ಖೊಟ್ಟಿನಾಣ್ಯಗಳ ಪ್ರಸಾರ ಹೆಚ್ಚಿದಂತೆ ಸಾಚಾ ನಾಣ್ಯಗಳು ಹಿಂದಕ್ಕೆ ಸರಿದುಬಿಡುತ್ತವೆ – ಎಂಬ ವಿದ್ಯಮಾನವನ್ನು ‘ಗ್ರೆಶಾಮ್ ನಿಯಮ’ ಎಂದು ಕರೆಯುತ್ತಾರೆ. ಆದರೆ ಹಲವೊಮ್ಮೆ ಸಾಚಾ ನಾಣ್ಯಗಳು ತಮ್ಮ ಔಜ್ಜ್ವಲ್ಯದಿಂದಾಗಿ ಖೊಟ್ಟಿ ನಾಣ್ಯಗಳನ್ನು ಹಿಮ್ಮೆಟ್ಟಿಸುವುದೂ ಉಂಟು. ಇದೀಗ ದೇಶದಲ್ಲಿ ನಡೆದಿರುವುದು ಇದೇ ಎನಿಸುತ್ತದೆ. ಅರ್ಥವನ್ನು ಕಳೆದುಕೊಂಡಿದ್ದ ಘೋಷಣೆಗಳಿಗೆ ಅರ್ಥವನ್ನೂ ಋಜುತೆಯನ್ನೂ ತುಂಬಲು ನರೇಂದ್ರ ಮೋದಿ ಶಕ್ತರಾದರೆಂಬುದರಲ್ಲಿ ಅಡಗಿದೆ ಈಗಿನ ಯಶಸ್ಸಿನ ಬೀಜ. ಇದರಲ್ಲಿ ಯಾವ ‘ರಹಸ್ಯ’ವೂ ಇಲ್ಲ, ಯಾವ ಕೃತಕ ‘ತಂತ್ರಗಾರಿಕೆ’ಯೂ ಇಲ್ಲ. ಪಾತ್ರೆಯ ಥಾಳಥಳ್ಯವನ್ನು ಹೊಮ್ಮಿಸಲು ಗಲೀಜುಗಳನ್ನು ಉಚ್ಚಾಟಿಸಿದರೆ ಸಾಕಾಗುತ್ತದೆ. ಈ ಪ್ರಕ್ರಿಯೆಯನ್ನು ಪರಿವರ್ತನೆ ಮೊದಲಾದ ಕ್ಲೀಷೆ ಶಬ್ದಗಳಿಂದ ಬೇಕಾದರೆ ಕರೆಯಬಹುದು. ಈಚಿನ ಕಾಲದಲ್ಲಿ ಟೊಳ್ಳು ಮಂಡನೆಗಳ ಪ್ರಸಾರ ಎಷ್ಟು ಹೆಚ್ಚಾಗಿದೆಯೆಂದರೆ ಮುನ್ನಡೆಗೆ ಹೊಸ ದಿಕ್ಕುಗಳನ್ನು ಅರಸುವವರು ಹಳೆಯದರ ಮೂಲೆಮೊಡಕುಗಳನ್ನು ಶುಭ್ರಗೊಳಿಸುವ ಸ್ವಚ್ಛತಾ ಅಭಿಯಾನ ನಡೆಸಿದರೆ ಸಾಕಾಗುತ್ತದೆ; ಆಗ ಹೊಸ ದಾರಿಗಳು ತಾವಾಗಿ ತೆರೆದುಕೊಳ್ಳಬಲ್ಲವು. ಈ ಸಾಧ್ಯತೆಯನ್ನು ದೇಶದ ಜನತೆ ಮನಗಂಡಿದ್ದಾರೆಂಬುದರ ಸೂಚಕವೇ ಈಚಿನ ಚುನಾವಣೆಯ ರೋಮಾಂಚಕ ಫಲಿತಾಂಶ. ಈ ವಾಸ್ತವಾಧಾರಿತ ಸಾಧ್ಯತೆಗೆ ‘ಆರ್ಎಸ್ವಿಪಿ’ (ರಾಹುಲ್-ಸೋನಿಯಾ-ವಾದ್ರಾ-ಪ್ರಿಯಾಂಕ) ಮೊದಲಾದ ಸೂತ್ರೀಕರಣಗಳಾಗಲಿ ಬಂಧವೇ ಇಲ್ಲದ ಗಟಬಂಧನಗಳಾಗಲಿ ಪರ್ಯಾಯಗಳಾಗಲಾರವು. ಒಂದುಕಡೆ ಇರುವುದು ಕಾಮ್ದಾರ್ (ಕಸಬುದಾರ) ಪಡೆ; ಇನ್ನೊಂದು ಕಡೆ ಇರುವುದು ನಾಮ್ದಾರ್ (ಹೆಸರಿನ ಬಲದ) ಪಡೆ. ಜನತೆಯ ಆಯ್ಕೆಯನ್ನು ವಿವೇಕಪೂರ್ಣವೆಂದು ಒಪ್ಪಬೇಕಾಗುತ್ತದೆ.
ಟೊಳ್ಳು-ಗಟ್ಟಿ
Month : July-2019 Episode : Author : ಎಸ್.ಆರ್. ರಾಮಸ್ವಾಮಿ