂತಹ ಲೇಖನತಂತ್ರವನ್ನು ಬಳಸಿದರೆಂದರೆ ತಾಂತ್ರಿಕವಾಗಿ ಅದನ್ನು `ರಾಜದ್ರೋಹ’ವೆಂದು ಬೊಟ್ಟುಮಾಡಿ ಕ್ರಮಕೈಗೊಳ್ಳಲು ಸರ್ಕಾರದಿಂದ ಆಗಲಿಲ್ಲ. ಆದರೂ ಸರ್ಕಾರವು ದೃಢಪ್ರಯತ್ನ ನಡೆಸಿ ಕಡೆಗೂ ಏನೇನೊ ಕಾರಣಗಳನ್ನು ಅನ್ವೇಷಿಸಿ ಶ್ರೀ ಅರವಿಂದರ ವಿರುದ್ಧವೂ `ವಂದೇ ಮಾತರಂ’ ಪತ್ರಿಕೆಯ ಪ್ರಕಾಶಕರಾದ ಬಿಪಿನಚಂದ್ರ ಪಾಲ್ ವಿರುದ್ಧವೂ ೧೯೦೭ರ ಜುಲೈ ಅಂತ್ಯದಲ್ಲಿ ಮೊಕದ್ದಮೆಗಳನ್ನು ಹೂಡಿತು. ಶ್ರೀ ಅರವಿಂದರು ಬಂಧಿತರಾದರು. ಸರ್ಕಾರವು ತನ್ನ ಆರೋಪಗಳನ್ನು ಪ್ರಮಾಣೀಕರಿಸುವುದರಲ್ಲಿ ವಿಫಲವಾದುದರಿಂದ ಶ್ರೀ ಅರವಿಂದರು ಬಂಧಮುಕ್ತರಾದರು.
ಶ್ರೀ ಅರವಿಂದರ ಸೋದರ ಬಾರೀಂದ್ರರ ತಂಡದ ಕ್ರಾಂತಿಕಾರಿಗಳು ಬ್ರಿಟಿಷ್ ನ್ಯಾಯಾಧೀಶ ಕಿಂಗ್ಸ್ಫರ್ಡನ ಹತ್ಯೆಗಾಗಿ ನಡೆಸಿದ್ದ ಪ್ರಯತ್ನದ ಹಿನ್ನೆಲೆಯಲ್ಲಿ ಶ್ರೀ ಅರವಿಂದರನ್ನು ಸರ್ಕಾರ ಬಂಧಿಸಿತು (೨-೫-೧೯೦೮). ಅಲಿಪುರ ಬಾಂಬ್ ಪ್ರಕರಣವೆಂದೇ ಪ್ರಸಿದ್ಧವಾದ ಆ ಮೊಕದ್ದಮೆಯಲ್ಲಿ ಶ್ರೀ ಅರವಿಂದರ ಪರವಾಗಿ ಚಿತ್ತರಂಜನದಾಸ್ ಅವರು ಮಂಡಿಸಿದ ವಾದ ಆ ಪರ್ವಕಾಲದ ಒಂದು ಮೈಲಿಗಲ್ಲೆನಿಸಿತು. ದಾಸ್ ಅವರು ತಮ್ಮ ವಾದದ ಸಮಾರೋಪಕ್ಕೆ ಒಂಬತ್ತು ದಿನಗಳನ್ನು ತೆಗೆದುಕೊಂಡರು. ದಾಸ್ ಅವರು ಆ ವಾದದ ಸಂದರ್ಭದಲ್ಲಿ ಆಡಿದ ಮಾತುಗಳು ಪರೋಕ್ಷವಾಗಿ ಶ್ರೀ ಅರವಿಂದರ ಔನ್ನತ್ಯಕ್ಕೂ ವ್ಯಾಖ್ಯಾನವೆನ್ನಬಹುದು:
