ಧರ್ಮಹಾನಿ ಮಾಡಿ ಪ್ರಜೆಗಳನ್ನು ಪೀಡಿಸುವ ರಾಜರ ವಂಶಗಳೇ ನಶಿಸುತ್ತವೆ. ಧರ್ಮಪಾಲನೆ ಮಾಡುವ ರಾಜರ ವಂಶಗಳು ಉಚ್ಛ್ರಾಯ ಹೊಂದುತ್ತವೆ…
ಅದೊಂದು ದೊಡ್ಡ ವಿಚಿತ್ರ ಎನಿಸುತ್ತಿತ್ತು.
ಮುಸಲಧಾರೆಯಂತೆ ಮಂಜು ಸುರಿಯುತ್ತಿದೆ. ರಸ್ತೆಯ ತುಂಬ ಮಂಜುಗಡ್ಡೆಗಳ ರಾಶಿ ಶೇಖರಗೊಂಡಿದೆ. ದೂರದಲ್ಲೆಲ್ಲೋ ಮಂಜಿನ ಸೆಳವಿನಲ್ಲಿ ಸಿಕ್ಕಿಕೊಂಡಿದ್ದವರ ಆಕ್ರಂದನಗಳು ಕೇಳುತ್ತಿವೆ. ಆದರೆ ವಿಸ್ಮಯವೆಂದರೆ ಮೇಲಿನಿಂದ ಬೀಳುತ್ತಿದ್ದ ಮಂಜಿನಲ್ಲಿ ರಭಸವಿರದೆ ಮಾರ್ದವವಿತ್ತು. ಬೇರೆ ಕಡೆಗಳಲ್ಲಿ ಮಂಜುಸುರಿಯುವಾಗ ಸೇಡು ತೀರಿಸಿಕೊಳ್ಳುತ್ತಿರುವಂತೆ ಅದು ಎರಗುವುದು ಅಪರೂಪವಲ್ಲ. ಆದರೆ ಇಲ್ಲಿ ಮಂಜು ಹಾಗಿಲ್ಲದೆ ಹಾಯಾಗಿ ನಿದ್ರಿಸುವ ಮಗುವಿನ ಹಣೆಯನ್ನು ತಾಯಿಯು ಪ್ರೇಮಳತೆಯಿಂದ ನೇವರಿಸುತ್ತಿರುವಂತೆ ಇತ್ತು.
“ಇದೇನು ವಿಚಿತ್ರ, ನಾಗನಾಥಾಚಾರ್ಯ?” ಎಂದು ಕೌತುಕದಿಂದ ಕೇಳಿದ, ಚಂದ್ರದೇವ.
ಚಂದ್ರದೇವನು ಕಾಶ್ಯಪಗೋತ್ರಜ. ಈಗಷ್ಟೇ ಭಾರತಪರ್ಯಟನ ಮುಗಿಸಿ ಕಶ್ಮೀರಕ್ಕೆ ಬಂದಿದ್ದ. ದೇಶದ ಹತ್ತಾರು ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದ್ದ. ತೀರ್ಥಕ್ಷೇತ್ರಗಳಲ್ಲಿ ಮಿಂದು ಪರಿಶುಭ್ರನಾಗಿದ್ದ. ಅನೇಕ ಯೋಗಿಗಳೊಡನೆಯೂ ಆಧ್ಯಾತ್ಮಿಕ ಸಾಧಕರೊಡನೆಯೂ ಚರ್ಚೆ ನಡೆಸಿ ಅನೇಕ ವಿಷಯಗಳನ್ನು ಅವಗತ ಮಾಡಿಕೊಂಡು ಬಂದಿದ್ದ.
ಆದರೆ ಅವನು ಕಶ್ಮೀರವನ್ನು ಬಿಟ್ಟು ಹೊರಟಿದ್ದಾಗಿನ ಸ್ಥಿತಿಗೂ ಈಗಿನದಕ್ಕೂ ನಡುವೆ ಸಾಮ್ಯವಿರಲಿಲ್ಲ. ಭೌತಿಕವಾಗಿಯೂ ರಾಜಕೀಯವಾಗಿಯೂ ತುಂಬಾ ಮಾರ್ಪಾಡುಗಳು ಆಗಿದ್ದವು.
ಹಿಂದಿನ ದಿನಗಳಲ್ಲಿ ಮಂಜು ಇಷ್ಟು ತೀವ್ರವಾಗಿ ಸುರಿಯುತ್ತಿರಲಿಲ್ಲ. ಈಗಿರುವಂತೆ ಆರು ತಿಂಗಳು ಸತತವಾಗಿ ಮಂಜು ಬೀಳುತ್ತಿರಲಿಲ್ಲ. ಇನ್ನೊಂದು ವಿಚಿತ್ರವೆಂದರೆ ಕೆಲವು ಪ್ರದೇಶಗಳಲ್ಲಿ ಅದು ತುಂಬಾ ರಭಸದಿಂದ ಬೀಳುತ್ತಿದ್ದರೆ ಇನ್ನು ಕೆಲವು ಕಡೆ ಮೃದುವಾಗಿ ಬೀಳುತ್ತಿತ್ತು. ಇದು ಹೇಗೆಂಬುದು ಚಂದ್ರದೇವನಿಗೆ ಅರ್ಥವಾಗದ ಸಂಗತಿಯಾಗಿತ್ತು.
