ಅದು ಹೈದರಾಬಾದಿನ ಡಿಫೆನ್ಸ್ ರಿಸರ್ಚ್ ಏಜೆನ್ಸಿಯ ಕಾರ್ಯಾಲಯ. ನಿರ್ದೇಶಕ ಸುನಿಲ್ ದೇಸಾಯಿ ಅವರ ಕಚೇರಿ ನಿರಾಡಂಬರವಾಗಿದ್ದರೂ ಅಲ್ಲಿ ಯಾವುದೇ ಸೌಕರ್ಯ-ಪರಿಕರಗಳ ಕೊರತೆ ಇರಲಿಲ್ಲ. ವಿಶಾಲವಾದ ಮೇಜಿನ ಹಿಂದೆ ಕುಶನ್-ಕುರ್ಚಿಯಲ್ಲಿ ಸುನಿಲ್ ದೇಸಾಯಿ ಆಸೀನರಾಗಿದ್ದರು. ಎದುರಿನ ಕುರ್ಚಿಗಳಲ್ಲಿ ಇಬ್ಬರು ಭೇಟಿಗಾರರು ಕುಳಿತಿದ್ದರು: ಒಬ್ಬರು ಇಡೀ ದೇಶದಲ್ಲಿಯೆ ಪ್ರತಿಷ್ಠಿತ ಪ್ರೌಢಶಿಕ್ಷಣ ಸಂಸ್ಥೆಯಾದ ದೆಹಲಿ ಐ.ಐ.ಟಿ.ಯ ನಿರ್ದೇಶಕರಾಗಿದ್ದ ಭಾಟಿಯಾ; ಇನ್ನೊಬ್ಬಾತ ಐ.ಐ.ಟಿ. ಯಲ್ಲಿಯೆ ವಿದ್ಯಾರ್ಥಿಯಾಗಿದ್ದ ಮಯಾಂಕ್.
ಸುನಿಲ್ ದೇಸಾಯಿಯವರೆದುರಿಗೆ ಮೇಜಿನ ಮೇಲೆ ಒಂದು ರೋಬೋ-ಯಂತ್ರಮಾನವ ಬೊಂಬೆಯನ್ನು ಇರಿಸಲಾಗಿತ್ತು. ಅದು ಹೊರನೋಟಕ್ಕೆ ಮಕ್ಕಳ ಆಟದ ಬೊಂಬೆಯAತೆ ಇತ್ತು. ಆದರೆ ದಿಟವಾಗಿ ಅದು ಒಬ್ಬ ಮಿಲಿಟರಿ ಕಮಾಂಡರನ್ನು ಮೀರಿಸಿದ ಶಕ್ತಿಯುಕ್ತಿಗಳನ್ನು ಹೊಂದಿತ್ತೆಂದು ಯಾರೂ ಊಹಿಸಿರಲಾರರು.
“ನೀವು ಹೇಳುತ್ತಿರುವುದು ಮುಂದೆ ಎಂದೋ ಸಾಧ್ಯವಾದೀತೇನೊ. ಆದರೆ ಈಗಿನ ಸ್ಥಿತಿಯಲ್ಲಂತೂ ಮನುಷ್ಯರ ಸ್ಥಾನವನ್ನು ರೋಬೋ ತುಂಬಬಲ್ಲದೆಂದು ನನಗೆ ಅನಿಸುತ್ತಿಲ್ಲ – ಅದರಲ್ಲಿಯೂ ದೇಶದ ರಕ್ಷಣೆಯಂತಹ ಜಟಿಲ ವಿಷಯದಲ್ಲಿ…” ಎನ್ನುತ್ತಿದ್ದರು ಸುನಿಲ್ ದೇಸಾಯಿ. ಅವರು ಎದುರಿಗಿದ್ದ ವ್ಯಕ್ತಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರೂ ಅವರ ದೃಷ್ಟಿ ಮಾತ್ರ ರೋಬೋವಿನ ಮೇಲೆಯೆ ಕೇಂದ್ರಿತವಾಗಿತ್ತು.
ಮಾತನ್ನು ಮುಂದುವರಿಸುತ್ತಾ ಸುನಿಲ್ ದೇಸಾಯಿ “ರಕ್ಷಣೆಯ ಕ್ಷೇತ್ರದಲ್ಲಿ ಒಂದು ಸೆಕಂಡಿಗಿAತ ಕಡಮೆ ಸಮಯದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗಿ ಬರುತ್ತದೆ. ಅದಕ್ಕಿಂತ ಕಡಮೆ ಸಮಯದಲ್ಲಿ ನಿರ್ಣಯಗಳನ್ನು ಕಾರ್ಯಗತಗೊಳಿಸಬೇಕಾಗಿರುತ್ತದೆ”
– ಎಂದು ತಮ್ಮ ಅಭಿಪ್ರಾಯಕ್ಕೆ ಸಮರ್ಥನೆ ನೀಡತೊಡಗಿದರು.
“ಆದರೆ ಪ್ರತಿಕ್ರಿಯೆಯ ವೇಗದ ವಿಷಯಕ್ಕೆ ಬಂದರೆ ಮನುಷ್ಯನ ಮೆದುಳಿಗಿಂತ ಯಂತ್ರದಲ್ಲಿನ ಕೃತ್ರಿಮ ಮೆದುಳಿನ ಸಾಮರ್ಥ್ಯವೇ ಮಿಗಿಲಾಗಿ ಇರುತ್ತದಲ್ಲವೆ ಸಾರ್?” – ಎಂದ, ಮಯಾಂಕ್.
“ಅದೇನೊ ನಿಜವೇ. ಆದರೆ ನಮ್ಮ ಕೆಲಸಕ್ಕೆ ಬೇಕಾಗುವುದು ವೇಗವೊಂದೇ ಅಲ್ಲವಲ್ಲ, ಬೇರೆ ಪರಿಗಣನೆಗಳೂ ಇರುತ್ತವಲ್ಲ – ಒಳ್ಳೆಯದು ಕೆಟ್ಟದ್ದು ಮೊದಲಾದ ಲೆಕ್ಕಾಚಾರಗಳೂ ಇರುತ್ತವೆ” – ಎಂದರು, ಸುನಿಲ್ ದೇಸಾಯಿ.
ಅದಕ್ಕೆ ಭಾಟಿಯಾ ಉತ್ತರಿಸಿದರು: “ದೇಸಾಯಿಯವರೆ, ನಿಮಗೆ ವಿಜ್ಞಾನ-ಶಾಸ್ತç ವಿವರಗಳ ಬಗೆಗೆ ಹೇಳುವ ಸಾಹಸವನ್ನು ನನ್ನ ವಿದ್ಯಾರ್ಥಿ ಮಾಡುತ್ತಿಲ್ಲ. ಶಾಸ್ತçವನ್ನು ಪ್ರಯೋಗದಲ್ಲಿ ಅಳವಡಿಸಿ ನಿರ್ಮಾಣ ಮಾಡಿರುವ ಮಾದರಿಯನ್ನು ನಿಮ್ಮ ಗಮನಕ್ಕೆ ತರುತ್ತಿದ್ದಾನೆ. ಇದು ಪ್ರೋಟೋಟೈಪ್. ಈ ಮಾದರಿಯನ್ನು ಈಗ ಯಾವ ವಿದೇಶೀ ಸಂಸ್ಥೆಗಾದರೂ ಕೊಡಲು ಬಯಸಿದ್ದಿದ್ದರೆ ಕೋಟ್ಯಂತರ ರೂಪಾಯಿ ಸಂಪಾದಿಸಬಹುದಿತ್ತು. ಆದರೆ ಸ್ವದೇಶದ ಮೇಲಿನ ಅಭಿಮಾನದಿಂದ, ಇಂತಹ ತಂತ್ರಜ್ಞಾನದ ಪ್ರಯೋಜನ ನಮ್ಮ ದೇಶಕ್ಕೇ ಆಗಲಿ ಎಂಬ ಉದ್ದೇಶದಿಂದ ತಾನು ತಯಾರಿಸಿರುವ ಪ್ರೋಟೋಟೈಪನ್ನು ನಿಮಗೆ ನೀಡಲು ಇಚ್ಛೆಪಟ್ಟಿದ್ದಾನೆ. ಈತನನ್ನು ಪ್ರೋತ್ಸಾಹಿಸುವುದಕ್ಕೆ ಬದಲಾಗಿ ಈತನ ಸದುದ್ದೇಶದ ಮೇಲೆ ತಣ್ಣೀರೆರಚಬೇಡಿರಿ.”
