ಇತ್ತೀಚೆಗೆ (ಜುಲೈ ೨೭) ಇಹಲೋಕ ತ್ಯಜಿಸಿದ ‘ಭಾರತರತ್ನ’ ಡಾ. ಅಬ್ದುಲ್ ಕಲಾಂ ಹಾಗೂ ಪ್ರತಿಭಾನ್ವಿತ ರಾಕೆಟ್ ಇಂಜಿನಿಯರ್ ಸಿ.ಆರ್. ಸತ್ಯ ಅವರ ಒಡನಾಟ, ಸ್ನೇಹ ಸರಿಸುಮಾರು ೫೦ ವರ್ಷಗಳಷ್ಟು ದೀರ್ಘಕಾಲದ್ದು. ಕೇರಳದ ತಿರುವನಂತಪುರದ ಬಳಿಯ ತುಂಬಾ ರಾಕೆಟ್ ಉಡಾವಣೆ ಕೇಂದ್ರಕ್ಕೆ ಒಬ್ಬ ರಾಕೆಟ್ ಇಂಜಿನಿಯರಾಗಿ ನೇಮಕಗೊಂಡಾಗಿನಿಂದ ಆರಂಭಗೊಂಡು, ಡಾ. ಕಲಾಂ ಅವರನ್ನು ಒಬ್ಬ ಸಹೋದ್ಯೋಗಿಯಾಗಿ, ಆತ್ಮೀಯ ಸ್ನೇಹಿತನಾಗಿ ಅತ್ಯಂತ ಸನಿಹದಿಂದ ಕಂಡವರು ಸಿ.ಆರ್. ಸತ್ಯ.
ಮೇಲಧಿಕಾರಿ, ಸ್ನೇಹಿತ ಅಬ್ದುಲ್ ಕಲಾಂ ಅವರೊಂದಿಗಿನ ತಮ್ಮ ಒಡನಾಟದ ದಿನಗಳನ್ನು ‘ಉತ್ಥಾನ’ದ ಓದುಗರಿಗಾಗಿಯೇ ವಿಶೇಷವಾಗಿ, ಸಿ.ಆರ್. ಸತ್ಯ ಇಲ್ಲಿ ಆತ್ಮೀಯವಾಗಿ ನೆನಪಿಸಿಕೊಂಡಿದ್ದಾರೆ.
ಇತ್ತೀಚೆಗೆ (ಜುಲೈ ೨೭) ಇಹಲೋಕ ತ್ಯಜಿಸಿದ ಅಬ್ದುಲ್ ಕಲಾಂ ಒಂದು ರೀತಿಯ ದಾಖಲೆಯನ್ನು ಸೃಷ್ಟಿಸಿದ್ದಾರೆ ಎನ್ನಬಹುದು. ಒಬ್ಬ ಉಪನ್ಯಾಸಕರಾಗಿದ್ದ ಅವರನ್ನು ಕಳೆದುಕೊಂಡವರು ಒಬ್ಬರಲ್ಲ, ಇಬ್ಬರಲ್ಲ, ಲಕ್ಷಾಂತರ ವಿದ್ಯಾರ್ಥಿಗಳು. ಅವರ ಅಗಲಿಕೆಯಿಂದ ಮೂರು ವರ್ಷದ ಮಕ್ಕಳಿಂದ ಹಿಡಿದು ಕಾಲೇಜು, ಸ್ನಾತಕೋತ್ತರ ಮಟ್ಟದ ವಿದ್ಯಾರ್ಥಿಗಳೂ ಕಂಬನಿಯಿಟ್ಟಿದ್ದಾರೆ. ಇಷ್ಟು ವ್ಯಾಪ್ತಿಯಿರುವ ಶಿಷ್ಯಕೋಟಿಯನ್ನು ಪಡೆಯಲು ಒಬ್ಬ ವ್ಯಕ್ತಿಗೆ ಸಾಧ್ಯವೇ ಎಂದು ಆಶ್ಚರ್ಯವಾಗುತ್ತದೆ. ಆದರೆ ಅವರ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಅವರ ಅಂತರಂಗದ ಗುಣಲಕ್ಷಣವೇ ಆಗಿದೆ ಎಂದು ತಿಳಿಯುತ್ತದೆ.
ರಾಮೇಶ್ವರದ ಒಬ್ಬ ಸಾಮಾನ್ಯ ಮೀನುಗಾರರ ಕುಟುಂಬದಲ್ಲಿ ಹುಟ್ಟಿದ ಅವರು ಉನ್ನತ ಶಿಕ್ಷಣವನ್ನು ಪಡೆದು ದೇಶದ ರಾಕೆಟ್, ರಕ್ಷಣಾ ತಂತ್ರಜ್ಞಾನಗಳಿಗೆ ಮಹತ್ತರವಾದ ಕೊಡುಗೆಯನ್ನು ನೀಡಿದರು. ಕೊನೆಗೆ ರಾಷ್ಟ್ರಪತಿ ಪಟ್ಟವನ್ನೂ ಅಲಂಕರಿಸಿದರು. ಅವರು ಕೊನೆಯಲ್ಲಿ ರಾಷ್ಟ್ರಪತಿ ಭವನದಿಂದ ನಿವೃತ್ತರಾಗಿ ಹೊರಗೆ ಹೊರಟಿದ್ದು ಉಪನ್ಯಾಸಕರಾಗಿಯೇ. ಅದರಲ್ಲೂ ಅವರು ಲಕ್ಷಾಂತರ ಚಿಕ್ಕ ಮಕ್ಕಳನ್ನು ಉದ್ದೇಶಿಸಿ ನೀಡುತ್ತಿದ್ದ ಹಿತವಚನಗಳು ಕೇಳಿದವರಿಗೆ ಬಹಳ ಉತ್ತೇಜನಕಾರಿಯೆನಿಸುತ್ತಿತ್ತು. ಅವರು ಅಸಂಖ್ಯಾತ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿದ್ದರು. ಅಲ್ಲೆಲ್ಲ ಅವರು ಮಾಡುತ್ತಿದ್ದ ಉಪನ್ಯಾಸಗಳಲ್ಲಿ ಬಹಳ ಮುಖ್ಯವಾಗಿ ಹೇಳುತ್ತಿದ್ದುದು, ನೀವು, ನಿಮ್ಮ ಚಿಮ್ಮುವ ವಯಸ್ಸನ್ನು ವ್ಯರ್ಥಮಾಡದಿರಿ, ಚೆನ್ನಾಗಿ ಉಪಯೋಗಿಸಿಕೊಳ್ಳಿ; ಮತ್ತು ಸ್ವಚ್ಛ ಭೂಮಿ, ಪರಿಸರಕ್ಕೆ ನಿಮ್ಮ ಶ್ರಮವೂ ಇರಲಿ. ರಾಷ್ಟ್ರಧ್ವಜ ನಿಮ್ಮ ಹೃದಯದಲ್ಲಿ ಎಂದೂ ಹಾರುತ್ತಿರಲಿ. ದೇಶದ ಅಭಿವೃದ್ಧಿಗೆ, ಅಭ್ಯುದಯಕ್ಕೆ ಮನಸಾರೆ ದುಡಿಯುತ್ತಿರಿ – ಎಂದು. ಇದು ಅವರ ಮೂಲ ಸಂದೇಶವೇ ಆಗಿತ್ತು. ಹೀಗೆ ಹೇಳುತ್ತಿದ್ದ ಅವರಲ್ಲಿ ಯಾವ ರೀತಿಯ ಉತ್ಪ್ರೇಕ್ಷೆಯೂ ಕಾಣುತ್ತಿರಲಿಲ್ಲ. ಕಾರಣ ಅವರೇ ಈ ಮೌಲ್ಯಗಳಿಗೆ ರೂಪದರ್ಶಿಯಾಗಿದ್ದರು.
ತಮ್ಮ ಪ್ರೈಮರಿ, ಮಿಡ್ಲ್ಸ್ಕೂಲ್, ಕಾಲೇಜು ವಿದ್ಯಾಭ್ಯಾಸವನ್ನು ಬಹಳ ಬಡತನದಲ್ಲಿಯೇ ನಡೆಸಿದರು. ಒಬ್ಬ ವೈಮಾನಿಕ ತಂತ್ರಜ್ಞಾನಿಯಾದವನು ಸ್ನಾತಕೋತ್ತರ ಪದವಿಯನ್ನು ಪಡೆಯಲು ಧನಸಹಾಯವಿಲ್ಲದೆ ಅವರ ಅಕ್ಕ ತಮ್ಮ ಒಡವೆಗಳನ್ನು ಒತ್ತೆ ಇಟ್ಟು ಇವರನ್ನು ಓದಿಸಿದರು. ತಂದೆ ಮತ್ತು ತಾಯಿ ಹಾಗೂ ವಿದ್ಯೆಯನ್ನು ಧಾರೆ ಎರೆದ ಶಿಕ್ಷಕರು – ಇವರ ಬಗ್ಗೆ ಕಲಾಂ ಅವರಿಗೆ ಅತೀವ ಗೌರವ, ಪ್ರೀತಿಯಿತ್ತು. ಅವರು ವಿದ್ಯಾರ್ಥಿಗಳ ಸಭೆಯ ಸಭಾಂಗಣದಲ್ಲಿ ಯಾವಾಗ ಬಂದರೂ ಸಭಾಂಗಣದಲ್ಲಿ ಒಂದು ರೋಚಕ ಅನುಭವವಾಗುತ್ತಿತ್ತು. ಕಿಕ್ಕಿರಿದ ಮಕ್ಕಳು ‘ಕಲಾಂ ಅಜ್ಜ’ ಎಂದು ಕೈಚಾಚಿ ಅವರನ್ನು ನೋಡಲು ಬರುತ್ತಿದ್ದರು. ಕಲಾಂ ಅವರ ನಡತೆ, ಮಾತಿನಲ್ಲಿದ್ದ ಪ್ರೀತಿ, ಅವರ ಸರಳತೆ, ಮಕ್ಕಳನ್ನು ಮಾತ್ರವಲ್ಲ ಪೋಷಕರನ್ನೂ ಸೇರಿದಂತೆ ಎಲ್ಲರನ್ನೂ ಸೂರೆಗೊಳ್ಳುತ್ತಿತ್ತು.
ಕಟ್ಟಂಕಾಫಿ, ಉನ್ನಿಅಪ್ಪಂ
ನನಗೆ ಕಲಾಂ ಅವರ ಪರಿಚಯ ೫೦ ವರ್ಷಗಳ ಹಿಂದಿನದ್ದು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದುಕೊಂಡು, ಮುಂಬಯಿಯಲ್ಲಿ ಸ್ನಾತಕೋತ್ತರ ತರಬೇತಿ ಪಡೆದುಕೊಂಡಿದ್ದ ನನ್ನನ್ನು ಆಗತಾನೇ (೨ ವರ್ಷಗಳ ಹಿಂದೆ) ಸ್ಥಾಪನೆಗೊಂಡಿದ್ದ ‘ತುಂಬಾ ರಾಕೆಟ್ ಉಡಾವಣೆ ಕೇಂದ್ರ’ಕ್ಕೆ ಒಬ್ಬ ರಾಕೆಟ್ ಇಂಜಿನಿಯರ್ನನ್ನಾಗಿ ನೇಮಿಸಿದ್ದರು. ೧೯೬೫ರ ಜುಲೈ ೩೧ರಂದು ನಾನು ತುಂಬಾದ ನಿರ್ದೇಶಕರಾಗಿದ್ದ ಕನ್ನಡದವರೇ ಆದ ಡಾ|| ಎಚ್.ಜಿ.ಎಸ್. ಮೂರ್ತಿ ಅವರ ಕಚೇರಿಗೆ ಹೋದೆ. ಅವರು ಪಕ್ಕದಲ್ಲಿದ್ದ ಒಬ್ಬರಿಗೆ ನಿಮ್ಮಲ್ಲಿ ಕೆಲಸ ಮಾಡಲು ಒಬ್ಬ ಯುವಕ ಬಂದಿದ್ದಾನೆ ಎಂದರು. ಅವರು ತಕ್ಷಣ ಬಹಳ ಸಂತೋಷ. ನನ್ನ ಹೆಸರು ಅಬ್ದುಲ್ ಕಲಾಂ ಅಂತ ಎಂದು ಕೈಕುಲುಕಿ ಪರಿಚಯಿಸಿಕೊಂಡು ಒಬ್ಬ ಯುವ ಅನುಭವವಿಲ್ಲದ ಇಂಜಿನಿಯರ್ನನ್ನು ತಮ್ಮ ವಿಭಾಗಕ್ಕೆ ಸೇರಿಸಿಕೊಂಡರು. ಅಂದಿನಿಂದ ಈ ೫೦ ವರ್ಷಗಳವರೆಗೂ ಅವರ ಸ್ನೇಹ ಬೆಳೆದುಕೊಂಡು ಬಂದಿದೆ. ಹಾಗಾಗಿ, ಅವರೊಡನೆ ಆದ ಒಡನಾಟದಿಂದಾಗಿ ಅವರ ತಾಂತ್ರಿಕ ಕೌಶಲಗಳ ಹಾಗೂ ಅವರ ಕಾರ್ಯ, ರೀತಿ-ನೀತಿಗಳ ಅನನ್ಯತೆ ನನಗೆ ನಿಧಾನವಾಗಿ ಹಂತಹಂತವಾಗಿ ಅರಿವಾಯಿತು.