ಚಂದ್ರದೇವನು ಪ್ರಶ್ನಿಸಿದುದಕ್ಕೆ ನಾಗನಾಥಾಚಾರ್ಯನೂ ಆತನೊಡನಿದ್ದ ಇನ್ನೊಬ್ಬ ಯುವಕನೂ ನಕ್ಕರು. “ನಿನ್ನನ್ನು ಈ ಹವೆಯಲ್ಲಿ ಇಷ್ಟು ದೂರ ಬರುವಂತೆ ಕರೆಯಿಸಿಕೊಂಡದ್ದು ಇದನ್ನು ನೋಡುವುದಕ್ಕಾಗಿಯೇ, ಚಂದ್ರದೇವ!” ಎಂದ ನಾಗನಾಥಾಚಾರ್ಯ, ಆಪ್ಯಾಯನಕರ ಧ್ವನಿಯಲ್ಲಿ.
“ನನಗೆ ಏನೂ ಅರ್ಥವಾಗುತ್ತಿಲ್ಲ, ನಾಗನಾಥಾಚಾರ್ಯ!” ಎಂದ ಚಂದ್ರದೇವ, ವಿನಯದಿಂದ.
“ನೀನು ಕಶ್ಮೀರವನ್ನು ಬಿಟ್ಟು ಹೊರಟಾಗಿನಿಂದ ರಾಜ್ಯದಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ಬೌದ್ಧಮತೀಯರು ವಿಜೃಂಭಿಸಿದ್ದಾರೆ. ಭಾರತದ ಇತರ ಭಾಗಗಳಿಂದ ಅನೇಕ ಮಂದಿ ಬೌದ್ಧರನ್ನು ನಾಗಾರ್ಜುನ ಬೋಧಿಸತ್ತ್ವನು ಕಶ್ಮೀರಕ್ಕೆ ಕರೆಯಿಸಿದ್ದಾನೆ. ಅವರೆಲ್ಲ ಹಿಂದೆ ಜಲೌಕ ಮಹಾರಾಜ ಆಳುತ್ತಿದ್ದಾಗ ಕಶ್ಮೀರ ಬಿಟ್ಟು ಓಡಿ ಹೋಗಿದ್ದವರು.”
“ಅಂದರೆ ರಾಜದ್ರೊಹವೆಸಗುವ ಉದ್ದೇಶದಿಂದ ವಿಹಾರಗಳಲ್ಲಿ ಶತ್ರುಸೈನಿಕರಿಗೆ ಆಸರೆ ಕೊಟ್ಟಿದ್ದವರು, ಅಲ್ಲವೆ?” ಎಂದು ಕೇಳಿದ, ಚಂದ್ರದೇವ.
“ಹೌದು. ಇವರೆಲ್ಲ ವೈದಿಕಾಚಾರಗಳನ್ನು ತುಂಬಾ ದ್ವೇಷಿಸುವವರು. ಅಲ್ಲದೆ ಬೇರೆ ರಾಜ್ಯಗಳಲ್ಲಿ ಕಲಿತುಕೊಂಡಿದ್ದ ವಿಚಿತ್ರ ದುಷ್ಟಪದ್ಧತಿಗಳನ್ನು ಇಲ್ಲಿ ಪ್ರಯೋಗಿಸಿ ಅನೇಕ ವೈದಿಕರನ್ನು ಬಲವಂತವಾಗಿ ಬೌದ್ಧಮತಕ್ಕೆ ಪರಿವರ್ತಿಸಿದ್ದವರು. ಹೀಗೆ ಕಶ್ಮೀರದಲ್ಲಿ ಸನಾತನಧರ್ಮಕ್ಕೆ ಗ್ರಹಣ ಹಿಡಿದಂತೆ ಆಗಿತ್ತು” ಎಂದ ನಾಗನಾಥಾಚಾರ್ಯ, ವಿಷಾದದ ಸ್ವರದಲ್ಲಿ.
ಚಂದ್ರದೇವನು ಆಶ್ಚರ್ಯದಿಂದ ಕೇಳಿದ – “ಅದೇನು ಹಾಗೆನ್ನುತ್ತೀರಿ? ಅಭಿಮನ್ಯುಮಹಾರಾಜನು ಶಶಾಂಕಶೇಖರನನ್ನು ಪ್ರತಿಷ್ಠೆಗೊಳಿಸಿ ವೈದಿಕಧರ್ಮವನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾನೆಂದು ಕೇಳಿದ್ದೇನೆ. ಪಾತಂಜಲ ಮಹಾಭಾಷ್ಯವನ್ನು ಕಶ್ಮೀರಕ್ಕೆ ತರಿಸಿ ಚಂದ್ರಾಚಾರ್ಯನ ಸಹಾಯದಿಂದ ಪಾತಂಜಲ ವೈಯಾಕರಣ ಮಹಾಭಾಷ್ಯವನ್ನು ಪ್ರಚುರಗೊಳಿಸಿದನೆಂದೂ ಕೇಳಿದೆ. ಚಂದ್ರಾಚಾರ್ಯನ ಅನುಯಾಯಿಗಳು ಚಾಂದ್ರ ವ್ಯಾಕರಣವನ್ನು ರಚಿಸಿ ಕೀರ್ತಿವಂತರಾದರಂತೆ ಅಲ್ಲವೆ?”