“ನನ್ನ ಉದ್ದೇಶ ನಿಮ್ಮನ್ನು ನಿರುತ್ಸಾಹಗೊಳಿಸುವುದಲ್ಲ ಭಾಟಿಯಾರವರೇ. ಆದರೆ ಏಕೊ ಇದು ವ್ಯವಹಾರಸಾಧ್ಯವೆಂದು ನನಗನಿಸುತ್ತಿಲ್ಲ. ನಮ್ಮದು ಹೆಚ್ಚು ಜನಸಂಖ್ಯೆ ಇರುವ ದೇಶ. ನಮ್ಮ ರಕ್ಷಣಾಖಾತೆ ಈಗ ಇಪ್ಪತ್ತು ಲಕ್ಷ ಕುಟುಂಬಗಳಿಗೆ ಜೀವನಾಧಾರ ಒದಗಿಸಿದೆ. ಹೀಗಿರುವಾಗ ರಕ್ಷಣಾಖಾತೆಯನ್ನು ಯಂತ್ರೀಕರಣಗೊಳಿಸುತ್ತ ಹೋದರೆ ನಿರುದ್ಯೋಗ ಉಂಟಾಗದೆ? ಅದಕ್ಕೆ ಬಾಧ್ಯರಾಗುವವರು ಯಾರು? ಈ ಅಂಶವನ್ನೂ ಯೋಚಿಸಬೇಡವೆ?” – ಎಂದರು ಸುನಿಲ್ ದೇಸಾಯಿ, ಬಹಳ ಪ್ರಾಜ್ಞತೆಯಿಂದ ಮಾತನಾಡುತ್ತಿದ್ದೇನೆಂಬ ಧೋರಣೆಯಲ್ಲಿ.
ಸಾಹಸವೆನಿಸಿದರೂ ಹೇಳುವುದು ಅನಿವಾರ್ಯವೆನಿಸಿ ಮಯಾಂಕ್ ಹೇಳಿದ: “ಸಾರ್! ನಮ್ಮ ಸಮಸ್ಯೆ ಅಧಿಕ ಜನಸಂಖ್ಯೆಯಷ್ಟೆ ಅಲ್ಲವಲ್ಲ! ಜನರನ್ನು ಹೇಗೆ ಬಳಸಿಕೊಳ್ಳುವುದು ಲಾಭಪ್ರದವಾಗುತ್ತದೆಂದೂ ಯೋಚಿಸಬೇಡವೆ? ತಾವು ಹೇಳಿದಂತೆ ರಕ್ಷಣಾ ಇಲಾಖೆಯಲ್ಲಿ ಇಪ್ಪತ್ತು ಲಕ್ಷ ಜನ ಉದ್ಯೋಗಿಗಳಿದ್ದಾರೆ. ಅವರಲ್ಲಿ ಒಂದಷ್ಟು ಜನರನ್ನು ಅನ್ಯಸಾಮಾನ್ಯ ಉದ್ಯಮಕ್ಷೇತ್ರಗಳಲ್ಲಿ ತೊಡಗಿಸಿದರೂ ಸಮಸ್ಯೆ ಪರಿಹಾರವಾಗುತ್ತದೆಯೆ? ದೇಶಕ್ಕೆ ಅದರಿಂದ ಎಷ್ಟು ಪ್ರಯೋಜನವಾಗಬಹುದು? ಅದಕ್ಕೆ ಬದಲಾಗಿ – ಮೊಬೈಲ್ ಫೋನ್ ಮೊದಲಾದವನ್ನೆಲ್ಲ ನಾವೇ ತಯಾರಿಸಿಕೊಳ್ಳಲಾಗದೆ? ಅವನ್ನೆಲ್ಲ ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕೆ? ನಿಮ್ಮ ಒಬ್ಬ ಸೈನಿಕನಿಗೆ ವರ್ಷಕ್ಕೆ ಐದು ಲಕ್ಷ ರೂಪಾಯಿ ವೇತನ ಕೊಡುತ್ತಿರಬಹುದು. ಆ ಹಣವನ್ನು ತೊಡಗಿಸಿ ನೀವು ಒಬ್ಬ ರೋಬೋ ಸೈನಿಕನನ್ನು ತಯಾರಿಸಿದರೆ ಅವನು ಸದಾಕಾಲ ನಿಮ್ಮ ಸೇವೆಗೆ ಸಿದ್ಧವಾಗಿರುತ್ತಾನೆ – ಹಗಲುರಾತ್ರಿ ಎನ್ನದೆ, ಚಳಿ ಎನ್ನದೆ ಸೆಕೆ ಎನ್ನದೆ. ಭಯವೆಂಬುದು ಆತನಿಗೆ ತಿಳಿಯದು. ಅವಶ್ಯವಾದರೆ ಗಾಳಿಯಲ್ಲಿ ನೆಗೆಯಬಲ್ಲ, ಸಮುದ್ರದೊಳಗೂ ಪ್ರಯಾಣಿಸಬಲ್ಲ. ಎದುರಾಳಿಗಳು ಅಧಿಕ ಬಲಶಾಲಿಗಳೆನಿಸಿದರೆ ಸೂಯಿಸೈಡ್ ಬಾಂಬರ್ ಆಗಿ ಎದುರಾಳಿಯನ್ನು ಕೊಂದು ತಾನೂ ಸಾಯಲು ಹಿಂದೆಗೆಯುವುದಿಲ್ಲ. ಒಂದು ವೇಳೆ ಅವನು ವಿಫಲನಾದರೂ ನಿಮಗಾಗುವ ನಷ್ಟ ಎಷ್ಟರದು? ರೋಬೋ ಸೈನಿಕನನ್ನು ತಯಾರಿಸಲು ಐದು ಲಕ್ಷ ಖರ್ಚಾಗುತ್ತದೆಂದುಕೊಳ್ಳಿ. ಅದಕ್ಕೆ ಬದಲಾಗಿ ನಿಮ್ಮ ಮನುಷ್ಯಸೈನಿಕ ಸತ್ತನೆಂದುಕೊಳ್ಳಿ. ಈ ಸೈನಿಕನ ಪ್ರಾಣಕ್ಕೆ ಬೆಲೆ ಕಟ್ಟಲಾದೀತೆ?….. ತುಂಬಾ ದೂರದೃಷ್ಟಿಯಿಂದ ಬಹಳ ಕಷ್ಟಪಟ್ಟು ತಯಾರಿಸಿರುವ ಈ ರೋಬೋವನ್ನು ತಮ್ಮ ಬಳಿಗೆ ತಂದಿದ್ದೇವೆ. ಕನಿಷ್ಠಪಕ್ಷ ಇದರ ಸಾಧಕಬಾಧಕಗಳನ್ನು ವಿವರವಾಗಿ ಪರಿಶೀಲಿಸದೆಯೆ ಇದನ್ನು ತಿರಸ್ಕರಿಸುತ್ತಿರುವುದು ನಮಗೆ ನಿರಾಶೆಯನ್ನುಂಟುಮಾಡುತ್ತಿದೆ.”
ಮಯಾAಕ್ ನೇರವಾಗಿ ನಿರ್ಭಿಡೆಯಾಗಿ ಹೇಳಿದ ಮಾತನ್ನು ಕೇಳಿ ವಿಚಲಿತಗೊಂಡ ಸುನಿಲ್ ದೇಸಾಯಿ ಸೌಮ್ಯ ಧ್ವನಿಯಲ್ಲಿ ಹೀಗೆಂದರು: “ಇಲ್ಲ, ತಮ್ಮ! ನಿನ್ನ ಒಳ್ಳೆಯದಕ್ಕಾಗಷ್ಟೆ ಹಾಗೆ ಹೇಳಿದೆನೇ ಹೊರತು ನಿನ್ನ ಸಾಮರ್ಥ್ಯ ಕುರಿತು ಅಪನಂಬಿಕೆಯಿAದಲ್ಲ. ಆದಷ್ಟು ಶೀಘ್ರವಾಗಿ ಈ ವಿಷಯದ ಸಮಗ್ರ ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸುತ್ತೇನೆ. ನಿರ್ಣಯ ಕೈಗೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ನೀನು ತಯಾರಿಸಿರುವ ರೋಬೋ ಸೈನಿಕನಿಂದ ದೇಶದ ರಕ್ಷಣಾ ರಂಗಕ್ಕೆ ಹೇಗೆ, ಎಷ್ಟುಮಟ್ಟಿಗೆ ಪ್ರಯೋಜನವಾಗಬಹುದು ಎಂಬುದನ್ನು ಆ ಸಮಿತಿ ಯೋಚಿಸಿ ನಿರ್ಧಾರ ಮಾಡುತ್ತದೆ.”
“ನಾವು ಹೋಗಿ ಬರುತ್ತೇವೆ ಸಾರ್” ಎಂದು ಮಯಾಂಕ್ ಮತ್ತು ಭಾಟಿಯಾ ಅಲ್ಲಿಂದ ನಿರ್ಗಮಿಸಿದರು.
* * *
ಮಯಾಂಕ್ ಮತ್ತು ಭಾಟಿಯಾ ಹೋದೊಡನೆ ಸುನಿಲ್ ದೇಸಾಯಿ ತನ್ನ ಮೊಬೈಲನ್ನು ಹೊರಕ್ಕೆ ತೆಗೆದರು. ಮಹೇಶ್ ಮಿಸ್ತಿçಗೆ ಫೋನ್ ಮಾಡಬಯಸಿದರೂ ಮರುಕ್ಷಣ ದ್ವೆöÊಧಕ್ಕೆ ಸಿಲುಕಿದರು. ಸಾಮಾನ್ಯವಾಗಿ ಯಾರೇ ಫೋನ್ ಮಾಡಿದರೂ ಮಹೇಶ್ ಮಿಸ್ತಿç ಫೋನನ್ನು ಎತ್ತುತ್ತಿರಲಿಲ್ಲ.