ತಿರುವನಂತಪುರದಲ್ಲಿ ಆಗ ಬ್ರಹ್ಮಚಾರಿಗಳಾಗಿದ್ದ ನಾವು ಕೆಲವರು ಕಲಾಂ ಜತೆ ಒಂದೇ ಲಾಡ್ಜ್ನಲ್ಲಿ ವಾಸಮಾಡುತ್ತಿದ್ದೆವು. ಆದರೆ ಆ ಲಾಡ್ಜ್ ಏನಿದ್ದರೂ ನಮಗೆ ರಾತ್ರಿ ಬಂದು ಮಲಗುವುದಕ್ಕೆ ಮಾತ್ರ ಸೀಮಿತವಾಗಿತ್ತು. ಬೆಳಗ್ಗೆಯಿಂದ ರಾತ್ರಿಯವರೆಗೂ ನಮ್ಮ ದಿನಗಳನ್ನೆಲ್ಲಾ ಆಫೀಸ್ನಲ್ಲೇ ಕಳೆಯಬೇಕಿತ್ತು. ಯಾಕೆಂದರೆ ಕಲಾಂ ಅವರ ಜೊತೆ ಕೆಲಸ ಮಾಡುವುದು ಬಹು ಕಷ್ಟಕರವೇ ಆಗಿತ್ತು! ಬೇರೆ ಯಾವ ಯೋಚನೆಯೂ ಇಲ್ಲದೆ ಅವರು ದಿನದ ೧೨ರಿಂದ ೧೪ ಗಂಟೆಗಳ ಕಾಲ ಕೆಲಸದಲ್ಲೇ ತೊಡಗಿಸಿಕೊಂಡಿರುತ್ತಿದ್ದರು. ಅವರ ಕೆಲಸದ ಭರ ಹೇಗಿತ್ತೆಂದರೆ, ಕೆಲವರು ಮದುವೆ ಮಾಡಿಕೊಂಡ ಮೇಲೆ ಅವರ ಹೆಂಡತಿಯರು ಅವರೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದರು – ‘ದಯವಿಟ್ಟು, ನೀವು ಇನ್ನು ಕಲಾಂ ಅವರ ಜೊತೆ ಕೆಲಸಮಾಡಬೇಡಿ, ಬೇರೆ ಯಾವುದಾದರೂ ವಿಭಾಗಕ್ಕೆ ಹೋಗಿ’ ಎಂದು! ರಜಾದಿನಗಳ ಪರಿವೆಯೇ ಇಲ್ಲದಿದ್ದ ನಮಗೆ ತಲೆ ಕ್ಷೌರಕ್ಕೂ ಸಮಯವಿಲ್ಲದಹಾಗಾಗುತ್ತಿತ್ತು! ಅಂದು ತುಂಬಾದಲ್ಲಿ ಇತ್ತೀಚೆಗೆ ನಮಗೆ ಕಂಡುಬರುವ ಅತ್ಯಾಧುನಿಕ ಸೌಲಭ್ಯಗಳು ಯಾವುದೂ ಇರಲಿಲ್ಲ. ಕಟ್ಟಂಕಾಫಿ, ಉನ್ನಿಅಪ್ಪಂ, ಬೇಯಿಸಿದ ನೇಂದ್ರಬಾಳೆಹಣ್ಣು – ಇವೇ ನಮ್ಮ ದಿನನಿತ್ಯದ ಆಹಾರ! ಆಗಿದ್ದ ಆಡಳಿತ ಕಛೇರಿ – ಬೆಸ್ತರು ನಮಗೆ ಬಿಟ್ಟುಕೊಟ್ಟಿದ್ದ ಪೂಜಾವಿಧಿ ಇಲ್ಲದಿದ್ದ ಒಂದು ಚರ್ಚ್! ನಮ್ಮೆಲ್ಲರ ಕಾರ್ಯಾಗಾರಗಳು ಬೆಸ್ತರ ಮನೆಗಳೇ!
ಕರ್ಮಯೋಗಿ
ಕಲಾಂ ಅವರ ಕೆಲಸದ ವೈಖರಿಯನ್ನು ಕುರಿತು ಕೆಲವು ಉದಾಹರಣೆಗಳನ್ನು ನೆನಪಿಸಿಕೊಳ್ಳಬಹುದಾದರೆ:
ಬಹುಶಃ ಇದು ಯಾವ ಸಂಸ್ಥೆಯಲ್ಲೂ ನಡೆದಿಲ್ಲವೆನಿಸುತ್ತದೆ! ಅಹಮದಾಬಾದ್ನಲ್ಲಿ ವಿಕ್ರಮ್ ಸಾರಾಭಾಯಿ ಅವರು ನಡೆಸುತ್ತಿದ್ದ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (ಭೌತಶಾಸ್ತ್ರ ಅಧ್ಯಯನ ಕೇಂದ್ರ)ಯಿಂದ ಹಲವು ಮಂದಿ ವಿಜ್ಞಾನಿಗಳು ‘ತುಂಬಾ ರಾಕೆಟ್ ನಿಲ್ದಾಣ’ಕ್ಕೆ ಬರುತ್ತಿದ್ದರು. ಆಗ ಭಾರತದಲ್ಲೇ ವಿನ್ಯಾಸಗೊಳಿಸಿ ತಯಾರಾಗಿದ್ದ ರಾಕೆಟ್ಗಳು ನಮ್ಮಲ್ಲಿ ಇರಲಿಲ್ಲ. ಸಂಯುಕ್ತ ರಾಷ್ಟ್ರದ ವತಿಯಿಂದ, ಅಮೆರಿಕ, ಬ್ರಿಟನ್, ರಷ್ಯಾ, ಫ್ರಾನ್ಸ್ಗಳಿಂದ ರಾಕೆಟ್ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ನಮ್ಮ ಕೆಲಸ: ವೈಜ್ಞಾನಿಕ ಸಂಶೋಧನೆಗೆ ಬೇಕಾದ ಸಲಕರಣೆಗಳನ್ನು, ಎಲೆಕ್ಟ್ರಾನಿಕ್ಸ್, ನಾನಾ ಉಪವ್ಯವಸ್ಥೆಗಳಿದ್ದ ರಾಕೆಟ್ನ ಮೂತಿ (ನೋಸ್ಕೋನ್) ಇತ್ಯಾದಿಗಳನ್ನು ರಾಕೆಟ್ ಜೊತೆ ಜೋಡಿಸುವುದು, ಅವುಗಳ ಗುಣಮಟ್ಟ ಪರೀಕ್ಷೆ ಮಾಡುವುದು, ಆ ಜೋಡಣೆಗೆ ಅಗತ್ಯವಾದ ಸಾಮಗ್ರಿಗಳನ್ನು ನಾವೇ ವಿನ್ಯಾಸ ಮಾಡಿ, ನಿರ್ಮಿಸಿ ರಾಕೆಟ್ನ್ನು ಉಡಾವಣೆ ಮಾಡುವುದು. ಹೀಗಾಗಿ ನಮ್ಮ ತಾಂತ್ರಿಕ ಸಹಾಯದೊಂದಿಗೆ ಒಬ್ಬೊಬ್ಬ ವಿಜ್ಞಾನಿಯೂ ಒಂದೊಂದು ರೀತಿಯ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುತ್ತಿದ್ದರು. ಇವುಗಳು ಸಾಧಾರಣವಾಗಿ ಭೂಮಿಯ ವಾತಾವರಣದ ಬಗ್ಗೆ ಹಾಗೂ ಹೊರವಾತಾವರಣದಲ್ಲಿ ಸೂರ್ಯನಿಂದ ಬರುವ ವಿಕಿರಣಗಳ ಕುರಿತದ್ದಾಗಿತ್ತು.
ಒಮ್ಮೆ ಯು.ಆರ್. ರಾವ್ (ನಂತರ ಇವರು ಇಸ್ರೋದ ಅಧ್ಯಕ್ಷರಾದರು) ಅವರು ಅಹಮದಾಬಾದ್ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ ಭೌತಶಾಸ್ತ್ರ ವಿಜ್ಞಾನಿಯಾಗಿ ತುಂಬಾಕ್ಕೆ ಬಂದಿದ್ದರು. ಅವರ ಪ್ರಯೋಗ ಯಾವ ರೀತಿ ಇತ್ತೆಂದರೆ ಒಂದು ನಿರ್ದಿಷ್ಟ ದಿನ, ಒಂದು ನಿರ್ದಿಷ್ಟ ಸಮಯದಲ್ಲೇ ಆ ರಾಕೆಟ್ ಉಡಾವಣೆ ಆಗಬೇಕಿತ್ತು! ಆದರೆ ಆ ಗುರಿ ಮುಟ್ಟಲು ನಮಗೆ ಬಹಳ ಕಷ್ಟವಾಗುತ್ತಿತ್ತು. ಕೊನೆಕೊನೆಗೆ ರಾಕೆಟ್ ಉಡಾವಣಾ ದಿನ ಹತ್ತಿರ ಬರುತ್ತಿದ್ದಂತೆ ಕೆಲಸದ ಒತ್ತಡ ಅಧಿಕವಾಯಿತು. ಅಬ್ದುಲ್ ಕಲಾಂ, ಮಾಧವನ್ ನಾಯರ್, ನಾನು ಹಾಗೂ ಇನ್ನೊಬ್ಬರು – ನಾವು ನಾಲ್ಕೈದು ದಿನ ನಿದ್ದೆ, ಆಹಾರ ಒಂದೂ ಇಲ್ಲದೆ ಬೆಳಗ್ಗಿನಿಂದ ರಾತ್ರಿ ತನಕ ದುಡಿದು ಸರಿಯಾದ ಆಹಾರವಿಲ್ಲದೆ ನಿಶ್ಶಕ್ತಿಯಿಂದ ಕೆಲಸ ಮಾಡುತ್ತಿದ್ದೆವು. ಅದೇ ಸಮಯದಲ್ಲಿ ಆಗಿನ ತುಂಬಾದ ನಿರ್ದೇಶಕರಾಗಿದ್ದ ಮೂರ್ತಿ ಅವರು ಕೊಚ್ಚಿನ್ನಿಂದ ತಿರುವನಂತಪುರಕ್ಕೆ ರಸ್ತೆಯಲ್ಲಿ ಹಾಯ್ದು ಹೋಗುತ್ತಿದ್ದರು. ಸುಮಾರು ಬೆಳಗ್ಗಿನ ಜಾವ ಮೂರು ಗಂಟೆ. ನಮ್ಮ ಪ್ರಯೋಗಶಾಲೆಯಲ್ಲಿ ಅಷ್ಟೊಂದು ದೀಪಗಳು ಉರಿಯುತ್ತಿರುವುದನ್ನು ನೋಡಿ, ‘ಯಾರು ಕೆಲಸ ಮಾಡುತ್ತಿದ್ದಾರೆ?’ ಎಂದು ಸೆಕ್ಯುರಿಟಿಯಲ್ಲಿ ವಿಚಾರಿಸಿದರು. ಆತ, ‘ಕಲಾಂ ಮತ್ತು ಅವರ ಶಿಷ್ಯರು’ ಎಂದು ಉತ್ತರಿಸಿದ. ಅವರು ನೇರವಾಗಿ ಒಳಗೆ ಬಂದು ನಾವಿದ್ದ ಸ್ಥಿತಿಯನ್ನು, ತ್ರಾಣವಿಲ್ಲದೇ ನಿಂತಿದ್ದ ನಮ್ಮೆಲ್ಲರನ್ನೂ ಕಂಡು ಕೋಪಗೊಂಡು ಸಿಟ್ಟಾದರು. ಕಲಾಂ, ಈ ರೀತಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ. ಇನ್ನು ೫ ನಿಮಿಷಗಳ ಕಾಲ ನಿಮಗೆಲ್ಲ ಸಮಯ ಕೊಡುತ್ತೇನೆ. ನಿಮ್ಮ ಕೆಲಸವನ್ನೆಲ್ಲ ನಿಲ್ಲಿಸಿ, ನಿಮ್ಮ ಶಿಷ್ಯರನ್ನು ಕಟ್ಟಿಕೊಂಡು, ಪ್ರಯೋಗಶಾಲೆಯ ಬಾಗಿಲು ಹಾಕಿಕೊಂಡು ತಿರುವನಂತಪುರದ ನಿಮ್ಮ ವಿರಾಮ ಸ್ಥಳಕ್ಕೆ ಹೋಗಿ. ಮತ್ತೆ ನಾಳೆ ಪೂರ್ತಿ ದಿನ ನನಗೆ ಮುಖ ತೋರಿಸಬೇಡಿ. ಪೂರ್ಣವಾಗಿ, ಆರಾಮವಾಗಿ ರೆಸ್ಟ್ ತೆಗೆದುಕೊಂಡು ನಾಡಿದ್ದು ಮಾತ್ರ ನೀವು ಬರಬೇಕು. ಅದಕ್ಕೆ ಮುಂಚೆ ನೀವೇನಾದರೂ ಬಂದರೆ, ನಾನು ಸೆಕ್ಯುರಿಟಿಯವರಲ್ಲಿ ಹೇಳಿ ನಿಮ್ಮನ್ನು ಇಲ್ಲಿಂದ ಹೊರಗೆ ದಬ್ಬಿಸಿಬಿಡುತ್ತೇನೆ ಎಂದರು. ತಮಾಷೆ ಅಂದರೆ ಕಲಾಂ ಆಗಲಿ ಸರ್. ಹಾಗೆಯೇ ಮಾಡುತ್ತೇನೆ ಎಂದರು. ಅವರು ಆ ಕಡೆ ಹೊರಟನಂತರ ನಮ್ಮ ಕಡೆ ತಿರುಗಿ ಏನು ಮಾಡೋಣ? ಇವರು ಕೆಲಸ ಮಾಡಬೇಡಿ ಅನ್ನುತ್ತಿದ್ದಾರಲ್ಲ! ಸರಿ. ಹೋಗೋಣ, ಬನ್ನಿ. ಇನ್ನೊಂದು ಎರಡು ಗಂಟೆ ಬಿಟ್ಟುಕೊಂಡು ವಾಪಾಸ್ ಬಂದುಬಿಡೋಣವಾ? ಎಂದರು. ಕೊನೆಗೆ ನಾವು ಮಾಡಿದ್ದೂ ಹಾಗೆಯೆ! ಹೇಗೋ ಆ ನಿರ್ದಿಷ್ಟ ಸಮಯಕ್ಕೆ ಆ ರಾಕೆಟ್ ಮೇಲಕ್ಕೆ ಹೋಯಿತು!
ಇನ್ನೊಂದು ಬಾರಿ, ಅಲ್ಲಿನ ಆಗಿನ ನಿರ್ದೇಶಕರಾಗಿದ್ದ ಎಚ್.ಜಿ.ಎಸ್. ಮೂರ್ತಿ ಅವರ ಕೊಠಡಿಗೆ ಒಬ್ಬ ವೃದ್ಧರು ಬಂದು ಕುಳಿತುಕೊಂಡು ಕಣ್ಣಲ್ಲಿ ನೀರು ಸುರಿಸಲಾರಂಭಿಸಿದರು. ಮೂರ್ತಿ ಅವರು ಯಾರು ನೀವು? ಏಕೆ ಬಂದಿರಿ? ಎಂದು ವಿಚಾರಿಸಿದರು. ನಾನು ನಿಮ್ಮಲ್ಲೊಬ್ಬ ಕೆಲಸ ಮಾಡುತ್ತಿದ್ದಾರೆ ನೋಡಿ, ಅಬ್ದುಲ್ ಕಲಾಂ ಅಂತ, ಅವರ ತಂದೆ. ರಾಮೇಶ್ವರದಿಂದ ಬಂದಿದ್ದೇನೆ. ಏನು ನೀವು ಅವನನ್ನು ಬಂಧನದಲ್ಲಿಟ್ಟುಕೊಂಡಿದ್ದೀರಾ? ಆತ ನಮ್ಮ ಮನೆಕಡೆಯೇ ಬರುತ್ತಿಲ್ಲ. ಕಾಗದವನ್ನೂ ಬರೆಯುತ್ತಿಲ್ಲ, ಮಾತನಾಡುತ್ತಿಲ್ಲ. ನಮಗೆ ಬಹಳ ಆತಂಕ ಆಗಿಬಿಟ್ಟಿದೆ. ಏನು ಕೆಲಸ ಅವನು ಮಾಡುತ್ತಿರುವುದು? ಎಂದರು ದುಃಖದಿಂದ. ಇದನ್ನು ಕೇಳಿ ಮೂರ್ತಿ ಅವರ ಹೃದಯ ಕಲಕಿರಬೇಕು. ಅವರು ತಕ್ಷಣ ಕಲಾಂರನ್ನು ಒಳಕ್ಕೆ ಕರೆದು ಕಲಾಂ, ಏನಿದು? ಈ ವೃದ್ಧರು ರಾಮೇಶ್ವರದಿಂದ ನಿಮ್ಮನ್ನು ಹುಡುಕಿಕೊಂಡು ಇಲ್ಲಿಗೆ ಬಂದು ಹೀಗೆ ಹೇಳುತ್ತಿರಬೇಕಾದರೆ, ಏನು ಮನೆಕಡೆ ಗಮನವನ್ನೇ ಕೊಡುತ್ತಿಲ್ಲವೇ? ದಯವಿಟ್ಟು ಈಗಲೇ ಇವರನ್ನು ತಿರುವನಂತಪುರ(ತುಂಬಾ ರಾಕೆಟ್ ನಿಲ್ದಾಣದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿದೆ)ಕ್ಕೆ ಕರೆದುಕೊಂಡು ಹೋಗಿ, ಚೆನ್ನಾಗಿ ನೋಡಿಕೊಂಡು, ಅವರ ಜೊತೆ ನೀವೂ ಬಸ್ ಹತ್ತಿ ಮಧುರೈ ತನಕ ಹೋಗಿ. ಮಧುರೈ-ರಾಮೇಶ್ವರ ಬಸ್ನಲ್ಲಿ ಕೂರಿಸಿ ವಾಪಾಸ್ ಬನ್ನಿ ಎಂದರು. ಕಲಾಂ ಅವರನ್ನು ಕರೆದುಕೊಂಡೇನೋ ಹೋದರು. ಆದರೆ ಇನ್ನೆರಡು ಗಂಟೆಗಳ ಕಾಲದಲ್ಲೇ ಆಫೀಸ್ನಲ್ಲಿ ಹಾಜರಾದರು! ಅವರ ತಂದೆಯವರನ್ನು ಹೇಗೆ ಕಳುಹಿಸಿದರೋ ಏನೋ ಯಾರಿಗೂ ಗೊತ್ತಿಲ್ಲ!
ನೀವು, ನಿಮ್ಮ ಚಿಮ್ಮುವ ವಯಸ್ಸನ್ನು ವ್ಯರ್ಥಮಾಡದಿರಿ, ಚೆನ್ನಾಗಿ ಉಪಯೋಗಿಸಿಕೊಳ್ಳಿ; ಮತ್ತು ಸ್ವಚ್ಛ ಭೂಮಿ, ಪರಿಸರಕ್ಕೆ ನಿಮ್ಮ ಶ್ರಮವೂ ಇರಲಿ. ರಾಷ್ಟ್ರಧ್ವಜ ನಿಮ್ಮ ಹೃದಯದಲ್ಲಿ ಎಂದೂ ಹಾರುತ್ತಿರಲಿ. ದೇಶದ ಅಭಿವೃದ್ಧಿಗೆ, ಅಭ್ಯುದಯಕ್ಕೆ ಮನಸಾರೆ ದುಡಿಯುತ್ತಿರಿ
– ಡಾ. ಅಬ್ದುಲ್ ಕಲಾಂ
ಕಲಾಂ, ಹುಲಿಹಾಲು ಕರೆಯಬಲ್ಲ!
ಪ್ರಧಾನಿ ಇಂದಿರಾಗಾಂಧಿ ‘ಸ್ವಿಚ್ ಆನ್’ ಮಾಡಿದ ಸಿ.ಆರ್. ಸತ್ಯ ಅವರ ವಿಶೇಷ ಯಂತ್ರ: ಚಿತ್ರದಲ್ಲಿ ಎಡದಿಂದ ಬಲಕ್ಕೆ – ಜಿ. ಮಾಧವನ್ ನಾಯರ್, ಅಬ್ದುಲ್ ಕಲಾಂ, ಡಾ. ವಿಕ್ರಂ ಸಾರಾಭಾಯಿ, ಸಿ.ಆರ್. ಸತ್ಯ ಹಾಗೂ ಎಚ್.ಜಿ.ಎಸ್. ಮೂರ್ತಿ (ಚಿತ್ರ ಕೃಪೆ: ಇಸ್ರೋ)
ಅವರ ತಾಂತ್ರಿಕ ಜ್ಞಾನ ವೃದ್ಧಿಯಾಗಿದ್ದೂ ನಾನಾ ರೀತಿಯಲ್ಲಿ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಹಿರಿಯ ಅಧಿಕಾರಿಗಳಿಂದ ಪಡೆಯುತ್ತಿದ್ದ ಪ್ರೇರಣೆ ಒಂದಾದರೆ, ಅವರ ಕೆಳಗೆ ಕೆಲಸ ಮಾಡುವ ನಮ್ಮಂಥವರಿಗೂ ಅವರು ಎಲ್ಲ ರೀತಿಯ ಪ್ರೋತ್ಸಾಹ ನೀಡಿ, ನಾವು ಎಷ್ಟು ಚಿಕ್ಕ ಕೆಲಸ ಅಥವಾ ದೊಡ್ಡ ಕೆಲಸವನ್ನೇ ಮಾಡಲಿ ಉತ್ತೇಜನ ನೀಡಿ ಮೇಲಕ್ಕೆ ತರುತ್ತಿದ್ದರು. ಇನ್ನೊಬ್ಬರಿಂದ ಕೆಲಸತೆಗೆಯುವುದು ಹೇಗೆ ಎಂಬ ಚಾಣಾಕ್ಷತೆ ಅವರಿಗಿತ್ತು. ಅದು ಒಬ್ಬ ಲಿಫ್ಟ್ ಆಪರೇಟರ್ ಅಥವಾ ಡ್ರೈವರ್ ಇರಬಹುದು, ಒಬ್ಬ ದೊಡ್ಡ ಅಧಿಕಾರಿ ಅಥವಾ ಇಂಜಿನಿಯರ್ ಇರಬಹುದು. ಇಂತಹವರನ್ನೆಲ್ಲ ಗುಂಪುಗೂಡಿಸಿ, ಎಲ್ಲರ ಶಕ್ತಿಯನ್ನೂ ಒಂದುಗೂಡಿಸಿ ಕಾರ್ಯಸಫಲತೆಯನ್ನು ಹೊರತರಿಸುತ್ತಿದ್ದರು. ಇದನ್ನು ಗಮನಿಸಿದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಪ್ರಸಿದ್ಧ ವಿಜ್ಞಾನಿಯಾಗಿದ್ದ ಡಾ|| ಎಸ್. ರಾಮಶೇಷನ್ ಕಲಾಂ ಕೆನ್ ಮಿಲ್ಕ್ ಈವನ್ ಏ ಟೈಗರ್ ಎಂದಿದ್ದರು!
ಸುಮಾರು ೧೯೬೭ರ ಕೊನೆಯ ದಿನಗಳು. ನಮ್ಮಲ್ಲಿ ರಾಕೆಟ್ ತಂತ್ರಜ್ಞಾನಕ್ಕೆ ಅಗತ್ಯವಾದ ಕಚ್ಚಾವಸ್ತುಗಳಾಗಲೀ ವಿಶಿಷ್ಟ ಯಂತ್ರ, ಸಲಕರಣೆಗಳಾಗಲೀ ಭಾರತದಲ್ಲಿ ಉತ್ಪಾದಿಸುತ್ತಿರಲಿಲ್ಲ. ರಾಜಕೀಯ ಒತ್ತಡದಿಂದಾಗಿ ಅಮೆರಿಕ, ಯೂರೋಪ್ ದೇಶಗಳೂ ನಮಗೆ ಈ ತಂತ್ರಜ್ಞಾನದ ಕುರಿತು ಯಾವ ರೀತಿಯ ಸಹಾಯವನ್ನೂ ಮಾಡುತ್ತಿರಲಿಲ್ಲ. ಈಗಿನ ಹಾಗೆ ಅಂದು ಈ ತಂತ್ರಜ್ಞಾನವನ್ನು ಪಡೆದಿದ್ದ ಮುಂದುವರಿದ ದೇಶಗಳ ಜೊತೆ ಯಾವ ಸೌಹಾರ್ದಿಕ ಒಪ್ಪಂದಗಳೂ ಜಂಟಿಕಾರ್ಯಕ್ರಮಗಳೂ ಇರಲಿಲ್ಲ. ಹೀಗಾಗಿ ನಾವೇ ಎಲ್ಲವನ್ನೂ ಕಲಿತು ಸ್ಥಳೀಯವಾಗಿ ಅಭಿವೃದ್ಧಿಪಡಿಸಬೇಕಾಗಿತ್ತು. ಈ ಸಂದರ್ಭದಲ್ಲಿ ಕಲಾಂ ಅವರು ನನಗೊಂದು ಸೂಚನೆ ಕೊಟ್ಟರು – ಈ ರಾಕೆಟ್ಗಳ ಪ್ರಮುಖ ಅಂಗಾಂಗಗಳನ್ನು ನಾವು ದೃಢೀಕರಿಸಿದ ಪ್ಲಾಸ್ಟಿಕ್(ಇದಕ್ಕೆ ಕಾಂಪೋಸಿಟ್ಸ್ ಅಥವಾ ಸಮ್ಮಿಶ್ರವಸ್ತುಗಳು ಎನ್ನುತ್ತಾರೆ)ನಿಂದ ಮಾಡಬೇಕು. ಈ ವಸ್ತುಗಳನ್ನು ತಯಾರಿಸಬೇಕಾದ ಯಂತ್ರವನ್ನು ಹೇಗೆ ಮಾಡಬೇಕೆಂದು ಯಾರಿಗೂ ಗೊತ್ತಿಲ್ಲ. ನೀವೇ ಇದರ ಬಗ್ಗೆ ಯೋಚನೆ ಮಾಡಿ ಎಂದು. ಇಂತಹ ವಿಶಿಷ್ಟ ಯಂತ್ರವನ್ನು ವಿನ್ಯಾಸಮಾಡಿ ಅದನ್ನು ನಿರ್ಮಿಸುವ ಕಾರ್ಯ ನನಗೆ ಬಹು ಕ್ಲಿಷ್ಟವಾಗಿ ತೋರಿತು. ಇಂತಹ ದೊಡ್ಡ ವಿನ್ಯಾಸಕಾರ್ಯವನ್ನು ನಾನು ಅದುವರೆಗೂ ಮಾಡಿರಲಿಲ್ಲ. ಹೀಗಾಗಿ ಸುಮ್ಮನೆ ಅದರ ಮೂಲ ಸಿದ್ಧಾಂತ ಏನಿದೆ ಎಂದು ಅರಿಯಲು, ಏನೋ ಕೈಗೆಸಿಕ್ಕಿದ ಕೆಲವು ಭಾಗಗಳನ್ನು ವರ್ಕ್ಶಾಪ್ಗೆ ತೆಗೆದುಕೊಂಡು ಹೋಗಿ ಒಂದು ಯಂತ್ರವನ್ನು ನಿರ್ಮಾಣ ಮಾಡಿದೆ. ಅದನ್ನು ಓಡಿಸಲು ಒಂದು ಎಲೆಕ್ಟ್ರಿಕ್ ಮೋಟಾರನ್ನು ಅಳವಡಿಸಬೇಕಿತ್ತು. ಅದು ಇಲ್ಲದಿದ್ದ ಕಾರಣದಿಂದ ಕೈನಲ್ಲೇ ತಿರುಗಿಸುವಂಥ ಒಂದು ರಾಟೆಯನ್ನು ವ್ಯವಸ್ಥೆ ಮಾಡಿದೆ! ಯಂತ್ರಗಳಲ್ಲಿ ಉಪಯೋಗಿಸುವ ಬೆಲ್ಟ್ ಬದಲು ತೆಂಗಿನನಾರಿನ ಹಗ್ಗ ಸುತ್ತಿದ್ದೆ! ಈ ವಿಚಿತ್ರ ಯಂತ್ರದ ಮಾದರಿಯನ್ನು ನಾನು ಕೈಯಲ್ಲೇ ತಿರುಗಿಸುತ್ತಿದ್ದಾಗ ಕಲಾಂ ಅವರು ಅಲ್ಲಿಗೆ ಬಂದರು. ಅವರು ಈ ವಿಚಿತ್ರ ದೃಶ್ಯವನ್ನು ನೋಡಿ ಏನನ್ನುತ್ತಾರೋ ಎಂದು ನನಗೋ ಎಲ್ಲಿಲ್ಲದ ನಾಚಿಕೆಯಾಯಿತು. ಆದರೆ ಅವರ ಪ್ರತಿಕ್ರಿಯೆಯೇ ಬೇರೆಯಾಗಿತ್ತು. ನನ್ನನ್ನು ತಬ್ಬಿಕೊಂಡು, ಅಯ್ಯೋ, ಎಷ್ಟು ಚೆನ್ನಾಗಿ ಮಾಡಿದ್ದೀರಿ. ಇದನ್ನು ನಾನು ಡಾ|| ವಿಕ್ರಮ್ ಸಾರಾಭಾಯಿ (ಭಾರತದ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ಎಂದೇ ಜನಜನಿತರಾದ ಇವರು ಅಂದು ಇಸ್ರೋದ ಅಧ್ಯಕ್ಷರಾಗಿದ್ದರು) ಅವರಿಗೆ ತೋರಿಸುತ್ತೇನೆ ಎಂದರು. ದಯವಿಟ್ಟು ಬೇಡ. ನೀವೇ ನೋಡಬಾರದು ಎಂದುಕೊಂಡಿದ್ದೆ. ಅಂತಹ ದೊಡ್ಡವರನ್ನು ಕರೆದುಕೊಂಡು ಬರುತ್ತೀರಲ್ಲಾ. ಬೇಡ ಎಂದೆ. ನೋ…ನೋ…ನೋ… ಅವರು ಇದನ್ನು ಖಂಡಿತವಾಗಿ ನೋಡಲೇಬೇಕು ಎಂದು ಹಠಹಿಡಿದರು.
