ಪ್ರಾಸ್ತಾವಿಕ
ಈಗ್ಗೆ ಹತ್ತಿರಹತ್ತಿರ ಏಳು ದಶಕಗಳ ಹಿಂದೆ ರೂಪ ತಳೆದ ಭಾರತೀಯ ರಾಜ್ಯಾಂಗವ್ಯವಸ್ಥೆಯು ಈ ದೇಶದ ಮನೋರಚನೆಗೆ ಹೊಂದಿಕೆಯಾಗುವ ರೀತಿಯದಾಗಿಲ್ಲವೆಂಬ ಅನಿಸಿಕೆ ಗಾಂಧಿಯವರಿಂದ ಮೊದಲ್ಗೊಂಡು ಅನೇಕ ಧೀಮಂತರಿಂದ ವ್ಯಕ್ತವಾಗಿದೆ. ಪ್ರಚಲಿತವಾಗಿರುವುದಕ್ಕಿಂತ ಮೇಲಾದ ಪರ್ಯಾಯ ಏನಿರಬಹುದೆಂಬ ಬಗೆಗೆ ವಿನೋಬಾ ಭಾವೆ, ಜಯಪ್ರಕಾಶ ನಾರಾಯಣ್ ಮೊದಲಾದ ಹಲವರು ಚಿಂತನೆ ನಡೆಸಿದ್ದಾರೆ. ಈಗ ಅಮಲಿನಲ್ಲಿರುವ ವ್ಯವಸ್ಥೆಯು ಪಾಶ್ಚಾತ್ಯಪ್ರೇರಿತವೆಂಬಷ್ಟೆ ಕಾರಣದಿಂದ ವಿಮರ್ಶನೀಯವೆನಿಸಿಲ್ಲ. ಒಟ್ಟಾರೆಯಾಗಿ ಸಂಸದೀಯ ಪ್ರಜಾಪ್ರಭುತ್ವ ಎಂದು ಈಗಿನದು ನಾಮಾಂಕನಗೊಂಡಿದೆ. ಪ್ರಾದೇಶಿಕ-ಭಾಷಿಕಾದಿ ವಿಶೇಷತೆಗಳನ್ನು ಮಾನ್ಯಮಾಡುವ ರೀತಿಯ ಪ್ರಾಂತಗಳು, ರಾಷ್ಟ್ರಸ್ತರೀಯ ಆವಶ್ಯಕತೆಗಳ ದೃಷ್ಟಿಯಿಂದ ಬಲಿಷ್ಠ ಕೇಂದ್ರ; – ಇದು ಸ್ಥೂಲವಾಗಿ ಈಗಿನ ಪ್ರಾಕಾರ. ಈ ಆಧಾರವಿನ್ಯಾಸವೂ ೧೯೬೦ರ ದಶಕದಿಂದೀಚೆಗೆ ಪರಾಮರ್ಶನೆಗೆ ಒಳಗಾಗಿದೆ. ಇದಕ್ಕಿಂತ ಮಿಗಿಲಾಗಿ ಪ್ರಚಲಿತ ವ್ಯವಸ್ಥೆಯಲ್ಲಿ ವ್ಯಕ್ತಿ, ಕುಟುಂಬ, ಸಮಾಜ, ರಾಷ್ಟ್ರ – ಇವುಗಳ ನಡುವೆ ಜೈವಿಕ ಸುಸಂಬದ್ಧತೆಯು ಅವಶ್ಯವೆಂಬ ತತ್ತ್ವಕ್ಕೆ ಗೌಣ ಸ್ಥಾನವಷ್ಟೆ ಸಂದಿದೆ. ಭಾರತೀಯ ಆರ್ಷ ಚಿಂತನೆಯಾದರೊ ಸಮಾಜ, ಕುಟುಂಬ ಮೊದಲಾದವುಗಳ ನಡುವೆ ಮಾತ್ರವಲ್ಲದೆ ಜಡಚೇತನಾದಿ ಸಮಸ್ತ ವಿಶ್ವದೊಡನೆ ಸಾಮರಸ್ಯಸಂಬಂಧವಿದ್ದಲ್ಲಿ ಮಾತ್ರ ಸರ್ವಹಿತ ಸಾಧನೆ ಆಗಬಲ್ಲದೆಂದು ಪ್ರತಿಪಾದಿಸಿದೆ. ಸಹಜವಾಗಿ ರಾಜ್ಯಾಂಗವೂ ಸೃಷ್ಟಿ-ಪ್ರಕೃತಿಗೆ ಅನುಗುಣವಾಗಿರಬೇಕಾದುದು ಅವಶ್ಯವಿದೆ. ಈ ಸಮಗ್ರತೆಯ ಅಭಾವವಿರುವುದರಿಂದಾಗಿ ಪ್ರಚಲಿತ ವ್ಯವಸ್ಥೆಗಳು ಅಸ್ಥಿರವೂ ಸಂಘರ್ಷಜನಕಗಳೂ ಆಗಿವೆ. ಈ ಹಿನ್ನೆಲೆಯಲ್ಲಿ ಆರ್ಷ ಜೀವನದೃಷ್ಟಿಯನ್ನು ಆಧಾರವಾಗಿರಿಸಿಕೊಂಡ ರಾಜ್ಯಾಂಗವಿನ್ಯಾಸವು ರೂಪತಳೆಯಬೇಕಾಗಿದೆ. ಈ ದಿಶೆಯಲ್ಲಿ ಗಾಢ ಚಿಂತನೆ ನಡೆಸಿ ಭಾರತೀಯ ಸಂಸ್ಕೃತಿಗೂ ಮಾನಸಿಕತೆಗೂ ಅನುಗುಣವಾದ ‘ಏಕಾತ್ಮಮಾನವದರ್ಶನ’ ಪ್ರಸ್ಥಾನವನ್ನು ಆವಿಷ್ಕರಿಸಿದ ದಾರ್ಶನಿಕರು ಪಂಡಿತ ದೀನದಯಾಳ ಉಪಾಧ್ಯಾಯ (೨೫.೯.೧೯೧೬ – ೧೧.೨.೧೯೬೮). ರಾಜಕೀಯವೂ ಸೇರಿದಂತೆ ಜೀವನದ ಎಲ್ಲ ಮುಖಗಳೂ ಸಹಕಾರ-ಸಾಮರಸ್ಯಗಳ ಮತ್ತು ಆಧ್ಯಾತ್ಮಿಕತೆಯ ನೆಲೆಗಟ್ಟಿನ ಮೇಲೆ ರೂಪಗೊಂಡಲ್ಲಿ ಮಾತ್ರ ಸರ್ವೋದಯದ ಲಕ್ಷ್ಯವು ಈಡೇರಲಾದೀತೆಂಬುದು ಆರ್ಷಪ್ರಜ್ಞೆಯಿಂದ ಪ್ರೇರಿತವಾದ ಈ ದರ್ಶನದ ಹೃದ್ಭಾಗ. ‘ಯತ್ ಪಿಂಡೇ, ತದ್ ಬ್ರಹ್ಮಾಂಡೇ’ – ಎಂದರೆ ವ್ಯಷ್ಟಿ-ಸಮಷ್ಟಿಗಳ ಆಭಿಮುಖ್ಯ ಮಾತ್ರ ಸರ್ವಲೋಕಹಿತಕ್ಕೆ ದಾರಿ ಮಾಡಬಲ್ಲದು. ೨೦೧೫-೨೦೧೬ ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮಶತಾಬ್ದ ವರ್ಷವಾಗಿರುವ ಹಿನ್ನೆಲೆಯಲ್ಲಿ ಅವರ ಬದುಕಿನ ಹಾಗೂ ದಿಗಂತವ್ಯಾಪಿ ಚಿಂತನೆಯ ಸ್ಮರಣೆಯು ಸಂಗತವಾಗಿದೆ.