“ಹೌದು, ಅದೆಲ್ಲ ನಿಜವೇ. ಆದರೆ ನಂದಿಹೋಗುವುದಕ್ಕೆ ಮೊದಲು ದೀಪ ಒಮ್ಮೆ ಪ್ರಕಾಶಗೊಳ್ಳುವಂತೆಯೆ ಇದೆಲ್ಲ” ಎಂದ, ನಾಗನಾಥಾಚಾರ್ಯ.
“ಬಿಡ್ತು ಎನ್ನಿ. ಸನಾತನಧರ್ಮದ ಬಗೆಗೆ ಇಂತಹ ಆಲೋಚನೆ ಬರಬಹುದೆ? ಸನಾತನಧರ್ಮವನ್ನು ಆರಿಹೋಗುತ್ತಿರುವ ಧರ್ಮಕ್ಕೆ ಹೋಲಿಸುವುದು ಸಮಂಜಸವೆನಿಸದು. `ಯದಾ ಯದಾ ಹಿ ಧರ್ಮಸ್ಯ…… ‘ ವಾಕ್ಯವನ್ನು ಸ್ಮರಣೆಗೆ ತಂದುಕೊಳ್ಳಿರಿ.”
ನಾಗನಾಥಾಚಾರ್ಯನು ನೀರಸವಾಗಿ ನಕ್ಕು ಹೇಳಿದ:
“ನಿನಗೆ ತಿಳಿಯದುದು ಏನಿದೆ? ಜಲೌಕ ಮಹಾರಾಜನ ಕಾಲದಲ್ಲಿ ಕಶ್ಮೀರವು ಸ್ವರ್ಗಸದೃಶವೆನಿಸುತ್ತಿತ್ತು. ಅವನನ್ನು ಬೌದ್ಧರ ಕ್ಷುದ್ರಶಕ್ತಿಗಳೂ ಯಾವುದೂ ಬಾಧಿಸಲಾಗಲಿಲ್ಲ. ಅವನ ತರುವಾಯ ಆಳಿದ ದಾಮೋದರನೂ ವೇದೋಕ್ತಧರ್ಮದಲ್ಲಿ ಶ್ರದ್ಧೆ ಇದ್ದವನು. ಆದರೆ ಅವನು ಬ್ರಾಹ್ಮಣಶಾಪಕ್ಕೆ ಗುರಿಯಾಗಿ ಸರ್ಪದ ರೂಪವನ್ನು ತಳೆದ. ಆಗಿನಿಂದ ಕಶ್ಮೀರ ರಾಜ್ಯದಲ್ಲಿ ಅಲ್ಲೋಲಕಲ್ಲೋಲವಾಯಿತು. ಹುಷ್ಕ, ಜುಷ್ಕ, ಕನಿಷ್ಕ ಎಂಬ ಬೌದ್ಧತುರುಷ್ಕರು ವರಸೆಯಾಗಿ ಕಶ್ಮೀರವನ್ನು ಆಳಿದರು. ಅವರ ಆಳ್ವಿಕೆಯ ಅವಧಿಯಲ್ಲಿ ಕಶ್ಮೀರ ರಾಜ್ಯವು ಬೌದ್ಧರಿಗೆ ಗ್ರಾಸವಾಯಿತು. ಅನಂತರ ಗದ್ದಿಗೆ ಏರಿದವನು ಅಭಿಮನ್ಯು. ಇವನ ಕಾಲದಲ್ಲಿ ವೈದಿಕಧರ್ಮ ಮತ್ತೆ ತಲೆಯೆತ್ತತೊಡಗಿತು. ಆದರೆ ಸ್ವಲ್ಪ ಸ್ಥಿರಗೊಳ್ಳುವುದರೊಳಗೆ ಕಾಲಕೆಳಗಿನ ನೆಲವೇ ಅಭದ್ರವಾದಂತಾಯಿತು. ನಾಗಾರ್ಜುನ ಬೋಧಿಸತ್ತ್ವನ ಪ್ರಭಾವದಿಂದಾಗಿ ಪ್ರಜೆಗಳು ಬೌದ್ಧಮತದೆಡೆಗೆ ಆಕರ್ಷಿತರಾದರು. ಇದರಿಂದಾಗಿ ಅನಾದಿಕಾಲದಿಂದಿದ್ದ ನೀಲಮತ ಸಂಪ್ರದಾಯವು ಬೇರೆಯಾಯಿತು.”
ಇದನ್ನು ಹೇಳುವಾಗ ನಾಗನಾಥಾಚಾರ್ಯನ ಕಣ್ಣು ಹನಿಗೂಡಿತು.
ಕೆಲವು ಕ್ಷಣಗಳ ಮೌನದ ತರುವಾಯ ಚಂದ್ರದೇವ ಹೇಳಿದ –
“ನನ್ನ ಸಂದೇಹ ಪರಿಹಾರವಾಗಲಿಲ್ಲ.”
“ಎಂದರೆ?”