ಒಂದು ವಾರದ ನಂತರ ಕಲಾಂ ಅವರು ನನ್ನ ಯಂತ್ರವಿದ್ದ ಕೊಠಡಿಗೆ ಸಾರಾಭಾಯಿಯವರನ್ನು ಕರೆದುಕೊಂಡೇ ಬಂದರು. ನನಗೋ ನಾಚಿಕೆಯೋ ನಾಚಿಕೆ! ಸಾರಾಭಾಯಿ ಜೊತೆಗಿದ್ದ ಕೆಲವು ಹಿರಿಯರು ಜೋರಾಗಿ ನಕ್ಕುಬಿಟ್ಟರು. ಆದರೆ ಕಲಾಂ ಮತ್ತು ಸಾರಾಭಾಯಿ ಮಾತ್ರ ನಗಲಿಲ್ಲ. ಸಾರಾಭಾಯಿ ಅವರು ನನ್ನ ಹತ್ತಿರಕ್ಕೆ ಬಂದು, ಏನ್ ಮಾಡುತ್ತಿದ್ದೀರಿ, ಯಾಕೆ ಹೀಗೆ ಮಾಡುತ್ತಿದ್ದೀರಿ? ಎಂದೆಲ್ಲ ಪ್ರಶ್ನಿಸಿದರು. ನಾನು ವಿವರಿಸಿದೆ. ಅವರು ತಕ್ಷಣ ಕಲಾಂರ ಕಡೆಗೆ ತಿರುಗಿ, ಕಲಾಂ, ಸತ್ಯ ಅವರನ್ನು ಇಂಗ್ಲೆಂಡ್, ಯೂರೋಪ್ ಮತ್ತು ಅಮೆರಿಕಕ್ಕೆ ಒಡನೆಯೇ ಕಳುಹಿಸಿ. ಅಲ್ಲಿ ಕೆಲವು ಸಂಸ್ಥೆಗಳಲ್ಲಿ ಉದ್ಯಮಗಳಲ್ಲಿ ಈ ತಂತ್ರಜ್ಞಾನದ ಪರಿಣತರು ಅನೇಕರಿದ್ದಾರೆ. ಅವರಿಗೆ ನಾನು ಶಿಫಾರಸುಪತ್ರಗಳನ್ನು ಬರೆಯುತ್ತೇನೆ. ಅವರು ಅಲ್ಲಿಗೆ ಹೋಗಿ ಈ ಯಂತ್ರವನ್ನು ಹೇಗೆ ಇನ್ನಷ್ಟು ಚೆನ್ನಾಗಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬಹುದು ಎಂದರು. ಕಲಾಂ ‘ಸರಿ, ಸರ್’ ಎಂದರು. ಆಗ ಮೊದಲು ನಗೆಯಾಡಿದ್ದ ಮಿಕ್ಕವರೆಲ್ಲ ತೆಪ್ಪಗಾದರು. ಭೇಟಿ ಮುಗಿಸಿ ಹೊರಗಡೆ ಹೋಗುತ್ತಿದ್ದ ಸಾರಾಭಾಯಿ ತಕ್ಷಣ ಹಿಂದಕ್ಕೆ ತಿರುಗಿಬಂದು, ಏನೋ ಯೋಚನೆ ಮಾಡಿ ಹೇಳಿದರು, ನೋಡಿ, ೨ನೇ ಫೆಬ್ರುವರಿ ೧೯೬೮ರಲ್ಲಿ ಈ ಉಡಾವಣಾಕೇಂದ್ರಕ್ಕೆ ಭಾರತದ ಪ್ರಧಾನಿ ಇಂದಿರಾಗಾಂಧಿ ಹಾಗೂ ಸಂಯುಕ್ತ ರಾಷ್ಟ್ರಗಳ ಹಲವು ಪ್ರಮುಖರೆಲ್ಲಾ ಬರುತ್ತಿದ್ದಾರೆ. ಅಂದು ಈ ತುಂಬಾ ರಾಕೆಟ್ ನಿಲ್ದಾಣವನ್ನು ಸಂಯುಕ್ತ ರಾಷ್ಟ್ರಕ್ಕೆ ಅರ್ಪಣೆ ಮಾಡುತ್ತಿದ್ದೇವೆ. ಅಂದು ನೀವು ನಿಮ್ಮ ಅಂತಿಮ ರೂಪದ ಯಂತ್ರವನ್ನು ತಯಾರಿಸಿ ಇಟ್ಟಿದ್ದರೆ, ನಾನು ಪ್ರಧಾನಿ ಇಂದಿರಾಗಾಂಧಿ ಅವರಿಂದ ಇದರ ಸ್ವಿಚ್ ಆನ್ ಮಾಡಿಸುತ್ತೇನೆ ಎಂದರು. ಅದೂ ಆಯಿತು. ೨ನೇ ಫೆಬ್ರುವರಿಯಂದು ಇಂದಿರಾಗಾಂಧಿ ಬಂದರು. ನನ್ನ ಹತ್ತಿರ ಬಂದಾಗ ಈ ಯುವಕ ಇಂಜಿನಿಯರ್ ನಿಮಗಾಗಿ ಕಾಯುತ್ತಿದ್ದಾನೆ. ನೀವು ಅವರ ಹೊಸ ಮೆಷಿನ್ನ ‘ಸ್ವಿಚ್ ಆನ್’ ಮಾಡಬೇಕಂತೆ ಎಂದರು. ಆಕೆ ಓಹೋ ಹೌದಾ. ಏನು ಮಾಡುತ್ತದೆ ಈ ಯಂತ್ರ? ಎಂದು ನನ್ನನ್ನು ಕೇಳುತ್ತಾ ಸ್ವಿಚ್ ಆನ್ ಮಾಡಿದರು. ನಾನು ನನ್ನ ವಿವರಣೆ ಕೊಟ್ಟೆ. ಅದರಿಂದ ಸಾರಾಭಾಯಿ ಹಾಗೂ ಕಲಾಂ ಅವರಿಗಾದ ಸಂತೋಷ ಅವರ್ಣನೀಯ. ನಿಜಕ್ಕೂ ಕಲಾಂರೊಂದಿಗೆ ಕೆಲಸ ಮಾಡಿದ ನಾವೆಲ್ಲ ಮೇಧಾವಿಗಳೇನಾಗಿರಲಿಲ್ಲ. ಆದರೆ ಅವರು ಯಾವ ರೀತಿ ನಮ್ಮಂತಹ ಕಿರಿಯರಿಗೆ ವೃತ್ತಿಪರವಾಗಿ ಉತ್ತೇಜನಕೊಟ್ಟು ನಮ್ಮನ್ನು ಹೇಗೆ ಮೇಲಕ್ಕೆ ತರುತ್ತಿದ್ದರು ಎಂಬುದಕ್ಕೆ ಉದಾಹರಣೆಯಾಗಿ ಇದನ್ನು ಹೇಳುತ್ತಿದ್ದೇನೆ.
ಕಲಾಂ ಅವರ ಇನ್ನೊಂದು ವ್ಯಕ್ತಿತ್ವವೆಂದರೆ, ನಮಗೆ ದಕ್ಕದ ತಾಂತ್ರಿಕತೆಗಳನ್ನು ನಿರಂತರ ಪ್ರಯೋಗ ನಡೆಸಿ ಕಲಿತುಕೊಳ್ಳುವುದು. ಅದರಲ್ಲಿ ಅವರೊಂದಿಗಿದ್ದ ನಾವೆಲ್ಲ ಬಹಳವಾಗಿ ಪಳಗಿದ್ದೇವೆ. ವಿನ್ಯಾಸ ಮಾಡುವುದಾಗಲಿ, ಮೂಲಮಾದರಿ(ಪ್ರೋಟೊಟೈಪ್)ಗಳ ತಯಾರಿಯೇ ಆಗಿರಲಿ, ಅವರು ನಮಗೆ ಪೂರ್ಣ ಪ್ರೋತ್ಸಾಹ-ಸಹಕಾರ ನೀಡುತ್ತಿದ್ದರು. ಇದರಿಂದಾಗಿ ಸಾರಾಭಾಯಿ ಅವರು ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ತುಂಬಾಗೆ ಬಂದಾಗ ಅವರು ಮೊದಲು ಬರುತ್ತಿದ್ದುದು ನಮ್ಮ ವಿಭಾಗಕ್ಕೆ! ಬಂದು ಕೇಳುವರು, ‘ಕಲಾಂ, ಈ ಬಾರಿ ನನಗೆ ಯಾವ ಪ್ರಯೋಗ ತೋರಿಸುತ್ತಿದ್ದೀರಿ….?’ ಅಂತ. ‘ಸರ್, ನಾವು ಇದನ್ನು ರೆಡಿ ಮಾಡಿದ್ದೀವಿ, ನೋಡಿ’ ಎಂದು ಕಲಾಂ ನಾವು ಯೋಜಿಸಿದ್ದ ಯಾವುದಾದರೂ ಪ್ರಯೋಗವನ್ನು ತೋರಿಸುತ್ತಿದ್ದರು. ಸಾರಾಭಾಯಿ ಅದನ್ನು ನೋಡಿ ಉತ್ಸಾಹಿತರಾಗುತ್ತಿದ್ದರು. ಈ ಪ್ರಯೋಗಗಳೆಲ್ಲ ನಡೆಯುತ್ತಿದ್ದದ್ದು ನಮ್ಮ ಆಫೀಸಿನ ಹಿಂದೆಯೇ ಹರಡಿದ್ದ ಸಮುದ್ರತೀರದ ಮರಳಿನ ಮೇಲೆಯೇ! ನಮ್ಮ ರಾಕೆಟ್ತಂತ್ರಜ್ಞಾನ ಬೆಳೆದದ್ದು ಹೀಗೆ. ಚಿಕ್ಕಚಿಕ್ಕ ಹಂತದಲ್ಲಿ ಹೊಸಹೊಸ ಪ್ರಗತಿಗಳನ್ನು ಕಾಣುತ್ತಾ ಯಾವ ಸೌಲಭ್ಯಗಳೂ ಇಲ್ಲದೆ ನೂರಾರು ಎಂಜಿನಿಯರುಗಳ ಸತತ ಶ್ರಮದಿಂದ ನಮ್ಮ ಭಾರತೀಯ ರಾಕೆಟ್ ತಂತ್ರಜ್ಞಾನ ವಿಶ್ವಮಟ್ಟಕ್ಕೆ ಬೆಳೆಯಿತು. ಆ ದಿನಗಳಲ್ಲಿ ಕಲಾಂ ಹಾಗೂ ಸಾರಾಭಾಯಿ ಅಂತಹವರ ನಾಯಕತ್ವವೇ ಇದಕ್ಕೆ ಮೂಲಕಾರಣವೆಂದರೆ ತಪ್ಪಾಗಲಾರದು.
ಅಬ್ದುಲ್ ಕಲಾಂ ಅವರ ತಂದೆ
ಅವೂಲ್ ಫಕೀರ್ ಜೈನುಲಾಬ್ದೀನ್ ಮಾರಕಯಾರ್
ಭಾರತದ ಮೊದಲ ಹೋವರ್ಕ್ರಾಫ್ಟ್ನ ನಿರ್ಮಾಪಕ
ಸುಮಾರು ೧೯೫೭, ವಿದ್ಯಾರ್ಥಿಯಾಗಿದ್ದ ನಾನು ಸೈಕಲ್ನಲ್ಲಿ ಹೋಗುತ್ತಿದ್ದಾಗ ಬೆಂಗಳೂರಿನ ಹೈಗ್ರೌಂಡ್ಸ್ನಲ್ಲಿರುವ ರಕ್ಷಣಾಕ್ಷೇತ್ರದ ಏರೋನಾಟಿಕಲ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಲ್ಯಾಬೊರೇಟರೀಸ್ ಪ್ರಯೋಗಶಾಲೆ(ಈಗಿನ ನೆಹರು ತಾರಾಲಯ ಇರುವ ಜಾಗ)ಯಲ್ಲಿ ಒಂದು ವೃತ್ತಾಕಾರ ರೂಪವಿದ್ದ, ವಿಚಿತ್ರವಾಗಿ ತೋರುತ್ತಿದ್ದ ಒಂದು ವಾಹನವನ್ನು ನೋಡಿದ್ದೆ. ಅದು ಬಹಳ ಜೋರಾಗಿ ಶಬ್ದಮಾಡಿಕೊಂಡು ಚಿಕ್ಕಜಾಗದಲ್ಲಿ ಓಡಾಡಿಕೊಂಡಿತ್ತು. ‘ಇದೇನಿದು? ಯಾವ ರೀತಿಯ ವಾಹನ?’ ಎಂದು ಬಹಳವಾಗಿಯೇ ನನಗೆ ಕುತೂಹಲವಿತ್ತು. ತುಂಬಾಕ್ಕೆ ನಾನು ಹೋಗಿ ಸೇರಿ ಕಲಾಂ ಜೊತೆ ಕೆಲಸ ಮಾಡಿದಾಗ ತಿಳಿಯಿತು – ಕಲಾಂ, ಇಸ್ರೋ (ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್) ಸೇರುವುದಕ್ಕೆ ಮುಂಚೆ ಏರೋನ್ಯಾಟಿಕಲ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಲ್ಯಾಬೊರೇಟರೀಸ್ನಲ್ಲಿ ಒಂದೂವರೆ ವರ್ಷಗಳ ಕಾಲ ಕೆಲಸಮಾಡಿದ್ದರು. ಆಗ ಅವರು ಮೊತ್ತಮೊದಲ ಬಾರಿಗೆ ಭಾರತದಲ್ಲಿ ಹೋವರ್ಕ್ರಾಫ್ಟ್ ವಾಹನವನ್ನು ನಿರ್ಮಿಸಿದ್ದರು ಎಂದು. ಈ ಮಾದರಿ ವಾಹನದ ಚಾಲಕರೂ ಅವರೇ ಆಗಿದ್ದರಂತೆ! ಹೋವರ್ಕ್ರಾಫ್ಟ್ ವಾಹನ ಭೂಮಿ ಹಾಗೂ ನೀರು – ಎರಡರ ಮೇಲೂ ಚಲಿಸುತ್ತದೆ. ಅದನ್ನು ಆಗತಾನೇ ಬ್ರಿಟನ್ನಲ್ಲಿ ತಯಾರಿಸಿ ರಕ್ಷಣಾಕ್ಷೇತ್ರದಲ್ಲಿ ಉಪಯೋಗಿಸಲಾರಂಭಿಸಿದ್ದರು.