“ನನ್ನ ವಿನಂತಿ ಇದು: ಯಾವ ವ್ಯಕ್ತಿಯ ಮೇಲೆ ಆಪಾದನೆ ಹೊರಿಸಲಾಗಿದೆಯೋ ಅವರ ಬಗ್ಗೆ ವಿಚಾರಣೆ ನಡೆಸಲರ್ಹವಾದದ್ದು ಇಲ್ಲಿರುವ ನ್ಯಾಯಾಲಯ ಮಾತ್ರವಲ್ಲ; ಇತಿಹಾಸದ ಉನ್ನತ ನ್ಯಾಯಾಲಯದ ಮುಂದೆ ಅವರು ನಿಂತಿದ್ದಾರೆ. ನಾನು ಹೇಳುವುದು ಇದು: ಈಗಿನ ವಿವಾದಗಳೆಲ್ಲ ಶಮನಗೊಂಡ ಮೇಲೆ, ಈಗಿನ ಅಶಾಂತಿಯೂ ಆಂದೋಲನವೂ ಮುಗಿದ ಎಷ್ಟೋ ವರ್ಷಗಳ ನಂತರವೂ, ಈ ಆಪಾದಿತ ವ್ಯಕ್ತಿ ನಿಧನರಾದ ಮೇಲೂ ಅವರನ್ನು ದೇಶಭಕ್ತಿಯ ಕಾವ್ಯರ್ಷಿ ಎಂದೂ ರಾಷ್ಟ್ರೀಯತೆಯ ಪ್ರವಾದಿ ಎಂದೂ ಅಸೀಮ ಮಾನವಪ್ರೇಮಿ ಎಂದೂ ಈ ಲೋಕವು ಗೌರವಿಸಲಿದೆ. ಅವರು ಈ ಭೌತಜಗತ್ತಿನಿಂದ ನಿರ್ಗಮಿಸಿದ ಮೇಲೆ ವರ್ಷಗಳು ಕಳೆದ ಮೇಲೂ ಅವರ ಮಾತುಗಳ ಪ್ರತಿಧ್ವನಿಯು ಭಾರತದಲ್ಲಿ ಮಾತ್ರವಲ್ಲದೆ ಸಮುದ್ರಗಳಾಚೆಯ ದೂರದೇಶಗಳಲ್ಲಿಯೂ ಮೊಳಗುತ್ತಿರುತ್ತದೆ. ಆದ್ದರಿಂದಲೇ ನಾನು ವಿನಂತಿ ಮಾಡುತ್ತಿರುವುದು – ಅವರು ಈ ನ್ಯಾಯಾಲಯದ ಮುಂದೆಯಷ್ಟೆ ನಿಂತಿಲ್ಲ, ಇತಿಹಾಸದ ನ್ಯಾಯಾಲಯದ ಮುಂದೆ ನಿಂತಿದ್ದಾರೆ – ಎಂಬುದನ್ನು ಮನಗಂಡು ನೀವು ತೀರ್ಪನ್ನು ನೀಡಬೇಕಾಗಿದೆ.”
೧೯೦೯ರ ಮೇ ೬ರಂದು ಶ್ರೀ ಅರವಿಂದರನ್ನು ನಿರಪರಾಧಿ ಎಂದು ಘೋಷಿಸಿ ಅವರನ್ನು ನ್ಯಾಯಾಧೀಶ ಬೀಚ್ಕ್ರ್ಯಾಫ್ಟ್ ಬಿಡುಗಡೆಗೊಳಿಸಿದ. ಅಲ್ಲಿಂದ ಒಂದು ವರ್ಷದ ನಂತರ ಶ್ರೀ ಅರವಿಂದರು ಕೊಲ್ಕತಾದಿಂದ ನಿಷ್ಕ್ರಮಿಸಿ ಪುದುಚೇರಿಗೆ ಹೋಗಿ ನೆಲೆಸಿದುದು (ಏಪ್ರಿಲ್ ೧೯೧೦), ಅಲ್ಲಿಂದಾಚೆಯ ಅವರ ಅಧ್ಯಾತ್ಮ ಸಾಧಕ ಜೀವನ, ೧೯೫೦ರ ಡಿಸೆಂಬರ್ ೫ರಂದು ಅವರ ದೇಹತ್ಯಾಗ – ಇವೆಲ್ಲ ಸುವಿದಿತ.