“ನಾವು ಮಾತನ್ನು ಶುರು ಮಾಡಿದುದು ಮಂಜಿನ ಬಗೆಗೆ. ಅದು ಕೆಲವು ಕಡೆ ಪ್ರಾಣಾಂತಕವಾಗಿದ್ದರೆ ಇನ್ನು ಕೆಲವು ಕಡೆ ಮೃದುವಾಗಿರುವುದು ಹೇಗೆ?”
“ಇದೆಲ್ಲ ನೀಲನಾಗನ ಕೇಳೀವಿಲಾಸ.”
“ಹಾಗೆಂದರೆ?”
“ಒಂದು ಕಾಲದಲ್ಲಿ ಇಡೀ ಕಶ್ಮೀರವಷ್ಟೂ ಸಮುದ್ರಗಾತ್ರದ್ದಾಗಿದ್ದು `ಸತೀ ಸರೋವರ’ವೆನಿಸಿತ್ತು. ಈ ಸರಸ್ಸಿನ ಕೆಳಗಡೆ ಆಳದಲ್ಲಿ ಅನೇಕ ನಾಗದೇವತೆಯರು ವಾಸವಾಗಿರುತ್ತಿದ್ದರು. ಎಂದರೆ ನಾಗದೇವತೆಯರನ್ನು ರಕ್ಷಿಸುತ್ತಿದ್ದ ಪವಿತ್ರಭೂಮಿ ನಮ್ಮದು. ಕಶ್ಮೀರದಲ್ಲಿ ನಾಗದೇವತೆಯರಿಗೆ ಸಲ್ಲುತ್ತಿದ್ದಷ್ಟು ಪೂಜೆಗಳು ಜಗತ್ತಿನಲ್ಲಿ ಬೇರೆಲ್ಲಿಯೂ ಇರಲಿಲ್ಲ. ಈಗಲೂ ಕಶ್ಮೀರದಲ್ಲಿ ಕಾಣುವಷ್ಟು ನಾಗದೇವತಾ ಚಿಹ್ನೆಗಳು ಭಾರತದಲ್ಲಿ ಬೇರೆಲ್ಲಿಯೂ ಇಲ್ಲ; ನೀಲನಾಗ್, ಅನಂತನಾಗ್, ಶೇಷನಾಗ್, ಕರ್ಕೋಟಕನಾಗ್, ಕೃಕರ್ನಾಗ್ – ಹೀಗೆ ಲೆಕ್ಕವಿಲ್ಲದಷ್ಟು.”
“ಹೌದು, ಕಶ್ಮೀರದ ರಾಜನು ಶಿವಾಂಶಸಂಭೂತನಾದುದರಿಂದ ಕಶ್ಮೀರವು ಪಾರ್ವತಿಗೆ ಸಮಾನ. ಶಿವನ ಆಭರಣವು ನಾಗಸರ್ಪ. ಹೀಗೆ ನಾಗದೇವತೆ ನಮಗೆ ಆರಾಧ್ಯವಾಗಿರುವುದು ಸಹಜವೇ” ಎಂದ, ಚಂದ್ರದೇವ.
“ಆದರೆ ಆ ನಾಗದೇವತೆಯರನ್ನು ಕಶ್ಮೀರದ ಜನ ಈಗ ಮರೆತಿದ್ದಾರೆ. ನಾಗದೇವತೆಗಳ ಅಸಮಾಧಾನವೇ ಈ ಮಂಜಿನ ರೂಪದಲ್ಲಿ ಎರಗುತ್ತಿರುವುದು. ಕೈಲಾಸಗಿರಿಶಿಖರದ ಅಂಚಿನಿಂದ ನಾಗದೇವತೆಗಳು ಬುಸುಗುಡುತ್ತಿದ್ದಾರೆ. ಅದೇ ಈಗ ಚಕ್ರವಾತದಂತೆ ಕಶ್ಮೀರವನ್ನು ಆವರಿಸಿರುವುದು. ವರ್ಷದಲ್ಲಿ ಆರು ತಿಂಗಳು ಇದೇ ಸ್ಥಿತಿ ಇದೆ. ಅದನ್ನು ತಡೆದುಕೊಳ್ಳಲಾಗದೆ ಸ್ವಯಂ ಮಹಾರಾಜನೇ ವರ್ಷದಲ್ಲಿ ಆರು ತಿಂಗಳು ಬೇರೆ ಕಡೆ ಆಡಳಿತದ ಕೇಂದ್ರವನ್ನು ಏರ್ಪಡಿಸಿಕೊಳ್ಳುತ್ತಿದ್ದಾನೆ.”
“ಆದರೆ ಅಷ್ಟು ತೀವ್ರತೆಯಿಂದ ಮಂಜು ಸುರಿಯದ ಪ್ರದೇಶಗಳೂ ಇವೆಯಲ್ಲ?”
“ಎಲ್ಲೆಲ್ಲಿ ಜನರು ನಾಗಬಲಿ ಹೋಮಾದಿಗಳನ್ನು ಆಚರಿಸುತ್ತಿದ್ದಾರೋ ಅಂತಹ ಕಡೆಗಳಲ್ಲಿ ಮಂಜಿನಧಾರೆಯನ್ನು ನಾಗದೇವತೆಗಳು ಸೌಮ್ಯವಾಗಿಸುತ್ತಿದ್ದಾರೆ. ಬೌದ್ಧರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮಂಜಿನಧಾರೆ ಹೆಚ್ಚು ರಭಸದಿಂದ ಸುರಿಯುತ್ತಿದೆ” ಎಂದ, ನಾಗಾನಾಥಾಚಾರ್ಯ.