ಈ ಸಂಶೋಧನೆಯಿಂದಾಗಿಯೇ ಅವರು ತುಂಬಾಕ್ಕೆ ರಾಕೆಟ್ ಇಂಜಿನಿಯರ್ ಆಗಿ ಆಯ್ಕೆಯಾದರು. ಒಂದು ವರ್ಷ ಕಾಲ ವಿಶ್ವಸಂಸ್ಥೆಯ ಕಾರ್ಯಕ್ರಮದ ಅಂಗವಾಗಿ ಅಮೆರಿಕಕ್ಕೆ ಹೋಗಿ ಅಲ್ಲಿಯ ‘ನಾಸಾ’ – ನ್ಯಾಶನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ನ ಕೆಲವು ಸಂಸ್ಥೆಗಳಿಗೆ ಭೇಟಿ ನೀಡಿದರು. ವಾಷಿಂಗ್ಟನ್ನ ಬಳಿಯಿದ್ದ ನಾಸಾದ ವ್ಯಾಲಪ್ಸ್ ಐಲ್ಯಾಂಡ್ ಎಂಬ ರಾಕೆಟ್ ಉಡಾವಣಾ ಕೇಂದ್ರಕ್ಕೆ ಭೇಟಿನೀಡಿ, ರಾಕೆಟ್ಗಳ ಉಡಾವಣೆ ಕುರಿತು ತಾಂತ್ರಿಕ ಮಾಹಿತಿ ಪಡೆದು ‘ತುಂಬಾ’ಗೆ ಬಂದಿದ್ದರು. ‘ನಮ್ಮ ಸ್ಥಳೀಯ ತಂತ್ರಜ್ಞಾನದಿಂದಲೇ ಮುಂದಿನ ಹತ್ತುವರ್ಷಗಳಲ್ಲಿ ಭಾರತ ತನ್ನದೇ ಆದಂತಹ ರಾಕೆಟ್ ವ್ಯವಸ್ಥೆಗಳಿಂದ ನಮ್ಮದೇ ಉಪಗ್ರಹಗಳನ್ನು ಹಾರಿಸುವ ಶಕ್ತಿಯನ್ನು ಪಡೆಯಬೇಕು’ ಎಂಬುದು ವಿಕ್ರಮ್ ಸಾರಾಭಾಯಿ ಅವರ ಕನಸಾಗಿತ್ತು. ಅವರ ಈ ಮನೋಭಾವನೆಯಿಂದಾಗಿಯೇ ಹಾಗೂ ಮುಂದಾಲೋಚನೆಯಿಂದಲೇ ಭಾರತದ ಪ್ರಥಮ ಉಪಗ್ರಹಉಡಾವಣಾ ವ್ಯವಸ್ಥೆ ಎಸ್.ಎಲ್.ವಿ.-೩ ಯೋಜನೆಗೆ ಅಬ್ದುಲ್ ಕಲಾಂ ಅವರನ್ನು ನಿರ್ದೇಶಕರನ್ನಾಗಿ ನಿಯುಕ್ತಿಗೊಳಿಸಲಾಯಿತು.
ಕಲ್ಪನೆಯಿಂದ ಕಲ್ಪನೆಗೆ….
ರಾಕೆಟ್ತಂತ್ರಜ್ಞಾನ ಎಂದರೆ ನಾನಾರೀತಿಯ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಮ್ಮಿಶ್ರಣ. ವಸ್ತು ತಂತ್ರಜ್ಞಾನ, ವೈಮಾನಿಕ ತಂತ್ರಜ್ಞಾನ, ನಿರ್ಮಾಣ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಂತ್ರಜ್ಞಾನ, ಇವಲ್ಲದೆ ಭೂಮಿಯ ಮೇಲೆ ಸ್ಥಾಪಿಸಬೇಕಾದ ಬಹಳ ವಿಶಿಷ್ಟವಾದ ವ್ಯವಸ್ಥೆಗಳ ನಿರ್ಮಾಣ – ಇವೆಲ್ಲವೂ ಪ್ರಮುಖ ಅಂಗಗಳು. ಇವೆಲ್ಲವನ್ನೂ ಕಲಾಂರ ತಂಡ ಮೊದಲ ಬಾರಿಗೆ ಊಹಿಸಿಕೊಂಡು, ಅದನ್ನು ಕಾರ್ಯಗತಗೊಳಿಸಬೇಕಾಗಿತ್ತು. ಇದಕ್ಕಾಗಿ ಅವರು ತಮ್ಮದೇ ಆದ ಒಂದು ಪ್ರಾಜೆಕ್ಟ್ಟೀಮನ್ನು ಕಟ್ಟಿ, ಎಲ್ಲರಿಗೂ ಸಮವಾಗಿ ಜವಾಬ್ದಾರಿಗಳನ್ನು ಬಿಡಿಸಿ ಹೇಳಿ, ಅದಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಿದರು. ಎಸ್ಎಲ್ವಿ-೩ ನಾಲ್ಕು ಹಂತಗಳುಳ್ಳ ಭಾರತದ ಪ್ರಥಮ ಉಪಗ್ರಹ ಉಡಾವಣಾ ರಾಕೆಟ್ ಆಗಿ ಈಗ ಇಸ್ರೋ ಶ್ರೀಹರಿಕೋಟಾದಿಂದ ಉಡಾವಣೆಮಾಡುತ್ತಿರುವ ಇನ್ನೂ ಅಧಿಕ ಶಕ್ತಿಗಳುಳ್ಳ ರಾಕೆಟ್ ವ್ಯವಸ್ಥೆಗಳಾದ ಪಿ.ಎಸ್.ಎಲ್.ವಿ. ಮತ್ತು ಜಿ.ಎಸ್.ಎಲ್.ವಿ. ಇವುಗಳ ತಂತ್ರಜ್ಞಾನಕ್ಕೆ ಹಾದಿಮಾಡಿಕೊಟ್ಟಿತು. ಹೀಗಾಗಿ ಆ ಸಮಯದಲ್ಲಿ ಹೊರಬಂದ ಎಸ್.ಎಲ್.ವಿ.-೩ ಭಾರತದ ಒಂದು ಮೂಲ ತಂತ್ರಜ್ಞಾನವಾಯಿತು.
ಇಸ್ರೋಗೆ ಇಷ್ಟೆಲ್ಲ ಕೆಲಸ ಮಾಡಿರುವ ನೀವು, ನಮ್ಮ ರಕ್ಷಣಾ ಇಲಾಖೆಗೆ ಕೊಡುಗೆ ನೀಡಬೇಕು ಎಂಬ ಬೇಡಿಕೆ ಕಲಾಂ ಅವರಿಗೆ ಬಂತು. ಇದರಿಂದಾಗಿ ಅವರು ಡಿಫೆನ್ಸ್ ರಿಸರ್ಚ್ ಎಂಡ್ ಡೆವಲಪ್ಮೆಂಟ್ ಲ್ಯಾಬೊರೇಟರಿ(ಡಿ.ಆರ್.ಡಿ.ಎಲ್.)ಗೆ ವರ್ಗವಾದರು. ಕೆಲವು ದಿನಗಳಲ್ಲಿಯೇ ಅದರ ನಿರ್ದೇಶಕರಾದರು. ನಮ್ಮ ದೇಶದ ರಕ್ಷಣೆಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದು ಆಗ ಅವರ ಚಿಂತನೆಯ ವಿಷಯವಾಯಿತು. ನಮ್ಮ ದೇಶಕ್ಕೆ ನಮ್ಮನ್ನು ನಾವು ಕಾಪಾಡಿಕೊಳ್ಳಲು ನಾನಾ ಬಗೆಯ ಕ್ಷಿಪಣಿಗಳ ಅಗತ್ಯವಿದೆ. ಅವುಗಳ ಮೂಲತಂತ್ರಜ್ಞಾನ ಒಂದೇ ಆಗಿದ್ದರೂ ಒಂದೊಂದರ ಕಾರ್ಯವೈಖರಿ ಬೇರೆಬೇರೆಯೇ ಆಗಿತ್ತು. ಕೆಲವು ಆಕಾಶದಿಂದ ಆಕಾಶಕ್ಕೆ, ಕೆಲವು ಭೂಮಿಯಿಂದ ಆಕಾಶಕ್ಕೆ, ಮತ್ತೆ ಕೆಲವು ಆಕಾಶದಿಂದ ಭೂಮಿಗೆ. ಹಾಗಾಗಿ ಅವರು ಒಂದು ಕ್ಷಿಪಣಿಗಳ ಗುಂಪನ್ನೇ ಮನಸ್ಸಿನಲ್ಲಿ ಊಹಿಸಿಕೊಂಡು. ಅದನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಮನವಿಗಳನ್ನು ನೀಡಿ ಆ ಕಾರ್ಯವನ್ನು ಮಾಡಿದರು. ಇಂದಿನ ಪೃಥ್ವಿ, ಆಕಾಶ್, ನಾಗ್ ಮುಂತಾದ ಕ್ಷಿಪಣಿಗಳು ಹೊರಬಂದಿದ್ದು ಕಲಾಂ ಅವರ ಕಲ್ಪನೆಯಿಂದಲೇ.
ಈ ಎಲ್ಲ ಕಾರ್ಯಗಳಿಂದ ಅವರು ಅದಾಗಲೇ ಕೇಂದ್ರಸರ್ಕಾರದ ಗಮನಕ್ಕೂ ಬಂದಿದ್ದರು. ಅವರು ರಕ್ಷಣಾಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರಸರ್ಕಾರದ ಸಲಹೆಗಾರರೂ ಆಗಿ ಕಾರ್ಯನಿರ್ವಹಿಸಿದರು. ಅವರಿಂದ ನಾನಾ ರೀತಿಯ ಕಾರ್ಯನೀತಿಗಳೂ ಹೊರಬಂದವು. ಅದೇ ಸಮಯದಲ್ಲಿ, ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಭಾರತ ಅಣುಬಾಂಬ್ ಸ್ಫೋಟಿಸಿತು. ಈ ಅಣುಬಾಂಬ್ ಸ್ಫೋಟದಲ್ಲಿಯೂ ಕಲಾಂ ಅವರ ಸಹಕಾರ ಮತ್ತು ಪ್ರೋತ್ಸಾಹ ಗಣನೀಯವಾಗಿತ್ತು.
ಕೊನೆಗೆ ೨೦೦೨ರಲ್ಲಿ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿ ರಾಷ್ಟ್ರಪತಿ ಭವನವನ್ನು ಸೇರಿದರು. ಅಲ್ಲಿಂದಾಚೆ ಅವರ ಜೀವನರೀತಿಯೇ ಬದಲಾಯಿತು. ಆದರೆ ಅವರೆಂದೂ ವಿಜ್ಞಾನ, ತಂತ್ರಜ್ಞಾನವನ್ನು ಮರೆಯಲಿಲ್ಲ. ವಿಜ್ಞಾನ, ತಂತ್ರಜ್ಞಾನ ಎನ್ನುವುದು ಕೊನೆಯ ದಿನದವರೆಗೂ ಅವರ ಮೊದಲನೇ ಪ್ರೀತಿಯ ವಿಷಯವಾಗಿತ್ತು. ‘ನಮ್ಮ ಮಡಿವಂತಿಕೆ ಬಿಟ್ಟು ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ವಿಜ್ಞಾನವನ್ನು ಅಳವಡಿಸಿಕೊಂಡರೆ ಮಾತ್ರ ನಾವು ಉದ್ಧಾರವಾಗುವುದು. ಈ ಒಂದು ಮನೋಭಾವ ಬರಬೇಕಾದರೆ ಚಿಕ್ಕಮಕ್ಕಳಿಂದಲೇ ಬರಬೇಕು. ಅವರು ಹೊಸದಾಗಿ ಯೋಚನೆ ಮಾಡಬೇಕು, ಇದುವರೆಗೂ ನಡೆಯದಿದ್ದ ದಾರಿಯಲ್ಲಿ ಅವರು ನಡೆಯಬೇಕು, ಕಷ್ಟಪಟ್ಟು ಕೆಲಸಮಾಡಬೇಕು’ ಎಂಬುದನ್ನು ಅವರು ಯಾವಾಗಲೂ ಹೇಳುತ್ತಿದ್ದರು. ಹೀಗಾಗಿ ಅವರು ಅನೇಕ ಶಾಲಾಕಾಲೇಜುಗಳಿಗೆ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳಿಗೆಲ್ಲ ಸತತವಾಗಿ ಭೇಟಿನೀಡಿದರು. ಅವರಿದ್ದ ಐದುವರ್ಷಗಳಲ್ಲಿ ಸಾವಿರಾರು ಕಿ.ಮೀ. ಗಟ್ಟಲೆ ಪ್ರಯಾಣಮಾಡಿದರು. ದೇಶದ ಮೂಲೆಮೂಲೆಗೆ ಹೋದರು. ಒಂದು ಮಾಹಿತಿ ಪ್ರಕಾರ, ಕೇವಲ ಅಸ್ಸಾಂ ರಾಜ್ಯದಲ್ಲಿಯೇ ಅವರು ಒಂದು ಲಕ್ಷ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ್ದರು! ಅಂದರೆ ೫ ವರ್ಷದಲ್ಲಿ ಅವರು ಅದೆಷ್ಟು ಮಕ್ಕಳೊಂದಿಗೆ ಸಂವಾದ ನಡೆಸಿರಬಹುದು?