`ಸನಾತನಧರ್ಮ’ ಎಂದರೆ ರಾಷ್ಟ್ರೀಯತೆಯೇ
ಸ್ವಾತಂತ್ರ್ಯಪ್ರಾಪ್ತಿಗೆ ಅವಶ್ಯವಾದ ಚಿಚ್ಛಕ್ತಿಯು ಸನಾತನಧರ್ಮದಲ್ಲಿ ಇದೆಯೆಂಬುದೂ ಭಾರತದಮಟ್ಟಿಗೆ ರಾಷ್ಟ್ರೀಯತೆಯನ್ನು ಕೇವಲ ವ್ಯಾವಹಾರಿಕ ಕಕ್ಷೆಯಲ್ಲಿ ಕಲ್ಪಿಸುವುದು ಅಸಾಧ್ಯವೆಂದೂ ದೃಢವಾಗಿ ಪ್ರತಿಪಾದಿಸಿದವರು ಶ್ರೀ ಅರವಿಂದರು. ಇದನ್ನೇ ಅವರು ತಮ್ಮ ಪ್ರಸಿದ್ಧ ಉತ್ತರಪಾಡಾ ಭಾಷಣದಲ್ಲಿ (೩೦-೫-೧೯೦೯) ಅವಿಸ್ಮರಣೀಯ ರೀತಿಯಲ್ಲಿ ಸೂತ್ರಿಸಿದ್ದಾರೆ:
“ನಾನು (ಕಳೆದ ವರ್ಷ) ಈ ಚಳವಳಿ ರಾಜಕೀಯವಾದುದಲ್ಲವೆಂದೂ, ರಾಷ್ಟ್ರೀಯತಾವಾದವು ರಾಜಕಾರಣವಲ್ಲವೆಂದೂ ಅದು ಒಂದು ಧರ್ಮ, ಪಂಥ, ಶ್ರದ್ಧೆ ಎಂದೂ ಹೇಳಿದ್ದೆ. ಈಗ ನಾನು ಅದನ್ನು ಪುನರುಚ್ಚರಿಸುತ್ತೇನೆ; ಆದರೆ ಅದನ್ನು ಬೇರೊಂದು ರೀತಿಯಲ್ಲಿ ಹೇಳುತ್ತೇನೆ: ರಾಷ್ಟ್ರೀಯತೆಯು ಒಂದು ಧರ್ಮ, ಶ್ರದ್ಧೆ, ನಂಬಿಕೆ ಎಂದಲ್ಲ, ಸನಾತನಧರ್ಮವೇ ರಾಷ್ಟ್ರೀಯತೆ; ಇದೇ ನಾನು ನಿಮಗೆ ನೀಡಬೇಕಿರುವ ಸಂದೇಶ.”
ಚೈತನ್ಯ ಅಥವಾ ಶಕ್ತಿ ಎಂಬುದನ್ನು ಪಾಶ್ಚಾತ್ಯ ನಾಗರಿಕತೆಯಲ್ಲಿ ಬಾಹ್ಯ ವ್ಯಾವಹಾರಿಕ ಅರ್ಥದಲ್ಲಿ ವ್ಯಾಖ್ಯಾನಿಸಲಾಗಿದೆ. ಆದರೆ ಆರ್ಷಧರ್ಮದ ಪರಿಭಾಷೆಯಲ್ಲಿ ತೇಜಸ್ಸು ಎಂದರೆ ಆಧ್ಯಾತ್ಮಿಕತೆ; ಅಂತಃಸ್ಥವಾಗಿರುವ ವಿಶ್ವನಿಯಂತ್ರಕ ಶಕ್ತಿಯೊಡನೆ ಸಂಯೋಗಗೊಳ್ಳುವುದರಿಂದ ಉತ್ಪನ್ನವಾಗುವ ವಿಚಾರಗಳನ್ನೂ ಕ್ರಿಯೆಗಳನ್ನೂ ಶಕ್ತಿ ಎಂದು ಆರ್ಷ ಪರಂಪರೆಯು ಭಾವಿಸಿದೆ. ಈ ಶಕ್ತಿಯಾದರೋ ವ್ಯಾವಹಾರಿಕ ನೆಲೆಯಲ್ಲಿ ಮಾತ್ರವಲ್ಲದೆ ಮಾನವಾತೀತ ಸ್ತರದಲ್ಲಿಯೂ ಗತಿಶೀಲವಾಗಿರುತ್ತದೆ. ಈ ಅಂತಃಶಕ್ತಿಯನ್ನು ಪುನರ್ಜಾಗೃತಗೊಳಿಸುವುದೇ ತತ್ಕಾಲೀನ ಹಾಗೂ ದೀರ್ಘಕಾಲೀನ ಸಮಸ್ಯೆಗಳಿಗೆ ಪರಿಹಾರವೆಂದು ಶ್ರೀ ಅರವಿಂದರು ಸತತವಾಗಿ ಪ್ರತಿಪಾದಿಸಿದರು. ಇದರ ಅನುಮಿತಿಯಾಗಿ ಅವರು ಮಂಡಿಸಿದುದು ದೈನಂದಿನ ಮತ್ತು ಆಧ್ಯಾತ್ಮಿಕಗಳ ನಡುವಣ ಅಂತರವನ್ನು ಹ್ರಸ್ವಗೊಳಿಸುತ್ತ ಹೋಗಬೇಕು – ಎಂದು. ಭಗವದ್ಗೀತೆಯ ಪ್ರಮುಖ ಬೋಧೆಯಾದರೂ ಇದೇ. ಇದನ್ನೇ ಶಬ್ದಾಂತರಗಳಲ್ಲಿ ಹೇಳಬೇಕೆಂದರೆ: ಯಾಂತ್ರಿಕ-ಬಾಹ್ಯ ವ್ಯವಸ್ಥೆಗಳ ಮೂಲಕ ಜಗತ್ತಿನ ಪುನರ್ವಿರಚನೆ ಸಾಧ್ಯವೆಂದು ಹೊರಟಿರುವವರು ಪಾಶ್ಚಾತ್ಯರಾದರೆ ಧರ್ಮಾಧಾರಿತ ಅಂತಶ್ಚೇತನ ಜಾಗರಣದಿಂದ ಮಾತ್ರ ಸಮಗ್ರ ಪರಿವರ್ತನೆ ಶಕ್ಯವೆಂದು ಹಿಂದೂಧರ್ಮ ಪರಿಗಣಿಸಿದೆ. ಹೀಗೆ ಭಾರತೀಯರು ಮಹತ್ತ್ವ ಕೊಡಬೇಕಾದುದು ತಮ್ಮ ಅಸ್ಮಿತೆಯ ಅರಿವಿಗೆ.