ಇದುವರೆಗೂ ಮೌನದಿಂದಿದ್ದ ಯುವಕನು ಈಗ ಚಂದ್ರದೇವನಿಗೆ ನಮಸ್ಕರಿಸಿ ಹೇಳಿದ –
“ಪ್ರಭುಗಳೇ! ತಮ್ಮ ಅನುಗ್ರಹಕ್ಕಾಗಿ ಅಭ್ಯರ್ಥನೆ ಸಲ್ಲಿಸುತ್ತಿರುವೆ. ಯಾರು ಯಾವ ರೂಪದಲ್ಲಿ ಅರ್ಚನೆ ಮಾಡಿದರೂ ಅದು ಪರಮಾತ್ಮನಿಗೇ ಸಲ್ಲುತ್ತದೆ. ಇದನ್ನು ಪರಿಗಣಿಸಿ ದಯವಿಟ್ಟು ಕಶ್ಮೀರದಲ್ಲಿ ಆಗುತ್ತಿರುವ ಪ್ರಾಣಹಾನಿಯನ್ನು ನಿವಾರಿಸಿ. ನಾಗದೇವತೆಯರ ಅಸಮಾಧಾನವನ್ನು ತಗ್ಗಿಸಿ ಅವರನ್ನು ಸುಮುಖರಾಗಿಸಬಲ್ಲವರು ಕಶ್ಮೀರದಲ್ಲಿ ನೀವು ಮಾತ್ರ.”
ಚಂದ್ರದೇವನ ಕಡೆಗೆ ವಾತ್ಸಲ್ಯದಿಂದ ನೋಟ ಬೀರಿ ನಾಗನಾಥಾಚಾರ್ಯ ಹೇಳಿದ – “ಈ ಯುವಕನು ಮಹಾಪುರುಷ. ಈತನೂ ಕಶ್ಮೀರ ರಾಜ್ಯಲಕ್ಷ್ಮಿಯನ್ನು ಕೈಹಿಡಿದಿರುವ ನೂತನ ರಾಜ: ಗೋನಂದ ವಂಶಪ್ರವರ್ತಕ – ಮೂರನೇ ಗೋನಂದ.”
“ಗೋನಂದ ಎಂದರೆ…..?”
“ಹೌದು ಚಂದ್ರದೇವ. ನಾನು ವೈದಿಕ ಧರ್ಮಾಚಾರಪರಾಯಣ. ಇಲ್ಲಿಯ ಪ್ರಜೆಗಳೆಲ್ಲ ಯಾವುದೇ ಧರ್ಮಭೇದಪ್ರಸಕ್ತಿ ಇಲ್ಲದೆ ನನ್ನ ಆಶ್ರಿತರಾಗಿದ್ದಾರೆ. ಅವರೆಲ್ಲರ ಯೋಗಕ್ಷೇಮ ನನ್ನ ಹೊಣೆಯಾಗಿದೆ. ಅವರಿಗೆ ಏನಾದರೂ ಹಾನಿಯಾದರೆ ಅದು ನನ್ನೊಳಗಿನ ಯಾವುದೋ ದೋಷದ ಪರಿಣಾಮವೇ. ಆದುದರಿಂದ ತಮ್ಮ ಅನುಗ್ರಹವನ್ನು ಕೋರುತ್ತಿದ್ದೇನೆ. ಬೌದ್ಧರೂ ಸನಾತನಧರ್ಮೀಯರೂ ಎಲ್ಲರೂ ನನ್ನ ಪ್ರಜೆಗಳೇ.”
ಚಂದ್ರದೇವನು ಗೋನಂದನನ್ನು ವಾತ್ಸಲ್ಯದಿಂದ ಆಶೀರ್ವದಿಸಿದ.
ಯಸ್ತು ಸರ್ವಾಣಿ ಭೂತಾನಿ
ಆತ್ಮನ್ಯೇವಾನುಪಶ್ಯತಿ|
ಸರ್ವಭೂತೇಷು ಚಾತ್ಮಾನಂ
ತತೋ ನ ವಿಜುಗುಪ್ಸತೇ||
(ಯಾರು ತನ್ನಲ್ಲಿ ಎಲ್ಲ ಜೀವಗಳನ್ನೂ ಕಾಣುತ್ತಾನೋ ಮತ್ತು ಎಲ್ಲ ಜೀವಗಳಲ್ಲಿ ತನ್ನನೇ ಕಾಣುತ್ತಾನೋ ಅವನು ಯಾವುದರ ಬಗೆಗೂ ದ್ವೇಷ ತಳೆಯಲಾರ.)
“ಮಹಾರಾಜ! ನಾನು ನನ್ನ ಶಕ್ತಿಯಿದ್ದಷ್ಟು ನಾಗದೇವತೆಗಳನ್ನು ಪೂಜಿಸಿ ಒಲಿಸಿಕೊಳ್ಳಲು ಯತ್ನಿಸುತ್ತೇನೆ.”