ರಾಷ್ಟ್ರಪತಿಯಾದ ನಂತರ ಅವರ ಗಮನ ನಮ್ಮ ದೇಶ ಇನ್ನೂ ಹಿಂದುಳಿದ ದೇಶವೆಂದು ಎಲ್ಲರಲ್ಲೂ ಇಂಗಿತವಾಗಿದ್ದ ಮನೋಭಾವವನ್ನು ಬದಿಗೆ ಒತ್ತಿ, ಭಾರತವನ್ನು ಮುಂದುವರಿದ ದೇಶವಾಗಿಸುವಂತೆ ಎಲ್ಲರೂ ಪಣತೊಡಬೇಕು ಎಂಬ ಯೋಚನೆಯಿಂದ ರಾಷ್ಟ್ರಪತಿ ಭವನದಲ್ಲಿರುವ ನಾನಾರೀತಿಯ ಆಡಳಿತಕಟ್ಟಳೆಗಳನ್ನು ಬದಿಗೊತ್ತಿ, ‘ನನ್ನನ್ನು ನೋಡಲು ಯಾರುಬೇಕಾದರೂ ಬರಬಹುದು’ ಎಂದು ಘೋಷಿಸಿದರು. ಮಕ್ಕಳು, ಅಬಲರು, ಸಂಗೀತಗಾರರು, ರಾಜಕಾರಣಿಗಳು, ವಿಜ್ಞಾನಿಗಳು, ಧರ್ಮಗುರುಗಳು ಸೇರಿದಂತೆ ಸಮಾಜದ ಎಲ್ಲ ವರ್ಗದ, ಎಲ್ಲ ವಯಸ್ಸಿನವರೂ ಅವರನ್ನು ಭೇಟಿಯಾಗುತ್ತಿದ್ದರು. ಮಾತ್ರವಲ್ಲ, ಭಾರತದ ಅಭಿವೃದ್ಧಿಗೆ ಅಗತ್ಯ ಮಾಹಿತಿಗಳನ್ನು ಕಲೆಹಾಕಿ ಖುದ್ದಾಗಿ ಕರ್ನಾಟಕವೂ ಸೇರಿದಂತೆ ಭಾರತದ ಎಲ್ಲ ರಾಜ್ಯಗಳಿಗೂ (ಅರುಣಾಚಲ ಪ್ರದೇಶವನ್ನು ಹೊರತುಪಡಿಸಿ) ಭೇಟಿನೀಡಿ ಅಲ್ಲಿನ ರಾಜ್ಯಸರ್ಕಾರಗಳಿಗೆ ಮಾರ್ಗದರ್ಶನ ಮಾಡಿದರು.
ಅಸಾಮಾನ್ಯ ವ್ಯಕ್ತಿತ್ವ
ಆಗಷ್ಟೇ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿ ಮದ್ರಾಸ್ನಿಂದ ದೆಹಲಿಗೆ ಪ್ರಯಾಣ ಮಾಡಿದ್ದರು. ದೆಹಲಿಯಲ್ಲಿ ಅವರ ಕಛೇರಿಯ ವ್ಯವಸ್ಥೆಯೂ ಸರಿಯಾಗಿ ಆಗಿರಲಿಲ್ಲವೇನೋ. ಅದೇ ಸಮಯದಲ್ಲಿ ಬೆಂಗಳೂರು ಉತ್ತರದಲ್ಲಿರುವ ಆರ್.ಟಿ. ನಗರದಲ್ಲಿ ಒಂದು ಅಂಗವಿಕಲ ಮಕ್ಕಳ ಒಂದು ಸಭೆ ನಡೆಯುವುದಿತ್ತು. ಕಲಾಂರೊಂದಿಗೆ ಈ ಮಕ್ಕಳ ಒಂದು ರೇಡಿಯೋಕಾರ್ಯಕ್ರಮ ನಡೆಸಬಹುದು ಅನ್ನಿಸಿ, ನಾನು ಕಲಾಂರಲ್ಲಿ ವಿನಂತಿಸಿಕೊಂಡೆ. ಅವರು ತಕ್ಷಣ ಒಪ್ಪಿಕೊಂಡರು. ಕಾರ್ಯಕ್ರಮದಲ್ಲಿ ಸುಮಾರು ೨೦೦ ಅಂಗವಿಕಲ ಮಕ್ಕಳು ಭಾಗವಹಿಸಿದ್ದರು. ಮಕ್ಕಳ ಸಂಭ್ರಮ ಹೇಳತೀರದು, ಅವರು ಸಂವಾದಕ್ಕೆಂದು ಅತ್ಯುತ್ಸಾಹದಿಂದ ಕಾಯುತ್ತಿರುವುದನ್ನು ನೋಡಿ ನಾನೂ ಪುಳಕಿತನಾದೆ. ಮಕ್ಕಳ ಮೇಲೆ ಕಲಾಂ ಅವರು ಅದೆಷ್ಟು ಪ್ರಭಾವ ಬೀರಿದ್ದಾರೆ ಎಂದು ಆಶ್ಚರ್ಯವೂ ಆಯಿತು. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಯಿತು. ಮಕ್ಕಳು ಮತ್ತು ಕಲಾಂರ ನಡುವೆ ನಾನು ಅನುವಾದಕನಾಗಿ ನಿಂತೆ. ಮಕ್ಕಳು ಒಬ್ಬರಾದ ಮೇಲೆ ಒಬ್ಬರು ಪ್ರಶ್ನೆ ಕೇಳಿದರು. ಕೆಲವರು ‘ಸರ್, ನಾನು ನಿಮ್ಮ ತರಹವೇ ಆಗಲು ಏನು ಮಾಡಬೇಕು?’ ಎಂದೂ ಕೇಳಿದರು. ಕಲಾಂ ಅವರು ಶಾಂತವಾಗಿ ಉತ್ತರಿಸುತ್ತಿದ್ದರು. ಒಂದು ಗಂಟೆಯ ಕಾಲ ಕಾರ್ಯಕ್ರಮ ನಡೆಯಿತು. ಮಕ್ಕಳೆಲ್ಲ ಧನ್ಯವಾದಗಳು ಎಂದರು. ಕೊನೆಗೆ ಕಲಾಂ ನನ್ನ ಕಡೆ ತಿರುಗಿ, ಸತ್ಯ, ನಾನು ಹೇಳಿದ ಉತ್ತರಗಳನ್ನೇ ಹೇಳಿದಿರಿ ತಾನೇ! ಅಥವಾ ನಿಮ್ಮದೂ ಏನಾದರೂ ಸೇರಿಸಿಬಿಟ್ಟಿದ್ದೀರಾ ಹೇಗೆ ಕೊನೆಗೆ? ಎಂದು ನಗೆಯಾಡುತ್ತಾ ನನ್ನನ್ನು ಕೇಳಿ ಎಲ್ಲರಿಗೂ ವಿದಾಯ ಹೇಳಿದರು.
ಡಾ. ಅಬ್ದುಲ್ ಕಲಾಂ – ಬೆಂಗಳೂರಿನ ಇಬ್ಬರು ಅಂಧಗಾಯಕ ಮಕ್ಕಳು – ರೋಶನ್ ಮತ್ತು ಋತ್ವಿಕ್ ಜೊತೆಯಲ್ಲಿ
ಇನ್ನೊಂದು ಘಟನೆ. ನಾನು ಮಲ್ಲೇಶ್ವರದಲ್ಲಿ ಒಂದು ಸಂಗೀತ ಕಛೇರಿಗೆ ಹೋಗಿದ್ದೆ. ಅಲ್ಲಿ ಹಾಡುತ್ತಿದ್ದವರು ಇಬ್ಬರು ಹುಟ್ಟು ಅಂಧ ಹುಡುಗರು – ರೋಶನ್ ಮತ್ತು ಋತ್ವಿಕ್. ಅವರು ತಮ್ಮ ತಂದೆತಾಯಿಯ ಪ್ರೋತ್ಸಾಹದಿಂದ ಸ್ವಲ್ಪಮಟ್ಟಿಗೆ ಓದಿ, ಕರ್ನಾಟಕ, ಹಿಂದೂಸ್ತಾನಿ ಸಂಗೀತವನ್ನು ಬಹಳ ಚೆನ್ನಾಗಿ ಕಲಿತು ಕನ್ನಡದಲ್ಲಿ, ಹಿಂದಿ, ತಮಿಳು, ತೆಲುಗು ಸೇರಿದಂತೆ ಹೆಚ್ಚುಕಮ್ಮಿ ಭಾರತದ ಎಲ್ಲ ಭಾಷೆಗಳಲ್ಲೂ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅವರ ಸುಶ್ರಾವ್ಯ ಕಂಠದಿಂದ ಬಂದ ಹಾಡು ಕೇಳಿ ನನಗೆ ಕಣ್ಣಲ್ಲಿ ನೀರು ಬರುವ ಹಾಗಾಗಿತ್ತು. ತಕ್ಷಣ ಮನೆಗೆ ಬಂದು ಕಲಾಂರಿಗೆ ಫೋನ್ ಮಾಡಿ, ‘ಮುಂದಿನ ಬಾರಿ ನೀವು ಬೆಂಗಳೂರಿಗೆ ಬಂದಾಗ ರಾಜನ್ ದಂಪತಿಗಳ ಈ ಇಬ್ಬರು ಅಂಧ ಮಕ್ಕಳನ್ನು ಅವರ ಮನೆಯಲ್ಲಿ ಭೇಟಿಮಾಡಬೇಕು. ಅವರ ಮನೆಯಲ್ಲೇ ಅವರ ಸಂಗೀತ ಕೇಳಬೇಕು’ ಎಂದು ವಿನಂತಿಸಿಕೊಂಡೆ. ತಕ್ಷಣ ‘ಖಂಡಿತಾ’ ಎಂದು ಒಪ್ಪಿಕೊಂಡರು.
ಇದಾದ ಎರಡು ತಿಂಗಳ ನಂತರ ಸಂದೇಶ ಬಂತು. ನಾನು ರಾತ್ರಿ ೯.೩೦ಕ್ಕೆ ಹೈದರಾಬಾದ್ನಿಂದ ಬರುತ್ತಿದ್ದೇನೆ. ಯಲಹಂಕದಲ್ಲಿರುವ ರಾಜನ್ ದಂಪತಿಗಳ ಮನೆಯಲ್ಲಿ ಅರ್ಧಗಂಟೆ ಇದ್ದು ನಾನು ರಾಜಭವನಕ್ಕೆ ಹೋಗಬೇಕು. ಅಲ್ಲಿ ಏನೇನು ವ್ಯವಸ್ಥೆ ಮಾಡಬೇಕೋ ಮಾಡಿ – ಎಂದು ಕಲಾಂ ತಿಳಿಸಿದರು. ರಾಜನ್ ಮನೆಯವರ ಸಂತೋಷ ಮತ್ತು ಉತ್ಸಾಹಕ್ಕೆ ಪಾರವೇ ಇರಲಿಲ್ಲ. ನಾನು, ನನ್ನ ಧರ್ಮಪತ್ನಿ ಶಾಮಲಾ, ನನ್ನ ಅಳಿಯ ಉದಯ್ದತ್ತ್ ಮತ್ತು ತಂಗಿ ವತ್ಸಲಾ – ನಾವು ನಾಲ್ವರು ಅವರ ಮನೆಗೆ ಹೋಗಿದ್ದೆವು. ಒಂದು ವರ್ಷದ ಹಿಂದೆ ನಾವು ರಾಷ್ಟ್ರಪತಿ ಭವನದಲ್ಲಿ ಕಲಾಂರನ್ನು ಭೇಟಿಮಾಡಲು ಹೋದಾಗ, ಸ್ವತಃ ಅವರೇ ಇಂಗ್ಲಿಷ್ಗೆ ಅನುವಾದ ಮಾಡಿದ ‘ತಿರುಕ್ಕುರಳ್’ ಅವರ ಹಿಂದಿರುವ ಕಂಪ್ಯೂಟರ್ ಪರದೆ ಮೇಲೆ ಬರುತ್ತಿತ್ತು. ಹೀಗಾಗಿ ನಾನು ಹುಡುಗರಿಗೆ ‘ಕಲಾಂ ಅವರಿಗೆ ಬಹಳ ಪುರಾತನ ತಮಿಳು ಗ್ರಂಥ – ತಿರುಕ್ಕುರಳ್ ಎಂದರೆ ಬಹಳ ಇಷ್ಟ. ಅದರ ಕುರಿತು ಅವರಿಗೆ ಬಹಳ ಆಸಕ್ತಿಯಿದೆ. ತಿರುಕ್ಕುರಳ್ನ ಆಯ್ದ ನಾಲ್ಕೈದು ಪದ್ಯಗಳಿಗೆ ರಾಗಸಂಯೋಜನೆ ಮಾಡಿ ಪ್ರಾರಂಭದಲ್ಲಿಯೇ ಅದನ್ನು ಹಾಡಿ’ ಎಂದು ಸೂಚಿಸಿದೆ. ಅದು ಕಲಾಂ ಅವರಿಗೆ ಗೊತ್ತಿರಲಿಲ್ಲ.