ಬ್ರಿಟಿಷ್ ಪ್ರಭುತ್ವವನ್ನು ಕ್ಷಾತ್ರರೀತಿಯಲ್ಲಿ ಎದುರಿಸಬೇಕಾದುದರ ಅನಿವಾರ್ಯತೆಯನ್ನು ಪ್ರಖರವಾಗಿ ಮಂಡಿಸಿದುದು ಮಾತ್ರವಲ್ಲದೆ ಶ್ರೀ ಅರವಿಂದರು ಈ ಪ್ರಕ್ರಿಯೆಗೆ ಸೈದ್ಧಾಂತಿಕ ತಳಹದಿಯನ್ನೂ ನಿರ್ಮಿಸಿದರು. ಇದನ್ನು ಶ್ರೀ ಅರವಿಂದರ ಅನನ್ಯವಾದ ಕೊಡುಗೆ ಎಂದು ಒಪ್ಪಲೇಬೇಕು.
ಭೌತಶಾಸ್ತ್ರದಲ್ಲಿ ಶಕ್ತಿಯನ್ನು ಸುಪ್ತರೀತಿಯದು (ಪೊಟೆನ್ಶಿಯಲ್) ಮತ್ತು ಪ್ರಕಟರೀತಿಯದು (ಕಿನೆಟಿಕ್) ಎಂದು ವಿಂಗಡಿಸಲಾಗಿದೆಯಷ್ಟೆ. ಪಾಶ್ಚಾತ್ಯ ಜಗತ್ತಿನಲ್ಲಿ ತಂತ್ರಜ್ಞಾನವಿಕಾಸವು ಒಂದು ಹಂತದಿಂದ ಆಚೆಗೆ ತನ್ನದೇ ವೇಗ ಪಡೆದುಕೊಂಡು ನಿರಂಕುಶವಾಗಿ ಮುಂದುವರಿದಿರುವುದರಿಂದ ಅದರ ಸತ್ತ್ವವು ಶಿಥಿಲಗೊಳ್ಳತೊಡಗಿದೆ. ಭಾರತದಲ್ಲಿ ಆನ್ವಯಿಕ ಅಪರ್ಯಾಪ್ತತೆ ಕಂಡರೂ ಅಂತಃಸತ್ತ್ವವು ಜೀವಂತವಾಗಿದೆ.