“ನಿನ್ನ ಉದ್ದೇಶವು ನೆರವೇರಲಿ” ಎಂದು ಆಶೀರ್ವದಿಸಿದ, ನಾಗನಾಥಾಚಾರ್ಯ.
* * *
ಚಂದ್ರದೇವನ ಮನಸ್ಸು ಅದೇಕೋ ವ್ಯಗ್ರವಾಗಿತ್ತು. ಹಲವು ದಿಕ್ಕುಗಳಲ್ಲಿ ಚದುರಿಹೋಗುತ್ತಿತ್ತು. ಲಗಾಮು ಇಲ್ಲದ ಕುದುರೆಯಂತೆ ಸಂಚರಿಸುತ್ತಿತ್ತು. ಮನಸ್ಸನ್ನು ಏಕಾಗ್ರತೆಯಿಂದ ಹಿಡಿದಿಡದಿದ್ದರೆ ತನ್ನ ಲಕ್ಷ್ಯವು ಈಡೇರಲಾರದೆಂದು ಅವನು ತಿಳಿಯದವನಲ್ಲ.
ಚಿತ್ತಂ ಕಾರಣಮರ್ಥಾನಾಂ
ತಸ್ಮಿನ್ ಸತಿಜಗತ್ತ್ರಯಮ್|
ತಸ್ಮಿನ್ ಕ್ಷೀಣೇ ಜಗತ್ ಕ್ಷೀಣಂ
ತಚ್ಚಿಕಿತ್ಸ್ಯಂ ಪ್ರಯತ್ನತಃ||
ಚಿತ್ತವೇ ಎಲ್ಲ ಅರ್ಥಗಳಿಗೂ ಕಾರಣ. ಅದೇ ಜಗತ್ತು. ಚಿತ್ತವು ನಶಿಸಿದರೆ ಜಗತ್ತೇ ಇಲ್ಲ. ಚಿತ್ತವನ್ನು ಹಿಡಿದಿಡಲು ಧ್ಯಾನವು ಅವಶ್ಯ.
ಚಂದ್ರದೇವನು ಮೊದಲು ವಿನಾಯಕನ ರೂಪವನ್ನು ಮನಸ್ಸಿನಲ್ಲಿ ಸಾಕ್ಷಾತ್ಕರಿಸಿಕೊಂಡು ಅನಂತರ ಶಿವನನ್ನು ಕುರಿತು ಧ್ಯಾನ ಮಾಡತೊಡಗಿದ. ಸುಖಾಸೀನನಾಗಿದ್ದ (“ಸ್ಥರಸುಖಮಾಸನಮ್”). ಅನಂತರ ಮಂತ್ರಜಪಕ್ಕೆ ತೊಡಗಿದ (`ಸ್ವಾಧಾಯಾಧಿಷ್ಟದೇವತಾನಾಂ ಪ್ರಯೋಗಃ’). ಪ್ರಾಣಾಯಾಮದ ಮೂಲಕ ಉಚ್ವಾಸ-ನಿಃಶ್ವಾಸಗಳನ್ನು ನಿಯಂತ್ರಿಸತೊಡಗಿದ. (`ಶ್ವಾಸಪ್ರಶ್ವಾಸಯೋಃ ಗತಿವಿಚ್ಛೇದಃ ಪ್ರಾಣಾಯಾಮ’). ಮಂತ್ರಮನನವನ್ನು ಗಾಢಗೊಳಿಸಿದ. ಪ್ರಾಣಕೇಂದ್ರೀಕರಣದಿಂದ ಮಾಯೆಯ ಆವರಣ ಕಳಚಿತು (ತತಃ ಕ್ಷೀಯತೇ ಪ್ರಕಾಶಾವರಣಮ್’). ಶರೀರೇಂದ್ರಿಯಗಳ ಮೇಲೆ ಆಧಿಪತ್ಯ ಸಿದ್ಧಿಸಿತು; ಧಾರಣಾರ್ಹತೆ ಬಂದಿತು. ಚಂದ್ರದೇವನ ಮನಸ್ಸಿನಲ್ಲಿ ನೀಲನಾಗನ ರೂಪವು ತುಂಬಿಕೊಂಡಿತು.
ಈಗ ಚಂದ್ರದೇವನು ಚಂದ್ರದೇವನಾಗಿರಲಿಲ್ಲ, ಪ್ರತ್ಯೇಕ ವ್ಯಕ್ತಿಯೇ ಆಗಿಬಿಟ್ಟಿದ್ದ. ಅವನ ವ್ಯಕ್ತಿತ್ವವು ನಾಗದೇವನಲ್ಲಿ ಲಯಗೊಂಡಿತ್ತು. ಅವನೇ ನೀಲನಾಗನಾಗಿದ್ದ. ಇಬ್ಬರಿಗೂ ನಡುವೆ ಭೇದ ಉಳಿದಿರಲಿಲ್ಲ. (`ತದೇವಾರ್ಥಮಾತ್ರ ನಿರ್ಭಾಸಂ ಸ್ವರೂಪಮಾನ್ಯಮಿವ ಸಮಾಧಿಃ’). ಸ್ವರೂಪವು ಶೂನ್ಯವಾಗಿ ಕೇವಲ ಭಾವನೆ ಮಾತ್ರವೆ ಉಳಿದ ಸ್ಥಿತಿಯೇ ಸಮಾಧಿ.
