ಅಕಾಂಡಪಾತಜಾತಾನಾಂ ಆರ್ದ್ರಾಣಾಂ ಮರ್ಮಭೇದಿನಾಮ್|
ಗಾಢಶೋಕಪ್ರಹಾರಾಣಾಂ ಅಚಿಂತೈವ ಮಹೌ?ಧಿಃ||
– ಪ್ರಬೋಧಚಂದ್ರೋದಯ
“ನಿರೀಕ್ಷೆ ಮಾಡದಿದ್ದಾಗ ಎಲ್ಲೆಲ್ಲಿಂದಲೋ ಹಸಿಹಸಿಯಾದವೂ ಮರ್ಮಭೇದಕಗಳೂ ಆದ, ತೀವ್ರ ಬಾಧೆಯನ್ನುಂಟುಮಾಡುವ ಕ್ಲೇಶಗಳು ಬಂದು ಪ್ರಹಾರ ಮಾಡುತ್ತವೆ. ಅವುಗಳ ಬಗೆಗೆ ಹೆಚ್ಚು ಚಿಂತೆ ಮಾಡದಿರುವುದನ್ನು ಅಭ್ಯಾಸ ಮಾಡಿಕೊಳ್ಳುವುದೇ ಅವಕ್ಕೆ ಶಮನಕಾರಿ ಪರಿಹಾರ.”
ಕ್ಲೇಶಗಳಿಂದ ಯಾರಿಗೂ ಮುಕ್ತಿಯಿಲ್ಲ. ಜಗತ್ತಿನಲ್ಲಿ ತ್ರಿಗುಣಗಳ ಕ್ರೀಡನ ಇರುವವರೆಗೆ ಒಂದಲ್ಲ ಒಂದು ಕ್ಲೇಶ ಎರಗುತ್ತಲೇ ಇರುತ್ತದೆ. ಅದು ನಮ್ಮ ನಿಯಂತ್ರಣಕ್ಕೆ ಒಳಪಡುವುದಲ್ಲ. ಆದರೆ ನಮ್ಮ ಅಂತರಂಗದ ಮೇಲೆ ಅದರ ಆಘಾತವನ್ನು ಕಡಮೆ ಮಾಡಿಕೊಳ್ಳುವುದು ವಿರಕ್ತಿಯಿಂದಲೂ ಪ್ರಶಾಂತಮನಸ್ಕತೆಯಿಂದಲೂ ಸಾಧ್ಯ.
ಮರಗೆಲಸದವನೊಬ್ಬನ ದಿನದ ಕೆಲಸ ಮುಗಿದ ಮೇಲೆ ಮನೆಗೆ ಹೊರಟಾಗ ವಾಹನ ಕೆಟ್ಟಿದ್ದುದು ಗಮನಕ್ಕೆ ಬಂದಿತು. ಕೆಲಸ ಕೊಟ್ಟಿದ್ದ ಧಣಿ ಮರಗೆಲಸದವನನ್ನು ತನ್ನ ವಾಹನದಲ್ಲಿ ಮನೆಗೆ ತಲಪಿಸಿದ. ಮರಗೆಲಸದವನು ಮನೆಯನ್ನು ಹೊಗುವುದಕ್ಕೆ ಮುಂಚೆ ಮನೆಯ ಎದುರಿನ ಮರವೊಂದರ ಕೊಂಬೆಗಳನ್ನು ನೇವರಿಸಿ ಆಮೇಲೆ ಮನೆ ಸೇರಿಕೊಂಡ. ಆ ಮರವಾದರೊ ಅತಿ ಸಾಮಾನ್ಯವಾಗಿತ್ತು.
ಅವನ ವರ್ತನೆಯಿಂದ ಕುತೂಹಲಗೊಂಡ ಸಾಹುಕಾರ ಮರುದಿನ ಆ ಕಲಾಪದ ಬಗೆಗೆ ಮರಗೆಲಸದವನನ್ನು ವಿಚಾರಿಸಿದ.
ಮರಗೆಲಸದವನು ವಿವರಿಸಿದ: “ಓ, ಅದೇ! – ಅದಕ್ಕೆ ನಾನು ‘ತೊಂದರೆಗಳ ಮರ’ ಎಂದು ಹೆಸರನ್ನಿಟ್ಟಿದ್ದೇನೆ. ಪ್ರತಿದಿನ ಸಂಚೆ ಹಿಂದಿರುಗಿದಾಗ ನಾನು ನನ್ನ ತೊಂದರೆಗಳನ್ನೆಲ್ಲ ಆ ಮರದ ರೆಂಬೆಗಳಿಗೆ ನೇತುಹಾಕುತ್ತೇನೆ. ಏಕೆಂದರೆ ಅವನ್ನು ನನ್ನ ಹೆಂಡತಿ ಮಕ್ಕಳಲ್ಲಿಗೆ ನಾನು ಒಯ್ಯಲು ಬಯಸುವುದಿಲ್ಲ. ನನ್ನ ತೊಂದರೆಗಳನ್ನು ನಾನೇಕೆ ಬೇರೆಯವರಿಗೆ ಹಂಚಬೇಕು? ಮಾರನೆಯ ದಿನ ಬೆಳಗ್ಗೆ ಕೆಲಸಕ್ಕೆ ಹೊರಡುವಾಗ ನಾನು ಹಿಂದಿನ ದಿನ ಮರದಲ್ಲಿ ನೇತುಹಾಕಿದ್ದ ತೊಂದರೆಗಳನ್ನು ನಿರ್ವಹಣೆಗಾಗಿ ಮತ್ತೆ ನನ್ನೊಡನೆ ಒಯ್ಯುತ್ತೇನೆ. ಆದರೆ ವಿಚಿತ್ರವೆಂದರೆ – ಎಷ್ಟೋ ಸಲ ನಾನು ಮನೆಯಿಂದ ಹೊರಡುವಾಗ ಮರಳಿ ಹೊರುವ ತೊಂದರೆಗಳ ಭಾರ ನಾನು ಹಿಂದಿನ ದಿನ ಅಲ್ಲಿ ಇಟ್ಟಿದ್ದುದಕ್ಕಿಂತ ಕಡಮೆಯಾಗಿದೆ ಎನಿಸುತ್ತದೆ!”