ಸಾರ್ವಜನಿಕರಲ್ಲಿ ತೀವ್ರ ಆಕ್ರೋಶವನ್ನು ಮೂಡಿಸುವಂತಹ ಯಾವುದೊ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುವುದು, ಅದು ಅಲಕ್ಷಿಸಲಾಗದ ಮಟ್ಟದ್ದೆನಿಸಿದಾಗ ಅದರ ಬಗೆಗೆ ತನಿಖೆ ಉಪಕ್ರಮಗೊಳ್ಳುವುದು, ತನಿಖೆಯು ಮಂದಗತಿಯಲ್ಲಿ ಸಾಗುವುದು, ಎಷ್ಟೊ ಸಮಯದ ನಂತರ ಅದು ನ್ಯಾಯಾಲಯದ ವರೆಗೆ ತಲಪುವುದು, ಇನ್ನಷ್ಟು ವಿಳಂಬ, ತೀರಾ ವಿರಳ ಪ್ರಸಂಗಗಳಲ್ಲಷ್ಟೆ ಏನೊ ಒಂದು ತೀರ್ಪು ಹೊರಬೀಳುವುದು, ಅನಂತರವೂ ಆಪಾದಿತರು ಈಗಿನ ವ್ಯವಸ್ಥಾಶೈಥಿಲ್ಯದ ಲಾಭ ಪಡೆದು ದಂಡನೆಯನ್ನು ತಪ್ಪಿಸಿಕೊಳ್ಳುವುದು – ಈ ರೀತಿಯ ನ್ಯಾಯವಿಡಂಬನೆ ಈಗ ಮಾಮೂಲೆನಿಸಿದೆ. ಜಯಲಲಿತಾ, ಸಲ್ಮಾನ್‌ಖಾನ್ ಪ್ರಹಸನಗಳ ನೆನಪು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿರುವಾಗಲೆ ಐ.ಪಿ.ಎಲ್. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಶಾಂತಕುಮಾರನ್ ಶ್ರೀಶಾಂತ್, ಅಂಕಿತ್ ಚವ್ಹಾಣ್, ಅಜಿತ್ ಚಂಡೆಲಾ – ಮೂವರೂ ‘ನಿರಪರಾಧಿ’ಗಳೆಂದು ಜುಲೈ ೨೫ ರಂದು ದೆಹಲಿ ನ್ಯಾಯಾಲಯ ತೀರ್ಪನ್ನು ಘೋಷಿಸಿದೆ. ಈಗ್ಗೆ ಇಪ್ಪತ್ತಾರು ತಿಂಗಳ ಹಿಂದೆ ಅಕ್ರಮ ಬೆಟ್ಟಿಂಗ್ ವ್ಯವಹಾರದಲ್ಲಿ ಕೃತ್ಯ ನಡೆದಿರುವಾಗಲೆ (ರೆಡ್-ಹ್ಯಾಂಡಡ್) ಈ ಆಟಗಾರರ ವರ್ತನೆ ದಾಖಲೆಯಾಗಿ ಅವರನ್ನು ಬಂಧಿಸಲಾಗಿತ್ತು (೧೬-೫-೨೦೧೩). ಈ ಮೂವರಲ್ಲದೆ ಇನ್ನೂ ೩೯ ಮಂದಿಯ ಮೇಲೂ ಚಾರ್ಜ್‌ಶೀಟನ್ನು ದಾಖಲಿಸಲಾಗಿತ್ತು (೩೦-೭-೨೦೧೩). ಅನಂತರ ಬಿ.ಸಿ.ಸಿ.ಐ. ಆಡಳಿತ ಮಂಡಳಿಯು ಶ್ರೀಶಾಂತ್ ಮತ್ತು ಚವ್ಹಾಣ್‌ರಿಗೆ ಜೀವಿತಾವಧಿ ನಿಷೇಧವನ್ನು ಜಾರಿಮಾಡಿತ್ತು (೧೩-೯-೨೦೧೩). ಕಳೆದ ವರ್ಷ ಇದೇ ಮೊಕದ್ದಮೆಯ ಹಿನ್ನೆಲೆಯಲ್ಲಿ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದೂ ನ್ಯಾಯಾಲಯ ಆದೇಶ ನೀಡಿತ್ತು (೧೬-೮-೨೦೧೪). ಎಷ್ಟೆಲ್ಲಾ ವಿಚಾರಣೆ ನಡೆದ ಮೇಲೆ ದೆಹಲಿ ನ್ಯಾಯಾಲಯ ಇಡೀ ಜನತೆಯನ್ನು ಅಚ್ಚರಿಗೊಳಿಸುವ ತೀರ್ಪನ್ನಿತ್ತಿದೆ. ಸದ್ಯಕ್ಕಂತೂ ಬಿ.ಸಿ.ಸಿ.ಐ. (ಅದು ಫಿರ್ಯಾದಿಯಲ್ಲದುದರಿಂದ) ನಿಷೇಧವನ್ನು ಮುಂದುವರಿಸಬಹುದಾಗಿದೆ. ಮುಂದೆ ನ್ಯಾಯಾಲಯದ ನಿರ್ದೇಶ ಬಿ.ಸಿ.ಸಿ.ಐ. ಮೇಲೂ ಜಾರಿಯಾಗಬಹುದೇನೋ, ಯಾರು ಬಲ್ಲರು! ಒಟ್ಟಿನ ಮೇಲೆ ಎಷ್ಟೇ ಹೀನ ನಿಯಮೋಲ್ಲಂಘನೆಯ ಪ್ರಸಂಗದಲ್ಲಿಯೂ ನ್ಯಾಯಾಸ್ಥಾನದಲ್ಲಿ ನೈತಿಕತೆಯ ಪರವಾದ ನಿರ್ಣಯ ಹೊಮ್ಮೀತೆಂಬ ಭರವಸೆಯ ಮೇಲೆ ಒಂದಾದ ಮೇಲೊಂದು ಆಘಾತಗಳು ಎರಗುತ್ತಿವೆ. ಉಪ್ಪು ಅದರ ರುಚಿಯನ್ನು ಕಳೆದುಕೊಂಡರೆ ಅದಕ್ಕೆ ಬೇರೆ ಯಾರು ತಾನೆ ಜೀವ ಕೊಡಬಲ್ಲರು?
ಅಚ್ಚರಿ ಮೂಡಿಸಿರುವ ಮತ್ತೊಂದು ತೀರ್ಪು
Month : September-2015 Episode : Author :