ಕಲಾಂ ಸರಿಯಾಗಿ ೯.೩೦ಕ್ಕೆ ಬಂದರು. ಕುಳಿತುಕೊಂಡರು. ಬಾಲಕರು ತಿರುಕ್ಕುರಳ್ನಿಂದ ಗಾಯನವನ್ನು ಪ್ರಾರಂಭಿಸಿದರು. ಆಲಿಸುತ್ತಿದ್ದ ಕಲಾಂರ ಕಣ್ಣಲ್ಲಿ ನೀರು ಬರುವುದೊಂದು ಬಾಕಿ. ಅವರು ಎಷ್ಟು ಉದ್ವೇಗಭರಿತರಾದರೆಂದರೆ- ಹೇಳಿ, ಇನ್ನೊಂದು ಹೇಳಿ, ಅದು ಹೇಳಿ, ಇದು ಹೇಳಿ, ಆ ಹಾಡು, ಈ ಹಾಡು, ತೆಲುಗು, ತಮಿಳು, ಕನ್ನಡ – ಎಂದು ಪ್ರೋತ್ಸಾಹಿಸುತ್ತಾ, ಕೊನೆಗೆ ರಾತ್ರಿ ಹನ್ನೊಂದೂವರೆ ತನಕ ಅವರ ಮನೆಯಲ್ಲೇ ಕೂತರು! ತಮ್ಮೊಡನೆ ತಾವೇ ಬರೆದಿದ್ದ, ಬ್ರೈಲ್ ಲಿಪಿಗೆ ತರ್ಜುಮೆ ಮಾಡಿದ್ದ ಪುಸ್ತಕಗಳನ್ನು ತಂದಿದ್ದರು. ಅವನ್ನು ಹುಡುಗರ ಕೈಗೆ ಕೊಟ್ಟು, ‘ದೇವರು ಒಳ್ಳೆಯದನ್ನು ಮಾಡಲಿ’ ಎಂದು ಹಾರೈಸಿದರು. ಅಷ್ಟೇ ಅಲ್ಲದೆ, ನನ್ನ ಜೊತೆ ಬಂದಿದ್ದ ಕಣ್ಣಿನ ತಜ್ಞೆಯಾದ ಮಿಂಟೋ ಆಸ್ಪತ್ರೆಯ ನಿರ್ದೇಶಕಿಯಾಗಿದ್ದ ನನ್ನ ತಂಗಿ ಡಾ|| ವತ್ಸಲಾ ಕಡೆಗೆ ತಿರುಗಿ, ನೀವು ಕಣ್ಣಿನ ತಜ್ಞರಲ್ಲವೇ? ದಯವಿಟ್ಟು, ಈ ಇಬ್ಬರು ಹುಡುಗರ ವೈದ್ಯಕೀಯ ಮಾಹಿತಿಗಳನ್ನು ಒಟ್ಟಿಗೆ ಸೇರಿಸಿ, ನೀವೂ ಅದನ್ನು ವಿಶ್ಲೇಷಣೆ ಮಾಡಿ, ನನಗೆ ಕಳುಹಿಸಿಕೊಡಿ. ದೆಹಲಿಯಲ್ಲಿ ನನಗೆ ತಿಳಿದ ವಿದ್ವಾಂಸರು ಕೃತಕಕಣ್ಣಿನಮೇಲೆ ಸಂಶೋಧನೆ ಮಾಡುತ್ತಿದ್ದಾರೆ. ಅವರೇನಾದರೂ ಹುಡುಗರಿಗೆ ಸಹಾಯ ಮಾಡಲು ಸಾಧ್ಯವೇ ಎಂದು ನಾನು ಪ್ರಯತ್ನ ಮಾಡುತ್ತೇನೆ ಎಂದರು. ನನ್ನ ತಂಗಿ ಹಾಗೆಯೇ ಮಾಡಿದರು. ಎಲ್ಲರಿಗೂ ವಂದಿಸಿ ಅವರು ರಾಜಭವನದ ಕಡೆಗೆ ಹೊರಟರು. ನಾವು ಮನೆಯ ಕಡೆ ಹೊರಟೆವು. ಅದಾಗಿ ಇನ್ನೂ ೧೫ ನಿಮಿಷಗಳೂ ಕಳೆದಿರಲಿಲ್ಲ. ಅವರು ಫೋನ್ ಮಾಡಿ, ಸತ್ಯ ಅವರೇ, ನಾನು ನಿಮಗೆ ಧನ್ಯವಾದ ಹೇಳಬೇಕು. ಎಂತಹ ಒಳ್ಳೆಯ ಸನ್ನಿವೇಶವನ್ನು ನೀವು ತಂದುಕೊಟ್ಟಿರಿ! ನನಗಂತೂ ಬಹಳ ಸಂತೋಷವಾಗಿದೆ ಎಂದಾಗ ನಾನಂತೂ ಮೂಕನಾಗಿಬಿಟ್ಟೆ. ಈ ರೀತಿಯ ವ್ಯಕ್ತಿತ್ವ ಅವರಿಗಿತ್ತು. ಅಬಲರ ಬಗ್ಗೆ ಅನುಕಂಪ, ವಿದ್ಯಾಭ್ಯಾಸ ಇಲ್ಲದವನಿಗೆ ಹೇಗಾದರೂ ಮಾಡಿ ವಿದ್ಯಾಭ್ಯಾಸ ನೀಡಿ ಮೇಲಕ್ಕೆ ತರಬೇಕು ಎಂಬುದೇ ಅವರ ಇಂಗಿತವಾಗಿತ್ತು.
೧೯೮೦ರ ದಶಕದ ಪೂರ್ವಾರ್ಧದ ಭಾರತೀಯ ಬಾಹ್ಯಾಕಾಶ ಯೋಜನೆಯ ತಂಡ; ಕುಳಿತವರಲ್ಲಿ ನಾಲ್ಕನೆಯವರು ಅಬ್ದುಲ್ ಕಲಾಂ ಹಾಗೂ ಅವರನಂತರ ಕ್ರಮವಾಗಿ – ಪ್ರೊ|| ಸತೀಶ್ ಧವನ್, ಡಾ. ಬ್ರಹ್ಮ ಪ್ರಕಾಶ್. ಮೇಲೆ ನಿಂತಿರುವವರ ಕೊನೆಯ ಸಾಲಿನಲ್ಲಿ ಎಡದಿಂದ ಬಲಕ್ಕೆ ಮೂರನೆಯವರು ಸಿ.ಆರ್. ಸತ್ಯ (ಚಿತ್ರ ಕೃಪೆ: ಇಸ್ರೋ)
ಎಂದೂ ಬದಲಾಗದ ಸರಳತೆ
ಇನ್ನೊಂದು ಸಂಗತಿ, ಅವರಾಗ ಕೇಂದ್ರಸರ್ಕಾರದ ಸಲಹೆಗಾರರಾಗಿದ್ದರು. ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದರು. ಯಾವುದೋ ಕಾರ್ಯನಿಮಿತ್ತ ನಾನೂ ದಿಲ್ಲಿಗೆ ಹೋಗಿದ್ದರಿಂದ ವಿಮಾನದಲ್ಲಿ ಜೊತೆಯಲ್ಲಿ ಇದ್ದೆವು. ಆಗ ಅವರನ್ನು ದಿನನಿತ್ಯ ಮೀಟಿಂಗ್ಗಳಲ್ಲಿ, ಹೊಟೇಲ್ಗಳಲ್ಲೇ ಊಟ ಮಾಡುತ್ತಿರುತ್ತೀರಿ. ನಿಮಗೆ ಇದು ಸರಿಹೋಗುತ್ತದೆಯೇ? ಎಂದು ಕೇಳಿದೆ. ಏನು ಮಾಡಲಿ, ನಮಗೆಲ್ಲಿ ಮನೆ ಊಟ ಸಿಗುತ್ತದೆ? ಎಂದರು. ಇವತ್ತು ಬೆಂಗಳೂರಿಗೆ ಬರುತ್ತಿದ್ದೀರಲ್ಲಾ ನಮ್ಮ ಮನೆಗೆ ಬನ್ನಿ ಎಂದೆ. ಖಂಡಿತಾ ಎಂದರು. ಅಂದು ನ್ಯಾಷನಲ್ ಏರೋನಾಟಿಕಲ್ ಲ್ಯಾಬೊರೇಟರಿಯಲ್ಲಿ ಬೋರ್ಡ್ ಮೀಟಿಂಗ್ ಇತ್ತು. ಅದು ಎರಡೂವರೆ ಮೂರು ಗಂಟೆಯವರೆಗೆ ನಡೆಯುವುದಿತ್ತು. ಆದರೆ ‘ಬೇಗ ಮುಗಿಸೋಣ, ಬೇರೆ ಕೆಲಸವಿದೆ’ ಎಂದು ಒತ್ತಾಯ ಮಾಡಿ ಬೇಗ ಮುಗಿಸಿದ್ದರು. ನನ್ನ ಜೊತೆ ಹೊರಟಿದ್ದನ್ನು ನೋಡಿದ ಅಲ್ಲಿನ ನಿರ್ದೇಶಕರಾದ ಟಿ.ಎಸ್. ಪ್ರಹ್ಲಾದ್ ಅವರು ‘ಇದು ನಿಮ್ಮದಾ ಕಿತಾಪತಿ? ಇವತ್ತಿನ ಮೀಟಿಂಗ್ನಲ್ಲಿ ಏನೋ ಅವಸರದಲ್ಲಿದ್ದರು, ಬೇಗ ಮುಗಿಸಿ ಎಂದು ಹೇಳುತ್ತಲೇ ಇದ್ದರು. ಈಗ ಅರ್ಥವಾಯಿತು!’ ಎಂದು ನಕ್ಕರು. ಆವತ್ತು ಕಲಾಂ ಹೆಬ್ಬಾಳದ ಬಳಿ ಇರುವ ನಮ್ಮ ಮನೆಗೆ ಬಂದು ಊಟ ಮಾಡಿ ಸುಮಾರು ೩ ಗಂಟೆಗಳ ಕಾಲ ಇದ್ದುಹೋದರು. ಅವರ ಸ್ನೇಹ ಮತ್ತು ಸರಳತೆಗೆ ಇದೊಂದು ಉದಾಹರಣೆ. ಅನಂತರ ಅವರನ್ನು ನಾವು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದಾಗಲೂ ಅವರು ಮೊಟ್ಟಮೊದಲು ನನ್ನ ಶ್ರೀಮತಿಯವರಿಗೆ ಹೇಳಿದ್ದು, ‘ಆವತ್ತಿನ ಊಟ ಎಷ್ಟು ಚೆನ್ನಾಗಿತ್ತು. ಯಾವತ್ತೂ ಜ್ಞಾಪಿಸಿಕೊಳ್ಳುತ್ತೇನೆ’ ಎಂದು!
ಅವರು ಜನಸಾಮಾನ್ಯರನ್ನು ಉತ್ತೇಜನಗೊಳಿಸಿದ ಇನ್ನೊಂದು ವಿಧಾನ, ತಮ್ಮ ಪುಸ್ತಕಗಳ ಮೂಲಕ. ಅವರು ಅನೇಕ ಪ್ರಸಿದ್ಧವಾದ ಕೃತಿಗಳನ್ನು ಬರೆದಿದ್ದಾರೆ. ಅದರಲ್ಲಿ ಅವರ ಆತ್ಮಚರಿತ್ರೆಯೂ ಇದೆ, ನಮ್ಮ ದೇಶದ ಅಭಿವೃದ್ಧಿಗೆ ಮಾಡಬೇಕಾದ ಹಲವಾರು ಯೋಜನೆಗಳ ಕುರಿತೂ ಇದೆ. ಅಧ್ಯಾತ್ಮದ ಬಗ್ಗೆಯೂ ಇದೆ. ಅವರ ಒಂದೊಂದು ಪುಸ್ತಕವೂ ಅದೆಷ್ಟೋ ಬಾರಿ ಮರುಮುದ್ರಣವಾಗಿದೆ. ಎಲ್ಲರ ಕೈಯಲ್ಲೂ ಅವರ ಆತ್ಮಚರಿತ್ರೆ ‘ವಿಂಗ್ಸ್ ಆಫ್ ಫೈರ್’ ಅಂತೂ ಇದ್ದೇ ಇದೆ.
ಅವರು ಹುಟ್ಟಿನಿಂದ ಇಸ್ಲಾಂಧರ್ಮಕ್ಕೆ ಸೇರಿದವರಾದರೂ ಅವರಿಗೆ ಮಿಕ್ಕ ಧರ್ಮಗಳ ಬಗೆಗೆ ಇದ್ದ ಗೌರವ ಹೇಳತೀರದ್ದು. ಅವರು ನೂರಾರು ದೇವಾಲಯಗಳನ್ನು, ಮಠಾಧಿಪತಿಗಳನ್ನು ಭೇಟಿಮಾಡಿ ಸಮಾಲೋಚನೆ ನಡೆಸಿದ್ದರು. ಆದರೂ ಅವರು ಮೂಲತಃ ಇಸ್ಲಾಂ ಧರ್ಮವನ್ನೂ ಬಹಳವಾಗಿ ಗೌರವಿಸುತ್ತಿದ್ದರು. ನಾನು ಅವರ ಜೊತೆ ಕೆಲಸಮಾಡುತ್ತಿದ್ದ ಸಂದರ್ಭದಲ್ಲಿ ಪ್ರತಿ ಶುಕ್ರವಾರ ಬೆಳಗ್ಗೆ ತಿರುವನಂತಪುರದ ಮಸೀದಿಗೆ ಹೋಗಿ ಬರುತ್ತಿರುವುದನ್ನು ನೋಡಿದ್ದೇನೆ. ಅವರಿಗೆ ಹಿಂದೂಧರ್ಮದ ಬಗೆಗೂ ಅಪಾರವಾದ ಗೌರವವಿತ್ತು. ಇದಕ್ಕೆ ಕಾರಣ ಎಲ್ಲರಿಗೂ ತಿಳಿದಿರುವಂತೆ, ಅವರ ತಂದೆಯವರಿಗೆ ಮತ್ತು ರಾಮೇಶ್ವರ ದೇವಸ್ಥಾನದ ಪ್ರಮುಖ ಅರ್ಚಕರಿಗೆ ಬಹಳ ಒಳ್ಳೆಯ ಒಡನಾಟವಿತ್ತು. ರಾಮೇಶ್ವರ ದೇವಸ್ಥಾನದಲ್ಲಿನ ಯಾವುದೇ ಸಂಭ್ರಮ, ಪೂಜೆಪುನಸ್ಕಾರಗಳಿಗೆ ಕಲಾಂರ ತಂದೆಯವರೇ ಚಪ್ಪರಕಟ್ಟಿ, ತೋರಣಕಟ್ಟಿ ಅಲಂಕಾರ ಮಾಡುತ್ತಿದ್ದರಂತೆ. ಅವರಿಬ್ಬರ ಸ್ನೇಹ ಅಷ್ಟು ಗಾಢವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಕಲಾಂ ಅವರ ಮಿಡ್ಲ್ಸ್ಕೂಲ್, ಹೈಸ್ಕೂಲ್ನಲ್ಲಿದ್ದ ಶಿಕ್ಷಕರು ಕಲಾಂರನ್ನು ತಮ್ಮ ಮನೆಗಳಿಗೆ ಕರೆದು ಊಟ ಬಡಿಸುತ್ತಿದ್ದರು. ಈ ಒಡನಾಟದಿಂದಾಗಿಯೇ ಅವರಿಗೆ ಎಲ್ಲ ಧರ್ಮದ ಬಗೆಗೂ ಒಂದು ರೀತಿಯ ವಿಶಾಲವಾದ ಮನೋಭಾವವಿತ್ತು. ಅದು ಅವರಲ್ಲಿ ಕೊನೆಯ ತನಕ ಹಾಗೆಯೇ ಇತ್ತು. ಕೇವಲ ನಂಬಿದ್ದು ಮಾತ್ರವಲ್ಲ ಕಾರ್ಯಗತವಾಗಿಯೂ ಇತ್ತು.