ಶ್ರೀ ಅರವಿಂದರ ವೈಚಾರಿಕ ಪಯಣ
ಸನಾತನಧರ್ಮದ ಸ್ವರೂಪದ ಬಗೆಗೆ ಶ್ರೀ ಅರವಿಂದರು ವ್ಯಕ್ತಪಡಿಸಿದ ಅಭಿಪ್ರಾಯಗಳು ಕೇವಲ ಭಾವನಾಜನಿತವೋ ಅಥವಾ ಬೇರೆಯವರು ನೀಡಿದ್ದ ಹೇಳಿಕೆಗಳನ್ನು ಆಧರಿಸಿದವೋ ಆಗಿರಲಿಲ್ಲ. ವೈಚಾರಿಕ ಪಯಣವನ್ನು ಕೈಗೊಳ್ಳುವುದಕ್ಕೆ ಮೊದಲು ನಿಶ್ಚಯದಾರ್ಢ್ಯವನ್ನು ಗಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅವರು ವೇದಸಂಹಿತೆಗಳೇ ಮೊದಲಾದ ಆಕರಗಳನ್ನು ಆಮೂಲಾಗ್ರವಾಗಿ ಮತ್ತು ಆಳವಾಗಿ ಅಧ್ಯಯನ ಮಾಡಿ ಮಂಥನ ನಡೆಸಿದರು. ಪರಿಣಾಮವಾಗಿ ಅಲ್ಲಿಯವರೆಗೆ ಅನ್ಯರಿಂದ – ವಿಶೇಷವಾಗಿ ಪಾಶ್ಚಾತ್ಯರಿಂದ – ವ್ಯಕ್ತಗೊಂಡಿದ್ದ ಅರ್ಥನಿರ್ಣಯಗಳು ಆಳವಿಲ್ಲದವೆಂದು ಅವರಿಗೆ ಮನವರಿಕೆಯಾಯಿತು. ಎರಡನೆಯದಾಗಿ ಋಜ್ವರ್ಥಾನುಸಂಧಾನವು ಕೇವಲ ಶಬ್ದಾಧಾರಿತವಾಗಿ ಸಾಗಲಾರದೆಂಬ, ಮತ್ತು ಸ್ವೀಯ ಆಂತರಂಗಿಕ ಸಾಧನೆಯಿಂದ ಉಪಬೃಂಹಿತವಾದಾಗ ಮಾತ್ರ ಶಬ್ದಶಾಸ್ತ್ರಾದಿ ಪರಿಕರಗಳು ಉಪಯುಕ್ತವಾಗಬಲ್ಲವೆಂಬ ಸ್ಫುಟತೆ ಅವರಿಗೆ ಉಂಟಾಯಿತು. ಇದರ ಫಲವಾಗಿ ಅವರು ಸನಾತನಧರ್ಮ ಕುರಿತ ಅಧಿಕೃತ ಪರಾಮರ್ಶನೆ ನೀಡಿದುದಲ್ಲದೆ ವೇದಾರ್ಥಾನುಸಂಧಾನದ ಹೊಸದೊಂದು ಪ್ರಸ್ಥಾನವನ್ನೇ ಆವಿಷ್ಕರಿಸಿದರು. ಮಂತ್ರಗಳ ತಾತ್ಪರ್ಯವು ಉತ್ಕರ್ಷದಲ್ಲಿಯೇ ಹೊರತು ವಿಶಿಷ್ಟ ಕಲಾಪಗಳಲ್ಲಿ ಅಲ್ಲವೆಂಬುದನ್ನು ಸ್ಫುಟಪಡಿಸಿ ಸಾಂಕೇತಿಕಾರ್ಥದ ಉಪಾದೇಯತೆಯನ್ನು ಮಂಡಿಸಿದರು. ಕಾಲಕ್ರಮದಲ್ಲಿ ಲುಪ್ತಗೊಂಡಿದ್ದ ಅರ್ಥನಿಗೂಹನವನ್ನು ಪುನರುಜ್ಜೀವಿಸಿದರು.
ದೇವತೆಗಳಿಗೂ ದಸ್ಯು ಪಣಿ ಮೊದಲಾದವರಿಗೂ ನಡುವೆ ಸಮರ ನಡೆಯಿತೆಂಬ ವೈದಿಕ ವರ್ಣನೆಯ ಇಂಗಿತವು ಬೆಳಕಿಗೆ ತಡೆಯನ್ನೊಡ್ಡುತ್ತಿರುವ ತಾಮಸಿಕ ಶಕ್ತಿಗಳ ದಮನ – ಎಂಬುದು ಕಾವ್ಯಸಾಹಿತ್ಯದ ಪ್ರಾಥಮಿಕ ಪರಿಚಯವಿದ್ದವರಿಗೂ ಗೋಚರಿಸೀತು. ನವ-ಸರ್ಜನ ಕ್ರಿಯೆಗೆ ದಾರಿಮಾಡುವ ರಾಜಸಿಕ `ಯುದ್ಧ’ವು ಆಕ್ಷೇಪಾರ್ಹವೆನಿಸುವುದಿಲ್ಲ. ಈ ಸೂಕ್ಷ್ಮತೆಯ ಬಗೆಗೆ ಸ್ಪಷ್ಟತೆ ಇದ್ದರೆ ಹಲವಾರು ಬೌದ್ಧಿಕ ಪ್ರಶ್ನೆಗಳಿಗೆ ಸಮಾಧಾನ ಸಿಗುತ್ತದೆ. ಸಾತ್ತ್ವಿಕ `ಸಮರ’ವು ತಾನು ನಾಶಮಾಡುವುದಕ್ಕಿಂತ ಹೆಚ್ಚಿನದನ್ನು ಸೃಷ್ಟಿ ಮಾಡುತ್ತದೆ – ಎಂದು ಗ್ರಹಿಸಬೇಕು.