ಯಾರಾರೋ ಫೋನ್ ಮಾಡಿದರೆ ಆತನಿಗೆ ಕೋಪ ಬರುತ್ತದೆಂದೂ ಪರಿಚರರು ಹೇಳುತ್ತಿದ್ದರು.
ಅದರಿಂದಾಗಿಯೆ ಮಿಸ್ತಿçಗೆ ಸುನಿಲ್ ದೇಸಾಯಿ ಹಿಂದೆAದೂ ಫೋನ್ ಮಾಡಿರಲಿಲ್ಲ. ಆದರೆ ಈಗ ತನ್ನಲ್ಲಿಗೆ ಈ ಕಾಲೇಜು ವಿದ್ಯಾರ್ಥಿ ತಂದಿದ್ದ ಸಲಹೆಯನ್ನು ಅಂಗೀಕರಿಸಿದರೆ ಮಿಸ್ತಿçಗೆ ಎಷ್ಟು ಭಾರಿ ನಷ್ಟವಾಗಬಹುದೆಂಬುದು ಊಹಿಸಲೂ ಕಷ್ಟವಾಗಿತ್ತು.
ಸಾಮಾನ್ಯವಾಗಿ ಯಾರ ಫೋನ್ ಕರೆಯನ್ನೂ ಸ್ವೀಕರಿಸದ ಮಹೇಶ್ ಮಿಸ್ತಿçಗೆ ಈಗ ನೇರ ಫೋನ್ ಬಂದಿತ್ತು – ಸುನಿಲ್ ದೇಸಾಯಿಯಿಂದ. ಫೋನನ್ನು ತೆಗೆದುಕೊಂಡವನೇ ದೇಸಾಯಿ ಏಕಾಗಿ ಫೋನ್ ಮಾಡಿದರೆಂದು ವಿಚಾರಿಸುವುದಕ್ಕೆ ಮೊದಲೇ “ನನ್ನ ಪ್ರಾಜೆಕ್ಟ್ ಪ್ರೊಪೋಸಲ್ಗೆ ಅಪ್ರೂವಲ್ ಕೊಡಿಸುವ ಕೆಲಸ ಎಲ್ಲಿಯವರೆಗೆ ಬಂದಿದೆ?” – ಎಂದು ಪ್ರಶ್ನಿಸಿದ.
ಡಿಫೆನ್ಸ್ ಸಂಬAಧಿತ ಮ್ಯಾನುಫಾಕ್ಚರಿಂಗ್ ಕ್ಷೇತ್ರದಲ್ಲಿ ಮಿಸ್ತಿç ಉಪಕರಣಗಳ ನಿರ್ಮಾಣದ ಹಲವು ಫ್ಯಾಕ್ಟರಿಗಳನ್ನು ನಡೆಸುತ್ತಿದ್ದ. ಡಿಫೆನ್ಸ್ ಅಂಡ್ ಡೆವಲಪ್ಮೆಂಟ್ ಎಂಬ ದೊಡ್ಡ ವಿಭಾಗವನ್ನೂ ಏರ್ಪಡಿಸಿದ್ದ. ಅವನ ಕಂಪೆನಿಯ ಪರವಾಗಿ ಡಿಫೆನ್ಸ್ ಇಲಾಖೆಗೆ ಆಗಿಂದಾಗ ಯಾವುದೊ ಪ್ರೋಪೋಸಲ್ಗಳನ್ನು ಅಂಗೀಕಾರಕ್ಕಾಗಿ ಕಳಿಸುವುದು ಮಾಮೂಲು ಆಗಿತ್ತು.
ಸುನಿಲ್ ದೇಸಾಯಿ ಹೇಳತೊಡಗಿದರು: “ಬುಲೆಟ್ಪ್ರೂಫ್ ಜಾಕೆಟ್ಗಾಗಿ ಒಂದು ಲಕ್ಷ ರೂಪಾಯಿ, ಕತ್ತಲಲ್ಲಿ ನೋಡಲಾಗುವಂಥ ಗಾಗಲ್ಸ್ಗಾಗಿ ಎರಡು ಲಕ್ಷ, ಬಾಂಬ್ ಡಿಟೆಕ್ಶನ್ ಸಾಧನಗಳಿಗಾಗಿ ಇಪ್ಪತ್ತು ಲಕ್ಷ ಹಣವನ್ನು ಸರ್ಕಾರ ಈಗ ಮೀಸಲಾಗಿಟ್ಟಿದೆ. ಆದರೆ ಈಗತಾನೆ ಯಾರೊ ಒಬ್ಬ ಹುಡುಗ ರೋಬೋ ಸೈನಿಕನ ಮಾದರಿಯೊಂದನ್ನು ತಂದಿದ್ದಾನೆ. ಸೈನಿಕರ ಮಾಮೂಲು ಕೆಲಸಗಳನ್ನು ಮಾಡುವುದಲ್ಲದೆ ಈ ರೋಬೋ ಗಾಳಿಯಲ್ಲಿ ನೆಗೆಯುತ್ತದೆ, ನೀರಿನಲ್ಲೂ ಸಂಚರಿಸುತ್ತದೆ, ಎಂದೆಲ್ಲ ಹೇಳುತ್ತಿದ್ದಾನೆ. ಈ ಕೃತ್ರಿಮ ಸೈನಿಕನ ಪ್ರೋಟೋಟೈಪ್ ಮಾದರಿಯನ್ನೂ ತಂದುಕೊಟ್ಟಿದ್ದಾನೆ. ಇದನ್ನು ಕೇವಲ ಐದು ಲಕ್ಷ ರೂಪಾಯಿಗಳಲ್ಲೇ ತಯಾರಿಸಲಾಗುತ್ತದೆ ಎಂದೂ ಹೇಳುತ್ತಿದ್ದಾನೆ. ಇದರ ತಯಾರಿಕೆಗೆ ರಕ್ಷಣಾ ಇಲಾಖೆ ಅಂಗೀಕಾರ ನೀಡಿದರೆ ನಿಮ್ಮ ಮ್ಯಾನುಫಾಕ್ಚರಿಂಗ್ ಕಾಂಟ್ರಾಕ್ಟುಗಳ ಸ್ಥಿತಿ ಏನಾಗಬಹುದೆಂದು ನೀವು ಯೋಚನೆ ಮಾಡುವುದು ಒಳ್ಳೆಯದು.”
ಸುನಿಲ್ ದೇಸಾಯಿಯ ಮಾತನ್ನು ಕೇಳಿ ಮಹೇಶ್ ಮಿಸ್ತಿçಗೆ ಅನಿಸಿದ್ದು – ಸುನಿಲ್ ದೇಸಾಯಿ ತನ್ನ ಸ್ಥಾನದ ಪ್ರತಿಷ್ಠೆಯನ್ನು ನನಗೆ ಮನವರಿಕೆ ಮಾಡಲು ಯತ್ನಿಸುತ್ತಿದ್ದಾನೆ ಎಂದು. ಈ ಯೋಜನೆಯನ್ನು ಮೊಳಕೆಯಲ್ಲಿಯೆ ಚಿವುಟಿಹಾಕದಿದ್ದರೆ ಮುಂದೆ ಈತ ನನ್ನ ನೆತ್ತಿಯ ಮೇಲೆಯೆ ಸವಾರಿ ಮಾಡಬಹುದು – ಎಂದುಕೊಳ್ಳುತ್ತ ಗಡಸಾಗಿ ಹೇಳಿದ – “ಸುನಿಲ್ ದೇಸಾಯ್! ನಿನ್ನ ಕೆಲಸಕ್ಕೆ ಸರ್ಕಾರ ಕೊಡುತ್ತಿರುವ ಸಂಬಳ ಎರಡು ಲಕ್ಷ. ನಾನು ಕೊಡುತ್ತಿರುವ ಸಂಭಾವನೆ ಎರಡು ಕೋಟಿ. ನೀನು ಯಾರ ಹಿತಕ್ಕಾಗಿ ಕೆಲಸ ಮಾಡಬೇಕೆಂದು ಪದೇ ಪದೇ ನೆನಪು ಮಾಡುವುದಕ್ಕಾಗಿ ಅಲ್ಲ ನಾನು ಇಷ್ಟು ಭಾರಿ ಮೊತ್ತವನ್ನು ನಿನಗೆ ಕೊಡುತ್ತಿರುವುದು.”
“ಆ ಸಂಗತಿಯನ್ನು ನಾನು ಯಾವಾಗಲೂ ಮರೆತಿಲ್ಲ, ಮಿಸ್ತಿç. ಈಗ ಬಂದಿರುವ ಸ್ಥಿತಿಯಲ್ಲಿ ನಾನು ಏನು ಮಾಡಬಹುದೆಂದು ಹೇಳಿ” ಎಂದರು, ಸುನಿಲ್ ದೇಸಾಯಿ.