* * *
“ಮಹಾರಾಜ! ಕಶ್ಮೀರವನ್ನು ಬಾಧಿಸುತ್ತಿರುವ ಮಂಜಿನ ಮಳೆಯನ್ನು ನಾನು ಉಪಶಮನ ಮಾಡಬಲ್ಲೆ. ಅದಕ್ಕೆ ಪ್ರತಿಯಾಗಿ ನೀವು ಇಡೀ ದೇಶದಲ್ಲಿ ನೀಲಮತಪುರಾಣವನ್ನು ಪ್ರಸಾರ ಮಾಡಬೇಕು. ಹಿಂದೆ ನಡೆಯುತ್ತಿದ್ದಂತೆ ದೇಶದಲ್ಲಿ ನಾಗಯಾತ್ರೆಗಳೂ ಯಜ್ಞಯಾಗಾದಿಗಳೂ ನಿರಾತಂಕವಾಗಿ ಸಾಗಲಿ. ನಿಮ್ಮ ಮತ ಯಾವುದೇ ಇರಬಹುದು. ನೀವು ಯಾವ ದೇವತೆಯನ್ನಾದರೂ ಪೂಜಿಸಲು ಅಭ್ಯಂತರವಿಲ್ಲ. ಆದರೆ ಈ ದೇಶದ ಆತ್ಮದಂತಿರುವ ಪುರಾತನ ಸತ್ಸಂಪ್ರದಾಯಗಳನ್ನು ಉಳಿಸಬೇಕು. ಎಷ್ಟೇ ಎಲೆಗಳು ಹಣ್ಣಾಗಿ ಹೊಸ ಎಲೆಗಳು ಚಿಗುರುತಿದ್ದರೂ ವೃಕ್ಷದ ಸ್ವಸ್ವರೂಪವು ಬದಲಾಗದು. ಅದರಂತೆ ಯಾವ ಹೊಸ ಪದ್ಧತಿಗಳು ಬಂದರೂ ಸನಾತನಧರ್ಮದ ಆತ್ಮವು ಮಾತ್ರ ಚಿರಂಜೀವಿಯಂತೆ ಉಳಿಯಬೇಕು. ಆತ್ಮಸ್ವರೂಪ ನಾಶದಿಂದ ಸರ್ವನಾಶವಾಗುತ್ತದೆ” – ಎಂದ ಚಂದ್ರದೇವ ಗೋನಂದನಲ್ಲಿ. ರಾಜಸಭೆ ತುಂಬಿತ್ತು. ಆದರೆ ಗೋನಂದನಿಗೆ ವಿಶ್ವಾಸ ಮೂಡಿದಂತೆ ಕಾಣಲಿಲ್ಲ. ಅವನು ಪ್ರಶ್ನಿಸಿದ – “ಕೇವಲ ನಾಗಪೂಜೆಗಳನ್ನೂ ಯಾತ್ರೆಗಳನ್ನೂ ನಡೆಸುವುದರಿಂದ ಮಂಜಿನ ಸುರಿಮಳೆಯ ಆಘಾತ ಉಪಶಮನವಾದೀತೆ?”
ಚಂದ್ರದೇವನು ನಕ್ಕು ಹೇಳಿದ – “ಮಂಜಿನ ಮಳೆಯ ಉಪಶಮನವಷ್ಟೆ ಏಕೆ? ಇನ್ನೂ ಏನೇನು ಆಗುತ್ತದೊ ನೋಡುತ್ತಿರಿ!” ಎನ್ನುತ್ತ ಮೃದುವಾಗಿ ಮಹಾರಾಜನ ಶರೀರವನ್ನು ತನ್ನ ಕೈಯಿಂದ ನೇವರಿಸಿದ. ಆ ಸ್ಪರ್ಶವಾದೊಡನೆ ಮಹಾರಾಜನ ಶರೀರ ಕಂಪಿಸಿತು. ಅವನು ಸರ್ವಪ್ರಕೃತಿಯೊಡನೆ ಏಕವಾಗಿಬಿಟ್ಟ. ಸ್ವಯಂ ಕಾಲನೇ ಆದ. ಅವನ ಮನಃಪಟಲದ ಮುಂದೆ ತನ್ನ ೩೫ ವರ್ಷ ರಾಜ್ಯಪಾಲನೆಯೂ ತನ್ನ ಕುಮಾರ ವಿಭೀಷಣನ ೫೩ ವರ್ಷ ೬ ತಿಂಗಳ ಪಾಲನೆಯೂ ಚಿತ್ರವತ್ ಮೂಡಿದವು; ಹಾಗೆಯೇ ಇಂದ್ರಜಿತುವಿನ ೩೫ ವರ್ಷ ೬ ತಿಂಗಳ ಮತ್ತು ರಾವಣನ ೩೫ ವರ್ಷಗಳ ರಾಜ್ಯಪಾಲನೆ ಕೂಡಾ. ಆದರೆ ಅನಂತರ ರಾಜನು ವಿಕೃತಬುದ್ಧಿ ತಳೆದುದರಿಂದಾದ ಧ್ವಂಸವೂ ಕಣ್ಣಮುಂದೆ ಕಂಡಿತು.
