ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈಃ
ಪ್ರಾರಭ್ಯ ವಿಘ್ನವಿಹತಾ ವಿರಮನ್ತಿ ಮಧ್ಯಾಃ |
ವಿಘ್ನೆಃ ಪುನಃ ಪುನರಪಿ ಪ್ರತಿಹನ್ಯಮಾನಾಃ
ಪ್ರಾರಬ್ಧಮುತ್ತಮಗುಣೌ ನ ಪರಿತ್ಯಜನ್ತಿ ||
– ನೀತಿಶತಕ
“ಕಷ್ಟಗಳೂ ತೊಂದರೆಗಳೂ ಬಂದಾವೇನೋ ಎಂದು ಗಾಬರಿಗೊಂಡು ಅಧಮರು ಕೆಲಸವನ್ನು ಆರಂಭಿಸುವುದೇ ಇಲ್ಲ. ಮಧ್ಯಮರು ಆರಂಭಿಸಿದ ಮೇಲೆ ಸ್ವಲ್ಪ ವಿಘ್ನ ಒದಗಿದರೂ ಹಿಂದೆ ಸರಿದುಬಿಡುತ್ತಾರೆ. ಉತ್ತಮರಾದರೋ ಆತಂಕಗಳು ಬಂದರೂ ಧೃತಿಗೆಡದೆ ಅವನ್ನು ದಾಟುತ್ತ ಮುಂದೆ ಸಾಗುತ್ತಾರೆಯೇ ಹೊರತು ಪ್ರಯತ್ನವನ್ನು ಕೈಬಿಡುವುದಿಲ್ಲ.”
ಜಗದ್ವ್ಯವಹಾರಗಳಲ್ಲಿ ಅನುತ್ಸಾಹಕರ ಸನ್ನಿವೇಶಗಳು ಎದುರಾಗುವುದು ಪ್ರಕೃತಿಸಹಜವೇ ಆಗಿದೆ. ಎಡರುತೊಡರುಗಳು ಎದುರಾದೊಡನೆ ಕೈಚೆಲ್ಲಿಕೂಡುವುದು ಪೌರು?ಹೀನತೆ. ಅಪ್ರಯೋಜಕರಿಗೂ ಸಾಫಲ್ಯ ಗಳಿಸುವವರಿಗೂ ನಡುವಣ ಅಂತರಕ್ಕೆ ಕಾರಣವಾಗುವುದು ಪ್ರಯತ್ನಾಭಾವ ಮತ್ತು ಪ್ರಯತ್ನದಾರ್ಢ್ಯಗಳೇ.
ಬೋಪದೇವನೆಂಬ ವೈಯಾಕರಣನ ಬಗೆಗೆ ಕಥೆಯೊಂದು ಪ್ರಚಲಿತವಿದೆ. (ಇಂತಹ ಜಾನಪದ ಕಥೆಗಳು ಬೇರೆಬೇರೆ ವ್ಯಕ್ತಿಗಳ ಹೆಸರಿನೊಡನೆ ಸಂಲಗ್ನಗೊಂಡಿರುತ್ತವೆ. ಐತಿಹಾಸಿಕ ದೃಷ್ಟಿಯನ್ನು ಬದಿಗಿರಿಸಿ ಕಥೆಯ ಸಂದೇಶವನ್ನು ಗ್ರಹಿಸುವುದು ಪ್ರಯೋಜನಕರ.) ವಿದ್ಯಾರ್ಥಿದಶೆಯಲ್ಲಿ ಬೋಪದೇವನ ನೆನಪಿನ ಶಕ್ತಿ ಎ? ಕಡಮೆ ಇದ್ದಿತೆಂದರೆ ಯಾವ ಪಾಠಗಳೂ ಜ್ಞಾಪಕದಲ್ಲಿರುತ್ತಿರಲಿಲ್ಲ. ತನ್ನ ಅಸಾಮರ್ಥ್ಯದಿಂದ ಬೇಸರವಾಗಿ ಗುರುಗಳಿಗೆ ನಾನೇಕೆ ಭಾರವಾಗಿರಬೇಕು ಎಂದು ಯೋಚಿಸಿ ಗುರುಕುಲ ಬಿಟ್ಟು ಹೊರಟುಹೋದ. ದಾರಿಯಲ್ಲಿ ಆಯಾಸಪರಿಹಾರಕ್ಕಾಗಿ ಒಂದು ಸರೋವರದ ಬಳಿ ಮರದ ಕೆಳಗೆ ಕುಳಿತ. ಸ್ವಲ್ಪ ಹೊತ್ತಾದ ಮೇಲೆ ಸಮೀಪದ ಗ್ರಾಮದ ಹೆಂಗಸರು ನೀರನ್ನೊಯ್ಯಲು ಅಲ್ಲಿಗೆ ಬಂದರು. ತಮ್ಮ ಮಣ್ಣಿನ ಬಿಂದಿಗೆಗಳನ್ನು ಎಂದಿನಂತೆ ಪಕ್ಕದ ಕಲ್ಲಿನ ಮೇಲೆ ಇರಿಸಿದರು. ಅನಂತರ ಗಡಿಗೆಗಳನ್ನು ತೊಳೆದುಕೊಂಡು ನೀರನ್ನು ತುಂಬಿಕೊಂಡು ಹೊರಟುಹೋದರು. ಬೋಪದೇವನಿಗೆ ವಿಚಿತ್ರವೊಂದು ಕಂಡಿತು. ಆ ಹೆಂಗಸರು ಪ್ರತಿದಿನ ಗಡಿಗೆಗಳನ್ನಿಡುತ್ತಿದ್ದ ಕಲ್ಲಿನ ಮೇಲೆ ಅಲ್ಲಲ್ಲಿ ಸಣ್ಣ ಗುಣಿಗಳಾಗಿದ್ದವು. ಬೋಪದೇವ ಯೋಚಿಸಿದ – ದುರ್ಬಲವಾದ ಮಣ್ಣಿನ ಗಡಿಗೆಗಳೇ ಪ್ರತಿದಿನ ಇಲ್ಲಿ ಇಡುತ್ತಿರುವುದರಿಂದ ಗಟ್ಟಿಯಾದ ಕಲ್ಲಿನ ಮೇಲೆ ಗುಣಿಗಳನ್ನು ಮಾಡಿವೆಯಲ್ಲ! – ಎಂದು. ಹೀಗೆ ಯೋಚಿಸಿದ ಅವನ ಮನಸ್ಸಿನಲ್ಲಿ ದೃಢವಾದ ಪ್ರಯತ್ನದಿಂದ ತಾನೂ ಶಾಸ್ತ್ರ ಕಲಿಯಬಲ್ಲೆ ಎನಿಸಿ ಗುರುಗಳಲ್ಲಿಗೆ ಹಿಂದಿರುಗಿ ಅಭ್ಯಾಸ ಮುಂದುವರಿಸಿ ಸಫಲನಾದ. ಮುಂದೆ ’ಮುಗ್ಧಬೋಧ’ ಎಂಬ ಶಾಸ್ತ್ರಗ್ರಂಥವನ್ನೂ ರಚಿಸಿ ಪ್ರಸಿದ್ಧನಾದ.