“ಇನ್ನೊಂದು ವಿಷಯವನ್ನೂ ನೀನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು ದೇಸಾಯ್. ನನ್ನ ಪ್ರಾಜೆಕ್ಟುಗಳಿಗೆ ಸರ್ಕಾರದ ಅಂಗೀಕಾರವನ್ನು ದೊರಕಿಸುವುದರಿಂದ ನನಗೆ ಏನೋ ದೊಡ್ಡ ಮೆಹರಬಾನಿ ಮಾಡುತ್ತಿದ್ದೇನೆಂದು ನೀನು ಭಾವಿಸಿರಬಹುದು. ಆದರೆ ನಾನು ಮನಸ್ಸು ಮಾಡಿದರೆ ನಾಳೆಯೆ ನಿನ್ನ ಸ್ಥಾನದಲ್ಲಿ ಬೇರೊಬ್ಬರನ್ನು ತಂದು ಕೂಡಿಸಬಹುದು. ಅವರು ನನ್ನ ಇಚ್ಛೆಯಂತೆ ಕೆಲಸ ಮಾಡುತ್ತಾರೆ. ಆದ್ದರಿಂದ ನಿನ್ನ ಸ್ಥಾನದ ಕುರಿತು ಸರಿಯಾಗಿ ಯೋಚಿಸು. ಮತ್ತೆ ನೀನು ನನಗೆ ಫೋನ್ ಮಾಡುವ ಆವಶ್ಯಕತೆ ಇಲ್ಲ. ನನಗೆ ಯಾವ ಕ್ರಮದಿಂದ ಅನುಕೂಲವಾಗಬಹುದೋ ಅದೇ ನಿನ್ನ ನಿರ್ಣಯ ಆಗಬೇಕು. ….ನಿನ್ನ ಯಾವುದೇ ನಿರ್ಣಯ ತಪ್ಪಾದ ದಿವಸ ನೀನು ಈಗಿನ ಸ್ಥಾನದಲ್ಲಿ ಇರುವುದಿಲ್ಲ” – ಎಂದ, ಮಹೇಶ್ ಮಿಸ್ತಿç.
ಸುನಿಲ್ ದೇಸಾಯಿಗೆ ತನ್ನ ದಾರಿ ಏನಿರಬೇಕೆಂಬುದು ಈಗ ಸ್ಪಷ್ಟವಾಯಿತು.
* * *
ವ್ಯಾಪಾರವೆಂಬುದು ನನ್ನ ಉಸಿರಿನಲ್ಲಿಯೆ ಸೇರಿದೆ – ಎಂದು ಆಗಾಗ ಮಹೇಶ್ ಮಿಸ್ತಿç ಹೇಳುತ್ತಿರುತ್ತಾನೆ. ವ್ಯಾಪಾರ ಆತನ ಉಸಿರಿನಲ್ಲಿರುವುದಷ್ಟೇ ಅಲ್ಲ, ಬೇರೆಯವರ ಉಸಿರಾಟದೊಡನೆ ಕೂಡಾ ಆತ ಆಟವಾಡಬಲ್ಲ – ಎನ್ನುತ್ತಾರೆ ಆತನ ಸ್ಪರ್ಧಿಗಳು. ಮಹೇಶ್ ಮಿಸ್ತಿçಯ ಹೆಸರನ್ನು ಕೇಳಿರದವರು ದೇಶದಲ್ಲೆ ಹೆಚ್ಚು ಮಂದಿ ಇರಲಾರರು. ಅಡಿಗೆ ಎಣ್ಣೆ ಮೊದಲಾದ ವಸ್ತುಗಳ ವ್ಯಾಪಾರದಿಂದ ಆರಂಭವಾದ ಆತನ ವಹಿವಾಟು ಬೆಳೆಯುತ್ತ ಹೋಗಿ ಈಗ ಆತ ದೇಶದ ಆರ್ಥಿಕ ರಂಗವನ್ನೆಲ್ಲ ತನ್ನ ಬೆರಳ ತುದಿಯಿಂದ ಶಾಸನ ಮಾಡುವ ಮಟ್ಟಕ್ಕೆ ಏರಿದ್ದಾನೆ.
ಕ್ರಮೇಣ ಆತನ ಮುಖ್ಯ ಗಮನ ರಕ್ಷಣಾ ಖಾತೆಯ ಕಡೆಗೆ ಹರಿದದ್ದು ಸಹಜ. ಏಕೆಂದರೆ ಆ ಖಾತೆಗೆ ಎಂದೂ ಹಣದ ಕೊರತೆಯಾಗದು.
ಯಾವ ವಸ್ತುವಿಗೆ ಎಷ್ಟು ಹಣ ಕೊಟ್ಟು ಕೊಂಡರೂ ಅದನ್ನು ಪ್ರಶ್ನಿಸುವವರು ಇರುವುದಿಲ್ಲ – ಎಂಬ ಸ್ಥಿತಿಯ ಹಿನ್ನೆಲೆಯಲ್ಲಿ ಮಿಸ್ತಿç ಕ್ರಮೇಣ ಬೇರೆ ರಂಗಗಳಿAದ ಪಕ್ಕಕ್ಕೆ ಸರಿದು ರಕ್ಷಣಾ ಖಾತೆಯ ಕಾಂಟ್ರಾಕ್ಟುಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದ್ದ. ಜಗತ್ತಿನ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಆತನ ಹೆಸರು ಕಾಣತೊಡಗಿತ್ತು.
ಮುಂದೆಯಾದರೂ ಆತ ತಮ್ಮನ್ನು ನೆಮ್ಮದಿಯಾಗಿ ಇರಗೊಟ್ಟಾನೆಂಬ ಇತರರ ನಿರೀಕ್ಷೆಯು ಫಲಿಸಲೂ ಮಿಸ್ತಿç ಅವಕಾಶ ಕೊಡಲಿಲ್ಲ.
ಏತನ್ಮಧ್ಯೆ ಮಿಸ್ತಿç ವಿಜ್ಞಾನಸಂಶೋಧನ ಕ್ಷೇತ್ರದಿಂದ ಆಕರ್ಷಿತನಾದ. ಲಾಭಾಸ್ಪದವೆನಿಸದ ಈ ಕ್ಷೇತ್ರಕ್ಕೆ ಆತ ಏಕೆ ವಾಲುತ್ತಿದ್ದಾನೆಂದು ಇತರರಿಗೆ ಅರ್ಥವಾಗಲಿಲ್ಲ. ಸಂಶೋಧನೆಗಳಿಗಾಗಿ ದೇಶದ ನಡುಭಾಗದಲ್ಲಿ ನಾಗಪುರ ಸಮೀಪದಲ್ಲಿ ಒಂದು ವಿಜ್ಞಾನನಗರವನ್ನೇ ನಿರ್ಮಿಸಿದ್ದ – ಬಗೆಬಗೆಯ ಸಂಶೋಧನೆಗಳಿಗಾಗಿ. ಅದರಲ್ಲಿ ಭಾರತದೊಳಗಿನ ವಿಜ್ಞಾನಿಗಳು ಮಾತ್ರವಲ್ಲದೆ ಹಲವರು ಪ್ರತಿಷ್ಠಿತ ವಿದೇಶೀ ತಜ್ಞರೂ ಕಾರ್ಯತತ್ಪರರಾಗಿದ್ದರು.
ಒಮ್ಮೆ ಪ್ರಧಾನಿಯವರೂ ವಿಜ್ಞಾನನಗರಕ್ಕೆ ಭೇಟಿಕೊಟ್ಟಿದ್ದರು. “ಇಷ್ಟು ದೊಡ್ಡ ವ್ಯವಸ್ಥೆಯನ್ನು ನಡೆಸುವುದರಲ್ಲಿ ನಿನ್ನ ಉದ್ದೇಶವೇನು?” ಎಂದು ಅವರು ಕೇಳಿದುದಕ್ಕೆ ಮಹೇಶ್ ಮಿಸ್ತಿç ಹೀಗೆಂದಿದ್ದ: “ಎಷ್ಟೊ ವರ್ಷಗಳಿಂದ ನೊಬೆಲ್ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಭಾರತೀಯರ ಹೆಸರು ಕಂಡೇ ಇಲ್ಲ. ಹಿಂದೆಯೂ
ನಮ್ಮ ದೇಶದಲ್ಲಿ ಜನಿಸಿದ್ದರೂ ವಿದೇಶಗಳಲ್ಲಿ ನೆಲೆಸಿದ್ದ ಒಬ್ಬಿಬ್ಬರಿಗಷ್ಟೇ ಪ್ರಶಸ್ತಿ ಸಂದಿತ್ತು. ಇದು ನನಗೆ ಬೇಸರ ತಂದಿತ್ತು. ನಮ್ಮ ದೇಶದಲ್ಲಿ ಪ್ರತಿಭಾವಂತರಿಗೆ ಕಡಮೆಯಿಲ್ಲ. ಪ್ರೋತ್ಸಾಹದ ಕೊರತೆ ಇದೆಯೆನಿಸಿತ್ತು ನನಗೆ. ನಾನು ಈ ವಿಜ್ಞಾನ ಸಂಕೀರ್ಣದಲ್ಲಿ ಕಲ್ಪಿಸಿರುವ ಸೌಕರ್ಯಗಳನ್ನು ವಿಜ್ಞಾನಿಗಳು ಬಳಸಿಕೊಂಡರೆ ಭಾರತೀಯರಿಗೂ ನೊಬೆಲ್ ಪ್ರಶಸ್ತಿಯಂತಹ ಮನ್ನಣೆಗಳು ದೊರೆತಾವು – ಎಂಬುದು ನನ್ನ ಹಂಬಲ. ಇದಕ್ಕೆ ಕೆಲವು ವರ್ಷ ಹಿಡಿದೀತು. ಆದರೆ ಅದು ಅಸಾಧ್ಯವೆಂದು ಭಾವಿಸಲು ಕಾರಣವಿಲ್ಲ.”
