
ರಾಕ್ಷಸನ ಹರಿತವಾದ ಖಡ್ಗದ ಹೊಡೆತಕ್ಕೆ ಎರಡೂ ರೆಕ್ಕೆಗಳು ಕತ್ತರಿಸಲ್ಪಟ್ಟು ನೆಲಕ್ಕೆ ಬಿದ್ದುಬಿಟ್ಟೆ. ರಕ್ತ ಧಾರೆಧಾರೆಯಾಗಿ ಹರಿದು ಹೋಗುತ್ತಿತ್ತು. ಸಮೀಪದಲ್ಲಿ ಆ ದುಷ್ಟನ ಕೈಯಲ್ಲಿ ಸಿಲುಕಿದ ಜಾನಕಿಯ ಆರ್ತನಾದ ಕೇಳುತ್ತಿತ್ತು. ವಿಲಪಿಸುವುದನ್ನು ಉಳಿದು ಬೇರೇನೂ ಮಾಡಲಾಗದ ನನ್ನ ಕಿವಿಗಳಿಗೆ ಅವಳ ದನಿ ಅಸ್ಪಷ್ಟವಾಗುತ್ತ ಕೊನೆಗೆ ಕೇಳಿಸದಾಯಿತು. ಅವರಿಬ್ಬರೂ ನನ್ನಿಂದ ದೂರವಾಗುತ್ತಿರುವುದು ತಿಳಿಯಿತು. ಅಯ್ಯೋ! ಅಮಾಯಕಳಾದ ಮೈಥಿಲಿಯನ್ನು ರಕ್ಷಿಸಲಾರದೇ ಹೋದೆನಲ್ಲಾ! ಈ ವೇದನೆ ದೇಹದ ಯಾತನೆಗಿಂತ ಅಧಿಕವಾಗಿ ತೋರಿತು. ಅವಳಾದರೋ ಅಸಹಾಯಕಳೂ ಆರ್ತಳೂ ಆಗಿ ಕಣ್ಣೀರ್ಗರೆಯುತ್ತ ರಾಮ ಲಕ್ಷ್ಮಣರನ್ನು ಕೂಗಿ […]