ಇದೀಗ ನಾಡೆಲ್ಲ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೨೫ನೇ ಜನ್ಮವರ್ಷವನ್ನು ಆಚರಿಸುತ್ತಿದೆ. ಈ ಉತ್ಸವಾಚರಣೆ ನಡೆದಿರುವಾಗಲೇ ಸಭ್ಯಸಮಾಜವನ್ನು ತಲೆತಗ್ಗಿಸುವಂತೆ ಮಾಡುವ ಹಗರಣಗಳು ಬಯಲುಗೊಳ್ಳುತ್ತಿವೆ. ನಮ್ಮಲ್ಲಿ ಕಾನೂನುಗಳ ಕೊರತೆಯಿದೆಯೆಂದು ಯಾರೂ ಹೇಳುವಂತಿಲ್ಲ. ೧೯೪೮ರ ನವೆಂಬರ್ ತಿಂಗಳಲ್ಲಿ ಸಂವಿಧಾನದ ಕರಡನ್ನು ಸಂವಿಧಾನಸಭೆಯಲ್ಲಿ ಮಂಡಿಸುವಾಗ ಡಾ|| ಅಂಬೇಡ್ಕರ್ ಹೇಳಿದ್ದರು: “ಸಂವಿಧಾನ ಜಾರಿಯಾದ ಮೇಲೆ ದೇಶದಲ್ಲಿ ಏನಾದರೂ ಬಿಕ್ಕಟ್ಟುಗಳುಂಟಾದರೆ ಅದು ಸಂವಿಧಾನದ ದೋಷವಾಗದು, ಮನುಷ್ಯನ ಸಂಕುಚಿತಪ್ರವೃತ್ತಿಯ ಪರಿಣಾಮವಷ್ಷೆ” ಸಂವಿಧಾನವು ಸಂಸತ್ತಿನಲ್ಲಿ ಅಂತಿಮವಾಗಿ ಅಂಗೀಕಾರ ಪಡೆಯುವುದಕ್ಕೆ ಮೊದಲು ಮಾಡಿದ ಭಾಷಣದ ಅವರ ಹೇಳಿಕೆಯಂತೂ ಅವಿಸ್ಮರಣೀಯವಾಗಿದೆ: “ಸಂವಿಧಾನವೊಂದು ತುಂಬಾ ಚೆನ್ನಾಗಿರಬಹುದು. ಆದರೆ ಅದಕ್ಕೆ ಕಾರ್ಯರೂಪ ಕೊಡುವ ಜನರು ಕೆಟ್ಟವರಾದಲ್ಲಿ ಸಂವಿಧಾನವೂ ಕೆಟ್ಟದ್ದೇ ಆಗುತ್ತದೆ. ತದ್ವಿರುದ್ಧವಾಗಿ ಒಂದು ಕೆಟ್ಟ ಸಂವಿಧಾನವೂ ಸಹ ಉತ್ತಮರ ಕೈಗಳಲ್ಲಿ ಜನಹಿತಕಾರಿಯೇ ಆಗಬಹುದು. ಶಾಸನವ್ಯವಸ್ಥೆಯು ಅವಲಂಬಿತವಾಗಿರುವುದು ಜನರ ಮೇಲೆ, ಮತ್ತು ತಮ್ಮ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಜನರು ಹುಟ್ಟುಹಾಕುವ ರಾಜಕೀಯ ಪಕ್ಷಗಳು ಹಾಗೂ ಆ ಪಕ್ಷಗಳು ನಡೆಸುವ ರಾಜಕೀಯ – ಇವುಗಳ ಮೇಲೆ.” ಡಾ|| ಅಂಬೇಡ್ಕರ್ ಅವರ ಮೌಲ್ಯನಿಷ್ಠೆಯನ್ನೂ ದೂರದೃಷ್ಟಿಯನ್ನೂ ಕುರಿತು ಮಾತನಾಡುವುದು ಚರ್ವಿತಚರ್ವಣವೇ ಆದೀತು. ಅವರ ಸಂಬಂಧವಿದ್ದ ಒಂದು ಸಂಘಟನೆಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೇವಲ ನಾಲ್ಕೈದು ಸಾವಿರ ರೂಪಾಯಿಗಳ ವ್ಯವಹಾರಕ್ಕೆ ಸಮರ್ಪಕ ವಿವರಣೆ ಸಿಗದಿದ್ದಾಗ ಡಾ|| ಅಂಬೇಡ್ಕರ್ ಉಗ್ರಾವತಾರ ತಳೆದಿದ್ದರು; ತಮ್ಮ ನಿಕಟವರ್ತಿಗಳನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡು, “ಸಾರ್ವಜನಿಕರಿಂದ ಪಡೆದ ಹಣಕ್ಕೆ ಸಮರ್ಪಕ ಲೆಕ್ಕ ಒಪ್ಪಿಸದಿರುವುದು ಕಾನೂನಿನ ಕಣ್ಣಲ್ಲಿ ದಂಡನಾರ್ಹ ಮಾತ್ರವಲ್ಲದೆ ನೈತಿಕವಾಗಿಯೂ ಅತ್ಯಂತ ನೀಚ ಕೆಲಸವಾಗಿದೆ” ಎಂದು ನೊಂದು ಎಚ್ಚರಿಸಿದ್ದರು. ಡಾ|| ಬಾಬಾಸಾಹೇಬರು ಎತ್ತಿಹಿಡಿದ ಪಾರಿಶುದ್ಧ್ಯದ ಮಾನದಂಡವೆಲ್ಲಿ, ಕಾಂಗ್ರೆಸಿನ ಹಯಾಮಿನಲ್ಲಿ ನಡೆದ ಬೋಫೋರ್ಸ್-ವೆಸ್ಟ್ಲೆಂಡ್ ಇತ್ಯಾದಿ ಸರಣಿಸರಣಿ ಭ್ರಷ್ಟಾಚಾರಗಳೆಲ್ಲಿ! ಭ್ರಷ್ಟಾಚಾರದಲ್ಲಿ ತೊಡಗಿದ್ದ ತಮ್ಮ ದೇಶೀಯರಿಗೇ ಮೂರು ವರ್ಷ ಹಿಂದೆಯೇ ಕಾರಾಗೃಹವಾಸ ವಿಧಿಸಿರುವ ಇಟಲಿಯ ನ್ಯಾಯಾಲಯ ನೀಡಿರುವ ಪುರಾವೆಗಳನ್ನು ರಾಜಕೀಯಪ್ರೇರಿತವೆಂದು ಹೇಳಿದಲ್ಲಿ ಹಾಸ್ಯಾಸ್ಪದವೇ ಆದೀತು.
ಅಂದು-ಇಂದು
Month : June-2016 Episode : Author : ಎಸ್.ಆರ್. ರಾಮಸ್ವಾಮಿ