‘ಟೀಮ್ವರ್ಕ್’
ಇವುಗಳಲ್ಲದೇ ಅವರ ಸಂಪರ್ಕ ಬೆಳೆದ ಇನ್ನಿತರ ಕ್ಷೇತ್ರಗಳೆಂದರೆ – ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರ. ಅವರು ಇಸ್ರೋದಲ್ಲಿ ಕೆಲಸಮಾಡುತ್ತಿದ್ದಾಗ ಹೊರತಂದ ರಾಕೆಟ್ ಯೋಜನೆಗಳಾಗಲೀ, ಅನಂತರ ರಕ್ಷಣಾಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾಗ ಅವರಿಂದ ಮೂಡಿಬಂದ ಕ್ಷ್ಷಿಪಣಿಗಳ ಕ್ಷೇತ್ರದಲ್ಲಾಗಲಿ ಅವರೊಂದಿಗೆ ಒಂದು ದೊಡ್ಡ ವೃತ್ತಿಪರ ತಂಡವೇ ಇರುತ್ತಿತ್ತು.
ಅಂದಿನ ಇಸ್ರೋ ಅಧ್ಯಕ್ಷರಾಗಿದ್ದ ಡಾ|| ಸತೀಶ್ ಧಾವನ್ ಅವರ ಆದೇಶವೂ ಹಾಗೆಯೇ ಇತ್ತು: ‘ಯಾವ ಕೆಲಸವೂ ನೀವೊಬ್ಬರೇ ಮಾಡಬೇಡಿ. ಅದನ್ನು ಹಂಚಿಕೊಳ್ಳಿ. ಹಂಚಿಕೊಳ್ಳುವುದು ಎಂದರೆ ಬರೀ ನಿಮ್ಮ ನಿಮ್ಮಲ್ಲೇ ಅಲ್ಲ. ಭಾರತ ದೇಶದ ಎಲ್ಲ ಪ್ರಮುಖ ಸಂಸ್ಥೆಗಳೂ ಅದರಲ್ಲಿ ಪಾಲ್ಗೊಳ್ಳಬೇಕು. ಅದಕ್ಕಾಗಿ ಮೂಲಸಂಶೋಧನೆಗಳನ್ನು ವಿಶ್ವವಿದ್ಯಾಲಯಗಳಿಗೆ ಹಾಗೂ ವಸ್ತು ತಯಾರಿಕೆ ಇನ್ನಿತರ ಸೇವೆಗಳಿಗಾಗಿ ಕೈಗಾರಿಕಾಕ್ಷೇತ್ರಗಳಿಗೆ ನೀಡಿ. ಅದಕ್ಕಾಗಿ ಚಿಕ್ಕ, ದೊಡ್ಡ ಕೈಗಾರಿಕೆಗಳನ್ನು ಒಳಕ್ಕೆ ಸೆಳೆದುಕೊಳ್ಳಿ. ಸಿ.ಎಸ್.ಐ.ಆರ್.ನ ಅಂಗಸಂಸ್ಥೆಯಾದ ಎನ್.ಎ.ಎಲ್. ಮುಂತಾದ, ನಮ್ಮಲ್ಲಿರುವ ಅನೇಕ ಪ್ರಯೋಗಾಲಯಗಳನ್ನು ಯಾವುದಾದರೂ ಒಂದು ರೀತಿಯಲ್ಲಿ ನಿಮ್ಮ ಟೀಮ್ ಒಳಗಡೆ ಸೇರಿಸಿಕೊಳ್ಳಿ. ಅದಾದರೆ ಬರೀ ಇಸ್ರೋ ಮಾತ್ರವಲ್ಲ; ನಮ್ಮ ದೇಶವೇ ಉದ್ಧಾರವಾಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಕೆಲಸಕ್ಕೆ ನಾನಾ ಬಗೆಯ ಕೌಶಲಗಳೂ ಬಂದು ಸೇರುತ್ತವೆ. ಎಲ್ಲ ಕಡೆಯೂ ಎಲ್ಲರೂ ಬುದ್ಧಿವಂತರಲ್ಲ. ಯಾರಿಗೆ ಮಾಡಲು ಸಾಧ್ಯವಿದೆಯೋ ಅವರು ಈ ಯೋಜನೆಗೆ ಸಹಾಯ ಮಾಡಬಹುದು’ – ಎಂಬುದು.
ಕಲಾಂ ಅವರು ಹೇಳಿಕೊಟ್ಟ ಇನ್ನೊಂದು ಸಂಗತಿಯೆಂದರೆ, ನಾವು ಮಾಡುವ ಯಾವುದೇ ಚಿಕ್ಕ ಅಥವಾ ದೊಡ್ಡ ಕೆಲಸವನ್ನು ಮಿಶನ್ ಮೋಡ್ ದೃಷ್ಟಿಯಿಂದಲೇ ಮಾಡಬೇಕು ಎಂಬುದು. ಯಾವುದೇ ಒಂದು ಮಿಶನ್ಗೆ ಒಂದು ಧ್ಯೇಯ ಅಗತ್ಯ. ಆ ಧ್ಯೇಯದ ಬಗ್ಗೆ ಅನುಮಾನ ಅಥವಾ ಗೊಂದಲವಿದ್ದರೆ ಗುರಿ ಮುಟ್ಟಲು ಸಾಧ್ಯವಿಲ್ಲ. ಹೀಗಾಗಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಆ ಧ್ಯೇಯ ಬಹಳ ಚೆನ್ನಾಗಿ ಮನದಟ್ಟಾಗಿರಬೇಕು. ಇದು ಮೊದಲನೆಯದು. ಎರಡನೆಯದು ಪ್ರಾಜೆಕ್ಟ್ ಮೋಡ್. ಅಂದರೆ ಯಾವ ಕಾರ್ಯಗಳೇ ಆಗಿರಲಿ. ಅವುಗಳನ್ನು ಚಿಕ್ಕಚಿಕ್ಕ ಹಂತಗಳನ್ನಾಗಿ ವಿಂಗಡಿಸಬೇಕು. ಒಂದೇ ಕ್ಷಣದಲ್ಲಿ ನಾವು ಗುರಿ ಮುಟ್ಟಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ದೊಡ್ಡ ಕೆಲಸವನ್ನು ಚಿಕ್ಕಚಿಕ್ಕದಾಗಿ ಪರಿವರ್ತಿಸಬೇಕು. ಮೊದಲ ಬಾರಿಗೇ ನಾವು ಕೊನೆಯ ಮೈಲಿಗಲ್ಲನ್ನು ಮುಟ್ಟಬೇಕಾಗಿಲ್ಲ. ಮೊದಲೊಂದು ಪುಟ್ಟ ಹೆಜ್ಜೆ ಇಡಿ; ಅದನ್ನು ನೀವು ದಾಟಿ, ಅದಾದ ನಂತರ ಎರಡನೆಯದು, ಅನಂತರ ಮೂರನೇ ಹೆಜ್ಜೆ. ಅಕಸ್ಮಾತ್ ಆ ಚಿಕ್ಕ ಒಂದು ಹೆಜ್ಜೆಯಲ್ಲಿ ತೊಂದರೆ ಕಾಣಿಸಿದರೆ ಅಥವಾ ತೊಂದರೆಯಾಗುತ್ತದೆ ಎನ್ನುವ ಊಹೆ ನಮ್ಮಲ್ಲಿ ಇದ್ದರೆ ಧೃತಿಗೆಡಬೇಡಿ. ಅದಕ್ಕೊಂದು ಪರ್ಯಾಯ ಮಾರ್ಗವನ್ನು ಮೊದಲೇ ರೂಪಿಸಿಕೊಂಡಿರಿ. ಒಂದು ಹೆಜ್ಜೆ ಸರಿ ಇಲ್ಲ ಎಂದೆನಿಸಿದರೆ ಆ ಇನ್ನೊಂದು ಯೋಜನೆಗೆ ಹೋಗಬೇಕು. ಹೀಗಾದಲ್ಲಿ ಯಾವ ಒಂದು ಹೆಜ್ಜೆಯೂ ಫಲಿಸದಿರಲು ಸಾಧ್ಯವಿರಲಿಲ್ಲ.
ಪುಟಾಣಿ ಅಭಿಷೇಕ(ಸತ್ಯ ಅವರ ಮೊಮ್ಮಗ)ನಿಗೆ
ಕಲಾಂ ಅಜ್ಜನ ಶುಭಾಶಯಗಳು
ಇದೇ ರೀತಿಯ ವ್ಯವಸ್ಥೆ ದೈನಂದಿನವಾಗಿ ಇಸ್ರೋ ಕಾರ್ಯಗಳನ್ನು ರೂಪಿಸಿಕೊಂಡಿರುವುದರಿಂದಾಗಿಯೇ ಇಸ್ರೋ ನಮ್ಮದೇ ಆದ ಉಪಗ್ರಹಗಳನ್ನು ಭೂಕಕ್ಷೆಗೆ ಸೇರಿಸಿ ನಾನಾ ರೀತಿಯ ಸೇವೆಗಳನ್ನೂ ನಮಗೆ ನೀಡುತ್ತಿದೆ. ಅಷ್ಟೇ ಅಲ್ಲ, ಕಳೆದ ಕೆಲವು ವರ್ಷಗಳಿಂದ ನಾವು ಪರದೇಶಗಳಿಂದ ಬರುವ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದೇವೆ. ಹಾಗೆಂದು ಕಲಾಂ ಒಬ್ಬರೇ ಈ ಕೆಲಸ ಮಾಡಿದರು ಎನ್ನಲಾಗದು. ಅದು ಅವರ ಟೀಮ್ವರ್ಕ್. ಯಾವುದೇ ಒಂದು ಟೀಮ್ ಮುಂದುವರಿಯಬೇಕಾದರೆ ಅದರ ನಾಯಕತ್ವ ಚೆನ್ನಾಗಿರಬೇಕಲ್ಲ! ಈ ರೀತಿಯ ನಾಯಕತ್ವದಿಂದ ಅವರು ಅಷ್ಟು ಸಾಧಿಸಲು ಅನುಕೂಲವಾಯಿತು. ಆದರೆ ಅವರ ಕೆಳಗೆ ಕೆಲಸ ಮಾಡಿದ ನನ್ನಂಥ ಸಾವಿರಾರು ಜನರಿಗೆ ಅವರಿಂದ ಕಲಿತ ಪಾಠವನ್ನು ಮಾತ್ರ ಜೀವಮಾನವಿಡೀ ಮರೆಯಲಾಗದು.
ಕಲಾಂ ಅತ್ಯಂತ ಸರಳಜೀವಿಯಾಗಿದ್ದರು. ಮಿತ ಶಾಕಾಹಾರಿ. ನಾನು ಅವರೊಡನೆಯಿದ್ದ ಸಮಯದಲ್ಲಿ ಅವರ ಉಡುಗೆತೊಡುಗೆಯೆಂದರೆ ಒಂದು ಶರ್ಟು, ಒಂದು ಪ್ಯಾಂಟು ಮತ್ತು ಚಪ್ಪಲಿ! ವರ್ಷಾನುಗಟ್ಟಲೆ ನಾನು ಅವರನ್ನು ನೋಡಿರುವುದು ಈ ರೂಪದಲ್ಲೇ! ಅವರು ಚೆನ್ನಾಗಿ ವೇಷಭೂಷಣ ಹಾಕಿಕೊಂಡಿದ್ದು ಬಹುಶಃ ರಾಷ್ಟ್ರಪತಿಗಳಾದ ಮೇಲೆಯೇ ಎಂದು ಕಾಣುತ್ತದೆ.
ಅವರೊಬ್ಬ ಮಾದರಿ ಪ್ರಜೆಯೂ ಕೂಡ. ಅವರನ್ನು ನಾವು ‘ಟ್ರೂ ಇಂಡಿಯನ್’ ಎಂದು ಕರೆದರೂ ಉತ್ಪ್ರೇಕ್ಷೆ ಆಗಲಾರದು! ಎಷ್ಟೋ ಜನ ಈಗಲೂ ಅವರನ್ನು ‘ಪೀಪಲ್ಸ್ ಪ್ರೆಸಿಡೆಂಟ್’ (ಜನತೆಯ ರಾಷ್ಟ್ರಪತಿ) ಎಂದು ಕರೆಯುತ್ತಾರೆ. ಅದಕ್ಕೆ ಅವರು ನಿಜವಾದ ಪ್ರತೀಕವಾಗಿಯೇ ಇದ್ದಾರೆ. ಸಾಮಾನ್ಯ ಜನರಿಗೂ ಅವರಮೇಲಿದ್ದ ಅಭಿಮಾನ ಅಪೂರ್ವವಾದದ್ದು. ಮಕ್ಕಳಿಗೆ ಅವರಲ್ಲಿದ್ದ ಪ್ರೇಮವಂತೂ ಆಶ್ಚರ್ಯ ಮೂಡಿಸುತ್ತದೆ. ಎಲ್ಲರಿಗಿಂತ ಮಕ್ಕಳೇ ಅವರನ್ನು ಹೆಚ್ಚಾಗಿ ಕಳೆದುಕೊಂಡಿದ್ದಾರೆ ಎಂದೆನಿಸುತ್ತದೆ. ಹಾಗಾಗಿ ಎಷ್ಟು ಮಕ್ಕಳು ‘ಕಲಾಂ ಅಜ್ಜ, ಮತ್ತೊಮ್ಮೆ ನಮ್ಮೆಡೆಗೆ ಹುಟ್ಟಿಬನ್ನಿ!’ ಎಂದು ಪರಿತಪಿಸುತ್ತಿದ್ದಾರೋ ಗೊತ್ತಿಲ್ಲ.