ಜಗತ್ತಿನ ಈ ಆಧಾರತತ್ತ್ವವನ್ನು ಪರಿಸ್ಫುಟಗೊಳಿಸಬೇಕೆಂದೇ ಭಗವದ್ಗೀತೆಯು ಹೊಮ್ಮಿರುವುದು.
ಆಧ್ಯಾತ್ಮಿಕತೆ ಮಾತ್ರ ತಾರಕವಾಗಬಲ್ಲದು
ಈ ಗ್ರಹಿಕೆಯ ಕಾರಣದಿಂದಲೇ ಶ್ರೀ ಅರವಿಂದರು ರಾಜಕೀಯ ಪ್ರಕ್ರಿಯೆಗಳನ್ನೂ ಆಧ್ಯಾತ್ಮಿಕ-ತತ್ತ್ವಶಾಸ್ತ್ರೀಯ ನುಡಿಗಟ್ಟಿನಲ್ಲಿ ನಿವೇಶಗೊಳಿಸಿದುದು. ಈ ಚಿಂತನೆಯೇನೋ ಪಾರಂಪರಿಕವಾದುದೇ. ಅದನ್ನು ಸಮಕಾಲೀನ ಸಂದರ್ಭಕ್ಕೆ ಅನುಸ್ಯೂತವಾಗಿ ಸ್ಫೋಟಗೊಳಿಸಿದುದು ಶ್ರೀ ಅರವಿಂದರ ವಿಶಿಷ್ಟತೆ.
ಈ ಚಿಂತನಕಕ್ಷೆಯನ್ನು ವಿಸ್ತರಿಸಿ ಸಮಗ್ರಗೊಳಿಸಿ ಶ್ರೀ ಅರವಿಂದರು ಇಡೀ ಮಾನವತೆಯ ಉತ್ಥಾನಕ್ಕೆ ಆಧ್ಯಾತ್ಮಿಕತೆಯೇ ಮಾರ್ಗವೆಂದು ಅವರ ರಾಜಕೀಯ ನಿವೃತ್ತಿಯ (೧೯೧೦ ಫೆಬ್ರುವರಿ) ತರುವಾಯ ಪುದುಚೇರಿ ವಾಸ್ತವ್ಯದ ವರ್ಷಗಳಲ್ಲಿ ಸೈದ್ಧಾಂತಿಕ ಉಪಪತ್ತಿ-ಪರಿಷ್ಕರಣಗಳೊಂದಿಗೆ ಪ್ರಸ್ಫುಟಗೊಳಿಸಿದುದು ಸುವಿದಿತ. ಆಗ ಎಂದರೆ ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಆಧುನಿಕತೆಯೆಂದೂ ಪ್ರಗತಿಯೆಂದೂ ಅತಿಶಯಿಸಲ್ಪಟ್ಟಿದ್ದ ಸಂಗತಿಗಳು ಕ್ರಮೇಣ ಹಿಮ್ಮೊಗವಾಗಿ ಹೆಚ್ಚು ಪ್ರೌಢವೂ ಸಾರ್ವತ್ರಿಕವೂ ಆದ ಮಾನವತಾವಾದಕ್ಕೆ ದಾರಿಮಾಡಿಯಾವು – ಎಂಬುದು ಶ್ರೀ ಅರವಿಂದರ ದರ್ಶನವಾಗಿದ್ದಿತು.
ಇದಕ್ಕೆ ಉಪಸ್ತಂಭಕವಾಗಿ ಶಿಕ್ಷಣ, ಕಾವ್ಯ, ಕಲೆ ಮೊದಲಾದ ಸಂಸ್ಕಾರಾಂಗಗಳನ್ನು ಉನ್ನತೀಕರಿಸುವ ವಿಧಾನಗಳನ್ನು ಶ್ರೀ ಅರವಿಂದರು ಆವಿಷ್ಕರಿಸಲು ಪ್ರಯತ್ನಶೀಲರಾದರು. ಶಿಕ್ಷಣಕ್ಷೇತ್ರದ ಸ್ವದೇಶೀಕರಣ, ಭಾರತೀಯ ಕಲೆಯ ಪುನರುಜ್ಜೀವನ – ಇವು ಶ್ರೀ ಅರವಿಂದರ ದೃಷ್ಟಿಯಲ್ಲಿ ಆದ್ಯತೆಗೆ ಅರ್ಹವೆನಿಸಿದವು. ಸ್ವಾಮಿ ವಿವೇಕಾನಂದರಂತೆ ಶ್ರೀ ಅರವಿಂದರೂ ನಿಜಶಿಕ್ಷಣದ ಸ್ವರೂಪದ ಬಗೆಗೆ ವಿಸ್ತಾರವಾಗಿ ಬರೆದಿದ್ದಾರೆ. ಭಾರತೀಯರ ಮಾನಸಿಕತೆಯನ್ನು ತತ್ಕಾಲೀನ ಸಾಂದರ್ಭಿಕತೆಯಿಂದ ಮುಕ್ತಗೊಳಿಸಿ ಸಾರ್ವತ್ರಿಕೀಕರಿಸುವುದರ ಮೂಲಕ ಅದರ ಅಂತಃಸತ್ತ್ವದ ಪೂರ್ಣ ಪ್ರಕಟೀಕರಣಕ್ಕೆ ದಾರಿ ಮಾಡಬೇಕು – ಎಂಬುದು ಶ್ರೀ ಅರವಿಂದರ ಸಂದೇಶ.
