
ಮುದ್ಗಲಾಶ್ರಮಕ್ಕೆ ತಲಪುವವರೆಗೂ ನನಗಿದ್ದ ಉದ್ದೇಶ ಒಬ್ಬಳು ಸಂಸ್ಕಾರವಂತೆಯಾದ ಹೆಣ್ಣನ್ನು ಪತ್ನಿಯಾಗಿ ಪಡೆಯುವುದು ಮಾತ್ರ. ಅವಳು ಮುದ್ಗಲಮುನಿಯ ಮಗಳು ಎಂಬುದು ಋಷಿತ್ವಕ್ಕೆ ಪ್ರಿಯವೆನಿಸಿತ್ತು ಅಷ್ಟೇ. ಅದರಿಂದಾಚೆಗೆ ನಾನು ಏನನ್ನೂ ಯೋಚಿಸಿರಲಿಲ್ಲ. ನಮ್ಮಂತಹ ಆಶ್ರಮವಾಸಿಗಳ ಜೀವನದಲ್ಲಿ ಭವಿತವ್ಯದ ಕುರಿತು ಕನಸುಗಳು ಮೂಡುವುದೂ ಕಡಮೆಯಷ್ಟೆ? ಹಾಗಾಗಿ ‘ನನ್ನ ಪೂರ್ವಪಿತೃಗಳೆಲ್ಲ ವಿವಾಹವಾಗಿ ಸಂತಾನವನ್ನು ಪಡೆದಿದ್ದಾರೆ. ಅದು ಧಾರ್ಮಿಕವಾದ ಒಂದು ಕರ್ತವ್ಯ. ನಾನೂ ಗೃಹಸ್ಥನಾಗಬೇಕು. ಋಣಮುಕ್ತನಾಗಬೇಕು. ಯಜ್ಞಾದಿ ವೈದಿಕ ಪ್ರಕ್ರಿಯೆಗಳಲ್ಲಿ ನನ್ನ ಪಕ್ಕದಲ್ಲಿ ಪತ್ನಿಯ ಸ್ಥಾನ ತುಂಬಿರಬೇಕು’ – ಇದು ನನ್ನ ಅಂತರಂಗದ ಅಪೇಕ್ಷೆಯಾಗಿತ್ತು. […]