ಒಂದೊAದು ವಿಷಯಕ್ಕೆ ಸಂಬAಧಿಸಿದ ವಿಶಾಲ ಭವನಗಳು, ಪ್ರಯೋಗಾಲಯಗಳು, ಸಿಬ್ಬಂದಿ ವಸತಿಗಳು – ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗಿತ್ತು. ಭೌತಶಾಸ್ತç, ರಸಾಯನಶಾಸ್ತç, ಜೀವಶಾಸ್ತç, ವೈದ್ಯಶಾಸ್ತç – ಎಲ್ಲಕ್ಕೂ ವಿಶಾಲ ಪ್ರತ್ಯೇಕ ವಿಭಾಗಗಳು ಇದ್ದವು. ಕ್ಲಿನಿಕಲ್ ಲಬಾರಟರಿ ಮೊದಲಾದವುಗಳು ಅತ್ಯಾಧುನಿಕ ಯಂತ್ರೋಪಕರಣಗಳಿAದ ಸಜ್ಜಾಗಿದ್ದವು. ಹೊಸ ಬಗೆಯ
ಸುಧಾರಿತ ಧಾನ್ಯ ತಳಿಗಳ ನಿರ್ಮಾಣಕ್ಕಾಗಿಯೆ ಪ್ರತ್ಯೇಕ ಘಟಕಗಳಿದ್ದು ಪ್ರಯೋಗಪರೀಕ್ಷಣೆಗಳಿಗಾಗಿಯೆ ಸಾವಿರ ಎಕರೆಯಷ್ಟು ಜಮೀನು ಇದ್ದಿತು.
ಸಮಯವಿದ್ದಷ್ಟು ವೀಕ್ಷಿಸಿದ ಪ್ರಧಾನಿಗಳು ಮಹೇಶ್ ಮಿಸ್ತಿç ತೊಡಗಿಸಿದ್ದ ಶ್ರಮವನ್ನು ಪ್ರಶಂಸೆ ಮಾಡಿ “ನಿನ್ನ ಸಾಧನೆಗಾಗಿ ಕೇಂದ್ರಸರ್ಕಾರದ ಈ ಸಲದ ‘ಪದ್ಮ’ ಪ್ರಶಸ್ತಿಗೆ ಆಯ್ಕೆಯಾಗಲಿರುವವರ ಪಟ್ಟಿಯಲ್ಲಿ ನಿನ್ನ ಹೆಸರನ್ನೂ ಸೇರಿಸುವಂತೆ ಶಿಫಾರಸು ಮಾಡುತ್ತೇನೆ” ಎಂದರು.
“ನನ್ನ ಗಳಿಕೆಯಲ್ಲಿ ನನಗೆ ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ಈ ದೇಶದ ಪ್ರಜೆಗಳಿಗೂ ಇದೆಯೆಂದು ನಾನು ನಂಬಿದ್ದೇನೆ” ಎಂದ, ಮಿಸ್ತಿç.
ತೆರಳುವಾಗ ಪ್ರಧಾನಿಗಳು ಅಲ್ಲೊಂದೆಡೆ ಅನತಿದೂರದಲ್ಲಿದ್ದ ವಿಭಿನ್ನ ರೀತಿಯ ಸಂಕೀರ್ಣವೊAದರ ಕಡೆಗೆ ಬೊಟ್ಟು ಮಾಡಿ “ಅದು ಏನು?” ಎಂದು ಪ್ರಶ್ನಿಸಿದರು, ಕುತೂಹಲದಿಂದ.
“ಅದು ಕ್ವಾಂಟA ಫಿಸಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಶೋಧನಾಲಯಗಳು….” ಎಂದ, ಮಿಸ್ತಿç.
ಅವನು ಹೇಳುತ್ತಿದ್ದ ವಿವರಗಳು ಪ್ರಧಾನಿಗೆ ಪೂರ್ಣವಾಗಿ ಅರ್ಥವಾದಂತೆನಿಸದಿದ್ದರೂ “ಚೆನ್ನಾಗಿದೆ” ಎಂದವರೇ ಅಲ್ಲಿಂದ ನಿರ್ಗಮಿಸಿದರು.
ಅವರು ಹೊರಡುತ್ತಿದ್ದಂತೆಯೆ ಮಹೇಶ್ ಮಿಸ್ತಿç ಅವಸರವಸರವಾಗಿ ಬ್ಯಾಟರಿ ಕಾರನ್ನೇರಿದ. ಕೃತ್ರಿಮ ಮೆದುಳಿನ ತಯಾರಿಕೆಯಲ್ಲಿ ನಿರತವಾಗಿದ್ದ ವಿಭಾಗದಲ್ಲಿ ಒಂದು ಎಮರ್ಜೆನ್ಸಿ ಸಂದರ್ಭ ಏರ್ಪಟ್ಟಿದೆಯೆಂದೂ ಕೂಡಲೆ ಅಲ್ಲಿಗೆ ಬರಬೇಕೆಂದೂ ಸಂದೇಶ ಬಂದಿತ್ತು. ಆ ಲ್ಯಾಬ್ ಕಡೆಗೆ ಮಿಸ್ತಿç ಧಾವಿಸಿದ.
ಲ್ಯಾಬ್ ಸಮೀಪಿಸುತ್ತಿದ್ದಂತೆ ಮಿಸ್ತಿçಯನ್ನು ಭೇಟಿಯಾಗಲು ಆತುರದಿಂದಿದ್ದ ಸಿಸೋದಿಯ ದ್ವಾರದ ಬಳಿಗೆ ಬಂದು ಮಿಸ್ತಿçಯನ್ನು ಒಳಕ್ಕೆ ಕರೆದೊಯ್ದ. ಮಿಸ್ತಿçಯ ನಂಬಿಕೆಯ ಬಂಟರಲ್ಲೊಬ್ಬ, ಸಿಸೋದಿಯ.
“ಏನು ಸಿಸೋದಿಯ, ಅರ್ಜೆಂಟಾಗಿ ನೋಡಬೇಕೆಂದು ಹೇಳಿಕಳಿಸಿದೆಯಲ್ಲ?”
“ಒಂದು ಸಮಸ್ಯೆ ಬಂದಿದೆ….”
“ಏನದು ಸಮಸ್ಯೆ?”
“ಅವಧೂತ್ ಅವರು ನಾವು ಕೋರಿದಂತೆ ಸಹಕರಿಸುತ್ತಿಲ್ಲ.”
ಮಿಸ್ತಿç ಹುಬ್ಬು ಗಂಟಿಕ್ಕಿತು. ಮರುಕ್ಷಣ ಮಾಮೂಲು ಸ್ಥಿತಿಗೆ ಮರಳಿದ. ಇಂತಹ ಸಣ್ಣ ವಿಷಯಗಳನ್ನು ಆಗಿಂದಾಗ ಬಗೆಹರಿಸಿಕೊಳ್ಳದಿದ್ದರೆ ಕೋಟ್ಯಂತರ ರೂಪಾಯಿ ವ್ಯವಹಾರಗಳನ್ನು ನಿರ್ವಹಿಸುವುದು ಸಾಧ್ಯವಾದೀತೆ? – ಎಂದುಕೊಳ್ಳುತ್ತ ತಾವಿದ್ದ ಕಟ್ಟಡ ದಾಟಿ ಪಕ್ಕದ ವಿಶಾಲ ಭವನವನ್ನು ಸಮೀಪಿಸಿದ. ಅಲ್ಲಿ ಉಕ್ಕಿನ ಭಾರಿ ಸೆಕ್ಯುರಿಟಿ ದ್ವಾರವಿತ್ತು. ಮಿಸ್ತಿç, ಸಿಸೋದಿಯ – ಇಬ್ಬರೂ ದ್ವಾರದ ಮುಂದೆ ನಿಂತು ರಂಧ್ರದ ಮುಂದೆ ತಮ್ಮ ಕಣ್ಣುಗಳನ್ನು ನೆಟ್ಟ ಎರಡು-ಮೂರು ಸೆಕಂಡುಗಳಲ್ಲಿ ಅಲ್ಲಿದ್ದ ಪರಿಕರ ಇವರ ಕಣ್ಣುಗಳನ್ನು ಸ್ಕಾö್ಯನ್ ಮಾಡಿ ಅವರ ಅಧಿಕೃತತೆಯನ್ನು ಖಾತರಿಪಡಿಸಿಕೊಂಡಿತು.