ಸ್ವಪ್ನಪಂಚಕ
ಭಾರತ ಮಾತ್ರವಲ್ಲ, ಇಡೀ ಜಗತ್ತಿನ ನಿಜವಾದ ಅಭ್ಯುದಯವು ಆಧ್ಯಾತ್ಮಿಕತೆಯ ಮತ್ತು ಸೌಹಾರ್ದದ ಆಧಾರದ ಮೇಲೆ ಮಾತ್ರ ಶಕ್ಯ – ಎಂಬುದು ಶ್ರೀ ಅರವಿಂದರ ವಿಶ್ಲೇಷಣೆಯಾಗಿದ್ದಿತು. ವಾಣಿಜ್ಯಾದಿ ಕ್ಷೇತ್ರಗಳಲ್ಲಂತೂ ಈಗಾಗಲೆ ಭೌಗೋಳಿಕ ಗಡಿಗಳು ಅರ್ಥಶೂನ್ಯವೆನಿಸಿವೆ. ಇದೀಗ ವ್ಯಾಪಕವಾಗಿರುವ ಸ್ಪರ್ಧಾತ್ಮಕತೆ ಮತ್ತು ಪ್ರಕ್ಷೆಭೆಗಳಿಂದ ಎಲ್ಲ ದೇಶಗಳೂ ಆಯಾಸಗೊಂಡಿವೆ. ಇಂತಹ ಸನ್ನಿವೇಶದಲ್ಲಿ ಜಗತ್ಸ್ಥಿತಿಯನ್ನು ಉತ್ತಮವಾಗಿಸಬಲ್ಲ ದಿಗ್ದರ್ಶನವನ್ನು ನೀಡುವ ಸಾಮರ್ಥ್ಯವನ್ನು ಭಾರತ ಸಿದ್ಧಿಸಿಕೊಳ್ಳುವುದು ಅಶಕ್ಯವಲ್ಲ – ಎಂಬುದು ಶ್ರೀ ಅರವಿಂದರ ಪರಾಮರ್ಶನೆಯಾಗಿದ್ದಿತು. ಆದರೆ ಇಂತಹ ಸ್ಥಿತಿಯು ಬುದ್ಧಿಪೂರ್ವಕ ಪ್ರಯತ್ನಗಳನ್ನು ಅಪೇಕ್ಷಿಸುತ್ತದೆ. ಈ ಪ್ರಯತ್ನದ ಹೃದ್ಭಾಗವೇನೆಂಬುದನ್ನು ಶ್ರೀ ಅರವಿಂದರು `ನನ್ನ ಕನಸುಗಳು’ ಎಂಬ ಅವರ ೧೯೪೭ ಆಗಸ್ಟ್ ೧೫ರ ಸಂದೇಶದಲ್ಲಿ ಸೂತ್ರೀಕರಿಸಿರುವುದು ಪ್ರಸಿದ್ಧವೇ ಆಗಿದೆ. ಆನುಕ್ರಮಿಕವೂ ಆದ ಈ ಸ್ವಪ್ನಪಂಚಕವನ್ನು ಹೀಗೆ ಸಂಗ್ರಹಿಸಬಹುದು:
- ಇದೀಗ ಭಾರತ ದಾಸ್ಯಮುಕ್ತವಾಗಿದ್ದರೂ ಸುಸಂಘಟಿತವಾಗಿಲ್ಲದಿರುವುದು ಅಭ್ಯುದಯಕ್ಕೆ ಪೋಷಕವಾದ ಸ್ಥಿತಿಯಲ್ಲ. ಆಂತರಿಕ ಮತ್ತು ಬಾಹ್ಯ ಸುಸಂಬದ್ಧತೆ ಏರ್ಪಡಬೇಕಾಗಿದೆ. ದೇಶವಿಭಜನೆಯನ್ನೂ ಶಾಶ್ವತವೆಂದು ಭಾವಿಸಬೇಕಾಗಿಲ್ಲ. (ಈ ಕಲ್ಪನೆ ಅವಾಸ್ತವವಲ್ಲವೆಂಬುದನ್ನು ಜರ್ಮನಿಯ ಏಕೀಕರಣ ಸೂಚಿಸುತ್ತದೆಂದು ಭಾವಿಸಲಾಗದೆ?)