ಗೋನಂದನು ಕೈಮುಗಿದು ಅರಿಕೆ ಮಾಡಿದ – “ಸ್ವಾಮಿ! ನೀವು ಹೇಳಿದಂತೆ ನಡೆಯುತ್ತೇನೆ. ಇಡೀ ದೇಶದಲ್ಲಿ ನೀಲಮತ ಸಂಪ್ರದಾಯವನ್ನು ಪುನರುದ್ಧರಿಸುತ್ತೇನೆ. ಸನಾತನಧರ್ಮಕೇತನವು ಎಲ್ಲೆಡೆ ಮೆರೆಯುವಂತೆ ಮಾಡುತ್ತೇನೆ.”
ಕಾಲೇ ಕಾಲೇ ಪ್ರಜಾಪುಣ್ಯೈಃ
ಸಂಭವಂತಿ ಮಹೀ ಭುಜಃ|
ಯೈರ್ಮಂಡಲಸ್ಯ ಕ್ರಿಯತೇ
ದೂರೋತ್ಸನ್ನಸ್ಯ ಯೋಜನಮ್||
(ಪ್ರಜೆಗಳ ಪುಣ್ಯವಶದಿಂದ ಆಯಾ ಕಾಲಗಳಲ್ಲಿ ಪ್ರಯತ್ನಗಳು ನಡೆದು ಎಷ್ಟೋ ಕಾಲ ನಿಂತುಹೋಗಿದ್ದ ವೈದಿಕ ಸಂಪ್ರದಾಯಗಳನ್ನು ಪುನರುದ್ಧರಿಸಲು ಪಾಲಕರು ಜನಿಸುತ್ತಿರುತ್ತಾರೆ.)
ಎಂದ, ಚಂದ್ರದೇವ.
ಮುಮ್ಮಡಿ ಗೋನಂದನು ಚಂದ್ರದೇವನಿಗೆ ನಮ್ರತೆಯಿಂದ ನಮಸ್ಕರಿಸಿದ
ಯೇ ಪ್ರಜಾಪೀಡನಪರಾಃ
ತೇ ವಿನಶ್ಯಂತಿ ಸಾನ್ವಯಾಃ|
ನಷ್ಟಂ ತು ಯೇ ಯೋಜಯೇಯುಃ
ತೇಷಾಂ ವಂಶನುಗಾ ಶ್ರಿಯಃ||
ಎಂದ, ಚಂದ್ರದೇವ.
(ಧರ್ಮಹಾನಿ ಮಾಡಿ ಪ್ರಜೆಗಳನ್ನು ಪೀಡಿಸುವ ರಾಜರ ವಂಶಗಳೇ ನಶಿಸುತ್ತವೆ. ಧರ್ಮಪಾಲನೆ ಮಾಡುವ ರಾಜರ ವಂಶಗಳು ಉಚ್ಛ್ರಾಯ ಹೊಂದುತ್ತವೆ.)
ಮನುಷ್ಯರ ಅಪಕಾರ್ಯಗಳಿಂದ ದೇಶಕ್ಕೆ ಒದಗುವ ವಿಪತ್ತನ್ನು ಮೂರನೇ ಗೋನಂದನು ಅರಿತುಕೊಂಡ. ಅವನೂ ಎಲ್ಲ ಪ್ರಜೆಗಳೂ ಚಂದ್ರದೇವನಿಗೆ ಪ್ರಣಾಮ ಸಲ್ಲಿಸಿದರು.
ಇತ್ಯೇತತ್ಪ್ರತಿ ವೃತ್ತಾಂತಂ
ದೇಶೇsಸ್ಮಿನ್ ವೀಕ್ಷ್ಯ ಲಕ್ಷಣಂ|
ಭಾವಿನಾಂ ಭೂಮಿಪಾಲಾನಾಂ
ಪ್ರಾಜ್ಞೈರ್ಯೇ ಯಂ ಶುಭಾಶುಭಮ್ ||
(ಹೀಗೆ ದೇಶದ ಪ್ರತಿ ರಾಜ ವೃತ್ತಾಂತದ ಲಕ್ಷಣಗಳನ್ನು ಗಮನಿಸಿ ಭವಿಷ್ಯತ್ ಕಾಲದಲ್ಲಿ ರಾಜ್ಯಪಾಲಕರು ವಿಜ್ಞತೆಯಿಂದ ಶುಭ ಯಾವುದು ಅಶುಭವಾವುದು ಎಂಬುದನ್ನು ತಿಳಿದುಕೊಳ್ಳಬೇಕು) – ಎಂದ.
ಈ ಚರಿತ್ರೆಯ ಪರಿಜ್ಞಾನ ಮಹತ್ತ್ವದ್ದು. ಈ ಕಥಾಪ್ರಸಂಗವಾದರೋ ಕಲಿಯುಗಾದಿ ೧೯೫೫ರ (ಎಂದರೆ ಕ್ರಿ.ಪೂ. ೧೧೪೭ರ) ವರ್ಷಗಳಲ್ಲಿ ನಡೆದುದು.