ಈ ಪರೀಕ್ಷಣಾದಿ ಪ್ರಕ್ರಿಯೆಗಳೆಲ್ಲ ನಡೆಯುತ್ತಿದ್ದುದು ದೇಶದಲ್ಲಿಯೆ ವಿರಳವೂ ಅತ್ಯಂತ ದುಬಾರಿಯೂ ಆದ ಸೂಪರ್ ಕಂಪ್ಯೂಟರ್ಗಳಿAದ ಚಾಲಿತವಾದ ಕೃತಕ ಮೇಧೆ – ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಾಧನಸಮೂಹ. ಮನುಷ್ಯ ವ್ಯಕ್ತಿಗಳು ಅದರಲ್ಲಿ ಯಾವುದೇ ಏರುಪೇರು ಮಾಡುವುದು ಸುತರಾಂ ಅಸಾಧ್ಯ. ಈ ಸಾಧನಗಳು ಸೂಚಿತ ಕಾರ್ಯಗಳನ್ನು ಮಾಡುವುದು ಮಾತ್ರವಲ್ಲದೆ ತಮಗೆ ಎದುರಾದ ಮಾಹಿತಿಗಳ ಋಜುತೆಯನ್ನು ಮಾಪನಮಾಡಿ ಅವಶ್ಯವಾದ ನಿರ್ಣಯಗಳನ್ನು ಕೈಗೊಳ್ಳಬಲ್ಲವು, ಅಧಿಕೃತವಲ್ಲದ ಮಾಹಿತಿಗಳನ್ನು ತಿರಸ್ಕರಿಸಬಲ್ಲವು. ಅಷ್ಟು ಮೇಲ್ಮಟ್ಟದ ತರ್ಕಶಕ್ತಿಯೂ ವಿಚಕ್ಷಣೆಯೂ ಅವುಗಳಲ್ಲಿ ಇರುತ್ತವೆ. ಈ ಒಂದೊAದು ಸೂಪರ್ ಕಂಪ್ಯೂಟರಿನ ಸಾಮರ್ಥ್ಯವೇ ಅಗಾಧ. ದೇಶದ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ, ಪ್ರಯೋಗಾಲಯಗಳಲ್ಲಿಯೂ ಇರದ ಅಂತಹ ೭೪ ಸೂಪರ್ ಕಂಪ್ಯೂಟರುಗಳು ಮಹೇಶ್ ಮಿಸ್ತಿçಯ ಈ ವಿಜ್ಞಾನನಗರದಲ್ಲಿ ಇವೆಯೆಂಬ ಸಂಗತಿ ಈ ಆವರಣದ ಆಚೆ ಬಹುಶಃ ಯಾರಿಗೂ ತಿಳಿಯದು. ಈ ಇಡೀ ವಿಜ್ಞಾನನಗರದ ವ್ಯವಸ್ಥೆಯ ಗಾತ್ರವೂ ವ್ಯಾಪ್ತಿಯೂ ಹೊರಗಿನವರ ಊಹೆಗೂ ನಿಲುಕದಷ್ಟರದು.
ಇಂತಹ ದೈತ್ಯಪ್ರಮಾಣದ ವ್ಯವಸ್ಥೆಯ ಮೇಲುಸ್ತುವಾರಿ ಎಂದರೆ ಸಾಧಾರಣ ಕೆಲಸವಲ್ಲ. ಈ ಜಟಿಲವಾದ ಹೊಣೆಗಾರಿಕೆ ಇದ್ದುದು ಅವಧೂತ್ ಹೆಗಲ ಮೇಲೆ. ಇಲ್ಲಿಯ ಸಂಶೋಧನೆಗಳೆಲ್ಲದರ ಉಗಮವಾಗುವುದು ಅವಧೂತ್ ಮೆದುಳಿನಲ್ಲಿ, ಆತನ ದಿಙ್ನಿರ್ದೇಶನದಂತೆ. ಇಂತಹ ಅಭೂತಪೂರ್ವ ಶೋಧಗಳ ನೀಲನಕ್ಷೆ ಆತನ ಮೆದುಳಿನಲ್ಲಿ ತಯಾರಾದ ಮೇಲೆ ಅವುಗಳ ಪ್ರಯೋಗಕ್ಕಾಗಿ ಆತ ಹಲವು ಪ್ರೌಢ ವಿಶ್ವವಿದ್ಯಾಲಯ-ಪ್ರಯೋಗಕೇಂದ್ರಗಳ ಬಾಗಿಲನ್ನು ತಟ್ಟಿದ್ದ. ಅಲ್ಲೆಲ್ಲಿಯೂ ಈ ಕೆಲಸಕ್ಕೆ ಬೇಕಾದಷ್ಟು ಹಣ ಹೂಡಿಕೆಯ ಸಂಭವ ಕಂಡಿರಲಿಲ್ಲ. ಹಣ ಇದ್ದ ಸರ್ಕಾರೀ ಪ್ರಯೋಗಕೇಂದ್ರಗಳು ಆಸಕ್ತಿ ತೋರಲಿಲ್ಲ.
ಆದರೆ ಆತನ ಕಲ್ಪನೆಗಳ ಅಪಾರ ಸಾಧ್ಯತೆಗಳನ್ನು ಗ್ರಹಿಸಿದ ಮಹೇಶ್ ಮಿಸ್ತಿç ಆ ಸಂಶೋಧನೆಗಳಿಗೆ ಅವಶ್ಯವಿದ್ದ ಪ್ರಮಾಣದ ಹಣವನ್ನು ತೊಡಗಿಸಲು ಮುಂದಾದ. ಈಗ ಆ ಪ್ರೌಢ ಶೋಧಗಳು ಮುಕ್ತಾಯದ ಹಂತ ತಲಪುತ್ತಿದ್ದವು.
ಸೆಕ್ಯುರಿಟಿಯನ್ನು ದಾಟಿ ಮಿಸ್ತಿç ಮತ್ತು ಸಿಸೋದಿಯ ಒಳಕೋಣೆಯನ್ನು ಪ್ರವೇಶಿಸಿದಾಗ ಕಂಡದ್ದು – ಸೋಫಾದ ಮೇಲೆ ಅವಧೂತ್ ಎರಡೂ ಕೈಗಳಿಂದ ತಲೆಯನ್ನು ಹಿಡಿದುಕೊಂಡು ಚಿಂತಾಮಗ್ನನಾಗಿ ಕುಳಿತಿದ್ದರು.
“ಏನಾಯಿತು ಅವಧೂತ್? ಏನೋ ಗಾಢ ಆಲೋಚನೆಯಲ್ಲಿ ಮುಳುಗಿರುವ ಹಾಗಿದೆಯಲ್ಲ?” – ಎಂದು ಪ್ರಶ್ನಿಸಿದ, ಮಿಸ್ತ್ರಿ.
ಅವಧೂತ್ ಸಾಮಾನ್ಯ ವ್ಯಕ್ತಿಯಲ್ಲ. ಐ.ಐ.ಟಿ.ಯಲ್ಲಿ ಹಿರಿಯ ಪ್ರೊಫೆಸರನಾಗಿ ನಿವೃತ್ತನಾಗಿದ್ದವನು; ಸದಾ ಒಂದಲ್ಲ ಒಂದು ವಿಶೇಷ ಸಂಶೋಧನೆಯಲ್ಲಿ ತೊಡಗಿರುತ್ತಿದ್ದವನು. ಸಂಶೋಧನ ಕ್ಷೇತ್ರದಲ್ಲಿ ಎಲ್ಲರ ಗೌರವವನ್ನು ಗಳಿಸಿಕೊಂಡಿದ್ದವನು.
ಮಿಸ್ತಿçಯ ಮಾತನ್ನು ಕೇಳಿ ಧ್ಯಾನಸ್ಥಿತಿಯಿಂದ ಹೊರಬಂದಂತೆ ಅವನ ಕಡೆಗೆ ಹತಾಶೆ ತುಂಬಿದ ನೋಟ ಬೀರಿದರು.
ಅನಂತರ ನಿಧಾನವಾಗಿ ಮಾತನಾಡತೊಡಗಿದರು.