- ಏಷ್ಯ ಖಂಡದ ಭಾರತೇತರ ಭಾಗಗಳೂ ಮುಕ್ತಗೊಳ್ಳಬೇಕು, ಸಮೃದ್ಧಿಂಗತವಾಗಬೇಕು. ಇಡೀ ಯೂರೋಪಿನಲ್ಲಿ ಒಂದೇ ಒಂದು (ಅದೂ ಗುಜರಿ ರೀತಿಯದೇ) ನಾಗರಿಕತೆ ಇದ್ದರೆ ಏಷ್ಯವೊಂದರಲ್ಲಿಯೇ ಮೂರು ನಾಗರಿಕತೆಗಳು ಬೆಳೆದಿರುವುದು ಮಾತ್ರವಲ್ಲದೆ ಇವು ಸ್ವೋಪಜ್ಞವೂ ವ್ಯಾಪಕವೂ ಆಗಿವೆ. ಈ ಹಿನ್ನೆಲೆಯಲ್ಲಿ ಯೂರೋಪಿನ ಭೌತವಾದಕ್ಕೆ ಪ್ರತಿಭಾರವು ಏಷ್ಯದಲ್ಲಿ ಉದ್ಗಮಗೊಳ್ಳಬೇಕಾಗಿದೆ.
- ಜಾಗತಿಕ ಐಕ್ಯಭಾವ ಉಂಟಾದಲ್ಲಿ ಮಾತ್ರ ಸಣ್ಣ ರಾಷ್ಟ್ರಗಳು ಉಳಿಯಬಲ್ಲವು. ಇಡೀ ಮಾನವತೆಯ ಅಂತಃಸ್ಥ ಏಕತೆಯ ಅನುಭವವು ಸಮಸ್ತ ವಿಶ್ವದ ಅಭ್ಯುದಯಕ್ಕೆ ವೇಗವರ್ಧಕವಾಗಬಲ್ಲದು. ಈ ಪ್ರಕ್ರಿಯೆಗೆ ನೆರವಾಗಬಲ್ಲವರು ಆಧ್ಯಾತ್ಮಿಕ ವಿಕಾಸವನ್ನು ಗ್ರಹಿಸಬಲ್ಲ ಧೀಮಂತರು.
- ಭಾರತದ ವೇದಮೂಲ ಆಧ್ಯಾತ್ಮಿಕತೆಯ ಸರ್ವಂಕಷತೆಯ ಸೋಪಪತ್ತಿಕ ಪ್ರಚಾರ ಆಗಬೇಕು.
- ಅಂತಿಮ ಮಜಲೆಂದರೆ ಮಾನವನ ಪ್ರಜ್ಞೆಯನ್ನೇ ಉನ್ನತವೂ ಉದಾತ್ತವೂ ಆದ ಸ್ಥಿತಿಗೆ ಎತ್ತರಿಸುವುದರ ಮೂಲಕ ವ್ಯಕ್ತಿಯ ಮತ್ತು ಸಮಾಜದ ಆದರ್ಶಸ್ಥಿತಿಯನ್ನು ಸಾಧಿಸುವುದು. ಇದನ್ನು `ಅಧಿಮಾನಸ’ (ಸುಪ್ರಮೆಂಟಲ್) ಸ್ಥಿತಿ ಎಂದು ಶ್ರೀ ಅರವಿಂದರು ವಿಶೇಷಿಸಿದ್ದಾರೆ.
ತಾತ್ಪರ್ಯದಲ್ಲಿ: ವೇದದಲ್ಲಿ ಅಂತರ್ನಿಹಿತವಾಗಿದ್ದ ಕಲ್ಪನೆಯ ಆನುಕ್ರಮಿಕ ಸಾಕ್ಷಾತ್ಕರಣವೇ ಇದು. ಈ ವಿಕಾಸವನ್ನು ಭಾರತವು ಸಾಧಿಸಿದಲ್ಲಿ ಅದನ್ನು ನಿಜವಾದ ಸ್ವಾತಂತ್ರ್ಯ ಎನ್ನಬಹುದು – ಎಂಬುದು ಶ್ರೀ ಅರವಿಂದರ ಪರಾಮರ್ಶನೆ.