“ನಿಮಗೆ ಹೇಗೆ ತಿಳಿಸಬೇಕೆಂದು ತೋರುತ್ತಿಲ್ಲ, ಮಿಸ್ತಿç ಅವರೆ. ನಾವು ದಾರಿ ತಪ್ಪಿದ್ದೇವೆನಿಸುತ್ತದೆ. ತಪ್ಪು ನಡೆದಿರುವುದು ನನ್ನಿಂದಲೇ. ದೊಡ್ಡ ನಿರೀಕ್ಷೆಯನ್ನು ನಿಮ್ಮಲ್ಲಿ ಮೂಡಿಸಿದ್ದವನು ನಾನೇ. ಇದುವರೆಗೆ ಯಾರೂ ಊಹಿಸಿರದಷ್ಟು ಅಪಾರ ಶಕ್ತಿಯು ನಿಮ್ಮ ವಶವಾಗುವುದೆಂಬ ಕನಸಿಗೆ ನಾನು ಕಾರಣನಾಗಿದ್ದೆ. …ನಾನು ಕೋರಿದ ಸೌಕರ್ಯಗಳನ್ನೆಲ್ಲ ನೀವು ಒದಗಿಸಿದಿರಿ. ಸಂಶೋಧನೆಯ ಫಲಿತ ಕೈಹತ್ತುತ್ತದೆಂಬ ಸಮಯ ಬಂದಿರುವಾಗ ನಾನು ಹೆಜ್ಜೆಯನ್ನು ಹಿಂದಕ್ಕಿರಿಸುವುದು ಸರಿಯಲ್ಲವೇನೊ. ಆದರೆ… ಈಗ ನನ್ನ ಕಣ್ಣು ತೆರೆದುಕೊಳ್ಳುತ್ತಿದೆ. ಈಗ ಸಣ್ಣ ಪುಟ್ಟದ್ದಲ್ಲ, ದೊಡ್ಡ ಪಾಪವೇ ನಮ್ಮಿಂದ ಘಟಿಸುತ್ತಿದೆ ಎನಿಸತೊಡಗಿದೆ. ಈ ವಿಷವೃಕ್ಷದ ಪರಿಣಾಮ ಒಬ್ಬರಿಬ್ಬರಿಗಲ್ಲ, ಇಡೀ ಮಾನವತೆಯನ್ನೇ ಬಲಿತೆಗೆದುಕೊಂಡೀತೇನೊ ಎನಿಸುತ್ತಿದೆ. ಆದ್ದರಿಂದ ನಮ್ಮ ಈಗಿನ ಪ್ರಯೋಗಗಳನ್ನು ಇಲ್ಲಿಗೇ ಕೈಬಿಡುವುದು ಒಳ್ಳೆಯದೆನಿಸುತ್ತಿದೆ. ….”
“ನೀವು ಏನು ಹೇಳುತ್ತಿದ್ದೀರೋ ನಿಮಗೆ ಅರ್ಥವಾಗಿದೆಯೆ? ಈ ಪ್ರಯೋಗಸರಣಿಯಲ್ಲಿ ಎಷ್ಟು ಸಾವಿರ ಕೋಟಿ ಹಣ ಖರ್ಚಾಗಿದೆಯೆಂದು ತಿಳಿದೂ ಈ ಮಾತನ್ನಾಡುತ್ತಿದ್ದೀರಾ?” – ಎಂದ, ಸಿಸೋದಿಯ.
“ತಿಳಿದಿದೆ. ಅದಕ್ಕೆ ನನ್ನನ್ನು ಕ್ಷಮಿಸಿರಿ ಎಂದು ಕೇಳಿಕೊಳ್ಳುವುದು ಬಿಟ್ಟು ನನಗೆ ಬೇರೆ ಮಾರ್ಗ ಏನಿದೆ? ಈಗಾಗಲೆ ನಿಮಗೆ ಅಪಾರ ಹಣ ವ್ಯಯವಾಗಿರಬಹುದು…. ಆದರೂ, ….ನಾವು ಹೊರಟಿರುವ ದಿಕ್ಕು ಸರಿಯಿಲ್ಲವೆನಿಸುತ್ತಿದೆ ಈಗ ನನಗೆ. ಅದರಿಂದ ಅಪಾರ ಜೀವಹಾನಿಯಾಗಬಹುದು. ಜನರ ಪ್ರಾಣಗಳೇ ಹೋದ ಮೇಲೆ ಎಷ್ಟು ಹಣ ಗಳಿಕೆಯಾದರೂ ಏನು ಪ್ರಯೋಜನ?” – ಎಂದರು, ಅವಧೂತ್.
ಸಿಸೋದಿಯ ಆಕ್ರೋಶದಿಂದ ಏನೋ ಹೇಳಹೊರಟಾಗ ಮಿಸ್ತಿç ಆತನನ್ನು ಸಂಜ್ಞೆಯಿAದ ತಡೆದು ಅವಧೂತ್ರ ಕಡೆ ತಿರುಗಿ ಕೇಳಿದ:
“ಯಾರ ಪ್ರಾಣಗಳಿಗೆ ಕುತ್ತು ಬರುತ್ತದೆಂದು ಹೇಳುತ್ತಿದ್ದೀರಿ?”
“ಯಾರ ಪ್ರಾಣವಾದರೆ ಏನು? ಎಲ್ಲರ ಜೀವಗಳೂ ಬೆಲೆಯುಳ್ಳವೇ ತಾನೆ!…. ನಮ್ಮ ಸಂಶೋಧನೆಗಳಿAದ ಲೋಕಕ್ಕೆ ಹಿತವಾಗಬೇಕು, ಯಾರಿಗೂ ಹಾನಿಯಾಗಬಾರದು. ಇದು ಒಬ್ಬರಿಬ್ಬರ ಪ್ರಾಣದ ವಿಷಯವಲ್ಲ. ನಮ್ಮ ಸಂಶೋಧನೆಯಿAದ ಇಡೀ ಮಾನವತೆಗೇ ಕಲ್ಪನೆಗೆ ಮೀರಿದ ಕಷ್ಟಗಳು ಉಂಟಾಗಬಹುದು” – ಎಂದರು, ಅವಧೂತ್.
ಅವಧೂತ್ ಆಡಿದ ಮಾತುಗಳನ್ನು ಆಲಿಸುತ್ತಿದ್ದಂತೆ ಮಹೇಶ್ ಮಿಸ್ತಿçಯ ಮುಖ ವಿವರ್ಣವಾಯಿತು. ಆದರೆ ಅವನಿಂದ ಕೂಡಲೆ ಮಾತು ಹೊರಡಲಿಲ್ಲ. ಅವನು ಯೋಚಿಸತೊಡಗಿದ – ನಿನ್ನೆ ಮೊನ್ನೆಯವರೆಗೆ ಸ್ತಿಮಿತದಲ್ಲಿದ್ದ ಅವಧೂತ್ ಮನಸ್ಸಿನಲ್ಲಿ ಈಗ ಹಠಾತ್ತನೆ ಬದಲಾವಣೆ ಬಂದಿರುವುದು ಹೇಗೆ? ಮುಂದೆ ಏನು ಮಾಡಬಹುದು?
ಸಿಸೋದಿಯನ ಕೋಪ ಇನ್ನೂ ಆರಿರಲಿಲ್ಲ. ಗಡಸು ಧ್ವನಿಯಲ್ಲಿ ಕೇಳಿದ:
“ಹಾಗಾದರೆ ನೀವು ಮುಂದೆ ಏನು ಮಾಡಬೇಕು ಎಂದುಕೊAಡಿದ್ದೀರಿ?”
“ಇನ್ನು ಮುಂದೆ ನಾನು ಈ ಸಂಶೋಧನೆಯಲ್ಲಿ ಭಾಗವಹಿಸಲಾರೆ” – ಎಂದರು ನಿಶ್ಚಯಧ್ವನಿಯಲ್ಲಿ ಅವಧೂತ್.
ಸಿಸೋದಿಯ ಮಾತನ್ನು ಮುಂದುವರಿಸದAತೆ ತಡೆದ ಮಿಸ್ತಿç ಹೇಳಿದ: “ಇವರು ಒಂದು ದೃಢವಾದ ನಿರ್ಣಯ ತೆಗೆದುಕೊಂಡಿರುವರೆAದ ಮೇಲೆ ಚರ್ಚೆಯನ್ನು ಬೆಳೆಸುವುದು ಉಪಯುಕ್ತವಾಗದು, ಸಿಸೋದಿಯ” – ಎನ್ನುತ್ತ ಬಾಗಿಲ ಕಡೆಗೆ ಹೊರಟ.
ಮಿಸ್ತಿçಯನ್ನು ಹಿಂಬಾಲಿಸಿದ ಸಿಸೋದಿಯ ಸುಮ್ಮನಾಗದೆ “ಅದೇಕೆ ಸಾರ್ ಹೀಗೆನ್ನುತ್ತಿದ್ದೀರಿ? ಸಂಶೋಧನೆಗಳನ್ನು ಈ ಹಂತದಲ್ಲಿ ಕೈಬಿಟ್ಟರೆ ನಮಗೆ ಅದೆಷ್ಟು ಭಾರಿ ನಷ್ಟವಾಗಬಹುದು!….”
ಕೋಣೆಯಿಂದ ಹೊರಕ್ಕೆ ಬಂದ ಮೇಲೆ ಮಿಸ್ತಿç ಸಮಾಧಾನ ಧ್ವನಿಯಲ್ಲಿ ಹೇಳಿದ:
“ನಿನಗೆ ಇನ್ನೂ ಪರಿಸ್ಥಿತಿ ಅರ್ಥವಾಗಲಿಲ್ಲವೆ ಸಿಸೋದಿಯ? ಅವಧೂತ್ ತಮ್ಮ ಸಂಶೋಧನೆಯನ್ನು ಮುಗಿಸಿದ್ದಾಗಿದೆ. ನಮಗೆ ಬೇಕಾದ ವೈಜ್ಞಾನಿಕ ಆವಿಷ್ಕರಣ ಈಗ ಸಿದ್ಧವಾಗಿದೆ.”
ನಂಬಲಾರದವನAತೆ ಸಿಸೋದಿಯ ಕೇಳಿದ: “ಹಾಗಿದ್ದಲ್ಲಿ ಇಷ್ಟೆಲ್ಲ ಕೆಲಸ ಮಾಡಿ ಮುಗಿಸಿರುವ ಅವಧೂತ್ ನಮಗೆ ಏಕೆ ಸುಳ್ಳು ಹೇಳುತ್ತಿದ್ದಾರೆ?”
“ಏಕೆಂದರೆ ಅವರಿಗೆ ಭವಿಷ್ಯದಲ್ಲಾಗುವ ವಿದ್ಯಮಾನಗಳ ಮನವರಿಕೆ ಆಗಿರುವುದರಿಂದ.”
ಸಿಸೋದಿಯನಿಗೆ ಕಪಾಳಕ್ಕೆ ಬಾರಿಸಿದಂತಾಯಿತು. ನಾನು ಎಂತಹ ಅಮಾಯಕ – ಎಂದುಕೊAಡ. ಹೌದು, ತಮ್ಮ ಸಂಶೋಧನೆ ನಡೆದಿದ್ದುದೇ ಮುಂದೆ ಆಗಲಿರುವುದನ್ನು ಮೊದಲೇ ಕಂಡುಕೊಳ್ಳುವ ವಿಧಾನಕ್ಕಾಗಿ. ತನ್ನ ಸಂಶೋಧನೆ ಮುಕ್ತಾಯವಾದ ಮೇಲೆ ತನ್ನ ಆವಶ್ಯಕತೆ ಇರದೆಂದು ಅವಧೂತ್ಗೆ ಈಗಾಗಲೇ ತಿಳಿದುಹೋಗಿರುತ್ತದೆ.
“ಹೀಗೆಯೆ ಆಗಿರಬೇಕು ಸಾರ್! … ಈಗ ನಾವು ಏನು ಮಾಡಬೇಕು?”
“ನೀನು ಈಗ ತುರ್ತಾಗಿ ಮಾಡಬೇಕಾದ್ದೆಂದರೆ – ಅವಧೂತ್ ತಯಾರಿಸಿರುವ ಯಂತ್ರ ಹೇಗೆ ಕೆಲಸ ಮಾಡುತ್ತದೆ, ಅದನ್ನು ಬಳಸುವುದು ಹೇಗೆ – ಎಂಬುದನ್ನು ಕಂಡುಕೊಳ್ಳುವುದು. ಅವಧೂತ್ರನ್ನು ಕೇಳಿದರೆ ಅವರು ಹೇಳುವುದಿಲ್ಲ. ಆದರೆ ನಯದಿಂದಲೋ ಹೆದರಿಸಿಯೋ ನಾವು ಈ ಮಾಹಿತಿ ಸಂಗ್ರಹಿಸಲೇಬೇಕು. ಈ ಯಂತ್ರಸಾಧನವನ್ನು ಆಪರೇಟ್ ಮಾಡುವುದು ಹೇಗೆಂಬುದು ನಮಗೆ ತಿಳಿದ ಮೇಲೆ ನಮಗೆ ಅವಧೂತ್ರ ಆವಶ್ಯಕತೆ ಇರುವುದಿಲ್ಲ” – ಎಂದ, ಮಿಸ್ತಿç.
“ನೀವು ಹೇಳುವುದು ಸರಿ” – ಎಂದ, ಸಿಸೋದಿಯ.
ಸ್ವಲ್ಪ ಸಮಯವಾದ ಮೇಲೆ ಸಿಸೋದಿಯ ಅವಧೂತ್ರ ಲ್ಯಾಬ್ ಪ್ರವೇಶಿಸಲು ದ್ವಾರದಲ್ಲಿ ಎಂದಿನAತೆ ಸೆಕ್ಯುರಿಟಿ ಉಪಕರಣಕ್ಕೆ ತನ್ನ ಐಡೆಂಟಿಟಿಯನ್ನು ಸೂಚಿಸಿದ.
ಆದರೆ ಬಾಗಿಲು ತೆರೆದುಕೊಳ್ಳಲಿಲ್ಲ. ಮತ್ತೆ ಎರಡು ಸಲ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ವ್ಯವಸ್ಥೆಯನ್ನು ಅವಧೂತ್ ಬಹುಶಃ ಬದಲಾಯಿಸಿರಬೇಕು – ಎಂದುಕೊಳ್ಳುತ್ತ ಸಿಸೋದಿಯ ಪಕ್ಕದ ಕ್ಯಾಬಿನಿಗೆ ಧಾವಿಸಿ ಅಲ್ಲಿದ್ದ ಮಾನಿಟರನ್ನು ಚಾಲನೆಗೊಳಿಸಿದ – ಲ್ಯಾಬ್ನೊಳಗೆ ಏನು ನಡೆಯುತ್ತಿದೆಯೊ ನೋಡೋಣವೆಂದು.
ಅಲ್ಲಿಯ ದೃಶ್ಯ ಸಿಸೋದಿಯನನ್ನು ದಿಗ್ಭ್ರಾಂತಗೊಳಿಸಿತು.
ಅವಧೂತ್ ತಾವು ತಯಾರಿಸಿದ್ದ ಯಂತ್ರೋಪಕರಣಗಳನ್ನು ಒಂದೊAದಾಗಿ ಒಡೆದು ಧ್ವಂಸ ಮಾಡುತ್ತಿದ್ದರು; ಎಲ್ಲ ಸರ್ಕ್ಯೂಟ್ ಬೋರ್ಡುಗಳನ್ನೂ ಚಿಂದಿ ಮಾಡುತ್ತಿದ್ದರು!
ಅವಧೂತ್ರ ಉದ್ದೇಶ ಸಿಸೋದಿಯನಿಗೆ ಅರ್ಥವಾಯಿತು – ಅವರು ಮಾಡಿದ ಸಂಶೋಧನೆಯ ಪ್ರಯೋಜನ ನಮಗೆ ದಕ್ಕದಿರಲಿ ಎಂದು ಕ್ರಮಕೈಗೊಳ್ಳುತ್ತಿದ್ದಾರೆ.
ಸಮೀಪದಲ್ಲಿದ್ದ ಸೆಕ್ಯೂರಿಟಿ ಸಿಬ್ಬಂದಿಗೆ ಆದೇಶಿಸಿದ – “ಬಾಗಿಲನ್ನು ಒಡೆದರೂ ಪರವಾಗಿಲ್ಲ – ಆದಷ್ಟು ಬೇಗ ಈ ಬಾಗಿಲನ್ನು ತೆರೆಯಿರಿ.”
ಸಿಬ್ಬಂದಿ ಆ ಕೆಲಸದಲ್ಲಿ ಮಗ್ನರಾದರು. ಮಾಮೂಲು ಕ್ರಮಗಳು ಕೆಲಸ ಮಾಡದಿದ್ದುದರಿಂದ ಬಾಗಿಲನ್ನು ಒಡೆಯಲು ಸ್ಫೋಟಕವನ್ನು ಅಳವಡಿಸಿದರು.
‘ಅವಧೂತ್ ತಮ್ಮ ಪ್ರಯೋಗದಲ್ಲಿ ಸಫಲರಾಗಿದ್ದರೆನ್ನಲು ಈ ಭದ್ರತೆ ಇನ್ನೊಂದು ಸಾಕ್ಷಿಯಾಗಿದೆ, ಮಹೇಶ್ ಮಿಸ್ತಿçಯವರೂ ನಾನೂ ಅವರನ್ನು ಕಾರ್ಯಮುಕ್ತಗೊಳಿಸಲು ಯೋಚಿಸುತ್ತಿದ್ದೇವೆಂಬುದೂ ಅವರಿಗೆ ಮನಸ್ಸಿಗೆ ಬಂದAತಿದೆ’ – ಎಂದುಕೊAಡ, ಸಿಸೋದಿಯ. ‘ನಮ್ಮ ಈ ಯೋಚನೆಗಳೆಲ್ಲ ಅವರಿಗೆ ತಿಳಿದುಹೋಗಿವೆಯೆಂದರೆ ಇದೂ ಅವರು ಆವಿಷ್ಕರಿಸಿರುವ ಯಂತ್ರೋಪಕರಣದ ಮೂಲಕವೇ ಶಕ್ಯವಾಗಿರಬಹುದು.’
ಈ ವೇಳೆಗೆ ಅವಧೂತ್ ತಾವು ಅಂದುಕೊAಡದ್ದನ್ನು ಮಾಡಿಯಾಗಿದೆ ಎನಿಸಿದಂತೆ ಹಿಂದೆಮುಂದೆ, ಪಕ್ಕದಲ್ಲಿ ಕಣ್ಣು ಹಾಯಿಸಿದರು. ಯಂತ್ರಭಾಗಗಳೂ ಲೆಕ್ಕವಿಲ್ಲದಷ್ಟು ಸರ್ಕ್ಯೂಟ್ ಬೋರ್ಡುಗಳೂ ಚೆಲ್ಲಾಪಿಲ್ಲಿಯಾಗಿ ನೆಲದ ಮೇಲೆ ಬಿದ್ದಿದ್ದವು. (ಸಶೇಷ)
ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ
ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